50ರ ವಯಸ್ಸು ಅಂತ್ಯವಲ್ಲ, ಆರೋಗ್ಯಕರ ಜೀವನಕ್ಕೆ ಹಾದಿ!

Photo : freepik
ಸೂಕ್ತ ಅಭ್ಯಾಸಗಳನ್ನು ಅಳವಡಿಸಿಕೊಂಡಲ್ಲಿ 50ರ ವಯಸ್ಸಿನ ಹಂತವನ್ನು ಸಾಮರ್ಥ್ಯ, ಸ್ಪಷ್ಟತೆ ಮತ್ತು ನವೀಕೃತ ಆರೋಗ್ಯದ ಮೂಲಕ ಕಳೆಯಬಹುದು!
ಮಹಿಳೆಯರಿಗೆ 50ರ ವಯಸ್ಸಾದಂತೆ ದೇಹದಲ್ಲಿ ಬದಲಾವಣೆಗಳು ಬರಲಾರಂಭಿಸುತ್ತವೆ. ಋತುಬಂಧದ ಸಮಸ್ಯೆ, ಹಾರ್ಮೋನ್ ಬದಲಾವಣೆ, ಚಯಾಪಚಯ ಕ್ರಿಯೆಯ ನಿಧಾನಗತಿಯಿಂದ ಆರಂಭವಾಗಿ ಓಸ್ಟಿಯೊಪೊರೊಸಿಸ್ (ಅಸ್ಥಿರಂಧ್ರತೆ), ಹೃದಯ ರೋಗ, ಟೈಪ್ 2 ಮಧುಮೇಹದಂತಹ ದೀರ್ಘಕಾಲೀನ ರೋಗಗಳೂ ಕಾಡುತ್ತವೆ. ಸೂಕ್ತ ಅಭ್ಯಾಸಗಳನ್ನು ಅಳವಡಿಸಿಕೊಂಡಲ್ಲಿ ಈ ಹಂತವನ್ನು ಸಾಮರ್ಥ್ಯ, ಸ್ಪಷ್ಟತೆ ಮತ್ತು ನವೀಕೃತ ಆರೋಗ್ಯದ ಮೂಲಕ ಕಳೆಯಬಹುದು.
ನೀವು ಏನು ತಿನ್ನುತ್ತೀರಿ ಅಥವಾ ನಿದ್ರೆ ಮಾಡುತ್ತೀರಿ ಎಂಬುದರಿಂದ ಆರಂಭಿಸಿ ನಿತ್ಯ ಜೀವನದ ಚಟುವಟಿಕೆಗಳು ದೀರ್ಘಾಯುಷ್ಯವನ್ನು ಉತ್ತೇಜಿಸುವುದು ಮತ್ತು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. 50ರ ವಯಸ್ಸು ಮೀರಿದ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು ಯಾವುವು?
►ಹಾರ್ಮೋನುಗಳ ಬದಲಾವಣೆಯ ಸಮಯ
ಫರೀದಾಬಾದ್ ನ ಕ್ಲೌಡ್ನೈನ್ ಆಸ್ಪತ್ರೆಯ ಸಲಹೆಗಾರರಾದ ಸ್ತ್ರೀರೋಗ ತಜ್ಞೆ ಡಾ. ಶೈಲಿ ಶರ್ಮಾ ಪ್ರಕಾರ, ಈ ವಯಸ್ಸಿನಲ್ಲಿ ಮಹಿಳೆಯರು ಋತುಬಂಧದಿಂದ ಗಮನಾರ್ಹ ಹಾರ್ಮೋನುಗಳ ಬದಲಾವಣೆಗಳನ್ನು ಎದುರಿಸುತ್ತಾರೆ. ಮುಖ್ಯವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದಲ್ಲಿನ ಕುಸಿತ ಕಂಡುಬರುತ್ತದೆ. ಹಾರ್ಮೋನುಗಳ ಬದಲಾವಣೆಯಿಂದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಿದ್ದು, ತೂಕ ಹೆಚ್ಚಾಗಬಹುದು. ಮುಖ್ಯವಾಗಿ ಹೊಟ್ಟೆಯ ಸುತ್ತ ಕೊಬ್ಬು ಬೆಳೆಯಬಹುದು.
ವಯಸ್ಸಾದಂತೆ ಸ್ನಾಯುವಿನ ಪ್ರಮಾಣ (Muscle mass) ಕುಸಿಯುತ್ತದೆ. ಅದರಿಂದಾಗಿ ಕ್ಯಾಲರಿ ಕರಗುವ ದರ ಕಡಿಮೆಯಾಗುತ್ತದೆ. ಹೀಗಾಗಿ 50ರ ವಯಸ್ಸಿನ ಮಹಿಳೆಯರು ಶಿಸ್ತಿನ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು ಮತ್ತು ಚಟುವಟಿಕೆಯನ್ನೂ ಏರಿಸಬೇಕು.
►50ರ ವಯಸ್ಸಿನ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಆರು ದೈನಂದಿನ ಚಟುವಟಿಕೆಗಳು ಹೀಗೆ:
►ದೈಹಿಕವಾಗಿ ಸಕ್ರಿಯವಾಗಿರಿ
ನಿಯಮಿತ ದೈಹಿಕ ಚಟುವಟಿಕೆ ಕೀಲುಗಳ ಆರೋಗ್ಯಕ್ಕೆ ಉತ್ತಮ. ಹೃದಯ ರೋಗದ ಅಪಾಯ ಕಡಿಮೆಯಾಗುತ್ತದೆ. ಆರೋಗ್ಯಕರ ತೂಕವನ್ನು ನಿರ್ವಹಿಸಬಹುದು. ಮನೋಸ್ಥಿತಿ ಮತ್ತು ನಿದ್ರೆಯ ಗುಣಮಟ್ಟವನ್ನೂ ಸುಧಾರಿಸಬಹುದು.
►ಸಮತೋಲಿತ ಆಹಾರ ಸೇವನೆ
ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಅಂದರೆ ಫೈಬರ್, ಆಂಟಿಆಕ್ಸಿಡಂಟ್ಗಳು, ಲೀನ್ ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಬ್ಬುಗಳು ಇರುವ ಆಹಾರ ಉರಿಯೂತವನ್ನು ಕಡಿಮೆಗೊಳಿಸುತ್ತದೆ. ತೂಕ ನಿಯಂತ್ರಣಕ್ಕೆ ಸಹಕಾರಿ ಹಾಗೂ ಹಾರ್ಮೋನುಗಳ ಸಮತೋಲನಕ್ಕೂ ಬೆಂಬಲ ನೀಡುತ್ತದೆ.
►ನೀರಿನಂಶ ಹೆಚ್ಚು ಸೇವಿಸಿ
ಸಾಕಷ್ಟು ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆಯನ್ನು ತಡೆಯುತ್ತದೆ. ಚರ್ಮ ಮತ್ತು ದೇಹದ ಅಂಗಗಳ ಕಾರ್ಯಕ್ಷಮತೆಯನ್ನು ಸುಸ್ಥಿತಿಯಲ್ಲಿಡುತ್ತದೆ. ಮುಖ್ಯವಾಗಿ ವಯಸ್ಸಾದಂತೆ ಬಾಯಾರಿಕೆಯ ಭಾವನೆ ಕಡಿಮೆಯಾಗುವ ಕಾರಣದಿಂದ ಆಗಾಗ್ಗೆ ನೀರು ಕುಡಿಯುತ್ತಿರಬೇಕು.
►ನಿದ್ರೆಗೆ ಆದ್ಯತೆ ನೀಡಿ
7–8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಅಗತ್ಯ. ಸೂಕ್ತ ನಿದ್ರೆಯಿಂದ ದೇಹಕ್ಕೆ ದುರಸ್ತಿ ಸಿಗುತ್ತದೆ. ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ. ಭಾವನಾತ್ಮಕ ಆರೋಗ್ಯಕ್ಕೂ ಉತ್ತಮ.
►ಒತ್ತಡ ನಿರ್ವಹಣೆ ಅಗತ್ಯ
ನಿತ್ಯವೂ ಧ್ಯಾನ ಮಾಡಬೇಕು, ಪ್ರಾರ್ಥನೆ ಮಾಡಬಹುದು ಅಥವಾ ದೀರ್ಘ ಉಸಿರಾಟದಿಂದ ಕಾರ್ಟಿಸಾಲ್ ಮಟ್ಟವನ್ನು ನಿಯಂತ್ರಿಸಬಹುದು. ಇಲ್ಲದೆ ಹೋದರೆ ಕಾರ್ಟಿಸಾಲ್ನಿಂದ ತೂಕ ಏರಿಕೆ ಮತ್ತು ಹೃದಯದ ಸಮಸ್ಯೆಗಳು ಕಂಡುಬರಬಹುದು.
►ಸಾಮಾಜಿಕವಾಗಿ ಸಂಪರ್ಕಿತರಾಗಿರಿ
ಸಂಬಂಧಗಳನ್ನು ಚೆನ್ನಾಗಿ ನಿರ್ವಹಿಸುವುದು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಂತವನ್ನು ದೂರಮಾಡಬಹುದು. ಅದರಿಂದ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವೂ ಸುಧಾರಿಸುತ್ತದೆ. ವಯಸ್ಸಾಗುವಾಗ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿರುವುದು ಅತಿ ಮುಖ್ಯ.







