ಪ್ರಚಾರ ಚಿತ್ರಗಳಿಗೆ ಬಿಜೆಪಿ,ಆರೆಸ್ಸೆಸ್ ನ ಗುಪ್ತ ನಂಟು?; 10 ರಾಜಕೀಯ ಸಿನೆಮಾಗಳ ಹಿಂದಿನ ಸತ್ಯ ಇಲ್ಲಿದೆ...

ಹೊಸದಿಲ್ಲಿ: ‘ನಮಗೆ ಆರೆಸ್ಸೆಸ್ ನಿಂದ ಅತ್ಯುತ್ತಮ ಮಾರ್ಗದರ್ಶನ ಮತ್ತು ಬೆಂಬಲ ಸಿಕ್ಕಿರದಿದ್ದರೆ ನಾವು ಈ ಚಿತ್ರವನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ನಮ್ಮ ರಕ್ಷಕ ದೇವತೆಗಳು’: 2023ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದಿದ್ದ ವಿಶ್ವ ಹಿಂದೂ ಕಾಂಗ್ರೆಸ್ನಲ್ಲಿ ‘ದಿ ಕೇರಳ ಸ್ಟೋರಿ’ ಮತ್ತು ‘ದಿ ಕೇರಳ ಸ್ಟೋರಿ 2 ಗೋಸ್ ಬಿಯಾಂಡ್’ನ ನಿರ್ಮಾಪಕ ವಿಫುಲ್ ಅಮೃತಲಾಲ್ ಶಾ ಹೀಗೆ ಹೇಳಿಕೊಂಡಿದ್ದರು. ಇದು ತನ್ನ ಚಿತ್ರಕ್ಕೆ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯೊಂದಿಗೆ ಸಂಬಂಧವಿಲ್ಲ ಎಂದು ಶಾ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿತ್ತು.
ಇದು ಪ್ರತ್ಯೇಕ ಪ್ರಕರಣವಲ್ಲ. ಈ ಕುರಿತು ವರದಿಯನ್ನು ಪ್ರಕಟಿಸಿರುವ ಸುದ್ದಿ ಜಾಲತಾಣ ‘thequint.com’ ಕನಿಷ್ಠ 10 ಚಲನಚಿತ್ರಗಳ ನಿರ್ಮಾಪಕ ಅಥವಾ ನಿರ್ದೇಶಕರು ಆರೆಸ್ಸೆಸ್ ಅಥವಾ ಹಿಂದುತ್ವ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದ್ದನ್ನು ಬಯಲಿಗೆಳೆದಿದೆ.
► ದಿ ಕೇರಳ ಸ್ಟೋರಿ 1 ಮತ್ತು 2
ದಿ ಕೇರಳ ಸ್ಟೋರಿ 2ರ ನಿರ್ದೇಶಕ ಕಾಮಾಖ್ಯ ನಾರಾಯಣ ಸಿಂಗ್ 2025ರಲ್ಲಿ ‘ಡೆಮಾಗ್ರಫಿ ಈಸ್ ಡೆಸ್ಟಿನಿ’ ಎಂಬ ಸಾಕ್ಷ್ಯಚಿತ್ರವನ್ನು ಮಾಡಿದ್ದು,ಇದು ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹಿಂದುಗಳನ್ನು ಮೀರಿಸಲಿದೆ ಎಂದು ಬಿಂಬಿಸಿತ್ತು. ಆದರೆ ಈ ಪ್ರತಿಪಾದನೆ ಸುಳ್ಳು ಎನ್ನುವುದು ಈಗ ಸಾಬೀತಾಗಿದೆ. ಇದು ವಿಷಯವಲ್ಲ,ಆರೆಸ್ಸೆಸ್ನ ವಿಭಾಗ ಸಂಘಚಾಲಕ ರವೀಂದ್ರ ಸಾಂಘ್ವಿ ಈ ಸಾಕ್ಷ್ಯಚಿತ್ರದ ನಿರ್ಮಾಪಕರಾಗಿದ್ದರು ಎನ್ನುವುದು ಮುಖ್ಯವಾಗಿದೆ.
►ವಿಫುಲ್ ಶಾ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ಯ ನಿರ್ಮಾಪಕರು ಸಹ ಆಗಿದ್ದಾರೆ.
ಶಾ 2023ರಲ್ಲಿ ಅರ್ಷ ವಿದ್ಯಾ ಸಮಾಜಂ ಎಂಬ ಕೇರಳದ ಹಿಂದುತ್ವ ಸಂಘಟನೆಗೆ ಎರಡು ಪ್ರತ್ಯೇಕ ದೇಣಿಗೆಗಳಲ್ಲಿ ಒಂದು ಕೋಟಿ ರೂ. ನೀಡಿದ ವರದಿಗಳಿವೆ. ಇಸ್ಲಾಮ್ ಗೆ ಬಲವಂತದಿಂದ ಮತಾಂತರಗೊಂಡ ಹಿಂದು ಮಹಿಳೆಯರನ್ನು ತಾನು ‘ರಕ್ಷಿಸುವುದಾಗಿ’ ಈ ಸಂಘಟನೆ ಹೇಳಿಕೊಂಡಿದೆ. ಆದಾಗ್ಯೂ ಸುದ್ದಿ ಜಾಲತಾಣ ‘ದಿ ನ್ಯೂಸ್ ಮಿನಿಟ್’ನ ವರದಿಯ ಪ್ರಕಾರ ಈ ಸಂಘಟನೆಯೊಂದಿಗೆ ಸಂಯೋಜಿತ ಯೋಗ ಕೇಂದ್ರಗಳು ಈ ಮಹಿಳೆಯರಿಗೆ ಚಿತ್ರಹಿಂಸೆ ನೀಡುತ್ತಿವೆ ಮತ್ತು ನಿರ್ಬಂಧಿಸುತ್ತಿವೆ ಎಂಬ ಆರೋಪವಿದೆ.
►ರಝಾಕಾರ್
ನಿಜಾಮರ ಆಡಳಿತದಲ್ಲಿ ರಝಾಕಾರ ಅರೆಸೇನಾ ಪಡೆಯಿಂದ ನಡೆದಿದ್ದ ದೌರ್ಜನ್ಯಗಳನ್ನು ಬಿಂಬಿಸಿರುವುದಾಗಿ ಹೇಳಿಕೊಂಡಿರುವ ಈ ಚಿತ್ರವು 2024ರಲ್ಲಿ ಬಿಡುಗಡಗೊಂಡಿತ್ತು. ಇದರ ನಿರ್ಮಾಪಕ ಗುಡೂರ್ ನಾರಾಯಣ ರೆಡ್ಡಿ ತೆಲಂಗಾಣ ಬಿಜೆಪಿ ನಾಯಕರಾಗಿದ್ದಾರೆ.
►ಸ್ವಾತಂತ್ರ್ಯವೀರ ಸಾವರ್ಕರ್
ಈ ಚಿತ್ರದ ನಿರ್ಮಾಪಕ ಆನಂದ ಪಂಡಿತ ಮಹಾರಾಷ್ಟ್ರ ಬಿಜೆಪಿಯ ಖಜಾಂಚಿಯಾಗಿದ್ದರು.
►ಪಿಎಂ ನರೇಂದ್ರ ಮೋದಿ
ಈ ಚಿತ್ರದ ನಿರ್ಮಾಪಕರಲ್ಲಿ ಪಂಡಿತ ಅವರ ಆನಂದ ಪಂಡಿತ ಮೋಶನ್ ಪಿಕ್ಚರ್ಸ್ ಸೇರಿದೆ.
►ಆ್ಯಕ್ಸಿಡೆಂಟ್ ಆರ್ ಕಾನ್ಸ್ಪೈರೆಸಿ: ಗೋಧ್ರಾ
ಗುಜರಾತಿನ ಬಿಜೆಪಿ ಶಾಸಕರಾಗಿರುವ ನಟ ಹಿತು ಕನೋಡಿಯಾ ಈ ಚಿತ್ರದ ಭಾಗವಾಗಿದ್ದು, ಅವರ ತಂದೆ ಮತ್ತು ಚಿಕ್ಕಪ್ಪ ಬಿಜೆಪಿ ನಾಯಕರಾಗಿದ್ದಾರೆ. ನಿರ್ಮಾಪಕ ಬಿ.ಜೆ.ಪುರೋಹಿತ ಬಿಜೆಪಿ ಬೆಂಬಲಿಗರಾಗಿದ್ದರೆ ನಿರ್ದೇಶಕ ಎಂ.ಕೆ. ಶಿವ ಆಕಾಶ ಉ.ಪ್ರದೇಶದ ಬಿಜೆಪಿ ಸರಕಾರದ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.
►ಬೆಂಗಾಲ್ 1947
ಇದರ ನಿರ್ದೇಶಕ ಆಕಾಶಾದಿತ್ಯ ಲಾಮಾ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿರುವ ‘ಭಾರತೀಯ ಚಿತ್ರ ಸಾಧನಾ’ದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಈ ಸಂಘಟನೆಯ ಅಧ್ಯಕ್ಷ ಬಿ.ಕೆ.ಕುಥಿಯಾಲ್ ಪ್ರಮುಖ ಹಿಂದುತ್ವ ಸಿದ್ಧಾಂತಿಯಾಗಿದ್ದಾರೆ.
►ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅಪಹಾಸ್ಯ ಮಾಡಿದ್ದ ಈ ಚಿತ್ರದ ನಿರ್ದೇಶಕ ವಿಜಯ ರತ್ನಾಕರ ಗುಟ್ಟೆ ಅವರ ತಂದೆ ರತ್ನಾಕರ ಗುಟ್ಟೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷ ರಾಷ್ಟ್ರೀಯ ಸಮಾಜ ಪಕ್ಷದ ನಾಯಕರಾಗಿದ್ದಾರೆ.
►ಉದಯಪುರ ಫೈಲ್ಸ್
ಇದರ ನಿರ್ಮಾಪಕ ಅಮಿತ್ ಜಾನಿ ಹಿಂದು ಆ್ಯಕ್ಷನ್ ಫೋರ್ಸ್ ನ ಸ್ಥಾಪಕ ಹಾಗೂ ಉತ್ತರ ಪ್ರದೇಶ ನವನಿರ್ಮಾಣ ಸೇನಾದ ಅಧ್ಯಕ್ಷರಾಗಿದ್ದಾರೆ.
►ಜಹಾಂಗೀರ್ ನ್ಯಾಷನಲ್ ಯುನಿವರ್ಸಿಟಿ
ಈ ಚಿತ್ರವನ್ನು ಮಹಾಕಾಲ ಮೂವಿಸ್ ಪ್ರೈ.ಲಿ.ನಿರ್ಮಿಸಿದ್ದು, ಅದರ ನಿರ್ದೇಶಕರಲ್ಲೊಬ್ಬರಾಗಿರುವ ವಿಷ್ಣು ತಾನಿಯಾ ಹರ್ಯಾಣದ ರಾಜಕಾರಣಿ ಗೋಪಾಲ ಕಾಂಡಾ ಅವರ ಉದ್ಯಮ ಸಹವರ್ತಿಯಾಗಿದ್ದಾರೆ. ಕಾಂಡಾ ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಹೊಂದಿದ್ದಾರೆ.
ಈ ಹತ್ತು ಚಿತ್ರಗಳು ಸಂಪೂರ್ಣ ಪಟ್ಟಿಯಲ್ಲ. ಬಿಜೆಪಿ ಅಥವಾ ಆರೆಸ್ಸೆಸ್ ನಿಂದ ಪ್ರೇರಿತವಾದ ಅಥವಾ ಅವುಗಳಿಗೆ ಸಂಬಂಧಿಸಿದ ಜನರಿಂದ ಹಣ ಪಡೆದ ಇನ್ನಷ್ಟು ಚಿತ್ರಗಳು ಇರಬಹುದು.






