ನೀರು ಕುಡಿಯುತ್ತಿವೆ ಡೇಟಾ ಸೆಂಟರ್ ಗಳು; ಡಿಜಿಟಲ್ ಕ್ರಾಂತಿಯ ನೆರಳಲ್ಲಿ ಪರಿಸರ ಬಿಕ್ಕಟ್ಟಿನ ಆತಂಕ

Photo Credit: Johan Sathyadas
ಡೇಟಾ ಸೆಂಟರ್ ಗಳು ಅತಿಯಾದ ನೀರು ನುಂಗುತ್ತಿರುವುದು ನಿಜವಾದರೂ, ಈಗಾಗಲೇ ನೀರಿನ ಸಮಸ್ಯೆ ಇರುವ ಕೆಲವು ರಾಜ್ಯಗಳು ದೊಡ್ಡ ಡೇಟಾ ಸೆಂಟರ್ ಗಳ ಯೋಜನೆಗಳನ್ನು ಪ್ರಕಟಿಸಿರುವ ಬಗ್ಗೆ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ChatGPTಯಂತಹ ವ್ಯವಸ್ಥೆಗಳಿಂದ ಉಂಟಾಗುವ ನೀರಿನ ಬಳಕೆಯ ಬಗ್ಗೆ ರಿವರ್ಸೈಡ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಸುಮಾರು 20ರಿಂದ 50 ವಿನಿಮಯಗಳನ್ನು ಒಳಗೊಂಡ ChatGPT ಜೊತೆಗಿನ ಒಂದು ವಿಶಿಷ್ಟ ಸಂಭಾಷಣೆಯು ಅರ್ಧ ಲೀಟರ್ ನೀರನ್ನು ಬಳಸಬಹುದು ಎಂದು ಅಂದಾಜಿಸಲಾಗಿದೆ. ಇದು ಕೃತಕ ಬುದ್ಧಿಮತ್ತೆ (AI) ಮೇಲಿನ ಅವಲಂಬನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಆಗಬಹುದಾದ ಗುಪ್ತ ಪರಿಸರ ವೆಚ್ಚವಾಗಿದೆ.
ಭಾರತವು ಡೇಟಾ ಸೆಂಟರ್ ಗಳ ಜಾಗತಿಕ ಕೇಂದ್ರವಾಗಲು ಸಿದ್ಧತೆ ನಡೆಸುತ್ತಿದೆ. ಅದರ ಸಾಮರ್ಥ್ಯವು 2020ರಲ್ಲಿ 375 MW (ಮೆಗಾವಾಟ್) ಇದ್ದರೆ, 2025ರಲ್ಲಿ 1,500 MW ಇತ್ತು. ಇದೀಗ 2031–32ರ ಹೊತ್ತಿಗೆ 13.56 GW (ಗಿಗಾವಾಟ್) ತಲುಪುವ ನಿರೀಕ್ಷೆಯಿದೆ.
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಡೇಟಾ ಸೆಂಟರ್ ಗಳ ವಿದ್ಯುತ್ ಬಳಕೆಗಾಗಿ 2025ರಲ್ಲಿ 4.5 ಟ್ರಿಲಿಯನ್ ಲೀಟರ್ ನೀರನ್ನು ಬಳಸಲಾಗುತ್ತಿದೆ. ಈ ನೀರು 8.8 ವರ್ಷಗಳವರೆಗೆ (ಅಂದಾಜು) ಚೆನ್ನೈನ ನೀರಿನ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟು ಎಂದು ಅಂದಾಜಿಸಲಾಗಿದೆ. ಚೆನ್ನೈನ ನೀರಿನ ಅಗತ್ಯವು ಪ್ರಸ್ತುತ ದಿನಕ್ಕೆ 1,407 ದಶಲಕ್ಷ ಲೀಟರ್ ಗಳಾಗಿದೆ. 2030ರ ವೇಳೆಗೆ ಚೆನ್ನೈನ ನೀರಿನ ಅಗತ್ಯ 9.3 ದಶಲಕ್ಷ ಲೀಟರ್ ಗಳಷ್ಟು ಏರಬಹುದು.
ಇದರ ಹೊರತಾಗಿಯೂ, ಈಗಾಗಲೇ ತಮ್ಮ ನೀರಿನ ಅಗತ್ಯಗಳನ್ನು ಪೂರೈಸುವಲ್ಲಿ ತೊಂದರೆ ಹೊಂದಿರುವ ಕೆಲವು ರಾಜ್ಯಗಳು ಬೃಹತ್ ಡೇಟಾ ಸೆಂಟರ್ ಗಳ ಯೋಜನೆಗಳನ್ನು ಘೋಷಿಸಿವೆ. ಅದಾನಿConX ಜೊತೆಗಿನ ಪಾಲುದಾರಿಕೆಯಲ್ಲಿ 1 GW ಗೂಗಲ್ AI ಕೇಂದ್ರ ವಿಶಾಖಪಟ್ಟಣದಲ್ಲಿ ಹಾಗೂ ಭಾರ್ತಿ ಏರ್ಟೆಲ್ ನ Nxtra ಮತ್ತು Metaದ AI ಆಧಾರಿತ ಡೇಟಾ ಸೆಂಟರ್ ಗಳು ರಿಲಯನ್ಸ್ ಇಂಡಸ್ಟ್ರೀಸ್ ನ ಜೊತೆಗಿನ ಭಾಗವಹಿಸುವಿಕೆಯಲ್ಲಿ ಗುಜರಾತ್ ನ ಜಾಮ್ನಗರದಲ್ಲಿ ಬರುತ್ತಿವೆ.
ಕೆಲವು ರಾಜ್ಯಗಳು ಡೇಟಾ ಸೆಂಟರ್ ಗಳನ್ನು ಸ್ಥಾಪಿಸಲು ಕಂಪನಿಗಳನ್ನು ಆಕರ್ಷಿಸಲು ಪ್ರೋತ್ಸಾಹಧನಗಳನ್ನು ಘೋಷಿಸಿವೆ. ಆಂಧ್ರಪ್ರದೇಶವು ತನ್ನ ಡೇಟಾ ಸೆಂಟರ್ ನೀತಿ 4.0 ಅಡಿಯಲ್ಲಿ ಬಂಡವಾಳ ಸರಕುಗಳ ಮೇಲೆ ಶೇ 100 ರಾಜ್ಯ GST ಮರುಪಾವತಿ, ಮೊದಲ ಮಾರಾಟದಲ್ಲಿ ಶೇ 100 ಸ್ಟಾಂಪ್ ಡ್ಯೂಟಿ ವಿನಾಯಿತಿ ಮತ್ತು 300 MW ಸಾಮರ್ಥ್ಯವಿರುವ ಡೇಟಾ ಸೆಂಟರ್ ಯೋಜನೆಗಳಿಗೆ ನೇರ ಇಂಧನ ಖರೀದಿಗೆ ಡೀಮ್ಡ್ ವಿತರಣಾ ಪರವಾನಗಿಗಳನ್ನು ನೀಡುತ್ತಿದೆ.
ಉತ್ತರ ಪ್ರದೇಶದ ಸಚಿವ ಸಂಪುಟ ಇತ್ತೀಚೆಗೆ 2026ರ ಡೇಟಾ ಸೆಂಟರ್ ನೀತಿಯನ್ನು ಅನುಮೋದಿಸಿದೆ. ಆ ಮೂಲಕ 2 GW ಹೆಚ್ಚುವರಿ ಸಾಮರ್ಥ್ಯ ಹೊಂದಲು ನಿರ್ಧರಿಸಿದೆ. ಗುಜರಾತ್ನ ಡೇಟಾ ಸೆಂಟರ್ ನೀತಿ 2026–29ರ ಹೊತ್ತಿಗೆ 7.5 GW ಸಾಮರ್ಥ್ಯವನ್ನು ಸೃಷ್ಟಿಸುವ ಮತ್ತು 6 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಗುರಿಯನ್ನು ಹೊಂದಿದೆ.
ಈ ಡೇಟಾ ಸೆಂಟರ್ ಗಳ ವಿರುದ್ಧ ಪ್ರತಿಭಟನೆಗಳೂ ಆಗುತ್ತಿವೆ. ವಿಶಾಖಪಟ್ಟಣದಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಪರಿಸರದ ಮೇಲಿನ ಪರಿಣಾಮ ಮತ್ತು ವಿದ್ಯುತ್ ಹಾಗೂ ನೀರಿನಂತಹ ಸಂಪನ್ಮೂಲಗಳ ಮೇಲಿನ ಒತ್ತಡದ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಮೆಝಾನ್ ನ ಪ್ರಸ್ತಾಪಿತ ಹೈಪರ್ ಸ್ಕೇಲ್ ಯೋಜನೆಯನ್ನು ವಿರೋಧಿಸಿ ಮಹಾರಾಷ್ಟ್ರದ ಥಾಣೆಯಲ್ಲೂ ಪ್ರತಿಭಟನೆಗಳು ನಡೆದಿವೆ.
ಅನೇಕ ಡೇಟಾ ಸೆಂಟರ್ ಗಳು ನೀರಿನ ಬಳಕೆಯ ಅಂಕಿ-ಅಂಶಗಳನ್ನು ಬಹಿರಂಗಪಡಿಸುವುದಿಲ್ಲ. ರಿವರ್ಸೈಡ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯುತ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ಅಸೋಸಿಯೇಟ್ ಪ್ರೊಫೆಸರ್ ಶಾವೊಲ್ ರೆನ್ ಅವರು ಮಾಧ್ಯಮಗಳಿಗೆ ನೀಡಿರುವ ವಿವರಗಳ ಪ್ರಕಾರ, ಪಾರದರ್ಶಕತೆ ಸುಧಾರಿಸಲು ನೀತಿ ಮಟ್ಟದಲ್ಲಿ ಬದಲಾವಣೆಗಳು ಆಗಬೇಕಿದೆ.
“ಮಾಸಿಕ ಮತ್ತು ಗರಿಷ್ಠ ನೀರಿನ ಬಳಕೆ, ನೀರಿನ ಮೂಲ ಮತ್ತು ಸೈಟ್ ಕುಡಿಯಲು ಯೋಗ್ಯವಾದ, ಮರುಬಳಕೆ ಮಾಡಲಾದ ಅಥವಾ ಅಂತರ್ಜಲ ಬಳಸುತ್ತದೆಯೇ ಎಂದು ಕಡ್ಡಾಯವಾಗಿ ಬಹಿರಂಗಪಡಿಸಬೇಕಿದೆ. ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಕಠಿಣ ಅನುಮತಿ, ಬರ ನಿರ್ಬಂಧಗಳು ಮತ್ತು ಮರುಬಳಕೆ ಮಾಡಲಾದ ನೀರಿನ ಹೆಚ್ಚಿನ ಬಳಕೆ ಅಗತ್ಯವಾಗಬಹುದು” ಎಂದು ಅವರು ಹೇಳಿದ್ದಾರೆ.
ಭಾರತದ ಡೇಟಾ ಕೇಂದ್ರಗಳು ಹೆಚ್ಚು ಬಿಸಿಯಾದ ಮತ್ತು ಹೆಚ್ಚು ಆರ್ದ್ರತೆಯ ಪರಿಸ್ಥಿತಿಗಳಿಂದಾಗಿ ಅದೇ ಕೆಲಸದ ಹೊರೆಗೆ ಹೆಚ್ಚಿನ ತಂಪಾಗಿಸುವ ಬೇಡಿಕೆಯನ್ನು ಎದುರಿಸಬಹುದು. ಆದರೆ, ಅದು ಹೆಚ್ಚಿನ ನೀರಿನ ಬಳಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗದು, ಏಕೆಂದರೆ ಅದು ತಂಪಾಗಿಸುವ ತಂತ್ರಜ್ಞಾನವನ್ನು ಅವಲಂಬಿಸಿರುತ್ತದೆ.
ಕೇಂದ್ರ ಅಂತರ್ಜಲ ಮಂಡಳಿಯೊಂದಿಗೆ (CGWB) ಕೆಲಸ ಮಾಡಿರುವ ಪರಿಸರ ತಜ್ಞ ಬಿ.ವಿ. ಸುಬ್ಬಾರಾವ್ ಪ್ರಕಾರ, “ಬಹುತೇಕ ಡೇಟಾ ಸೆಂಟರ್ ಗಳು ಯಾವುದೇ ಇತರ ಕೈಗಾರಿಕಾ ಎಸ್ಟೇಟ್ನಂತೆ ಒಂದೇ ಸ್ಥಳದಲ್ಲಿ ಗುಂಪುಗೂಡುತ್ತವೆ ಮತ್ತು ಈ ಪ್ರದೇಶದ ಎಲ್ಲಾ ನೀರನ್ನು ಮುಗಿಸಿಬಿಡುತ್ತವೆ. ಈ ಕೈಗಾರಿಕೆಗಳು ಟ್ಯಾಂಕರ್ ನೀರನ್ನು ಅವಲಂಬಿಸಿವೆ ಮತ್ತು ಹೀಗಾಗಿ ನಗರದಾದ್ಯಂತ ಎಲ್ಲಾ ಮೂಲಗಳಿಂದ ನೀರನ್ನು ಪಡೆಯುತ್ತವೆ.”
CGWBಯ 2024ರ ಡೈನಾಮಿಕ್ ಅಂತರ್ಜಲ ಸಂಪನ್ಮೂಲಗಳ ಮೌಲ್ಯಮಾಪನವು ಭಾರತದ ಒಟ್ಟು ಅಂತರ್ಜಲ ಹೊರತೆಗೆಯುವಿಕೆಯ ಹಂತವನ್ನು ಶೇ 60.47ರಷ್ಟು ಬಳಕೆಯಾಗುತ್ತಿದೆ ಎಂದು ವರ್ಗೀಕರಿಸಿದೆ. ಬಹುತೇಕ ಶೇ 11.1ರಷ್ಟು ಮೌಲ್ಯಮಾಪನ ಘಟಕಗಳು ರಾಷ್ಟ್ರವ್ಯಾಪಿ ಅಂತರ್ಜಲ ಮರುಪೂರಣಕ್ಕಿಂತ ಹೆಚ್ಚು ನೀರನ್ನು ಹೊರತೆಗೆಯುತ್ತಿವೆ ಎಂದು ಹೇಳಿದೆ. ಆದರೆ, 17 ಡೇಟಾ ಸೆಂಟರ್ ಗಳು ಇರುವ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ CGWB ಮೌಲ್ಯಮಾಪನದ ಪ್ರಕಾರ ಅಂತರ್ಜಲ ಹೊರತೆಗೆಯುವಿಕೆ ಶೇ 104.79ರಷ್ಟಿದೆ. ಅಂದರೆ, ಪ್ರಕೃತಿ ಮರುಪೂರಣ ಮಾಡುವುದಕ್ಕಿಂತ ಹೆಚ್ಚಿನ ನೀರನ್ನು ಹೊರತೆಗೆಯಲಾಗುತ್ತಿದೆ.
ಹೈದರಾಬಾದ್ ಅನ್ನು ಅಧಿಕೃತವಾಗಿ ಹೆಚ್ಚು ಅಂತರ್ಜಲ ಬಳಸಿಕೊಳ್ಳುವ ನಗರ ಎಂದು CGWB ಹೆಸರಿಸಿದೆ. ರಾಜ್ಯಗಳಿಗೆ ಹೋಲಿಸಿದರೆ, ಆಂಧ್ರಪ್ರದೇಶದಲ್ಲಿ ಕಡಿಮೆ ಹೊರತೆಗೆಯುವಿಕೆ ಶೇ 29.83ರಷ್ಟಿದೆ. ಆದರೆ, ವಿಶಾಖಪಟ್ಟಣದಲ್ಲಿ ಗೂಗಲ್ ಮತ್ತು ಅದಾನಿ ನಿರ್ಮಿಸುವ AI ಕ್ಯಾಂಪಸ್ ಬರುತ್ತಿದೆ. ಇಲ್ಲಿ 2026ರ ಎಪ್ರಿಲ್ ನಲ್ಲಿ 2.12 ಸಾವಿರ ದಶಲಕ್ಷ ಕ್ಯೂಬಿಕ್ ಅಡಿಯಷ್ಟು ಅಂತರ್ಜಲ ಮರುಪೂರಣವಾಗಿತ್ತು. ಇದು ರಾಜ್ಯದ ಅತಿ ಕಡಿಮೆ ಮರುಪೂರಣದ ಜಿಲ್ಲೆಯಾಗಿದೆ.
ರಾಜ್ಯವಾರು ಪಟ್ಟಿ ನೋಡಿದರೆ, ಗುಜರಾತ್ ಶೇ 54ರಷ್ಟು ಅಂತರ್ಜಲ ಬಳಸಿಕೊಳ್ಳುತ್ತಿದೆ. ಗುಜರಾತ್ನ ಕರಾವಳಿ ಸೌರಾಷ್ಟ್ರ ಮತ್ತು ಕಛ್ ಪ್ರದೇಶದಲ್ಲಿ ಜಾಮ್ನಗರ ಮತ್ತು ಧೋಲೆರಾದಲ್ಲಿ ಡೇಟಾ ಸೆಂಟರ್ ಗಳ ಯೋಜನೆಗಳಾಗಿವೆ. ಈ ಪ್ರದೇಶ ಈಗಾಗಲೇ ಸಮುದ್ರ ನೀರು ಮತ್ತು ಲವಣಾಂಶದ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ.
ಅನೇಕ ಕಂಪನಿಗಳು ಇದೀಗ ಸಿಹಿನೀರಿನ ಬದಲಿಗೆ ಸಮುದ್ರದ ನೀರನ್ನು ಬಳಸುವ ಡೇಟಾ ಸೆಂಟರ್ ಗಳತ್ತ ಪ್ರಯತ್ನಿಸುತ್ತಿವೆ. ಗೂಗಲ್ 10 ವರ್ಷಗಳಿಗೂ ಹೆಚ್ಚು ಕಾಲ ಫಿನ್ಲ್ಯಾಂಡ್ ನಲ್ಲಿರುವ ತನ್ನ ಡೇಟಾ ಸೆಂಟರ್ ಅನ್ನು ತಂಪಾಗಿಸಲು ಬಾಲ್ಟಿಕ್ ಸಮುದ್ರದ ನೀರನ್ನು ಬಳಸುತ್ತಿದೆ. ಹೀಗಾಗಿ, ಕರಾವಳಿಯುದ್ದಕ್ಕೂ ಡೇಟಾ ಸೆಂಟರ್ ನಿರ್ಮಿಸುವುದು ಭಾರತದ ಯೋಜನೆಯ ಪ್ರಮುಖ ಭಾಗವಾಗುತ್ತಿದೆ.
ಆದರೆ, ಉಪ್ಪು ನೀರಿನ ವಿಸರ್ಜನೆ ಕಳವಳಕ್ಕೆ ಕಾರಣವಾಗಿದೆ. ಅದರಿಂದ ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮವಾಗಬಹುದು. ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಕೇಂದ್ರ ಸರಕಾರವು ಸುರಕ್ಷಿತ ವಿಲೇವಾರಿ ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಹೊರಡಿಸಿವೆ. ಆದರೆ, ರಾಜ್ಯಮಟ್ಟದಲ್ಲಿ ಅದು ಅನುಷ್ಠಾನವಾಗುತ್ತಿಲ್ಲ ಎಂದು ಸುಬ್ಬಾರಾವ್ ಅವರು ಅಭಿಪ್ರಾಯಪಟ್ಟಿದ್ದಾರೆ.






