ಶರಣಾಗಿರುವ ನಕ್ಸಲ್ ತೊಂಬೊಟ್ಟು ಲಕ್ಷ್ಮಿಗೆ ಜಾಮೀನು! ಸರ್ಕಾರ ಗಮನಿಸಬೇಕಿರುವ ಎಸ್ ಬಾಲನ್ ವಾದ!

ತೊಂಬೊಟ್ಟು ಲಕ್ಷ್ಮಿ | Photo Credit: PTI
ಉಡುಪಿಯಲ್ಲಿ ಶರಣಾಗಿದ್ದ ನಕ್ಸಲ್ ಚಳವಳಿಯ ನಾಯಕಿಯಾಗಿದ್ದ ತೊಂಬೊಟ್ಟು ಲಕ್ಷ್ಮಿಯವರಿಗೆ ಇಂದು ಹೈಕೋರ್ಟ್ ಜಾಮೀನು ನೀಡಿದೆ. ತೊಂಬೊಟ್ಟು ಲಕ್ಷ್ಮಿಯವರ ಮೇಲೆ ದಾಖಲಾಗಿದ್ದ ಮೂರೂ ಕೇಸುಗಳಲ್ಲಿ ಜಾಮೀನು ದೊರೆತಿದ್ದರಿಂದ ಅವರು ನಾಳೆ ಜೈಲಿನಿಂದ ಬಿಡುಗಡೆಯಾಗಬಹುದು. ತೊಂಬೊಟ್ಟು ಲಕ್ಷ್ಮಿಯವರ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಹೈಕೋರ್ಟ್ ನಲ್ಲಿ ವಾದಿಸಿದ್ದರು.
2 ಫೆಬ್ರವರಿ 2025 ನಕ್ಸಲ್ ಚಟುವಟಿಕೆಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಕುಂದಾಪುರ ತಾಲ್ಲೂಕಿನ ಅಮಾಸೆಬೈಲು ಸಮೀಪದ ತೊಂಬಟ್ಟುವಿನ ಲಕ್ಷ್ಮಿ ತೊಂಬಟ್ಟು ಅವರು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸಮ್ಮುಖದಲ್ಲಿ ಶರಣಾಗಿದ್ದರು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿಯವರು 'ರಾಜ್ಯ ಸರ್ಕಾರವು ಮೂರು ವರ್ಗದ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಿಸಿದೆ. ನಮ್ಮ ರಾಜ್ಯದ ನಿವಾಸಿಗಳಾಗಿದ್ದರೆ ‘ಎ’ ವರ್ಗದ ಪ್ಯಾಕೇಜ್ ನೀಡಲಾಗುತ್ತಿದೆ. ಲಕ್ಷ್ಮಿ ಅವರು ‘ಎ’ ವರ್ಗದ ನಕ್ಸಲ್ ಆಗಿದ್ದಾರೆ. ಪುನರ್ವಸತಿ, ಸ್ವ ಉದ್ಯೋಗ, ವಿದ್ಯಾಭ್ಯಾಸಕ್ಕೂ ಅವಕಾಶ ಇದೆ. ಅವರ ಬೇಡಿಕೆಗನುಗುಣವಾಗಿ ಅದನ್ನು ನೀಡಲಾಗುತ್ತದೆ' ಎಂದು ಭರವಸೆ ನೀಡಿದ್ದರು.
ಇದನ್ನು ಹೈಕೋರ್ಟ್ ಗಮನಕ್ಕೆ ತಂದ ಹಿರಿಯ ವಕೀಲ ಎಸ್ ಬಾಲನ್ "ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ದೇಶವನ್ನು ನಕ್ಸಲ್ ಮುಕ್ತ ಮಾಡಬೇಕು ಎಂದು ಘೋಷಿಸಿಕೊಂಡು ನಕ್ಸಲ್ ಶರಣಾಗತಿ ಪ್ಯಾಕೇಜ್ ಸೃಷ್ಟಿಸಿದೆ. ಆ ಪ್ಯಾಕೇಜ್ ಪ್ರಕಾರ ಸೂಕ್ತ ಪರಿಹಾರ ಮತ್ತು ಕೇಸುಗಳ ಶೀಘ್ರ ವಿಲೇ ಮಾಡಬೇಕಿತ್ತು. ಅದನ್ನು ನಂಬಿ ನಕ್ಸಲರು ಮುಖ್ಯವಾಹಿನಿಗೆ ಬಂದರೂ ಇನ್ನೂ ನಕ್ಸಲರ ಮೇಲಿನ ಕೇಸುಗಳನ್ನು ವಾಪಸ್ ಪಡೆದಿಲ್ಲ. ನಕ್ಸಲರು ಮುಖ್ಯವಾಹಿನಿಗೆ ಬಂದರೂ ಇನ್ನೂ ಅವರು ನಕ್ಸಲರಾಗಿಯೇ ಜೈಲಿನಲ್ಲಿ ಇದ್ದಾರೆ. ಅವರು ನಕ್ಸಲ್ ಆರೋಪದಿಂದ ಮುಕ್ತರಾಗಬೇಕು ಎಂದರೆ ಅವರ ಕೇಸುಗಳು ಶೀಘ್ರ ಮುಗಿಯಬೇಕು" ಎಂದು ವಾದಿಸಿದರು.
ಮುಂದುವರೆದು ವಾದಿಸಿದ ಎಸ್ ಬಾಲನ್ "ಸರ್ಕಾರ ತೊಂಬೊಟ್ಟು ಲಕ್ಷ್ಮಿ ಮತ್ತು ಇತರರಿಗೆ ಮೂರು ಲಕ್ಷ ರೂ ಪರಿಹಾರ ಮತ್ತು ತಿಂಗಳಿಗೆ 5 ಸಾವಿರ ರೂ ಹಣಕಾಸಿನ ಸಹಾಯ ಮಾಡಬೇಕಿತ್ತು. ಅದನ್ನು ಈ ವರೆಗೂ ಪೂರೈಸಿಲ್ಲ. ಶರಣಾದ ರಾಜಕೀಯ ಆರೋಪಿಗಳನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ಸರ್ಕಾರವೇ ಕರೆದು ಮೋಸ ಮಾಡಿದಂತಿದೆ" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ಪೀಠವು "ಇದನ್ನೆಲ್ಲಾ ನೋಡಿದ್ರೆ ಸರ್ಕಾರದ ವಿರುದ್ದವೇ ನಕ್ಸಲರು ಕೇಸು ಹಾಕಬಹುದು ಅನ್ಸುತ್ತೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಲಕ್ಷ್ಮಿ ತೊಂಬಟ್ಟು ಅವರ ವಿರುದ್ಧ 2007 ಮತ್ತು 2008ರಲ್ಲಿ ಗುಂಡಿನ ದಾಳಿ ನಡೆಸಿದ, ಭಿತ್ತಿಪತ್ರ ಅಂಟಿಸಿದ ಮತ್ತು ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ, ಬೆದರಿಕೆ ಹಾಕಿದ ಪ್ರಕರಣಗಳು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಕುಂದಾಪುರದ ಮಚ್ಚಟ್ಟು ಗ್ರಾಮದ ಅಂಗಡಿಯಲ್ಲಿ ಸರ್ಕಾರದ ವಿರುದ್ದ ಕರಪತ್ರ ಅಂಟಿಸಿದ, ನಕ್ಸಲ್ ನಿಗ್ರಹ ದಳದ ವಿರುದ್ದ ಗುಂಡಿನ ಚಕಮಕಿ ನಡೆಸಿದ, ಮಡಮಕ್ಕಿ ಗ್ರಾಮದ ಮನೆಗೆ ನುಗ್ಗಿ ಬೆದರಿಕೆ ಒಡ್ಡಿದ್ದ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ವಾದಿಸಿದ ವಕೀಲ ಎಸ್ ಬಾಲನ್ "ತೊಂಬೊಟ್ಟು ಲಕ್ಷ್ಮಿ ಮೇಲೆ ಯುಎಪಿಎ ದೇಶದ್ರೋಹದ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಯುಎಪಿಎ ಚಾಪ್ಟರ್ ಮೂರರಲ್ಲಿ ಸೆಕ್ಷನ್ 3, ಸೆಕ್ಷನ್ 10 ಮತ್ತು 13 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಯುಎಪಿಎ ಸೆಕ್ಷನ್ 43D ಪ್ರಕಾರ ತೊಂಬೊಟ್ಟು ಲಕ್ಷ್ಮಿಗೆ ಜಾಮೀನು ನೀಡುವಂತಿಲ್ಲ ಎಂದು ಸರ್ಕಾರ ವಾದಿಸುತ್ತಿದೆ. ಆದರೆ ಚಾಪ್ಟರ್ 3 ರಲ್ಲಿ ಸೆಕ್ಷನ್ 10 ಮತ್ತು 13 ಹಾಕಿರುವುದರಿಂದ ಸೆಕ್ಷನ್ 43 D ಯಂತೆ ಜಾಮೀನು ನೀಡುವಂತಿಲ್ಲ ಎಂದು ಸರ್ಕಾರ ವಾದಿಸುವಂತಿಲ್ಲ" ಎಂದು ವಾದ ಮಂಡಿಸಿದರು.
"ತೊಂಬೊಟ್ಟು ಲಕ್ಷ್ಮಿಯವರು ನಿಷೇದಿತ ನಕ್ಸಲ್ ಸಂಘಟನೆಗೆ ಸೇರಿದವರು" ಎಂದು ಸರ್ಕಾರ ವಾದಿಸಿತ್ತು. ಈ ಬಗ್ಗೆ ವಾದ ಮಂಡಿಸಿದ ಎಸ್ ಬಾಲನ್ "ಪೂರ್ತಿ ಚಾರ್ಜ್ ಶೀಟ್ ನಲ್ಲಿ ಎಲ್ಲೂ ಕೂಡಾ ತೊಂಬೊಟ್ಟು ಲಕ್ಷ್ಕಿಯವರು ಯಾವ ಸಂಘಟನೆಗೆ ಸೇರಿದವರು ಎಂಬುದನ್ನು ಉಲ್ಲೇಖ ಮಾಡಿಲ್ಲ. ಸರ್ಕಾರದ ವಾದದಲ್ಲೂ ಕೂಡಾ ಯಾವ ಸಂಘಟನೆ ನಿಷೇದಗೊಂಡಿದೆ ಎಂದು ಕೋರ್ಟ್ ಗೆ ಹೇಳಿಲ್ಲ. ತೊಂಬೊಟ್ಟು ಲಕ್ಷ್ಮಿಯವರು ಯಾವ ಸಂಘಟನೆಗೆ ಸೇರಿದವರು ಎಂಬುದು ಸರ್ಕಾರಕ್ಕೆ ಗೊತ್ತಿಲ್ಲದೆಯೇ ನಿಷೇಧಿತ ಸಂಘಟನೆಗೆ ಸೇರಿದವರು ಎಂದು ಹೇಗೆ ನಿರ್ಧರಿಸಲಾಯಿತು?" ಎಂದು ಬಾಲನ್ ಪ್ರಶ್ನಿಸಿದರು.
ಲಕ್ಷ್ಮಿ ಅವರು ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಿಂದ ದೂರವಿದ್ದು, ಆಂಧ್ರಪ್ರದೇಶದಲ್ಲಿ ನೆಲೆಸಿದ್ದರು. ಈಚೆಗೆ ಆರು ಮಂದಿ ನಕ್ಸಲರು ಮುಖ್ಯವಾಹಿನಿಗೆ ಬಂದ ಬಳಿಕ ಅವರು ಸರ್ಕಾರದ ಮುಂದೆ ಶರಣಾದರು. ಲಕ್ಷ್ಮಿ ಅವರ ಗಂಡ ಸಂಜೀವ ಕುಮಾರ್ ಅವರು ಈ ಹಿಂದೆಯೇ ಆಂಧ್ರಪ್ರದೇಶದಲ್ಲಿ ಮುಖ್ಯವಾಹಿನಿಗೆ ಬಂದಿದ್ದರು. ಅವರ ವಿರುದ್ಧ ಈಗ ಯಾವುದೇ ಪ್ರಕರಣಗಳಿಲ್ಲ. ಲಕ್ಷ್ಮಿ ವಿರುದ್ಧ ಮೂರು ಪ್ರಕರಣಗಳಷ್ಟೇ ಬಾಕಿ ಇದೆ.
ಸರ್ಕಾರ ಹೈಕೋರ್ಟ್ ಗೆ ಪೂರ್ತಿ ಮಾಹಿತಿಯನ್ನು ಕೊಟ್ಟಿಲ್ಲ. 'ಜಿಲ್ಲಾಧಿಕಾರಿ ಮುಂದೆ ತೊಂಬೊಟ್ಟು ಲಕ್ಷ್ಮಿ ಶರಣಾಗತಿ ಆದ ದಾಖಲೆಗಳನ್ನು ಕೊಡಿ' ಎಂದು ಹೈಕೋರ್ಟ್ ಎಸ್ ಬಾಲನ್ ಗೆ ಸೂಚಿಸಿತು. ಅದಕ್ಕೆ ಪ್ರತಿಕ್ರಿಸಿದ ಎಸ್ ಬಾಲನ್ "ತೊಂಬೊಟ್ಟು ಲಕ್ಷ್ಮಿ ಸೇರಿದಂತೆ ನಕ್ಸಲರು ಬಡ ಜನರು, ಆದಿವಾಸಿ, ದಲಿತರು, ಪರಿಸರ ಉಳಿವಿಗಾಗಿ ಹೋರಾಡುವ ದೇಶಪ್ರೇಮಿಗಳು. ಈಗ ಅವರು ಜೈಲಲ್ಲಿ ಇದ್ದಾರೆ. ಅವರು ವಕಾಲತ್ತು ಕೊಟ್ಟ ಬಳಿಕ ಈವರೆಗೂ ನನ್ನನ್ನು ಸಂಪರ್ಕಿಸಿಲ್ಲ. ನಾವು ದೇಶಪ್ರೇಮಿಗಳ ಬಗ್ಗೆ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಬೇಕು. ಈ ಮದ್ಯೆ ಈ ದಾಖಲೆಗಳನ್ನು ನಾನು ಒದಗಿಸುವುದು ಎಲ್ಲಿಂದ?" ಎಂದು ವಿಷಾದ ವ್ಯಕ್ತಪಡಿಸಿ, ದಾಖಲೆಗಳನ್ನು ಸರ್ಕಾರವೇ ಹಾಜರುಪಡಿಸಬೇಕು ಎಂದು ವಾದಿಸಿದರು.
ವಾದ ವಿವಾದ ಆಲಿಸಿದ ನ್ಯಾಯಮೂರ್ತಿಗಳು ತೊಂಬೊಟ್ಟು ಲಕ್ಷ್ಮಿಯವರ ಮೂರೂ ಪ್ರಕರಣಗಳಲ್ಲಿ ಜಾಮೀನು ನೀಡಿದರು. ಹಿರಿಯ ವಕೀಲ ಬಾಲನ್ ಅವರ ಜೊತೆ ವಕೀಲೆ ರಕ್ಷಿತಾ ಸಿಂಗ್ ಸಹಕರಿಸಿದರು.







