ಅಧಿಕ ಪ್ರೊಟೀನ್ ಆಹಾರ ಸೇವನೆ ಕಿಡ್ನಿಗೆ ಅಪಾಯಕಾರಿಯೇ?; ವೈದ್ಯರು ಹೇಳುವುದೇನು?

ಸಾಂದರ್ಭಿಕ ಚಿತ್ರ | Photo Credit : freepik
ಪ್ರೊಟೀನ್ ಆಹಾರಗಳು ಕಿಡ್ನಿಗೆ ಹೇಗೆ ತೊಂದರೆ ಕೊಡುತ್ತವೆ ಎನ್ನುವ ಬಗ್ಗೆ ನೆಫ್ರೊಲಜಿಸ್ಟ್ ಡಾ ವಿನಾಯಕ್ ಉಕಿರ್ಡೆ ಎಚ್ಚರಿಕೆ ನೀಡಿದ್ದಾರೆ.
ವೈದ್ಯರು ಸಾಮಾನ್ಯವಾಗಿ ದೈನಂದಿನ ಪ್ರೊಟೀನ್ ಸೇವನೆಯನ್ನು ಮೇಲ್ವಿಚಾರಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಹೀಗೆ ಪ್ರೊಟೀನ್ ಸೇವನೆಯಿಂದ ದೈನಂದಿನ ಹಸಿವೆಯ ಹಂಬಲವನ್ನು ನಿಗ್ರಹಿಸಬಹುದು. ಅಲ್ಲದೆ, ಹಸಿವೆಯನ್ನು ನೀಗಿಸುವ ತಕ್ಷಣದ ಪ್ರಯೋಜನಗಳಿಂದ ಹಿಡಿದು ಸ್ನಾಯು ಮತ್ತು ಮೂಳೆ ಆರೋಗ್ಯ ಸುಧಾರಿಸುವಂತಹ ದೀರ್ಘಕಾಲೀನ ಆರೋಗ್ಯದವರೆಗೆ ದೇಹಕ್ಕೆ ಪ್ರೊಟೀನ್ ಅತ್ಯಗತ್ಯವಾಗಿದೆ.
ಆದರೆ ಕೆಲವು ಆರೋಗ್ಯ ತಜ್ಞರ ಪ್ರಕಾರ, ಪ್ರೊಟೀನ್ ಅಗತ್ಯವನ್ನು ತಪ್ಪಾಗಿ ಭಾವಿಸಿಕೊಂಡು ಅತಿಯಾಗಿ ಪ್ರೊಟೀನ್ ಸೇವಿಸುವುದು, ಪ್ರೊಟೀನ್ ಆಹಾರವನ್ನು ಮಾತ್ರ ಸೇವಿಸಿ ಇತರ ಪೋಷಕಾಂಶಗಳನ್ನು ನಿರ್ಲಕ್ಷಿಸಿದಲ್ಲಿ ಹೆಚ್ಚು ಪ್ರೊಟೀನ್ಗಳಿಂದ ಮೂತ್ರಪಿಂಡಗಳಿಗೆ ಒತ್ತಡವನ್ನುಂಟುಮಾಡುವ ಸಾಧ್ಯತೆಯಿದೆ.
ಪ್ರೊಟೀನ್ ಆಹಾರಗಳು ಕಿಡ್ನಿಗೆ ಹೇಗೆ ತೊಂದರೆ ಕೊಡುತ್ತವೆ ಎನ್ನುವ ಬಗ್ಗೆ ನೆಫ್ರೊಲಜಿಸ್ಟ್ ಡಾ ವಿನಾಯಕ್ ಉಕಿರ್ಡೆ ಎಚ್ಚರಿಕೆ ನೀಡಿದ್ದಾರೆ. ಅಧಿಕ ಪ್ರೊಟೀನ್ ಮತ್ತು ಶೂನ್ಯ ಕಾರ್ಬೋಹೈಡ್ರೇಟ್ ಸೇವನೆಯ ಪ್ರವೃತ್ತಿ ದೇಹದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಪ್ರೊಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಅಪಾಯ
“ನಾವು ಪ್ರೊಟೀನ್ ಸೇವನೆ ಮಾಡಿದಾಗ ದೇಹವು ಅದನ್ನು ಅಮಿನೋ ಆಮ್ಲಗಳಾಗಿ ಪರಿವರ್ತಿಸುತ್ತದೆ. ಹೀಗೆ ಯೂರಿಯ ಮತ್ತು ಕ್ರಿಯೇಟಿನೈನ್ನಂತಹ ಸಾರಜನಕ ತ್ಯಾಜ್ಯ ಉತ್ಪನ್ನಗಳ ರಚನೆಗೆ ಕಾರಣವಾಗುತ್ತದೆ. ಈ ತ್ಯಾಜ್ಯಗಳನ್ನು ಮೂತ್ರಪಿಂಡಗಳು ಫಿಲ್ಟರ್ ಮಾಡಿ ಹೊರ ಹಾಕಲು ಸಹಾಯ ಮಾಡುತ್ತದೆ. ಅಧಿಕ ಪ್ರೊಟೀನ್ ಆಹಾರ ಈ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ” ಎನ್ನುತ್ತಾರೆ ವಿನಾಯಕ್.
“ಅಧಿಕ ಪ್ರೊಟೀನ್ ಆಹಾರವು ಮೂತ್ರಪಿಂಡಗಳ ಮೇಲೆ ತುಂಬಾ ಹೊರೆಯಾಗುತ್ತದೆ. ಇದರಿಂದಾಗಿ ಗ್ಲೊಮೆರುಲರ್ ಹೈಪರ್ಫಿಲ್ಟರೇಶನ್ ಎನ್ನುವ ಸ್ಥಿತಿಗೆ ಕಾರಣವಾಗುತ್ತದೆ. ಕಿಡ್ನಿ ಅತಿಯಾಗಿ ಕೆಲಸ ಮಾಡಿ ಫಿಲ್ಟರ್ ಮಾಡುತ್ತದೆ. ಮೂತ್ರಪಿಂಡಗಳ ಕೆಲಸದ ಹೊರೆ ಹೆಚ್ಚಾಗುವುದಲ್ಲದೆ, ರಕ್ತದಿಂದ ತ್ಯಾಜ್ಯ ಉತ್ಪನ್ನಗಳನ್ನು ತೆಗೆದು ಹಾಕಲು ಅವು ಸಾಮಾನ್ಯಕ್ಕಿಂತ ಹೆಚ್ಚಿನ ದರದಲ್ಲಿ ಕಾರ್ಯನಿರ್ವಹಿಸುತ್ತವೆ. ಹೀಗೆ ಹೊರೆ ಹೆಚ್ಚಾಗಿ ಕಾಲಕ್ರಮೇಣ ಮೂತ್ರಪಿಂಡಗಳ ಕಾರ್ಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಶೂನ್ಯ ಕಾರ್ಬೋ ಅಪಾಯಕಾರಿ
ಮುಖ್ಯವಾಗಿ ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ ಅಂಶ ಕಡಿಮೆ ಇರುವ ಆಹಾರಗಳು ಅಪಾಯಕಾರಿಯಾಗಿ ಪರಿಣಮಿಸಬಹುದು. ಹೆಚ್ಚಿನ ಪ್ರೊಟೀನ್ ದ್ರವ ನಷ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಪ್ರೊಟೀನ್ ಸೇವನೆಯ ಸಂದರ್ಭದಲ್ಲಿ ಹೆಚ್ಚು ದ್ರವ ಸೇವನೆ ಅಗತ್ಯ. ನಿರ್ಜಲೀಕರಣವು ಮೂತ್ರಪಿಂಡದ ಸಮಸ್ಯೆಗಳನ್ನು ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಇನ್ನಷ್ಟು ಹದೆಗೆಡಿಸುತ್ತದೆ” ಎಂದು ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಅವರು ಹೆಸರಿಸಿದರು.
ರೆಡ್ ಮೀಟ್ ಮತ್ತು ಸಂಸ್ಕರಿಸಿದ ಮಾಂಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಆಮ್ಲೀಯತೆಯ ಮಟ್ಟ ಹೆಚ್ಚಾಗುವುದರಿಂದ ಮೂತ್ರಪಿಂಡದ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ದೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವಂತಹ, ಈಗಾಗಲೇ ದುರ್ಬಲ ಮೂತ್ರಪಿಂಡದ ಕಾರ್ಯ ಹೊಂದಿರುವ ರೋಗಿಗಳಿಗೆ, ಪ್ರೊಟೀನ್ ಸೇವನೆ ಮಾಡುವುದು ಅಪಾಯಕಾರಿಯಾಗಿ ಪರಿಣಮಿಸಬಹುದು.
ಹಾಗಿದ್ದರೆ ಎಷ್ಟು ಪ್ರಮಾಣದಲ್ಲಿ ಪ್ರೊಟೀನ್ ಸೇವಿಸಬೇಕು?
ವಯಸ್ಕರಿಗೆ ದಿನಕ್ಕೆ ದೇಹದ ತೂಕದ ಪ್ರತಿ ಕಿಲೋಗ್ರಾಂಗೆ 0.8 ರಿಂದ 1 ಗ್ರಾಂ ಪ್ರೊಟೀನ್ ಸಾಕಾಗುತ್ತದೆ. ಹೀಗಾಗಿ ಅತಿಯಾದ ಶಿಸ್ತಿನ ಆಹಾರದ ಅಗತ್ಯ ದೇಹಕ್ಕೆ ಇಲ್ಲ. ಯಾವ ವಿಧದ ಆಹಾರ ಅಂದರೆ, ಕಾರ್ಬೋಹೈಡ್ರೇಟ್ ಸಮೃದ್ಧ ಅಥವಾ ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರದಲ್ಲಿ ಯಾವುದು ಉತ್ತಮ ಎನ್ನುವುದನ್ನು ಆಧರಿಸಿ ಎಲ್ಲಾ ಆಹಾರಗಳನ್ನು ಸೇವಿಸಬೇಕು. ಅಂದರೆ ಕಾರ್ಬೋಹೈಡ್ರೇಟ್ಗಳು, ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್ ಮತ್ತು ಸಾಕಷ್ಟು ಹಣ್ಣು- ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಕು ಎನ್ನುತ್ತಾರೆ ವಿನಾಯಕ್.
ಮುಖ್ಯವಾಗಿ ಆಹಾರ ಕ್ರಮದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅಲ್ಲದೆ, ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂದು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ಮೂತ್ರಪಿಂಡದ ಕಾರ್ಯ ಪರೀಕ್ಷೆಗಳಿಗೆ ಒಳಗಾಗಬೇಕು.
ಕೃಪೆ: ಹಿಂದೂಸ್ತಾನ್ ಟೈಮ್ಸ್






