ಅನುಮೋದಿತ ಸಾಲಗಳ ಹೈಜಾಕ್; NBFCಗಳ ಮೇಲೆ ವ್ಯವಸ್ಥಿತ ಸೈಬರ್ ದಾಳಿ: ಸೈಬರ್ ಭದ್ರತಾ ಬ್ಯೂರೋ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : magnific.com
ಅಗ್ಗದ ಭದ್ರತಾ ವ್ಯವಸ್ಥೆ ಹೊಂದಿರುವ ಸಣ್ಣ NBFCಗಳು ವಂಚಕರ ಗುರಿ. AI ಉಪಕರಣಗಳನ್ನು ಬಳಸಿಕೊಂಡು ದಾಳಿಯನ್ನು ಹೆಚ್ಚು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ಸೈಬರ್ ವಂಚಕರು.
ಸೈಬರ್ ವಂಚಕರು ಈಗ ಬ್ಯಾಂಕೇತರ ಹಣಕಾಸು ಕಂಪೆನಿಗಳನ್ನು ತಮ್ಮ ಹೊಸ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ದಿಲ್ಲಿ-ಎನ್ಸಿಆರ್ ಪ್ರದೇಶದಲ್ಲಿರುವ 12 ಬ್ಯಾಂಕೇತರ ಹಣಕಾಸು ಕಂಪೆನಿಗಳು (NBFCಗಳು) ತಮ್ಮ ಸಾಫ್ಟ್ ವೇರ್ ನಲ್ಲಿನ ಲೋಪದೋಷಗಳನ್ನು ಬಳಸಿಕೊಂಡ ಹ್ಯಾಕರ್ ಗಳಿಂದಾಗಿ 65 ಕೋಟಿ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಂಡಿವೆ ಎಂದು Indian Express ವರದಿ ಮಾಡಿದೆ.
ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಕೂಡ ಬ್ಯಾಂಕೇತರ ಹಣಕಾಸು ಕಂಪೆನಿಗಳು, ಫಿನ್ ಟೆಕ್ ವೇದಿಕೆಗಳು ಮತ್ತು ಬ್ಯಾಂಕ್ ಗಳ ಪಾವತಿ ವ್ಯವಸ್ಥೆಗಳು ಹಾಗೂ ಸಾಲ ವಿತರಣೆ ವೇದಿಕೆಗಳನ್ನು ಗುರಿಯಾಗಿಸಿಕೊಂಡು AI ನೆರವಿನ ಸೈಬರ್ ದಾಳಿಯ ಬೆದರಿಕೆ ಹೆಚ್ಚುತ್ತಿದೆ ಎಂದು ಎಚ್ಚರಿಕೆ ನೀಡಿದೆ. ಆರಂಭಿಕ ಹಂತದಲ್ಲೇ ಮೋಸದ ವಹಿವಾಟುಗಳನ್ನು ತಡೆಗಟ್ಟಲು ಭದ್ರತಾ ಕ್ರಮಗಳನ್ನು ಬಲಪಡಿಸುವಂತೆ ಸೂಚಿಸಿದೆ ಎಂದು The Hindu ವರದಿ ಮಾಡಿದೆ.
ನ. 12ರಂದು ಹೈದರಾಬಾದ್ ನಲ್ಲಿ ನಡೆದ ಸಭೆಯಲ್ಲಿ ಈ ಸಲಹೆ ನೀಡಲಾಗಿದೆ. ಸಭೆಯಲ್ಲಿ ಬ್ಯಾಂಕೇತರ ಹಣಕಾಸು ಕಂಪೆನಿಗಳು, ಫಿನ್ ಟೆಕ್ ವೇದಿಕೆಗಳು ಮತ್ತು ಬ್ಯಾಂಕ್ ಗಳ ಪ್ರತಿನಿಧಿಗಳು, ದೂರಸಂಪರ್ಕ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ನ ಅಧಿಕಾರಿಗಳು ಭಾಗವಹಿಸಿದ್ದರು.
ವಂಚನೆ ಹೇಗೆ ಸಾಧ್ಯವಾಗಿದೆ?
ಸಭೆಯಲ್ಲಿ ತಿಳಿಸಿರುವ ಪ್ರಕಾರ, ವಂಚಕರು ದುರ್ಬಲ ಸೈಬರ್ ಭದ್ರತಾ ವ್ಯವಸ್ಥೆ ಹೊಂದಿರುವ ಸಣ್ಣ NBFCಗಳನ್ನು ಗುರಿಯಾಗಿಸಿದ್ದಾರೆ. ವೈಟ್ ಲಿಸ್ಟ್ ಮಾಡಲಾದ ಐಡಿಗಳು, ಪಾವತಿ API ರುಜುವಾತುಗಳು ಮತ್ತು ಕೋಡ್ ನಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಲು ದಾಳಿಕೋರರು ಸುಮಾರು 10ರಿಂದ 12 ದಿನಗಳ ಕಾಲ ಸಂಸ್ಥೆಯ ಆಂತರಿಕ ಪ್ರಕ್ರಿಯೆ ಹಾಗೂ ಪಾವತಿ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಾರೆ.
ನಂತರ ಈ ದೌರ್ಬಲ್ಯಗಳನ್ನು ಬಳಸಿಕೊಂಡು ಅನಧಿಕೃತ ಪ್ರವೇಶ ಪಡೆಯುತ್ತಾರೆ. ವೇದಿಕೆ ಈಗಾಗಲೇ ನಂಬಿರುವ ಸರ್ವರ್ ಗಳಿಂದ ಕದ್ದ ಕ್ರೆಡೆನ್ಷಿಯಲ್ಗಳನ್ನು ಬಳಸುತ್ತಾರೆ. ಇದರಿಂದ ವಂಚನೆಯ ವಿನಂತಿಗಳು ಅಸಲಿ ವಿನಂತಿಗಳಂತೆ ಕಾಣುತ್ತವೆ.
ಸಾಮಾನ್ಯ ಕಾರ್ಯನಿರ್ವಹಣೆಯ ಸಮಯದ ಹೊರತಾಗಿಯೂ ಪಾವತಿ ವಿನಂತಿಗಳನ್ನು ಆರಂಭಿಸಲು, ವರ್ಗಾವಣೆಗಳನ್ನು ಪುನರಾವರ್ತಿಸಲು ಹಾಗೂ ವಂಚನೆ ಪತ್ತೆಹಚ್ಚುವ ಎಚ್ಚರಿಕೆಗಳಿಂದ ತಪ್ಪಿಸಿಕೊಳ್ಳಲು ಪಾವತಿಗಳನ್ನು ಸಣ್ಣ ಮೊತ್ತಗಳಾಗಿ ವಿಭಜಿಸಲು ಸ್ವಯಂಚಾಲಿತ ಸ್ಕ್ರಿಪ್ಟ್ ಗಳನ್ನು ಬಳಸಲಾಗುತ್ತದೆ. ವರ್ಗಾವಣೆ ತಡೆಯುವ ಮೊದಲೇ ಹಣವನ್ನು ತ್ವರಿತ ಮತ್ತು ಸ್ವಯಂಚಾಲಿತ ಬೃಹತ್ ವಹಿವಾಟುಗಳ ಮೂಲಕ ಮ್ಯೂಲ್ ಖಾತೆಗಳಿಗೆ (ಅಕ್ರಮ ಹಣ ವರ್ಗಾವಣೆಗೆ ಬಳಸುವ ಖಾತೆಗಳು) ವರ್ಗಾಯಿಸಲಾಗುತ್ತದೆ.
ದಿಲ್ಲಿ-ಎನ್ಸಿಆರ್ ನಲ್ಲಿ ಏನಾಗಿದೆ?
ದಿಲ್ಲಿ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ನೀಡಿದ ಪತ್ರಿಕಾ ವಿವರಗಳ ಪ್ರಕಾರ, ದಿಲ್ಲಿ-ಎನ್ಸಿಆರ್ ನ 12 NBFCಗಳು ದಾಖಲಿಸಿರುವ ಎಫ್ಐಆರ್ ಗಳು, ಇದೇ ಅವಧಿಯಲ್ಲಿ ದೇಶಾದ್ಯಂತ ವಿವಿಧ NBFCಗಳು ದಾಖಲಿಸಿರುವ 150ಕ್ಕೂ ಹೆಚ್ಚು ದೂರುಗಳ ಭಾಗವಾಗಿವೆ. ಈ ಎಲ್ಲ ಪ್ರಕರಣಗಳಲ್ಲಿ ಒಟ್ಟು 300 ಕೋಟಿ ರೂ.ಗೂ ಹೆಚ್ಚು ಹಣವನ್ನು ದೋಚಲಾಗಿದೆ.
ಎನ್ಸಿಆರ್ ಪ್ರಕರಣಗಳಲ್ಲಿ ದಿಲ್ಲಿ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರು ಮ್ಯೂಲ್ ಖಾತೆಗಳನ್ನು ಸೃಷ್ಟಿಸುವ ಮತ್ತು ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದರು. ವಂಚನೆಗೊಳಗಾದ 65 ಕೋಟಿ ರೂ.ಗಳ ಪೈಕಿ 18 ಕೋಟಿ ರೂ.ಗಳನ್ನು ಮ್ಯೂಲ್ ಖಾತೆಗಳಿಂದ ನಗದು ಅಥವಾ ಕ್ರಿಪ್ಟೊಕರೆನ್ಸಿ ರೂಪದಲ್ಲಿ ಹೊರಹೋಗುವ ಮೊದಲೇ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ವಂಚನೆಯ ವಿಧಾನವೇನು?
ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗಳಿಗೆ ತಿಳಿಸಿರುವ ಪ್ರಕಾರ, ಹ್ಯಾಕರ್ ಗಳು ಸಾಮಾನ್ಯವಾಗಿ ಮಾಲ್ ವೇರ್ ಬಳಸಿ NBFCಗಳ ಫ್ರಂಟ್ ಎಂಡ್ ಗೆ (ಬಳಕೆದಾರರು ಸಾಲದ ಅರ್ಜಿಗಳಂತಹ ಸೇವೆಗಳನ್ನು ಬಳಸುವ ಇಂಟರ್ಫೇಸ್) ಲಗ್ಗೆ ಇಡುತ್ತಾರೆ. ಈ ಕಂಪೆನಿಗಳ ವ್ಯವಸ್ಥೆಗಳನ್ನು ನಿರ್ವಹಿಸುವ ಸಾಫ್ಟ್ ವೇರ್ ಕೋಡ್ಗಳಲ್ಲಿರುವ ಲೋಪದೋಷಗಳ ಮೂಲಕವೇ ಮಾಲ್ ವೇರ್ ಗಳು ಒಳನುಸುಳುತ್ತವೆ.
ಈ ಮಾಲ್ ವೇರ್ ಗಳು ವ್ಯವಸ್ಥೆಯಲ್ಲಿ ಏಳರಿಂದ ಎಂಟು ದಿನಗಳವರೆಗೆ ಉಳಿದುಕೊಳ್ಳುತ್ತವೆ. ನಂತರ ಮಂಜೂರಾಗಿದ್ದರೂ ಇನ್ನೂ ವಿತರಿಸದ ಸಾಲಗಳಿಗೆ ಸಂಬಂಧಿಸಿದ ವಿವರಗಳನ್ನು ಪ್ರವೇಶಿಸುತ್ತವೆ. ಮಾಲ್ ವೇರ್ ಮೂಲಕ ಸಾಲ ವಿತರಿಸುವ ನಿರ್ದಿಷ್ಟ ಆದೇಶಗಳನ್ನು ಗುರುತಿಸಿದ ಬಳಿಕ ವಂಚನೆ ನಡೆಸುವುದು ಸುಲಭವಾಗುತ್ತದೆ. ನಂತರ ಸರ್ವರ್ ಮೂಲಕ ಆದೇಶ ಕಳುಹಿಸಲಾಗುತ್ತದೆ.
NBFCಯ ಫೈರ್ವಾಲ್ (ಭದ್ರತಾ ವ್ಯವಸ್ಥೆ) ಈಗಾಗಲೇ ನಂಬಿರುವ ಕ್ಲೌಡ್ ಸರ್ವರ್ನಿಂದ ವಂಚಕರು ಪಾವತಿ ಆದೇಶವನ್ನು ಕಳುಹಿಸುತ್ತಾರೆ. ಈ ವಿನಂತಿಯನ್ನು ಸಾಮಾನ್ಯ ವಹಿವಾಟಿನಂತೆಯೇ ಪರಿಗಣಿಸಿ ಸುಲಭವಾಗಿ ಅಂಗೀಕರಿಸಲಾಗುತ್ತದೆ.
ಗುರಿಯಾದ ಅನೇಕ ಸಂಸ್ಥೆಗಳು ಚಿಕ್ಕದಾಗಿದ್ದು, ಅವುಗಳ ಸಾಫ್ಟ್ ವೇರ್ ನಲ್ಲಿ ಭದ್ರತಾ ಲೋಪಗಳಿದ್ದವು. ವಂಚಕರು ಈಗ AI ಉಪಕರಣಗಳನ್ನು ಬಳಸಿಕೊಂಡು ಈ ಪ್ರಕ್ರಿಯೆಯನ್ನು ಹೆಚ್ಚು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿದ್ದಾರೆ.
ಲೋಪದೋಷವನ್ನು ಬಳಸಿಕೊಳ್ಳುವುದು ಹೇಗೆ?
ಇತರ ಕಂಪೆನಿಗಳಂತೆ NBFCಗಳಿಗೂ ತಮ್ಮ ವೆಬ್ ಸೈಟ್ ನಲ್ಲಿನ ಟ್ರಾಫಿಕ್ ನಿರ್ವಹಿಸಲು ಡೇಟಾ ಸೆಂಟರ್ ಗಳ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಅಮೆಜಾನ್ ವೆಬ್ ಸರ್ವಿಸಸ್ನಂತಹ ಕ್ಲೌಡ್ ಪ್ಲಾಟ್ ಫಾರ್ಮ್ಗಳ ಮೂಲಕ ನಿರ್ವಹಿಸಲಾಗುವ ಡೇಟಾ ಸೆಂಟರ್ ನಲ್ಲಿ ತನ್ನ ವೆಬ್ ಸೈಟ್ ಹೋಸ್ಟ್ ಮಾಡಲು NBFCಯು ಫಿನ್ ಟೆಕ್ ಕಂಪೆನಿಯೊಂದನ್ನು ನೇಮಿಸಿಕೊಳ್ಳುತ್ತದೆ.
ಒಮ್ಮೆ ವೆಬ್ ಸೈಟ್ ಹೋಸ್ಟ್ ಮಾಡಿದ ಬಳಿಕ, NBFCಯ ವೆಬ್ ಸೈಟ್ ನಲ್ಲಿರುವ ಫೈರ್ವಾಲ್ ಈ ಡೇಟಾ ಸೆಂಟರ್ ಗಳ ಹೊರಹೋಗುವ IP ವಿಳಾಸಗಳನ್ನು ವೈಟ್ ಲಿಸ್ಟ್ ಗೆ ಸೇರಿಸುತ್ತದೆ. ಅಂದರೆ, ವೆಬ್ ಸೈಟ್ ಮೂಲಕ ಹಣ ವಿತರಣೆಗಾಗಿ ಬರುವ ಯಾವುದೇ ವಿನಂತಿಯು ಈ ವಿಳಾಸಗಳಲ್ಲಿ ಒಂದರಿಂದ ಬಂದಿದ್ದರೆ ಮಾತ್ರ ಅನುಮೋದನೆ ದೊರೆಯುತ್ತದೆ.
ಆದರೆ, ಈ ಕ್ಲೌಡ್ ಸೇವೆಗಳಲ್ಲಿ ಬಹುತೇಕ ಸಾರ್ವಜನಿಕವಾಗಿ ಲಭ್ಯವಿರುತ್ತವೆ. ಹೀಗಾಗಿ, ಯಾರು ಬೇಕಾದರೂ ಅವುಗಳಲ್ಲಿ ಖಾತೆ ರಚಿಸಿ ನಿರ್ದಿಷ್ಟ IP ವಿಳಾಸಗಳನ್ನು ಬಳಸಬಹುದು.
ಇದನ್ನೇ ಬಳಸಿಕೊಳ್ಳುವ ವಂಚಕರು ಈ ಕ್ಲೌಡ್ ಸೇವೆಗಳಲ್ಲಿ ಖಾತೆಗಳನ್ನು ನೋಂದಾಯಿಸುತ್ತಾರೆ. NBFC ವೆಬ್ ಸೈಟ್ನಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಆದೇಶಗಳನ್ನು ಸಿದ್ಧಪಡಿಸುತ್ತಾರೆ. ಸಾಲ ವಿತರಣೆಗಾಗಿ NBFCಯ APIಗೆ ವಿನಂತಿ ಕಳುಹಿಸಲು ಕೋಡ್ ಸಿದ್ಧಪಡಿಸುತ್ತಾರೆ. ವೈಟ್ ಲಿಸ್ಟ್ ಮಾಡಲಾದ IP ವಿಳಾಸವನ್ನು ಬಳಸುವುದರಿಂದ NBFCಯ ಫೈರ್ವಾಲ್ನ ಭದ್ರತಾ ತಪಾಸಣೆಯನ್ನು ದಾಟಿ, ಬ್ಯಾಂಕ್ ತಲುಪುವ ವಿನಂತಿಗೆ ತ್ವರಿತ ಅನುಮೋದನೆ ಪಡೆಯುತ್ತಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ವಂಚಕರು ಈ ರೀತಿ ವೈಟ್ ಲಿಸ್ಟ್ನಲ್ಲಿರುವ ಅನೇಕ IP ವಿಳಾಸಗಳನ್ನು ಬಳಸಿ ಬಹು ವಹಿವಾಟುಗಳ ಮೂಲಕ NBFCಗಳಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಹೀರೋ ಫಿನ್ ಕಾರ್ಪ್ ಪ್ರಕರಣದಲ್ಲಿ 317ಕ್ಕೂ ಹೆಚ್ಚು ವಹಿವಾಟುಗಳ ಮೂಲಕ 12 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಇದಕ್ಕಾಗಿ ಕನಿಷ್ಠ 165 IP ವಿಳಾಸಗಳನ್ನು ಬಳಸಲಾಗಿದೆ.
ತನಿಖೆಯೊಂದರಲ್ಲಿ CyberStrikeAI ಎಂಬ ಚೀನಿ AI ಪ್ಲಾಟ್ ಫಾರ್ಮ್ ಅನ್ನು NBFCಗೆ ಕಮಾಂಡ್ ಸ್ಕ್ರಿಪ್ಟ್ ಕಳುಹಿಸಲು ಬಳಸಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.
ದೊಡ್ಡ ಸಮಸ್ಯೆಯೆಂದರೆ, ಅನೇಕ ಸಣ್ಣ NBFCಗಳಲ್ಲಿ ಸಾಲದ ಸ್ಥಿತಿ ಮತ್ತು ಅನುಮೋದನೆಗಳನ್ನು ಪರಿಶೀಲಿಸಲು ನಿರ್ದಿಷ್ಟ ಹೊಂದಾಣಿಕೆ ಅವಧಿ (Reconciliation Time Period) ಇದೆ. ಈ ಪರಿಶೀಲನೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ನಡೆಯುತ್ತದೆ. ಆ ಬಳಿಕವೇ ಗ್ರಾಹಕರಿಗೆ ಸಾಲದ ಹಣ ದೊರೆತಿಲ್ಲ ಎಂಬುದು ತಿಳಿದು, ದೂರು ದಾಖಲಿಸಲಾಗುತ್ತದೆ.
ವಂಚಕರು ಈ ಕಾರ್ಯಗಳನ್ನು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ನಿರ್ವಹಿಸಲು ಸ್ವಯಂಚಾಲಿತ AI ವ್ಯವಸ್ಥೆಗಳನ್ನು ಬಳಸಲು ಪ್ರಾರಂಭಿಸಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.






