ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ದಿಲ್ಲಿ ಪೊಲೀಸರನ್ನೇ ವಶಕ್ಕೆ ತೆಗೆದುಕೊಂಡ ಹಿಮಾಚಲ ಪ್ರದೇಶದ ಪೊಲೀಸರು; ಏನಿದು ಹೈಡ್ರಾಮಾ?

Photo Credit : PTI
ಕಳೆದ ವಾರ ದಿಲ್ಲಿಯಲ್ಲಿ ನಡೆದ AI ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಶರ್ಟ್ಲೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲ್ಪಟ್ಟ ಮೂವರನ್ನು ದಿಲ್ಲಿ ಪೊಲೀಸರ ವಿಶೇಷ ಘಟಕದ ತಂಡ ಹಿಮಾಚಲದ ರೊಹ್ರುವಿನಲ್ಲಿ ಬಂಧಿಸಿತ್ತು. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಕೂಡಲೇ, ದಿಲ್ಲಿ ಪೊಲೀಸರು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ; ಅವರು ಶಂಕಿತರನ್ನು ಅಪಹರಿಸಿದ್ದಾರೆ ಎಂದು ಹಿಮಾಚಲ ಪೊಲೀಸರು ಆರೋಪಿಸಿದರು. ಅಷ್ಟೇ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರನ್ನು ರಾಜ್ಯದ ಹೊರಗೆ ಕರೆದೊಯ್ಯುವುದನ್ನು ತಡೆದರು. ದಿಲ್ಲಿ ಪೊಲೀಸರ ವಿರುದ್ಧ ಅವರು FIR ದಾಖಲಿಸಿದರು. ಆರೋಪಿಗಳನ್ನು ಕರೆದೊಯ್ಯುವ ವಿಚಾರದಲ್ಲಿ ಶಿಮ್ಲಾ–ಚಂಡೀಗಢ ಹೆದ್ದಾರಿಯಲ್ಲಿರುವ ಶೋಘಿ ಪೊಲೀಸ್ ಠಾಣೆಯಲ್ಲಿ ತಡರಾತ್ರಿಯವರೆಗೂ ಉಭಯ ಪಡೆಗಳ ನಡುವೆ ಬಿಕ್ಕಟ್ಟು ಉಂಟಾಯಿತು.
ದಿಲ್ಲಿ ಪೊಲೀಸರು ಬಂಧಿಸಿದ್ದ ಶಂಕಿತರನ್ನು ಗುರುವಾರ ಬೆಳಿಗ್ಗೆ ಶಿಮ್ಲಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ದಿಲ್ಲಿ ಪೊಲೀಸರಿಗೆ ಟ್ರಾನ್ಸಿಟ್ ರಿಮಾಂಡ್ ಮಂಜೂರು ಮಾಡಿತು. ದಿಲ್ಲಿ ಪೊಲೀಸ್ ತಂಡವು ರಾಜಧಾನಿಗೆ ಹಿಂತಿರುಗಿದ್ದು, ಶಂಕಿತರನ್ನು ದಿಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
►ಏನಿದು ವಿಚಾರ? ಹಿಮಾಚಲದಲ್ಲಿ ಏನೇನಾಯಿತು?
ಫೆಬ್ರವರಿ 20ರಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ (IYC) ಆಯೋಜಿಸಿದ್ದ ‘ಶರ್ಟ್ಲೆಸ್’ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಲು ಸಹಾಯಕ ಪೊಲೀಸ್ ಆಯುಕ್ತ (ACP) ನೇತೃತ್ವದ ದಿಲ್ಲಿ ಪೊಲೀಸರ 15 ಸದಸ್ಯರ ತಂಡ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳೆಸಿತ್ತು. ದಿಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಎಂಟು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದೆ.
ದಿಲ್ಲಿ ಪೊಲೀಸ್ ತಂಡ ಬುಧವಾರ ಬೆಳಿಗ್ಗೆ ಶಿಮ್ಲಾದ ರೆಸಾರ್ಟ್ಗೆ ತಲುಪಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿತು. ಅವರು ರೆಸಾರ್ಟ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಡಿಜಿಟಲ್ ವಿಡಿಯೋ ರೆಕಾರ್ಡರ್ಗಳನ್ನು (DVR) ವಶಪಡಿಸಿಕೊಂಡರು. ಮೂವರು ವ್ಯಕ್ತಿಗಳು ಪ್ರಯಾಣಿಸುತ್ತಿದ್ದರು ಎನ್ನಲಾದ ಮಹೀಂದ್ರಾ ಥಾರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡರು. ಸುಮಾರು ಎರಡು ಗಂಟೆಗಳಲ್ಲಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ಬಳಿಕ, ದಿಲ್ಲಿ ಪೊಲೀಸ್ ತಂಡವು ಮೂರು ವಾಹನಗಳ ಬೆಂಗಾವಲಿನೊಂದಿಗೆ ರೆಸಾರ್ಟ್ನಿಂದ ದಿಲ್ಲಿಗೆ ಪ್ರಯಾಣ ಆರಂಭಿಸಿತು.
ಆ ವೇಳೆ ಶಿಮ್ಲಾ ಪೊಲೀಸರು ಸೋಲನ್ ಬಳಿ ಪೊಲೀಸ್ ತಂಡವನ್ನು ತಡೆದು, ಬೇರೆ ರಾಜ್ಯದಿಂದ ಬಂದ ಅಧಿಕಾರಿಗಳು ಬಂಧನ ನಡೆಸಲು ಕಾನೂನು ವಿಧಾನವನ್ನು ಅನುಸರಿಸಬೇಕೆಂದು ಹೇಳಿದರು. “ಬಂಧನ ವಾರಂಟ್ ತೋರಿಸಿ. ಕಾರ್ಯಾಚರಣೆ ನಡೆಸುವ ಮೊದಲು ಸ್ಥಳೀಯ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ? ಟ್ರಾನ್ಸಿಟ್ ರಿಮಾಂಡ್ ಪಡೆಯಲು ಶಂಕಿತರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಯಾಕೆ ಹಾಜರುಪಡಿಸಲಿಲ್ಲ?” ಎಂದು ಶಿಮ್ಲಾ ಪೊಲೀಸರು ದಿಲ್ಲಿ ಪೊಲೀಸರನ್ನು ಪ್ರಶ್ನಿಸಿದರು.
ದಿಲ್ಲಿ ಪೊಲೀಸರು ತಮ್ಮ ಪ್ರತಿವಾದದಲ್ಲಿ, ಆರೋಪಿಗಳನ್ನು ನೇರವಾಗಿ ದಿಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಕಷ್ಟು ಕಾನೂನು ಆಧಾರಗಳಿವೆ ಎಂದು ವಾದಿಸಿದರು. “ಆರೋಪಿಗಳನ್ನು ಟ್ರಾನ್ಸಿಟ್ ರಿಮಾಂಡ್ಗಾಗಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಪ್ರಯತ್ನಿಸಿದ್ದೇವೆ; ಆದರೆ ನ್ಯಾಯಾಧೀಶರು ಅಲ್ಲಿಲ್ಲ ಎಂದು ತಿಳಿಸಲಾಯಿತು,” ಎಂದು ದಿಲ್ಲಿ ಪೊಲೀಸ್ ತಂಡವು ಹಿಮಾಚಲ ಪ್ರದೇಶ ಪೊಲೀಸರಿಗೆ ತಿಳಿಸಿತು.
ಇಲ್ಲಿ ಎರಡೂ ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಬಿಕ್ಕಟ್ಟು ಉಂಟಾಯಿತು. ಅದು ತಡರಾತ್ರಿಯವರೆಗೂ ಮುಂದುವರಿಯಿತು. ಕೊನೆಗೆ ದಿಲ್ಲಿ ಪೊಲೀಸ್ ಅಧಿಕಾರಿಗಳನ್ನು ಶೋಘಿ ಪೊಲೀಸ್ ಠಾಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು.
ಶಂಕಿತರನ್ನು ಕರೆದೊಯ್ಯಲಾದ ರೆಸಾರ್ಟ್ನ ಮಾಲೀಕರು ಸಲ್ಲಿಸಿದ ದೂರಿನ ಆಧಾರದ ಮೇಲೆ, ಚಿರ್ಗಾಂವ್ ಪೊಲೀಸ್ ಠಾಣೆಯಲ್ಲಿ ಅಪಹರಣ, ಮನೆ ಅತಿಕ್ರಮಣ ಮತ್ತು ಅಕ್ರಮ ಬಂಧನ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿಮಾಚಲ ಪ್ರದೇಶ ಪೊಲೀಸರು ದಿಲ್ಲಿ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದರು. ದಿಲ್ಲಿ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿ, ಅವರ ಗುರುತಿನ ವಿವರಗಳನ್ನು ಪರಿಶೀಲಿಸಲಾಯಿತು.
ಗುರುವಾರ ಬೆಳಿಗ್ಗೆ, ದಿಲ್ಲಿ ಪೊಲೀಸರಿಗೆ ಶಿಮ್ಲಾದ ಸ್ಥಳೀಯ ನ್ಯಾಯಾಲಯದ ಮುಂದೆ ಆರೋಪಿಗಳಾದ ಸೌರವ್, ಅರ್ಬಾಜ್ ಮತ್ತು ಸಿದ್ಧಾರ್ಥ್ ಅವರನ್ನು ಹಾಜರುಪಡಿಸಲು ಅವಕಾಶ ನೀಡಲಾಯಿತು. ಅಲ್ಲಿ 18 ಗಂಟೆಗಳ ಟ್ರಾನ್ಸಿಟ್ ರಿಮಾಂಡ್ ಪಡೆದ ಬಳಿಕ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೊಲೀಸ್ ತಂಡವು ಆರೋಪಿಗಳೊಂದಿಗೆ ದಿಲ್ಲಿಗೆ ಹಿಂತಿರುಗಿತು.
►ಸರಿಯಾದ ಕಾನೂನು ವಿಧಾನ ಯಾವುದು?
ಕಾನೂನು ಕಾರ್ಯವಿಧಾನ ಮತ್ತು ಶಿಷ್ಟಾಚಾರದ ಪ್ರಕಾರ, ಒಂದು ರಾಜ್ಯದ ಪೊಲೀಸ್ ಪಡೆ ಬೇರೆ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿದರೆ, ದಾಳಿ ನಡೆಸುವ ಮೊದಲು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಹಿಮಾಚಲದಲ್ಲಿ ಕಾರ್ಯಾಚರಣೆ ನಡೆಸುವ ಮೊದಲು ದಿಲ್ಲಿ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.
ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಪ್ರಕಾರ, ವಿಶೇಷವಾಗಿ ಕಾರ್ಯಾಚರಣೆಯ ಸಮಯದಲ್ಲಿ ಅಶಾಂತಿ ಅಥವಾ ಆಕ್ಷೇಪಣೆಗಳ ಸಾಧ್ಯತೆಯಿದ್ದರೆ, ಪೊಲೀಸ್ ತಂಡವು ಸಂಬಂಧಿತ ರಾಜ್ಯದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ಥಳೀಯ ಪೊಲೀಸರು ಭೇಟಿ ನೀಡುವ ತಂಡಕ್ಕೆ ಸಹಾಯ ಮಾಡುವ ನಿರೀಕ್ಷೆ ಇರುತ್ತದೆ. ಅಲ್ಲದೆ, ದಾಳಿ ವೇಳೆ ವಶಪಡಿಸಿಕೊಂಡ ವಸ್ತುಗಳ ವಿವರಗಳನ್ನು ಅಧಿಕೃತ ದಾಖಲೆಯ ಮೂಲಕ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ವಶಪಡಿಸಿಕೊಳ್ಳುವ ಜ್ಞಾಪಕ ಪತ್ರದ ಮೂಲಕ ಈ ಮಾಹಿತಿಯನ್ನು ದಾಖಲಿಸಲಾಗುತ್ತದೆ.
ಆದಾಗ್ಯೂ, ಕಾರ್ಯಾಚರಣೆ ಸೂಕ್ಷ್ಮ ಅಥವಾ ರಹಸ್ಯವಾಗಿದ್ದರೆ, ದಾಳಿ ತಂಡವು ಕ್ರಮದ ನಂತರ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬಹುದು. ನಂತರ ಆರೋಪಿಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್ ರಿಮಾಂಡ್ ಪಡೆಯಬಹುದು ಎಂದು ನಿವೃತ್ತ ದಿಲ್ಲಿ ಪೊಲೀಸ್ ಎಸಿಪಿ ವೇದ್ ಭೂಷಣ್ ತಿಳಿಸಿದ್ದಾರೆ.
ಟ್ರಾನ್ಸಿಟ್ ರಿಮಾಂಡ್ ಎಂದರೆ, ಪ್ರಕರಣ ದಾಖಲಾಗಿರುವ ಬೇರೆ ರಾಜ್ಯಕ್ಕೆ ಆರೋಪಿಯನ್ನು ನಿರ್ದಿಷ್ಟ ಅವಧಿಯೊಳಗೆ ಕರೆದೊಯ್ಯಲು ಸ್ಥಳೀಯ ನ್ಯಾಯಾಲಯ ನೀಡುವ ಅನುಮತಿ.
ಆದಾಗ್ಯೂ, ಆರೋಪಿಯನ್ನು 24 ಗಂಟೆಗಳ ಒಳಗೆ ಸಂಬಂಧಿತ ರಾಜ್ಯಕ್ಕೆ ಕರೆದೊಯ್ಯಲು ಸಾಧ್ಯವಾದರೆ, ಟ್ರಾನ್ಸಿಟ್ ರಿಮಾಂಡ್ ಪಡೆಯುವುದು ಕಡ್ಡಾಯವಲ್ಲ. ಈ ಪ್ರಕರಣದಲ್ಲಿ, ಆರೋಪಿಯನ್ನು ಶಿಮ್ಲಾದಿಂದ ರಸ್ತೆ ಮೂಲಕ ಕರೆದೊಯ್ಯಲು ಕೇವಲ ಏಳು ಗಂಟೆಗಳು ಸಾಕಾಗುತ್ತಿತ್ತು. ಆದ್ದರಿಂದ ಟ್ರಾನ್ಸಿಟ್ ರಿಮಾಂಡ್ ಕಡ್ಡಾಯವಲ್ಲ ಎನ್ನಲಾಗಿದೆ ಎಂದು ಭೂಷಣ್ ಹೇಳಿದ್ದಾರೆ.
ಹಲವಾರು ಗಂಟೆಗಳ ಕಾಲ ಬಂಧನಕ್ಕೊಳಗಾದ ನಂತರ, ದಿಲ್ಲಿ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳ ವಿವರಗಳನ್ನು ನೀಡುವಂತೆ ಶಿಮ್ಲಾ ಪೊಲೀಸರು ಕೇಳಿದರು. ದಿಲ್ಲಿ ಪೊಲೀಸರ ಹೇಳಿಕೆಗಳನ್ನು ದಾಖಲಿಸಿದ ಬಳಿಕ, ಅವರನ್ನು ದಿಲ್ಲಿಗೆ ಹಿಂತಿರುಗಲು ಅನುಮತಿಸಲಾಯಿತು.
►ಮುಂದಿನ ಪ್ರಕ್ರಿಯೆ
►ಕಾನೂನು ಪ್ರಕ್ರಿಯೆ ಈ ಕೆಳಗಿನಂತಿರಬಹುದು:
ದಿಲ್ಲಿ ಪೊಲೀಸರು ಮೂವರು ಶಂಕಿತರನ್ನು ದಿಲ್ಲಿಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬಹುದು. ಅವರು ಶಂಕಿತರ ಕಸ್ಟಡಿಗೆ ಕೋರಬಹುದು. ಕಸ್ಟಡಿಗೆ ಕೋರದಿದ್ದರೆ, ಮೂವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತದೆ.
ಇನ್ನೊಂದೆಡೆ, ದಿಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಮ್ಲಾದಲ್ಲಿ FIR ದಾಖಲಾಗಿರುವುದರಿಂದ, ಶಿಮ್ಲಾ ಪೊಲೀಸರ ತಂಡವು ಸಂಬಂಧಿತ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲು ಅಥವಾ ವಿಚಾರಣೆಗಾಗಿ ದಿಲ್ಲಿಗೆ ಬರಬಹುದು. ಅವರು ದಿಲ್ಲಿ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆಯಬೇಕಾಗುತ್ತದೆ. ನಂತರ ಸಂಬಂಧಿತ ಪೊಲೀಸ್ ಸಿಬ್ಬಂದಿಯನ್ನು ಹಿಮಾಚಲ ಪ್ರದೇಶಕ್ಕೆ ಕರೆದೊಯ್ಯಿಸಿ ಶಿಮ್ಲಾದ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು.






