ಐಸ್ ಕ್ರೀಮ್ ಪಾರ್ಲರ್ ಹೆಸರಲ್ಲಿ ಡ್ರಗ್ಸ್ ವ್ಯಾಪಾರ ನಡೆಸುತ್ತಿದ್ದ ಹಿಂದುತ್ವವಾದಿ ನಾಯಕ ವಿಕಾಸ್ ಅಹೀರ್

PC : X \ @zoo_bear
ಹಿಂದುತ್ವವಾದಿ ನಾಯಕ ಮತ್ತು ಗುಜರಾತ್ ಗೃಹ ರಾಜ್ಯ ಮಂತ್ರಿ ಹರ್ಷ್ ಸಂಘವಿ ಆಪ್ತ ಎನ್ನಲಾದ ವಿಕಾಸ್ ಅಹೀರ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ. ಐಸ್ ಕ್ರೀಮ್ ಪಾರ್ಲರ್ ಹೆಸರಲ್ಲಿ ಡ್ರಗ್ಸ್ ವ್ಯಾಪಾರ ನಡೆಸುತ್ತಿದ್ದ ಗಂಭೀರ ಆರೋಪ ಇವನ ಮೇಲಿದೆ.
ನಿರ್ದಿಷ್ಟ ಸುಳಿವು ಆಧರಿಸಿ, ಸೂರತ್ ಪೊಲೀಸರು ಸೋಮವಾರ ನಗರದ ಸಲಾಬತ್ಪುರ ಪ್ರದೇಶದ ಹೋಟೆಲ್ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿ ಅವರಿಂದ 35.49 ಲಕ್ಷ ರೂಪಾಯಿ ಮೌಲ್ಯದ 910 ಗ್ರಾಂ ಮೆಫೆಡ್ರೋನ್ ಡ್ರಗ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ತಿಳಿಸಿದ್ದಾರೆ.
ಈ ಮೂವರು ಬಂಧಿತರಲ್ಲಿ ಒಬ್ಬ ವಿಕಾಸ್ ಅಹಿರ್. ಬಂಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಇವನ ಹಲವು ಹಳೆ ಫೋಟೋಗಳು ಮತ್ತು ಟ್ವೀಟ್ಗಳು ವೈರಲ್ ಆಗಿವೆ. ಬಂಧಿತ ಆರೋಪಿ ವಿಕಾಸ್ ಅಹಿರ್ ರಾಜ್ಯದ ಗೃಹ ರಾಜ್ಯ ಸಚಿವ ಹರ್ಷ್ ಸಂಘವಿ , ರಾಜ್ಯ ಬಿಜೆಪಿ ಮುಖ್ಯಸ್ಥ ಸಿ ಆರ್ ಪಾಟೀಲ್ ಸೇರಿದಂತೆ ಆಡಳಿತ ಪಕ್ಷದ ಹಲವು ಪ್ರಮುಖ ನಾಯಕರಿಗೆ ನಿಕಟವರ್ತಿ ಎಂದು ಆರೋಪಿಸಿ ಗುಜರಾತ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಏರ್ಪಟ್ಟಿದೆ.
ಕಾಂಗ್ರೆಸ್ ನಾಯಕರು ಆತ ಬಿಜೆಪಿ ನಾಯಕರ ಜೊತೆ ಇರುವ ಹಲವು ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಗೃಹ ಮಂತ್ರಿ ಸಂಘವಿ ಅವರಿಗೆ ಜನ್ಮ ದಿನದಂದು ಇವನು ಶುಭಾಶಯ ಸಲ್ಲಿಸಿದ್ದು ಅದಕ್ಕೆ ಧನ್ಯವಾದ ಸಹೋದರ ಎಂದು ಸಂಘವಿ ಉತ್ತರ ನೀಡಿರುವ ಟ್ವೀಟ್ ಕೂಡ ವೈರಲ್ ಆಗಿದೆ.
ಇನ್ನು ತಮಾಷೆ ಅಂದರೆ, ಈಗ ಡ್ರಗ್ಸ್ ವಹಿವಾಟು ಮಾಡಿ ಸಿಕ್ಕಿ ಬಿದ್ದಿರುವ ಈ ವಿಕಾಸ್ ಅಹೀರ್ ಡ್ರಗ್ಸ್ ವಿರುದ್ಧ ಮಾತನಾಡುವ ಹಲವು ಟ್ವೀಟ್ಗಳು ವೈರಲ್ ಆಗಿವೆ. 2022 ರಲ್ಲಿ "ಯೋಗೀಜಿ ಅಂದರೆ ಡ್ರಗ್ ಮಾಫಿಯಗಳ ಕೆಟ್ಟ ಕಾಲ" ಅಂತ ಇವನು ಬರೆದ ಟ್ವೀಟ್ ಈಗ ತುಂಬಾ ವೈರಲ್ ಆಗಿದೆ.
ಇನ್ನಿಬ್ಬರು ಬಂಧಿತ ಆರೋಪಿಗಳನ್ನು ರಾಜಸ್ಥಾನದ ಉದಯಪುರ ನಿವಾಸಿ ಚೇತನ್ ಶಾಹು ಮತ್ತು ಸೂರತ್ನ ಅನಿಷ್ ಖಾನ್ ಪಠಾಣ್ ಎಂದು ಗುರುತಿಸಲಾಗಿದೆ. ಮಾದಕ ವಸ್ತುಗಳನ್ನು ಪಾನ್ ಮತ್ತು ಐಸ್ಕ್ರೀಂ ಪಾರ್ಲರ್ಗಳ ಮೂಲಕ ಮಾರಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸೂರತ್ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.ವಿಕಾಸ್ ಅಹಿರ್ ಗೆ ರೌಡಿ ಶೀಟರ್ ಹಿನ್ನೆಲೆಯಿದೆ ಎಂದು ತಿಳಿದುಬಂದಿದೆ.
ಆತ ತನ್ನ ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಡಲು ರಾಜಕೀಯ ಪಕ್ಷ ಅಥವಾ ಪ್ರಭಾವಿ ವ್ಯಕ್ತಿಗಳೊಂದಿಗೆ ನಿಕಟವಾಗಿದ್ದ ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ. ಅಹಿರ್ ಮೇಲೆ ಈಗಾಗಲೇ ಅಪಹರಣ, ಗಲಭೆ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಆರು ಎಫ್ಐಆರ್ಗಳಿವೆ ಎಂದು ಸೂರತ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಹಿರ್ ಬಂಧನದ ನಂತರ, ಸೂರತ್ನ ಅಸ್ಲಂ ಸೈಕಲ್ವಾಲಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಂಘವಿ, ಪಾಟೀಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರೊಂದಿಗೆ ಅಹಿರ್ ಇರುವ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಹಿರ್ ಬಹಳ ಹಿಂದಿನಿಂದಲೂ ಆದಿತ್ಯನಾಥ್ ರ ಹಿಂದೂ ಯುವ ವಾಹಿನಿಯ ಗುಜರಾತ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ. ಅಹಿರ್ ಬಿಜೆಪಿಯ ಸದಸ್ಯ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ, ಗುಜರಾತ್ ಕಾಂಗ್ರೆಸ್ ಆರೋಪಿಸಿದೆ.
ಗಾಂಧಿನಗರದಲ್ಲಿರುವ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಾದ 'ಕಮಲಂ'ನಲ್ಲಿ ಕುಳಿತಿರುವ ಬಿಜೆಪಿಯ ಹಿರಿಯ ನಾಯಕರಿಗೆ ಅವರು ಕಮಿಷನ್ ನೀಡುತ್ತಿದ್ದರೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಬಿಜೆಪಿಯ ಮಾಧ್ಯಮ ಸಂಯೋಜಕ ಯಜ್ಞೇಶ್ ದವೆ ಅವರು ಅಹಿರ್ ಬಂಧನವು ಬಿಜೆಪಿ ಸರ್ಕಾರ ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.
"ಒಬ್ಬ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾದರೆ ಆತ ಅಪರಾಧಿಯೇ. ಆತನಿಗೆ ರಾಜಕೀಯ ನಂಟಿದ್ದರೂ, ನಾವು ರಕ್ಷಿಸಲು ಪ್ರಯತ್ನಿಸಲಿಲ್ಲ. ಈ ರೀತಿಯ ನಡೆಯಿಂದಾಗಿ ಕಳೆದ ಐದು ವರ್ಷಗಳಲ್ಲಿ ಗುಜರಾತ್ನಲ್ಲಿ ಸುಮಾರು 3,500 ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
You'll hardly see this News being reported by Mainstream News Channels. You know the reason https://t.co/w2IdoPQjYt
— Mohammed Zubair (@zoo_bear) July 22, 2024
"ಈ ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ, ನಾವು ಎಲ್ಲರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ. ಒಬ್ಬ ವ್ಯಕ್ತಿ ಅಪರಾಧದಲ್ಲಿ ಭಾಗಿಯಾಗಿದ್ದರೆ, ಕ್ರಮ ತೆಗೆದುಕೊಳ್ಳುವ ಮೊದಲು ನಾವು ಅವರ ರಾಜಕೀಯ ಸಂಬಂಧವನ್ನು ನೋಡುವುದಿಲ್ಲ ಎಂಬುದನ್ನು ಈ ಪ್ರಕರಣವು ಸಾಬೀತುಪಡಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಗುಜರಾತ್ ಗೃಹ ಮಂತ್ರಿ ಕೂಡ ಪ್ರತಿಕ್ರಿಯಿಸಿದ್ದು ಆರೋಪಿ ಯಾರೇ ಆಗಿದ್ದರೂ ನಾವು ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.