9,000 ಡ್ರ್ಯಾಗನ್ ಹಣ್ಣಿನ ಸಸಿ ನೆಟ್ಟ ಕುಟುಂಬ; ಇಂದು 2 ಕೋಟಿ ರೂ. ವಾರ್ಷಿಕ ಆದಾಯ!

Photo Credit : Facebook
ಸೊಲ್ಲಾಪುರದ ರುಕ್ಮಿಣಿ ಫಾರ್ಮ್ಸ್ ಆಂಡ್ ನರ್ಸರಿಯ ಸಂಸ್ಥಾಪಕ ಮಹೇಶ್ ಅಸಬೆ, ಡ್ರ್ಯಾಗನ್ ಹಣ್ಣಿನ ಕೃಷಿಯ ಮೂಲಕ ಪ್ರತಿ ವರ್ಷ 2 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ!
ಪಿಟಾಯ ಅಥವಾ ಸ್ಟ್ರಾಬೆರಿ ಪಿಯರ್ ಎಂದೂ ಕರೆಯಲಾಗುವ ಡ್ರ್ಯಾಗನ್ ಹಣ್ಣು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನಪ್ರಿಯವಾಗಿದೆ. ಈ ಹಣ್ಣಿನಲ್ಲಿ ಹಲವು ಆರೋಗ್ಯ ಮತ್ತು ಔಷಧೀಯ ಪ್ರಯೋಜನಗಳಿದ್ದು, ಹಾಳಾದ ಅಥವಾ ಕಳಪೆ ಗುಣಮಟ್ಟದ ಭೂಮಿಯಲ್ಲೂ ಸುಲಭವಾಗಿ ಬೆಳೆಯಬಹುದು. ಮಹಾರಾಷ್ಟ್ರದ ರೈತರೊಬ್ಬರು ಈ ಹಣ್ಣಿನ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಿದ್ದಾರೆ.
ಸೊಲ್ಲಾಪುರದ ರುಕ್ಮಿಣಿ ಫಾರ್ಮ್ಸ್ ಆಂಡ್ ನರ್ಸರಿಯ ಸಂಸ್ಥಾಪಕ ಮಹೇಶ್ ಅಸಬೆ, ಡ್ರ್ಯಾಗನ್ ಹಣ್ಣಿನ ಕೃಷಿಯ ಮೂಲಕ ಪ್ರತಿ ವರ್ಷ 2 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ ಎಂದು ಸ್ಟಾರ್ಟಪ್ ಪೀಡಿಯಾ ವರದಿ ಮಾಡಿದೆ.
ಮಹೇಶ್ ಅವರು ಸೊಲ್ಲಾಪುರದ ಅಕೋಲಾ ಗ್ರಾಮದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರು ಕೃಷಿ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಬಳಿಕ ಅದೇ ವಿಷಯದಲ್ಲಿ ಹಾಗೂ ಆಹಾರ ಸಂಸ್ಕರಣೆ ವಿಭಾಗದಲ್ಲಿ ಎಂ.ಟೆಕ್ ಪದವಿಯನ್ನೂ ಪಡೆದಿದ್ದಾರೆ.
ಇಂದು ಅವರ ಉದ್ಯಮವು ಮೂರು ಎಕರೆ ಜಮೀನಿನಿಂದ 60 ಎಕರೆ ವಿಸ್ತೀರ್ಣಕ್ಕೆ ಬೆಳೆದಿದೆ. ಇಲ್ಲಿ ಡ್ರ್ಯಾಗನ್ ಹಣ್ಣಿನ ವಿವಿಧ ತಳಿಗಳು ಮತ್ತು ಇತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಹಿಂದೆ ಅವರ ಕುಟುಂಬವು ಜೋಳದಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿತ್ತು. 2013-14ರಲ್ಲಿ ಮಹೇಶ್ ಅವರ ತಂದೆ ಡ್ರ್ಯಾಗನ್ ಹಣ್ಣಿನ ಬಗ್ಗೆ ಓದಿದ ಬಳಿಕ ಅದನ್ನು ಬೆಳೆಯಲು ನಿರ್ಧರಿಸಿದರು. ಈ ಬೆಳೆಗೆ ಕಡಿಮೆ ನೀರು ಸಾಕಾಗುತ್ತದೆ ಮತ್ತು ಒಣ ಪ್ರದೇಶಗಳಲ್ಲೂ ಬೆಳೆಯಬಹುದು ಎಂಬುದನ್ನು ಅವರು ತಿಳಿದುಕೊಂಡಿದ್ದರು.
ಡ್ರ್ಯಾಗನ್ ಹಣ್ಣಿನ ಕೃಷಿ ಆರಂಭಿಸುವ ಪ್ರಯತ್ನವಾಗಿ ಅವರ ಕುಟುಂಬ ಬಾಂಗ್ಲಾದೇಶದಿಂದ ಸುಮಾರು 9,000 ಸಸಿಗಳನ್ನು ತರಿಸಿಕೊಂಡಿತು. ಈ ಸಸಿಗಳಿಗಾಗಿ ಆರಂಭದಲ್ಲಿ 9.9 ಲಕ್ಷ ರೂ. ಹೂಡಿಕೆ ಮಾಡಲಾಗಿತ್ತು. ರಾಜ್ಯದಲ್ಲಿ ಡ್ರ್ಯಾಗನ್ ಹಣ್ಣು ಬೆಳೆದ ಮೊದಲ ರೈತರಲ್ಲಿ ಇವರ ಕುಟುಂಬವೂ ಒಂದಾಗಿತ್ತು.
2015-16ರಲ್ಲಿ ಅವರ ಕುಟುಂಬ ಮೊದಲ ಬಾರಿಗೆ ಡ್ರ್ಯಾಗನ್ ಹಣ್ಣಿನ ಫಸಲು ಪಡೆಯಿತು. ಮೂರು ಎಕರೆ ಜಮೀನಿನಲ್ಲಿ ಪ್ರತಿ ಎಕರೆಗೆ ಸುಮಾರು ಐದು ಟನ್ ಇಳುವರಿ ದೊರೆಯಿತು. ಈ ಫಸಲನ್ನು ಮಾರಾಟ ಮಾಡಿ 5 ಲಕ್ಷ ರೂ. ಆದಾಯ ಗಳಿಸಿದರು. ಅಂದರೆ, ಪ್ರತಿ ಕೆ.ಜಿ.ಗೆ 33 ರೂ. ಬೆಲೆ ಸಿಕ್ಕಿತ್ತು. 2017ರ ವೇಳೆಗೆ ಅವರ ಕುಟುಂಬ ಡ್ರ್ಯಾಗನ್ ಹಣ್ಣನ್ನು ಪ್ರತಿ ಕೆ.ಜಿ.ಗೆ 150ರಿಂದ 250 ರೂ.ಗೆ ಮಾರಾಟ ಮಾಡುತ್ತಿತ್ತು.
ಇದೇ ಅವಧಿಯಲ್ಲಿ ಮಹೇಶ್ ಅವರು ತಮ್ಮ ಅಧ್ಯಯನದ ಭಾಗವಾಗಿ 45 ದಿನಗಳ ತರಬೇತಿ ಕಾರ್ಯಕ್ರಮಕ್ಕಾಗಿ ಇಸ್ರೇಲ್ ಗೆ ಭೇಟಿ ನೀಡಿದರು. ಅಲ್ಲಿ ನೀರಿನ ನಿರ್ವಹಣೆ, ಆಧುನಿಕ ಕೃಷಿ ಪದ್ಧತಿಗಳು ಹಾಗೂ ಬೆಳೆ ಉತ್ಪಾದನೆ ಹೆಚ್ಚಿಸಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಕಲಿತುಕೊಂಡರು. ಡ್ರ್ಯಾಗನ್ ಹಣ್ಣಿನ ಕೃಷಿ ಪದ್ಧತಿಗಳನ್ನು ಅಧ್ಯಯನ ಮಾಡಲು 2018ರಲ್ಲಿ ವಿಯೆಟ್ನಾಂಗೆ ಭೇಟಿ ನೀಡಿದರು. ತಾವು ಕಲಿತ ವಿಷಯಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ತಮ್ಮ ಜಮೀನಿನಲ್ಲಿ ತಲಾ ಒಂದು ಎಕರೆ ವಿಸ್ತೀರ್ಣದ ಪ್ರದರ್ಶನ ಪ್ಲಾಟ್ ಗಳನ್ನು ಸಿದ್ಧಪಡಿಸಿ, ವಿವಿಧ ಕೃಷಿ ತಂತ್ರಗಳನ್ನು ಪ್ರದರ್ಶಿಸಿದರು.
ನೀರಿನ ನಿರ್ವಹಣಾ ಸೌಲಭ್ಯಗಳನ್ನು ಸುಧಾರಿಸಲು ಮಹೇಶ್ ಅವರು ಹನಿ ನೀರಾವರಿ ವ್ಯವಸ್ಥೆ ಮತ್ತು ಕೊಳದ ತೋಟಗಳನ್ನು ಸ್ಥಾಪಿಸಿದರು. ಕಳೆ ತೆಗೆಯುವಂತಹ ದೈನಂದಿನ ಕೃಷಿ ಚಟುವಟಿಕೆಗಳನ್ನೂ ಯಾಂತ್ರಿಕಗೊಳಿಸಿದರು.
ಇಂದು ರುಕ್ಮಿಣಿ ಫಾರ್ಮ್ಸ್ ಅನ್ನು ಮಹೇಶ್ ನಿರ್ವಹಿಸುತ್ತಿದ್ದಾರೆ. 60 ಎಕರೆ ಭೂಮಿಯಲ್ಲಿ ಹರಡಿರುವ ಈ ತೋಟದಲ್ಲಿ ಡ್ರ್ಯಾಗನ್ ಹಣ್ಣಿನ ಜತೆಗೆ ದಾಳಿಂಬೆ, ಸೀತಾಫಲ ಮತ್ತು ಸೀಬೆಯನ್ನೂ ಬೆಳೆಯಲಾಗುತ್ತದೆ. ಡ್ರ್ಯಾಗನ್ ಹಣ್ಣಿನ ಕೃಷಿಯಿಂದ ಅವರು ವಾರ್ಷಿಕವಾಗಿ ಸುಮಾರು 1.25 ಕೋಟಿ ರೂ. ಆದಾಯ ಗಳಿಸುತ್ತಾರೆ. ಇಲ್ಲಿ ವಾರ್ಷಿಕ ಸುಮಾರು 200 ಟನ್ ಹಣ್ಣು ಉತ್ಪಾದನೆಯಾಗುತ್ತದೆ. ಇತರ ಹಣ್ಣುಗಳ ಆದಾಯವನ್ನೂ ಪರಿಗಣಿಸಿದರೆ ಅವರ ಒಟ್ಟು ವಹಿವಾಟು 2 ಕೋಟಿ ರೂ. ಮೀರುತ್ತದೆ.






