ಕರ್ನಾಟಕದಲ್ಲಿ ಸಿಎಂ ಬದಲಾವಣೆಯ ಇತಿಹಾಸ; ಚುನಾವಣೆಗಳ ಮೇಲೆ ಅದರ ಪ್ರಭಾವದ ಕುರಿತು ಇಲ್ಲಿದೆ ಮಾಹಿತಿ...

Photo credit : X@INCKarnataka
ಕರ್ನಾಟಕ ರಾಜಕಾರಣದ ನಾಯಕತ್ವದ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಗುರುವಾರ (ಮೇ 28) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಗದ್ದುಗೆಗೇರಲು ಹಾದಿ ಸುಗಮವಾಗಿದೆ.
ಕಳೆದ ಹಲವು ತಿಂಗಳುಗಳಿಂದ ಕಾಂಗ್ರೆಸ್ ಹೈಕಮಾಂಡ್ ಮುಂದೂಡುತ್ತಾ ಬಂದಿದ್ದ ನಾಯಕತ್ವ ಬದಲಾವಣೆಯ ಕಠಿಣ ನಿರ್ಧಾರಕ್ಕೆ ಕೊನೆಗೂ ಅಂತಿಮ ಮುದ್ರೆ ಬಿದ್ದಿದೆ.
78 ವರ್ಷದ ಸಿದ್ದರಾಮಯ್ಯ ಅವರು ಹಲವಾರು ಕಾಂಗ್ರೆಸ್ ಶಾಸಕರ ಬೆಂಬಲವನ್ನು ಹೊಂದಿದ್ದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷದ ಏಕೈಕ ಒಬಿಸಿ ಮುಖ್ಯಮಂತ್ರಿಯಾಗಿದ್ದ ಅವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರನ್ನು ಒಳಗೊಂಡ ‘ಅಹಿಂದ’ ಸಾಮಾಜಿಕ ಒಕ್ಕೂಟವನ್ನು ಮುನ್ನಡೆಸಿದ್ದರು.
ಇಷ್ಟಿದ್ದರೂ, ಪಕ್ಷವು ಅತ್ಯಂತ ನಿರ್ಣಾಯಕ ಹಂತದಲ್ಲಿ ನಾಯಕತ್ವ ಬದಲಾವಣೆಗೆ ಕೈಹಾಕಿದೆ. 2028ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ವೇಳೆಗೆ ಸಿದ್ದರಾಮಯ್ಯ ಅವರಿಗೆ 80 ವರ್ಷ ದಾಟಿರುತ್ತದೆ. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ ಸಿದ್ದರಾಮಯ್ಯ ಅವರಿಗಿಂತ ವಯಸ್ಸಿನಲ್ಲಿ ಸಾಕಷ್ಟು ಕಿರಿಯರಾಗಿದ್ದಾರೆ. ಇದರೊಂದಿಗೆ, ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳು ಮತ್ತು ಬೃಹತ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆಗಳೂ ಹೊಸ್ತಿಲಲ್ಲಿವೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅವಧಿಪೂರ್ವ ನಾಯಕತ್ವ ಬದಲಾವಣೆಗಳು ಹೊಸದೇನಲ್ಲ. 1956ರಲ್ಲಿ ಕರ್ನಾಟಕ ಏಕೀಕರಣಗೊಂಡ ನಂತರ, ಕೇವಲ ಮೂವರು ಮುಖ್ಯಮಂತ್ರಿಗಳು ಮಾತ್ರ ತಮ್ಮ ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಲು ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ ಈ ಮೂವರೂ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ.
ಎಸ್. ನಿಜಲಿಂಗಪ್ಪ (1962–68, ಆಗಿನ ಮೈಸೂರು ರಾಜ್ಯ)
ಡಿ. ದೇವರಾಜ ಅರಸು (1972–77)
ಸಿದ್ದರಾಮಯ್ಯ (2013–18)
ಸರ್ಕಾರಗಳ ವಜಾ ಅಥವಾ ಬಹುಮತದ ಕೊರತೆಯಂತಹ ಹಲವು ಕಾರಣಗಳಿಂದ ಈ ಹಿಂದೆ ಮಧ್ಯಂತರ ಬದಲಾವಣೆಗಳಾಗಿದ್ದರೂ, ಹಲವು ಬಾರಿ ರಾಜಕೀಯ ಪಕ್ಷಗಳೇ ಸ್ವಯಂಪ್ರೇರಿತವಾಗಿ ತಮ್ಮ ನಾಯಕರನ್ನು ಬದಲಾಯಿಸಿದ ಉದಾಹರಣೆಗಳಿವೆ. ಆದರೆ, ಇಂತಹ ನಿರ್ಧಾರಗಳ ನಂತರ ನಡೆದ ಚುನಾವಣೆಗಳಲ್ಲಿ ಆಯಾ ಪಕ್ಷಗಳಿಗೆ ಹಿನ್ನಡೆಯಾದ ಉದಾಹರಣೆಗಳೇ ಹೆಚ್ಚಿವೆ.
ಪಕ್ಷಗಳು ಸ್ವಯಂಪ್ರೇರಿತವಾಗಿ ಮಧ್ಯಂತರ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಇತ್ತೀಚಿನ ಕೆಲವು ಪ್ರಮುಖ ಉದಾಹರಣೆಗಳು ಮತ್ತು ಅದರ ಬೆನ್ನಲ್ಲೇ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಎದುರಾದ ಫಲಿತಾಂಶಗಳ ಚಿತ್ರಣ ಇಲ್ಲಿದೆ.
► ಬಿ.ಎಸ್. ಯಡಿಯೂರಪ್ಪ – ಡಿ.ವಿ. ಸದಾನಂದ ಗೌಡ – ಜಗದೀಶ್ ಶೆಟ್ಟರ್ (2011, 2012)
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ತನ್ನ ಐದು ವರ್ಷಗಳ ಆಡಳಿತಾವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ ಅಪರೂಪದ ಸಂದರ್ಭವಿದು.
► ಯಡಿಯೂರಪ್ಪ ರಾಜೀನಾಮೆ (2011)
2011ರಲ್ಲಿ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಬಿಜೆಪಿಯ ಶಕ್ತಿಶಾಲಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಮೂರೇ ವರ್ಷಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯು ಯಡಿಯೂರಪ್ಪ ಮತ್ತು ಅವರ ಸಂಪುಟದ ಮೂವರು ಸಹೋದ್ಯೋಗಿಗಳು ಹಾಗೂ ಗಣಿ ಧಣಿಗಳಾದ ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿತ್ತು.
► ಮುಖ್ಯಮಂತ್ರಿಯಾದ ಸದಾನಂದ ಗೌಡ
ಯಡಿಯೂರಪ್ಪ ಅವರ ನಿರ್ಗಮನದ ನಂತರ, ಆಗಸ್ಟ್ 2011ರಲ್ಲಿ ಅವರ ಆಪ್ತರಾಗಿದ್ದ ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಆದರೆ, ಇವರನ್ನು ಬೆಂಬಲಿಸಿ ಅಧಿಕಾರಕ್ಕೇರಿಸಿದ್ದ ಯಡಿಯೂರಪ್ಪ ಅವರೇ ನಂತರ ತಂದ ಒತ್ತಡದಿಂದಾಗಿ ಸದಾನಂದ ಗೌಡರ ಅಸ್ಥಿರ ಆಡಳಿತ ಕೇವಲ 11 ತಿಂಗಳಲ್ಲೇ ಕೊನೆಗೊಂಡಿತು. ಗೌಡರ ರಾಜೀನಾಮೆಯು ಅವರ ರಾಜಕೀಯ ವಿರೋಧಿ ಬಣದ ಜಗದೀಶ್ ಶೆಟ್ಟರ್ ಅವರಿಗೆ ಹಾದಿ ಸುಗಮಗೊಳಿಸಿತು. ಇದರೊಂದಿಗೆ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯವು ಮೂರನೇ ಮುಖ್ಯಮಂತ್ರಿಯನ್ನು ಕಂಡಿತು.
ಈ ರಾಜಕೀಯ ಸ್ಥಿತ್ಯಂತರದ ಹಿಂದೆ ಪ್ರಬಲ ಜಾತಿ ಸಮೀಕರಣದ ಲೆಕ್ಕಾಚಾರವಿತ್ತು. ಯಡಿಯೂರಪ್ಪ ಮತ್ತು ಶೆಟ್ಟರ್ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಸದಾನಂದ ಗೌಡರು ಒಕ್ಕಲಿಗ ಸಮುದಾಯದವರಾಗಿದ್ದರು. ಕೇವಲ ಹತ್ತು ತಿಂಗಳು ಬಾಕಿ ಇದ್ದ 2013ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಪಕ್ಷದೊಳಗಿನ ಭಿನ್ನಮತ ಮತ್ತು ಸಂಭವನೀಯ ಬಂಡಾಯವನ್ನು ತಣಿಸಲು ಬಿಜೆಪಿ ಹೈಕಮಾಂಡ್ ಈ ಬದಲಾವಣೆಯ ನಿರ್ಧಾರ ಕೈಗೊಂಡಿತ್ತು.
► ಚುನಾವಣಾ ಫಲಿತಾಂಶ: ಬಿಜೆಪಿಗೆ ಹೀನಾಯ ಹಿನ್ನಡೆ
ಬಿಜೆಪಿಯ ಈ ಎಲ್ಲಾ ತಂತ್ರಗಾರಿಕೆಗಳು ಚುನಾವಣೆಯಲ್ಲಿ ಉಲ್ಟಾ ಹೊಡೆದವು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯಭೇರಿ ಬಾರಿಸಿ, ಒಟ್ಟು 224 ಸ್ಥಾನಗಳ ಪೈಕಿ 121 ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರ ಹಿಡಿಯಿತು.
ಮತ್ತೊಂದೆಡೆ, 2008ರ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಕೇವಲ 40 ಸ್ಥಾನಗಳಿಗೆ ಕುಸಿಯಿತು. ಅಷ್ಟೇ ಅಲ್ಲದೆ, ಜನತಾ ದಳ (ಸೆಕ್ಯುಲರ್) ಪಕ್ಷದೊಂದಿಗೆ ಸಮಾನ ಸ್ಥಾನಗಳನ್ನು ಹಂಚಿಕೊಳ್ಳುವ ಮೂಲಕ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿತು.
ಈ ಹೀನಾಯ ಸೋಲಿನ ನಂತರ ಪ್ರತಿಕ್ರಿಯಿಸಿದ್ದ ಜಗದೀಶ್ ಶೆಟ್ಟರ್, “ಸರ್ಕಾರದಲ್ಲಿದ್ದ ಗೊಂದಲಗಳು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಭ್ರಷ್ಟಾಚಾರದ ಆರೋಪಗಳೇ ಪಕ್ಷದ ಪತನಕ್ಕೆ ಪ್ರಮುಖ ಕಾರಣ” ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದರು.
► ಬಿ.ಎಸ್. ಯಡಿಯೂರಪ್ಪ – ಬಸವರಾಜ ಬೊಮ್ಮಾಯಿ (2021)
ಪ್ರಸ್ತುತ ನಡೆದಿರುವ ಸಿದ್ದರಾಮಯ್ಯ–ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯನ್ನು ಹೊರತುಪಡಿಸಿದರೆ, ಕರ್ನಾಟಕದಲ್ಲಿ ರಾಜಕೀಯ ಪಕ್ಷವೊಂದರ ಹೈಕಮಾಂಡ್ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯನ್ನು ಬದಲಾಯಿಸಿದ ಇತ್ತೀಚಿನ ಅತ್ಯಂತ ಪ್ರಮುಖ ಉದಾಹರಣೆಯೆಂದರೆ ಅದು 2021ರ ಘಟನೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯನ್ನು ಮುನ್ನಡೆಸಿ ಅಧಿಕಾರದ ಗದ್ದುಗೆಗೇರಿದ್ದರು. ಆದರೆ, ಅವರ ನಾಯಕತ್ವದ ವಿರುದ್ಧ ಪಕ್ಷದೊಳಗೇ ಕೇಳಿಬಂದ ಅಸಮಾಧಾನದ ಧ್ವನಿಗಳು ಹಾಗೂ ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಜುಲೈ 2021ರಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡ ಹೇರಿತು.
ಯಡಿಯೂರಪ್ಪ ಅವರ ನಿರ್ಗಮನದ ಬಳಿಕ ಬಿಜೆಪಿ ನಾಯಕತ್ವವು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿತು. ಆದರೆ, ಬೊಮ್ಮಾಯಿ ಅವರ ಅಧಿಕಾರಾವಧಿಯುದ್ದಕ್ಕೂ ಕೋಮು ಧ್ರುವೀಕರಣದಿಂದ ಹಿಡಿದು ಭ್ರಷ್ಟಾಚಾರದವರೆಗಿನ ಸಾಲು ಸಾಲು ವಿವಾದಗಳು ಬೆಂಬಿಡದೆ ಕಾಡಿದವು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹೂಡಿದ ‘PayCM’ ಪೋಸ್ಟರ್ಗಳಂತಹ ಪ್ರಬಲ ಭ್ರಷ್ಟಾಚಾರ ವಿರೋಧಿ ಅಭಿಯಾನಗಳು ಬೊಮ್ಮಾಯಿ ಅವರ ದಕ್ಷ ನಾಯಕತ್ವದ ಇಮೇಜ್ಗೆ ಭಾರಿ ಪೆಟ್ಟು ನೀಡಿದವು. ಇದರೊಂದಿಗೆ, ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿದ್ದ ಯಡಿಯೂರಪ್ಪ ಅವರ ನೆರಳಿನಿಂದ ಹೊರಬರಲು ಬೊಮ್ಮಾಯಿ ಅವರಿಗೆ ಸಾಧ್ಯವಾಗಲಿಲ್ಲ.
► 2023ರ ಚುನಾವಣಾ ಮುಖಭಂಗ
2023ರ ವಿಧಾನಸಭಾ ಚುನಾವಣೆ ಹತ್ತಿರ ಬರುವಷ್ಟರಲ್ಲಿ, 63 ವರ್ಷದ ಬೊಮ್ಮಾಯಿ ಅವರು ಬಿಜೆಪಿ ಹೈಕಮಾಂಡ್ನ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡಂತೆ ಕಂಡುಬಂದರು. ಪರಿಣಾಮವಾಗಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಯಡಿಯೂರಪ್ಪ ಅವರ ಹಿಂದೆ ನಿಲ್ಲುವ ಎರಡನೇ ಹಂತದ ನಾಯಕರಾಗಿ ಸೀಮಿತಗೊಳ್ಳಬೇಕಾಯಿತು.
ಅಂತಿಮವಾಗಿ, ಮೇ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಜಯಭೇರಿ ಬಾರಿಸಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆ ಅಧಿಕಾರಾವಧಿ 2026ರ ಮೇ ತಿಂಗಳಲ್ಲಿ ಕೊನೆಗೊಂಡಿದೆ.
ಕೃಪೆ: indianexpress.com






