ಕರ್ನಾಟಕ ಮುಖ್ಯಮಂತ್ರಿಗಳ ಇತಿಹಾಸ: ಅಪರೂಪದ ರಾಜಕೀಯ ದಾಖಲೆಗಳು ಮತ್ತು ಮೈಲಿಗಲ್ಲುಗಳು

Photo : PTI
ರಾಜಕೀಯ ಏರಿಳಿತ, ಸಮ್ಮಿಶ್ರ ಸರ್ಕಾರಗಳ ಪತನ ಹಾಗೂ 6 ಬಾರಿ ರಾಷ್ಟ್ರಪತಿ ಆಳ್ವಿಕೆಯಂತಹ ಸಾಂವಿಧಾನಿಕ ಬಿಕ್ಕಟ್ಟುಗಳನ್ನು ದಾಟಿ ಬಂದಿರುವ ಕರ್ನಾಟಕದ ಮುಖ್ಯಮಂತ್ರಿಗಳ ಇತಿಹಾಸವು ತನ್ನದೇ ಆದ ವಿಶಿಷ್ಟ ದಾಖಲೆಗಳನ್ನು ಒಡಲಲ್ಲಿಟ್ಟುಕೊಂಡಿದೆ. 1956ರ ಏಕೀಕರಣಕ್ಕೂ ಮುನ್ನ ಹಾಗೂ ನಂತರದ ರಾಜಕಾರಣವನ್ನು ಅವಲೋಕಿಸಿದರೆ, ಗರಿಷ್ಠ ಅವಧಿ ಆಡಳಿತ ನಡೆಸಿದ ಹೆಗ್ಗಳಿಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು. ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಅಪ್ಪ- ಮಗ ಎಂದಾಗ ಬೊಮ್ಮಾಯಿ ಹಾಗೂ ದೇವೇಗೌಡ ಕುಟುಂಬದ ಚಿತ್ರಣ ಮುಂದಿದೆ. ಕರ್ನಾಟಕದ ಸಿಎಂ ಆಗಿದ್ದವರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ ಇತಿಹಾಸವೂ ಇಲ್ಲಿದೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದು ದಾಖಲೆ ಬರೆದ ನಾಯಕರ ರಾಜಕೀಯದ ಸ್ವಾರಸ್ಯಕರ ನೋಟ ಇಲ್ಲಿದೆ
1. ಅತಿ ಹೆಚ್ಚು ಮತ್ತು ಅತಿ ಕಡಿಮೆ ಅವಧಿಯ ದಾಖಲೆಗಳು
ದೀರ್ಘಕಾಲ ಸಿಎಂ ಆಗಿದ್ದ ದಾಖಲೆ (ಸತತವಲ್ಲದ ಒಟ್ಟು ಅವಧಿ): ಈ ದಾಖಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರಲ್ಲಿದೆ. ಅವರು ತಮ್ಮ ಎರಡು ಅವಧಿಗಳನ್ನು (2013-2018 ಮತ್ತು 2023-2026) ಸೇರಿಸಿ ಒಟ್ಟು 8 ವರ್ಷಗಳಿಗೂ ಹೆಚ್ಚು ಕಾಲ (ನಿರ್ದಿಷ್ಟವಾಗಿ ಹೇಳುವುದಾರೆ 8 ವರ್ಷ, ಒಂದು ವಾರ, ಮೂರು ದಿನ) ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ದೇವರಾಜ ಅರಸು ಅವರು ತಮ್ಮ ಎರಡು ಅವಧಿ ಸೇರಿ ಒಟ್ಟು 7 ವರ್ಷ 240 ದಿನಗಳ ಕಾಲ ಸಿಎಂ ಆಗಿದ್ದರು.
ಅತಿ ದೀರ್ಘಕಾಲ 'ಸತತವಾಗಿ' ಸಿಎಂ ಆಗಿದ್ದ ದಾಖಲೆ: ಈ ದಾಖಲೆ ಡಿ. ದೇವರಾಜ ಅರಸು ಅವರ ಹೆಸರಲ್ಲಿದೆ. ಅವರು ತಮ್ಮ ಮೊದಲ ಅವಧಿಯಲ್ಲಿ (20/03/1972 ರಿಂದ 31/12/1977) ಸತತವಾಗಿ 5 ವರ್ಷ 9 ತಿಂಗಳು12 ದಿನಗಳ ಕಾಲ ಆಡಳಿತ ನಡೆಸಿದ್ದರು.
ಅತಿ ಕಡಿಮೆ ಅವಧಿಯ ಸಿಎಂ: ಈ ಅಪರೂಪದ ದಾಖಲೆ ಬಿ. ಎಸ್. ಯಡಿಯೂರಪ್ಪ ಅವರ ಹೆಸರಲ್ಲಿದೆ. 2018 ಮೇ 17 ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಅವರು ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಕೇವಲ 6 ದಿನಗಳಲ್ಲಿ (23/05/2018) ರಾಜೀನಾಮೆ ನೀಡಬೇಕಾಯಿತು. ಇದಕ್ಕೂ ಮುನ್ನ 2007ರಲ್ಲಿ ಅವರು ಕೇವಲ 7 ದಿನ ಸಿಎಂ ಆಗಿದ್ದರು.
2. ಬಜೆಟ್ ಮಂಡನೆಯ ದಾಖಲೆ
ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ: ಈ ದಾಖಲೆ ಕೂಡಾ ಸಿದ್ದರಾಮಯ್ಯ ಅವರ ಹೆಸರಲ್ಲಿದೆ. ಹಣಕಾಸು ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಅವರು ಕರ್ನಾಟಕದ ಇತಿಹಾಸದಲ್ಲೇ ಅತ್ಯಧಿಕ ಅಂದರೆ 17 ಬಾರಿ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇವರ ನಂತರದ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ (13 ಬಾರಿ) ಇದ್ದಾರೆ.
3. ಪ್ರಮಾಣ ವಚನದ ದಾಖಲೆಗಳು
ಅತಿ ಹೆಚ್ಚು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದವರು: ಈ ದಾಖಲೆ ಬಿ. ಎಸ್. ಯಡಿಯೂರಪ್ಪ ಅವರ ಹೆಸರಲ್ಲಿದೆ. ಅವರು ವಿಭಿನ್ನ ರಾಜಕೀಯ ವಿದ್ಯಮಾನಗಳಿಂದಾಗಿ ಒಟ್ಟು 4 ಬಾರಿ (2007, 2011, 2018, 2021) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಪರ್ಯಾಸವೆಂದರೆ, ಅವರು ಒಮ್ಮೆಯೂ ತಮ್ಮ 5 ವರ್ಷಗಳ ಪೂರ್ಣಾವಧಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ.
ತಂದೆ-ಮಗ ಮುಖ್ಯಮಂತ್ರಿಗಳ ಜೋಡಿ: ಕರ್ನಾಟಕದ ಇತಿಹಾಸದಲ್ಲಿ ತಂದೆ ಮತ್ತು ಮಗ ಇಬ್ಬರೂ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಎರಡು ಉದಾಹರಣೆಗಳಿವೆ-
ಎಚ್. ಡಿ. ದೇವೇಗೌಡ (1994-1996) ಮತ್ತು ಅವರ ಪುತ್ರ ಎಚ್. ಡಿ. ಕುಮಾರಸ್ವಾಮಿ (2006 ಮತ್ತು 2018).
ಎಸ್. ಆರ್. ಬೊಮ್ಮಾಯಿ (1988-1989) ಮತ್ತು ಅವರ ಪುತ್ರ ಬಸವರಾಜ ಬೊಮ್ಮಾಯಿ (2021-2023).
4. ಉನ್ನತ ಸಾಂವಿಧಾನಿಕ ಹುದ್ದೆಗೇರಿದ ದಾಖಲೆ
ದೇಶದ ಪ್ರಧಾನಿಯಾದ ಏಕೈಕ ಸಿಎಂ: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಾಯಕರೊಬ್ಬರು ದೇಶದ ಅತ್ಯುನ್ನತ ರಾಜಕೀಯ ಹುದ್ದೆಯಾದ ಪ್ರಧಾನಮಂತ್ರಿ ಸ್ಥಾನಕ್ಕೇರಿದ ದಾಖಲೆ ಎಚ್. ಡಿ. ದೇವೇಗೌಡರದ್ದು. ಅವರು 1996ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತದ 11ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ದೇಶದ ಉಪರಾಷ್ಟ್ರಪತಿಯಾದ ಸಿಎಂ: ಕರ್ನಾಟಕದ 5ನೇ ಮುಖ್ಯಮಂತ್ರಿಯಾಗಿದ್ದ ಬಿ. ಡಿ. ಜತ್ತಿ (1958-1962) ಅವರು ನಂತರದ ದಿನಗಳಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ (1974-1979) ಹಾಗೂ ಹಂಗಾಮಿ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ ಅಪರೂಪದ ದಾಖಲೆ ಹೊಂದಿದ್ದಾರೆ.
5. ರಾಜಕೀಯ ಪಕ್ಷ ಮತ್ತು ಸಾಂವಿಧಾನಿಕ ದಾಖಲೆಗಳು
ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ: 1947ರಿಂದ ಸತತವಾಗಿ ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜ್ಯದಲ್ಲಿ, 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ (ಜನತಾ ಪಾರ್ಟಿ) ಸರ್ಕಾರ ರಚಿಸಿ ಇತಿಹಾಸ ಬರೆದವರು ರಾಮಕೃಷ್ಣ ಹೆಗಡೆ.
ರಾಷ್ಟ್ರಪತಿ ಆಳ್ವಿಕೆ: ರಾಜ್ಯದಲ್ಲಿ ಒಟ್ಟು 6 ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದರೂ, 1971ರಲ್ಲಿ ವಿರೇಂದ್ರ ಪಾಟೀಲ್ ಅವರ ರಾಜೀನಾಮೆಯ ನಂತರ ಜಾರಿಯಾದ ಮೊದಲ ರಾಷ್ಟ್ರಪತಿ ಆಳ್ವಿಕೆಯು ಅತ್ಯಂತ ದೀರ್ಘವಾಗಿತ್ತು. 19/03/1971 ರಿಂದ 20/03/1972 ರವರೆಗೆ ಒಟ್ಟು 367 ದಿನಗಳ ಕಾಲ (ಒಂದು ವರ್ಷಕ್ಕೂ ಹೆಚ್ಚು) ರಾಜ್ಯವು ರಾಷ್ಟಪತಿ ಆಳ್ವಿಕೆಯಲ್ಲಿತ್ತು .






