ಗ್ರಾಮೀಣ ಮಹಾರಾಷ್ಟ್ರದಲ್ಲಿ ಪಾದರಸದ ವಿಷಪ್ರಾಶನ ಹೆಚ್ಚಳ: ಕಲಬೆರಕೆ ಫೇರ್ನೆಸ್ ಕ್ರೀಮ್ ಗಳೇ ಕಾರಣ?

Photo Credit : FDA
ಜನವರಿಯಲ್ಲಿ, ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ 25 ವರ್ಷದ ಋಷಿಕೇಶ್ ಧೋರೆ ಅವರು ನಿದ್ರಾಹೀನತೆ, ಕಿರಿಕಿರಿ, ಕಾಲುಗಳ ಸ್ನಾಯುಗಳಲ್ಲಿ ಸೆಳೆತ ಮತ್ತು ನೋವಿನಿಂದ ವೈದ್ಯರನ್ನು ಭೇಟಿಯಾದರು. ಆದರೆ ಅವರಿಗೆ ಅತ್ಯಂತ ಆತಂಕ ತಂದಿದ್ದು ಕಾಲುಗಳಲ್ಲಿ ಕಾಣಿಸಿಕೊಂಡ ನಡುಕ. ಮುರ್ತಿಜಾಪುರದ ಗೋರೇಗಾಂವ್ ಗ್ರಾಮದ ನಿವಾಸಿಯಾದ ಧೋರೆ ಅವರ ಈ ಲಕ್ಷಣಗಳನ್ನು ನೋಡಿ ವೈದ್ಯರು ಗೊಂದಲಕ್ಕೊಳಗಾದರು. ನಂತರ, 50 ಕಿ.ಮೀ. ದೂರದಲ್ಲಿರುವ ಅಕೋಲಾ ನಗರದ ನರರೋಗ ತಜ್ಞರನ್ನು (ನ್ಯೂರಾಲಜಿಸ್ಟ್) ಭೇಟಿಯಾಗಲು ಸೂಚಿಸಿದರು.
ನರರೋಗ ತಜ್ಞ ಡಾ. ನಿತಿನ್ ವಿರ್ವಾಣಿ ಅವರಿಗೆ ಧೋರೆ ಅವರ ಸಮಸ್ಯೆ ಏನೆಂಬುದು ತಕ್ಷಣವೇ ಅರ್ಥವಾಯಿತು. ಧೋರೆ ಬರುವ ಕೆಲವೇ ವಾರಗಳ ಮೊದಲು ಅವರು ಇದೇ ರೀತಿಯ ಲಕ್ಷಣಗಳಿದ್ದ ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು.
ವೈದ್ಯರು ಶಂಕಿಸಿದಂತೆಯೇ, ಧೋರೆ ತಮ್ಮ ಗ್ರಾಮದ ಅಂಗಡಿಯೊಂದರಲ್ಲಿ ಖರೀದಿಸಿದ ಸ್ಕಿನ್ ಬ್ರೈಟನಿಂಗ್ (ಫೇರ್ನೆಸ್) ಕ್ರೀಮ್ ಅನ್ನು ಇತ್ತೀಚೆಗೆ ಬಳಸಲು ಪ್ರಾರಂಭಿಸಿದ್ದರು. "ಕ್ರೀಮ್ ಬಳಸಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ನನಗೆ ರಾತ್ರಿ ನಿದ್ರೆ ಬರಲಿಲ್ಲ. ರಾತ್ರಿಯೆಲ್ಲಾ ಎಚ್ಚರವಾಗಿದ್ದರಿಂದ ಕಿರಿಕಿರಿ ಹೆಚ್ಚಾಯಿತು. ನಂತರ ಕಾಲುಗಳಲ್ಲಿ ಉರಿಯುವ ಅನುಭವ ಶುರುವಾಯಿತು" ಎಂದು ಅವರು ಹೇಳಿದರು.
ಅವರಂತೆಯೇ, ಅಕೋಲಾದ 30 ವರ್ಷದ ಮಹಿಳೆಯೊಬ್ಬರು ತಮ್ಮ ಸ್ನೇಹಿತೆಯ ಶಿಫಾರಸಿನ ಮೇರೆಗೆ ಎಪ್ರಿಲ್ನಲ್ಲಿ ಫೇರ್ನೆಸ್ ಕ್ರೀಮ್ ಬಳಸಲು ಪ್ರಾರಂಭಿಸಿದ್ದರು. ಆರಂಭದ ದಿನಗಳಲ್ಲಿ ಅವರ ಚರ್ಮದ ಬಣ್ಣ ಬದಲಾಗಿ, ಕಲೆಗಳು ಕಡಿಮೆಯಾದವು. "ನಾನು ಈ ಕ್ರೀಮ್ ಅನ್ನು ಬಳಸಲು ನನ್ನ ಇತರ ಸ್ನೇಹಿತರಿಗೂ ಹೇಳಿದೆ. ಇದು ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತದೆ" ಎಂದು ಹೆಸರು ಹೇಳಲಿಚ್ಛಿಸದ ಆ ಮಹಿಳೆ ಹೇಳಿರುವುದಾಗಿ scroll.in ವರದಿ ಮಾಡಿದೆ.
ಆದರೆ ಕೆಲವೇ ವಾರಗಳಲ್ಲಿ ಆ ಮಹಿಳೆಯ ಮುಖ ಒಣಗಿ, ತುರಿಕೆ ಶುರುವಾಯಿತು. ನಂತರ ಅವರ ಪಾದಗಳಲ್ಲಿ ನಿರಂತರವಾಗಿ ಜುಮ್ಮೆನಿಸುವ ಅನುಭವ ಪ್ರಾರಂಭವಾಯಿತು.
ಡಾ. ವಿರ್ವಾಣಿ ಅವರು ಕೆಲವು ರಕ್ತ ಪರೀಕ್ಷೆಗಳನ್ನು ಮಾಡಲು ಸೂಚಿಸಿದಾಗ, ಅವರ ರಕ್ತದಲ್ಲಿನ ಪಾದರಸದ ಪ್ರಮಾಣವು ಸಾಮಾನ್ಯ ಮಟ್ಟಕ್ಕಿಂತ 10 ಪಟ್ಟು ಹೆಚ್ಚಿರುವುದು ಕಂಡುಬಂದಿತು.
ಅಷ್ಟೇ ಅಲ್ಲದೆ, ಅವರ ರಕ್ತದಲ್ಲಿ 'CASPR 2' ಆಂಟಿಬಾಡಿಗಳು ಇರುವುದು ದೃಢಪಟ್ಟಿತು. ದೇಹವು ಹೆವಿ ಮೆಟಲ್ಸ್ಗೆ ಒಡ್ಡಿಕೊಂಡಾಗ ಈ ಎರಡೂ ಪರೀಕ್ಷೆಗಳಲ್ಲಿ ಪಾಸಿಟಿವ್ ಫಲಿತಾಂಶ ಬರುತ್ತದೆ. ಇದು ನಿಯಂತ್ರಣವಿಲ್ಲದ ಸ್ನಾಯುಗಳ ಸೆಳೆತ ಮತ್ತು ಕಾಲುಗಳ ನೋವಿಗೆ ಕಾರಣವಾಗುತ್ತದೆ. ಈ ಲಕ್ಷಣಗಳನ್ನು ಡಾ. ವಿರ್ವಾಣಿ ಅವರು ಇಬ್ಬರೂ ರೋಗಿಗಳಲ್ಲಿ ಗಮನಿಸಿದ್ದರು.
‘100ಕ್ಕೂ ಹೆಚ್ಚು ಪ್ರಕರಣಗಳು’
ಅಕೋಲಾದಲ್ಲಿ ಡಾ. ವಿರ್ವಾಣಿ ಅವರು ಕಳೆದ ಒಂದು ವರ್ಷದಲ್ಲಿ ಇಂತಹ 40 ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಈ ರೀತಿ ಚಿಕಿತ್ಸೆ ನೀಡಿದ ಏಕೈಕ ವೈದ್ಯರು ಅವರೊಬ್ಬರೇ ಅಲ್ಲ. ಕಳೆದ ಒಂದು ವರ್ಷದಿಂದ ಮಹಾರಾಷ್ಟ್ರದಾದ್ಯಂತ ಇರುವ ನರರೋಗ ತಜ್ಞರು ಯುವಕರಲ್ಲಿ ಕಂಡುಬರುತ್ತಿರುವ ಪಾದರಸದ ವಿಷಪ್ರಾಶನ ಪ್ರಕರಣಗಳ ಬಗ್ಗೆ ತಮ್ಮ ವಾಟ್ಸಾಪ್ ಗ್ರೂಪ್ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.
"ಹೆಚ್ಚಿನ ಪ್ರಕರಣಗಳಲ್ಲಿ, ಸ್ಕಿನ್ ಬ್ರೈಟನಿಂಗ್ (ಫೇರ್ನೆಸ್) ಕ್ರೀಮ್ಗಳಿಂದಲೇ ಪಾದರಸದ ವಿಷಪ್ರಾಶನವಾಗಿದೆ" ಎಂದು ಪುಣೆಯ ಮಣಿಪಾಲ ಆಸ್ಪತ್ರೆಯ ನರರೋಗ ತಜ್ಞ ಡಾ. ಭೂಷಣ್ ಜೋಶಿ ತಿಳಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ರೋಗಿಗಳ ಮೂತ್ರಪಿಂಡಗಳಿಗೆ ಹಾನಿಯಾಗಿದೆ ಎಂದೂ ಅವರು ಹೇಳಿದರು.
"ನಾನು ರಾಜ್ಯದ ನರರೋಗ ತಜ್ಞರ ಗುಂಪಿನ ಭಾಗವಾಗಿದ್ದೇನೆ. ನಾವೆಲ್ಲರೂ ಸೇರಿ ಕಳೆದ ಕೆಲವು ತಿಂಗಳುಗಳಲ್ಲಿ 100ಕ್ಕೂ ಹೆಚ್ಚು ಇಂತಹ ಪ್ರಕರಣಗಳನ್ನು ನೋಡಿದ್ದೇವೆ" ಎಂದು ಅವರು ಹೇಳಿದರು.
ವೈದ್ಯರು ಖಾಸಗಿಯಾಗಿ ಈ ಕ್ರೀಮ್ಗಳ ಕೆಲವು ಮಾದರಿಗಳನ್ನು ಪರೀಕ್ಷಿಸಿದಾಗ, ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಇರುವುದು ಕಂಡುಬಂದಿದೆ.
ಹೆಚ್ಚಿನ ಪ್ರಕರಣಗಳಲ್ಲಿ, ಫೇರ್ನೆಸ್ ಕ್ರೀಮ್ಗಳ ಮೇಲೆ ಅವುಗಳಲ್ಲಿ ಬಳಸಿರುವ ಪದಾರ್ಥಗಳು, ತಯಾರಕರು ಅಥವಾ ಬ್ಯಾಚ್ ಸಂಖ್ಯೆಯ ಯಾವುದೇ ವಿವರಗಳಿರಲಿಲ್ಲ. ಮಹಾರಾಷ್ಟ್ರ ಸರಕಾರವು ಈಗ ಇಂತಹ ಕ್ರೀಮ್ಗಳನ್ನು ದಾಸ್ತಾನು ಇಟ್ಟುಕೊಂಡಿರುವ ಅಂಗಡಿಗಳು ಮತ್ತು ವಿತರಕರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಆದರೆ ಇವು ಮೊದಲಿಗೆ ಹೇಗೆ ಮಾರಾಟವಾಗುತ್ತಿದ್ದವು ಎಂಬುದರ ಕುರಿತು ಬಹಳ ಕಡಿಮೆ ಮಾಹಿತಿಯಿದೆ.
ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಲು ತಯಾರಕರಿಗೆ ಪರವಾನಗಿ ಅಗತ್ಯವಿದ್ದರೂ, ಅವುಗಳನ್ನು ಮಾರಾಟ ಮಾಡಲು ಔಷಧಗಳಂತೆ ಯಾವುದೇ ಪರವಾನಗಿ ಅಗತ್ಯವಿಲ್ಲ. ಈ ಪ್ರಕರಣದಲ್ಲಿ ಇದೇ ದೊಡ್ಡ ಸವಾಲಾಗಿದೆ ಎಂದು ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯ ಅಧಿಕಾರಿಯೊಬ್ಬರು scroll.in ಗೆ ತಿಳಿಸಿದ್ದಾರೆ. "ನಾವು ಚಿಲ್ಲರೆ ಮಾರಾಟಗಾರರನ್ನು ಅಥವಾ ಈ ಉತ್ಪನ್ನಗಳನ್ನು ದಾಸ್ತಾನು ಮಾಡುವ ಹಲವು ಗ್ರಾಮೀಣ ಕಿರಾಣಿ ಅಂಗಡಿಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಮತ್ತು ಇಲ್ಲಿ ಯಾವುದೇ ಪರವಾನಗಿ ಹೊಂದಿದ ವಿತರಕರಿಲ್ಲ. ವಿತರಣಾ ಜಾಲವನ್ನು ಪತ್ತೆಹಚ್ಚಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ಮುಂಬೈ ಮೂಲದ ಡ್ರಗ್ ಇನ್ಸ್ಪೆಕ್ಟರ್ ಹೇಳಿದ್ದಾರೆ.
ಧೋರೆ ಮತ್ತು 30 ವರ್ಷದ ಮಹಿಳೆ ಬಳಸಿದ ಕ್ರೀಮ್ ಪಾಕಿಸ್ತಾನಿ ಬ್ರ್ಯಾಂಡ್ ಆದ 'ಗೋರಿ ಕಾಸ್ಮೆಟಿಕ್ಸ್' ತಯಾರಿಸಿದ್ದು ಎನ್ನಲಾಗಿದೆ. "ಆದರೆ ಪ್ಯಾಕಿಂಗ್ ಮೇಲೆ ಯಾವುದೇ ಲೇಬಲ್ ಅಥವಾ ಬ್ಯಾಚ್ ವಿವರಗಳಿರಲಿಲ್ಲ, ಆದ್ದರಿಂದ ಇದು ನಕಲಿ ಉತ್ಪನ್ನವಾಗಿರಬಹುದು ಎಂದು ನಾವು ಶಂಕಿಸಿದ್ದೇವೆ" ಎಂದು ಮಹಾರಾಷ್ಟ್ರ FDAಯ ಜಂಟಿ ಆಯುಕ್ತ (ಡ್ರಗ್ಸ್) ಗಣೇಶ್ ರೋಕಡೆ ತಿಳಿಸಿದ್ದಾರೆ.
ಈ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಕಿರಾಣಿ ಮತ್ತು ಸೌಂದರ್ಯವರ್ಧಕ ಅಂಗಡಿಗಳ ಮಾಲೀಕರ ವಿರುದ್ಧ ಹಾಗೂ ಇವುಗಳನ್ನು ತಯಾರಿಸಿ ವಿತರಿಸುತ್ತಿದ್ದ ಅಜ್ಞಾತ ವ್ಯಕ್ತಿಗಳ ವಿರುದ್ಧ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940ರ ವಿವಿಧ ನಿಬಂಧನೆಗಳಡಿ ಪಾರ್ಭಣಿ, ಸಂಭಾಜಿನಗರ, ನಾಂದೇಡ್, ಮುಂಬೈ ಮತ್ತು ನಾಸಿಕ್ ನಲ್ಲಿ 6 ಎಫ್ಐಆರ್ಗಳು ದಾಖಲಾಗಿವೆ.
ಕಲಬೆರಕೆ ಅಥವಾ ಅಪಾಯಕಾರಿ ಸೌಂದರ್ಯವರ್ಧಕಗಳನ್ನು ತಯಾರಿಸುವುದು ಅಥವಾ ಮಾರಾಟ ಮಾಡುವುದಕ್ಕೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಈ ಕಾಯ್ದೆಯ ಸೆಕ್ಷನ್ 27ರ ಅಡಿಯಲ್ಲಿ ಪ್ರಮುಖ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರ FDA ಪಾಕಿಸ್ತಾನದ 3 ಬ್ರ್ಯಾಂಡ್ಗಳ ಕುರಿತು ಎಚ್ಚರಿಕೆ ನೀಡಿದೆ. 'ಗೋರಿ ಕಾಸ್ಮೆಟಿಕ್ಸ್' ತಯಾರಿಸುವ ಕ್ರೀಮ್, ವೈಟನಿಂಗ್ ಬಾಡಿ ಲೋಷನ್ ಮತ್ತು ವೈಟನಿಂಗ್ ಸೋಪ್, 'ಗೋಲ್ಡನ್ ಸ್ಟಾರ್ ಕಾಸ್ಮೆಟಿಕ್ಸ್' ತಯಾರಿಸುವ ಬ್ಯೂಟಿ ಕ್ರೀಮ್ ಹಾಗೂ 'ಶಾಹೀನ್ ಕಾಸ್ಮೆಟಿಕ್ಸ್' ತಯಾರಿಸುವ 'ಫೇಸ್ ಫ್ರೆಶ್ ಗೋಲ್ಡ್ ಪ್ಲಸ್' ಕ್ರೀಮ್ಗಳು ಈ ಪಟ್ಟಿಯಲ್ಲಿವೆ.
ಸಂಭಾಜಿನಗರದ ಔಷಧ ಜಂಟಿ ಆಯುಕ್ತ ವಿರಾಜ್ ಪೌನಿಕರ್ ಪ್ರಕಾರ, ಗೋರಿ ಕಾಸ್ಮೆಟಿಕ್ಸ್ ಉತ್ಪನ್ನಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಇರುವುದು ಪತ್ತೆಯಾಗಿದೆ.
ಸಂಭಾಜಿನಗರದಲ್ಲಿ ನಡೆದ ಒಂದು ದಾಳಿಯಲ್ಲಿ, "ಜಪ್ತಿ ಮಾಡಿದ ಉತ್ಪನ್ನಗಳಲ್ಲಿ ಪಾದರಸದ ಪ್ರಮಾಣವು ಅನುಮತಿಸಬಹುದಾದ ಮಟ್ಟಕ್ಕಿಂತ 18 ರಿಂದ 40 ಪಟ್ಟು ಹೆಚ್ಚಿರುವುದು ಕಂಡುಬಂದಿದೆ" ಎಂದು ರೋಕಡೆ ಹೇಳಿದ್ದಾರೆ.
"ಈ ಕುರಿತು ಭಯೋತ್ಪಾದನಾ ನಿಗ್ರಹ ದಳದ (ATS) ಮೂಲಕ ತನಿಖೆ ಆರಂಭಿಸುವಂತೆ ನಾವು ಮಹಾರಾಷ್ಟ್ರ DGP ಅವರಿಗೆ ಮನವಿ ಮಾಡಿದ್ದೇವೆ" ಎಂದು ರೋಕಡೆ ತಿಳಿಸಿದರು. "ಕೆಲವು ಉತ್ಪನ್ನಗಳ ಲೇಬಲ್ನಲ್ಲಿ 'ಮೇಡ್ ಇನ್ ಪಾಕಿಸ್ತಾನ್' ಎಂದು ನಮೂದಿಸಲಾಗಿದೆ. ಈ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಭಾರತಕ್ಕೆ ಬಲವಂತವಾಗಿ ತಳ್ಳಲಾಗುತ್ತಿದೆಯೇ ಅಥವಾ ಯಾವುದೋ ಜಾಲದ ಭಾಗವಾಗಿ ಇವುಗಳನ್ನು ದೇಶೀಯವಾಗಿಯೇ ತಯಾರಿಸಿ ವಿತರಿಸಲಾಗುತ್ತಿದೆಯೇ ಎಂದು ನಾವು ಪತ್ತೆಹಚ್ಚಲು ಬಯಸುತ್ತೇವೆ."
ಇದರ ನಡುವೆ, ತಾವು ಪರಿಶೀಲಿಸಿದ ಕೆಲವು ದೇಶೀಯ ಬ್ರ್ಯಾಂಡ್ಗಳಲ್ಲೂ ಹೆಚ್ಚಿನ ಪ್ರಮಾಣದ ಪಾದರಸ ಇರುವುದು ಕಂಡುಬಂದಿದೆ ಎಂದು 'scroll.in' ಜೊತೆ ಮಾತನಾಡಿದ ನರರೋಗ ತಜ್ಞರು ಹೇಳಿದ್ದಾರೆ. ಸ್ಕಿನ್ ಬ್ರೈಟನಿಂಗ್ ಕ್ರೀಮ್ ಕುರಿತ ದೂರುಗಳ ಆಧಾರದ ಮೇಲೆ, ಅಲ್ಲಿನ ತಯಾರಕರೊಬ್ಬರ ಕುರಿತು ತನಿಖೆ ನಡೆಸುವಂತೆ ಕರ್ನಾಟಕದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಔಷಧ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ
ನರರೋಗ ತಜ್ಞ ಡಾ. ರಾಹುಲ್ ಬಾವಿಸ್ಕರ್ ಅವರು ಸುಮಾರು ಆರು ತಿಂಗಳ ಹಿಂದೆ ನಾಸಿಕ್ ನ ತಮ್ಮ ಕ್ಲಿನಿಕ್ನಲ್ಲಿ ಇಂತಹ ಪ್ರಕರಣಗಳನ್ನು ಮೊದಲ ಬಾರಿಗೆ ಗಮನಿಸಿದರು.
"20 ರಿಂದ 40 ವರ್ಷ ವಯಸ್ಸಿನ ಯುವ ರೋಗಿಗಳು ಒಂದೇ ರೀತಿಯ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬಂದರು. ಅವರಿಗೆ ಪಾದಗಳಲ್ಲಿ ಉರಿಯುವ ಅನುಭವ, ಕಾಲು ಮತ್ತು ತೊಡೆಗಳಲ್ಲಿ ನೋವು ಹಾಗೂ ಚರ್ಮದ ಅಡಿಯಲ್ಲಿ ಹುಳುಗಳು ಹರಿಯುತ್ತಿರುವಂತೆ, ಮಾಂಸಖಂಡಗಳು ಚಲಿಸುವ ಅನುಭವ ಇತ್ತು. ಇನ್ನು ಕೆಲವರು ಒಂದು ತಿಂಗಳಿಂದ ನಿದ್ರಾಹೀನತೆಯಿಂದ ಬಳಲುತ್ತಿರುವುದಾಗಿ ದೂರಿದ್ದರು.
"ಆರಂಭದಲ್ಲಿ ನಮಗೆ ಇದನ್ನು ಪಾದರಸದೊಂದಿಗೆ ಸಂಯೋಜಿಸಿ ನೋಡಲು ಸಾಧ್ಯವಾಗಲಿಲ್ಲ. ಹೊಸ ಸ್ಕಿನ್ ಬ್ರೈಟನಿಂಗ್ ಕ್ರೀಮ್ ಬಳಸಲು ಪ್ರಾರಂಭಿಸಿದ ನಂತರವೇ ಈ ಲಕ್ಷಣಗಳು ಕಾಣಿಸಿಕೊಂಡವು ಎಂದು ರೋಗಿಯೊಬ್ಬರು ಹೇಳಿದಾಗ ಈ ಸತ್ಯ ಹೊರಬಿದ್ದಿತು.
ಚರ್ಮಕ್ಕೆ ಕಪ್ಪು ಬಣ್ಣವನ್ನು ನೀಡುವ ಮೆಲನಿನ್ ಅನ್ನು ಉತ್ಪಾದಿಸುವ ಟೈರೋಸಿನೇಸ್ ಎಂಬ ಎಂಜೈಮ್ನ ಉತ್ಪಾದನೆಯನ್ನು ಪಾದರಸವು ತಡೆಯುತ್ತದೆ. ಇದೇ ಕಾರಣಕ್ಕೆ ಸ್ಕಿನ್ ಬ್ರೈಟನಿಂಗ್ ಕ್ರೀಮ್ಗಳಿಗೆ ಕಾನೂನುಬಾಹಿರವಾಗಿ ಈ ಲೋಹವನ್ನು ಸೇರಿಸಲಾಗುತ್ತದೆ. ಇದು ಕಡಿಮೆ ವೆಚ್ಚದ್ದಾಗಿದ್ದು, ನಿಯಾಸಿನಾಮೈಡ್ ಅಥವಾ ಕೊಜಿಕ್ ಆಸಿಡ್ನಂತಹ ಇತರ ಸೌಂದರ್ಯವರ್ಧಕಗಳಿಗೆ ಹೋಲಿಸಿದರೆ ವೇಗವಾಗಿ ಫಲಿತಾಂಶ ನೀಡುತ್ತದೆ.
ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940ರ ಅಡಿಯಲ್ಲಿ, ಕಣ್ಣಿನ ಮೇಕಪ್ (ಐ ಶ್ಯಾಡೋ) ಉತ್ಪನ್ನಗಳನ್ನು ಹೊರತುಪಡಿಸಿ, ಇತರ ಎಲ್ಲಾ ಕಾಸ್ಮೆಟಿಕ್ಸ್ಗಳಲ್ಲಿ ಪಾದರಸದ ಬಳಕೆಯನ್ನು ಗರಿಷ್ಠ 1 ppm (ಪಾರ್ಟ್ಸ್ ಪರ್ ಮಿಲಿಯನ್) ವರೆಗೆ ಮಾತ್ರ ಅನುಮತಿಸಲಾಗಿದೆ.
ಆದರೆ, ಪಾದರಸವು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಹಾದಿತಪ್ಪಿಸಿ, ಹೆಚ್ಚಿನ ಪ್ರಮಾಣದಲ್ಲಿ ಆಂಟಿಬಾಡಿಗಳು ಉತ್ಪಾದನೆಯಾಗುವಂತೆ ಮಾಡುತ್ತದೆ. ತಾವು ಚಿಕಿತ್ಸೆ ನೀಡಿದ 17 ರೋಗಿಗಳಲ್ಲಿ ಪಾದರಸವು ರೋಗನಿರೋಧಕ ವ್ಯವಸ್ಥೆಯನ್ನು ಹಾದಿತಪ್ಪಿಸಿ, ಹೆಚ್ಚಿನ 'anti-CASPR2' ಆಂಟಿಬಾಡಿಗಳನ್ನು ಉತ್ಪಾದಿಸುವಂತೆ ಮಾಡಿರುವ ಲಕ್ಷಣಗಳು ಕಂಡುಬಂದಿವೆ ಎಂದು ಬಾವಿಸ್ಕರ್ ಹೇಳಿದರು. ಇದನ್ನು 'CASPR2 ಆಂಟಿಬಾಡಿ ರೆಸ್ಪಾನ್ಸ್' ಎಂದು ಕರೆಯಲಾಗುತ್ತದೆ. ಇದರಲ್ಲಿ ಆರೋಗ್ಯಕರ ನರಕೋಶಗಳ ಮೇಲೆಯೇ ದಾಳಿಯಾಗುವುದರಿಂದ ಸ್ನಾಯುಗಳ ಸೆಳೆತ, ಮರೆವು ಮತ್ತು ಪಾರ್ಶ್ವವಾಯು/ಸೆಳೆತದಂತಹ ಸಮಸ್ಯೆಗಳು ಉಂಟಾಗುತ್ತವೆ.
"ಇತರ ಜಿಲ್ಲೆಗಳಲ್ಲಿನ ನನ್ನ ಸಹೋದ್ಯೋಗಿಗಳು ಸ್ಥಳೀಯವಾಗಿ ತಯಾರಿಸಿದ ಫೇಸ್ ಕ್ರೀಮ್ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದಾಗ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಇರುವುದು ಕಂಡುಬಂದಿದೆ" ಎಂದು ಬಾವಿಸ್ಕರ್ ತಿಳಿಸಿದರು.
ಸಂಭಾಜಿನಗರದ ನರರೋಗ ತಜ್ಞ ಡಾ. ಆನಂದ್ ಸೋನಿ ಅವರು CASPR2 ಆಂಟಿಬಾಡಿ ಲಕ್ಷಣಗಳಿದ್ದ ಅನೇಕ ರೋಗಿಗಳನ್ನು ನೋಡಿದ್ದಾರೆ. ಅವರ ಮೂವರು ರೋಗಿಗಳಲ್ಲಿ ಮೂತ್ರಪಿಂಡದ (ಕಿಡ್ನಿ) ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಸ್ಟೀರಾಯ್ಡ್ ನೀಡಿದ ನಂತರ ಎಲ್ಲಾ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. "ಕ್ರೀಮ್ಗಳ ಬಳಕೆಯು ಕಡಿಮೆ ಅವಧಿಯದ್ದಾಗಿದ್ದರಿಂದ, ಕ್ರೀಮ್ ಬಳಕೆಯನ್ನು ನಿಲ್ಲಿಸಿದ ತಕ್ಷಣ ಲಕ್ಷಣಗಳು ಕ್ರಮೇಣ ಕಡಿಮೆಯಾಗುತ್ತವೆ" ಎಂದು ಸೋನಿ ಹೇಳಿದರು.
ವಿಷಕಾರಿ ಅಂಶಗಳು ಮತ್ತು ತ್ಯಾಜ್ಯ ಸಂಬಂಧಿತ ವಿಷಯಗಳ ಕುರಿತು ಕೆಲಸ ಮಾಡುವ ಲಾಭರಹಿತ ಸಂಸ್ಥೆ 'ಟಾಕ್ಸಿಕ್ ಲಿಂಕ್'ನ ಸಹ ನಿರ್ದೇಶಕ ಸತೀಶ್ ಸಿನ್ಹಾ ಮಾತನಾಡಿ, ಬ್ಯೂಟಿ ಕ್ರೀಮ್ಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಇರುವ ವಿಷಯವನ್ನು ತಮ್ಮ ಸಂಸ್ಥೆಯು ಹಲವು ವರ್ಷಗಳಿಂದ ಎತ್ತಿಹಿಡಿಯುತ್ತಿದೆ ಎಂದು ತಿಳಿಸಿದರು. "ನಮ್ಮ ಹಿಂದಿನ ಎರಡು ರಿಪೋರ್ಟ್ಗಳಲ್ಲಿ, ಸೌಂದರ್ಯವರ್ಧಕಗಳಲ್ಲಿ ಹೆಚ್ಚಿನ ಪಾದರಸದ ಅಂಶ ಇರುವುದು ಪತ್ತೆಯಾಗಿತ್ತು. ನಿಯಂತ್ರಣ ವ್ಯವಸ್ಥೆ ಇನ್ನು ಬಲಗೊಳ್ಳಬೇಕಿದೆ. ನಮ್ಮ ಪರೀಕ್ಷೆಗಳಲ್ಲಿ ಪಾಕಿಸ್ತಾನ ಮತ್ತು ಥೈಲ್ಯಾಂಡ್ನಿಂದ ಆಮದು ಮಾಡಿಕೊಳ್ಳಲಾದ ಹಲವು ಉತ್ಪನ್ನಗಳಲ್ಲಿ ಅನುಮತಿಸಿದ ಮಿತಿಗಿಂತ ಹೆಚ್ಚು ಪಾದರಸವಿರುವುದು ಕಂಡುಬಂದಿದೆ" ಎಂದು ಸಿನ್ಹಾ ಹೇಳಿದ್ದಾರೆ.
ಪೂರೈಕೆ ಜಾಲದ ತನಿಖೆ
ಮಾರ್ಚ್ನಿಂದೀಚೆಗೆ, ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಈ ಕ್ರೀಮ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ 70 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಸರಕನ್ನು ಜಪ್ತಿ ಮಾಡಿದೆ.
ಮಾರ್ಚ್ 29ರಂದು ಸಂಭಾಜಿನಗರದ ಪೊಲೀಸರು ಮತ್ತು FDA ಅಧಿಕಾರಿಗಳು ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿ 'ಗೋರಿ ಕಾಸ್ಮೆಟಿಕ್ಸ್' ಉತ್ಪನ್ನಗಳನ್ನು ವಶಪಡಿಸಿಕೊಂಡರು. "ಮುಂಬೈನ ಕ್ರಾಫರ್ಡ್ ಮಾರುಕಟ್ಟೆಯಿಂದ ಈ ಕ್ರೀಮ್ಗಳನ್ನು ಖರೀದಿಸಿದ್ದಾಗಿ ಅಂಗಡಿಯ ಮಾಲೀಕರು ತಿಳಿಸಿದರು. ಆದರೆ ಅವರ ಬಳಿ ಯಾವುದೇ ಬಿಲ್ ಅಥವಾ ಖರೀದಿ ಆದೇಶದ (ಪರ್ಚೇಸ್ ಆರ್ಡರ್) ಪ್ರತಿಗಳು ಇರಲಿಲ್ಲ" ಎಂದು ಪೌನಿಕರ್ ಹೇಳಿದ್ದಾರೆ.
ಈ ಎಲ್ಲಾ ಪ್ರಕರಣಗಳಲ್ಲೂ ಪೂರೈಕೆ ಜಾಲವನ್ನು ಪತ್ತೆಹಚ್ಚುವುದೇ ದೊಡ್ಡ ಸವಾಲಾಗಿದೆ. ಈ ಉತ್ಪನ್ನಗಳನ್ನು ಪೂರೈಸುವ ವ್ಯಕ್ತಿಗಳು ಅಥವಾ ವಿತರಕರ ಬಳಿಗೆ ನಮ್ಮನ್ನು ಕರೆದೊಯ್ಯಲು ಅಂಗಡಿಯವರಿಗೆ ಸಾಧ್ಯವಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ನಾವು ಪೊಲೀಸರಿಗೆ ಮನವಿ ಮಾಡಿದ್ದೇವೆ. ಈ ಉತ್ಪನ್ನಕ್ಕೆ ಆಮದು ಪರವಾನಗಿ ಸಿಕ್ಕಿದೆಯೇ ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ.
ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಲು ಯಾವುದೇ ಪರವಾನಗಿ ಅಗತ್ಯವಿಲ್ಲದಿರುವುದರಿಂದ, ನಕಲಿ ಅಥವಾ ಕಾನೂನುಬಾಹಿರ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸುವುದು ಸುಲಭವಾಗಿದೆ. ನಿಯಮಿತ ತಪಾಸಣೆಗಳ ಮೂಲಕ ಸೌಂದರ್ಯವರ್ಧಕಗಳ ತಯಾರಕರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. "ಆದರೆ ಕಾನೂನುಬಾಹಿರವಾಗಿ ತಯಾರಿಸುವವರಿದ್ದರೆ, ಅವರನ್ನು ಪತ್ತೆಹಚ್ಚುವುದು ಸುಲಭವಲ್ಲ" ಎಂದಿದ್ದಾರೆ ಪೌನಿಕರ್.
ಸೌಜನ್ಯ: scroll.in






