Gazaದಲ್ಲಿ ಯುದ್ಧಾಪರಾಧ ಎಸಗಿದ ಆರೋಪ ಹೊತ್ತ ಇಸ್ರೇಲ್ ಸೈನಿಕನನ್ನು ಭಾರತದಲ್ಲಿ ಪತ್ತೆ ಹಚ್ಚಿದ್ದು ಹೇಗೆ?

Photo Credit : scroll.in
ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡುವ ಸಾವಿರಾರು ಇತರ ಇಸ್ರೇಲಿಗರಂತೆ ಐಟನ್ ಗಿಲ್ಬೋವಾ ಕೂಡ ‘ಹುಮ್ಮಸ್ ಟ್ರೈಲ್’ ಮಾರ್ಗದಲ್ಲಿ ಚಾರಣ ಮಾಡುತ್ತಿದ್ದರು. ಆದರೆ, ಅವರು ಒಂದು ತಪ್ಪು ಮಾಡಿದರು. ಅದೇನೆಂದರೆ, ತಾವು ರಜಾದಿನಗಳನ್ನು ಕಳೆಯುತ್ತಿರುವ ಸ್ಥಳದ ಫೋಟೋಗಳನ್ನು ಅವರು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದರು.
ಇಸ್ರೇಲಿ ಸೈನಿಕನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಫೆಲೆಸ್ತೀನ್ ಪರ ಹೋರಾಟಗಾರರಿಗೆ ಇದು ದೊಡ್ಡ ಸುಳಿವಾಯಿತು. ಗಿಲ್ಬೋವಾ ಅವರು ಹಿಮಾಚಲ ಪ್ರದೇಶದ ಗಿರಿಧಾಮಗಳಲ್ಲಿದ್ದಾರೆ ಎಂಬುದನ್ನು ತೋರಿಸುವ ಈ ಪೋಸ್ಟ್ ಆಧರಿಸಿ, ‘ಹಿಂದ್ ರಜಬ್ ಫೌಂಡೇಶನ್’ ಭಾರತೀಯ ಅಧಿಕಾರಿಗಳಿಗೆ ದೂರು ನೀಡಲು ಮತ್ತು ಅವರ ಬಂಧನಕ್ಕೆ ಒತ್ತಾಯಿಸಲು ಮುಂದಾಯಿತು. ಗಾಝಾದಲ್ಲಿ ಅವರು ಯುದ್ಧಾಪರಾಧಗಳನ್ನು ಎಸಗಿದ್ದಾರೆ ಎಂದು ಈ ಫೌಂಡೇಶನ್ ಆರೋಪಿಸುತ್ತಿದೆ.
ಗಾಝಾ ಯುದ್ಧದಲ್ಲಿ ಭಾಗವಹಿಸಿದ್ದ ಇಸ್ರೇಲಿ ಸೈನಿಕರನ್ನು ಬಂಧಿಸಬೇಕೆಂಬ ಇಂತಹ ಬೇಡಿಕೆಗಳು ಇತರ ದೇಶಗಳಲ್ಲಿ ಕೇಳಿಬಂದಿವೆಯಾದರೂ, ಭಾರತದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತಿರುವುದು ಇದೇ ಮೊದಲು. ಗಿಲ್ಬೋವಾ ವಿರುದ್ಧ ಪ್ರಕರಣವನ್ನು ಹೇಗೆ ಸಿದ್ಧಪಡಿಸಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು scroll.in ಮಾಧ್ಯಮವು ಈ ಅಭಿಯಾನದ ಹಿಂದಿರುವ ವಕೀಲರು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿದೆ.
ತಮ್ಮ ದೂರು ಕಾನೂನುಬದ್ಧವಾಗಿ ಗಟ್ಟಿಯಾಗಿದೆ ಎಂದು ಅವರು ವಾದಿಸುತ್ತಾರಾದರೂ, ಭಾರತ ಮತ್ತು ಇಸ್ರೇಲ್ ನಡುವಿನ ಉತ್ತಮ ಬಾಂಧವ್ಯದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಇದರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ಅವರಿಗಿರಲಿಲ್ಲ.
ಆದರೂ, ಯುದ್ಧಾಪರಾಧಗಳ ಆರೋಪ ಎದುರಿಸುತ್ತಿರುವ ಇಸ್ರೇಲಿ ಸೈನಿಕರಿಗೆ ಭಾರತದಲ್ಲಿ ರಜೆ ಕಳೆಯಲು ಅವಕಾಶ ನೀಡಬೇಕೇ ಎಂಬ ಬಗ್ಗೆ ತಮ್ಮ ಈ ನಡೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಬಹುದು ಎಂದು ಅವರು ಆಶಿಸಿದ್ದರು. ತಾವು ದೂರಿನ ವಿವರಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಗಿಲ್ಬೋವಾ ಭಾರತವನ್ನು ತೊರೆದಿದ್ದಾರೆ ಎಂದು ಹಿಂದ್ ರಜಬ್ ಫೌಂಡೇಶನ್ ಪ್ರತಿಪಾದಿಸಿದೆ.
►ವಿನಾಶದಲ್ಲಿಯೂ ಹೆಮ್ಮೆ
2024ರಲ್ಲಿ ಗಾಝಾದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಕಾರಿನ ಮೇಲೆ ದಾಳಿ ನಡೆಸಿದಾಗ, ತನ್ನ ಕುಟುಂಬದೊಂದಿಗೆ ಸಾವನ್ನಪ್ಪಿದ ಆರು ವರ್ಷದ ಫೆಲೆಸ್ತೀನಿನ ಬಾಲಕಿ ಹಿಂದ್ ರಜಬ್ ಅವರ ನೆನಪಿನಲ್ಲಿ ಈ ಸಂಸ್ಥೆಗೆ ‘ಹಿಂದ್ ರಜಬ್ ಫೌಂಡೇಶನ್’ ಎಂದು ಹೆಸರಿಡಲಾಗಿದೆ.
ಬೆಲ್ಜಿಯಂ ಮೂಲದ ಈ ಫೌಂಡೇಶನ್ ನ ಸ್ವಯಂಸೇವಕರು ಇಸ್ರೇಲಿ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರು ಸಂಗ್ರಹಿಸುವ ಮಾಹಿತಿಯ ಆಧಾರದ ಮೇಲೆ, ಈ ಸೈನಿಕರು ಗಾಝಾ ಮತ್ತು ಇತರ ಫೆಲೆಸ್ತೀನಿನ ಪ್ರದೇಶಗಳಲ್ಲಿ ಎಸಗಿದ್ದಾರೆ ಎನ್ನಲಾದ ಕೃತ್ಯಗಳ ದಾಖಲೆಗಳನ್ನು ಸಿದ್ಧಪಡಿಸುತ್ತಾರೆ.
ಈ ದಾಖಲೆಗಳ ಆಧಾರದ ಮೇಲೆಯೇ ಇಸ್ರೇಲಿ ಸೈನಿಕರು ವಿದೇಶಗಳಿಗೆ ಭೇಟಿ ನೀಡಿದಾಗ ಅವರ ವಿರುದ್ಧ ದೂರುಗಳನ್ನು ದಾಖಲಿಸಲಾಗುತ್ತದೆ.
2024ರ ಸೆಪ್ಟೆಂಬರ್ ನಲ್ಲಿ ಇದು ಪ್ರಾರಂಭವಾದಾಗಿನಿಂದ, 1,000ಕ್ಕೂ ಹೆಚ್ಚು ಇಸ್ರೇಲ್ ರಕ್ಷಣಾ ಪಡೆಗಳ ಸಿಬ್ಬಂದಿ ಈ ಫೌಂಡೇಶನ್ ನ ನಿಗಾದಲ್ಲಿದ್ದಾರೆ. ಇದು ಈಗಾಗಲೇ ಸುಮಾರು 30 ದೇಶಗಳಲ್ಲಿ ಇಸ್ರೇಲಿ ಸೈನಿಕರ ವಿರುದ್ಧ ಸುಮಾರು 100 ದೂರುಗಳನ್ನು ದಾಖಲಿಸಿದೆ.
ಹಿಂದ್ ರಜಬ್ ಫೌಂಡೇಶನ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ತಕ್ಷಣವೇ ಐಟನ್ ಗಿಲ್ಬೋವಾ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು ಎಂದು ಅದರ ಕಾನೂನು ವಿಭಾಗದ ಮುಖ್ಯಸ್ಥೆ ನತಾಶಾ ಬ್ರಾಕ್ ‘scroll’ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಅವರು ಕನಿಷ್ಠ ಮೇ 2025ರವರೆಗೆ ಇಸ್ರೇಲ್ ರಕ್ಷಣಾ ಪಡೆಯಲ್ಲಿ ರಿಸರ್ವಿಸ್ಟ್ (ಮೀಸಲು ಸೈನಿಕ) ಆಗಿದ್ದರು ಎಂಬುದಕ್ಕೆ ಫೌಂಡೇಶನ್ ಬಳಿ ಪುರಾವೆಗಳಿವೆ. ರಿಸರ್ವಿಸ್ಟ್ ಗಳು ಎಂದರೆ ತರಬೇತಿ ಪಡೆದ ಅರೆಕಾಲಿಕ ಸೈನಿಕರಾಗಿದ್ದು, ಯುದ್ಧ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಇವರ ಸೇವೆಗಳನ್ನು ಸಶಸ್ತ್ರ ಪಡೆಗಳು ಬಳಸಿಕೊಳ್ಳುತ್ತವೆ.
ಗಾಝಾದಲ್ಲಿ ಗಿಲ್ಬೋವಾ ಉಂಟುಮಾಡಿದ್ದಾರೆನ್ನಲಾದ ವಿನಾಶದ ಫೋಟೋಗಳು ಮತ್ತು ವೀಡಿಯೋಗಳನ್ನು ಫೌಂಡೇಶನ್ ನ ಸಂಶೋಧಕರು ಮೊದಲು ಅವರ ತಾಯಿ ತಮಾರ್ ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್ ನಲ್ಲಿ ಗಮನಿಸಿದ್ದರು. ಇಸ್ರೇಲಿಗರು ಗಾಝಾ ಯುದ್ಧದ ಫೋಟೋಗಳು ಮತ್ತು ವೀಡಿಯೋಗಳನ್ನು ಪೋಸ್ಟ್ ಮಾಡುವುದು ಸಾಮಾನ್ಯವಾಗಿದ್ದರೂ, ಗಿಲ್ಬೋವಾ ಕುಟುಂಬವು ಇದನ್ನು ಮಾಡಲು ಒಂದು ಬಲವಾದ ಕಾರಣವಿರಬಹುದು ಎಂದು ಬ್ರಾಕ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುಟುಂಬವು ಈ ಹಿಂದೆ ಗಾಝಾದಲ್ಲಿದ್ದ ವಸಾಹತುವೊಂದರಲ್ಲಿ ವಾಸಿಸುತ್ತಿತ್ತು. ಆದರೆ, 2005ರಲ್ಲಿ ಇಸ್ರೇಲ್ ಈ ಕರಾವಳಿ ಪ್ರದೇಶದಿಂದ ಹಿಂದೆ ಸರಿದಾಗ ಅವರು ಅದನ್ನು ಖಾಲಿ ಮಾಡಬೇಕಾಯಿತು ಎಂದು ಬ್ರಾಕ್ ಹೇಳಿದ್ದಾರೆ. ಹಾಗಾಗಿ, ಯುವ ಐಟನ್ ಇಸ್ರೇಲ್ ರಕ್ಷಣಾ ಪಡೆಗೆ ಸೇರಿ ಗಾಝಾದಲ್ಲಿ ನಿಯೋಜನೆಗೊಂಡಾಗ, ಅದು ಆ ಕುಟುಂಬಕ್ಕೆ ಅತ್ಯಂತ ಭಾವುಕ ಕ್ಷಣವಾಗಿತ್ತು.
“ಅವರು ಅಲ್ಲಿಗೆ ಹಿಂತಿರುಗಲು ಉತ್ಸುಕರಾಗಿದ್ದರು” ಎಂದು ಬ್ರಾಕ್ ತಿಳಿಸಿದ್ದಾರೆ. ಐಟನ್ ಅವರ ತಾಯಿ ಗಾಝಾದಲ್ಲಿ ಕಳೆದ ತಮ್ಮ ದಿನಗಳ ಬಗ್ಗೆ ಒಂದು ಪುಸ್ತಕವನ್ನು ಬರೆದಿದ್ದರು. ಐಟನ್ ಆ ಪುಸ್ತಕವನ್ನು ತಾವು ಹಿಂದೆ ವಾಸಿಸುತ್ತಿದ್ದ ವಿವಿಧ ಸ್ಥಳಗಳಿಗೆ ಕೊಂಡೊಯ್ದು ಫೋಟೋಗಳನ್ನು ತೆಗೆದಿದ್ದರು. ಇದು ಇಸ್ರೇಲಿಗರ ಪ್ರಸ್ತುತ ರಾಜಕೀಯ ಮನಸ್ಥಿತಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.
ಅವರ ತಾಯಿಯ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಎಲ್ಲರಿಗೂ ಮುಕ್ತವಾಗಿ ಲಭ್ಯವಿದ್ದುದು ಸಂಶೋಧಕರಿಗೆ ಮತ್ತಷ್ಟು ಸಹಕಾರಿಯಾಯಿತು. “ಅದು ಸಾರ್ವಜನಿಕವಾಗಿ ಲಭ್ಯವಿತ್ತು. ಅವರು ಗಾಝಾದಲ್ಲಿ ತಮ್ಮ ಮಗ ಐಟನ್ ಮಾಡಿದ ವಿನಾಶದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದ್ದರು” ಎಂದು ಬ್ರಾಕ್ ವಿವರಿಸಿದ್ದಾರೆ.
►ಪ್ರಕರಣ ಸಿದ್ಧಪಡಿಸಿದ್ದು ಹೇಗೆ?
ಗಿಲ್ಬೋವಾ ಅವರ ತಾಯಿ ಜನವರಿ 2024ರಲ್ಲಿ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾರೆನ್ನಲಾದ ವೀಡಿಯೋಗಳಲ್ಲೊಂದು, ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ನಡೆದ ಸ್ಫೋಟವನ್ನು ನೋಡಿ ಐಟನ್ ಮತ್ತು ಇತರ ಇಸ್ರೇಲಿ ಸೈನಿಕರು ಸಂಭ್ರಮಿಸುವುದನ್ನು ತೋರಿಸುತ್ತದೆ. “IDF ಎಂದರೆ ಏನೆಂದು ಐಟನ್ ತೋರಿಸುತ್ತಿದ್ದಾನೆ” ಎಂದು ಅವರು ಅದರ ಶೀರ್ಷಿಕೆಯಲ್ಲಿ ಬರೆದಿದ್ದಾರೆ ಎಂದು ಫೌಂಡೇಶನ್ ಹೇಳಿದೆ.
ಈ ವೀಡಿಯೋಗಳನ್ನು ಕಳೆದ ತಿಂಗಳು ದೂರಿನ ಭಾಗವಾಗಿ ಭಾರತ ಸರ್ಕಾರಕ್ಕೆ ಸಲ್ಲಿಸಲಾಗಿದೆ. ತಮ್ಮ ನಿಜವಾದ ಹೆಸರನ್ನು ಬಹಿರಂಗಪಡಿಸದಂತೆ ವಿನಂತಿಸಿರುವ ಭಾರತದ 31 ವರ್ಷದ ವಕೀಲೆ ಪೂಜಾ, ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಿಂದ್ ರಜಬ್ ಫೌಂಡೇಶನ್ ಇದಕ್ಕೂ ಮುನ್ನ ಭಾರತದ ಅಧಿಕಾರಿಗಳಿಗೆ ಯಾವುದೇ ದೂರು ನೀಡಿರಲಿಲ್ಲ. ಕಳೆದ ಮಾರ್ಚ್ನಲ್ಲಿ ಆಮ್ಸ್ಟರ್ಡ್ಯಾಮ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪೂಜಾ ಅವರು ಈ ಸಂಸ್ಥೆಯ ಪ್ರತಿನಿಧಿಯನ್ನು ಮೊದಲ ಬಾರಿಗೆ ಭೇಟಿಯಾದಾಗ, “ಇಸ್ರೇಲಿ ಸೈನಿಕರಿಗೆ ಭಾರತವು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರೂ, ಅವರ ವಿರುದ್ಧ ಇಲ್ಲಿ ಏಕೆ ದೂರು ದಾಖಲಿಸಿಲ್ಲ?” ಎಂದು ಪ್ರಶ್ನಿಸಿದ್ದರು. ಫೌಂಡೇಶನ್ ನ ಕೆಲಸಗಳ ಬಗ್ಗೆ ಅವರಿಗೆ ಮೊದಲೇ ತಿಳಿದಿದ್ದರಿಂದ, ಅಗತ್ಯವಿದ್ದರೆ ಭಾರತದ ಕಾನೂನು ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಾಗಿ ಅವರು ಆಫರ್ ನೀಡಿದ್ದರು.
ಕೆಲವೇ ದಿನಗಳಲ್ಲಿ, ಅವರು ಮತ್ತು ಫೌಂಡೇಶನ್ ನ ಕಾನೂನು ತಂಡವು ಸರಣಿ ಮಾತುಕತೆಗಳನ್ನು ನಡೆಸಿ, ಪ್ರಸ್ತುತ ಭಾರತದಲ್ಲಿರುವ ಮತ್ತು ಯುದ್ಧಾಪರಾಧಗಳ ಆರೋಪ ಎದುರಿಸುತ್ತಿರುವ ಇಸ್ರೇಲಿ ಸೈನಿಕರನ್ನು ಪತ್ತೆಹಚ್ಚುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಕೊನೆಗೆ ಮೇ ತಿಂಗಳಲ್ಲಿ, ಅವರಿಗೆ ಒಂದು ಬಲವಾದ ಸುಳಿವು ಸಿಕ್ಕಿತು. ಸಂಶೋಧಕರಿಗೆ ಗಿಲ್ಬೋವಾ ಅವರು ಹಿಮಾಚಲ ಪ್ರದೇಶದಿಂದ ಪೋಸ್ಟ್ ಮಾಡಿದ್ದ ವೀಡಿಯೋವೊಂದು ಸಿಕ್ಕಿತ್ತು. ಆದರೆ, ಅಲ್ಲೊಂದು ಸಮಸ್ಯೆ ಇತ್ತು.
“ಅವರು ಹಿಮಾಚಲ ಪ್ರದೇಶದ ಯಾವ ಸ್ಥಳದಲ್ಲಿದ್ದಾರೆ ಎಂದು ನಮಗೆ ನಿಖರವಾಗಿ ತಿಳಿಯುತ್ತಿರಲಿಲ್ಲ” ಎಂದು ಪೂಜಾ ಹೇಳಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅವರ ನಿಖರವಾದ ಸ್ಥಳದ ಮಾಹಿತಿ ಅಗತ್ಯವಾಗಿತ್ತು. “ನಾನು ಆ ವೀಡಿಯೋ ಕ್ಲಿಪ್ ಅನ್ನು ಹಲವು ಬಾರಿ ವೀಕ್ಷಿಸಿದೆ.”
ಕೊನೆಗೆ, ವೀಡಿಯೋದಲ್ಲಿದ್ದ ಒಂದು ಸೈನ್ಬೋರ್ಡ್ ನೋಡಿ ಗೆಸ್ಟ್ಹೌಸ್ನ ಹೆಸರನ್ನು ಪತ್ತೆಹಚ್ಚುವಲ್ಲಿ ಅವರು ಯಶಸ್ವಿಯಾದರು. ನಂತರ ಅವರು ಹಿಮಾಚಲ ಪ್ರದೇಶದಲ್ಲಿ ಅದೇ ಹೆಸರಿನ ಎಲ್ಲಾ ಗೆಸ್ಟ್ಹೌಸ್ ಗಳಿಗಾಗಿ ಹುಡುಕಾಟ ನಡೆಸಿದರು.
“ನಾನು ಗೂಗಲ್ ಮ್ಯಾಪ್ಸ್ನಲ್ಲಿ ಗಂಟೆಗಟ್ಟಲೆ ಹುಡುಕಾಡಿದೆ. ಕೊನೆಗೆ, ಅದು ಗೊಂಡ್ಲಾ (Gondhla) ಗ್ರಾಮದಲ್ಲಿದೆ ಎಂಬುದನ್ನು ಪತ್ತೆಹಚ್ಚಿದೆ” ಎಂದು ಪೂಜಾ ಹೇಳಿದ್ದಾರೆ.
ವೀಡಿಯೋದಲ್ಲಿ ಗೆಸ್ಟ್ಹೌಸ್ ಪಕ್ಕದಲ್ಲೇ ಒಂದು ಬ್ಯಾಂಕ್ ಇರುವುದನ್ನೂ ಪೂಜಾ ಗಮನಿಸಿದ್ದರು. ಗೊಂಡ್ಲಾ ಗ್ರಾಮದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಅವರು ಗೂಗಲ್ ಮ್ಯಾಪ್ಸ್ನ ಸ್ಟ್ರೀಟ್-ವ್ಯೂ ದೃಶ್ಯಗಳೊಂದಿಗೆ ಅದನ್ನು ಹೋಲಿಸಿ ನೋಡಿದರು.
“ಈ ಮೂಲಕವೇ ನಾವು ಹಿಮಾಚಲ ಪ್ರದೇಶ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದೆವು” ಎಂದು ಪೂಜಾ ಹೇಳಿದ್ದಾರೆ.
►ಭಾರತದ ಕಾನೂನು ಸವಾಲುಗಳು
ಹಿಂದ್ ರಜಬ್ ಫೌಂಡೇಶನ್ ಹಿಮಾಚಲ ಪ್ರದೇಶ ಪೊಲೀಸರಿಗೆ ಇಮೇಲ್ ಮೂಲಕ ನೀಡಿದ ದೂರಿನಲ್ಲಿ, ಭಾರತದ ಸಂಸತ್ತು 1960ರಲ್ಲಿ ಅಂಗೀಕರಿಸಿದ ‘ಜಿನೀವಾ ಕನ್ವೆನ್ಷನ್ಸ್ ಆಕ್ಟ್’ ಅನ್ನು ಉಲ್ಲೇಖಿಸಿದೆ. ಈ ಕಾಯ್ದೆಯು ಜಗತ್ತಿನಾದ್ಯಂತದ ಸರ್ಕಾರಗಳ ಯುದ್ಧಕಾಲದ ನಡವಳಿಕೆಯನ್ನು ನಿಯಂತ್ರಿಸುವ ನಾಲ್ಕು ಜಿನೀವಾ ಒಪ್ಪಂದಗಳಿಗೆ ಭಾರತೀಯ ಕಾನೂನಿನಡಿ ಮಾನ್ಯತೆ ನೀಡುತ್ತದೆ. ಭಾರತವು ಸ್ವಾತಂತ್ರ್ಯ ಬಂದ ತಕ್ಷಣವೇ, ಅಂದರೆ 1950ರಲ್ಲಿ ಈ ಒಪ್ಪಂದಗಳನ್ನು ಅಂಗೀಕರಿಸಿತ್ತು.
ಈ ದೂರಿನ ಜೊತೆಗೆ, ಗೃಹ ಸಚಿವಾಲಯದ ಅಡಿಯಲ್ಲಿ ಬರುವ ವಲಸೆ ಬ್ಯೂರೋಗೆ ಫೌಂಡೇಶನ್ ಪತ್ರ ಬರೆದಿದ್ದು, ‘ವಲಸೆ ಮತ್ತು ವಿದೇಶಿಯರ ಕಾಯ್ದೆ–2025’ರ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿ ಐಟನ್ ಗಿಲ್ಬೋವಾ ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ವಿನಂತಿಸಿದೆ.
ಮೋದಿ ಸರ್ಕಾರವು ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ವಕೀಲೆ ಪೂಜಾ ಅವರ ಪ್ರಕಾರ, ಇಂತಹ ಪ್ರಕರಣಗಳಿಗೆ ಭಾರತೀಯ ಕಾನೂನಿನಲ್ಲಿ ಯಾವುದೇ ಪೂರ್ವನಿದರ್ಶನಗಳಿಲ್ಲ. ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಕೂಡ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಭಾರತವು ಈ ನ್ಯಾಯಾಲಯವನ್ನು ಸ್ಥಾಪಿಸಿದ ‘ರೋಮ್ ಶಾಸನ’ಕ್ಕೆ ಸಹಿ ಹಾಕಿಲ್ಲ.
ತಮ್ಮ ಕಾನೂನು ಕಾರ್ಯತಂತ್ರದ ಬಗ್ಗೆ ಕೇಳಿದಾಗ, ಪೂಜಾ ಅವರು ಇದನ್ನು “ಬೋರ್ಡ್ ಮೇಲೆ ಬಾಣಗಳನ್ನು ಎಸೆದು ಯಾವುದು ಗುರಿಗೆ ತಗುಲುತ್ತದೆ ಎಂದು ಕಾಯುವ” ಪ್ರಯತ್ನಕ್ಕೆ ಹೋಲಿಸಿದರು. ಇದೇ ರೀತಿಯ ದೂರುಗಳ ಮೇಲೆ ಕ್ರಮ ಕೈಗೊಂಡಿರುವ ಕೆನಡಾ ಮತ್ತು ಬ್ರೆಝಿಲ್ ನಂತಹ ದೇಶಗಳ ಹಾದಿಯನ್ನು ಭಾರತವೂ ಅನುಸರಿಸಬೇಕು ಎಂಬುದು ಅವರ ಬಯಕೆ. ಆದರೆ, ಭಾರತ ಮತ್ತು ಇಸ್ರೇಲ್ ನಡುವಿನ ಸೌಹಾರ್ದಯುತ ಸಂಬಂಧದ ಹಿನ್ನೆಲೆಯಲ್ಲಿ, ಭಾರತದಲ್ಲಿ ಇದಕ್ಕೆ ಪೂರಕವಾದ “ರಾಜಕೀಯ ಇಚ್ಛಾಶಕ್ತಿ” ಇಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.
ವಾಸ್ತವವಾಗಿ, ಗಾಝಾದಲ್ಲಿ ನಡೆಯುತ್ತಿರುವ ನರಮೇಧದ ಹೊರತಾಗಿಯೂ, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ನೊಂದಿಗೆ ತನ್ನ ಸಂಬಂಧವನ್ನು ಗಣನೀಯವಾಗಿ ವಿಸ್ತರಿಸಿಕೊಂಡಿರುವ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದಾಗಿದೆ. 2020 ಮತ್ತು 2024ರ ನಡುವೆ, ಭಾರತವು ಇಸ್ರೇಲಿ ಶಸ್ತ್ರಾಸ್ತ್ರಗಳ ಅತಿ ದೊಡ್ಡ ಖರೀದಿದಾರನಾಗಿ ಹೊರಹೊಮ್ಮಿದೆ.
ರಾಜಕೀಯವಾಗಿಯೂ ಭಾರತ ಎಂದಿಗಿಂತಲೂ ಹೆಚ್ಚು ಇಸ್ರೇಲ್ನೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದೆ. ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಅನ್ನು ಖಂಡಿಸುವ ನಿರ್ಣಯಗಳ ಮೇಲಿನ ಮತದಾನದಿಂದ ಭಾರತವು ಪದೇ ಪದೇ ದೂರ ಉಳಿದಿದೆ. ಫೆಬ್ರುವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಿ, ಆ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ವಿರುದ್ಧ ಯುದ್ಧ ಘೋಷಿಸುವ ಕೆಲವೇ ದಿನಗಳ ಮೊದಲು ಅವರನ್ನು ಶ್ಲಾಘಿಸಿದ್ದರು. ನೆತನ್ಯಾಹು ಕೂಡ ಭಾರತದಲ್ಲಿ ಇಸ್ರೇಲ್ ಗೆ ಸಿಗುತ್ತಿರುವ “ಅತ್ಯಂತ ಅದ್ಭುತವಾದ ಬೆಂಬಲ”ದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
►ಪ್ರವಾಸ ಅರ್ಧಕ್ಕೆ ಮೊಟಕು?
ಕೆನಡಾದಲ್ಲಿ ಹಿಂದ್ ರಜಬ್ ಫೌಂಡೇಶನ್ ನೀಡಿದ ದೂರಿನ ಮೇರೆಗೆ ಇಸ್ರೇಲ್ ನ ಮೀಸಲು ಸೈನಿಕನೊಬ್ಬನ ವೀಸಾವನ್ನು ರದ್ದುಗೊಳಿಸಲಾಗಿತ್ತು. ಬೆಲ್ಜಿಯಂನಲ್ಲಿ ನಡೆದ ಸಂಗೀತ ಉತ್ಸವವೊಂದರಲ್ಲಿ ಇಸ್ರೇಲಿ ಸೈನಿಕರು ಸೇನಾ ಧ್ವಜಗಳನ್ನು ಪ್ರದರ್ಶಿಸಿದ ಬಗ್ಗೆ ಫೌಂಡೇಶನ್ ನೀಡಿದ್ದ ದೂರು ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಮೆಟ್ಟಿಲೇರಿತ್ತು.
ಕಡ್ಡಾಯ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಭೇಟಿ ನೀಡುವ ಇಸ್ರೇಲಿ ಪ್ರವಾಸಿಗರಿಗೆ ಭಾರತವು ದೀರ್ಘಕಾಲದಿಂದಲೂ ನೆಚ್ಚಿನ ತಾಣವಾಗಿದೆ. ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, 2024ರಲ್ಲಿ 47,465 ಇಸ್ರೇಲಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಇವರ ವಾಸ್ತವ್ಯದ ಅವಧಿಯೂ ದೀರ್ಘವಾಗಿತ್ತು. ಪ್ರತಿಯೊಬ್ಬರೂ ಭಾರತದಲ್ಲಿ ಸರಾಸರಿ 24 ದಿನಗಳನ್ನು ಕಳೆದಿದ್ದಾರೆ.
They Knew. Everyone Knew.
— তন্ময় l T͞anmoy l (@tanmoyofc) June 14, 2026
For years Kasol’s Forests became Open-air Rave & Drug Zones for ISRAELI TOURISTS While Netas & Police Played "We Had No Idea Why It’s Famous."
Finally the Himachal High Court had to Step In.
Ordered Immediate Spot Inspection + Personal Affidavits from… pic.twitter.com/GLc9FMBnwv
ಹಿಂದ್ ರಜಬ್ ಫೌಂಡೇಶನ್ ದೂರು ದಾಖಲಿಸಲು ತಾವೂ ನೆರವಾದ ಈ ಕ್ರಮವು, ಭಾರತಕ್ಕೆ ರಜೆ ಕಳೆಯಲು ಬರುವ ಇಸ್ರೇಲಿ ಸೈನಿಕರ ಹಿನ್ನೆಲೆಯನ್ನು ಪರಿಶೀಲಿಸುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರಬಹುದು ಎಂದು ಪೂಜಾ ಆಶಿಸಿದ್ದರು.
“ಅವರು ಯಾವುದೇ ಶಿಕ್ಷೆಯ ಭಯವಿಲ್ಲದೆ ಇಲ್ಲಿ ಓಡಾಡುವುದನ್ನು ನಾನು ಬಯಸುವುದಿಲ್ಲ. ಭಾರತವು ಅವರಿಗೆ ಸುರಕ್ಷಿತ ತಾಣವಾಗುವುದು ನನಗಿಷ್ಟವಿಲ್ಲ. ಅವರು ಅಲ್ಲಿ ಜನರನ್ನು ಹೇಗೆ ಬೇಟೆಯಾಡುತ್ತಿದ್ದಾರೋ, ಅದೇ ರೀತಿ ಇಲ್ಲಿಯೂ ಯಾರೋ ತಮ್ಮನ್ನು ಬೆನ್ನಟ್ಟುತ್ತಿದ್ದಾರೆ ಎಂಬ ಭಯ ಅವರಲ್ಲಿ ಮೂಡಬೇಕು. ಅವರು ನನ್ನ ದೇಶಕ್ಕೆ ಬರುವುದು ಬೇಡ. ಅವರು ಇಲ್ಲಿಂದ ತೊಲಗಬೇಕು ಎಂದು ನಾನು ಬಯಸುತ್ತೇನೆ” ಎಂದು ಪೂಜಾ ಹೇಳಿದ್ದಾರೆ.
ಗಿಲ್ಬೋವಾ ವಿಷಯದಲ್ಲಿ ಅವರ ಈ ಆಸೆ ಈಡೇರಿದಂತಿದೆ. ಹೆಚ್ಚಿನ ವಿವರಗಳನ್ನು ನೀಡದೆ, ಹಿಂದ್ ರಜಬ್ ಫೌಂಡೇಶನ್ ನ ಬ್ರಾಕ್ ಅವರು, ದೂರು ದಾಖಲಾದ ಬೆನ್ನಲ್ಲೇ ಈ ಸೈನಿಕ ಬಹುತೇಕ ಭಾರತವನ್ನು ತೊರೆದಿದ್ದಾನೆ ಎಂದು ಹೇಳಿದ್ದಾರೆ. ಇತರ ಹಲವಾರು ದೇಶಗಳಲ್ಲೂ ಫೌಂಡೇಶನ್ ದೂರು ನೀಡಿದ ತಕ್ಷಣವೇ ಇಸ್ರೇಲ್ ರಾಯಭಾರ ಕಚೇರಿಗಳು ಮಧ್ಯಪ್ರವೇಶಿಸಿ ಸೈನಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಹೊರಗೆ ಕರೆದೊಯ್ದಿವೆ ಎಂದು ಅವರು ತಿಳಿಸಿದ್ದಾರೆ.
‘scroll’ ಮಾಧ್ಯಮಕ್ಕೆ ಈ ಮಾಹಿತಿಯನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೊಸದಿಲ್ಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರಿಗೆ ಕಳುಹಿಸಲಾದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.
“ನಮ್ಮ ಚಟುವಟಿಕೆಗಳಿಂದ ಇಸ್ರೇಲಿಗರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ತಮ್ಮ ಸೈನಿಕರು ಎಸಗಿರುವ ಅಪರಾಧಗಳಿಗೆ ನಮ್ಮ ಬಳಿ ಪುರಾವೆಗಳಿವೆ ಎಂಬುದು ಅವರಿಗೆ ತಿಳಿದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಪರಾಧಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸುವಂತೆ ಅವರು ತಮ್ಮ ಸೈನಿಕರಿಗೆ ತಿಳಿಸಿದ್ದಾರೆ. ಆದರೆ, ಈಗ ಕಾಲ ಮಿಂಚಿ ಹೋಗಿದೆ” ಎಂದು ಬ್ರಾಕ್ ಹೇಳಿದ್ದಾರೆ.
ಸೌಜನ್ಯ: scroll.in






