ಝೀ ಸಂಸ್ಥಾಪಕ ಸುಭಾಷ್ ಚಂದ್ರ ಅವರ 22,006 ಕೋಟಿ ರೂ. ಸಾಲ ಕೇವಲ 6.25 ಕೋಟಿ ರೂ.ಗೆ ಇಳಿದಿದ್ದು ಹೇಗೆ?

ಸುಭಾಷ್ ಚಂದ್ರ | Photo Credit : India Today
ಝೀ ಸಮೂಹದ ಸಂಸ್ಥಾಪಕ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನದ ಪ್ರಕರಣದಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ (NCLT) ಮರುಪಾವತಿ ಯೋಜನೆಗೆ ಅನುಮೋದನೆ ನೀಡಿದೆ. ಇದರ ಪ್ರಕಾರ, 22,006 ಕೋಟಿ ರೂ. ಮೊತ್ತದ ಸಾಲದ ಪೈಕಿ ಕೇವಲ 6.25 ಕೋಟಿ ರೂ. ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವರಿಗೆ ಅವಕಾಶ ನೀಡಲಾಗಿದೆ.
ಈ ಆದೇಶವು ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಈ ಮರುಪಾವತಿ ಮೊತ್ತವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಸಾಲದಾತರು ಹೇಳಿದ್ದರೆ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಸಾಲ ಮನ್ನಾದ ಅಂಕಿ-ಅಂಶಗಳು ದಾರಿ ತಪ್ಪಿಸುವಂತಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮತ್ತೊಂದೆಡೆ, ತಮ್ಮ ಮೇಲಿರುವ ಸಾಲದ ಮೊತ್ತದ ಪ್ರಮಾಣವನ್ನೇ ಸುಭಾಷ್ ಚಂದ್ರ ಪ್ರಶ್ನಿಸಿದ್ದಾರೆ. ಈ ಇಡೀ ಬೆಳವಣಿಗೆಯ ವಿವರ ಇಲ್ಲಿದೆ.
ನ್ಯಾಯಾಧಿಕರಣ (NCLT) ವಾಸ್ತವವಾಗಿ ಅನುಮೋದಿಸಿದ್ದೇನು?
ಇಬ್ಬರು ಸದಸ್ಯರ ನಡುವೆ ಭಿನ್ನ ತೀರ್ಪು ಬಂದಿದ್ದರಿಂದ, ನ್ಯಾಯಾಧಿಕರಣದ ದಿಲ್ಲಿ ಪೀಠವು ಈ ಪ್ರಕರಣವನ್ನು ಮೂರನೇ ಸದಸ್ಯರಾದ ನ್ಯಾಯಾಂಗ ಸದಸ್ಯ ನಿಲೇಶ್ ಶರ್ಮಾ ಅವರಿಗೆ ವಹಿಸಿತು. ಬಳಿಕ, ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಸಿ ಕೋಡ್ (IBC) ಕಾಯ್ದೆಯ ಸೆಕ್ಷನ್ 114ರ ಅಡಿಯಲ್ಲಿ ಅವರು ಮಂಗಳವಾರ ಈ ಯೋಜನೆಗೆ ಅನುಮೋದನೆ ನೀಡಿದರು.
‘ಇಕನಾಮಿಕ್ ಟೈಮ್ಸ್’ ವರದಿಯ ಪ್ರಕಾರ, ಈ ಯೋಜನೆಯಲ್ಲಿ ಸುಭಾಷ್ ಚಂದ್ರ ಅವರು ಜಾಮೀನುದಾರರಾಗಿ ವೈಯಕ್ತಿಕವಾಗಿ 6.25 ಕೋಟಿ ರೂ. ಪಾವತಿಸಲಿದ್ದಾರೆ. ಇದರ ಜೊತೆಗೆ, ಸಾಲ ಪಡೆದ ಮೂಲ ಕಂಪೆನಿಗಳು ಪ್ರತ್ಯೇಕವಾಗಿ ಸುಮಾರು 1,494 ಕೋಟಿ ರೂ. ಪಾವತಿಸಬೇಕಿದೆ. ಶೇ 80.8ರಷ್ಟು ಮತದಾನದ ಹಕ್ಕನ್ನು ಹೊಂದಿರುವ ಸಾಲದಾತ ಸಂಸ್ಥೆಗಳು ಈ ಯೋಜನೆಗೆ ಬೆಂಬಲ ನೀಡಿದ್ದವು. ಆದರೆ LIC ಹೌಸಿಂಗ್ ಫೈನಾನ್ಸ್, HDFC ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, RBL ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಗಳು ಇದರ ವಿರುದ್ಧವಾಗಿ ಮತ ಚಲಾಯಿಸಿದವು.
ತಮ್ಮ ಆದೇಶದಲ್ಲಿ ಶರ್ಮಾ ಅವರು, ಪರಿಹಾರ ಅಧಿಕಾರಿಯ ಮೌಲ್ಯಮಾಪನವು ಸುಭಾಷ್ ಚಂದ್ರ ಅವರ ವೈಯಕ್ತಿಕ ಆಸ್ತಿಯ ಮೌಲ್ಯವು ಈ ಯೋಜನೆಯಲ್ಲಿ ನೀಡಲಾಗಿರುವ ಮೊತ್ತಕ್ಕಿಂತ ತೀರಾ ಕಡಿಮೆಯಿದೆ ಎಂಬುದನ್ನು ತೋರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅವರನ್ನು ಸಂಪೂರ್ಣ ದಿವಾಳಿ ಸ್ಥಿತಿಗೆ ತಳ್ಳಿದರೆ ಆಕ್ಷೇಪ ವ್ಯಕ್ತಪಡಿಸಿರುವ ಸಾಲದಾತ ಸಂಸ್ಥೆಗಳ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು, ಯಾವುದೇ ಸುಧಾರಣೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘99.97% ಸಾಲ ಮನ್ನಾ’ ಎಂಬ ವರದಿಗಳು ದಾರಿ ತಪ್ಪಿಸುವಂತಿವೆ ಎಂದು ಅಧಿಕಾರಿಗಳು ಹೇಳುತ್ತಿರುವುದೇಕೆ?
ನ್ಯಾಯಾಧಿಕರಣದ ಆದೇಶದ ಮಾಹಿತಿ ಹೊಂದಿರುವ ಮೂಲಗಳು ಪಿಟಿಐಗೆ ತಿಳಿಸಿರುವಂತೆ, NCLT ಅನುಮೋದನೆ ನೀಡಿದೆ ಎಂದರೆ ಬ್ಯಾಂಕ್ ಗಳು 22,000 ಕೋಟಿ ರೂ. ಸಾಲದ ಶೇ 99.97ರಷ್ಟು ಭಾಗವನ್ನು ಮನ್ನಾ ಮಾಡಿವೆ ಎಂದರ್ಥವಲ್ಲ. ಈ 22,006 ಕೋಟಿ ರೂ. ಎಂಬುದು ಎಸ್ಸೆಲ್/ಝೀ ಸಮೂಹಕ್ಕೆ ಸೇರಿದ ವಿವಿಧ ಕಂಪೆನಿಗಳು ಪಡೆದ ಸಾಲಕ್ಕೆ ಸುಭಾಷ್ ಚಂದ್ರ ಅವರು ವೈಯಕ್ತಿಕ ಜಾಮೀನುದಾರರಾಗಿ ನೀಡಿರುವ ಭರವಸೆಯ ಮೊತ್ತವೇ ಹೊರತು, ಅವರು ಸ್ವತಃ ಪಡೆದ ಸಾಲವಲ್ಲ ಎಂದು ತಿಳಿಸಿವೆ.
ಸಾಲವನ್ನು ಪಡೆದುಕೊಂಡ ಸಮಯದಲ್ಲಿ ಸುಭಾಷ್ ಚಂದ್ರ ನೀಡಿದ್ದ ವೈಯಕ್ತಿಕ ಜಾಮೀನಿನ ಮೊತ್ತ ಸುಮಾರು 2,574 ಕೋಟಿ ರೂ. ಮಾತ್ರ. ಉಳಿದ ಹೆಚ್ಚಿನ ಜಾಮೀನುಗಳನ್ನು ನಂತರದ ದಿನಗಳಲ್ಲಿ ಹೆಚ್ಚುವರಿ ಭದ್ರತೆಯಾಗಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸಾಲ ಪಡೆದ ಮೂಲ ಕಂಪೆನಿಗಳು ತಮ್ಮ ಸಾಲದ ಮರುಪಾವತಿಗೆ ಇಂದಿಗೂ ಜವಾಬ್ದಾರರಾಗಿರುತ್ತವೆ. ಸುಭಾಷ್ ಚಂದ್ರ ಅವರ ವೈಯಕ್ತಿಕ ಇತ್ಯರ್ಥದಿಂದ ಪ್ರತ್ಯೇಕವಾಗಿ, ಆ ಕಂಪೆನಿಗಳಿಂದ, ಅವುಗಳ ಆಸ್ತಿ-ಪಾಸ್ತಿಗಳಿಂದ ಹಾಗೂ ಲಭ್ಯವಿರುವ ಭದ್ರತೆಗಳಿಂದ ತಮ್ಮ ಬಾಕಿ ಹಣವನ್ನು ವಸೂಲಿ ಮಾಡುವ ಹಕ್ಕನ್ನು ಸಾಲದಾತ ಬ್ಯಾಂಕ್ ಗಳು ಕಾಯ್ದುಕೊಂಡಿವೆ.
ಸರ್ಕಾರಿ ಮೂಲಗಳು ಸಹ ‘ಇಕನಾಮಿಕ್ ಟೈಮ್ಸ್’ಗೆ ನೀಡಿದ ಹೇಳಿಕೆಯಲ್ಲಿ ಇದೇ ವಿಷಯವನ್ನು ಸ್ಪಷ್ಟಪಡಿಸಿದ್ದು, ಸುಭಾಷ್ ಚಂದ್ರ ಅವರು ವೈಯಕ್ತಿಕವಾಗಿ 22,000 ಕೋಟಿ ರೂ. ಸಾಲ ಪಡೆದಿಲ್ಲ ಎಂದು ಹೇಳಿವೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಸಾಲ ಮನ್ನಾದ ಅಂಕಿ-ಅಂಶವು ಜಾಮೀನುದಾರರಾಗಿ ಅವರಿಂದ ವಸೂಲಿ ಮಾಡಬಹುದಾದ ಮೊತ್ತಕ್ಕೆ ಮಾತ್ರ ಅನ್ವಯಿಸುತ್ತದೆಯೇ ಹೊರತು, ಕಂಪೆನಿಗಳ ಒಟ್ಟು ಸಾಲಕ್ಕಲ್ಲ ಎಂದು ತಿಳಿಸಿವೆ.
ಸಾಲದಾತ ಸಂಸ್ಥೆಗಳು ಈ ಯೋಜನೆಯಿಂದ ಅಸಮಾಧಾನಗೊಳ್ಳಲು ಕಾರಣವೇನು?
ಆಕ್ಷೇಪ ವ್ಯಕ್ತಪಡಿಸಿರುವ ಸಾಲದಾತ ಸಂಸ್ಥೆಗಳಲ್ಲಿ ಒಂದಾದ LIC ಹೌಸಿಂಗ್ ಫೈನಾನ್ಸ್ (LICHFL), ತನಗೆ ಬರಬೇಕಾದ ಸುಮಾರು 22,006 ಕೋಟಿ ರೂ.ಗಳ ಪೈಕಿ ಈ ಯೋಜನೆಯು ಸಾಲದಾತರಿಗೆ ಕೇವಲ 6.25 ಕೋಟಿ ರೂ. ಮರುಪಾವತಿಯನ್ನು ಮಾತ್ರ ನೀಡುತ್ತಿದೆ ಎಂದು ವಾದಿಸಿದೆ. ಈ ಪ್ರಸ್ತಾವನೆಯನ್ನು ‘ಅಸಂಗತ ಮತ್ತು ಕಾನೂನುಬಾಹಿರ’ ಎಂದು ಅದು ಕರೆದಿದೆ. ಈ ಯೋಜನೆಗೆ ವಿರುದ್ಧವಾಗಿ ಮತ ಚಲಾಯಿಸಿರುವುದಾಗಿ HDFC ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದ್ದು, ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.
ಕಡಿಮೆ ಮೊತ್ತದ ವೈಯಕ್ತಿಕ ವಸೂಲಾತಿಯನ್ನು ಸಾಲದಾತ ಸಂಸ್ಥೆಗಳು ಮತ್ತೊಂದು ಕಾರಣಕ್ಕಾಗಿ ಪ್ರಶ್ನಿಸಿವೆ ಎಂದು ಪಿಟಿಐ ಮೂಲಗಳು ತಿಳಿಸಿವೆ. ಸುಭಾಷ್ ಚಂದ್ರ ಅವರ ಪ್ರಸ್ತುತ ಆಸ್ತಿ ಮೌಲ್ಯ ಸುಮಾರು 31.79 ಕೋಟಿ ರೂ. ಎಂದು ತೋರಿಸಲಾಗಿದೆ. ಆದರೆ, ಹಿಂದಿನ ಆಸ್ತಿ ಮೌಲ್ಯ ಪ್ರಮಾಣಪತ್ರಗಳ ಪ್ರಕಾರ, 2017ರಲ್ಲಿ ಅವರ ಆಸ್ತಿ ಮೌಲ್ಯ ಸುಮಾರು 45,888 ಕೋಟಿ ರೂ. ಮತ್ತು 2018ರಲ್ಲಿ 40,562 ಕೋಟಿ ರೂ. ಇತ್ತು. ಈ ಹಠಾತ್ ಇಳಿಕೆಯ ಹಿನ್ನೆಲೆಯಲ್ಲಿ ಅವರ ಆಸ್ತಿಗಳ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಬೇಕು ಎಂದು ಸಾಲದಾತ ಸಂಸ್ಥೆಗಳು ಒತ್ತಾಯಿಸಿವೆ ಎಂದು ಮೂಲಗಳು ತಿಳಿಸಿವೆ.
LIC ಹೌಸಿಂಗ್ ಫೈನಾನ್ಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ಗಳು ಈಗ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದಲ್ಲಿ ಈ ತೀರ್ಪನ್ನು ಸವಾಲು ಮಾಡಲು ಸಿದ್ಧತೆ ನಡೆಸಿವೆ. ಇದರ ಜೊತೆಗೆ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ನ (NHB) ಮಧ್ಯಪ್ರವೇಶ ಕೋರಲು LIC ಹೌಸಿಂಗ್ ಫೈನಾನ್ಸ್ ಯೋಜಿಸುತ್ತಿದೆ ಎಂದು ಈ ಬೆಳವಣಿಗೆಯ ಅರಿವಿರುವ ಮೂಲಗಳನ್ನು ಉಲ್ಲೇಖಿಸಿ ‘ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಇದಕ್ಕೆ ಸುಭಾಷ್ ಚಂದ್ರ ನೀಡಿದ ಪ್ರತಿಕ್ರಿಯೆ ಏನು?
ತಮ್ಮ ಮೇಲಿನ ಟೀಕೆಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಸುಭಾಷ್ ಚಂದ್ರ, ತಾವು ‘ಯಾವ ಸಾಲದಾತರಿಂದಲೂ ಹಣ ಸಾಲವಾಗಿ ಪಡೆದಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ, ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಾಲದಾತ ಸಂಸ್ಥೆಗಳು ಕೋರಿರುವ ಮೊತ್ತ 3,992 ಕೋಟಿ ರೂ. ಮಾತ್ರವೇ ಹೊರತು 22,000 ಕೋಟಿ ರೂ. ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಪೈಕಿ 620 ಕೋಟಿ ರೂ.ಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ ಮತ್ತು ಸಾಲ ಪಡೆದ ಸಂಸ್ಥೆಗಳು 1,063 ಕೋಟಿ ರೂ.ಗಳನ್ನು ಪಾವತಿಸಲು ಮುಂದಾಗಿವೆ ಎಂದು ಅವರು ತಿಳಿಸಿದ್ದಾರೆ. ತಾವು ಜಾಮೀನು ನೀಡಿದ್ದ ಸಂಸ್ಥೆಗಳು ಇದುವರೆಗೆ 43,000 ಕೋಟಿ ರೂ.ಗಳನ್ನು ಸಾಲದಾತರಿಗೆ ಹಿಂತಿರುಗಿಸಿವೆ ಹಾಗೂ ಬಾಕಿ ಇರುವ ಮೊತ್ತವನ್ನೂ ಅದೇ ಸಂಸ್ಥೆಗಳು ಪಾವತಿಸಲಿವೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣವು ಸಾಮಾನ್ಯ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತದೆಯೇ?
ಸುಭಾಷ್ ಚಂದ್ರ ಅವರ ಪ್ರಕರಣವು ವೈಯಕ್ತಿಕ ಜಾಮೀನುದಾರರಿಗೆ ಸಂಬಂಧಿಸಿದ ಒಂದು ಅಪರೂಪದ ಪ್ರಕರಣವಾಗಿದ್ದು, ಇದು ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಸಿ ಕೋಡ್ (IBC) ಅಡಿಯಲ್ಲಿ ನಡೆಯುವ ಸಾಮಾನ್ಯ ಕಂಪೆನಿಗಳ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಪಿಟಿಐ ಉಲ್ಲೇಖಿಸಿದ ಮೂಲಗಳು ತಿಳಿಸಿವೆ. ಅವರು ಇತರ ಸಮಗ್ರ ಅಂಕಿ-ಅಂಶಗಳನ್ನು ಎತ್ತಿ ತೋರಿಸಿದ್ದಾರೆ.
ಮಾರ್ಚ್ 2026ರ ವರೆಗೆ ಅನುಮೋದಿತ ಪರಿಹಾರ ಯೋಜನೆಗಳ ಮೂಲಕ ಸಾಲದಾತ ಸಂಸ್ಥೆಗಳು ಸುಮಾರು 4.32 ಲಕ್ಷ ಕೋಟಿ ರೂ.ಗಳನ್ನು ವಸೂಲಿ ಮಾಡಿವೆ. ಇದು ಕಂಪನಿಗಳ ಲಿಕ್ವಿಡೇಶನ್ ಮೌಲ್ಯದ ಶೇ 116.85ರಷ್ಟು ಮತ್ತು ನ್ಯಾಯಯುತ ಮೌಲ್ಯದ ಶೇ 94.56ರಷ್ಟಾಗಿದೆ.
ಇದರ ಹೊರತಾಗಿ, ಸುಮಾರು 14 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ 32,000ಕ್ಕೂ ಹೆಚ್ಚು ಪ್ರಕರಣಗಳು ಅಧಿಕೃತವಾಗಿ ದಿವಾಳಿತನ ಪ್ರಕ್ರಿಯೆಗೆ ಒಳಪಡುವ ಮುನ್ನವೇ ಇತ್ಯರ್ಥಗೊಂಡಿವೆ. ಇದು ಈ ಕಾಯ್ದೆಯ ಕಟ್ಟುನಿಟ್ಟಾದ ಜಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮೂಲಗಳು ಹೇಳಿವೆ.
ಬ್ಯಾಂಕಿಂಗ್ ವ್ಯವಸ್ಥೆಯ ನಿವ್ವಳ ಅನುತ್ಪಾದಕ ಆಸ್ತಿ ಮಾರ್ಚ್ 2018ರಲ್ಲಿ ಇದ್ದ ಶೇ 5.94ರಿಂದ ಸೆಪ್ಟೆಂಬರ್ 2025ರ ವೇಳೆಗೆ ಶೇ 0.48ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಒಟ್ಟು ಅನುತ್ಪಾದಕ ಆಸ್ತಿಯ ಮೊತ್ತ ಸುಮಾರು 5.2 ಲಕ್ಷ ಕೋಟಿ ರೂ.ಯಿಂದ 94,000 ಕೋಟಿ ರೂ.ಗೆ ಇಳಿಕೆಯಾಗಿದೆ ಎಂಬುದನ್ನು ಮೂಲಗಳು ಉಲ್ಲೇಖಿಸಿವೆ.
IIM ಅಹಮದಾಬಾದ್ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿದ ಮೂಲಗಳು, ದಿವಾಳಿತನ ಪ್ರಕ್ರಿಯೆಯ ಮೂಲಕ ಪುನಶ್ಚೇತನಗೊಂಡ ಕಂಪೆನಿಗಳು ಮಾರಾಟದಲ್ಲಿ ಶೇ 76ರಷ್ಟು, ಒಟ್ಟು ಆಸ್ತಿಯಲ್ಲಿ ಶೇ 50ರಷ್ಟು, ನೌಕರರ ವೆಚ್ಚದಲ್ಲಿ ಶೇ 50ರಷ್ಟು ಮತ್ತು ಬಂಡವಾಳ ಹೂಡಿಕೆಯಲ್ಲಿ ಶೇ 130ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ ಎಂದು ತಿಳಿಸಿವೆ.
ಮುಂದೇನು?
ಈ ಪ್ರಕರಣವು ಈಗ NCLTಯ ಮೂಲ ವಿಭಾಗೀಯ ಪೀಠಕ್ಕೆ ಮರಳಲಿದ್ದು, ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 419(5)ರ ನಿಯಮಾವಳಿಯಂತೆ ಬಹುಮತದ ಅಭಿಪ್ರಾಯವನ್ನು ಆಧರಿಸಿ ಪೀಠವು ಅಧಿಕೃತ ಆದೇಶ ಹೊರಡಿಸಲಿದೆ. ಇನ್ನೊಂದೆಡೆ, LIC ಹೌಸಿಂಗ್ ಫೈನಾನ್ಸ್ ಮತ್ತು HDFC ಬ್ಯಾಂಕ್ಗಳು NCLAT ಮೆಟ್ಟಿಲೇರುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ಮೂಲ ಎಸ್ಸೆಲ್/ಝೀ ಕಂಪನಿಗಳು ಮತ್ತು ಅವುಗಳ ಆಸ್ತಿ-ಪಾಸ್ತಿಗಳ ವಿರುದ್ಧ ಸಾಲದಾತ ಸಂಸ್ಥೆಗಳು ಹೂಡಿರುವ ದಾವೆಗಳು ಪ್ರತ್ಯೇಕವಾಗಿ ಮುಂದುವರಿಯಲಿವೆ.
ಸೌಜನ್ಯ: economictimes.com






