ಮೆಮೊರಿ ಚಿಪ್ ಗಳು ಭಾರತದಲ್ಲಿ ಹಣದುಬ್ಬರವನ್ನು ಹೇಗೆ ಹೆಚ್ಚಿಸುತ್ತಿವೆ?

ಸಾಂದರ್ಭಿಕ ಚಿತ್ರ | Photo Credit : magnific
ಕಳೆದ ಕೆಲವು ತಿಂಗಳುಗಳಿಂದ ರೆಫ್ರಿಜರೇಟರ್ ಗಳು, ವಾಷಿಂಗ್ ಮೆಷಿನ್ ಗಳು, ಏರ್ ಕಂಡಿಷನರ್ ಗಳು (ಎಸಿ), ಎಲೆಕ್ಟ್ರಿಕ್ ಬ್ಯಾಟರಿಗಳು, ಸ್ಮಾರ್ಟ್ಫೋನ್ ಗಳು, ಲ್ಯಾಪ್ಟಾಪ್ ಗಳು, ಟೆಲಿವಿಷನ್ ಗಳು, ಇಯರ್ಫೋನ್ ಗಳು ಮತ್ತು ಪೆನ್ಡ್ರೈವ್ಗಳು - ಈ ವಸ್ತುಗಳ ಬೆಲೆ ಪ್ರತಿ ತಿಂಗಳು ಬೇರೆ ಬೇರೆ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಇದಕ್ಕೆಲ್ಲ ಕಾರಣ ಇವುಗಳಲ್ಲೆಲ್ಲ ಸಾಮಾನ್ಯವಾಗಿ ಬಳಸಲಾಗುವ ಒಂದು ಅತ್ಯಂತ ಪುಟ್ಟ ಬಿಡಿಭಾಗ, ಮೆಮೊರಿ ಚಿಪ್ ಗಳು. ಭಾರತದ ಒಟ್ಟಾರೆ ಗ್ರಾಹಕ ಬೆಲೆ ಸೂಚ್ಯಂಕದ (CPI) ಸರಕು ಮತ್ತು ಸೇವೆಗಳ ಪಟ್ಟಿಯಲ್ಲಿ ಈ ಒಂಭತ್ತು ವಸ್ತುಗಳ ಪಾಲು ಕೇವಲ ಶೇಕಡಾ 1 ರಷ್ಟಿದೆ. ಆದರೆ, ಇವು ದೇಶದ ಪ್ರಮುಖ ಚಿಲ್ಲರೆ ಹಣದುಬ್ಬರವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದು, ಮುಂದಿನ ಕೆಲವು ವರ್ಷಗಳ ಕಾಲವೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
AI ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಹೂಡಿಕೆ ಹೆಚ್ಚುತ್ತಿರುವುದರಿಂದ, ಟಿಎಸ್ಎಂಸಿ (TSMC), ಸ್ಯಾಮ್ಸಂಗ್ (Samsung) ಮತ್ತು ಎಸ್ಕೆ ಹೈನಿಕ್ಸ್ (SK Hynix) ನಂತಹ ಪ್ರಮುಖ ಚಿಪ್ ಪೂರೈಕೆ ಕಂಪೆನಿಗಳು ಕಳೆದ ಒಂದು ವರ್ಷದಲ್ಲಿ ಹಿಂದೆಂದೂ ಕಾಣದಂತಹ ಭಾರಿ ಬೆಳವಣಿಗೆಯನ್ನು ಕಂಡಿವೆ. ಇದರ ಜೊತೆಗೆ, ಪ್ರಪಂಚದಾದ್ಯಂತ ತಲೆಎತ್ತುತ್ತಿರುವ ಡೇಟಾ ಸೆಂಟರ್ ಗಳಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಅತ್ಯಾಧುನಿಕ ಚಿಪ್ ಗಳನ್ನು ತಯಾರಿಸಲು ಈ ಕಂಪೆನಿಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದರ ಪರಿಣಾಮವಾಗಿ, ದಿನಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳಾದ ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟಿವಿ ಮತ್ತು ಇಯರ್ಫೋನ್ ಗಳಲ್ಲಿ ಬಳಸಲಾಗುವ ಡ್ರಾಮ್ (DRAM) ಮತ್ತು ಇತರ ಸಾಮಾನ್ಯ ಚಿಪ್ ಗಳ ಉತ್ಪಾದನೆಗೆ ಹಿನ್ನಡೆಯಾಗಿದೆ.
ಗ್ರಾಹಕರು ಬಳಸುವ ಈ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಅತ್ಯಗತ್ಯವಾಗಿರುವ ಈ ಚಿಪ್ ಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ, ಅವುಗಳ ಬೆಲೆಗಳು ಗಗನಕ್ಕೇರಿವೆ. ಈಗ ಎಲೆಕ್ಟ್ರಾನಿಕ್ ವಸ್ತುಗಳ ತಯಾರಕ ಕಂಪೆನಿಗಳು ಈ ಹೆಚ್ಚುವರಿ ವೆಚ್ಚದ ಹೊರೆಯನ್ನು ಗ್ರಾಹಕರ ಮೇಲೆಯೇ ಹಾಕುತ್ತಿವೆ. ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎಂದರೆ, ದೇಶದ ಪ್ರಮುಖ ಚಿಲ್ಲರೆ ಹಣದುಬ್ಬರದ ಅಂಕಿ-ಅಂಶಗಳಲ್ಲೂ ಇದು ಎದ್ದು ಕಾಣಿಸುತ್ತಿದೆ.
►ಮೆಮೊರಿ ಹಣದುಬ್ಬರ
ಮೇ ತಿಂಗಳಿನ ಅಂಕಿ-ಅಂಶಗಳ ಪ್ರಕಾರ, ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್ ಗಳ ಬೆಲೆ ಸೂಚ್ಯಂಕವು ಸತತ ಏಳನೇ ತಿಂಗಳೂ ಏರಿಕೆ ಕಂಡಿದೆ. ಮೊಬೈಲ್ ಗಳ ಬೆಲೆ ಸತತ ಆರು ತಿಂಗಳಿನಿಂದ, ಫ್ರಿಡ್ಜ್, ವಾಷಿಂಗ್ ಮೆಷಿನ್ ಹಾಗೂ ಟಿವಿಗಳ ಬೆಲೆ ಸತತ ನಾಲ್ಕು ತಿಂಗಳಿನಿಂದ ಮತ್ತು ಎಸಿ, ಎಲೆಕ್ಟ್ರಿಕ್ ಬ್ಯಾಟರಿಗಳು ಹಾಗೂ ಹೆಡ್ಫೋನ್ ಗಳು ಮತ್ತು ಇಯರ್ಫೋನ್ ಗಳ ಬೆಲೆ ಸತತ ಮೂರನೇ ತಿಂಗಳೂ ಏರಿಕೆಯ ಹಾದಿಯಲ್ಲೇ ಸಾಗಿವೆ.
ಆದರೆ ಎಲ್ಲಕ್ಕಿಂತ ದೀರ್ಘಾವಧಿಯ ಮತ್ತು ಅತಿ ಹೆಚ್ಚಿನ ಬೆಲೆ ಏರಿಕೆ ಆಗಿದ್ದು ಪೆನ್ಡ್ರೈವ್ ಹಾಗೂ ಹಾರ್ಡ್ ಡಿಸ್ಕ್ ಗಳಿಗೆ. ಸಂಪೂರ್ಣವಾಗಿ ಸ್ಟೋರೇಜ್ ಡಿವೈಸ್ ಆಗಿರುವ ಈ ವಿಭಾಗದ ಬೆಲೆ ಸೂಚ್ಯಂಕವು ಕಳೆದ 16 ತಿಂಗಳುಗಳಲ್ಲಿ 15 ತಿಂಗಳು ನಿರಂತರವಾಗಿ ಏರುತ್ತಲೇ ಸಾಗಿದೆ. 2023-24 ಅನ್ನು ಮೂಲ ವರ್ಷವಾಗಿಟ್ಟುಕೊಂಡ ಸಿದ್ಧಪಡಿಸಲಾದ ಹೊಸ CPI ಸರಣಿಯ ಅವಧಿಯಲ್ಲಿ ಇದು ದಾಖಲಾಗಿದೆ.
ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ತಯಾರಕರು ಘೋಷಿಸಿರುವ ಈ ಬೆಲೆ ಏರಿಕೆಯು ಒಟ್ಟಾರೆ ಹಣದುಬ್ಬರದ ಮೇಲೆ ಬೀರಿದ ತಕ್ಷಣದ ಪ್ರಭಾವವೇನೂ ತೀರಾ ಹೆಚ್ಚಿಲ್ಲ. ಆದರೆ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎಸಿ, ಫೋನ್, ಪಿಸಿ ಮತ್ತು ಟಿವಿಗಳ ಬೆಲೆ ಸೂಚ್ಯಂಕದಲ್ಲಿನ ಮಾಸಿಕ ಏರಿಕೆಯು ಈಗಾಗಲೇ ಶೇಕಡಾ 1 ರಷ್ಟನ್ನು ತಲುಪಿದೆ ಅಥವಾ ಅದರ ಹತ್ತಿರದಲ್ಲಿದೆ. ಇನ್ನು ಪೆನ್ಡ್ರೈವ್ ಮತ್ತು ಹಾರ್ಡ್ ಡಿಸ್ಕ್ ಗಳ ವಿಷಯದಲ್ಲಿ ಈ ಪ್ರಮಾಣವು ಶೇಕಡಾ 3 ರ ಸಮೀಪಕ್ಕೆ ತಲುಪುತ್ತಿದೆ.
ಜಗತ್ತಿನಾದ್ಯಂತ ಇರುವ ಆರ್ಥಿಕ ನೀತಿ ನಿರೂಪಕರು ಈಗಾಗಲೇ ಹಣದುಬ್ಬರದ ಈ ಹೊಸ ಮೂಲದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಕಳೆದ ತಿಂಗಳು, ವಿಶ್ವದ ಅತ್ಯಂತ ಪ್ರಮುಖ ಕೇಂದ್ರೀಯ ಬ್ಯಾಂಕ್ ಆದ ಅಮೆರಿಕದ 'ಫೆಡರಲ್ ರಿಸರ್ವ್'ನ ಅರ್ಥಶಾಸ್ತ್ರಜ್ಞರು, ಯುಎಸ್ ನ ವೈಯಕ್ತಿಕ ಬಳಕೆಯ ವೆಚ್ಚಗಳ (PCE) ಬೆಲೆ ಸೂಚ್ಯಂಕದಲ್ಲಿ “ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಬಿಡಿಭಾಗಗಳ” ವಿಭಾಗದಲ್ಲಿ ಕಂಡುಬಂದ ಕ್ಷಿಪ್ರ ಬೆಲೆ ಏರಿಕೆಯು ಅಲ್ಲಿನ ಪ್ರಮುಖ ಹಣದುಬ್ಬರಕ್ಕೆ “ಹಿಂದೆಂದೂ ಕಾಣದ ಮಟ್ಟದ ಕೊಡುಗೆ” ನೀಡಿದೆ ಎಂದಿದ್ದಾರೆ.
ಆಹಾರ ಮತ್ತು ಇಂಧನದಂತಹ ಪದೇ ಪದೇ ಬೆಲೆ ಬದಲಾಗುವ ವಸ್ತುಗಳನ್ನು ಹೊರತುಪಡಿಸಿ, ಉಳಿದ ಇತರ ವಸ್ತುಗಳ ಬೆಲೆ ಏರಿಕೆಯ ಪ್ರಮಾಣವನ್ನು ‘ಕೋರ್ ಇನ್ಫ್ಲೇಷನ್’ ಅಳೆಯುತ್ತದೆ.
►ರಚನಾತ್ಮಕ ಕೊರತೆ
ಭಾರತದಲ್ಲಿ ಮೇಲೆ ಉಲ್ಲೇಖಿಸಲಾದ ಒಂಭತ್ತು ವಸ್ತುಗಳು ಒಟ್ಟಾರೆ ಹಣದುಬ್ಬರಕ್ಕೆ ನೀಡುತ್ತಿರುವ ಕೊಡುಗೆ ಸದ್ಯಕ್ಕೆ ತೀರಾ ಕಡಿಮೆ ಇದೆ. ಇದಕ್ಕೆ ಭಾಗಶಃ ಕಾರಣವೇನೆಂದರೆ, ಇಡೀ CPI ಪಟ್ಟಿಯಲ್ಲಿ ಇವುಗಳ ಪಾಲು ಕೇವಲ ಶೇಕಡಾ 1 ರಷ್ಟಿದೆ. ಹೋಲಿಸಿದರೆ, CPI ಪಟ್ಟಿಯಲ್ಲಿ ಸುಮಾರು ಶೇಕಡಾ 2 ರಷ್ಟು ಪಾಲು ಹೊಂದಿರುವ ಮೂರು ಪ್ರಮುಖ ತರಕಾರಿಗಳಾದ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗೆ ಇದು ತೀರಾ ಕಡಿಮೆ. ಅಷ್ಟೇ ಅಲ್ಲದೆ, ಎಲೆಕ್ಟ್ರಾನಿಕ್ ವಸ್ತುಗಳ ತಯಾರಕರು ರೈತರಷ್ಟು ವೇಗವಾಗಿ ಮತ್ತು ನೇರವಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ. ಏಕೆಂದರೆ ಈ ತಯಾರಕರು ಉತ್ಪಾದಿಸುವ ವಸ್ತುವಿನ ಅಂತಿಮ ಬೆಲೆಯಲ್ಲಿ ಈಗಾಗಲೇ ಗಣನೀಯ ಪ್ರಮಾಣದ ಲಾಭದ ಪಾಲನ್ನು ಸೇರಿಸಿರುತ್ತಾರೆ. ಹೀಗಿದ್ದೂ, ಇದುವರೆಗೆ ಘೋಷಿಸಲಾಗಿರುವ ಬೆಲೆ ಏರಿಕೆಯು ಈಗಾಗಲೇ ಈ ವಸ್ತುಗಳ ಮಾರಾಟದ ಮೇಲೆ ಹೊಡೆತ ನೀಡಲು ಆರಂಭಿಸಿದೆ.
ಜಾಗತಿಕ ತಂತ್ರಜ್ಞಾನ ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ 'ಕೌಂಟರ್ ಪಾಯಿಂಟ್ ರಿಸರ್ಚ್' ಪ್ರಕಾರ, 2026ರಲ್ಲಿ ಜಾಗತಿಕ ಸ್ಮಾರ್ಟ್ಫೋನ್ ವಿತರಣೆಯು ಶೇಕಡಾ 14 ರಷ್ಟು ಕುಸಿದು 1.08 ಬಿಲಿಯನ್ ಯುನಿಟ್ ಗಳಿಗೆ ತಲುಪುವ ನಿರೀಕ್ಷೆಯಿದೆ. ಇದು 2013ರ ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದ್ದು, ಕಡಿಮೆ ಬೆಲೆಯ ಫೋನ್ ಗಳು ಇದರಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಲಿವೆ.
"ಚಿಪ್ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು AI ಆಧಾರಿತ HBM (High Bandwidth Memory) ಮತ್ತು ಸರ್ವರ್ ಡ್ರಾಮ್ ಗಳ ಕಡೆಗೆ ಬದಲಾಯಿಸುತ್ತಿರುವುದರಿಂದ, ಮೊಬೈಲ್ ಸಾಧನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಎಲ್ಪಿಡಿಡಿಆರ್-4 (LPDDR4) ಚಿಪ್ ಗಳ ಪೂರೈಕೆಯು 2026ರಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಕುಸಿಯುವ ನಿರೀಕ್ಷೆಯಿದೆ. ಇದು ಆರಂಭಿಕ ಹಂತದ ಫೋನ್ ಗಳ ಉತ್ಪಾದನೆಯನ್ನು ತೀರಾ ನಷ್ಟಕ್ಕೀಡು ಮಾಡುತ್ತದೆ" ಎಂದು ಜೂನ್ 1ರಂದು ಕೌಂಟರ್ ಪಾಯಿಂಟ್ ರಿಸರ್ಚ್ ತಿಳಿಸಿದೆ. ಇದರಿಂದಾಗಿ 150 ಡಾಲರ್ಗಿಂತ ಕಡಿಮೆ ಬೆಲೆಯ ಕೆಲವು ನಿರ್ದಿಷ್ಟ ಶ್ರೇಣಿಯ ಫೋನ್ ಗಳು ಮಾರುಕಟ್ಟೆಯಿಂದ ಶಾಶ್ವತವಾಗಿ ಹೊರಬೀಳುವ ಸಾಧ್ಯತೆಯಿದೆ.
ಹಣಕಾಸು ಸೇವಾ ಸಂಸ್ಥೆಯಾದ 'ನೊಮುರಾ'ದ ವಿಶ್ಲೇಷಕರ ಎಚ್ಚರಿಕೆಗಳು ಮತ್ತಷ್ಟು ಗಂಭೀರವಾಗಿವೆ. ಜೂನ್ 7ರಂದು ಬಿಡುಗಡೆ ಮಾಡಿದ ವರದಿಯಲ್ಲಿ, ಕನಿಷ್ಠ 3 ರಿಂದ 5 ವರ್ಷಗಳವರೆಗೆ ಬೇಡಿಕೆಯು ಪೂರೈಕೆಗಿಂತ ತೀರಾ ಹೆಚ್ಚಿರಲಿದೆ. ಈ ಕೊರತೆಯು ರಚನಾತ್ಮಕವಾಗಿದ್ದು, ಸ್ವಯಂ ಬಲವರ್ಧನೆಗೊಳ್ಳುತ್ತಿದೆ. ಅಂದರೆ, ಖರೀದಿದಾರರು ಮುಂಚಿತವಾಗಿಯೇ ಹಣ ಪಾವತಿಸಿ ಮುಂದಿನ ಹಲವು ವರ್ಷಗಳ ಒಪ್ಪಂದಗಳನ್ನು ಈಗಲೇ ಬುಕ್ ಮಾಡುತ್ತಿದ್ದಾರೆ ಎಂದು ತಿಳಿಸಿದೆ.
►ಭಾರತ ಎದುರಿಸುತ್ತಿರುವ ಸಮಸ್ಯೆ ಏನು?
ಆದರೆ, ಎಲ್ಲಾ ಖರೀದಿದಾರರು ದೀರ್ಘಕಾಲದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿಲ್ಲ.
ಮೈಕ್ರಾನ್ (Micron) ಕಂಪೆನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ವ್ಯವಹಾರ ಅಧಿಕಾರಿ ಸುಮಿತ್ ಸದಾನಾ ಅವರು ಕಳೆದ ತಿಂಗಳು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಮೆರಿಕದ ಈ ಚಿಪ್ ತಯಾರಿಕಾ ಸಂಸ್ಥೆಯ ಭಾರತೀಯ ಗ್ರಾಹಕರು ಪರಿಸ್ಥಿತಿಯ ಗಾಂಭೀರ್ಯವನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಮೈಕ್ರಾನ್ ಕಂಪೆನಿಗೆ ಭಾರತದ ಚಿಪ್ ಗ್ರಾಹಕರಿಂದ ಅವರ ದೀರ್ಘಕಾಲದ ಬೇಡಿಕೆಯ ಬಗ್ಗೆ "ನಂಬಿಕಸ್ಥ ಮುನ್ಸೂಚನೆಗಳು" ಬೇಕಿರುವುದು ಮಾತ್ರವಲ್ಲದೆ, ಇಂದಿನ ಪರಿಸ್ಥಿತಿಯಲ್ಲಿ ಅಂತಹ ಬೇಡಿಕೆಗೆ ತಕ್ಕ "ಬದ್ಧತೆ" ಕೂಡ ಬೇಕಾಗಿದೆ. ಆದರೆ, ಭಾರತೀಯ ಖರೀದಿದಾರರಲ್ಲಿ ಈ ಬದ್ಧತೆ ಹೆಚ್ಚಾಗಿ ಕಂಡುಬರುತ್ತಿಲ್ಲ.
ಹೀಗಾಗಿ, ಭಾರತೀಯರಿಗೆ ಗ್ರಾಹಕ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಮತ್ತು ಚಿಲ್ಲರೆ ಹಣದುಬ್ಬರದ ವಿಷಯದಲ್ಲಿ ಮುಂದಿನ ದಿನಗಳು ಅಷ್ಟು ಆಶಾದಾಯಕವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತುತ 2026ರ ಕೊನೆಯ ಮೂರು ತಿಂಗಳಲ್ಲಿ CPI ಹಣದುಬ್ಬರವು ಸರಾಸರಿ ಶೇಕಡಾ 5.9 ರಷ್ಟಿರಲಿದೆ ಎಂದು ಅಂದಾಜಿಸಿದೆ. ಇದು ಆರ್ಬಿಐ ಹೊಂದಿರುವ ಶೇಕಡಾ 2 ರಿಂದ 6 ರವರೆಗಿನ ಗರಿಷ್ಠ ಮಿತಿಗಿಂತ ಸ್ವಲ್ಪವೇ ಕಡಿಮೆಯಾಗಿದೆ. ಆ ಸಮಯದ ವೇಳೆಗೆ, ಈ ಎಲೆಕ್ಟ್ರಾನಿಕ್ ವಸ್ತುಗಳಿಂದ ಹಣದುಬ್ಬರಕ್ಕೆ ಸಿಗುವ ಕೊಡುಗೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ. ತಜ್ಞರು ಎಚ್ಚರಿಸುತ್ತಿರುವಂತೆ, ಒಂದು ವೇಳೆ ಪೂರೈಕೆಯ ಕೊರತೆ ಇಷ್ಟೊಂದು ತೀವ್ರವಾಗಿದ್ದರೆ, 2026 ಎಂಬುದು ಈ ಸಮಸ್ಯೆಯ ಆರಂಭವಷ್ಟೇ ಆಗಿರಲಿದೆ.






