ಶ್ರಮಕ್ಕೆ ಗೌರವವಿಲ್ಲದ ಸಮಾಜ ಸ್ವಚ್ಛವಾಗುವುದು ಹೇಗೆ?

ಸೈನಿಕರು ದೇಶವನ್ನು ಹೊರಗಿನ ಅಪಾಯಗಳಿಂದ ರಕ್ಷಿಸುತ್ತಾರೆ. ಪೌರ ಕಾರ್ಮಿಕರು ನಮ್ಮ ನಗರಗಳ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತಾರೆ. ಹಾಗಿದ್ದಾಗ ಅವರ ಸೇವೆಯನ್ನು ಏಕೆ ಕೀಳು ಮಟ್ಟದ ಕೆಲಸವೆಂದು ನೋಡಬೇಕು? ಗಡಿಯಲ್ಲಿ ನಿಂತಿರುವ ಯೋಧನಿಗೆ ಸಿಗುವ ಗೌರವ, ಘನತೆ ಮತ್ತು ಸಾಮಾಜಿಕ ಮಾನ್ಯತೆ ಪೌರ ಕಾರ್ಮಿಕನಿಗೂ ಸಿಗಬೇಕು.
ರಸ್ತೆಗಳ ಮೇಲೆ ಕಸ ಕಾಣಬಾರದು, ಚರಂಡಿಗಳು ಗಲೀಜಾಗಿರಬಾರದು, ಮನೆಗಳ ಸುತ್ತಮುತ್ತ ದುರ್ವಾಸನೆ ಇರಬಾರದು, ಬೆಳಗ್ಗೆ ಎದ್ದಾಗ ಸ್ವಚ್ಛವಾದ ನಗರವನ್ನು ನೋಡಬೇಕು ಎಂಬುದು ಪ್ರತಿಯೊಬ್ಬ ನಾಗರಿಕನ ಸಹಜ ಬಯಕೆ. ಆದರೆ ಈ ಸ್ವಚ್ಛತೆಯ ಹಿಂದೆ ಯಾರ ಬೆವರಿದೆ, ಯಾರ ಶ್ರಮವಿದೆ, ಯಾರ ಬದುಕು ಇದೆ ಎಂಬ ಪ್ರಶ್ನೆಯನ್ನು ನಾವು ಬಹಳ ಅಪರೂಪವಾಗಿ ಕೇಳಿಕೊಳ್ಳುತ್ತೇವೆ. ನಾವು ಮನೆಯ ಕಸವನ್ನು ಹೊರಗೆ ಹಾಕಿದ ಕ್ಷಣಕ್ಕೆ ನಮ್ಮ ಜವಾಬ್ದಾರಿ ಮುಗೀತು ಎಂದು ಭಾವಿಸುತ್ತೇವೆ. ಆದರೆ ಅದೇ ಕಸವನ್ನು ಸಂಗ್ರಹಿಸಿ, ಹೊತ್ತು, ವಿಲೇವಾರಿ ಮಾಡಿ, ನಮ್ಮ ನಗರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರ ಕೆಲಸ ಆರಂಭವಾಗುವುದೇ ಅಲ್ಲಿಂದ. ನಾವು ಮುಟ್ಟಲು ಹಿಂಜರಿಯುವ ಕಸವನ್ನು ಅವರು ಕೈಯಿಂದ ಮುಟ್ಟುತ್ತಾರೆ. ನಾವು ದುರ್ವಾಸನೆ ಎಂದು ಮೂಗು ಮುಚ್ಚಿಕೊಂಡು ದಾಟಿ ಹೋಗುವ ಗಲೀಜಿನ ನಡುವೆ ಅವರು ಪ್ರತಿದಿನ ಕೆಲಸ ಮಾಡುತ್ತಾರೆ. ನಾವು ಅಸಹ್ಯಪಡುವ ಕೊಳೆ, ದುರ್ವಾಸನೆ ಮತ್ತು ತ್ಯಾಜ್ಯದೊಂದಿಗೆ ಅವರು ಬದುಕು ಸಾಗಿಸುತ್ತಾರೆ.
ಇಂತಹ ಪೌರ ಕಾರ್ಮಿಕರು ತಮ್ಮ ಬದುಕಿನ ಭದ್ರತೆಗಾಗಿ, ತಮ್ಮ ಕುಟುಂಬದ ಭವಿಷ್ಯಕ್ಕಾಗಿ, ತಮ್ಮ ಶ್ರಮಕ್ಕೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕಾಗಿ ‘ನಮ್ಮನ್ನು ಖಾಯಂಗೊಳಿಸಿ’ ಎಂದು ಕೇಳಲು ಬಂದಾಗ, ಅವರೊಂದಿಗೆ ಸಾರ್ವಜನಿಕವಾಗಿ ಅವಮಾನಕಾರಿ ರೀತಿಯಲ್ಲಿ ನಡೆದುಕೊಳ್ಳುವುದು ನಿಜಕ್ಕೂ ಖಂಡನೀಯ. ಸಚಿವ ಕೃಷ್ಣಬೈರೇಗೌಡ ಅವರು ಪೌರ ಕಾರ್ಮಿಕರೊಂದಿಗೆ ನಡೆದುಕೊಂಡ ರೀತಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಸಮಾಧಾನವನ್ನು ಕೇವಲ ರಾಜಕೀಯ ಟೀಕೆ ಎಂದು ನೋಡಬಾರದು. ಅದರ ಹಿಂದೆ ಈ ಸಮಾಜ ಪೌರ ಕಾರ್ಮಿಕರನ್ನು ನೋಡುವ ದೃಷ್ಟಿಕೋನದ ವಿರುದ್ಧದ ಅಸಮಾಧಾನವಿದೆ. ಅಧಿಕಾರಿಗಳು ತಪ್ಪು ಮಾಡಿದಾಗ ಅಥವಾ ಭ್ರಷ್ಟಾಚಾರ ಮಾಡಿದಾಗ, ಸಾರ್ವಜನಿಕರೊಂದಿಗೆ ಸಹಕರಿಸದಿದ್ದಾಗ ಅವರನ್ನು ತರಾಟೆಗೆ ತೆಗೆದುಕೊಳ್ಳುವುದು ಒಳ್ಳೆಯ ವಿಚಾರ ಆದರೆ ತಮ್ಮ ಬದುಕಿನ ನೋವನ್ನು ಹೇಳಿಕೊಳ್ಳಲು, ಉದ್ಯೋಗದ ಭದ್ರತೆಗಾಗಿ ಮನವಿ ಮಾಡಲು ಬಂದಿರುವ ಶ್ರಮಜೀವಿಗಳೊಂದಿಗೆ ಅದೇ ರೀತಿಯ ಕಠಿಣತೆ ಮತ್ತು ಅವಮಾನಕಾರಿ ಧೋರಣೆ ತೋರುವುದು ಖಂಡಿತವಾಗಿಯೂ ತಪ್ಪು. ಪೌರ ಕಾರ್ಮಿಕರು ಅಪರಾಧಿಗಳಲ್ಲ. ಅವರು ತಮ್ಮ ಮಾಲೀಕರ ಮುಂದೆ ದಯೆ ಬೇಡುತ್ತಿಲ್ಲ, ಅವರು ತಮ್ಮ ಶ್ರಮಕ್ಕೆ ಗೌರವ, ತಮ್ಮ ಬದುಕಿಗೆ ಭದ್ರತೆ ಮತ್ತು ತಮ್ಮ ಕುಟುಂಬಕ್ಕೆ ಉತ್ತಮ ಭವಿಷ್ಯ ಕೇಳುತ್ತಿದ್ದಾರೆ ಅಷ್ಟೇ.
ಈ ಸಂದರ್ಭದಲ್ಲಿ ನಗರದಲ್ಲಿ ವಾಸಿಸುವ ನಾಗರಿಕರು ಎಂದು ಕರೆಸಿಕೊಳ್ಳುವ ಎಲ್ಲರೂ ಮೊದಲು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಪೌರ ಕಾರ್ಮಿಕರನ್ನು ಕೀಳಾಗಿ ನೋಡುವುದು, ಅವರೊಂದಿಗೆ ಅವಮಾನಕಾರಿ ಭಾಷೆಯಲ್ಲಿ ಮಾತನಾಡುವುದು, ಅವರು ಮಾಡುವ ಕೆಲಸವನ್ನು ಅಸಹ್ಯಪಡುವುದು ಅಥವಾ ಅವರನ್ನು ಸಾಮಾಜಿಕವಾಗಿ ದೂರವಿಡುವುದು ನಮ್ಮ ನಾಗರಿಕ ಪ್ರಜ್ಞೆಯನ್ನೇ ಪ್ರಶ್ನಿಸುವಂತಹದ್ದು. ಕಸ ಸ್ವಚ್ಛಗೊಳಿಸುವ ಕೆಲಸ ಕೀಳಲ್ಲ, ಆ ಕೆಲಸ ಮಾಡುವ ಮನುಷ್ಯನನ್ನು ಕೀಳಾಗಿ ನೋಡುವ ಮನಸ್ಥಿತಿಯೇ ಕೀಳು. ನಾವು ನಮ್ಮ ಮನೆಯ ಸ್ವಚ್ಛತೆಯನ್ನು ಹೇಗೆ ಗೌರವಿಸುತ್ತೇವೆಯೋ, ನಮ್ಮ ನಗರದ ಸ್ವಚ್ಛತೆಯನ್ನು ಕಾಪಾಡುವವರನ್ನೂ ಅದೇ ಗೌರವದಿಂದ ನೋಡಬೇಕು. ಅವರೊಂದಿಗೆ ಮಾತನಾಡುವಾಗ ಅವರು ನಮ್ಮ ಸೇವಕರು ಎಂಬ ಭಾವನೆಗಿಂತ ಅವರು ಸಹನಾಗರಿಕರು ಎಂಬ ಭಾವನೆ ನಮ್ಮಲ್ಲಿರಬೇಕು.
ಆದರೆ ಈ ಜವಾಬ್ದಾರಿ ಕೇವಲ ಸಾರ್ವಜನಿಕರದ್ದು ಮಾತ್ರವಲ್ಲ. ಈ ವಿಷಯದಲ್ಲಿ ಸರಕಾರದ ಜವಾಬ್ದಾರಿ ಇನ್ನೂ ದೊಡ್ಡದು. ನಾವು ನಿಮ್ಮಂತೆಯೇ ಮನುಷ್ಯರಲ್ವ, ನೀವು ಕೂಡ ನಮ್ಮಂತೆಯೇ ಕೆಲಸ ಮಾಡಬೇಕು ಎಂದು ಪೌರ ಕಾರ್ಮಿಕರ ಮೇಲೆ ಏರುದನಿಯಲ್ಲಿ ಗದರಿಸುವುದಕ್ಕಿಂತ ಮೊದಲು, ಅವರು ನಮ್ಮಂತೆ ಬದುಕುತ್ತಿದ್ದಾರೆಯೇ ಎಂಬುದನ್ನು ಸರಕಾರ ಮೊದಲು ನೋಡಬೇಕು. ಸಚಿವರು ಮತ್ತು ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ಕಡತಗಳನ್ನು ನೋಡುವುದಕ್ಕಿಂತ ಒಮ್ಮೆ ಪೌರ ಕಾರ್ಮಿಕರು ವಾಸಿಸುವ ಸ್ಲಮ್ ಗಳು ಎಂದು ಕರೆಯಲ್ಪಡುವ ಪ್ರದೇಶಗಳಿಗೆ ಹೋಗಿ ಅವರ ಜನಜೀವನ ಸ್ಥಿತಿಯನ್ನು ಕಣ್ಣಾರೆ ನೋಡಬೇಕು. ಅವರ ಮನೆಗಳು ಹೇಗಿವೆ, ಕುಡಿಯುವ ನೀರು ಸಿಗುತ್ತಿದೆಯೇ, ಒಳಚರಂಡಿ ವ್ಯವಸ್ಥೆ ಇದೆಯೇ, ಶೌಚಾಲಯಗಳಿವೆಯೇ, ಬೀದಿ ದೀಪಗಳಿವೆಯೇ, ಮಕ್ಕಳಿಗೆ ಉತ್ತಮ ಶಾಲೆ ಮತ್ತು ಗುಣಮಟ್ಟದ ಶಿಕ್ಷಣ ಸಿಗುತ್ತಿದೆಯೇ, ಅವರ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೌಲಭ್ಯವಿದೆಯೇ ಎಂಬುದನ್ನು ಅರಿಯಬೇಕು. ನಗರದ ಶ್ರೀಮಂತ ಪ್ರದೇಶಗಳಿಗೆ ದೊರೆಯುವ ಮೂಲಭೂತ ಸೌಕರ್ಯಗಳ ಕನಿಷ್ಠ ಮಟ್ಟವಾದರೂ ಪೌರ ಕಾರ್ಮಿಕರು ವಾಸಿಸುವ ಪ್ರದೇಶಗಳಿಗೆ ದೊರೆಯುತ್ತಿದೆಯೇ ಎಂಬುದನ್ನು ಸರಕಾರ ಪರಿಶೀಲಿಸಬೇಕು.
ಒಬ್ಬ ಪೌರ ಕಾರ್ಮಿಕನ ಮಗುವಿಗೂ ನಗರದ ಇತರ ಮಕ್ಕಳಂತೆಯೇ ಉತ್ತಮ ಶಿಕ್ಷಣ ಸಿಗಬೇಕು. ಅವರ ಮಕ್ಕಳಿಗೆ ಕೇವಲ ಸರಕಾರಿ ಶಾಲೆಯಲ್ಲಿ ಒಂದು ಸೀಟು ಸಿಕ್ಕರೆ ಕರ್ತವ್ಯ ಮುಗಿಯುವುದಿಲ್ಲ. ಗುಣಮಟ್ಟದ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಅವಕಾಶ, ವೃತ್ತಿಪರ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರೆಯಬೇಕು. ಏಕೆಂದರೆ ಒಬ್ಬ ಪೌರ ಕಾರ್ಮಿಕನ ಮಗ ಅಥವಾ ಮಗಳು ಜೀವನಪೂರ್ತಿ ಅದೇ ಕೆಲಸ ಮಾಡಬೇಕು ಎಂಬುದು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳಲಾಗದ ಅನ್ಯಾಯ. ಅವರ ಮಕ್ಕಳು ವೈದ್ಯರಾಗಬಹುದು, ಇಂಜಿನಿಯರ್ ಆಗಬಹುದು, ವಕೀಲರಾಗಬಹುದು, ಶಿಕ್ಷಕರಾಗಬಹುದು, ಅಧಿಕಾರಿಗಳಾಗಬಹುದು, ಉದ್ಯಮಿಗಳಾಗಬಹುದು. ತಮ್ಮ ಬದುಕನ್ನು ತಾವೇ ಆಯ್ಕೆಮಾಡುವ ಸ್ವಾತಂತ್ರ್ಯ ಅವರಿಗೂ ಇರಬೇಕು. ಒಂದು ಕುಟುಂಬದ ವೃತ್ತಿ ಮುಂದಿನ ಪೀಳಿಗೆಗೆ ಅಂಟಿಕೊಳ್ಳಬಾರದು.
ಭಾರತೀಯ ಸಮಾಜದ ಇತಿಹಾಸವನ್ನು ನೋಡಿದಾಗ ಕೆಲವು ವೃತ್ತಿಗಳನ್ನು ನಿರ್ದಿಷ್ಟ ಸಮುದಾಯಗಳೊಂದಿಗೆ ಜೋಡಿಸಿ, ಆ ವೃತ್ತಿಗಳನ್ನೇ ಕೀಳಾಗಿ ಕಾಣುವ ಮನಸ್ಥಿತಿ ಬೆಳೆದುಬಂದಿರುವುದು ಸ್ಪಷ್ಟವಾಗುತ್ತದೆ. ಅದರ ಪರಿಣಾಮವಾಗಿ ಕೆಲಸದ ಕೀಳರಿಮೆ ಮನುಷ್ಯನ ಕೀಳರಿಮೆಯಾಗಿ ಮಾರ್ಪಟ್ಟಿದೆ. ಪೌರ ಕಾರ್ಮಿಕರ ವಿಷಯದಲ್ಲಿ ಈ ಸಾಮಾಜಿಕ ಕಳಂಕ ಇನ್ನೂ ಸಂಪೂರ್ಣವಾಗಿ ಅಳಿದುಹೋಗಿಲ್ಲ. ನಗರಗಳು ಆಧುನಿಕವಾಗಿವೆ, ತಂತ್ರಜ್ಞಾನ ಬೆಳೆಯುತ್ತಿದೆ, ಜೀವನಶೈಲಿ ಬದಲಾಗುತ್ತಿದೆ. ಆದರೆ ‘ಈ ಕೆಲಸವನ್ನು ಅವರೇ ಮಾಡಬೇಕು’ ಎಂಬ ಮನಸ್ಥಿತಿ ಇನ್ನೂ ಸಮಾಜದ ಕೆಲವು ಭಾಗಗಳಲ್ಲಿ ಜೀವಂತವಾಗಿದೆ. ಈ ಮನಸ್ಥಿತಿಯನ್ನು ಬದಲಾಯಿಸದೆ ನಿಜವಾದ ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯವಿಲ್ಲ.
ದೇಶದ ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುವ ಸೈನಿಕನ ಸೇವೆಯನ್ನು ನಾವು ಅತ್ಯಂತ ಗೌರವದಿಂದ ನೋಡುತ್ತೇವೆ. ಅವರ ಶ್ರಮಕ್ಕೆ ದೇಶ ಕೃತಜ್ಞವಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ದೇಶದ ನಗರಗಳನ್ನು ಪ್ರತಿದಿನ ಸ್ವಚ್ಛವಾಗಿಡುವ ಪೌರ ಕಾರ್ಮಿಕರ ಸೇವೆಯೂ ಸಾರ್ವಜನಿಕ ಜೀವನಕ್ಕೆ ಅಷ್ಟೇ ಅಗತ್ಯ. ಸೈನಿಕರು ದೇಶವನ್ನು ಹೊರಗಿನ ಅಪಾಯಗಳಿಂದ ರಕ್ಷಿಸುತ್ತಾರೆ. ಪೌರ ಕಾರ್ಮಿಕರು ನಮ್ಮ ನಗರಗಳ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತಾರೆ. ಹಾಗಿದ್ದಾಗ ಅವರ ಸೇವೆಯನ್ನು ಏಕೆ ಕೀಳು ಮಟ್ಟದ ಕೆಲಸವೆಂದು ನೋಡಬೇಕು? ಗಡಿಯಲ್ಲಿ ನಿಂತಿರುವ ಯೋಧನಿಗೆ ಸಿಗುವ ಗೌರವ, ಘನತೆ ಮತ್ತು ಸಾಮಾಜಿಕ ಮಾನ್ಯತೆ ಪೌರ ಕಾರ್ಮಿಕನಿಗೂ ಸಿಗಬೇಕು. ಅವರ ಶ್ರಮಕ್ಕೆ ತಕ್ಕ ವೇತನ, ಉದ್ಯೋಗ ಭದ್ರತೆ ಮತ್ತು ಕುಟುಂಬದ ಭವಿಷ್ಯಕ್ಕೆ ಬೇಕಾದ ಸಾಮಾಜಿಕ ಭದ್ರತೆ ದೊರೆಯಬೇಕು.
ಪೌರ ಕಾರ್ಮಿಕರ ಆರೋಗ್ಯದ ವಿಚಾರದಲ್ಲಂತೂ ಸರಕಾರ ಇನ್ನಷ್ಟು ಗಂಭೀರವಾಗಿ ನಡೆದುಕೊಳ್ಳಬೇಕು. ಪ್ರತಿದಿನ ಕಸ, ತ್ಯಾಜ್ಯ, ಚರಂಡಿ ಮತ್ತು ವಿವಿಧ ಸೋಂಕಿನ ಅಪಾಯಗಳ ನಡುವೆ ಕೆಲಸ ಮಾಡುವ ವ್ಯಕ್ತಿಯ ಆರೋಗ್ಯವನ್ನು ಸಾಮಾನ್ಯ ಉದ್ಯೋಗಿಯ ಆರೋಗ್ಯದಂತೆ ಪರಿಗಣಿಸಲು ಸಾಧ್ಯವಿಲ್ಲ. ಅವರಿಗೆ ನಿಯಮಿತವಾಗಿ, ಕನಿಷ್ಠ ತಿಂಗಳಿಗೊಮ್ಮೆ, ಉನ್ನತ ಮಟ್ಟದ ಆರೋಗ್ಯ ತಪಾಸಣೆ ನಡೆಸುವ ವ್ಯವಸ್ಥೆ ಇರಬೇಕು. ಕೆಲಸದ ಸ್ವರೂಪಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ನಗರದ ಯಾವುದೇ ಉತ್ತಮ ಆಸ್ಪತ್ರೆಯಲ್ಲಿ ಅವರಿಗೆ ಉಚಿತ ಮತ್ತು ತಕ್ಷಣದ ಚಿಕಿತ್ಸೆ ದೊರೆಯುವ ವ್ಯವಸ್ಥೆ ಇರಬೇಕು. ಕೆಲಸದ ವೇಳೆ ಅಪಘಾತವಾದರೆ ಚಿಕಿತ್ಸೆ, ಪರಿಹಾರ ಮತ್ತು ಕುಟುಂಬಕ್ಕೆ ಅಗತ್ಯವಾದ ಆರ್ಥಿಕ ಭದ್ರತೆ ದೊರೆಯಬೇಕು. ರಕ್ಷಣಾತ್ಮಕ Hand gloves, ಬೂಟು, ಮಾಸ್ಕ್, ಸುರಕ್ಷತಾ ಉಡುಪು ಮತ್ತು ಆಧುನಿಕ ಉಪಕರಣಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಮನುಷ್ಯರ ದೇಹವನ್ನು ಯಂತ್ರಗಳಂತೆ ಬಳಸುವ ಮನಸ್ಥಿತಿಯಿಂದ ಹೊರಬಂದು, ತಂತ್ರಜ್ಞಾನ ಮತ್ತು ಯಾಂತ್ರೀಕರಣದ ಮೂಲಕ ಅಪಾಯಕಾರಿ ಕೆಲಸಗಳನ್ನು ಕಡಿಮೆ ಮಾಡಬೇಕು.
ಇಲ್ಲಿ ‘Dignity of Labour’ ಎಂಬ ಪರಿಕಲ್ಪನೆಯನ್ನು ನಮ್ಮ ಸಮಾಜ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಿದೆ. ಕೆಲಸದ ಸ್ವರೂಪವನ್ನು ಆಧರಿಸಿ ಮನುಷ್ಯನ ಗೌರವವನ್ನು ಅಳೆಯುವ ಸಮಾಜ ನಿಜವಾದ ಪ್ರಗತಿಪರ ಸಮಾಜವಾಗಲು ಸಾಧ್ಯವಿಲ್ಲ. ಒಬ್ಬ ವೈದ್ಯನ ಕೆಲಸ ಗೌರವಯುತವಾದರೆ, ಒಬ್ಬ ಶಿಕ್ಷಕನ ಕೆಲಸ ಗೌರವಯುತವಾದರೆ, ಒಬ್ಬ ವಕೀಲ ಅಥವಾ ಅಧಿಕಾರಿಯ ಕೆಲಸ ಗೌರವಯುತವಾದರೆ, ನಗರದ ಕಸವನ್ನು ಸ್ವಚ್ಛಗೊಳಿಸುವ ಕಾರ್ಮಿಕನ ಕೆಲಸವೂ ಅಷ್ಟೇ ಗೌರವಯುತವಾಗಿದೆ. ವಿದೇಶಗಳ ಅನೇಕ ಸಮಾಜಗಳಲ್ಲಿ ಸ್ವಚ್ಛತಾ ಕಾರ್ಮಿಕರು ತಮ್ಮ ವೃತ್ತಿಯ ಕಾರಣಕ್ಕೆ ಸಾಮಾಜಿಕವಾಗಿ ಕೀಳರಿಮೆ ಅನುಭವಿಸಬೇಕಾದ ಪರಿಸ್ಥಿತಿ ಕಡಿಮೆ ಇದೆ. ನಮ್ಮ ದೇಶದಲ್ಲಿಯೂ ಶ್ರಮದ ಘನತೆ ಕೇವಲ ಭಾಷಣಗಳಲ್ಲಿ ಅಥವಾ ಪಠ್ಯಪುಸ್ತಕಗಳಲ್ಲಿ ಉಳಿಯದೆ, ನಮ್ಮ ದಿನನಿತ್ಯದ ಬದುಕಿನ ಭಾಗವಾಗಬೇಕು.
ಸಚಿವರು ಪೌರ ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಒಪ್ಪಲೇಬೇಕು ಎಂದೇನಿಲ್ಲ. ಸರಕಾರಕ್ಕೆ ತನ್ನದೇ ಆದ ಆಡಳಿತಾತ್ಮಕ, ಆರ್ಥಿಕ ಮತ್ತು ಕಾನೂನುಬದ್ಧ ಮಿತಿಗಳಿರಬಹುದು. ಖಾಯಂ ಮಾಡುವ ವಿಚಾರದಲ್ಲಿ ಪರಿಶೀಲನೆ ಅಗತ್ಯವಿರಬಹುದು. ಸರಕಾರಕ್ಕೆ ತಕ್ಷಣವೇ ಸಾಧ್ಯವಾಗದ ಕೆಲವು ನಿರ್ಧಾರಗಳಿರಬಹುದು. ಆದರೆ ಒಂದು ಬೇಡಿಕೆಯನ್ನು ಒಪ್ಪದಿರುವುದು ಮತ್ತು ಒಬ್ಬ ಮನುಷ್ಯನನ್ನು ಅವಮಾನಿಸುವುದು ಎರಡೂ ಒಂದೇ ವಿಷಯವಲ್ಲ. ಬೇಡಿಕೆಯನ್ನು ತಿರಸ್ಕರಿಸಬಹುದು, ಚರ್ಚಿಸಬಹುದು, ಪರ್ಯಾಯ ಮಾರ್ಗವನ್ನು ಸೂಚಿಸಬಹುದು. ಆದರೆ ಅಗೌರವವಾಗಿ ನಡೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ.
ಪೌರ ಕಾರ್ಮಿಕರು ಯಾರ ದಯೆಯನ್ನೂ ಅಥವಾ ಬಹುಮಾನವನ್ನು ಕೇಳುತ್ತಿಲ್ಲ. ಅವರು ತಮ್ಮ ಬೆವರಿನ ಬೆಲೆ ಕೇಳುತ್ತಿದ್ದಾರೆ. ತಮ್ಮ ಶ್ರಮಕ್ಕೆ ಗೌರವ ಕೇಳುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಭದ್ರತೆ ಕೇಳುತ್ತಿದ್ದಾರೆ. ತಮ್ಮ ಮಕ್ಕಳಿಗೆ ತಮ್ಮಂತೆಯೇ ಕಷ್ಟದ ಬದುಕು ಬರಬಾರದು ಎಂದು ಬಯಸುತ್ತಿದ್ದಾರೆ. ದಿನನಿತ್ಯದ ಆರೋಗ್ಯದ ಅಪಾಯಗಳ ನಡುವೆ ಕೆಲಸ ಮಾಡುವ ತಮ್ಮ ದೇಹಕ್ಕೆ ರಕ್ಷಣೆ ಮತ್ತು ಚಿಕಿತ್ಸೆಯ ಹಕ್ಕು ಕೇಳುತ್ತಿದ್ದಾರೆ. ಮುಖ್ಯವಾಗಿ, ‘‘ನಾವು ಕೂಡ ಮನುಷ್ಯರು, ನಮ್ಮನ್ನೂ ಮನುಷ್ಯರಂತೆ ಗೌರವಿಸಿ’’ ಎಂದು ಕೇಳುತ್ತಿದ್ದಾರೆ.
ಆದ್ದರಿಂದ ಈ ಪ್ರಶ್ನೆಯನ್ನು ಕೇವಲ ಪೌರ ಕಾರ್ಮಿಕರ ಸಮಸ್ಯೆಯೆಂದು ನೋಡಬಾರದು. ಇದು ನಮ್ಮ ಸಮಾಜದ ಮಾನವೀಯತೆಯ ಪರೀಕ್ಷೆ. ಸ್ವಚ್ಛವಾದ ನಗರ ಬೇಕೆಂದರೆ ಸ್ವಚ್ಛತಾ ಕಾರ್ಮಿಕರ ಬದುಕೂ ಸ್ವಚ್ಛವಾಗಿರಬೇಕು. ಸ್ವಚ್ಛ ಭಾರತ ಬೇಕೆಂದರೆ ನಮ್ಮ ಮನಸ್ಸಿನಲ್ಲಿರುವ ಜಾತಿ, ವೃತ್ತಿ ಮತ್ತು ಮನುಷ್ಯರ ನಡುವಿನ ಕೀಳರಿಮೆಯ ಕಸವೂ ಸ್ವಚ್ಛವಾಗಬೇಕು. ರಸ್ತೆಗಳನ್ನು ಸ್ವಚ್ಛಗೊಳಿಸುವ ಕೈಗಳನ್ನು ಗೌರವಿಸದೆ ಸ್ವಚ್ಛ ನಗರದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ.
ಪೌರ ಕಾರ್ಮಿಕರನ್ನು ಗೌರವಿಸುವುದು ಅವರ ಮೇಲಿನ ಉಪಕಾರವಲ್ಲ. ಅದು ಅವರ ಹಕ್ಕು. ಅವರ ಶ್ರಮಕ್ಕೆ ನ್ಯಾಯಯುತ ಪ್ರತಿಫಲ ನೀಡುವುದು ಸರಕಾರದ ಕರ್ತವ್ಯ. ಅವರ ಆರೋಗ್ಯವನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಸಾಮಾಜಿಕ ನ್ಯಾಯ. ಅವರು ವಾಸಿಸುವ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಪ್ರದೇಶಗಳಿಗೆ ಗೌರವಯುತ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವುದು ಜನಪರ ಆಡಳಿತದ ಮಾನದಂಡ.
ಹೀಗಾಗಿ ಪೌರ ಕಾರ್ಮಿಕರನ್ನು ಅವಮಾನಿಸುವ ಮೊದಲು ಅವರ ಬದುಕನ್ನು ಒಮ್ಮೆ ನೋಡಬೇಕು. ಅವರ ಕೈಗಳಿಗೆ ಅಂಟಿಕೊಂಡಿರುವ ಕಸಕ್ಕಿಂತ, ಅವರ ಬದುಕಿಗೆ ಅಂಟಿಕೊಂಡಿರುವ ಸಾಮಾಜಿಕ ಕಳಂಕವೇ ನಮ್ಮ ಸಮಾಜದ ದೊಡ್ಡ ಕೊಳೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರ ಶ್ರಮವಿಲ್ಲದೆ ಒಂದು ದಿನವೂ ನಮ್ಮ ನಗರ ಸ್ವಚ್ಛವಾಗಿರಲು ಸಾಧ್ಯವಿಲ್ಲ. ಹಾಗಿದ್ದರೆ ಅವರನ್ನು ಕೀಳಾಗಿ ನೋಡುವ ಹಕ್ಕು ನಮಗೆ ಎಲ್ಲಿಂದ ಬಂತು?
ಕಸ ಹೊರುವ ಕೈಗಳು ಕೀಳಲ್ಲ. ಆ ಕೈಗಳನ್ನು ಕೀಳಾಗಿ ನೋಡುವ ಮನಸ್ಸೇ ಕೀಳು.
ಪೌರ ಕಾರ್ಮಿಕರಿಗೆ ಸಿಗಬೇಕಾದ ಗೌರವವನ್ನು ರಕ್ಷಿಸುವುದು ಕೇವಲ ಅವರ ಹೋರಾಟವಲ್ಲ. ಅದು ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯವನ್ನು ಒಪ್ಪುವ ಪ್ರತಿಯೊಬ್ಬ ನಾಗರಿಕನ ಹೋರಾಟ.






