Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೋದಿ-ಅಮಿತ್ ಶಾ ಅವರನ್ನು ಪ್ರಶ್ನೆ...

ಮೋದಿ-ಅಮಿತ್ ಶಾ ಅವರನ್ನು ಪ್ರಶ್ನೆ ಮಾಡಿದರೆ ಹಿಂದೂ ವಿರೋಧಿ ಹೇಗಾಗುತ್ತೇನೆ: ಪ್ರಕಾಶ್ ರಾಜ್

ಸಂದರ್ಶನ: ಅವಿನಾಶ್ ಕಾಮತ್ಸಂದರ್ಶನ: ಅವಿನಾಶ್ ಕಾಮತ್6 March 2024 11:17 AM IST
share
ಮೋದಿ-ಅಮಿತ್ ಶಾ ಅವರನ್ನು ಪ್ರಶ್ನೆ ಮಾಡಿದರೆ ಹಿಂದೂ ವಿರೋಧಿ ಹೇಗಾಗುತ್ತೇನೆ: ಪ್ರಕಾಶ್ ರಾಜ್
ನಮಗೆ ಮತ ಹಾಕುವ ಅಧಿಕಾರ ಇರುವುದು ಒಂದು ಸರಕಾರವನ್ನು ಉರುಳಿಸಿ ಇನ್ನೊಂದನ್ನು ಏರಿಸುವುದಕ್ಕಲ್ಲ. ನಮ್ಮ ನೆಲದಲ್ಲಿ ಇನ್ನೊಬ್ಬ ನಾಯಕ ಹುಟ್ಟುವ ಒಂದು ಸಾಧ್ಯತೆಯನ್ನು ತರುವುದು. ಯಾವ ಪಕ್ಷವೂ ಒಬ್ಬ ಪ್ರಧಾನಿಯನ್ನು ನೇರವಾಗಿ ಚುನಾಯಿಸುವ ಹಕ್ಕು ಜನತೆಗೆ ಇಲ್ಲವೆನ್ನುವುದನ್ನು ಹೇಳಿಯೇ ಇಲ್ಲ. ಕಾಂಗ್ರೆಸ್ ಅನ್ನು ಏಕೆ ಪ್ರಶ್ನೆ ಮಾಡಲ್ಲ ಎನ್ನುತ್ತಾರೆ. ಅಂದರೆ ನಿಮ್ಮಿಂದಲೇ ಪ್ರಶ್ನೆ ಶುರು ಮಾಡಬೇಕಲ್ಲವೆ? ಇಲ್ಲದಿರುವವರನ್ನು ಏಕೆ ಪ್ರಶ್ನೆ ಮಾಡಲಿ? ಬಂದಾಗ, ತಪ್ಪು ಮಾಡಿದಾಗ ಕೇಳುತ್ತೇನೆ. ಈಗ ನಿಮ್ಮನ್ನು ಕೇಳುವುದನ್ನು ಬಿಟ್ಟು ಅವರನ್ನೇಕೆ ಕೇಳಲಿ? ನಿಮಗೆ ನಾನು ಪ್ರಶ್ನೆ ಕೇಳಿದರೆ ಅವರನ್ನೇಕೆ ಕೇಳಲಿಲ್ಲ ಎನ್ನುವ ಬದಲು ಮೊದಲು ಉತ್ತರ ಕೊಡಿ.

ನಮ್ಮ ದೇಶದ ಅತ್ಯದ್ಭುತ ನಟರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಬಹುಭಾಷಾ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು ‘ವಾರ್ತಾಭಾರತಿ’ ಸ್ಟುಡಿಯೋಗೆ ಆಗಮಿಸಿದಾಗ ಅವರೊಂದಿಗೆ ನಡೆಸಿದ ಸಂದರ್ಶನ.

► ಒಬ್ಬ ನಟನಾಗಿ ಪ್ರಕಾಶ್ ರಾಜ್ ಅವರು ಒಂದು ವರ್ಗಕ್ಕೆ ಯಾವ ರೀತಿಯಲ್ಲಿ ತುಂಬ ಇಷ್ಟವಾಗುತ್ತಾರೆ?

ಪ್ರಕಾಶ್ ರಾಜ್: ನಾಲ್ಕು ದಶಕಗಳ ಪ್ರಯಾಣ. ಎಲ್ಲ ಭಾಷೆ ಯ, ಎಲ್ಲ ಧರ್ಮದ, ಎಲ್ಲ ವರ್ಗದ ಜನರು ಇಷ್ಟಪಟ್ಟಿದ್ದಾರೆ.

► ಐದಕ್ಕಿಂತಲೂ ಹೆಚ್ಚು ಭಾಷೆಗಳನ್ನು ನೀವು ಕಲಿತು ಆ ಎಲ್ಲ ಭಾಷೆಗಳನ್ನು ಅಷ್ಟು ನಿರರ್ಗಳವಾಗಿ ಮಾತನಾಡುತ್ತೀರಿ. ಎಲ್ಲ ಭಾಷೆಗಳ ಸಿನೆಮಾಗಳಲ್ಲೂ ಸೈ ಎನಿಸಿಕೊಂಡಿದ್ದೀರಿ. ಇದು ಹೇಗೆ ಸಾಧ್ಯವಾಯಿತು?

ಪ್ರಕಾಶ್ ರಾಜ್: ಕನ್ನಡ ಭಾಷೆಯಲ್ಲಿ ಮಾತಾಡುವಾಗ ತಪ್ಪಾಗಿ ಮಾತಾಡಿದರೆ ನಮಗೆ ನೋವಾಗುತ್ತದಲ್ಲವೇ? ಹಾಗೆಯೇ ಇನ್ನೊಂದು ಭಾಷೆಗೆ ಹೋದಾಗ ಅದರ ಉಚ್ಚಾರಣೆ, ಅದರ ಸಾಹಿತ್ಯವನ್ನು ಕಲಿಯಬೇಕಾಗುತ್ತದೆ. ಅಲ್ಲಿಯ ಜನರಿಗೆ ಅರ್ಥವಾಗುವ ಹಾಗೆ ಮಾತನಾಡಬೇಕಾಗುತ್ತದೆ. ನಾನು ಅವರ ಭಾಷೆಯಲ್ಲಿ ಮಾತನಾಡಿದರೆ ಮಾತ್ರ ಅರ್ಥವಾಗುವುದು. ನಟನಾಗಿ ಅದು ಬಹಳ ಮುಖ್ಯ ಅನಿಸಿತು ನನಗೆ. ಅವರ ಸಂಸ್ಕೃತಿಯನ್ನು, ಅವರ ಸಂಸ್ಕಾರವನ್ನು, ಅವರ ಭಾಷೆಯನ್ನು, ಅವರ ಕಲೆಯನ್ನು, ಅವರ ಸಾಹಿತ್ಯವನ್ನು ಅವರ ಮಾತನ್ನು ಕಲಿತಾಗ ಬಹಳ ಆಪ್ತರಾಗುತ್ತ ಹೋಗುತ್ತೇವೆ, ನಮ್ಮ ಕನ್ನಡವನ್ನು ಕಲಿಯಿರಿ ಎಂದು ಗಟ್ಟಿಯಾಗಿ ಹೇಳುವುದು ಕೂಡ ಸಾಧ್ಯವಾಗುತ್ತದೆ. ನಾವು ಅವರವರಾಗುವುದಕ್ಕೆ, ಪಾತ್ರದಲ್ಲಿ ಲೀನವಾಗುವುದಕ್ಕೆ ಆಗುತ್ತದೆ. ಆಯಾ ಭಾಷೆ ಕಲಿಯುವುದರಿಂದ ಆಯಾ ಭಾಷೆಯ ಉಪಮೆಗಳು ಅರ್ಥವಾಗುತ್ತವೆ. ಅವರ ಸಮಸ್ಯೆಗಳು ಅರ್ಥವಾಗುತ್ತವೆ. ಅವರ ಭಾವಗಳು, ಅವರ ಸೌಂದರ್ಯಪ್ರಜ್ಞೆ ಅರ್ಥವಾಗುತ್ತದೆ. ಹಾಗಾಗಿ ಒಂದು ಭಾಷೆ ಕಲಿಯುವುದು ಮುಖ್ಯ ಅನ್ನಿಸಿತು.

► ಮೋದಿಯವರ ಆಡಳಿತ ಬಂದು ಹತ್ತು ವರ್ಷಗಳಾಗಿವೆ. ಈಗ ನಮ್ಮ ದೇಶದ ಪರಿಸ್ಥಿತಿ ಹೇಗಿದೆಯೆಂದು ನಿಮಗೆ ಅನಿಸುತ್ತದೆ?

ಪ್ರಕಾಶ್ ರಾಜ್: ನೋಡುವುದಕ್ಕೆ ಎಲ್ಲ ಇದೆ. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿದೆಯೇ? ಹೆಣ್ಣುಮಕ್ಕಳು ಸುರಕ್ಷಿತವಾಗಿದ್ದಾರೆಯೇ? ನನಗೆ ಅವರ ಜೊತೆ ವೈಯಕ್ತಿಕ ಸಮಸ್ಯೆಗಳೇನಿಲ್ಲವಲ್ಲ. ಮಾನವ ಧರ್ಮ ಮುಖ್ಯ. ರೈತರೇಕೆ ಆಂದೋಲನ ಮಾಡಬೇಕಾಗಿದೆ? ಇವನ್ನೆಲ್ಲ ಯೋಚನೆ ಮಾಡಿದಾಗ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಬರುತ್ತದೆ. ನನ್ನ ಜೀವನ ಚೆನ್ನಾಗಿರಬಹುದು. ಆದರೆ ದೇಶದ ಪ್ರಜೆಯಾಗಿ ಜನಸಾಮಾನ್ಯರ ಬಗ್ಗೆ ಯೋಚಿಸುವಾಗ, ಏನೂ ಆಗಿಲ್ಲ. ಹಸಿವಿನ ಸಮಸ್ಯೆ, ನಿರುದ್ಯೋಗ ಎಲ್ಲವೂ ಹಾಗೆಯೇ ಇದೆ.

► ಈ ಪ್ರಶ್ನೆಗಳಿಗೆಲ್ಲ ನಿಮಗೆ ಉತ್ತರ ಸಿಕ್ಕಿದೆಯೆ?

ಪ್ರಕಾಶ್ ರಾಜ್: ಉತ್ತರ ಸಿಗುತ್ತಿಲ್ಲ. ಪ್ರಶ್ನೆಗೆ ಉತ್ತರ ಇಲ್ಲ. ಮೋದಿಯವರನ್ನು, ಅಮಿತ್ ಶಾ ಅವರನ್ನು ಪ್ರಶ್ನೆ ಮಾಡಿದರೆ ಹಿಂದೂ ವಿರೋಧಿ ಹೇಗಾಗುತ್ತೇನೋ ಗೊತ್ತಿಲ್ಲ. ನಿಮ್ಮ ಮನೋಭಾವವನ್ನು, ನಿಮ್ಮ ನಾಟಕೀಯತೆಯನ್ನು ಪ್ರಶ್ನೆ ಮಾಡಿದ ತಕ್ಷಣ ಧರ್ಮದ ವಿರೋಧಿ ಯಾಕಾಗುತ್ತೇನೆ? ಹಿಂದೂ ವಿರೋಧಿ, ದೇಶ ವಿರೋಧಿ ಎಂದು ಬ್ರ್ಯಾಂಡ್ ಮಾಡುವುದು ನಡೆದಿದೆ. ಪ್ರಶ್ನೆಗೆ ಉತ್ತರ ಇಲ್ಲ. ಆದರೆ, ನಾನು ಕೇಳುವ ಪ್ರಶ್ನೆಗಳನ್ನು ಕೇಳಬಾರದು ಎನ್ನುವುದು ದಮನ ಮಾಡುವ ರೀತಿ.

► ಬಿಜೆಪಿಯವರ ಪ್ರಕಾರ, ಮೋದಿಯವರ ಆಡಳಿತದಲ್ಲೇ ಭಾರತಕ್ಕೆ ಕೆಲವೊಂದು ಗೌರವಗಳು ಸಿಕ್ಕಿವೆ. ಜಾಗತಿಕ ಮನ್ನಣೆ ಸಿಕ್ಕಿದೆ. ವಿಶ್ವಗುರು ಆಗುತ್ತಿದೆ. ಹಾಗೆಲ್ಲ ಹೇಳಲಾಗುತ್ತಿದೆ.

ಪ್ರಕಾಶ್ ರಾಜ್: ಹೇಳುತ್ತಿದ್ದಾರೆ. ಹಾಗೆ ಏನು ಬೇಕಾದರೂ ಹೇಳಬಹುದಲ್ಲವೇ? ಹೇಳುವುದಕ್ಕೇನು? ಅಂಕಿಅಂಶಗಳ ಸಹಿತ ಹೇಳಬೇಕು, ಅದನ್ನು ಅವರು ಹೇಳುತ್ತಿಲ್ಲ. ಪರಿಸರ ಏನು ಹೇಳುತ್ತಿದೆ? ರೈತರು ಏಕೆ ಪ್ರತಿಭಟನೆಗೆ ಬಂದಿದ್ದಾರೆ? ಮಣಿಪುರ ಯಾಕೆ ಹೊತ್ತಿ ಉರಿಯುತ್ತಿದೆ? ದೇಶ ಎಲ್ಲ ಒಂದೇ ಎಂದು ಭಾವಿಸುವವರು ಮಣಿಪುರಕ್ಕೆ ಏಕೆ ಹೋಗಲಿಲ್ಲ? ನೀರಲ್ಲಿ ಹೋಗುತ್ತಾರೆ, ಮೇಲಕ್ಕೆ ಹೋಗುತ್ತಾರೆ. ಗುಹೆಯೊಳಗೆ ಹೋಗುತ್ತಾರೆ. ಮಣಿಪುರಕ್ಕೆ ಹೋಗಿಯೇ ಇಲ್ಲ ಯಾಕೆ? ಇದನ್ನೇ ನಾನು ಕೇಳುತ್ತಿರುವುದು. ನಿರುದ್ಯೋಗ ಸಮಸ್ಯೆ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಬೆಲೆಯೇರಿಕೆ ಬಗ್ಗೆ ಯಾಕಿಲ್ಲ? ಒಂದೇ ಒಂದು ಸುದ್ದಿಗೋಷ್ಠಿ ಯಾಕೆ ಮಾಡಿಲ್ಲ?

► ಮೊದಲ ಅವಧಿಯ ಆಡಳಿತ ಮೊದಲ ಡೋಸ್ ಅಂತೆ, ಎರಡನೇ ಅವಧಿಯದ್ದು ಎರಡನೇ ಡೋಸ್ ಅಂತೆ, ಮೂರನೇ ಅವಧಿ ಬೂಸ್ಟರ್ ಡೋಸ್ ಅಂತೆ. ಎಲ್ಲವೂ ಎಲ್ಲ ರೋಗವೂ ಬಗೆಹರಿಯುತ್ತದೆ ಎನ್ನುತ್ತಾರೆ, ನಿಜವೆ?

ಪ್ರಕಾಶ್ ರಾಜ್: ಅವರೇ ರೋಗ, ಅವರೇ ಮದ್ದು ಎನ್ನುತ್ತಿದ್ದಾರೆ, ಬೇರೆ ಏನೂ ಹೇಳುತ್ತಿಲ್ಲ. ವಾಸ್ತವ ಏನು ಎನ್ನುವುದನ್ನು ಹೇಳಬೇಕು.

► ಸರಕಾರ ಏನು ಎನ್ನುವುದನ್ನು ನಿಮ್ಮ ನೆಲೆಯಲ್ಲಿ ನೀವು ಹೇಳುತ್ತಿದ್ದೀರಿ. ಆದರೆ ವಾಸ್ತವದಲ್ಲಿ ಇದೆಲ್ಲ ವಿಚಾರಗಳೂ ಜನರಿಗೆ ಗೊತ್ತಾಗಿದೆಯಾ?

ಪ್ರಕಾಶ್ ರಾಜ್: ಹೇಳುವುದು, ಪ್ರಶ್ನಿಸುವುದು ನನ್ನ ಮನಸಾಕ್ಷಿ. ಜನರನ್ನು ನಾನು ದೂಷಿಸುವುದಿಲ್ಲ. ಅವರನ್ನು ಬೇರೆ ಬೇರೆ ಮಾಯೆಗೆ ಒಳಗಾಗಿಸಲಾಗುತ್ತಿದೆ. ಅವರು ಅದನ್ನೇ ನಿಜವೆಂದು ಅಂದುಕೊಂಡಿರಬಹುದು. ಹಾಗೆಂದು ನಾನು ಮೌನವಾಗಿರುವುದು ಸಾಧ್ಯವಿಲ್ಲ. ಒಬ್ಬರಾದರೂ ಕೇಳುವವರು ಬೇಕು, ಅಲ್ಲವೇ? ಯೋಚನೆ ಮಾಡುವ ಮನೋಭಾವವೇ ಇಲ್ಲದೆ ಹೋದರೆ?

ಒಂದು ಪತ್ರಿಕೆಯಲ್ಲಿ ಸರಕಾರದ ಕಾರ್ಯಕ್ರಮದ ಜಾಹೀರಾತು ಬರುತ್ತದೆ. ಆ ಜಾಹೀರಾತಿಗೆ ಖರ್ಚು ಮಾಡುವ ಹಣ ಯಾರದು? ಪತ್ರಿಕೆಗೆ ಜಾಹೀರಾತು ಮೂಲಕ ಎಷ್ಟು ದುಡ್ಡು ಹೋಯಿತು? ನಮಗೆ ಇಂಥ ಸೂಕ್ಷ್ಮಗಳು ಅರ್ಥವಾಗಬೇಕು. ಆ ಹಣ ನಮ್ಮದೇ ಅಲ್ವೆ? ಚುನಾವಣೆಗೆ ಹಣ ಖರ್ಚು ಮಾಡುವ ರಾಜಕಾರಣಿಗಳು ಕೋವಿಡ್ ಬಂದಾಗ ಯಾಕೆ ಯಾರಿಗೂ ನೆರವಾಗಲಿಲ್ಲ? ಈ ಥರದ ಮೂಲಭೂತವಾದ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಅವರಿಗೆ ನಾನು ವೋಟು ಹಾಕಿದ್ದೇನೊ ಇಲ್ಲವೊ. ಆದರೆ ಪ್ರಶ್ನೆ ಕೇಳಬೇಡ ಎಂದರೆ ಹೇಗೆ?

► ನೀವು ಮೋದಿಯವರಲ್ಲಿ ಇಷ್ಟಪಡುವ ಯಾವುದಾದರೂ ಗುಣಗಳು ಇವೆಯಾ?

ಪ್ರಕಾಶ್ ರಾಜ್: ನನಗೆ ಯಾವುದೂ ಕಾಣಿಸುತ್ತಿಲ್ಲ. ಅವರು ಏನನ್ನು ಕಾಣಿಸಬೇಕು ಎಂದು ನಿರ್ಧರಿಸಿಯೇ ಅಷ್ಟನ್ನು ಮಾತ್ರ ತೋರಿಸುತ್ತಾರೆ. ಅವರ ಅಂತರಂಗದಲ್ಲಿ ಅವರೇನು ಮಾಡುತ್ತಿದ್ದಾರೆ ಎಂದು ಹೇಗೆ ಹೇಳುವುದು? ಸೆಲ್ಫಿ ತೆಗೆದುಕೊಳ್ಳುವುದನ್ನು ಬಿಟ್ಟು ನನಗೇನೂ ಕಾಣಿಸುತ್ತಿಲ್ಲ. 3 ಸಾವಿರ ಕೋಟಿ ಖರ್ಚು ಮಾಡಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಪ್ರತಿಮೆ ಮಾಡಿದರು. ಕೇರಳದಂತಹ ಕಡೆಗಳಲ್ಲಿ ಪ್ರವಾಹ ಬಂದಾಗ ನೆರವಾಗಲು ಆಗುವುದಿಲ್ಲ. ಮೂರ್ತಿಗಾಗಿ ಯಾಕೆ ಯಾರನ್ನು ಕೇಳಿ ಖರ್ಚು ಮಾಡುತ್ತೀರಿ? ನೀವ್ಯಾರು ಹಾಗೆ ಖರ್ಚು ಮಾಡುವುದಕ್ಕೆ? ದೇಶದಲ್ಲಿ ಎಷ್ಟು ಸರಕಾರಿ ಶಾಲೆಗಳಿವೆ. ಅಲ್ಲಿಗೆ ಬೇಕಾದ ಶಿಕ್ಷಣ ವ್ಯವಸ್ಥೆ ಬಗ್ಗೆ ಯೋಚನೆ ಮಾಡಿದ್ದೀರಾ? ಅಲ್ಲಿ ಶೌಚಾಲಯಗಳಿಲ್ಲದ್ದರ ಬಗ್ಗೆ ಯೋಚನೆ ಮಾಡಿದ್ದೀರಾ? ಶಿಕ್ಷಕರಿಗೆ ಖಾಯಂ ಉದ್ಯೋಗ ಇಲ್ಲದ್ದರ ಬಗ್ಗೆ ಯೋಚನೆ ಮಾಡಿದ್ದೀರಾ?

► ಆದರೆ ಅವರನ್ನು ಇಷ್ಟಪಡುವ ಎಲ್ಲರೂ, ನೀವು ಎಷ್ಟೇ ಬೆಲೆ ಏರಿಸಿ, ನಾವು ಕೊಡುತ್ತೇವೆ ಎನ್ನುತ್ತಿದ್ದಾರೆ.

ಪ್ರಕಾಶ್ ರಾಜ್: ಅವರಿಗೆ ಅರ್ಥವಾಗುವುದಿಲ್ಲ.

► ಅರ್ಥ ಮಾಡಿಸುವವರು ಯಾರು?

ಪ್ರಕಾಶ್ ರಾಜ್: ಹೇಳುವ ಜವಾಬ್ದಾರಿ ನನ್ನದು. ಅದನ್ನು ಮಾಡುತ್ತಿದ್ದೇನೆ. ಅವರದೇ ಮಾತು ಕೇಳುತ್ತಿದ್ದರೆ ಕಡೆಗೆ ಅನುಭವಿಸುವುದು ಇವರೇ. ಹಾಗಾಗುವ ಮೊದಲು ಹೇಳಿಲ್ಲ ಎಂದಾಗಬಾರದು.

► ಇವತ್ತು ಉದ್ಯೋಗವಿಲ್ಲದೆ ಕಷ್ಟಪಡುತ್ತಿರುವ ಯುವಕರು ಕಡೆಗೆ ಮೋದಿಗೇ ಮತ ಹಾಕುತ್ತಾರೆ.

ಪ್ರಕಾಶ್ ರಾಜ್: ಆಳುವವನು ಬೂದಿ ಮಣ್ಣು ತಿನ್ನಿಸುತ್ತಿದ್ದಾನೆ, ಹೆಂಡ ಕುಡಿಸುತ್ತಿದ್ದಾನೆ, ತಲೆ ಕೆಡಿಸುತ್ತಿದ್ದಾನೆ ಎಂದರೆ ಸುಮ್ಮನಿರಲು ಆಗುತ್ತದೆಯೇ? ಆ ಸರಕಾರ ಅಥವಾ ಆ ಪಕ್ಷ ಅಂಥ ರೀತಿಯಲ್ಲಿ ಮಂಕು ಮಾಡುತ್ತಿದೆ. ಮಂಕಾದವನು ಕ್ರಿಮಿನಲ್ ಆಗುತ್ತಾನೆ. ಜನ ಒಂದನ್ನು ತಿಳಿಯಬೇಕು. ನೀವು ಸರಿಯಾದ ನಾಯಕರನ್ನು ಆರಿಸಿದರೆ ನೀವು ಗೆಲ್ಲುತ್ತೀರಿ. ಆರಿಸದಿದ್ದರೆ ನೀವೇ ಸೋಲುತ್ತೀರಿ.

ಅವರನ್ನು ಚಾಣಕ್ಯ ಎನ್ನಲಾಗುತ್ತದೆ. ಆದರೆ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿದಿದೆಯಾ? ಬೆಲೆ ಏರಿಕೆ ನಿಂತಿದೆಯಾ? ನೀವು ನೆಮ್ಮದಿಯಾಗಿ ಬದುಕಲು ಸಾಧ್ಯವಾಗು ತ್ತಿದೆಯಾ? ಈ ಪ್ರಪಂಚದಲ್ಲಿ ಸರಿಯಾದ ದಾರಿಯಲ್ಲಿ ಬದುಕುವವನಿಗೇ ಬದುಕಿನಲ್ಲಿ ನಂಬಿಕೆಯಿಲ್ಲ. ಹೇಗಾದರೂ ಮಾಡಿ ಬದುಕುವವರಿಗೆ ನಂಬಿಕೆಯಿದೆ ಎಂದರೆ ಅದು ಸರಿಯಾ? ಇವತ್ತು ಸರಿ ಅನ್ನಿಸಬಹುದು. ಆದರೆ, ನಾಳೆ ಅನುಭವಿಸುವವರು ಯಾರು? ಇನ್ನು ನಾಲ್ಕು ವರ್ಷಗಳಾದರೆ ಈ ಯುವಕರೆಲ್ಲ ಏನಾಗುತ್ತಾರೆ?

► ನಿಮ್ಮ ಆಪ್ತ ವಲಯ ಈ ಬಗ್ಗೆ ಹೇಗೆ ಸ್ಪಂದಿಸುತ್ತಿದೆ?

ಪ್ರಕಾಶ್ ರಾಜ್: ನಾನು ನನಗೆ ಗೊತ್ತಿರುವವರಿಗೆ ಹೇಳುತ್ತೇನೆ. ನೀವು ನಿಮ್ಮ ಆತ್ಮ ಮಾರಿಕೊಳ್ಳಿ. ಆದರೆ, ದೇಶವನ್ನು ಯಾಕೆ ಮಾರುತ್ತೀರಿ ಎಂದು ಕೇಳುತ್ತೇನೆ. ಟ್ವಿಟರ್‌ನಲ್ಲಿ ನನಗೆ ಅಷ್ಟೊಂದು ಜನ ಫಾಲೋವರ್ಸ್ ಇದ್ದಾರೆ. ಯಾಕೆ ಫಾಲೋ ಮಾಡುತ್ತಿದ್ದಾರೆ? ನಾನು ಹೇಳುತ್ತಿರುವುದು ಸರಿ ಎನ್ನಿಸಿದ್ದರಿಂದ ತಾನೆ ಫಾಲೋ ಮಾಡುತ್ತಿರುವುದು? ನಾನು ಇಷ್ಟವಾಗಿಲ್ಲವಾದರೆ ಬಿಟ್ಟು ಹೋಗಲಿ.

► ಪ್ರಧಾನಿಯ ಜನಪ್ರಿಯತೆ ಜಾಸ್ತಿಯಾಗಿದೆಯೇ ಅಥವಾ ಮೊದಲಿನಂತೆಯೇ ಇದೆ ಎನಿಸುತ್ತದೆಯೇ?

ಪ್ರಕಾಶ್ ರಾಜ್: ಆಸ್ಕರ್ ವೈಲ್ಡ್ ಒಂದು ಮಾತು ಹೇಳುತ್ತಾನೆ. ಬಿ ಪಾಪ್ಯುಲರ್, ಆರ್ ನಟೋರಿಯಸ್. ಯಾವ ಕಾರಣಕ್ಕೆ ಹೆಸರುವಾಸಿ? ಸುಳ್ಳು ಹೇಳುವುದಕ್ಕಾ? ನಾಳೆಯೇ ಏನೋ ಆಗಿಬಿಡುತ್ತದೆ ಎಂದಲ್ಲ. ಆದರೆ ಇಂಥವನು ಹೀಗೆ ಹೇಳುತ್ತಿದ್ದ ಎಂದು ಎಷ್ಟೋ ವರ್ಷಗಳ ಮೇಲೆ ಹೇಳಲಿ. ಇತಿಹಾಸ ತಪ್ಪು ಮಾಡಿದವರನ್ನು ಕ್ಷಮಿಸಬಹುದು. ಮೌನವಾಗಿರುವವರನ್ನು ಕ್ಷಮಿಸದು.

► ನಿಮ್ಮಂಥ ಕೆಲವರು ಮಾತನಾಡುತ್ತಿದ್ದೀರಿ. ಆದರೆ ಜೋರಾಗಿರುವುದು ಬಿಜೆಪಿಯವರ ಅಬ್ಬರ. ಅದನ್ನು ನೀವು ಒಪ್ಪುತ್ತೀರಾ?

ಪ್ರಕಾಶ್ ರಾಜ್: ಬ್ಯಾಂಡು, ದುಡ್ಡು ಅವರ ಬಳಿ ಇದೆ. ಕೋಟ್ಯಂತರ ರೂ. ಅವರ ಹತ್ತಿರವೇ ಇದೆ. ಖರ್ಚು ಮಾಡುತ್ತಾರೆ, ಬ್ಯಾನರ್‌ಗಳನ್ನು ಹಾಕುತ್ತಾರೆ. ಸದ್ದನ್ನು ಅಡಗಿಸುವುದು ನಡೆಯುತ್ತಿದೆ. ಸಂವಾದ ಮಾಡಲು ಬಿಡುತ್ತಿಲ್ಲ. ಶಬ್ದ ಮಾಲಿನ್ಯ ಬಿಟ್ಟರೆ ಇನ್ನೇನಿದೆ? ಎಷ್ಟು ದಿನ? ಒಂದು ದಿನ ಸುಸ್ತಾಗಲೇಬೇಕಲ್ಲ? ಆಗಲಾದರೂ ಉತ್ತರ ಕೊಡಲೇಬೇಕಲ್ಲ? ಇಡೀ ಇತಿಹಾಸದಲ್ಲಿ ಈ ಥರದವರು ತುಂಬಾ ಕಾಲ ಇದ್ದದ್ದೇ ಇಲ್ಲ. ಎಲ್ಲ ಫ್ಯಾಶಿಸ್ಟ್‌ಗಳು, ಸರ್ವಾಧಿಕಾರಿಗಳು, ಒಂದು ದೇಶ ಎಂದವರು ಎಲ್ಲರೂ ಎಷ್ಟು ಗಾಯಗಳನ್ನು ಬಿಟ್ಟು ಹೋಗಿದ್ದಾರೆ? ಅದರಿಂದ ನಾವು ಪಾಠ ಕಲಿಯಬೇಕು. ಮನುಷ್ಯನ ವಿಕಾಸ, ನೀವು ಕಲಿಯದಿದ್ದರೆ ಕಲಿಸುತ್ತದೆ. ಅಲ್ಲಿಯವರೆಗೂ ಯಾಕೆ ಕಾಯಬೇಕು?

► ಚುನಾವಣಾ ರಾಜಕೀಯದಿಂದ ನೀವು ಹಿಂದೆ ಸರಿದಿದ್ದೀರಾ? ನಿಮ್ಮ ಆಲೋಚನೆ ಏನಿದೆ?

ಪ್ರಕಾಶ್ ರಾಜ್: ಜನರ ನಡುವೆ ಇದ್ದು ನಿರಂತರವಾಗಿ ವಿರೋಧ ಪಕ್ಷವಾಗಿ ಇರುತ್ತೇನೆ. ಅದನ್ನು ಮಾಡಬಹುದಲ್ಲವೇ ನಾನು? ನಾನು ಮೋದಿಯನ್ನು ವಿರೋಧಿಸುತ್ತೇನೆ ಎಂಬ ಕಾರಣಕ್ಕೆ ಇವರು ಬಂದು ನನ್ನನ್ನು ಅಪ್ಪಿಕೊಂಡರೆ ನಿಮ್ಮ ವಿರೋಧಿಗಳು ನನ್ನ ವಿರೋಧಿಗಳಾಗುತ್ತಾರೆ. ನಾನು ದೇಶಕ್ಕೋಸ್ಕರ ಹೋರಾಟ ಮಾಡುತ್ತಿದ್ದೇನೆ, ನೀವು ಪಕ್ಷಕ್ಕೋಸ್ಕರ ಹೋರಾಟ ನಡೆಸಿದ್ದೀರಿ. ಹಾಗಾಗಿ ನಾನು ಅಲ್ಲಿಗೆ ಹೋಗಲಾರೆ. ನಾನು ನನ್ನ ಕಲೆಯ ಮೂಲಕ, ನನ್ನ ಮಾತಿನ ಮೂಲಕ, ನನಗೆ ಸಿಗುವ ವೇದಿಕೆಗಳ ಮೂಲಕ, ನನ್ನ ಗ್ರಹಿಕೆಯ ಮೂಲಕ ಜನರ ಬಳಿಗೆ ಹೋಗಬೇಕು. ನನಗೆ ಅನಿಸುವುದನ್ನು ಪ್ರಾಮಾಣಿಕವಾಗಿ ಹೇಳಬೇಕು. ರಾಜಕಾರಣದಲ್ಲಿದ್ದೇನೆ. ಪ್ರತಿಯೊಬ್ಬ ಮನುಷ್ಯನೂ ಈ ದೇಶದಲ್ಲಿ ಮನೆಯಿಂದ ಹೊರಗೆ ಕಾಲಿಟ್ಟೊಡನೆ ರಾಜಕಾರಣದಲ್ಲಿದ್ದ ಹಾಗೆಯೇ. ನಮ್ಮ ಕೆಲಸ, ನಮ್ಮ ಬದುಕು ಎಲ್ಲದರಲ್ಲೂ ಅದು ಬರುತ್ತದೆ.

► ಈ ಬಾರಿ ಕಾಂಗ್ರೆಸ್‌ಗೆ ಎಷ್ಟು ಸ್ಥಾನ ಬರಬಹುದು?

ಪ್ರಕಾಶ್ ರಾಜ್: ಯಾಕೆ? ಅದಲ್ಲ ಮುಖ್ಯ. ನಮಗೆ ಮತ ಹಾಕುವ ಅಧಿಕಾರ ಇರುವುದು ಒಂದು ಸರಕಾರವನ್ನು ಉರುಳಿಸಿ ಇನ್ನೊಂದನ್ನು ಏರಿಸುವುದಕ್ಕಲ್ಲ. ನಮ್ಮ ನೆಲದಲ್ಲಿ ಇನ್ನೊಬ್ಬ ನಾಯಕ ಹುಟ್ಟುವ ಒಂದು ಸಾಧ್ಯತೆಯನ್ನು ತರುವುದು. ಯಾವ ಪಕ್ಷವೂ ಒಬ್ಬ ಪ್ರಧಾನಿಯನ್ನು ನೇರವಾಗಿ ಚುನಾಯಿಸುವ ಹಕ್ಕು ಜನತೆಗೆ ಇಲ್ಲವೆನ್ನುವುದನ್ನು ಹೇಳಿಯೇ ಇಲ್ಲ. ಕಾಂಗ್ರೆಸ್ ಅನ್ನು ಏಕೆ ಪ್ರಶ್ನೆ ಮಾಡಲ್ಲ ಎನ್ನುತ್ತಾರೆ. ಅಂದರೆ ನಿಮ್ಮಿಂದಲೇ ಪ್ರಶ್ನೆ ಶುರು ಮಾಡಬೇಕಲ್ಲವೆ? ಇಲ್ಲದಿರುವವರನ್ನು ಏಕೆ ಪ್ರಶ್ನೆ ಮಾಡಲಿ? ಬಂದಾಗ, ತಪ್ಪು ಮಾಡಿದಾಗ ಕೇಳುತ್ತೇನೆ. ಈಗ ನಿಮ್ಮನ್ನು ಕೇಳುವುದನ್ನು ಬಿಟ್ಟು ಅವರನ್ನೇಕೆ ಕೇಳಲಿ? ನಿಮಗೆ ನಾನು ಪ್ರಶ್ನೆ ಕೇಳಿದರೆ ಅವರನ್ನೇಕೆ ಕೇಳಲಿಲ್ಲ ಎನ್ನುವ ಬದಲು ಮೊದಲು ಉತ್ತರ ಕೊಡಿ.

► ಈ ಬಾರಿ ಮತ್ತೆ ಬಿಜೆಪಿ ಬಂದರೆ?

ಪ್ರಕಾಶ್ ರಾಜ್: ಬರಲಿ. ಇನ್ನೊಂದಷ್ಟು ಕಾಲ ಇರುತ್ತಾರೆ. ಆದರೆ ಅಷ್ಟು ಸುಲಭವಿಲ್ಲ. ಭ್ರಷ್ಟಾಚಾರ ನಡೆದೇ ಇಲ್ಲವೆ? ಭ್ರಷ್ಟಾಚಾರ ವಿರೋಧಿ ಎನ್ನುವವರು ‘ನ ಖಾವೂಂಗಾ, ನ ಖಾನೆ ದೂಂಗಾ’ ಎಂದರಲ್ಲ. ನಂಬುತ್ತೀರಾ? ಸುಳ್ಳು ಹೇಳುತ್ತಿದ್ದಾರೆ ಪ್ರಧಾನಿ. ಯಾಕೆ ಅರ್ಥವಾಗುತ್ತಿಲ್ಲ. 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದದ್ದು ಸುಳ್ಳಲ್ಲವೆ? ಕಾಂಗ್ರೆಸ್‌ನವರು ಮಾಡುತ್ತಿದ್ದರೊ ಇಲ್ಲವೋ ಬಿಡಿ. ನೀವು ಬಿಜೆಪಿಯವರು ಮಾಡುತ್ತಿಲ್ಲವೆ? ಶಾಸಕರನ್ನು ಖರೀದಿ ಮಾಡುತ್ತಿಲ್ಲವೆ? ಸುಳ್ಳು ಹೇಳುತ್ತಿದ್ದೀರೊ ಇಲ್ಲವೊ? ಅವರು ಮಾಡಿದ್ದು ಸರಿ ಇಲ್ಲವೆಂದೇ ಇಳಿಸಿದರು. ಆದರೆ ನೀವೇನು ಮಾಡುತ್ತಿದ್ದೀರಿ? ಅವರನ್ನು ನಾವು ಪ್ರಶ್ನಿಸಿದ್ದರಿಂದ, ನೀವು ಆಶಾಕಿರಣವಾದದ್ದರಿಂದ ನಿಮ್ಮನ್ನು ಕೂರಿಸಿದ್ದೇವೆ. ನೀವೂ ಅದನ್ನೇ ಮಾಡಿದರೆ? ಮಾಡಿಲ್ಲ ಎಂದು ಒಬ್ಬ ಬಿಜೆಪಿಯವನು ಹೇಳಲಿ. ನಾವು ಮತದಾರರಿಗೆ ಹಣ ಕೊಡುವುದಿಲ್ಲ, ನಾವು ಹೆಂಡ ಕುಡಿಸುವುದಿಲ್ಲ, ನಾವು ಬಿರ್ಯಾನಿ ಪ್ಯಾಕೆಟ್ ಕೊಡುವುದಿಲ್ಲ, ನಾವು ಶಾಸಕರನ್ನು ಕೊಂಡುಕೊಳ್ಳುವುದಿಲ್ಲ ಎಂದು ಒಬ್ಬ ಬಿಜೆಪಿಯವನಾದರೂ ಹೇಳಲಿ.

► ಈ ಬಾರಿ ಚುನಾವಣೆಯಲ್ಲಿ ಚರ್ಚೆಯಾಗಬೇಕಾದ ವಿಚಾರಗಳು ಏನು? ಬಿಜೆಪಿಯವರದ್ದಂತೂ ರಾಮಮಂದಿರ, ಮೋದಿ ಅಲೆ ಇತ್ಯಾದಿ.

ಪ್ರಕಾಶ್ ರಾಜ್: ಆಗಬೇಕಿರುವುದು ರೈತರ ಸಮಸ್ಯೆ, ಬೆಲೆಯೇರಿಕೆ ಇವಕ್ಕೆಲ್ಲ ಪರಿಹಾರ. ಸಮಾನ ಶಿಕ್ಷಣ ಆಗಬೇಕು. ನಮ್ಮ ದೈನಂದಿನ ಸಮಸ್ಯೆಗಳೇನು? ನಮ್ಮ ಮಕ್ಕಳ ಭವಿಷ್ಯವೇನು?

► ಇದೆಲ್ಲದರ ನಡುವೆ ನಿಮ್ಮ ಆಸಕ್ತಿಗಳ ಕಡೆಗೆ ಗಮನ ಕಡಿಮೆಯಾಗುತ್ತಿದೆಯಾ?

ಪ್ರಕಾಶ್ ರಾಜ್: ಇಲ್ಲವಲ್ಲ. ಕೆಲಸ ಇಲ್ಲದೆ ಮಾತಾಡುತ್ತಿದ್ದೇನೆ ಎಂತಲಾ? ಸಿನೆಮಾಗಳ ಕೆಲಸ ನಡೆಯುತ್ತಲೇ ಇದೆ. ರಂಗಭೂಮಿಯಲ್ಲೂ ಇದ್ದೇನೆ. ನನ್ನ ತೋಟದಲ್ಲಿನ ಕೆಲಸವನ್ನೂ ಮಾಡುತ್ತಿದ್ದೇನೆ. ಸಮಾಜಸೇವೆಯೂ ನಡೆಯುತ್ತಿದೆ.

► ನಿಮ್ಮ ಭಾಷಾ ಶುದ್ಧತೆ ಮತ್ತು ಸಂವಹನದ ರೀತಿ ಎಲ್ಲವೂ ಓದಿನಿಂದಲೇ ಸಾಧ್ಯವಾಗಿದೆ ಅಲ್ಲವೇ?

ಪ್ರಕಾಶ್ ರಾಜ್: ಓದಲೇಬೇಕಾಗುತ್ತದೆ. ಬಾಹ್ಯದ ಶ್ರೀಮಂತಿಕೆಗಿಂತ ಅಂತರಂಗದ ಶ್ರೀಮಂತಿಕೆ ಬಹಳ ಮುಖ್ಯ. ಅದು ಹೆಚ್ಚಾದಾಗ ನೀವು ಒಬ್ಬ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದು, ಅನುಮಾನ, ಅಪನಂಬಿಕೆ, ಗೊಂದಲಗಳಿಗೆ ಉತ್ತರ ಕಂಡುಕೊಳ್ಳುವುದು ಸಾಧ್ಯ, ಭಾಷೆ ಎನ್ನುವುದು ಬರೀ ಧ್ವನಿ. ವಿಚಾರಗಳ ಮೂಲಕ ಅದು ಸುಂದರವಾಗುತ್ತದೆಯೇ ಹೊರತು ವ್ಯಾಕರಣವೇ ಎಲ್ಲವೂ ಅಲ್ಲ.

► ನೀವು ನಟನಾಗಿದ್ದಾಗ ಪ್ರೀತಿಸುತ್ತಿದ್ದವರೆಲ್ಲ ನೀವು ನಿಷ್ಠುರವಾಗಿ ಮಾತಾಡತೊಡಗಿದಾಗ ಬೈಯಲು ಶುರು ಮಾಡಿದರು.

ಪ್ರಕಾಶ್ ರಾಜ್: ಯಾರು ಎಂಬುದು ಗೊತ್ತೇ ಇರದೆ ಸಾಯುವುದಕ್ಕಿಂತ ಇಂಥದ್ದರ ಬಗ್ಗೆ ಮಾತಾಡುತ್ತಿದ್ದ, ನಿಲುವು ಹೀಗಿತ್ತು ಎಂದು ಗೊತ್ತುಪಡಿಸುವುದು ಮುಖ್ಯ. ಪ್ರೀತಿಸುವವರು ಇರುತ್ತಾರೆ, ಸದಾ ದ್ವೇಷವನ್ನು ಮಾಡುವವರೂ ಇದ್ದಾರೆ. ಇವೆಲ್ಲದರ ಜತೆ ಬದುಕಬೇಕು.

share
ಸಂದರ್ಶನ: ಅವಿನಾಶ್ ಕಾಮತ್
ಸಂದರ್ಶನ: ಅವಿನಾಶ್ ಕಾಮತ್
Next Story
X