ʼರೋಬೋಟ್ ಸೈನ್ಯʼ ಬಳಕೆ | 38 ತಿಂಗಳಲ್ಲಿ ವಿಶ್ವದ ಅತಿದೊಡ್ಡ ರೈಲ್ವೆ ನಿಲ್ದಾಣ ನಿರ್ಮಿಸಿದ ಚೀನಾ

Screengran : x \ @elonmusk
ರೋಬೋಟ್ ಗಳ ಸೈನ್ಯವನ್ನು ಬಳಸಿಕೊಂಡು 38 ತಿಂಗಳುಗಳಲ್ಲಿ ನಿರ್ಮಾಣಗೊಂಡ ಚಾಂಗ್ಕಿಂಗ್ ಪೂರ್ವ ರೈಲ್ವೆ ನಿಲ್ದಾಣವು ಒಂದು ದೈತ್ಯಾಕಾರದ ಬಹುಮಾದರಿ ಸಾರಿಗೆ ಸಂಕೀರ್ಣವಾಗಿದೆ. ಇದು ವಿಶ್ವದ ಅತಿದೊಡ್ಡ ರೈಲ್ವೇ ನಿಲ್ದಾಣವಾಗಿದ್ದು, 2025 ಮೇಯಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉನ್ನತ ಬಿಲಿಯನೇರ್ ಪರಿವಾರದ ಭಾಗವಾಗಿ ಚೀನಾಗೆ ಭೇಟಿ ನೀಡಿದ ಉದ್ಯಮಿ ಎಲಾನ್ ಮಸ್ಕ್ ಅವರು ವಿಶ್ವದ ಅತಿದೊಡ್ಡ ಚಾಂಗ್ಕಿಂಗ್ ಪೂರ್ವ ರೈಲ್ವೆ ನಿಲ್ದಾಣದ ನಿರ್ಮಾಣದ ವೀಡಿಯೋವನ್ನು ‘ಎಕ್ಸ್’ನಲ್ಲಿ ರಿಪೋಸ್ಟ್ ಮಾಡಲು ಕಾರಣವೇನು?
ಮಸ್ಕ್ ಅವರು ಪೋಸ್ಟ್ ನಲ್ಲಿ ಏನೂ ಬರೆಯದೆ ಇದ್ದರೂ, ಪೋಸ್ಟ್ ಮಾಡಿರುವುದು ಕುತೂಹಲಕರವಾಗಿದೆ. ಕುತೂಹಲ ಬದಿಗಿಟ್ಟರೂ ಮಸ್ಕ್ ಅವರು ಪೋಸ್ಟ್ ಮಾಡಿರುವ ಚಾಂಗ್ಕಿಂಗ್ ಪೂರ್ವ ರೈಲ್ವೆ ನಿಲ್ದಾಣದ ನೈಜ ಕತೆ ಆಸಕ್ತಿದಾಯಕವಾಗಿದೆ. ರೋಬೋಟ್ ಗಳ ಸೈನ್ಯವನ್ನು ಬಳಸಿಕೊಂಡು ಈ ರೈಲ್ವೆ ನಿಲ್ದಾಣವನ್ನು 38 ತಿಂಗಳುಗಳಲ್ಲಿ ಅದನ್ನು ನಿರ್ಮಿಸಲಾಗಿದೆ. ಚಾಂಗ್ಕಿಂಗ್ ಪೂರ್ವ ರೈಲ್ವೆ ನಿಲ್ದಾಣವು ಒಂದು ದೈತ್ಯಾಕಾರದ ಬಹುಮಾದರಿ ಸಾರಿಗೆ ಸಂಕೀರ್ಣವಾಗಿದೆ. ಇದು ವಿಶ್ವದ ಅತಿದೊಡ್ಡ ರೈಲ್ವೇ ನಿಲ್ದಾಣವಾಗಿದ್ದು, 2025 ಮೇಯಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು.
ಐತಿಹಾಸಿಕ ಒಳನಾಡಿನ ನಗರಿ ಚಾಂಗ್ಕಿಂಗ್
ನೈಋತ್ಯ ಚೀನಾದಲ್ಲಿರುವ ಚಾಂಗ್ಕಿಂಗ್ ಜನಸಂಖ್ಯೆ ಮತ್ತು ಆಡಳಿತದ ಪ್ರದೇಶದ ದೃಷ್ಟಿಯಿಂದ ದೇಶದ ಅತಿದೊಡ್ಡ ನಗರವಾಗಿದೆ. ಇಂದಿನ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರವಾದ ಚಾಂಗ್ಕಿಂಗ್ 1960ರ ದಶಕದಲ್ಲಿ ಮಾವೋ ಝೆಡಾಂಗ್ ಅವರ ಥರ್ಡ್ ಫ್ರಂಟ್ ಅಭಿಯಾನದ ಅಡಿಯಲ್ಲಿ ನಾಟಕೀಯವಾಗಿ ರೂಪಾಂತರಗೊಂಡಿದೆ. ಚೀನಾದಲ್ಲಿ ಐತಿಹಾಸಿಕವಾಗಿ ನಿರ್ಲಕ್ಷಿಸಲಾದ ಒಳನಾಡಿನ ಪ್ರದೇಶಗಳನ್ನು ತ್ವರಿತವಾಗಿ ಕೈಗಾರಿಕೀಕರಣಗೊಳಿಸಲು ಬೃಹತ್ ರಾಷ್ಟ್ರೀಯ ಸಂಪನ್ಮೂಲಗಳನ್ನು ಮರುನಿರ್ದೇಶಿಸಿದ ಬೃಹತ್ ಪ್ರಯತ್ನವಾಗಿದೆ.
ಇಂದು ಚಾಂಗ್ಕಿಂಗ್ ಮತ್ತು ಅದರ ಹೊಸ ನಿಲ್ದಾಣವು ಚೀನಾದ ಅಸಾಧಾರಣ ಎಂಜಿನಿಯರಿಂಗ್ ಶಕ್ತಿಗೆ ಉದಾಹರಣೆಯಾಗಿದೆ. ಮೆಟ್ರೋ ರೈಲುಗಳು, ಅಪಾರ್ಟ್ಮೆಂಟ್ ಬ್ಲಾಕ್ಗಳ ಮೂಲಕ ಹಾದು ಹೋಗುವುದನ್ನು ನೋಡಬಹುದಾದ ಚೀನಾದ ನಗರವಿದು. ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅನೇಕ ದೇಶಗಳು ದಶಕಗಳಿಂದ ಹೆಣಗಾಡುತ್ತಿರುವಾಗ ಚೀನಾ ಕೇವಲ 38 ತಿಂಗಳಲ್ಲಿ 1.22 ಮಿಲಿಯನ್ ಚದರ ಮೀಟರ್ ವಿಸ್ತೀರ್ಣದ ಬೃಹತ್ ನಿಲ್ದಾಣ ನಿರ್ಮಿಸಿದೆ. ರೋಬೋಟ್ ಗಳ ಸೈನ್ಯದಿಂದ ಈ ನಿಲ್ದಾಣ ನಿರ್ಮಿಸಲಾಗಿದೆ ಎನ್ನುವುದೇ ವಿಶೇಷ.
ಚೀನಾದ ಪ್ರಾಚೀನ ಮೆಗಾಸಿಟಿ ಚಾಂಗ್ಕಿಂಗ್:
ನಿಲ್ದಾಣವನ್ನು ಪ್ರವೇಶಿಸುವ ಮೊದಲು ಅದರ ಹಿಂದಿನ ನಗರವನ್ನು ಅರ್ಥಮಾಡಿಕೊಳ್ಳಬೇಕಿದೆ. ಚಾಂಗ್ಕಿಂಗ್ ಚೀನಾದ ಸೃಜನಶೀಲ ಮೆಗಾಸಿಟಿಗಳಲ್ಲಿ ಒಂದಾಗಿದೆ. ಶಾಂಘೈ ಮತ್ತು ಬೀಜಿಂಗ್ ನಂತಹ ಇತರ ಅನೇಕ ಚೀನಾ ನಗರ ಕೇಂದ್ರಗಳಂತೆ ಚಾಂಗ್ಕಿಂಗ್ ಸುಮಾರು 3000 ವರ್ಷಗಳ ಹಿಂದಿನ ಪ್ರಾಚೀನ ನಗರವಾಗಿದೆ. ಎರಡನೇ ಮಹಾಯುದ್ಧದಲ್ಲಿ 1937ರಲ್ಲಿ ಜಪಾನ್ ಪಡೆಗಳಿಗೆ ಹಿಂದಿನ ರಾಜಧಾನಿ ನಾಂಕಿಂಗ್ ಪತನದ ನಂತರ ಚಾಂಗ್ಕಿಂಗ್ ಚೀನಾದ ರಾಷ್ಟ್ರೀಯತಾವಾದಿ (ಕೆಎಂಟಿ) ಸರ್ಕಾರದ ರಾಜಧಾನಿಯಾಗಿತ್ತು.
ಬೃಹತ್ ಕೈಗಾರಿಗಳ ಹೂಡಿಕೆ:
1960ರ ದಶಕದಲ್ಲಿ ಚಾಂಗ್ಕಿಂಗ್ ನಗರಕೇಂದ್ರಗಳಲ್ಲಿ ಒಂದಾಗಿ ಬೆಳೆಯಿತು. ಮಾವೋ ಝೆಡಾಂಗ್ ನಿರ್ದೇಶಿಸಿದ ಬೃಹತ್ ಕೈಗಾರಿಕೀಕರಣದ ಅಭಿಯಾನವಾದ ಥರ್ಡ್ ಫ್ರಂಟ್ ಅಭಿಯಾನದ ಪ್ರಮುಖ ಫಲಾನುಭವಿಯಾಗಿದೆ. ಸಂಭಾವ್ಯ ಸೋವಿಯತ್ ಅಥವಾ ಅಮೆರಿಕದ ವಾಯುದಾಳಿಗಳಿಂದ ಕೈಗಾರಿಕಾ ಮತ್ತು ಮಿಲಿಟರಿ ಮೂಲಸೌಕರ್ಯ ರಕ್ಷಿಸಲು ಚೀನಾದ ಸಮೃದ್ಧ ಕರಾವಳಿ ಪ್ರದೇಶಗಳಿಂದ ಬೃಹತ್ ಕೈಗಾರಿಕಾ ಹೂಡಿಕೆಗಳನ್ನು ಒಳನಾಡುಗಳಿಗೆ ಬದಲಿಸಲಾಗಿತ್ತು. ಹೀಗಾಗಿ ರಕ್ಷಣೆ, ಭಾರೀ ಕೈಗಾರಿಕೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ಮೇಲೆ ಗಮನಹರಿಸಲಾಗಿತ್ತು.
ಈ ಅಭಿಯಾನವು ಪ್ರಾಥಮಿಕವಾಗಿ ಚೀನಾದ ನೈಋತ್ಯ ಮತ್ತು ವಾಯುವ್ಯದಲ್ಲಿರುವ ಒಳನಾಡಿನ ಪ್ರದೇಶಗಳಿಗೆ ಪ್ರಗತಿಯ ಲಾಭವನ್ನು ತಂದುಕೊಟ್ಟಿತು. ಇಂತಹ ಪ್ರಗತಿಯ ಲಾಭ ಗಳಿಸಿದ ಪ್ರದೇಶಗಳೆಂದರೆ ಚಾಂಗ್ಕಿಂಗ್, ಸಿಚುವಾನ್, ಗುಯಿಝೌ, ಶಾಂಕ್ಸಿ, ಗನ್ಸು, ಯುನ್ನಾನ್ ಮತ್ತು ಹುಬೈ ಸೇರಿವೆ. ಭಾರೀ ಕೈಗಾರಿಕೆ, ಉಕ್ಕಿನ ಸ್ಥಾವರ, ರಕ್ಷಣಾ ಉತ್ಪಾದನೆ, ರೈಲ್ವೆ ಮತ್ತು ವಿದ್ಯುತ್ ಮೂಲಸೌಕರ್ಯಗಳ ರೂಪದಲ್ಲಿ ಬೃಹತ್ ಹೂಡಿಕೆ ಪಡೆದವು. ಈ ಸಂದರ್ಭದಲ್ಲಿ ಚಾಂಗ್ಕಿಂಗ್, ಚೆಂಗ್ಡು, ಗುಯಾಂಗ್ ಮತ್ತು ಕ್ಸಿಯಾನ್ನಂತಹ ಅಸ್ತಿತ್ವದಲ್ಲಿರುವ ನಗರಗಳನ್ನು ಗಮನಾರ್ಹವಾಗಿ ವಿಸ್ತರಿಸಲಾಯಿತು. ಹೀಗಾಗಿ ಚಾಂಗ್ಕಿಂಗ್ನ ದೀರ್ಕಾಲೀನ ಕೈಗಾರಿಕ ನೆಲೆಗೆ ಅಡಿಪಾಯ ಸಿಕ್ಕಿತು.
ಕ್ರಿಯಾಶೀಲ ಆರ್ಥಿಕತೆಯಾಗಿ ಬೆಳೆದಿರುವ ಚಾಂಗ್ಕಿಂಗ್:
ಇಂದು ಚಾಂಗ್ಕಿಂಗ್ ಪಶ್ಚಿಮ ಚೀನಾದ ಪ್ರಬಲ ಮತ್ತು ಕ್ರಿಯಾಶೀಲ ಆರ್ಥಿಕತೆಯಲ್ಲಿ ಒಂದಾಗಿದೆ. ವಾರ್ಷಿಕ 440 ಶತಕೋಟಿ ಡಾಲರ್ ಗೆ ಮೀರಿದ ಜಿಡಿಪಿ ಹೊಂದಿದೆ. ವಿಶೇಷವಾಗಿ ಅಟೋಮೊಬೈಲ್, ಮೋಟಾರ್ ಸೈಕಲ್ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಮತ್ತು ಲ್ಯಾಪ್ಟಾಪ್ ಉತ್ಪಾದನೆ, ಸೆಮಿಕಂಡಕ್ಟರ್ಗಳು ಮತ್ತು ಉಪಕರಣಗಳ ತಯಾರಿಕೆ ಮತ್ತು ರಾಸಾಯನಿಕಗಳಲ್ಲಿ ಪ್ರಬಲವಾಗಿದೆ.
ಯಾಂಗ್ಟಿ ನದಿಯ ಆರ್ಥಿಕ ಪಟ್ಟಿಯಲ್ಲಿರುವ ಚಾಂಗ್ಕಿಂಗ್ ಒಟ್ಟು ಕಾರಿಡಾರ್ ಮತ್ತು ರಸ್ತೆ ಯೋಜನೆಗಳಿಗೆ ಪ್ರಸಿದ್ಧಿಪಡೆದಿದೆ. ಚಾಂಗ್ಕಿಂಗ್ ಚೀನಾದ ಒಳನಾಡಿಗೆ ಪ್ರಮುಖ ಲಾಜಿಸ್ಟಿಕ್ಸ್ ಮತ್ತು ವ್ಯಾಪಾರ ದ್ವಾರವಾಗಿದೆ. ನದಿ ಬಂದರುಗಳು, ಮೆಟ್ರೋ ರೈಲು, ಎಕ್ಸ್ಪ್ರೆಸ್ ದಾರಿಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿಶ್ವದ ಅರಿದೊಡ್ಡ ಹೈಸ್ಪೀಡ್ ರೈಲು ಜಾಲವನ್ನು ಸಂಯೋಜಿಸುವ ಬಹುಮಾದರಿ ಸಾರಿಗೆ ಜಾಲವು ಚಾಂಗ್ಕಿಂಗ್ ಅನ್ನು ಚೀನಾದ ಉಳಿದ ಭಾಗಗಳೊಂದಿಗೆ ಮತ್ತು ಅದರಾಚೆಗೆ ಸಂಪರ್ಕಿಸುತ್ತದೆ.
ಪ್ರಾದೇಶಿಕ ಲಾಜಿಸ್ಟಿಕ್ಸ್ ಮತ್ತು ಆರ್ಥಿಕ ಕೇಂದ್ರ:
ಚಾಂಗ್ಕಿಂಗ್ ಫೂರ್ವ ರೈಲ್ವೆ ನಿಲ್ದಾಣವನ್ನು ಎಂಜಿನಿಯರಿಂಗ್ ಮಾರ್ವೆಲ್ ಎಂದು ಕರೆಯಲಾಗುತ್ತದೆ. ಚೀನಾದ ವೇಗವಾಗಿ ಬೆಳೆಯುತ್ತಿರುವ ಒಳನಾಡಿನ ಮೆಗಾಸಿಟಿಗಳಲ್ಲಿ ಒಂದಾಗಿರುವ ಚಾಂಗ್ಕಿಂಗ್ ನ ಸಾರಿಗೆ ಅಗತ್ಯ ಪೂರೈಸಲು ಪೂರ್ವ ರೈಲ್ವೆ ನಿಲ್ದಾಣವನ್ನು ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಚಾಂಗ್ಕಿಂಗ್ ವೇಗವಾಗಿ ವಿಸ್ತರಿಸಿದಂತೆ ಅಸ್ತಿತ್ವದಲ್ಲಿರುವ ನಿಲ್ದಾಣಗಳು ತೀವ್ರ ಸಾಮರ್ಥ್ಯದ ಮಿತಿ ಎದುರಿಸಿದವು. ಹೊಸ ನಿಲ್ದಾಣವು ಚೀನಾದ ರಾಷ್ಟ್ರೀಯ ಹೈಸ್ಪೀಡ್ ರೈಲು ಜಾಲದ ಪ್ರಮುಖ ಭಾಗವಾಗಿದೆ. ಇದು ನೈಋತ್ಯ ಚೀನಾ ಮತ್ತು ದೇಶದ ಉಳಿದ ಭಾಗಗಳ ನಡುವಿನ ಸಂಪರ್ಕ ಬಲಪಡಿಸುತ್ತದೆ. ಪ್ರಾದೇಶಿಕ ಆರ್ಥಿಕ ಇಂಟೆಗ್ರೇಶನ್ಗೆ ಬೆಂಬಲಿಸುತ್ತದೆ. ಪ್ರಾದೇಶಿಕ ಲಾಜಿಸ್ಟಿಕ್ಸ್ ಮತ್ತು ಆರ್ಥಿಕ ಕೇಂದ್ರವಾಗಿದೆ.
ವಿಸ್ತೀರ್ಣದ ಪ್ರಕಾರ 1.22 ಮಿಲಿಯನ್ ಚದರ ಮೀಟರ್ಗಳ ಒಟ್ಟು ನಿರ್ಮಾಣದ ಪ್ರದೇಶವನ್ನು ವ್ಯಾಪಿಸಿರುವ ಚಾಂಗ್ಕಿಂಗ್ ಪೂರ್ವ ನಿಲ್ದಾಣವನ್ನು ನೆಲದ ಮೇಲೆ ನಿರ್ಮಿಸಿರುವ ವಿಶ್ವದ ಮತ್ತು ಚೀನಾದ ರೈಲ್ವೆ ನಿಲ್ದಾಣವೆಂದು ಗುರುತಿಸಲಾಗಿದೆ. ಇದರಲ್ಲಿ 15 ಪ್ಲಾಟ್ಫಾರ್ಮ್ಗಳು ಮತ್ತು 29 ಟ್ರ್ಯಾಕ್ಗಳಿವೆ. ಮೂರು ರೈಲ್ವೆ ಯಾರ್ಡ್ಗಳಾಗಿ ವಿಂಗಡಿಸಲಾಗಿದೆ. ನಿfಲದಾಣವು ಗರಿಷ್ಠ ಸಮಯದಲ್ಲಿ ಗಂಟೆಗೆ 16,000 ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಂಡಿದೆ. ಬಹು ಹಂತದ ವಿನ್ಯಾಸವನ್ನು (8 ಮಹಡಿ) ಹೊಂದಿದ್ದು, ಹೈ-ಸ್ಪೀಡ್ ರೈಲು, ಸಾಂಪ್ರದಾಯಿಕ ರೈಲ್ವೆಗಳು, ಮಾನೋರೈಲ್ವೆ ಮಾರ್ಗ, ಬಸ್ಗಳು, ಟ್ಯಾಕ್ಸಿಗಳು ಮತ್ತು ದೂರದ ಬೋಗಿಗಳನ್ನು ಸಂಯೋಜಿಸುತ್ತದೆ. ಹೀಗಾಗಿ ಇದನ್ನು ಬಹುಮಾದರಿ ಸಾರಿಗೆ ಕೇಂದ್ರವಾಗಿ ಪರಿವರ್ತನೆಗೊಳಿಸಲಾಗಿದೆ.
ರೋಬೋಟ್ ಗಳಿಂದ ನಿರ್ಮಾಣವಾದ ರೈಲ್ವೇ ನಿಲ್ದಾಣ:
ವರದಿಗಳ ಪ್ರಕಾರ ಮೇ 2022ರಲ್ಲಿ ವಿನ್ಯಾಸ ನೀಲನಕ್ಷೆಗಳನ್ನು ಪಡೆಯುವುದರಿಂದ ತೊಡಗಿ 2025ರಲ್ಲಿ ಅಧಿಕೃತ ಉದ್ಘಾಟನೆವರೆಗೆ ನಿಲ್ದಾಣದ ನಿರ್ಮಾಣವನ್ನು ಕೇವಲ 38 ತಿಂಗಳುಗಳಲ್ಲಿ ಪೂರ್ಣಗೊಳಿಸಲು ರೋಬೋಟ್ಗಳನ್ನು ಬಳಸಲಾಗಿದೆ. ತೀವ್ರ ಬೇಸಿಗೆಯ ಶಾಖವು ಹೆಚ್ಚಾಗಿ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾದಾಗ ಒರಟಾದ ಭೂಪ್ರದೇಶದಲ್ಲಿ ನಿರ್ಮಾಣದ ಸಂದರ್ಭ ಸಾಂಪ್ರದಾಯಿಕ ನಿರ್ಮಾಣ ಸವಾಲುಗಳನ್ನು ನಿವಾರಿಸಲು ಸುಧಾರಿತ ರೋಬೊಟಿಕ್ಸ್ ಅನ್ನು ಅವಲಂಬಿಸಿದೆ. ರೋಬೋಟ್ ಸೈನ್ಯ ನಿರ್ಮಾಣವನ್ನು ಮುನ್ನಡೆಸಿತು ಎಂದು ಕ್ಸಿನ್ಹುವಾ ವರದಿ ಮಾಡಿದೆ.
LiDAR, AI ಮತ್ತು 5G ಹೊಂದಿದ ಲೇಸರ್ ನಿರ್ದೇಶಿತ ಫೋರ್-ವೀಲ್ ಸ್ಕ್ರೀಡ್ ರೋಬೋಟ್ಗಳು ಮಾನವ ವೇಗಕ್ಕಿಂತ ಮೂರು ಪಟ್ಟು ಹೆಚ್ಚು ನಿಖರತೆಯೊಂದಿಗೆ ಕಾಂಕ್ರೀಟ್ ಲೆವೆಲಿಂಗ್ ಮಾಡಿವೆ. ಕಾರ್ಮಿಕ ವೆಚ್ಚವನ್ನು ಶೇ 40ರಷ್ಟು ಕಡಿಮೆ ಮಾಡಿವೆ. ಗಾಜಿನ ಅಳವಡಿಕೆ ರೋಬೋಟ್ಗಳು 800 ಕೆಜಿ ಪ್ಯಾನೆಲ್ಗಳನ್ನು ಸುರಕ್ಷಿತವಾಗಿ ಮತ್ತು ನಿಖರವಾಗಿ ನಿರ್ವಹಿಸಿದವು. ಅನುಸ್ಥಾಪನೆ ವೇಗವನ್ನು ಮೂರುಪಟ್ಟು ಹೆಚ್ಚಿಸಿವೆ. ಅಪಘಾತದ ಅಪಾಯಗಳನ್ನು ಶೇ 90ರಷ್ಟು ಕಡಿಮೆ ಮಾಡಿವೆ. ಓಮ್ನಿಡೈರೆಕ್ಷನಲ್ ವೆಲ್ಡಿಂಗ್ ರೋಬೋಟ್ ಮತ್ತು 24/7 ಗಸ್ತು ರೋಬೋಟ್ ದಕ್ಷತೆ ಹೆಚ್ಚಿಸಿವೆ. ಅಪಾಯ ಕಡಿಮೆ ಮಾಡಿವೆ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಗುಣಮಟ್ಟ ಕಾಪಾಡಿವೆ.
ಚೀನಾ ರೈಲ್ವೇ ಅಧಿಕಾರಿಗಳ ಪ್ರಕಾರ ರೋಬೋಟಿಕ್ಸ್ ಕಾರ್ಮಿಕ ವೆಚ್ಚವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಮತ್ತು ಸರಾಸರಿ ಕೆಲಸದ ದಕ್ಷತೆಯನ್ನು ಮೂರುಪಟ್ಟು ಹೆಚ್ಚಿಸಿದೆ. ಸುರಕ್ಷತಾ ಘಟನೆಗಳನ್ನು ಶೇ 90ರಷ್ಟು ಕಡಿಮೆ ಮಾಡಿವೆ.
14 ಪ್ರಮುಖ ನಗರಗಳೊಂದಿಗೆ ಸಂಪರ್ಕ:
ಈ ನಿಲ್ದಾಣ ಚೀನಾದ ವಿಶಾಲವಾದ ಹೈಸ್ಪೀಡ್ ರೈಲು ಜಾಲದ ಭಾಗವಾಗಿದೆ. ನೈಋತ್ಯ ಚೀನಾವನ್ನು 14 ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುತ್ತದೆ. ಚಾಂಗ್ಕಿಂಗ್ನಿಂದ ಪ್ರಯಾಣಿಕರು ಚೆಂಗ್ಡುವನ್ನು ಒಂದು ಗಂಟೆಗಳಲ್ಲಿ, ಚಾಂಗ್ಜಿಯಾಜಿಯನ್ನು ಎರಡರಿಂದ ಮೂರು ಗಂಟೆ, ಚಾಂಗ್ಶಾ, ವುಹಾನ್, ಕ್ಸಿಯಾನ್ ಮತ್ತು ಕುನ್ಮಿಂಗ್ ಅನ್ನು ಸುಮಾರು ಮೂರು ಗಂಟೆಗಳಲ್ಲಿ ಮತ್ತು ಬೀಜಿಂಗ್, ಶಾಂಘೈ ಅಥವಾ ಗುವಾಂಗ್ಝೌ ಅನ್ನು ಆರುಗಂಟೆಗಳಲ್ಲಿ ತಲುಪಬಹುದಾಗಿದೆ. ಈ ಮೂಲಸೌಕರ್ಯದ ಪ್ರದರ್ಶನ ಕಂಡು ಎಲಾನ್ ಮಸ್ಕ್ ವೀಡಿಯೀವನ್ನು ಮರುಪೋಸ್ಟ್ ಮಾಡಿರುವ ಸಾಧ್ಯತೆಯಿದೆ.






