ಸಂಸತ್ ಮೇಲಿನ ದಾಳಿಯನ್ನು ಹೇಗೆ ತನಗೆ ಬೇಕಾದಂತೆ ಬಳಸಿಕೊಂಡ ಹಿಟ್ಲರ್ ?
ಪ್ರಜಾಪ್ರಭುತ್ವದ ದಾರಿಯನ್ನೇ ಬಳಸಿ ಸರ್ವಾಧಿಕಾರಿಯಾದ ಹಿಟ್ಲರ್ : ಇತಿಹಾಸ ನಮಗೆ ಕಲಿಸುವ ಪಾಠವೇನು ?

ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಗಾಗಿ ವಿಶ್ವದ ವಿವಿಧೆಡೆ ನಡೆದ ಹೋರಾಟಗಳ ಬಗ್ಗೆ ನಾವು ಚರಿತ್ರೆಯ ಪುಸ್ತಕಗಳಲ್ಲಿ ಓದಿದ್ದೇವೆ. ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ದೇಶಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟರು.
ಅದೆಷ್ಟು ಸುದೀರ್ಘ ಹೋರಾಟಗಳು ನಡೆದವು ?. ಫ್ರೆಂಚ್ ಕ್ರಾಂತಿ, ಅಮೆರಿಕದ ಸ್ವಾತಂತ್ರ್ಯ ಹೋರಾಟ, ಭಾರತದ ಸ್ವಾತಂತ್ರ್ಯ ಹೋರಾಟ - ಇಂಥ ಹಲವಾರು ಹೋರಾಟದ ಕಥನಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು.
ಆದರೆ ಚರಿತ್ರೆಯ ಈ ಪುಸ್ತಕಗಳು ನಮಗೊಂದು ಗಂಭೀರ ಎಚ್ಚರಿಕೆಯನ್ನೂ ಕೊಡುತ್ತವೆ.ಗಳಿಸಿದ ಈ ಸ್ವಾತಂತ್ರ್ಯ, ಈ ಪ್ರಜಾಪ್ರಭುತ್ವ, ಈ ಶಾಂತಿ, ಈ ವಾಕ್ ಸ್ವಾತಂತ್ರ್ಯ - ಇವೆಲ್ಲವನ್ನೂ ಯಾರಾದರೂ ನಮ್ಮಿಂದ ಬಲು ಸುಲಭವಾಗಿ ಕಸಿದುಬಿಟ್ಟಾರು ಎಂಬ ಎಚ್ಚರಿಕೆ ಅದು.
ರಷ್ಯಾದಲ್ಲಿ ಲೆನಿನ್ ಮತ್ತು ಸ್ಟಾಲಿನ್, ಚೀನಾದಲ್ಲಿ ಮಾವೋ, ಇಟಲಿಯಲ್ಲಿ ಮುಸಲೋನಿ ಅದಕ್ಕೆ ಅತ್ಯುತ್ತಮ ಉದಾಹರಣೆ.ಎಲ್ಲ ಕ್ರಾಂತಿಗಳೂ ಜನರಿಗೆ ಲಾಭ ತರಲಿಲ್ಲ ಅಥವಾ ಪ್ರಜಾಪ್ರಭುತ್ವದ ಕನಸನ್ನು ನಿಜವಾಗಿಸಲಿಲ್ಲ.ಜರ್ಮನಿಯದ್ದಂತೂ ಅತ್ಯಂತ ಆಘಾತಕಾರಿ ಉದಾಹರಣೆ. ಚಿಗುರೊಡೆಯುತ್ತಿದ್ದ ಪ್ರಜಾಪ್ರಭುತ್ವದಿಂದಲೇ, ನಿರ್ದಯಿ ಸರ್ವಾಧಿಕಾರ ಒಂದು ಅಲ್ಲಿ ತಲೆದೋರಿತ್ತು. ಏನಾಗುತ್ತಿದೆ ಎಂದು ಅಲ್ಲಿನ ಜನರಿಗೆ ಅರ್ಥವಾಗುವಷ್ಟರೊಳಗೇ ಎಲ್ಲವೂ ಮುಗಿದು ಹೋಗಿತ್ತು, ಭಾರೀ ದೊಡ್ಡ ಬದಲಾವಣೆ ಅಲ್ಲಿ ಬಂದು ಬಿಟ್ಟಿತ್ತು. ಆ ಬದಲಾವಣೆ ತಂದಿದ್ದು ವಿನಾಶವನ್ನು ಮಾತ್ರ.
ಜರ್ಮನಿಯ ಇತಿಹಾಸದಿಂದ ನಾವು ತಿಳಿಯಬಹುದಾದದ್ದು ಏನೆಂದರೆ, ಎಲ್ಲ ಕಡೆ ಪ್ರಜಾಪ್ರಭುತ್ವದ ತಳಹದಿ ನಾವಂದುಕೊಂಡಷ್ಟು, ನಾವು ನಂಬುವಷ್ಟು ಗಟ್ಟಿಯಾದುದಲ್ಲ ಮತ್ತು ಎಲ್ಲವೂ ಸರಿಯಿದೆ ಎಂದು ಯಾವುದೇ ಭಯವಿಲ್ಲದೆ ಕೂರುವ ಹಾಗಿಲ್ಲ.
ತೀಕ್ಷ್ಣವಾದ, ಲೆಕ್ಕಾಚಾರದ ಕೆಲವು ಜನರು ಹೇಗೆ ಕೆಲವೇ ದಿನಗಳಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಬಲ್ಲರು ಎಂಬುದನ್ನು ಜರ್ಮನಿ ಹೇಳುತ್ತದೆ. ಕೆಲವೊಮ್ಮೆ ಇಡೀ ಪ್ರಜಾಪ್ರಭುತ್ವದ ಮನೆಗೆ ಬೆಂಕಿಯಿಡಲು ಈ ಸರ್ವಾಧಿಕಾರಿಗಳಿಗೆ ಒಂದು ಸಣ್ಣ ಕಿಡಿ, ಒಂದು ಸಣ್ಣ ಘಟನೆ ಸಾಕಾಗಿ ಬಿಡುತ್ತದೆ.
ಜರ್ಮನಿಯಲ್ಲಿ ಹಿಟ್ಲರ್ ತನ್ನ ಲಾಭಕ್ಕೋಸ್ಕರ ಹೇಗೆ ಅಲ್ಲಿನ ಸಂಸತ್ತಿನ ಮೇಲಿನ ದಾಳಿಯನ್ನು ಬಳಸಿಕೊಂಡ ?. ಆಪತ್ತಿನಲ್ಲೇ ತನ್ನ ಸ್ವಾರ್ಥದ ಅವಕಾಶವನ್ನು ಆತ ಹುಡುಕಿಕೊಂಡ. ವಿರೋಧಿಗಳ ಬಾಯಿ ಮುಚ್ಚಿಸಿದ. ತನ್ನ ಇಚ್ಛೆಗೆ ತಕ್ಕಂತೆ ಕಾನೂನುಗಳನ್ನು ತಂದ ಮತ್ತು ನೋಡ ನೋಡುತ್ತಲೇ ಜರ್ಮನಿಯ ಪರಮೋಚ್ಚ ನಾಯಕನಾಗಿಬಿಟ್ಟ.
ವಿಶೇಷ ಅಂದ್ರೆ ಅದಕ್ಕಾಗಿ ಆತ ಇರುವ ನಿಯಮಗಳನ್ನೇ ಬೇಕಾದಂತೆ ಬಳಸಿಕೊಂಡ. ಎಲ್ಲವನ್ನೂ ನಿಯಮಗಳನ್ನು ಪಾಲಿಸಿಯೇ ಮಾಡಿದ್ದಾಗಿ ತೋರಿಸಿದ. ಮಿತಿಯಿಲ್ಲದ ಅಧಿಕಾರದೊಂದಿಗೆ ಇದೆಲ್ಲವೂ ಸಂಸದೀಯ ಪ್ರಕ್ರಿಯೆಯ ಮೂಲಕವೇ ಆಯಿತು.
ಅದನ್ನು ಕಾನೂನು ಬಾಹಿರ ಎಂದು ಹೇಳುವ ಹಾಗೆಯೇ ಇಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಹಿಟ್ಲರನ ಆ ವಿಧಾನಗಳನ್ನು ಈಗಲೂ ಬಳಸಬಹುದು, ಇವತ್ತಿನ ಪ್ರಜಾಪ್ರಭುತ್ವದಲ್ಲಿ ಬಳಸಬಹುದು ಮತ್ತು ಅಂಥ ಪ್ರಯತ್ನಗಳು ನಡೆಯುತ್ತಲೂ ಇವೆ ಎಂಬುದು.
ಯಾರು ಹಿಟ್ಲರನ ಹಾದಿಯಲ್ಲಿ ನಡೆಯುತ್ತಿರುವವರು?. ಅದಕ್ಕೂ ಮೊದಲು ಹಳೆಯದನ್ನು ಸ್ವಲ್ಪ ಗಮನಿಸೋಣ. ಅದು 1919. ಜರ್ಮನಿ ಮೊದಲ ಮಹಾಯುದ್ಧದಲ್ಲಿ ಸೋತಿತ್ತು ಮತ್ತು ವೀಮರ್ ಸಂವಿಧಾನ ಜಾರಿಗೆ ಬಂದಿತ್ತು. ಉದಾರ ಪ್ರಜಾಪ್ರಭುತ್ವಕ್ಕಾಗಿ ಮೊದಲ ಬಾರಿಗೆ ಜರ್ಮನಿ ಪ್ರಯತ್ನಿಸುತ್ತಿತ್ತು.
ಅಲ್ಲಿ, ಜನರು ಅಧ್ಯಕ್ಷರನ್ನು ನೇರ ಮತದಾನದ ಮೂಲಕ ಆರಿಸುತ್ತಾರೆ. ಅಧ್ಯಕ್ಷ ದೇಶವನ್ನು ನಡೆಸಲು, ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳಲು ಮತ್ತು ಜರ್ಮನ್ ಸಂಸತ್ತಿನಲ್ಲಿ ಶಾಸನಗಳನ್ನು ತರಲು ಚಾನ್ಸೆಲರ್ ಹುದ್ದೆಗೆ ಒಬ್ಬನನ್ನು ನೇಮಿಸುತ್ತಾನೆ.
ಈ ಚಾನ್ಸಲರ್ ಅಂದ್ರೆ ಸಿ ಇ ಓ ತರ ದೇಶದ ದೈನಂದಿನ ಆಡಳಿತ ನೋಡಿಕೊಳ್ಳುವ ಒಂದು ಹುದ್ದೆ. ಜರ್ಮನ್ ಸಂಸತ್ತಿನಲ್ಲಿರುವ ಸದಸ್ಯರು ನೇರವಾಗಿ ಜನರಿಂದಲೇ ಆಯ್ಕೆಯಾದವರು. ಯಾವುದೇ ಪ್ರಜಾಪ್ರಭುತ್ವವೂ ಲೋಪದೋಷಗಳನ್ನು, ವ್ಯವಸ್ಥಿತ ದೌರ್ಬಲ್ಯವನ್ನು ಹೊಂದಿರುತ್ತದೆ. ಮತ್ತದನ್ನು ತೀಕ್ಷ್ಣಮತಿಗಳು ದುರುಪಯೋಗಪಡಿಸಿಕೊಳ್ಳಬಲ್ಲರು.
ಜರ್ಮನಿಯ ಪ್ರಜಾಪ್ರಭುತ್ವ ಕೂಡ ಅಂಥದೇ ದೋಷವನ್ನು ಹೊಂದಿತ್ತು. ಜರ್ಮನ್ ಅಧ್ಯಕ್ಷ ಸಂಸತ್ತನ್ನೇ ರದ್ದುಪಡಿಸುವ, ಯಾವುದೇ ಥರದ ಆದೇಶ ನೀಡುವ ಅಧಿಕಾರ ಹೊಂದಿದ್ದರು. ಅಧ್ಯಕ್ಷ ತನ್ನ ಅಧಿಕಾರ ದುರ್ಬಳಕೆಗೆ ಮುಂದಾದರೆ ಯಾರೂ ಅವರನ್ನು ತಡೆಯುವಂತಿರಲಿಲ್ಲ.
ಹಿಟ್ಲರನಿಗೆ ಇದು ಗೊತ್ತಿತ್ತು ಮತ್ತು ಅವನಿಗೆ ಆ ಪರಮ ಅಧಿಕಾರದ ದುರಾಸೆಯಿತ್ತು. 1923ರಲ್ಲಿ ಹಿಟ್ಲರ್ ಒಂದು ರೀತಿಯ ದಂಗೆಗೆ ಯತ್ನಿಸಿದ. ಅಧಿಕಾರ ವಶಪಡಿಸಿಕೊಳ್ಳಲು ನೋಡಿದ. ಆದರೆ ವಿಫಲನಾಗಿ ಜೈಲು ಪಾಲಾದ. ಆದರೆ ಆತ ಅದೃಷ್ಟವಂತನಾಗಿದ್ದ ಮತ್ತು ಇಡೀ ಜಗತ್ತಿಗೆ ದುರದೃಷ್ಟ ಕಾದಿತ್ತು. ಐದು ವರ್ಷ ಶಿಕ್ಷೆ ಅನುಭವಿಸಬೇಕಾಗಿದ್ದವನು ಕೆಲವೇ ತಿಂಗಳುಗಳಲ್ಲಿ ಜೈಲಿನಿಂದ ಬಿಡುಗಡೆಯಾದ. ಈ ಬಾರಿ ಆತ ಇನ್ನೂ ಚುರುಕಾಗಿದ್ದ. ಕಾನೂನುಬದ್ಧವಾಗಿಯೇ ಅಧಿಕಾರಕ್ಕೆ ಬರುವುದೆಂದು ಯೋಚಿಸಿದ. ಹಾಗೆಂದು ಅವನು ಕಣ್ಣಿಟ್ಟಿದ್ದು ಸಣ್ಣ ಸ್ಥಾನದ ಮೇಲಾಗಿರಲಿಲ್ಲ. ದೇಶದ ಅತಿ ಮುಖ್ಯ ಹುದ್ದೆಯೇ ಆಗಿತ್ತು ಆತನ ಗುರಿ. ಆ ನಿಟ್ಟಿನಲ್ಲಿ ಕೆಲಸಕ್ಕಿಳಿದ.
ನಾಝಿ ಪಕ್ಷದ ನಾಯಕ ಅಧಿಕಾರದ ನಿಚ್ಚಣಿಕೆಯನ್ನು ಬಹಳ ವೇಗವಾಗಿ ಏರಿದ. ಜನರು ಆತನ ಪ್ರಚೋದನಾತ್ಮಕ, ರಂಗು ರಂಗಿನ ಮಾತುಗಳಿಂದ ಪ್ರಭಾವಿತರಾದರು. ತನ್ನ ಭಾಷಣಗಳಲ್ಲಿ ಆತ ಜರ್ಮನಿಯ ಕೆಟ್ಟ ಸ್ಥಿತಿಗೆ ಕಾರಣವಾದ ವರ್ಸೈಲ್ಸ್ ಒಪ್ಪಂದಕ್ಕೆ ಸಹಿ ಹಾಕಿದ್ದವರನ್ನು ನಿರಂತರ ಜರೆದ. ಆ ಒಪ್ಪಂದದ ಪ್ರಕಾರ, ಜರ್ಮನಿಯೇ ಮೊದಲ ಮಹಾ ಯುದ್ಧಕ್ಕೆ ಹೊಣೆಯಾಗಿತ್ತು. ಹಾಗಾಗಿ ಜರ್ಮನಿ ತನ್ನ ನೆಲವನ್ನು ಕಳೆದುಕೊಳ್ಳಬೇಕಾಯಿತು. ಸೇನೆಯನ್ನು ಅಭಿವೃದ್ಧಿಪಡಿಸುವಂತಿರಲಿಲ್ಲ. ಉಳಿದ ಯುರೋಪಿಯನ್ ಶಕ್ತಿಗಳಿಗೆ ಹಾನಿ ತುಂಬಿಕೊಡಬೇಕಾಗಿತ್ತು.
ಇಷ್ಟೆಲ್ಲ ಆದ ಮೇಲೂ 1918ರ ಚುನಾವಣೆಯಲ್ಲಿ ಆತನ ಪಕ್ಷಕ್ಕೆ ಬಂದ ಮತಗಳು ಶೇ.2.6ರಷ್ಟು ಮಾತ್ರ. ಆದರೆ ಹಿಟ್ಲರನ ಅದೃಷ್ಟ ಹೇಗಿತ್ತೆಂದರೆ, ಆ ಹೊತ್ತಿನಲ್ಲಿನ ಆರ್ಥಿಕ ಹಿಂಜರಿತ ಇಡೀ ವಿಶ್ವದಲ್ಲೇ ಸಮಸ್ಯೆಗಳಿಗೆ ಕಾರಣವಾಗಿತ್ತು. ಜರ್ಮನಿಯಲ್ಲಿ 60 ಲಕ್ಷ ಮಂದಿ ಕೆಲಸ ಕಳೆದುಕೊಂಡರು.
ಜರ್ಮನ್ ಜನಸಂಖ್ಯೆಯ ಶೇ.30ರಷ್ಟು ಮಂದಿ ಕೆಲಸವಿಲ್ಲದಂತಾದರು. ಸಮಾಜದಲ್ಲಿ ಪ್ರಕ್ಷುಬ್ಧತೆ ತಲೆದೋರಿತು. ಈ ಬಿಕ್ಕಟ್ಟಿನಲ್ಲಿ ನಾಝಿ ಪಕ್ಷ ದೊಡ್ಡ ಪ್ರಮಾಣದ ಮತಗಳನ್ನು ಗಳಿಸಿತು. 1930ರ ಚುನಾವಣೆಯಲ್ಲಿ ಹಿಟ್ಲರ್ ನ ಪಕ್ಷಕ್ಕೆ ಶೇ.18ರಷ್ಟು ಮತಗಳು ಬಂದವು. ಅದು ಜರ್ಮನಿಯ ಎರಡನೇ ಅತಿ ದೊಡ್ಡ ಪಕ್ಷವಾಯಿತು. ಆಗ ಅಲ್ಲಿ ಸೋಷಿಯಲ್ ಡೆಮಾಕ್ರೇಟ್ಸ್ ಅತಿ ದೊಡ್ಡ ಪಕ್ಷ. ಜರ್ಮನಿಯ ಕಮ್ಯುನಿಸ್ಟ್ ಪಾರ್ಟಿ ಕೂಡ ಶೇ.10 ಮತಗಳನ್ನು ಪಡೆದಿತ್ತು.
ಆದರೆ ಯಾರು ನಿಜವಾಗಿ ಗೆದ್ದವರು ಎಂಬುದು ಸ್ಪಷ್ಟವಿರಲಿಲ್ಲ. ಒಕ್ಕೂಟ ಸರ್ಕಾರ ಕೆಲ ದಿನ ಅಧಿಕಾರದಲ್ಲಿತ್ತು. ನಂತರ ವಿಸರ್ಜನೆಗೊಂಡಿತು. ಕೆಲ ಕಾಲ ಇಂಥದೇ ಸ್ಥಿತಿ ಪುನರಾವರ್ತನೆಯಾಯಿತು. ಹಿಟ್ಲರ್ ಪೂರ್ಣ ಅಧಿಕಾರದಲ್ಲಿರಲಿಲ್ಲ. ಆದರೆ ಮೈತ್ರಿಕೂಟದ ರಾಜಕೀಯದ ಮೂಲಕ ಶೇ.33ರಷ್ಟು ಮತಗಳನ್ನು ತನ್ನ ವಶ ಮಾಡಿಕೊಂಡ ಹಿಟ್ಲರ್ .
1933ರ ಜನವರಿಯಲ್ಲಿ ಅಧ್ಯಕ್ಷ ಹಿಂಡೆನ್ಬರ್ಗ್, ಹಿಟ್ಲರ್ ಗೆ ಚಾನ್ಸೆಲರ್ ಆಗುವ ಅವಕಾಶ ಕೊಟ್ಟರು. ಹಿಟ್ಲರ್ ಬಗ್ಗೆ ಯಾರಿಗೂ ನಂಬಿಕೆಯಿರಲಿಲ್ಲ. ಆದರೆ ಹಿಟ್ಲರ್ ನ ನಾಝಿಗಳ ಜೊತೆ ಕೈಜೋಡಿಸಿದರೆ ಕಡೇ ಪಕ್ಷ ಕಮ್ಯುನಿಸ್ಟ್ ಪಾರ್ಟಿಯನ್ನು ದೂರವಿಡಬಹುದು ಎಂಬುದು ಎಲ್ಲರ ತರ್ಕವಾಗಿತ್ತು.
ಇದೊಂದು ಬಗೆಯಲ್ಲಿ ತುಂಟ ಹುಡುಗನನ್ನೇ ಕ್ಲಾಸ್ ಮಾನಿಟರ್ ಮಾಡುವ ಹಾಗಿತ್ತು.ಕೆಲವೇ ದಿನಗಳು. ಮತ್ತೆ ಹೇಗೂ ಚುನಾವಣೆ ಬರಲಿತ್ತು. ಅದರಲ್ಲಿ ಒಂದೇ ಪಕ್ಷಕ್ಕೆ ಬಹುಮತ ಬರುವಂತೆ ವಾತಾವರಣ ಇತ್ತು. ದುರದೃಷ್ಟಕರವೆಂದರೆ ಹಿಟ್ಲರ್ ತಲೆಯಲ್ಲಿ ಮಾತ್ರ ಬೇರೆಯೇ ಯೋಚನೆಯಿತ್ತು. ತನ್ನ ಚಾನ್ಸೆಲರ್ ಅಧಿಕಾರ ಬಳಸಿ ಆತ 50 ಸಾವಿರ ನಾಝಿಗಳನ್ನು ದೇಶದ ಪೊಲೀಸ್ ಸಹಾಯಕ ಪಡೆಗೆ ನೇಮಿಸಿ ಬಿಟ್ಟ.
ಮೂಲತಃ ಹಿಟ್ಲರ್ ನ ಪಕ್ಷದ ಹಿಂಸಾತ್ಮಕ ಕಾರ್ಯಕರ್ತರಾಗಿದ್ದ ಈ ಐವತ್ತು ಸಾವಿರ ಜನ ದಿಢೀರನೆ ಅಲ್ಲಿನ ಪೊಲೀಸ್ ಪಡೆಯ ಭಾಗವಾಗಿಬಿಟ್ಟರು. ಬಳಿಕ ಈ ಪೊಲೀಸ್ ಪಡೆ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯ ಕಚೇರಿ ಮೇಲೆ ದಾಳಿ ಮಾಡಿತು. ದೇಶವಿರೋಧಿ ಸರಕುಗಳು ಅವರ ಬಳಿ ಇದ್ದವೆಂದು ಮಾಧ್ಯಮಗಳಲ್ಲಿ ಭಾರೀ ಸುದ್ದಿ ಹರಡಿತು.
ಕಮ್ಯುನಿಸ್ಟರು ದೇಶದ ಮೇಲೆಯೇ ದಾಳಿಗೆ ಸಂಚು ರೂಪಿಸಿದ್ದರು ಎಂದೂ, ದೇಶ ಅಪಾಯದಲ್ಲಿತ್ತು ಎಂದೂ, ನಾಝಿ ಪಾರ್ಟಿ ಮತ್ತು ಹಿಟ್ಲರ್ ದೇಶವನ್ನು ರಕ್ಷಿಸಿದ್ದಾಗಿಯೂ ಪ್ರಚಾರ ಮಾಡಲಾಯಿತು. ಅದಾಗಿ 3 ದಿನಗಳ ಬಳಿಕ, ರಾತ್ರಿ 9ರ ವೇಳೆಯಲ್ಲಿ ಸಂಸತ್ ಕಟ್ಟಡದ ಗಾಜುಗಳು ಒಡೆದ ಸದ್ದಾಯಿತು. ಮರುಕ್ಷಣದಲ್ಲೇ ಜನರು ಅಲ್ಲಿ ಬೆಂಕಿಯ ಜ್ವಾಲೆಯನ್ನು ನೋಡಿದರು.
ಜರ್ಮನ್ ಸಂಸತ್ತಿಗೆ ಬೆಂಕಿ ಬಿದ್ದಿತ್ತು. ಬೆಂಕಿ ಆರಿಸಲು ಗಂಟೆಗಳೇ ಬೇಕಾದವು, ಆದರೆ ಕಟ್ಟಡ ತೀವ್ರವಾಗಿ ಹಾನಿಗೊಂಡಿತ್ತು.ಪೊಲೀಸರು ಹತ್ತಿರದಲ್ಲೇ ಕಂಡಿದ್ದ ಒಬ್ಬ ಡಚ್ ಕಟ್ಟಡ ಕೆಲಸಗಾರನನ್ನು ಬಂಧಿಸಿದ್ದರು. ಆ ರಾತ್ರಿಯ ಬೆಂಕಿ ಜರ್ಮನಿ ಮತ್ತು ಇಡೀ ಜಗತ್ತಿನ ಹಣೆಬರಹವನ್ನೇ ಬದಲಿಸಲಿತ್ತು.
ಆ ಘಟನೆ ಬಳಿಕ ಅಧ್ಯಕ್ಷ ಹಿಂಡೆನ್ಬರ್ಗ್ ಯಾವುದೇ ಆದೇಶ ನೀಡುವ ತನ್ನ ಅಧಿಕಾರ ಬಳಸಿದ. ವಾಕ್ ಸ್ವಾತಂತ್ರ್ಯ, ಸಭೆ ಸೇರುವ ಹಕ್ಕು, ಪತ್ರಿಕಾ ಸ್ವಾತಂತ್ರ್ಯ, ಖಾಸಗಿ ಹಕ್ಕು - ಎಲ್ಲವೂ ಜರ್ಮನಿಯಲ್ಲಿ ಇಲ್ಲವಾಯಿತು. ಇದ್ದಕ್ಕಿದ್ದಂತೆ ದೇಶದಲ್ಲಿ ಫೋನ್ ಕದ್ದಾಲಿಕೆ, ಸಾಮೂಹಿಕ ಬಂಧನಗಳು, ಚಿತ್ರಹಿಂಸೆ - ಎಲ್ಲವೂ ಕಾನೂನುಬದ್ಧವಾಗಿಬಿಟ್ಟವು. ಹಿಂದಿನ ವರ್ಷದ ಚುನಾವಣೆಗಳಲ್ಲಿ 80ಕ್ಕೂ ಹೆಚ್ಚು ಕಮ್ಯುನಿಸ್ಟ್ ನಾಯಕರು ಸಂಸತ್ತಿಗೆ ಆಯ್ಕೆಯಾಗಿದ್ದರು.
ಆದರೆ ಹಿಟ್ಲರ್ ಸಂಚು ರೂಪಿಸಿ ಅವರನ್ನೆಲ್ಲ ದೇಶದ್ರೋಹಿಗಳ ಹಣೆಪಟ್ಟಿ ಹಚ್ಚಿ ಬಂಧಿಸತೊಡಗಿದ. ಸಂಸತ್ ಬೆಂಕಿ ಅನಾಹುತಕ್ಕೆ ಅವರನ್ನೇ ಹೊಣೆ ಮಾಡಲಾಯಿತು. ಎಲ್ಲರನ್ನೂ ಬಂಧಿಸಲಾಯಿತು. ಸಂಸತ್ತಿನ 80 ಸ್ಥಾನಗಳು ಖಾಲಿಯಾದವು. ಕೊನೆಗೆ ಸಂಸತ್ತಿನಲ್ಲಿ ವಿರೋಧ ಪಕ್ಷದವರೇ ಇರಲಿಲ್ಲ. ಹಿಟ್ಲರ್ ಏನು ಬೇಕಾದರೂ ಮಾಡಬಹುದಿತ್ತು. ವಿರೋಧಪಕ್ಷದವರೆಲ್ಲ ಜೈಲಿನಲ್ಲಿದ್ದರು.
ಸಂಸತ್ತಿಗೆ ಬೆಂಕಿ ಬಿದ್ದು ತಿಂಗಳಾಗುವಷ್ಟರಲ್ಲಿ, ಪ್ರತಿಪಕ್ಷವೇ ಇಲ್ಲವಾದಲ್ಲಿ ಒಂದು ಕಾನೂನು ತರಲಾಯಿತು. ಎಲ್ಲ ಶಾಸಕಾಂಗದ ಅಧಿಕಾರವನ್ನು ಹಿಟ್ಲರ್ ಮತ್ತವನ ಸಂಪುಟಕ್ಕೆ ವರ್ಗಾಯಿಸಲಾಯಿತು. ರಾಜಕೀಯ ವ್ಯವಸ್ಥೆ ಕೆಲವೇ ಜನರ ನಿಯಂತ್ರಣಕ್ಕೆ ಒಳಪಟ್ಟಿತು.
ಈ ಅಧಿಕಾರ ವರ್ಗಾವಣೆ ಕಾನೂನು ಮತ್ತು ಸಂವಿಧಾನ ಬದ್ಧವಾಗಿಯೇ ನಡೆದಿತ್ತು ಎಂಬುದು ವಿಪರ್ಯಾಸ. ಅಧ್ಯಕ್ಷ ಹಿಂಡೆನ್ಬರ್ಗ್ 1934ರಲ್ಲಿ ನಿಧನ ಹೊಂದಿದ ಬಳಿಕ ಹಿಟ್ಲರ್ ಮತ್ತೊಂದು ಕಾನೂನು ತಂದ. ಅದರ ಪ್ರಕಾರ, ಇಡೀ ವ್ಯವಸ್ಥೆಯನ್ನು ನೋಡಿಕೊಳ್ಳಲು ಹಿಟ್ಲರನ ನಿಯಂತ್ರಣದಲ್ಲಿ ಇಬ್ಬರು ಅಧಿಕಾರಿಗಳು ಬಂದರು. ಅಧ್ಯಕ್ಷ ಮತ್ತು ಚಾನ್ಸೆಲರ್ ಅಧಿಕಾರ - ಎರಡೂ ಹಿಟ್ಲರ್ ಕೈಗೆ ಬಂತು.
ಇದನ್ನು ಪ್ರಶ್ನಿಸಿದವರನ್ನು ಸುಮ್ಮನಾಗಿಸಲಾಯಿತು ಮತ್ತು ಜನಾಭಿಪ್ರಾಯದ ಮೂಲಕ ಹಿಟ್ಲರ್ ಇದನ್ನು ತಂದಿರುವುದಾಗಿ ಬಿಂಬಿಸಲಾಯಿತು. ಜನರೇ ಇದಕ್ಕೆ ಒಪ್ಪಿರುವಾಗ ನಿಮ್ಮದೇನು ತಕರಾರು ಎಂದು ಬಾಯಿ ಮುಚ್ಚಿಸಲಾಯಿತು. ಜನಾದೇಶ ಇರುವಾಗ ಯಾರೂ ಪ್ರಶ್ನಿಸಲಾಗದು ಎನ್ನುವಂತೆ ಮಾಡಲಾಯಿತು.
ಹೀಗೆ ಸಂಸತ್ತನ್ನು ಸುಟ್ಟುಹಾಕಿದ ಆ ಒಂದು ಕಿಡಿ ಎಲವನ್ನೂ ಹಿಟ್ಲರನ ನಿಯಂತ್ರಣಕ್ಕೆ ತಂದಿತ್ತು. ಜರ್ಮನಿ ಮಾತ್ರವಲ್ಲ ಇಡೀ ಜಗತ್ತಿಗೇ ಭಾರೀ ವಿನಾಶ ತಂದಿತು. ಅವನು ಸೋಲೊಪ್ಪುವವರೆಗೂ, ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಯಾರೂ ಅವನನ್ನು ತಡೆಯುವುದು ಸಾಧ್ಯವಾಗಲಿಲ್ಲ.
ಆದರೆ ಅಷ್ಟು ಹೊತ್ತಿಗೆ ಅರ್ಧದಷ್ಟು ಜಗತ್ತು ನಾಶಗೊಂಡಿತ್ತು ಮತ್ತು ಲಕ್ಷಾಂತರ ಅಮಾಯಕರು ಸಾವನ್ನಪ್ಪಿದ್ದರು. ಅಂದು ಸಂಸತ್ತಿಗೆ ಬೆಂಕಿ ಬೀಳದೇ ಇದ್ದಿದ್ದರೆ ಜರ್ಮನಿ ಮತ್ತು ಇಡೀ ವಿಶ್ವ ಹಿಟ್ಲರನಿಂದ ಬಚಾವಾಗುತ್ತಿತ್ತೆ? ಇದು ಚರ್ಚೆಯ ವಿಚಾರ. ಆದರೆ ಆ ಬೆಂಕಿಯಿಂದ ಶೀಘ್ರಗತಿಯಲ್ಲಿ ಜರ್ಮನಿಯಲ್ಲಿ ಪ್ರಜಾಪ್ರಭುತ್ವದ ನಾಶ ಮತ್ತು ಅಷ್ಟೇ ತ್ವರಿತವಾಗಿ ಹಿಟ್ಲರನ ಏಳಿಗೆಯಾಯಿತು.ಅದರಲ್ಲಿ ಸಂಶಯವೇ ಇಲ್ಲ.
ಹಿಟ್ಲರ್ ಮತ್ತು ನಾಝಿ ಪಕ್ಷವೇ ಅವತ್ತಿನ ಬೆಂಕಿಗೆ ಕಾರಣವಾಗಿದ್ದಿರಬಹುದು. ಆದರೆ ಅವರು ಕಮ್ಯುನಿಸ್ಟರ ಮೇಲೆ ತಪ್ಪು ಹೊರಿಸಿ ಲಾಭ ಪಡೆದರು. ಸಂಸತ್ ಮೇಲಿನ ಆ ದಾಳಿ ಒಬ್ಬ ವ್ಯಕ್ತಿಯಿಂದ ಆಗಿರಲು ಸಾಧ್ಯವಿಲ್ಲ. ಅದೊಂದು ಸಂಚಾಗಿದ್ದಿರಬಹುದು ಎಂದು ಸಂಶೋಧಕರು ಇತ್ತೀಚೆಗೆ ಪ್ರತಿಪಾದಿಸಿದ್ದಾರೆ. ಕಮ್ಯುನಿಸ್ಟರು, ರಷ್ಯಾ ಅಥವಾ ಇನ್ನಾವುದೇ ವ್ಯವಸ್ಥಿತ ಯೋಜನೆ ಆ ಬೆಂಕಿಯ ಹಿಂದೆ ಇರಲಿಲ್ಲ. ನಾಝಿಗಳೇ ತನಿಖೆ ಮಾಡಿದ್ದರಿಂದ ಸತ್ಯವನ್ನು ಅಡಗಿಸುವುದೂ ಅವರಿಗೆ ಸುಲಭವಾಗಿತ್ತು.
2008ರಲ್ಲಿ, ಆ ಘಟನೆಯ 75 ವರ್ಷಗಳ ಬಳಿಕ ಸಂಸತ್ ದಾಳಿ ಆರೋಪದಲ್ಲಿ ಬಂಧಿತ ಡಚ್ ವ್ಯಕ್ತಿಯನ್ನು ಜರ್ಮನಿ ಸರಕಾರ ದೋಷಮುಕ್ತಗೊಳಿಸಿತು. ಅಂದು ಹಿಟ್ಲರ್ ಮಾಡಿದ್ದು, ಆತನ ನಾಝಿ ಪಕ್ಷ ಮಾಡಿದ್ದು ತಪ್ಪು ಎಂದಿತು. ಕ್ಷಮೆ ಕೇಳಿತು. ಆದರೆ ಅವತ್ತು ದೇಶದ ಹೆಸರಲ್ಲಿ, ಸುರಕ್ಷತೆಯ ಹೆಸರಲ್ಲಿ ಹಿಟ್ಲರ್ ಮೆರೆದ ಮಹಾ ಕ್ರೌರ್ಯಕ್ಕೆ ಯಾವ ಕ್ಷಮೆಯೂ ಇಲ್ಲ. ಹಿಟ್ಲರನಿಂದ ಏನು ಕಲಿಯಬಹುದು? ಪ್ರಜಾಪ್ರಭುತ್ವವನ್ನು ನಾಶ ಮಾಡೋದು ಸರ್ವಾಧಿಕಾರಿಗಳಿಗೆ ಕಷ್ಟದ್ದಲ್ಲ ಎಂಬುದು ಇದರಿಂದ ಸ್ಪಷ್ಟ.
ಅಂಥದೇ ನಡೆಯನ್ನು ಈಗಲೂ ಜಗತ್ತಿನಲ್ಲಿ ಕಾಣಬಹುದೆ?. ನಾವು ಈಗಿನ ಹಿಟ್ಲರ್ ಗಳನ್ನು ತಡೆಯಲು ಸಾಧ್ಯವಿಲ್ಲವೆಂದಾದರೆ, ಶೀಘ್ರದಲ್ಲೇ ಸಮಸ್ಯೆ ತಲೆದೋರಬಹುದೆ?. 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಟ್ರಂಪ್ ಯತ್ನ ನಡೆದಿದೆ. ಹಾಗೆಯೇ ರಷ್ಯಾದಲ್ಲಿ ಪುಟಿನ್, ಇಸ್ರೇಲ್ನಲ್ಲಿ ನೆತನ್ಯಾಹು.
ಪರಿಸ್ಥಿತಿಯನ್ನು ಬಹುಬೇಗ ಅರ್ಥ ಮಾಡಿಕೊಂಡರೆ ನಾವು ಅವರನ್ನು ತಡೆಯಬಹುದು. ಇಲ್ಲದೇ ಹೋದರೆ, ಅವರು ಅಧಿಕಾರದಲ್ಲಿರುವಾಗ, ಮಾಧ್ಯಮಗಳು ಅವರ ನಿಯಂತ್ರಣದಲ್ಲಿರುವಾಗ, ವಿರೋಧಪಕ್ಷಗಳನ್ನು ಮೌನವಾಗಿಸಿರುವಾಗ ಅವರನ್ನು ತಡೆಯುವುದು ಸಾಧ್ಯವಿಲ್ಲ.ಅರ್ಥ ಇಷ್ಟೆ, ಚರಿತ್ರೆಯನ್ನು ಅರ್ಥ ಮಾಡಿಕೊಳ್ಳುವವರೆಗೆ, ಸರ್ವಾಧಿಕಾರಿಗಳ ತಂತ್ರಗಳನ್ನು ಅರ್ಥ ಮಾಡಿಕೊಳ್ಳುವವರೆಗೆ, ನಾಳೆ ಹಿಟ್ಲರ್ ಆಗಬಲ್ಲವರನ್ನು ನಾವು ತಡೆಯಲಾರೆವು.







