CJP ಪ್ರತಿಭಟನೆ 'ಮೀಸಲಾತಿ ವಿರೋಧಿ ಚಳವಳಿ'ಗೆ ದಾರಿಯಾದದ್ದು ಹೇಗೆ?

Photo Credit : PTI
ಕಾಕ್ರೋಚ್ ಜನತಾ ಪಾರ್ಟಿ (CJP) ತನಗೆ ಬೇಕಾಗಿದ್ದನ್ನು ಸಾಧಿಸಿಕೊಂಡಿದೆ. ಸಿಜೆಪಿ ಪ್ರತಿಭಟನೆಗಳಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ತಿಂಗಳ ಕಾಲ ನಡೆದ ಪ್ರತಿಭಟನೆಗಳು ಕೊನೆಗೊಂಡಿವೆ. ಧರಣಿಗಳು ಮುಗಿದಿವೆ. ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿದ್ದ ತಡೆಗೋಡೆಗಳನ್ನು ತೆರವುಗೊಳಿಸಲಾಗಿದೆ. ಆದರೆ ಸಿಜೆಪಿ ಪ್ರತಿಭಟನೆಯಿಂದಲೇ ಮತ್ತೊಂದು ಚಳವಳಿ ಆರಂಭವಾಗುತ್ತಿದೆ.
ಸಿಜೆಪಿ ಪ್ರತಿಭಟನೆಯ ಅನಿರೀಕ್ಷಿತ ಪರಿಣಾಮವಾಗಿ 'ಮೀಸಲಾತಿ ವಿರೋಧಿ ಚಳವಳಿ' ರೂಪುಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಇದು ಹೆಚ್ಚು ಚರ್ಚೆಯಾಗುತ್ತಿದೆ. ಇದು ಭಾರತದಲ್ಲಿ ರಾಜಕೀಯವಾಗಿ ಸೂಕ್ಷ್ಮ ಮತ್ತು ಸಾಮಾಜಿಕವಾಗಿ ಸಂವೇದನಾಶೀಲವಾಗಿರುವ ಜಾತಿ ಆಧಾರಿತ ಮೀಸಲಾತಿ ವಿಷಯವನ್ನು ಮತ್ತೆ ಮುನ್ನೆಲೆಗೆ ತರುವ ಆತಂಕ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳು, ರೀಲ್ಸ್ಗಳು ಮತ್ತು ಪ್ರಚಾರ ಅಭಿಯಾನಗಳ ಸುರಿಮಳೆಯೇ ಆಗುತ್ತಿದೆ. 'ರಿಸರ್ವೇಷನ್ ಹಠಾವೋ ಆಂದೋಲನ್' (RHA) ಎಂಬ ಆನ್ಲೈನ್ ವೇದಿಕೆಯು ಇದರ ನೇತೃತ್ವ ವಹಿಸಿದೆ. ಕೇವಲ ಆರು ದಿನಗಳ ಹಿಂದೆ ತನ್ನ ಮೊದಲ ಪೋಸ್ಟ್ ಹಂಚಿಕೊಂಡಿದ್ದ ಈ ಇನ್ಸ್ಟಾಗ್ರಾಮ್ ಖಾತೆಯು ಈಗ 58 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಹೆಸರೇ ಸೂಚಿಸುವಂತೆ, ಇದು ಭಾರತದಲ್ಲಿ ಜಾತಿ ಆಧಾರಿತ ಮೀಸಲಾತಿಯಲ್ಲಿ ಸಮಗ್ರ ಬದಲಾವಣೆ ಅಥವಾ ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಆಗ್ರಹಿಸುತ್ತಿದೆ.
ಇದು ಹಲವು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಯಿದೆ. ಯುಜಿಸಿ ಸಮಾನತೆ ನಿಯಮಗಳು ದೇಶಾದ್ಯಂತ ಅಶಾಂತಿಯನ್ನು ಸೃಷ್ಟಿಸಿದ ಕೆಲವೇ ತಿಂಗಳುಗಳಲ್ಲಿ ಹಾಗೂ ಹೊಸದಿಲ್ಲಿಯಲ್ಲಿ ಸಿಜೆಪಿ ನೇತೃತ್ವದ ಧರಣಿ ತೀವ್ರಗೊಂಡಿದ್ದ ವೇಳೆಯಲ್ಲೇ ಈ ಮೀಸಲಾತಿ ವಿರೋಧಿ ಚಳವಳಿ ಮತ್ತು ಧ್ರುವೀಕರಣದ ವಾತಾವರಣ ಸೃಷ್ಟಿಯಾಗಿರುವುದು ಸಾರ್ವಜನಿಕ ಚರ್ಚೆಗಳನ್ನು ಇನ್ನಷ್ಟು ವಿಭಜಿಸುವಂತೆ ಮಾಡಬಹುದು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದ್ದು, ಇಲ್ಲಿ ಜಾತಿಯೇ ನಿರ್ಣಾಯಕ ಪಾತ್ರ ವಹಿಸುತ್ತದೆ.
ನೀಟ್ ಪ್ರತಿಭಟನೆಯ ವೇಳೆಯಲ್ಲಿಯೇ ಮೀಸಲಾತಿ ವಿರೋಧಿ ಚರ್ಚೆಗೆ ಹೊಸ ಬೆಂಬಲ ಸಿಕ್ಕಿತ್ತು. ಮೇ ತಿಂಗಳಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆಗೆ ಶರಣಾದ ಬಹುತೇಕ ನೀಟ್ ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಸೇರಿದವರೆಂದು ಜನರು ವಾದಿಸಿದ್ದರು. ಮೀಸಲಾತಿ ವ್ಯವಸ್ಥೆಯಿಂದಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಅತ್ಯಂತ ಕಠಿಣವಾಗಿದೆ ಎಂಬುದು ಅವರ ವಾದವಾಗಿತ್ತು.
ಈ ಮೀಸಲಾತಿ ವಿರೋಧಿ ಚರ್ಚೆಯು ಈಗಲೂ ಮುಂದುವರಿದಿದೆ. ಸಿಜೆಪಿ ಹೋರಾಟದ ಪರ-ವಿರೋಧದಲ್ಲಿ ಬೆಂಬಲಿಗರು ಮತ್ತು ವಿಮರ್ಶಕರು ಪರಸ್ಪರ ಸಂಘರ್ಷಕ್ಕೆ ಇಳಿದಿದ್ದರೂ, ಹಳೆಯ ಜಾತಿ ಆಧಾರಿತ ಮೀಸಲಾತಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಜೊತೆಗೆ, ಸಿಜೆಪಿಯ ಯಶಸ್ವಿ ಆನ್ಲೈನ್ ಅಭಿಯಾನವು ಮೀಸಲಾತಿ ವಿರೋಧಿ ಬೇಡಿಕೆ ಮುಂದಿಡುತ್ತಿರುವ ಹೋರಾಟಗಾರರಿಗೆ (ಕನಿಷ್ಠ ಇಂಟರ್ನೆಟ್ನಲ್ಲಿ) ಒಂದು ಮಾದರಿಯನ್ನು ಒದಗಿಸಿದಂತೆ ಕಾಣುತ್ತಿದೆ. 'ರಿಸರ್ವೇಷನ್ ಹಠಾವೋ ಆಂದೋಲನ'ದ ವೆಬ್ಸೈಟ್ ಸಿಜೆಪಿ ವೆಬ್ಸೈಟ್ನನ್ನೇ ಹೋಲುತ್ತದೆ. ಅದೇ ಬಣ್ಣದ ವಿನ್ಯಾಸಗಳು, ಎಐ-ಜನರೇಟೆಡ್ ಕಂಟೆಂಟ್ಗಳು ಇಲ್ಲಿವೆ.
ಈಗ ಏನು ನಡೆಯುತ್ತಿದೆ ಮತ್ತು ಕಳೆದ ಕೆಲವು ಸಮಯದಿಂದ ಏನು ನಡೆಯುತ್ತಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು, ಕೆಲವು ತಿಂಗಳು ಹಿಂದಕ್ಕೆ ಹೋಗಬೇಕಾಗಿದೆ.
ಯುಜಿಸಿ ವಿವಾದ 'ಮೀಸಲಾತಿ ವಿರೋಧಿ ಚಳವಳಿ'ಗೆ ವೇದಿಕೆ ಕಲ್ಪಿಸಿತೇ?
ಜಾತಿ ಆಧಾರಿತ ಮೀಸಲಾತಿಗೆ ವಿರೋಧ ವ್ಯಕ್ತವಾಗುತ್ತಿರುವುದು ಮೀಸಲಾತಿ ವ್ಯವಸ್ಥೆಯಷ್ಟೇ ಹಳೆಯದಾಗಿದ್ದರೂ, ಸಿಜೆಪಿ ಪ್ರತಿಭಟನೆಯ ಸಮಯದಲ್ಲಿ ಈ ಚರ್ಚೆಗೆ ಹೊಸ ರೂಪ ಸಿಕ್ಕಿತು. ಜಾತಿ ಆಧಾರಿತ ತಾರತಮ್ಯವನ್ನು ತಡೆಯಲು ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು. ಮೀಸಲಾತಿಯನ್ನು ಕೊನೆಗೊಳಿಸುವುದರಿಂದಲೇ ಜಾತಿ ತಾರತಮ್ಯವನ್ನು ಕೊನೆಗಾಣಿಸಲು ಸಾಧ್ಯ ಎಂಬುದು ಇಂದಿನ ಮೀಸಲಾತಿ ವಿರೋಧಿ ಹೋರಾಟಗಾರರ ವಾದವಾಗಿದೆ. ಈ ಚರ್ಚೆಯು ಎಂದಿನಂತೆ ಅತ್ಯಂತ ಸೂಕ್ಷ್ಮ, ವಿಭಜಿತ ಮತ್ತು ವಿವಾದಾತ್ಮಕವಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು 'ಸಮಾನತಾ ಸಮಿತಿಗಳು' ಮತ್ತು 'ಸಮಾನತಾ ದಳಗಳನ್ನು' ರಚಿಸುವ ಯುಜಿಸಿಯ 'ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ ನಿಯಮಗಳು, 2026' ದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಜಾತಿ-ಸೂಕ್ಷ್ಮ ಹಿಂದಿ ಭಾಷಿಕ ಪ್ರದೇಶಗಳಲ್ಲಿ ವ್ಯಾಪಕ ವಿರೋಧಕ್ಕೆ ಗುರಿಯಾದ ಕೆಲವೇ ತಿಂಗಳುಗಳಲ್ಲಿ ಈ ಹೊಸ ವಿವಾದ ಸೃಷ್ಟಿಯಾಗಿದೆ.
ಮೀಸಲಾದ ಜಾತಿ ಮತ್ತು ವರ್ಗದ ಜನರು ಈ ನಿಯಮಗಳನ್ನು ಉನ್ನತ ಶಿಕ್ಷಣವನ್ನು ಹೆಚ್ಚು ಒಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಬಹುದಿನಗಳಿಂದ ಬಾಕಿಯಿದ್ದ ಪ್ರಮುಖ ಹೆಜ್ಜೆ ಎಂದು ಕರೆದರು.
ಇನ್ನೊಂದೆಡೆ, ವಿರೋಧ ವ್ಯಕ್ತಪಡಿಸಿದವರು ತಕ್ಷಣವೇ ಬೀದಿಗಿಳಿದು ಹೋರಾಟ ನಡೆಸಿ, ಈ ನಿಯಮಗಳು ಕೇವಲ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯವನ್ನು ಮಾತ್ರ ಪರಿಗಣಿಸುತ್ತವೆ ಹಾಗೂ ಸಾಮಾನ್ಯ ವರ್ಗದವರಿಗೆ ಯಾವುದೇ ರಕ್ಷಣೆ ನೀಡುವುದಿಲ್ಲ ಎಂದು ವಾದಿಸಿದರು. ನಿಯಮಗಳ ಹಲವು ಅಂಶಗಳು ಸ್ಪಷ್ಟವಾಗಿಲ್ಲ, ಏಕಪಕ್ಷೀಯವಾಗಿವೆ ಮತ್ತು ದುರ್ಬಳಕೆಗೆ ಅವಕಾಶ ಮಾಡಿಕೊಡುತ್ತವೆ ಎಂದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಆರೋಪಿಸಿದರು. ಈ ನಡುವೆ, ಹೊಸದಿಲ್ಲಿಯಲ್ಲಿರುವ ಯುಜಿಸಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆಗಳು ಆರಂಭವಾಗಿ, ಹಲವು ರಾಜ್ಯಗಳ ವಿಶ್ವವಿದ್ಯಾಲಯ ಕ್ಯಾಂಪಸ್ಗಳಿಗೆ ಹರಡಿದವು.
ಈ ವಿವಾದಕ್ಕೆ ಸ್ಪಂದಿಸಿದ್ದ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಯತ್ನಿಸಿದ್ದರು. "ಹೊಸ ಯುಜಿಸಿ ನಿಯಮಗಳಿಂದ ಯಾರಿಗೂ ತಾರತಮ್ಯ ಅಥವಾ ಅನ್ಯಾಯವಾಗುವುದಿಲ್ಲ. ಯುಜಿಸಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳಾಗಲಿ, ಕಾನೂನು ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದ್ದರು.
ಈ ವಿಷಯವು ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಜನವರಿಯಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ನಿಯಮಗಳಿಗೆ ತಡೆ ನೀಡಿತು. ನಿಯಮಗಳ ಹಲವು ಅಂಶಗಳು ಮೇಲ್ನೋಟಕ್ಕೆ ಸ್ಪಷ್ಟವಾಗಿಲ್ಲ ಮತ್ತು ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಈ ನಿಯಮಗಳು ಎಂದಿಗೂ ಜಾರಿಗೆ ಬರಲಿಲ್ಲವಾದರೂ, ಈ ವಿವಾದವು ಮೀಸಲಾತಿ ಚರ್ಚೆಯನ್ನು ರಾಜಕೀಯವಾಗಿ ಜೀವಂತವಾಗಿರಿಸಿತು ಮತ್ತು ಬೀದಿಗಿಳಿದು ಹೋರಾಟ ನಡೆಸುವ ವಾತಾವರಣವನ್ನು ನಿರ್ಮಿಸಿತು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಸಿಜೆಪಿ ಪ್ರತಿಭಟನೆ 'ಮೀಸಲಾತಿ ವಿರೋಧಿ ಧ್ವನಿ'ಗಳನ್ನು ತೀವ್ರಗೊಳಿಸಿದ್ದು ಹೇಗೆ?
ಫೆಬ್ರವರಿ ವೇಳೆಗೆ ಯುಜಿಸಿ ನಿಯಮಗಳ ಮೇಲಿನ ಗಲಾಟೆ ಶಮನಗೊಳ್ಳುತ್ತಿದ್ದಂತೆಯೇ, ಮತ್ತೊಂದು ವಿವಾದ ಮುನ್ನೆಲೆಗೆ ಬಂದಿತು. ಮೇ ತಿಂಗಳಲ್ಲಿ ನಡೆದ NEET-UG ಪ್ರಶ್ನೆಪತ್ರಿಕೆ ಸೋರಿಕೆಯ ನಂತರ, ಆನ್ಲೈನ್ನಲ್ಲೊಂದು ತಮಾಷೆಯ ಚಳವಳಿಯಾಗಿ ಆರಂಭವಾಗಿದ್ದ 'ಸಿಜೆಪಿ', ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರ ಗಮನ ಸೆಳೆದು ತೀವ್ರ ಸ್ವರೂಪ ಪಡೆದುಕೊಂಡಿತು.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಸುಧಾರಣೆಗಳ ಜೊತೆಗೆ, ಜಾತಿ ಆಧಾರಿತ ಮೀಸಲಾತಿಯ ಅಗತ್ಯತೆಯ ಕುರಿತಾದ ಚರ್ಚೆಯೂ ಮತ್ತೆ ಆರಂಭವಾಯಿತು. ಇದಕ್ಕೆ ಪ್ರಚೋದನೆ ಸಿಕ್ಕಿದ್ದು ಕೂಡ ಸಿಜೆಪಿಯ ಅನಧಿಕೃತ ಕೇಂದ್ರಸ್ಥಾನವಾಗಿದ್ದ ಜಂತರ್ ಮಂತರ್ನಿಂದಲೇ.
ಸಿಜೆಪಿಯು 'ಅಂಬೇಡ್ಕರ್ವಾದ' ಮತ್ತು ದಲಿತ ಹಿತಾಸಕ್ತಿಗಳಿಂದ ಪ್ರೇರಿತವಾದ ಎಡಪಂಥೀಯ ಸಂಘಟನೆಗಳೊಂದಿಗೆ ನಂಟು ಹೊಂದಿರುವುದರಿಂದ, ಜಂತರ್ ಮಂತರ್ನಿಂದ ವ್ಯಕ್ತವಾದ ಜಾತೀಯ ಹೇಳಿಕೆಗಳು ಮತ್ತು ಪೋಸ್ಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದವು. ಹಲವು ಬಲಪಂಥೀಯ ಇನ್ಫ್ಲುಯೆನ್ಸರ್ಗಳು ಪ್ರತಿಭಟನೆಯಿಂದ ದೂರವಿರುವಂತೆ 'ಸಾಮಾನ್ಯ ವರ್ಗದ' ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಸಿಜೆಪಿಯನ್ನು 'ಪ್ರತಿಭೆಗೆ ವಿರೋಧಿ' ಮತ್ತು 'ಮೀಸಲಾತಿ ಪರ' ಎಂದು ಚಿತ್ರಿಸಿದರು.
ಮೀಸಲಾತಿ ವಿರೋಧಿ ವಿಶ್ಲೇಷಕರು ಕೂಡ ಪ್ರಶ್ನೆಪತ್ರಿಕೆ ಸೋರಿಕೆ, ನಿರುದ್ಯೋಗ ಮತ್ತು ಕಡಿಮೆಯಾಗುತ್ತಿರುವ ಉದ್ಯೋಗಾವಕಾಶಗಳನ್ನು ಭಾರತದ ಮೀಸಲಾತಿ ನೀತಿಗೆ ಸಂಯೋಜಿಸಿದರು. ಪದೇ ಪದೇ ನಡೆಯುವ ಪರೀಕ್ಷಾ ಅಕ್ರಮಗಳು ಸಾಮಾನ್ಯ ವರ್ಗದ ಸೀಟುಗಳಿಗಾಗಿ ನಡೆಯುವ ಸ್ಪರ್ಧೆಯನ್ನು ಇನ್ನಷ್ಟು ತೀವ್ರಗೊಳಿಸಿವೆ ಎಂಬುದು ಅವರ ವಾದವಾಗಿತ್ತು.
ಈ ನಡುವೆ, ವಾಷಿಂಗ್ಟನ್ ಡಿಸಿ ಮೂಲದ ಭಾರತೀಯ-ಅಮೆರಿಕನ್ ಬರಹಗಾರ-ಪತ್ರಕರ್ತ ಸದಾನಂದ ಧುಮೆ ಅವರು ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಬರೆದ ಅಭಿಪ್ರಾಯ ಲೇಖನವು, ಭಾರತದ ಮೀಸಲಾತಿ ವ್ಯವಸ್ಥೆಯನ್ನು ಚೀನಾದ 'ಪ್ರತಿಭೆ ಆಧಾರಿತ' (Merit-based) ಮಾದರಿಗೆ ಹೋಲಿಸಿ ವ್ಯತ್ಯಾಸವನ್ನು ಎತ್ತಿ ತೋರಿಸಿತ್ತು. ಇದು ಹೊಸ ಚರ್ಚೆ ಮತ್ತು ವಾಗ್ವಾದಕ್ಕೆ ನಾಂದಿ ಹಾಡಿತು.
ಆನಂದ್ ರಂಗನಾಥನ್, ಹರ್ಷ್ ದುಬೆ ಮತ್ತು ಬ್ರಾಹ್ಮಿನ್ ಜೀನ್ಸ್
ಜಾತಿ ಆಧಾರಿತ ಮೀಸಲಾತಿ ವಿರೋಧಿ ವಾದವನ್ನು ಬೆಂಬಲಿಸಿದವರಲ್ಲಿ ಲೇಖಕ ಆನಂದ್ ರಂಗನಾಥನ್ ಪ್ರಮುಖರು. ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು, ಅದನ್ನು ಪ್ರತಿ ಕುಟುಂಬದ ಒಂದು ಪೀಳಿಗೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಅವರು ವಾದಿಸಿದರು.
ಆರ್ಜೆ ರೌನಕ್ ಅವರೊಂದಿಗಿನ ಸಂದರ್ಶನದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಅವರು, "ನಾನು ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಆದರೆ ಅದನ್ನು ಒಂದು ಕುಟುಂಬಕ್ಕೆ ಒಮ್ಮೆ ಮಾತ್ರ ನೀಡಬೇಕು ಎಂಬುದು ನನ್ನ ನಂಬಿಕೆ. ಏಕೆಂದರೆ ಮೀಸಲಾತಿ ಸೀಟುಗಳ ಸಂಖ್ಯೆ ಸೀಮಿತವಾಗಿದೆ. ಈಗ, ಒಂದು ಶ್ರೀಮಂತ ಕುಟುಂಬವು ಮೂರು ಪೀಳಿಗೆಗಳಿಂದ (ಅಜ್ಜ, ತಂದೆ ಮತ್ತು ಮಗ) ಮೀಸಲಾತಿಯನ್ನು ಬಳಸಿಕೊಂಡರೆ, ಅವರು ಮೂರು ಸೀಟುಗಳನ್ನು ಪಡೆದಂತಾಗುತ್ತದೆ. ಪರಿಣಾಮವಾಗಿ, ಅದೇ ಸಮುದಾಯದ ಮೂರು ಅತ್ಯಂತ ಬಡ ಕುಟುಂಬಗಳಿಗೆ ಯಾವುದೇ ಅನುಕೂಲ ಸಿಗುವುದಿಲ್ಲ" ಎಂದು ಹೇಳಿದ್ದರು.
"ಇದನ್ನು ಒಂದು ಪೀಳಿಗೆಗೆ ಸೀಮಿತಗೊಳಿಸುವುದರಿಂದ ಇದರ ಸೌಲಭ್ಯಗಳು ಕೇವಲ ಮೇಲ್ಮಟ್ಟದವರಿಗೆ ಮಾತ್ರ ತಲುಪುವುದು ತಪ್ಪುತ್ತದೆ. ನಿಜವಾಗಿ ಅಗತ್ಯವಿರುವ ಅತ್ಯಂತ ಬಡ ಜನರನ್ನು ತಲುಪಲು ಸಾಧ್ಯವಾಗುತ್ತದೆ" ಎಂದಿದ್ದರು ಅವರು.
ಇದೇ ಸಮಯದಲ್ಲಿ ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ, ನೀಟ್ ಅಭ್ಯರ್ಥಿ ಹರ್ಷ್ ದುಬೆ ಭಾರತದ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ತೀವ್ರವಾಗಿ ಪ್ರಶ್ನಿಸಿದರು. ಚರ್ಚೆಯ ವೇಳೆ ಭಾವುಕರಾದ ಅವರು, ಕುರ್ಚಿಯಿಂದ ಎದ್ದು ನಿಂತು ಕೈಸನ್ನೆ ಮಾಡುತ್ತಾ ದೊಡ್ಡ ಧ್ವನಿಯಲ್ಲಿ ಮೀಸಲಾತಿಯನ್ನು ಪ್ರಶ್ನಿಸಿದರು. ಹಲವು ಬಾರಿ ನೀಟ್ ಪರೀಕ್ಷೆ ಬರೆದು 627 ಅಂಕಗಳನ್ನು ಪಡೆದಿದ್ದರೂ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗದ ದುಬೆ, "ದೇಶವು ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಚರ್ಚಿಸುತ್ತಿರುವಾಗ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ" ಎಂದು ವಾದಿಸಿದರು.
ವಿವಿಧ ವರ್ಗಗಳ ನಡುವಿನ ಕಟ್ಆಫ್ ಅಂಕಗಳು, ರಾಜ್ಯ ಮೀಸಲಾತಿ ಮತ್ತು ಪ್ರವೇಶ ಮಾನದಂಡಗಳ ವ್ಯತ್ಯಾಸಗಳನ್ನು ತೋರಿಸಿದ ಅವರು, "ಮೀಸಲಾತಿ ಬಗ್ಗೆ ಯಾರು ಮಾತನಾಡುತ್ತಾರೆ?" ಎಂದು ಪ್ರಶ್ನಿಸಿದರು. ಈ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ಇದು ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ 'ಸಮಾನತೆ ವಿರುದ್ಧ ಪ್ರತಿಭೆ' ಕುರಿತ ಹಳೆಯ ಚರ್ಚೆಗೆ ಮತ್ತೆ ಚಾಲನೆ ನೀಡಿತು.
ಇದೇ ವೇಳೆಗೆ, ಸಿಜೆಪಿ ಬೆಂಬಲಿಗರ ವಿರುದ್ಧ ಜಾತಿ ಆಧಾರಿತ ಟೀಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡವು.
'ಬ್ರಾಹ್ಮಿನ್ ಜೀನ್ಸ್' (BrahminGenes) ಸಾಮಾಜಿಕ ಮಾಧ್ಯಮ ಖಾತೆಯೊಂದಿಗೆ ಗುರುತಿಸಿಕೊಂಡಿರುವ, ಮೀಸಲಾತಿ ವಿರೋಧಿ ಹೋರಾಟದ ಪ್ರಮುಖ ಧ್ವನಿಯಾದ ಅನುರಾಧಾ ತಿವಾರಿ, ಸಿಜೆಪಿ ಪ್ರತಿಭಟನೆಗಳು ನಡೆಯುತ್ತಿದ್ದಾಗಲೇ ಮೀಸಲಾತಿ ಚರ್ಚೆಗೆ ಧುಮುಕಿದರು. ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಮನವಿ ಮಾಡಿದ ಅವರು, "ಸಾಮಾನ್ಯ ವರ್ಗದ ಎಲ್ಲರಲ್ಲಿ ನನ್ನದೊಂದು ವಿನಂತಿ. ನೀವು ವಿದ್ಯಾರ್ಥಿ ಪ್ರತಿಭಟನೆಗೆ ಹೋಗುತ್ತಿದ್ದರೆ, ದಯವಿಟ್ಟು ಮೀಸಲಾತಿ ವಿಷಯವನ್ನು ಎತ್ತಿಹಿಡಿಯಿರಿ. ಈ ಅವಕಾಶವನ್ನು ಬಳಸಿಕೊಳ್ಳಿ. ಇದು ನಿಮ್ಮ ಸಮಯ" ಎಂದು ಹೇಳಿದರು.
ತಿವಾರಿ ಅವರು ಬ್ಯಾನರ್ಗಳನ್ನು ಹಂಚಿಕೊಳ್ಳುವ ಮೂಲಕ, ಮೀಸಲಾತಿಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಮುಖ ವಿಷಯ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಹುಚರ್ಚಿತ ಮೊದಲ ಇನ್ಸ್ಟಾಗ್ರಾಮ್ ವಿಡಿಯೊವನ್ನು ಹಂಚಿಕೊಂಡ ತಿವಾರಿ, "ಒಂದೇ ಒಂದು ನಿರ್ಧಾರದ ಮೂಲಕ ನೀವು ನಿಮ್ಮ ಎಲ್ಲಾ ಜನಪ್ರಿಯತೆಯನ್ನು ಮರಳಿ ಪಡೆಯಬಹುದು. ಜಾತಿ ಆಧಾರಿತ ಮೀಸಲಾತಿಯನ್ನು ತೆಗೆದು ಆರ್ಥಿಕ ಆಧಾರಿತ ಮೀಸಲಾತಿಯನ್ನು ಜಾರಿಗೆ ತನ್ನಿರಿ. ನೀವು ಮುಂದಿನ ಚುನಾವಣೆಯಲ್ಲಿ ಸೋಲಬಹುದು, ಆದರೆ ನಿಮ್ಮ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ" ಎಂದು ಬರೆದುಕೊಂಡಿದ್ದಾರೆ.
ನೀಟ್ ಆತ್ಮಹತ್ಯೆಗಳಿಗೆ ಮೀಸಲಾತಿ ನೀತಿಯೇ ಕಾರಣ?
ಸಿಜೆಪಿ ಪ್ರತಿಭಟನೆಗಳ ಸಂದರ್ಭದಲ್ಲಿ, ಮೀಸಲಾತಿ ವರ್ಗಗಳಿಗೆ ಕಡಿಮೆ ಕಟ್ಆಫ್ ನಿಗದಿಪಡಿಸುವುದು ಅಸಮಾನ ಸ್ಪರ್ಧೆ ಮತ್ತು ನಿರಾಶೆಯನ್ನು ಹುಟ್ಟುಹಾಕುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ಇದರ ಪರಿಣಾಮವಾಗಿ, ಶೈಕ್ಷಣಿಕ ಒತ್ತಡ ಹಾಗೂ ತಾರತಮ್ಯಕ್ಕೆ ತುತ್ತಾಗಿ ಭಾರತದಲ್ಲಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತು ಎಕ್ಸ್ ವೇದಿಕೆಯಲ್ಲಿ ಕಳವಳ ವ್ಯಕ್ತಪಡಿಸಿರುವ ಭಾರತೀಯ-ಅಮೆರಿಕನ್ ಶಿಕ್ಷಣ ತಜ್ಞೆ ರಾಜೇಶ್ವರಿ ಅಯ್ಯರ್, "ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ 19 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಮೀಸಲಾತಿ ನೀತಿಯು ಸಮಾನ ಅವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಿದ್ದರೆ, ಸಾಮಾನ್ಯ ವರ್ಗದ ಇಷ್ಟೊಂದು ವಿದ್ಯಾರ್ಥಿಗಳು ತಮಗೆ ಎರಡನೇ ಅವಕಾಶವೇ ಇಲ್ಲ ಎಂದು ಭಾವಿಸುತ್ತಿರುವುದೇಕೆ? ಈ ಪ್ರಶ್ನೆಯ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ" ಎಂದು ಬರೆದುಕೊಂಡಿದ್ದಾರೆ.
ಅಂತೆಯೇ, ಹೊಸದಿಲ್ಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಕೌಶಿಕ್, "ಮೀಸಲಾತಿ ನೀತಿಯಿಂದಾಗಿ ಪ್ರತಿವರ್ಷ ದೇಶದಲ್ಲಿ 15,000 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ" ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಉಲ್ಲೇಖಿಸಿದೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ, ಪ್ರವೇಶಾತಿ ನೀಡುವಲ್ಲಿ ಅನುಸರಿಸಲಾಗುವ ತರ್ಕಹೀನ ಕಟ್ಆಫ್ಗಳ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ನೀಟ್-ಪಿಜಿ 2025ರ ಕೌನ್ಸಿಲಿಂಗ್ ಕುರಿತಾಗಿಯೂ ಇಂತಹುದೇ ಕಳವಳವನ್ನು ಅನ್ಶುಲ್ ಸಕ್ಸೇನಾ ಎಂಬುವವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಅತ್ಯಂತ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರವಾದ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಹೈದರಾಬಾದ್ನ ವೈದ್ಯಕೀಯ ಕಾಲೇಜೊಂದರಲ್ಲಿ ಎಂಎಸ್ ಆರ್ಥೋಪೆಡಿಕ್ಸ್ ಸೀಟು 800ಕ್ಕೆ 1 ಅಂಕ ಗಳಿಸಿದ ಅಭ್ಯರ್ಥಿಗೆ ಸಿಕ್ಕಿದ್ದರೆ, ಮತ್ತೊಂದು ಆರ್ಥೋಪೆಡಿಕ್ಸ್ ಸೀಟು 4 ಅಂಕಕ್ಕೆ, ಜನರಲ್ ಸರ್ಜರಿ 47 ಅಂಕಕ್ಕೆ, ಗೈನೆಕಾಲಜಿ 44 ಅಂಕಕ್ಕೆ, ಬಯೋಕೆಮಿಸ್ಟ್ರಿ -8 ಅಂಕಕ್ಕೆ ಮತ್ತು ಅನಾಟಮಿ ಸೀಟು 11 ಅಂಕಕ್ಕೆ ಹಂಚಿಕೆಯಾಗಿದೆ. ಅಷ್ಟೇ ಅಲ್ಲದೆ, "800ಕ್ಕೆ -40 ನಕಾರಾತ್ಮಕ ಅಂಕ ಗಳಿಸಿದ ಅಭ್ಯರ್ಥಿಗಳಿಗೂ ಪಿಜಿ ಕೌನ್ಸಿಲಿಂಗ್ನಲ್ಲಿ ಭಾಗವಹಿಸಲು ಅರ್ಹತೆ ನೀಡಲಾಗಿತ್ತು" ಎಂದು ಅವರು ದೂರಿದ್ದಾರೆ.
ಈ ಅಂಕಿ-ಅಂಶಗಳು ಶೈಕ್ಷಣಿಕ ಗುಣಮಟ್ಟದಲ್ಲಿ ದೊಡ್ಡ ಬಿಕ್ಕಟ್ಟು ಎದುರಾಗಿರುವುದನ್ನು ಸೂಚಿಸುತ್ತವೆ ಎಂದಿರುವ ಸಕ್ಸೇನಾ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ನಂಬಿಕೆಯನ್ನು ಉಳಿಸಿಕೊಳ್ಳಲು ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸುವುದು ಅಗತ್ಯ ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ವಿಷಯವು ರಾಜಕೀಯ ಹಿತಾಸಕ್ತಿಗೆ ಒಳಪಡದ ಕಾರಣ ಸರ್ಕಾರವಾಗಲಿ ಅಥವಾ ವಿರೋಧ ಪಕ್ಷವಾಗಲಿ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಮೂಲದ ಉದ್ಯಮಿ ಮೋಹನ್ದಾಸ್ ಪೈ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ, "ಇದು ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸುತ್ತಿರುವ ಮುಖ್ಯ ವಿಷಯವಾಗಿದೆ. ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಾಮಾನ್ಯ ವರ್ಗದ ವಿದ್ಯಾರ್ಥಿಗೆ ಸೀಟು ಸಿಗುವುದಿಲ್ಲ, ಆದರೆ ಅತ್ಯಂತ ಕಡಿಮೆ ಅಂಕ ಪಡೆದ ಇತರ ವರ್ಗಗಳ ಅಭ್ಯರ್ಥಿಗಳಿಗೆ ಸೀಟು ಸಿಗುತ್ತಿದೆ! ಇದಕ್ಕೆ ತಕ್ಷಣದ ಪರಿಹಾರದ ಅಗತ್ಯವಿದೆ" ಎಂದು ಬರೆದುಕೊಂಡಿದ್ದಾರೆ.
ಸಿಜೆಪಿ ನಡೆಸಿದ ನೀಟ್ ಪ್ರತಿಭಟನೆಗಿಂತ 'ರಿಸರ್ವೇಷನ್ ಹಠಾವೋ ಆಂದೋಲನ' ರಾಜಕೀಯವಾಗಿ ದೊಡ್ಡ ಸವಾಲೇ?
ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ನಿರಂತರವಾಗಿ ನಡೆದ ಆನ್ಲೈನ್ ಮತ್ತು ಆಫ್ಲೈನ್ ಹೋರಾಟದ ಶಕ್ತಿಯನ್ನು ತೋರಿಸಿಕೊಟ್ಟಿತು. ಸಿಜೆಪಿ ಗಳಿಸಿದ ಈ "ರಾಜಕೀಯ ಗೆಲುವು" ಇತರ ಹೋರಾಟಗಳು ಮುನ್ನೆಲೆಗೆ ಬರಲು ವೇದಿಕೆ ಕಲ್ಪಿಸಿಕೊಟ್ಟಿತು. ನೀಟ್ ಚಳವಳಿ ಶಮನಗೊಳ್ಳುತ್ತಿದ್ದಂತೆಯೇ, ಕೇವಲ "ಪ್ರತಿಭೆಗೆ ಮಾತ್ರ ಆದ್ಯತೆ" ನೀಡುವ ವ್ಯವಸ್ಥೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಗಳು ಬಲವಾಗಿ ಕೇಳಿಬಂದವು.
ಇದರ ಬೆನ್ನಲ್ಲೇ ಮುಂದಿನ ಹಂತ ಆರಂಭವಾಯಿತು. ಪ್ರತಿಭಟನೆಗಳು ಮುಗಿದ ಕೆಲವೇ ದಿನಗಳಲ್ಲಿ, ಇನ್ಸ್ಟಾಗ್ರಾಮ್ ನೇತೃತ್ವದ 'ರಿಸರ್ವೇಷನ್ ಹಠಾವೋ ಆಂದೋಲನ' ಆನ್ಲೈನ್ನಲ್ಲಿ ಸದ್ದು ಮಾಡಿತು. ಕೆಲವೇ ದಿನಗಳಲ್ಲಿ ಇದು ಲಕ್ಷಾಂತರ ಬೆಂಬಲಿಗರನ್ನು ಆಕರ್ಷಿಸಿತು. ಸಿಜೆಪಿಯಂತೆಯೇ ತನಗೂ ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲ ಹಾಗೂ ಇದು ನಾಗರಿಕರ ಚಳವಳಿ ಎಂದು ಹೇಳಿಕೊಂಡ ಈ ಆಂದೋಲನ, ಜಾತಿ ಆಧಾರಿತ ಮೀಸಲಾತಿ ರದ್ದುಗೊಳಿಸುವುದು, ಆರ್ಥಿಕ ಮಾನದಂಡಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ಸರ್ಕಾರಿ ಫಾರ್ಮ್ಗಳಿಂದ ಜಾತಿಯ ನಮೂದನ್ನು ತೆಗೆದುಹಾಕುವುದು ಮತ್ತು "ಒಂದು ದೇಶ, ಒಂದು ಗುರುತು" ಚೌಕಟ್ಟನ್ನು ಜಾರಿಗೆ ತರಲು ಆಗ್ರಹಿಸಿತು.
ಇನ್ನೂ ಯಾವುದೇ ದೊಡ್ಡ ಮಟ್ಟದ ಬೀದಿಗಿಳಿದ ಪ್ರತಿಭಟನೆಗಳು ನಡೆಯದಿದ್ದರೂ, ಈ ಆಂದೋಲನವು ಡಿಜಿಟಲ್ ಮಾಧ್ಯಮಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಂತೆ ಕಾಣುತ್ತಿದೆ. ವೈರಲ್ ವಿಡಿಯೊಗಳು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಮತ್ತು ನಿರಂತರವಾದ ಪೋಸ್ಟ್ಗಳ ಮೂಲಕ ಮೀಸಲಾತಿ ವಿರೋಧಿ ಅಭಿಪ್ರಾಯಗಳನ್ನು ಹರಿಬಿಡಲಾಗುತ್ತಿದೆ.
ಮತ್ತೊಂದೆಡೆ, ಮೀಸಲಾತಿ ಬೆಂಬಲಿಗರು ಈ ವಾದಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮೀಸಲಾತಿಯು ಬಡತನ ನಿರ್ಮೂಲನೆ ಯೋಜನೆಯಲ್ಲ, ಬದಲಿಗೆ ಶತಮಾನಗಳಿಂದ ನಡೆದ ಜಾತಿ ಆಧಾರಿತ ಶೋಷಣೆಯನ್ನು ಸರಿಪಡಿಸಲು ಇರುವ ಸಾಂವಿಧಾನಿಕ ಹಕ್ಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಮುಖ ಶಿಕ್ಷಣ ತಜ್ಞರು, ದಲಿತ ಸಂಘಟನೆಗಳು ಮತ್ತು ಸಾಮಾಜಿಕ ನ್ಯಾಯದ ಪರ ಹೋರಾಟಗಾರರು, ಜಾತಿ ಆಧಾರಿತ ಮೀಸಲಾತಿಯನ್ನು ಕೇವಲ ಆರ್ಥಿಕ ಮಾನದಂಡದಿಂದ ಬದಲಾಯಿಸುವುದು ಸಮಾನತೆಯ ಆಶಯಕ್ಕೆ ವಿರುದ್ಧವಾದದ್ದು ಎಂದು ವಾದಿಸಿದ್ದಾರೆ. ಜೊತೆಗೆ, ಸುಪ್ರೀಂ ಕೋರ್ಟ್ ಕೂಡ ಮೀಸಲಾತಿಯನ್ನು ಸಾಮಾಜಿಕ ಸಮಾನತೆಯ ಸಾಧನ ಎಂದು ಹಲವು ಬಾರಿ ಎತ್ತಿಹಿಡಿದಿರುವುದನ್ನು ಅವರು ನೆನಪಿಸಿದ್ದಾರೆ.
ಈ ಆಂದೋಲನವು ಮುಂದೆ ಯಾವ ಹಂತ ತಲುಪಲಿದೆ ಎಂಬುದು ಏನೇ ಇದ್ದರೂ, ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಈ ವಿದ್ಯಮಾನ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಅಲ್ಲಿ ಜಾತಿಯು ಪ್ರಮುಖ ಪಾತ್ರ ವಹಿಸುತ್ತದೆ. ಮೂಲತಃ ಜಾತಿ ತಾರತಮ್ಯವನ್ನು ಕಡಿಮೆ ಮಾಡಲು ಮೀಸಲಾತಿಯನ್ನು ತರಲಾಗಿತ್ತು, ಆದರೆ ಅದನ್ನು ರದ್ದುಗೊಳಿಸುವುದರಿಂದಲೇ ತಾರತಮ್ಯ ಕೊನೆಗೊಳ್ಳುತ್ತದೆ ಎಂಬುದು ಇದರ ವಿಮರ್ಶಕರ ವಾದ. ಆದರೆ ಸಿಜೆಪಿ ಮಾಡಿದಂತೆ ರಾಜೀನಾಮೆಗೆ ಆಗ್ರಹಿಸುವುದಕ್ಕೂ, ಮೀಸಲಾತಿ ರದ್ದುಗೊಳಿಸುವುದಕ್ಕೂ ವ್ಯತ್ಯಾಸವಿದ್ದು, ಈ ಎರಡನೇ ಬೇಡಿಕೆಯನ್ನು ಯಾವುದೇ ರಾಜಕೀಯ ಪಕ್ಷ ಬಹಿರಂಗವಾಗಿ ಬೆಂಬಲಿಸುವ ಸಾಧ್ಯತೆಯಿಲ್ಲ. ಜಾತಿ ಲೆಕ್ಕಾಚಾರಗಳು ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವುದರಿಂದ, ಯಾವ ಪಕ್ಷವೂ ಈ ವಿಚಾರದಲ್ಲಿ ಕೈಸುಟ್ಟುಕೊಳ್ಳಲು ಬಯಸುವುದಿಲ್ಲ.
ಸೌಜನ್ಯ: indiatoday.in






