ನ್ಯೂಸ್ಕ್ಲಿಕ್ ಮತ್ತು ಅದರ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ವಿರುದ್ಧದ EOW, ED ಪ್ರಕರಣಗಳನ್ನು ದೆಹಲಿ ಹೈಕೋರ್ಟ್ ರದ್ದು ಮಾಡಿದ್ದು ಹೇಗೆ?

ಪ್ರಬೀರ್ ಪುರಕಾಯಸ್ಥ | Photo Credit : NewsClick.in
ದಿಲ್ಲಿ ಪೊಲೀಸರ ಆರ್ಥಿಕ ಅಪರಾಧಗಳ ಶಾಖೆ (EOW) ದಾಖಲಿಸಿರುವ ಎಫ್ಐಆರ್ ಪ್ರಕ್ರಿಯೆಯನ್ನು ಮುಂದುವರಿಸಲು ಅವಕಾಶ ನೀಡುವುದು ಕಾನೂನಿನ ಸಂಪೂರ್ಣ ದುರ್ಬಳಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್, ಪಿಪಿಕೆ ನ್ಯೂಸ್ಕ್ಲಿಕ್ ಸ್ಟುಡಿಯೋ ಮತ್ತು ನ್ಯೂಸ್ಕ್ಲಿಕ್ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ. ಇದರೊಂದಿಗೆ, ಜಾರಿ ನಿರ್ದೇಶನಾಲಯ (ED) ನಡೆಸುತ್ತಿದ್ದ ಅಕ್ರಮ ಹಣ ವರ್ಗಾವಣೆ ತನಿಖೆಯನ್ನೂ ರದ್ದುಗೊಳಿಸಿರುವ ಹೈಕೋರ್ಟ್ನ ಏಕಸದಸ್ಯ ಪೀಠವು, ತನಿಖಾ ಸಂಸ್ಥೆಯು ಕೇವಲ ಆಧಾರರಹಿತ ಆರೋಪಗಳನ್ನು ಮಾಡಿದೆ ಎಂದು ಹೇಳಿದೆ.
ಪಿಪಿಕೆ ನ್ಯೂಸ್ಕ್ಲಿಕ್ ಸ್ಟುಡಿಯೋ ಎಂಬುದು ‘ನ್ಯೂಸ್ಕ್ಲಿಕ್’ ಸುದ್ದಿ ಜಾಲತಾಣದ ಮಾತೃ ಸಂಸ್ಥೆಯಾಗಿದೆ. 2018ರ ಏಪ್ರಿಲ್ನಲ್ಲಿ ಈ ಸಂಸ್ಥೆಯು 9.59 ಕೋಟಿ ರೂಪಾಯಿ ನೇರ ವಿದೇಶಿ ಹೂಡಿಕೆಯನ್ನು (FDI) ಪಡೆದಿದೆ ಎಂಬ ದೂರನ್ನು ಆಧರಿಸಿ, EOW ಸಂಸ್ಥೆ ಮತ್ತು ಪುರಕಾಯಸ್ಥ ವಿರುದ್ಧ 2020ರ ಆಗಸ್ಟ್ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ನಂಬಿಕೆ ದ್ರೋಹ), 420 (ವಂಚನೆ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಎಫ್ಐಆರ್ ಆಧರಿಸಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತನಿಖೆ ನಡೆಸಲು ED ಜಾರಿ ಪ್ರಕರಣ ಮಾಹಿತಿ ವರದಿಯನ್ನು (ECIR) ದಾಖಲಿಸಿಕೊಂಡಿತ್ತು.
ಪ್ರಕರಣದ ಅರ್ಹತೆಯ ಪರಿಶೀಲನೆಗೆ ಹೋಗುವ ಮುನ್ನ ಹೈಕೋರ್ಟ್, ಸೋಹನ್ ಸಿಂಗ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ, ಅಥವಾ ಸಂಸ್ಥೆಯೊಂದಿಗೆ ಅವರಿಗಿದ್ದ ಸಂಬಂಧ ಹಾಗೂ ಈ ಕೃತ್ಯಗಳ ಬಗ್ಗೆ ಅವರಿಗಿದ್ದ ಜ್ಞಾನದ ಬಗ್ಗೆ ಯಾವುದೇ ಪರಿಶೀಲನೆ ನಡೆಸದೆ ನೇರವಾಗಿ ಎಫ್ಐಆರ್ ದಾಖಲಿಸಿದ್ದಕ್ಕಾಗಿ EOW ಅನ್ನು ತರಾಟೆಗೆ ತೆಗೆದುಕೊಂಡಿತು.
ವರ್ಲ್ಡ್ವೈಡ್ ಮೀಡಿಯಾ ಹೋಲ್ಡಿಂಗ್ಸ್ LLCಯಿಂದ 9.59 ಕೋಟಿ ರೂಪಾಯಿ ನೇರ ವಿದೇಶಿ ಹೂಡಿಕೆಯನ್ನು ಪಡೆಯುವ ಉದ್ದೇಶದಿಂದ, ಸಂಸ್ಥೆಯ 10 ರೂಪಾಯಿ ಮುಖಬೆಲೆಯ ಷೇರುಗಳ ಮೌಲ್ಯವನ್ನು ಪ್ರತಿ ಷೇರಿಗೆ 11,510 ರೂ. ರಂತೆ ಅತಿಯಾಗಿ ನಿಗದಿಪಡಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿತ್ತು. 2018ರ ಏಪ್ರಿಲ್ನಲ್ಲಿ ನಡೆದ ಈ ವಹಿವಾಟು, ನ್ಯೂಸ್ಕ್ಲಿಕ್ ಪ್ರವರ್ತಕ ಸಂಸ್ಥೆಯಲ್ಲಿ ಒಟ್ಟು ಶೇ 23.07ರಷ್ಟು ಪಾಲನ್ನು ಪಡೆಯಲು ಮೂರು ಸಮಾನ ಕಂತುಗಳಲ್ಲಿ ನೀಡಲಾದ ಮೊದಲ ಕಂತಾಗಿತ್ತು.
ಆದರೆ ನ್ಯಾಯಾಲಯವು, ಈ ಸಂಸ್ಥೆಯನ್ನು ಆರಂಭದಲ್ಲಿ ಟ್ರಸ್ಟ್ ಒಂದು ನಿಯಂತ್ರಿಸುತ್ತಿತ್ತು, ನಂತರ ಸ್ಥಾಪಿತ ನಿಯಮಗಳ ಮೂಲಕ FDI ಹೂಡಿಕೆಯನ್ನು ಸುಲಭಗೊಳಿಸಲು ಅದನ್ನು ಖಾಸಗಿ ಲಿಮಿಟೆಡ್ ಕಂಪೆನಿಯಾಗಿ ಪರಿವರ್ತಿಸಲಾಯಿತು ಎಂದು ಗಮನಿಸಿತು. FDI ಮಿತಿಯನ್ನು ಮೀರುವ ಸಲುವಾಗಿ ಷೇರುಗಳ ಮೌಲ್ಯವನ್ನು ಅತಿಯಾಗಿ ನಿಗದಿಪಡಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಕಂಪನಿಯು ಈಗಾಗಲೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಸ್ಪಷ್ಟೀಕರಣವನ್ನು ಕೋರಿತ್ತು. ಆನ್ಲೈನ್ ಸುದ್ದಿ ಪ್ರಕಟಣೆಯಲ್ಲಿ ತೊಡಗಿರುವ ಕಂಪನಿಗಳು FDI ನಿರ್ಬಂಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವಾಲಯವು ಖಚಿತಪಡಿಸಿತ್ತು ಎಂದು ಕೋರ್ಟ್ ಉಲ್ಲೇಖಿಸಿತು.
ಅಷ್ಟೇ ಅಲ್ಲದೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ನಿಯಮಗಳು ಮೂಲ ಬುಕ್ ವ್ಯಾಲ್ಯೂಗಿಂತ ಕಡಿಮೆ ಬೆಲೆಗೆ ಷೇರುಗಳನ್ನು ವರ್ಗಾವಣೆ ಮಾಡುವುದನ್ನು ನಿಷೇಧಿಸುತ್ತವೆ. ನ್ಯೂಸ್ಕ್ಲಿಕ್ ಆಡಳಿತ ಮಂಡಳಿ ಹಾಗೂ ವಿದೇಶಿ ಹೂಡಿಕೆದಾರರು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ‘ಡಿಸ್ಕೌಂಟೆಡ್ ಕ್ಯಾಶ್ ಫ್ಲೋ’ ಪದ್ಧತಿಯ ಮೂಲಕವೇ ಈ ಬೆಲೆಯನ್ನು ನಿಗದಿಪಡಿಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
“ ಬೆಲೆಯನ್ನು ಮೆಸರ್ಸ್ ವರ್ಲ್ಡ್ವೈಡ್ ಮೀಡಿಯಾ ಹೋಲ್ಡಿಂಗ್ಸ್ LLC ಮತ್ತು ಅರ್ಜಿದಾರರ ನಡುವೆ ಸೂಕ್ತ ಮಾತುಕತೆ ಮತ್ತು ಪರಸ್ಪರ ನಿರ್ಧಾರಗಳ ನಂತರವೇ ರೂಪಿಸಲಾಗಿದೆ. ಮಾರುಕಟ್ಟೆಯ ದೈನಂದಿನ ಸ್ಥಿತಿಗತಿ ಮತ್ತು ಕಂಪನಿಯ ಬೆಳವಣಿಗೆಯ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಿ, ಅರ್ಜಿದಾರರು ಮತ್ತು ಹೂಡಿಕೆದಾರರು ಪರಸ್ಪರ ಒಪ್ಪಿಗೆಯಿಂದ ಈ ಬೆಲೆಯನ್ನು ನಿಗದಿಪಡಿಸಿದ್ದಾರೆ. ಇದು ಒಂದು ಆರ್ಥಿಕ ನಿರ್ಧಾರವಾಗಿದ್ದು, ಇದರಲ್ಲಿ ಯಾವುದೇ ಕ್ರಿಮಿನಲ್ ಅಪರಾಧ ಕಂಡುಬರುವುದಿಲ್ಲ” ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತೀರ್ಪು ನೀಡಿದ್ದಾರೆ.
FDI ಮೂಲಕ ಬಂದ ಹಣವನ್ನು ಪತ್ರಕರ್ತರು ಮತ್ತು ಉದ್ಯೋಗಿಗಳಿಗೆ ಸಂಬಳ, ಸಮಾಲೋಚನೆ ಶುಲ್ಕ, ಬಾಡಿಗೆ ಮತ್ತು ಇತರ ವೆಚ್ಚಗಳ ರೂಪದಲ್ಲಿ ನೀಡಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಇತರ ಆರೋಪಗಳನ್ನೂ ಅವರು ತಿರಸ್ಕರಿಸಿದರು. ಡಿಜಿಟಲ್ ಮುದ್ರಣ ಮಾಧ್ಯಮ ಸಂಸ್ಥೆಯೊಂದರಲ್ಲಿ ಇಂತಹ ವೆಚ್ಚಗಳು ಸಾಮಾನ್ಯವಾಗಿದ್ದು, ಅವುಗಳನ್ನು ನಡೆಸುವುದು ಅನಿವಾರ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.
“ಅರ್ಜಿದಾರರು ಹೆಚ್ಚಿನ ಪಾವತಿಗಳನ್ನು ಮಾಡಿದ್ದಾರೆ ಮತ್ತು ಅತಿಯಾದ ವೆಚ್ಚವನ್ನು ಭರಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡರೂ ಸಹ, ಅದು ಯಾವುದೇ ಕ್ರಿಮಿನಲ್ ಅಪರಾಧವನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ, ಹಣ ದುರುಪಯೋಗದ ಆರೋಪವು ನಿಲ್ಲುವುದಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.
ವಂಚನೆ ಪ್ರಕರಣವನ್ನು ಸಾಬೀತುಪಡಿಸಲು, ತನ್ನ ಅಮೂಲ್ಯ ಆಸ್ತಿಯನ್ನು ವಂಚಿಸಲಾಗಿದೆ ಎಂದು ದೂರುವ ಒಬ್ಬ ಸಂತ್ರಸ್ತ ವ್ಯಕ್ತಿ ಇರಬೇಕಾಗುತ್ತದೆ ಎಂದು ಅವರು ಒತ್ತಿಹೇಳಿದರು. ಈ ಪ್ರಕರಣದಲ್ಲಿ, ನ್ಯೂಸ್ಕ್ಲಿಕ್ನಲ್ಲಿ 1.5 ಮಿಲಿಯನ್ ಡಾಲರ್ ಹೂಡಿಕೆ ಮಾಡಿರುವ ವರ್ಲ್ಡ್ವೈಡ್ ಮೀಡಿಯಾ ಹೋಲ್ಡಿಂಗ್ಸ್ ಸಂಸ್ಥೆಗೆ ಯಾವುದೇ ದೂರುಗಳಿಲ್ಲ. ವಿಶೇಷವೆಂದರೆ, ಕೇವಲ ಮಾಹಿತಿ ನೀಡುವ ವ್ಯಕ್ತಿಯಾಗಿದ್ದ ಸೋಹನ್ ಸಿಂಗ್ ಎಂಬುವವರು ಈ ದೂರು ನೀಡಿದ್ದಾರೆಯೇ ಹೊರತು, ಅವರು ಸಂತ್ರಸ್ತ ವ್ಯಕ್ತಿಯಲ್ಲ. ತನಿಖೆಯ ಅವಧಿಯಲ್ಲೂ ಅರ್ಜಿದಾರರಿಂದ ಯಾವುದೇ ವ್ಯಕ್ತಿಗೆ ಅನ್ಯಾಯವಾಗಿದೆ ಅಥವಾ ವಂಚನೆಯಾಗಿದೆ ಎಂಬುದನ್ನು ತೋರಿಸುವ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ಸ್ಟೇಟಸ್ ರಿಪೋರ್ಟ್ನಿಂದ ಸ್ಪಷ್ಟವಾಗುತ್ತದೆ. ಎಲ್ಲಾ ಆರೋಪಗಳನ್ನು ಒಪ್ಪಿಕೊಂಡರೂ ಸಹ, ವಂಚನೆಯ ಅಪರಾಧ ಇಲ್ಲಿ ಸಾಬೀತಾಗುವುದಿಲ್ಲ ಎಂದು ನ್ಯಾಯಮೂರ್ತಿ ನೀನಾ ಹೇಳಿದ್ದಾರೆ.
ಇದೇ ತರ್ಕದ ಆಧಾರದ ಮೇಲೆ, ವರ್ಲ್ಡ್ವೈಡ್ ಮೀಡಿಯಾ ಹೋಲ್ಡಿಂಗ್ಸ್ ಸಂಸ್ಥೆಯು ನ್ಯೂಸ್ಕ್ಲಿಕ್ ಮತ್ತು ಅದರ ಪ್ರವರ್ತಕರ ವಿರುದ್ಧ ಯಾವುದೇ ಹಣದ ದುರುಪಯೋಗದ ದೂರು ನೀಡಿಲ್ಲ. ಆದ್ದರಿಂದ ಐಪಿಸಿ ಸೆಕ್ಷನ್ 406 ಇಲ್ಲಿ ಅನ್ವಯಿಸುವುದಿಲ್ಲ.
“ಎಲ್ಲಾ ಆರೋಪಗಳನ್ನು ಒಪ್ಪಿಕೊಂಡರೂ ಸಹ, ಎಫ್ಐಆರ್ನಲ್ಲಿ ಅಥವಾ ತದನಂತರ ನಡೆದ ತನಿಖೆಗಳಲ್ಲಿ ಐಪಿಸಿ ಸೆಕ್ಷನ್ 406 ಅಥವಾ 420ರ ಅಡಿಯ ಯಾವುದೇ ಅಪರಾಧಗಳು ಕಂಡುಬಂದಿಲ್ಲ. ಇಂತಹ ಎಫ್ಐಆರ್ ಅನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರ್ಬಳಕೆಯಷ್ಟೇ ಆಗಿರುತ್ತದೆ. ಆದ್ದರಿಂದ ಇದನ್ನು ರದ್ದುಗೊಳಿಸಲಾಗಿದೆ” ಎಂದು ಅವರು ತೀರ್ಪು ನೀಡಿದ್ದಾರೆ.
ಆಧಾರರಹಿತ ಆರೋಪಗಳು
EOW ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತನಿಖೆ ನಡೆಸಲು ED 2020ರ ಸೆಪ್ಟೆಂಬರ್ 2ರಂದು ECIR ದಾಖಲಿಸಿಕೊಂಡಿತ್ತು. ಅಲ್ಲದೆ, ನ್ಯೂಸ್ಕ್ಲಿಕ್ಗೆ ಸಂಬಂಧಿಸಿದ ದಾಖಲೆಗಳ ಶೋಧ ಮತ್ತು ಪರಿಶೀಲನೆಯನ್ನೂ ನಡೆಸಿತ್ತು.
ECIR ಪ್ರತಿಯನ್ನು ತಮಗೆ ನೀಡುವಂತೆ ಕೋರಿ ಪುರಕಾಯಸ್ಥ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಅಧಿಕೃತವಾಗಿ ಪ್ರಾರಂಭಿಸುವ ಮುನ್ನ ಆಡಳಿತಾತ್ಮಕ ಉದ್ದೇಶಗಳಿಗಾಗಿ ಸಿದ್ಧಪಡಿಸಲಾಗುವ ಆಂತರಿಕ ದಾಖಲೆ ಇದಾಗಿರುವುದರಿಂದ, ಇದನ್ನು ಎಫ್ಐಆರ್ನಂತೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ED ವಾದಿಸುತ್ತಾ ಬಂದಿತ್ತು.
ಬುಧವಾರ ಸಾರ್ವಜನಿಕಗೊಳಿಸಲಾದ ಆದೇಶದಲ್ಲಿ ಹೈಕೋರ್ಟ್, ED ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ವಿಜಯ್ ಮದನ್ ಲಾಲ್ ಚೌಧರಿ ಪ್ರಕರಣದಲ್ಲಿ (ಜುಲೈ 2022) ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ED ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆರೋಪಿಗೆ ECIR ಪ್ರತಿ ನೀಡದಿರುವುದು ಆತನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತೇ ಹೊರತು, ಪ್ರತಿಯೊಂದು ಪ್ರಕರಣದಲ್ಲೂ ED ತನ್ನ ಹಕ್ಕಿನಂತೆ ECIR ಪ್ರತಿಯನ್ನು ನಿರಾಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಕೃಷ್ಣ ಅವರು, “ECIR ದಾಖಲಾದ ನಂತರದ ತನಿಖೆಯಲ್ಲಿ ದೂರುದಾರನ ದುರುದ್ದೇಶ ಮುಖ್ಯವಾಗುವುದಿಲ್ಲ ಎಂದು ED ವಾದಿಸಿದೆ. ಆದರೆ ಈ ವಾದವು ಕಾನೂನಿನ ದೃಷ್ಟಿಯಲ್ಲಿ ತಪ್ಪು. ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಪಡೆಯುವುದು ಅರ್ಜಿದಾರರ ಸಾಂವಿಧಾನಿಕ ಹಕ್ಕು. ದುರುದ್ದೇಶದಿಂದ ECIR ದಾಖಲಿಸುವುದು ಮತ್ತು ತನಿಖೆ ನಡೆಸುವುದು ಇಡೀ ಪ್ರಕ್ರಿಯೆಗೆ ಧಕ್ಕೆ ತರುತ್ತದೆ” ಎಂದಿದ್ದಾರೆ.
“ಪ್ರಸ್ತುತ ನಡಾವಳಿಗಳು ಕೇವಲ ದುರುದ್ದೇಶಪೂರಿತ ಅಷ್ಟೇ ಅಲ್ಲ, ಅರ್ಜಿದಾರರ ಮುಕ್ತ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೇಲಿನ ಅನಗತ್ಯ ದಾಳಿ ಹಾಗೂ ಅಧಿಕಾರದ ದುರ್ಬಳಕೆಯಾಗಿದೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ED ತನಿಖೆಯ ಅರ್ಹತೆಯ ಬಗ್ಗೆ ಮಾತನಾಡಿದ ನ್ಯಾಯಾಧೀಶೆ, ಈ ತನಿಖೆಯು “ಯಾವುದೇ ಅಪರಾಧದ ಆಧಾರವಿಲ್ಲದೆ, ಅರ್ಜಿದಾರರ ಆರ್ಥಿಕ ವ್ಯವಹಾರಗಳಲ್ಲಿ ತಪ್ಪುಗಳನ್ನು ಹುಡುಕಲು ನಡೆಸಿದ ಅನಗತ್ಯ ಶೋಧ” ಎಂದಿದ್ದಾರೆ. ವಂಚನೆ ಮತ್ತು ಕ್ರಿಮಿನಲ್ ದುರುಪಯೋಗದ ಅಪರಾಧಗಳೇ ಸಾಬೀತಾಗದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಯಾವುದೇ ಆಧಾರವಿರುವುದಿಲ್ಲ. ಅಲ್ಲದೆ, ಕ್ರಿಮಿನಲ್ ಪಿತೂರಿಯಡಿ ಮೂಲ ಅಪರಾಧ ನಡೆದಿದೆ ಎಂಬ ತನ್ನದೇ ವಾದವನ್ನು ಸಾಬೀತುಪಡಿಸಲು EDಗೆ ಸಾಧ್ಯವಾಗಿಲ್ಲ ಎಂದಿದ್ದಾರೆ.
“ಅರ್ಜಿದಾರರ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡರೂ ಸಹ, ಎಫ್ಐಆರ್ನಲ್ಲಿ ಯಾವುದೇ ಅಪರಾಧ ಕಂಡುಬರುತ್ತಿಲ್ಲ ಎಂಬುದನ್ನು EDಯ ಉತ್ತರವೇ ಹೇಳುತ್ತದೆ. ವಿಶೇಷವೆಂದರೆ, ಸುಮಾರು ಒಂದೂವರೆ ವರ್ಷಗಳ ಕಾಲ ED ವ್ಯಾಪಕ ತನಿಖೆ ನಡೆಸಿದೆ. ಅರ್ಜಿದಾರರನ್ನು ಹಾಗೂ ಅವರ ಉದ್ಯೋಗಿಗಳನ್ನು ಹಲವು ಬಾರಿ ಕರೆಸಿ ವಿಚಾರಣೆ ನಡೆಸಿದೆ. ಆದರೂ, ಇಂದಿನವರೆಗೆ ಯಾವುದೇ ಅಪರಾಧದ ಪುರಾವೆಗಳು ಪತ್ತೆಯಾಗಿಲ್ಲ ಅಥವಾ ನ್ಯಾಯಾಲಯದ ಮುಂದೆ ದಾಖಲಿಸಲಾಗಿಲ್ಲ” ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
“ಕ್ರಿಮಿನಲ್ ಪಿತೂರಿ ನಡೆದಿದೆ ಎಂಬ ಕೇವಲ ವಾದಗಳನ್ನು ಹೊರತುಪಡಿಸಿ, PMLA(ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ಸೆಕ್ಷನ್ 4ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ನಡೆದಿದೆ ಎಂಬುದನ್ನು ದೂರದಿಂದಲಾದರೂ ಸಾಬೀತುಪಡಿಸುವ ಯಾವುದೇ ಒಂದು ಪುರಾವೆಯೂ ಇಲ್ಲಿ ಕಂಡುಬರುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.






