ನಿಮ್ಮ ಫೋನ್ ಎಷ್ಟು ಕೊಳೆಯಾಗಿದೆ? ಆಘಾತಕಾರಿ ಅಪಾಯದ ಬಗ್ಗೆ ಎಚ್ಚರಿಸಿದ ವೈದ್ಯರು

ಸಾಂದರ್ಭಿಕ ಚಿತ್ರ | Photo Credit : magnific
ಫೋನ್ ಗಳಲ್ಲಿ ಅಡುಗೆ ಮನೆಯ ಮೇಲ್ಮೈಗಳು, ಶೌಚಾಲಯದ ಆಸನ ಅಥವಾ ಸಾರ್ವಜನಿಕ ಬಾಗಿಲಿನ ಹಿಡಿಕೆಗಳಿಗಿಂತ ಹೆಚ್ಚಿನ ಬ್ಯಾಕ್ಟೀರಿಯಗಳನ್ನು ಹೊಂದಿರುತ್ತವೆ ಎಂದು ಸಂಶೋಧನೆಯೊಂದು ಕಂಡುಕೊಂಡಿದೆ.
ಇಂದಿನ ದಿನಗಳಲ್ಲಿ ಫೋನ್ ಬಹಳ ಬಳಸುವ ವಸ್ತುಗಳಲ್ಲಿ ಒಂದಾಗಿದೆ ಮತ್ತು ದೈನಂದಿನ ಜೀವನವನ್ನು ಹೆಚ್ಚಾಗಿ ಫೋನ್ ಮೂಲಕವೇ ಯೋಜಿಸಲಾಗುತ್ತದೆ ಹಾಗೂ ನಿರ್ವಹಿಸಲಾಗುತ್ತದೆ. ಹೀಗಾಗಿ ಫೋನ್ ಅವಿಭಾಜ್ಯ ಮತ್ತು ಅನಿವಾರ್ಯವಾಗಿದೆ. ಬೆಳಗಿನ ಅಲಾರಂನಿಂದ ಆರಂಭಿಸಿ ಆಹಾರ ತರಿಸಿಕೊಳ್ಳುವುದು, ಆನ್ಲೈನ್ ಪಾವತಿಗಳು, ಸಂಚಾರ, ಫಿಟ್ನೆಸ್ ಟ್ರ್ಯಾಕಿಂಗ್, ತಡರಾತ್ರಿಯ ಸ್ಕ್ರೋಲಿಂಗ್ವರೆಗೆ ಸ್ಮಾರ್ಟ್ಫೋನ್ ಗಳು ದಿನವಿಡೀ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತವೆ. ಆದರೆ ಹೀಗೆ ನಿತ್ಯ ಬಳಕೆಯಿಂದ ಅನಾರೋಗ್ಯವೂ ಹರಡಬಹುದು ಎನ್ನುವುದು ನಿಮಗೆ ಗೊತ್ತೆ?
ನೀವು ತಿಳಿದಿರುವುದಕ್ಕಿಂತಲೂ ಹೆಚ್ಚು ಸೂಕ್ಷ್ಮಜೀವಿಗಳನ್ನು ಫೋನ್ ಹೊತ್ತಿರಬಹುದು. ಫೋನ್ ತರುವ ಮಾಲಿನ್ಯದ ಮಟ್ಟವೂ ಆಘಾತಕಾರಿಯಾಗಿರುತ್ತದೆ. ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ ಕೋಲ್ಕತ್ತಾದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸಾಸ್ವತ ಚಟರ್ಜಿ ಅವರು ಹೇಳಿರುವ ಪ್ರಕಾರ, ಸ್ಮಾರ್ಟ್ಫೋನ್ ಗಳು ಬ್ಯಾಕ್ಟೀರಿಯ ಮತ್ತು ಇತರ ಹಲವು ಹಾನಿಕಾರಕ ಸೂಕ್ಷ್ಮಜೀವಿಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿರುತ್ತವೆ. ಹೀಗಾಗಿ ಸೋಂಕುಗಳ ಅಪಾಯ ಹೆಚ್ಚಿರುತ್ತದೆ.
►ಫೋನ್ ಗಳು ಹೇಗೆ ಮಲಿನಗೊಳ್ಳುತ್ತವೆ?
ಫೋನ್ ಗಳಲ್ಲಿ ಅಡುಗೆ ಮನೆಯ ಮೇಲ್ಮೈಗಳು, ಶೌಚಾಲಯದ ಆಸನ ಅಥವಾ ಸಾರ್ವಜನಿಕ ಬಾಗಿಲಿನ ಹಿಡಿಕೆಗಳಿಗಿಂತ ಹೆಚ್ಚಿನ ಬ್ಯಾಕ್ಟೀರಿಯಗಳನ್ನು ಹೊಂದಿರುತ್ತವೆ ಎಂದು ಸಂಶೋಧನೆಯೊಂದು ಕಂಡುಕೊಂಡಿದೆ. ಏಕೆಂದರೆ ಅವು ನಮ್ಮ ಕೈಗಳು, ಮುಖ, ಚೀಲ ಮತ್ತು ದಿನದ ಚಟುವಟಿಕೆಗಳಲ್ಲಿ ಎದುರಾಗುವ ಇತರ ಹಲವು ಮೇಲ್ಮೈಗಳ ಜೊತೆಗೆ ನೇರ ಸಂಪರ್ಕ ಹೊಂದಿರುತ್ತವೆ. ಜನರು ಎಲ್ಲಾ ಕಡೆ ಫೋನ್ ಗಳನ್ನು ಕೊಂಡೊಯ್ಯುವ ಕಾರಣದಿಂದ ಅವು ಸೂಕ್ಷ್ಮಜೀವಿಗಳನ್ನು ಸಂಗ್ರಹಿಸುತ್ತವೆ.
ಅನೇಕ ಮಂದಿ ಸಾರ್ವಜನಿಕ ಸ್ಥಳಗಳಿಗೆ ಹೋದ ನಂತರ ಸ್ಯಾನಿಟೈಸರ್ ಬಳಸುವುದೂ ಇದೆ ಮತ್ತು ತಮ್ಮ ಕೈಗಳನ್ನೂ ತೊಳೆಯುತ್ತಾರೆ. ಆದರೆ ಫೋನ್ ದಿನವಿಡೀ ಕಲುಷಿತ ಪರಿಸರದ ಜೊತೆಗೆ ಪದೇಪದೆ ಸಂಪರ್ಕಕ್ಕೆ ಬಂದಿರುತ್ತದೆ ಎಂಬುದನ್ನು ಜನರು ಮರೆತುಬಿಡುತ್ತಾರೆ. ಫೋನ್ ಗಳನ್ನು ಸ್ವಚ್ಛಗೊಳಿಸುವುದಿಲ್ಲ. ಹೀಗಾಗಿ ಕ್ರಮೇಣ ಬ್ಯಾಕ್ಟೀರಿಯ ಮತ್ತು ಸೂಕ್ಷ್ಮಜೀವಿಗಳ ಪದರಗಳನ್ನು ಸಂಗ್ರಹಿಸಿಡುತ್ತವೆ. ಕರೆ ಬಂದ ಸಮಯದಲ್ಲಿ ಅಥವಾ ಊಟ ಮಾಡುವಾಗ ಫೋನ್ ಮೂಲಕ ಸ್ಕ್ರೋಲ್ ಮಾಡುವ ವೇಳೆ ಸುಲಭವಾಗಿ ಬ್ಯಾಕ್ಟೀರಿಯ ಹರಡಬಹುದು.
►ಪ್ರಮುಖ ಆರೋಗ್ಯ ಅಪಾಯಗಳು ಯಾವುವು?
ಫೋನ್ ಕಾರಣದಿಂದ ಆಹಾರ ವಿಷಬಾಧೆ ಅಥವಾ ಸ್ಟೊಮಕ್ ಫ್ಲೂ ಹರಡಬಹುದು. ಮಾತ್ರವಲ್ಲದೆ ಅತಿಸಾರ, ವಾಕರಿಕೆ, ವಾಂತಿ ಮತ್ತು ಇತರ ಸಂಬಂಧಿತ ರೀತಿಯ ಕರುಳಿನ ಸೋಂಕುಗಳನ್ನು ಒಳಗೊಂಡಂತೆ ಅಪಾಯವನ್ನು ಹೆಚ್ಚಿಸಬಹುದು.
►ನಿಮ್ಮ ಫೋನ್ ಯಾವ ಸಮಯದಲ್ಲಿ ಹೆಚ್ಚು ಅಪಾಯಕಾರಿಯಾಗಿರುತ್ತದೆ?
ವೈದ್ಯರ ಪ್ರಕಾರ, ಬೇಸಗೆ ಮತ್ತು ಮಳೆಗಾಲದಂತಹ ಹೆಚ್ಚು ಆರ್ದ್ರ ಹವಾಮಾನ ಪರಿಸ್ಥಿತಿಗಳಲ್ಲಿ ಫೋನ್ ಗಳು ಬ್ಯಾಕ್ಟೀರಿಯ ಮಾಲಿನ್ಯಕ್ಕೆ ಹೆಚ್ಚು ಒಳಗಾಗುತ್ತವೆ. ಪ್ರಾಥಮಿಕವಾಗಿ ಹೆಚ್ಚಿನ ಆರ್ದ್ರತೆಯಲ್ಲಿ ಬ್ಯಾಕ್ಟೀರಿಯಗಳಿಗೆ ಇದು ಆವಾಸಸ್ಥಾನವಾಗಿರುತ್ತದೆ. ಹೀಗಾಗಿ ಅಂತಹ ಋತುಗಳಲ್ಲಿ ಅಪಾಯ ಹೆಚ್ಚಿರುತ್ತದೆ. ಸಾಧನಗಳು ಬಳಸುವಾಗ ಬಿಸಿಯಾಗುವುದರಿಂದ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಕ್ಟೀರಿಯ ಹಾಗೂ ವೈರಸ್ಗಳು ಮೊಬೈಲ್ ಸಾಧನಗಳ ಮೇಲ್ಮೈಗಳಲ್ಲಿ ಎಷ್ಟು ಕಾಲ ಬದುಕಬಲ್ಲವು ಎಂಬುದು ಅನೇಕ ಮಂದಿಗೆ ತಿಳಿದಿರುವುದಿಲ್ಲ.
►ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬಹುದು?
ಜಾಗರೂಕವಾಗಿರುವುದು ಮತ್ತು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದರಿಂದ ಮೊಬೈಲ್ ಫೋನ್ ಗಳ ಮೂಲಕ ಮಾಲಿನ್ಯ ಮತ್ತು ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ವೈದ್ಯರು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸೂಚಿಸಿದ್ದಾರೆ.
• ಆಲ್ಕೋಹಾಲ್ ಇರುವ ಸೋಂಕು ನಿವಾರಕ ಒರೆಸುವ ಬಟ್ಟೆಗಳನ್ನು ಅಥವಾ ಎಲೆಕ್ಟ್ರಾನಿಕ್ಸ್ ಗಾಗಿ ಉದ್ದೇಶಿಸಲಾದ ಐಸೋಪ್ರೊಪಿಲ್ ಆಲ್ಕೋಹಾಲ್ ದ್ರಾವಣದಿಂದ ಸ್ವಲ್ಪ ತೇವಗೊಳಿಸಲಾದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಫೋನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
• ಸ್ವಚ್ಛಗೊಳಿಸುವಾಗ ಕಠಿಣ ರಾಸಾಯನಿಕ ಕ್ಲೀನರ್ಗಳು ಅಥವಾ ಅತಿ ತೇವಾಂಶ ಬಳಸಬೇಡಿ. ಏಕೆಂದರೆ ಅದು ಫೋನ್ಗೆ ಹಾನಿ ತರಬಹುದು.
• ಫೋನ್ ಕೇಸ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸಿ. ಏಕೆಂದರೆ ಅದು ಕಾಲಾನಂತರದಲ್ಲಿ ಬೆವರು, ಕೊಳಕು ಮತ್ತು ಬ್ಯಾಕ್ಟೀರಿಯಗಳನ್ನು ಸಂಗ್ರಹಿಸಬಹುದು.
• ಆಹಾರಕ್ಕೆ ಸೂಕ್ಷ್ಮಜೀವಿಗಳ ವರ್ಗಾವಣೆ ಕಡಿಮೆ ಮಾಡಲು ತಿನ್ನುವಾಗ, ವಿಶೇಷವಾಗಿ ತೊಳೆಯದ ಕೈಗಳಿಂದ ಫೋನ್ ಬಳಸಬೇಡಿ.
• ಸಾರ್ವಜನಿಕ ಸಾರಿಗೆ ಬಳಸಿದ ನಂತರ, ಸಾರ್ವಜನಿಕ ಮೇಲ್ಮೈಗಳನ್ನು ಸ್ಪರ್ಶಿಸಿದ ನಂತರ ಅಥವಾ ಜನದಟ್ಟಣೆಯ ಸ್ಥಳಗಳಿಗೆ ಭೇಟಿ ನೀಡಿದ ನಂತರ ನಿಮ್ಮ ಫೋನ್ ನಿರ್ವಹಿಸುವ ಮೊದಲು ಕೈಗಳನ್ನು ತೊಳೆಯಿರಿ ಅಥವಾ ಸ್ಯಾನಿಟೈಸ್ ಮಾಡಿ.
• ಸಾಧ್ಯವಾದಾಗಲೆಲ್ಲ ಕಲುಷಿತ ಸಾರ್ವಜನಿಕ ಮೇಲ್ಮೈಗಳಲ್ಲಿ ಫೋನ್ ಇಡುವುದನ್ನು ತಪ್ಪಿಸಿ.
• ಕೈ ತೊಳೆಯುವುದು ಮತ್ತು ಸ್ಯಾನಿಟೈಸೇಶನ್ನಂತೆ ಫೋನ್ ನೈರ್ಮಲ್ಯವನ್ನೂ ನಿಯಮಿತ ಯೋಗಕ್ಷೇಮ ಅಭ್ಯಾಸವನ್ನಾಗಿ ಮಾಡಿಕೊಳ್ಳಿ.
ಸೂಚನೆ: ಈ ಲೇಖನವನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಮಾಹಿತಿಯ ಆಧಾರದಲ್ಲಿ ಬರೆಯಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ದಯವಿಟ್ಟು ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳಿಗೆ ತಜ್ಞ ವೈದ್ಯರನ್ನು ಭೇಟಿ ಮಾಡಿ.






