ಎವೆರೆಸ್ಟ್ ಪರ್ವತಾರೋಹಿಗಳಿಗೆ ʼವಿಷಪ್ರಾಶನʼ; 20 ದಶಲಕ್ಷ ಡಾಲರ್ ವಿಮೆ ಹಗರಣ ತನಿಖೆ!

ಸಾಂದರ್ಭಿಕ ಚಿತ್ರ | Photo Credit : PTI
ಚಾರಣ ಸಂಸ್ಥೆಗಳ ಜೊತೆಗೆ ಕೆಲಸ ಮಾಡುವ ಶೆರ್ಪಾಗಳು ಪ್ರವಾಸಿಗರ ಊಟಕ್ಕೆ ಅಡುಗೆ ಸೋಡಾವನ್ನು ಬೆರೆಸುವ ಮೂಲಕ ಎತ್ತರದ ಸ್ಥಳಕ್ಕೆ ಹೋದಾಗ ಆಗುವ ವಾಕರಿಕೆ ಅಥವಾ ತಲೆನೋವಿನಂತಹ ಜಠರಕರುಳಿನ ರೋಗ ಲಕ್ಷಣಗಳು ಬರುವಂತೆ ಮಾಡಿ ವಿಮಾ ವಂಚನೆ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪರ್ವತಾರೋಹಿಗಳನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ಯುವ ದುಬಾರಿ ಕಾರ್ಯಾಚರಣೆಗಾಗಿ ಮತ್ತು ನಕಲಿ ವಿಮಾ ಕ್ಲೇಮ್ ಗಳನ್ನು ಪಡೆಯುವ ಉದ್ದೇಶದಿಂದ ಹೆಲಿಕಾಪ್ಟರ್ ಆಪರೇಟರ್ ಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ಏಜೆಂಟರು ವಂಚಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ.
mಈ ಹಿನ್ನೆಲೆಯಲ್ಲಿ ನೇಪಾಳದ ಪೊಲೀಸರು ಚಾರಣ ಕಂಪನಿ ಮಾಲೀಕರು, ಹೆಲಿಕಾಪ್ಟರ್ ನಿರ್ವಾಹಕರು ಮತ್ತು ಆಸ್ಪತ್ರೆ ಕಾರ್ಯನಿರ್ವಾಹಕರು ಸೇರಿದಂತೆ 32 ವ್ಯಕ್ತಿಗಳ ಮೇಲೆ ಸಂಘಟಿತ ಅಪರಾಧ ಮತ್ತು ವಂಚನೆಯ ಆರೋಪ ಹೊರಿಸಿದ್ದಾರೆ.
ಚಾರಣ ಏಜೆನ್ಸಿಗಳೊಂದಿಗೆ ಕೆಲಸ ಮಾಡುವ ಶೆರ್ಪಾಗಳು ಅಡುಗೆ ಸೋಡಾವನ್ನು ಊಟಕ್ಕೆ ಬೆರೆಸಿ ಪ್ರವಾಸಿಗರಿಗೆ ವಿಷಪ್ರಾಶನ ಮಾಡಿದ್ದಾರೆ. ಇದರಿಂದ ಎತ್ತರದ ಪ್ರದೇಶಕ್ಕೆ ಹೋಗುವಾಗ ಉಂಟಾಗುವ ಆಹಾರ ಸಂಬಂಧಿ ಜಠರಗರುಳಿನ ಲಕ್ಷಣಗಳು ಬರುವಂತೆ ಮಾಡಿದ್ದಾರೆ.
ಒಂದು ಬಾರಿ ಪ್ರವಾಸಿಗರು ಅನಾರೋಗ್ಯಕ್ಕೆ ತುತ್ತಾದಾಗ ದುಬಾರಿ ತುರ್ತು ಹೆಲಿಕಾಪ್ಟರ್ ತರಿಸಿ ಸ್ಥಳಾಂತರಿಸಲು ಒಪ್ಪಿಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿತ್ತು. ಅಂತಾರಾಷ್ಟ್ರೀಯ ಪ್ರಯಾಣ ವಿಮಾದಾರರಿಗೆ ಶುಲ್ಕ ವಿಧಿಸಲು ನಿರ್ವಾಹಕರು ನಕಲಿ ವೈದ್ಯಕೀಯ ಮತ್ತು ವಿಮಾನ ದಾಖಲೆಗಳನ್ನು ಬಳಸಿದ್ದಾರೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಲಾಭವನ್ನು ಶೆರ್ಪಾಗಳು, ಹೆಲಿಕಾಪ್ಟರ್ ಕಂಪನಿಗಳು, ಚಾರಣ ಏಜೆನ್ಸಿಗಳು ಮತ್ತು ಪ್ರವಾಸಿಗರು ಮತ್ತು ಆಸ್ಪತ್ರೆಗಳ ಅಪವಿತ್ರ ಮೈತ್ರಿಯ ನಡುವೆ ಹಂಚಿಕೆ ಮಾಡಲಾಗಿದೆ.
ಜನವರಿಯಲ್ಲಿ ಮೂರು ಪ್ರಮುಖ ಪರ್ವತ ರಕ್ಷಣಾ ಸಂಸ್ಥೆಗಳ ಆರು ಕಾರ್ಯಕಾರಿ ಬಂಧನದೊಂದಿಗೆ ತನಿಖೆ ಪ್ರಾರಂಭವಾಯಿತು. ವರದಿಯ ಪ್ರಕಾರ ಅಪವಿತ್ರ ಮೈತ್ರಿಯ ತಂಡಗಳು ತಮ್ಮ ಯೋಜನೆಗಳ ಮೂಲಕ 19.69 ದಶಲಕ್ಷ ಡಾಲರ್ಗಳನ್ನು ವಂಚನೆಯಿಂದ ಪಡೆದಿವೆ.
ಒಂದು ಕಂಪನಿಯು 1248 ರಕ್ಷಣೆಗಳಲ್ಲಿ 171 ನಕಲಿ ರಕ್ಷಣೆಯನ್ನು ಮಾಡಿ 10 ದಶಲಕ್ಷ ಡಾಲರ್ಗಳಷ್ಟು ಅಕ್ರಮ ಪಾವತಿಗಳನ್ನು ಪಡೆದಿದ್ದಾರೆ. ಮತ್ತೊಂದು ಕಂಪನಿ 471 ರಕ್ಷಣೆಗಳಲ್ಲಿ 75 ರಕ್ಷಣೆಗಳಲ್ಲಿ ವಂಚನೆಗೊಳಿಸಿ 8 ದಶಲಕ್ಷ ಡಾಲರ್ ಪಡೆದಿದ್ದಾರೆ. ಮೂರನೇ ವಂಚನೆ ಪ್ರಕರಣದಲ್ಲಿ 71 ಸುಳ್ಳು ಪ್ರಕರಣಗಳಲ್ಲಿ 1 ದಶಲಕ್ಷ ಡಾಲರ್ ವಂಚಿಸಲಾಗಿದೆ.
ಸರ್ಕಾರಿ ವಕೀಲರು ಒಟ್ಟು 11.3 ದಶಲಕ್ಷ ಡಾಲರ್ ವಂಚನೆಯ ಆರೋಪಪಟ್ಟಿ ಹೊರಿಸಿದ್ದಾರೆ.







