ಭಾರತೀಯ ಷೇರು ಮಾರುಕಟ್ಟೆ | 2 ವರ್ಷಗಳಲ್ಲೇ ಗರಿಷ್ಠ ವಿದೇಶಿ ಹೂಡಿಕೆ ದಾಖಲಾಗಿದ್ದು ಹೇಗೆ?
ಆಕಾಶ್ ಮಂಡಲ್ - indianexpress. com ವರದಿ

Photo Credit : indianexpress.com
ವಿದೇಶಿ ಹೂಡಿಕೆದಾರರು ಆಗಸ್ಟ್ ತಿಂಗಳಿನಲ್ಲಿ 3.1 ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ. ಇದು ಸೆಪ್ಟೆಂಬರ್ 2024ರಲ್ಲಿ ಹರಿದುಬಂದ 6.9 ಶತಕೋಟಿ ಡಾಲರ್ ಹೂಡಿಕೆಯ ನಂತರದ ಅತ್ಯಂತ ಹೆಚ್ಚಿನ ಮಾಸಿಕ ಹೂಡಿಕೆಯಾಗಿದೆ. ನಾಲ್ಕು ತಿಂಗಳ ಸುದೀರ್ಘ ಮಾರಾಟದ ನಂತರ, ವಿದೇಶಿ ಹೂಡಿಕೆದಾರರು ಸತತ ಎರಡನೇ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಖರೀದಿ ಪ್ರವೃತ್ತಿ ಮುಂದುವರಿಸಿದ್ದಾರೆ.
ಜುಲೈ ತಿಂಗಳಲ್ಲಿ ಹರಿದುಬಂದ 2.1 ಶತಕೋಟಿ ಡಾಲರ್ ವಿದೇಶಿ ಹೂಡಿಕೆಯ ನಂತರ ಈ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ಷೇರುಗಳ ರೀಸನಬಲ್ ವ್ಯಾಲ್ಯೂಯೇಷನ್, ಎಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಕಂಪೆನಿಗಳು ದಾಖಲಿಸಿದ ನಿರೀಕ್ಷೆಗಿಂತ ಉತ್ತಮ ಗಳಿಕೆ, ಸ್ಥಿರ ಆರ್ಥಿಕ ವಾತಾವರಣ ಹಾಗೂ ಇತ್ತೀಚಿನ ತಿಂಗಳುಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಮಾರುಕಟ್ಟೆಗಳಿಂದ ಹೂಡಿಕೆದಾರರು ಹಿಂದೆ ಸರಿದಿರುವುದು ಈ ಏರಿಕೆಗೆ ಮುಖ್ಯ ಕಾರಣಗಳಾಗಿವೆ.
ಮಾರ್ಚ್ ಮತ್ತು ಜೂನ್ ನಡುವಿನ ನಾಲ್ಕು ತಿಂಗಳುಗಳಲ್ಲಿ ವಿದೇಶಿ ಹೂಡಿಕೆದಾರರು ಬರೋಬ್ಬರಿ 27.8 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಇದು ಇತ್ತೀಚಿನ ವರ್ಷಗಳ ಅತ್ಯಂತ ಕೆಟ್ಟ ಕುಸಿತಗಳಲ್ಲಿ ಒಂದಾಗಿತ್ತು. ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಎಐ ತಂತ್ರಜ್ಞಾನ ಆಧಾರಿತ ಷೇರುಗಳತ್ತ ಹೂಡಿಕೆದಾರರು ಒಲವು ತೋರಿದ್ದರಿಂದ, ಈ ಅವಧಿಯಲ್ಲಿ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸುಮಾರು ಶೇ 5ರಷ್ಟು ಕುಸಿತ ಕಂಡಿದ್ದವು. ಈ ಭಾರೀ ಕುಸಿತದ ನಂತರ ಷೇರುಗಳ ಬೆಲೆಗಳು ಸೂಕ್ತ ಮಟ್ಟಕ್ಕೆ ಬಂದಿರುವುದು ಮಾರುಕಟ್ಟೆಯ ಚೇತರಿಕೆಗೆ ದೊಡ್ಡ ಬಲ ನೀಡಿದೆ.
ಇದಕ್ಕೆ ಹೋಲಿಸಿದರೆ, ಜುಲೈ ತಿಂಗಳಿನಿಂದ ಎರಡೂ ಪ್ರಮುಖ ಸೂಚ್ಯಂಕಗಳು (ನಿಫ್ಟಿ ಮತ್ತು ಸೆನ್ಸೆಕ್ಸ್) ಸುಮಾರು ಶೇ. 1ರಷ್ಟು ಏರಿಕೆ ಕಂಡಿವೆ. ಇದೇ ಅವಧಿಯಲ್ಲಿ ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಸೂಚ್ಯಂಕಗಳು ಕೂಡ ಶೇ. 5–6ರಷ್ಟು ಚೇತರಿಸಿಕೊಂಡಿದ್ದು, ಹೂಡಿಕೆದಾರರು ಮಾರುಕಟ್ಟೆಯ ವಿವಿಧ ವಲಯಗಳಲ್ಲಿ ಹೂಡಿಕೆ ಅವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ಷೇರುಗಳ ನೈಜ ಮೌಲ್ಯ ಮತ್ತು 2026–27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1FY27) ಕಂಪೆನಿಗಳು ದಾಖಲಿಸಿದ ನಿರೀಕ್ಷೆಗಿಂತ ಹೆಚ್ಚಿನ ಆದಾಯದ ಪ್ರಗತಿಯು ವಿದೇಶಿ ಹೂಡಿಕೆದಾರರಿಗೆ ಮತ್ತೆ ಹೂಡಿಕೆ ಮಾಡಲು ಉತ್ತಮ ಅವಕಾಶ ಕಲ್ಪಿಸಿದೆ. ಇದೇ ಆಗಸ್ಟ್ ಅವಧಿಯಲ್ಲಿ ಎಐ ಆಧಾರಿತ ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸಿದ್ದರೂ, ಭಾರತೀಯ ಮಾರುಕಟ್ಟೆಯತ್ತ ಹೆಚ್ಚಿನ ಆಸಕ್ತಿ ತೋರಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಈ ತಿಂಗಳ ಆರಂಭದಲ್ಲಿ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. 2026–27ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಏರಿಕೆಯಾಗುವ ಸಾಧ್ಯತೆಯಿರುವುದರಿಂದ ಮುಂಬರುವ ದಿನಗಳಲ್ಲಿ ಬಡ್ಡಿದರ ಹೆಚ್ಚಾಗಬಹುದು ಎಂದು ಸಭೆಯ ವಿವರಗಳು ಸೂಚಿಸಿದ್ದರೂ, ತಕ್ಷಣಕ್ಕೆ ದರ ಏರಿಕೆ ಮಾಡದಿರುವುದು ಮಾರುಕಟ್ಟೆಗೆ ಸಮಾಧಾನ ತಂದಿದೆ. ಬಡ್ಡಿದರ ಏರಿಕೆಯು ಹೂಡಿಕೆದಾರರಿಗೆ ಪ್ರತ್ಯೇಕವಾಗಿ ಧನಾತ್ಮಕ ಅಥವಾ ಋಣಾತ್ಮಕ ವಿಷಯವಲ್ಲದಿದ್ದರೂ, ಸುದೀರ್ಘ ಮಾರಾಟದ ನಂತರ ಷೇರುಗಳ ಮೌಲ್ಯ ಸೂಕ್ತ ಹಂತಕ್ಕೆ ತಲುಪಿರುವ ಈ ಸಮಯದಲ್ಲಿ ಆರ್ಬಿಐ ನಿಯಮಗಳ ಸ್ಥಿರತೆಯು ಅನಿಶ್ಚಿತತೆಯನ್ನು ತಿಳಿಗೊಳಿಸಿದೆ.
"ಸತತ ಮಾರಾಟದ ಒತ್ತಡದ ನಂತರ ಷೇರುಗಳ ಬೆಲೆಗಳು ನೈಜ ಮೌಲ್ಯ ಮಟ್ಟಕ್ಕೆ ತಲುಪಿದ್ದವು. ಇದೇ ಸಮಯದಲ್ಲಿ ಆರ್ಬಿಐ ತನ್ನ ಹಣಕಾಸು ನೀತಿಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದರಿಂದ ವಿದೇಶಿ ಹೂಡಿಕೆದಾರರು ಆಗಸ್ಟ್ನಲ್ಲಿ ಮತ್ತೆ ಷೇರುಗಳ ಖರೀದಿಗೆ ಮುಂದಾದರು" ಎಂದು ಮ್ಯಾಕ್ಸಿಯಮ್ ವೆಲ್ತ್ ಸಂಸ್ಥೆಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಬಡ್ಡಿದರ ಏರಿಕೆಯು ವಿದೇಶಿ ಹೂಡಿಕೆದಾರರಿಗೆ ಪ್ರತ್ಯೇಕವಾಗಿ ಸಕಾರಾತ್ಮಕ ಅಂಶವಲ್ಲದಿದ್ದರೂ, ಮಾರುಕಟ್ಟೆಯ ಹಲವು ವಿಭಾಗಗಳಲ್ಲಿ ಷೇರುಗಳ ಬೆಲೆ ನೈಜ ಮೌಲ್ಯಕ್ಕೆ ಬಂದಿರುವಾಗ ಇದು ಅನಿಶ್ಚಿತ ವಾತಾವರಣವನ್ನು ದೂರ ಮಾಡುತ್ತದೆ.
"ಭಾರತೀಯ ಮಾರುಕಟ್ಟೆಯಲ್ಲಿ ಈ ರೀತಿಯ ಬದಲಾವಣೆಗಳು ಹಿಂದೆ ಕೂಡ ಕಂಡುಬಂದಿವೆ. ಸತತವಾಗಿ ಬಂಡವಾಳ ಹೊರಹರಿವು ನಡೆದ ನಂತರ, ಷೇರುಗಳ ಮೌಲ್ಯವು ಜಾಗತಿಕ ಮಾರುಕಟ್ಟೆಯ ಅಪಾಯ ಸವಾಲುಗಳಿಗೆ ತಕ್ಕಂತೆ ಸರಿದೂಗಿದಾಗ ಈ ಮಾರಾಟ ಪ್ರವೃತ್ತಿ ಕೊನೆಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಆರ್ಥಿಕ ವಾತಾವರಣದಲ್ಲಿ ಆಗುವ ಸಣ್ಣ ಚೇತರಿಕೆಯೂ ಸಹ ಬಂಡವಾಳವನ್ನು ಮತ್ತೆ ಮಾರುಕಟ್ಟೆಯತ್ತ ಸೆಳೆಯಲು ನೆರವಾಗುತ್ತದೆ. ಯಾವುದೇ ಒಂದು ಪ್ರಮುಖ ಘಟನೆಯಿಂದ ಮಾರುಕಟ್ಟೆ ಚೇತರಿಸಿಕೊಳ್ಳುವ ಬದಲು, ಆಗಸ್ಟ್ ಆರಂಭದಲ್ಲಿಯೂ ಇದೇ ರೀತಿಯ ಬದಲಾವಣೆಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ್ದವು," ಎಂದು ವರದಿ ತಿಳಿಸಿದೆ.
►ಹಣಕಾಸು ಸೇವೆ ಮತ್ತು ಆಟೋಮೊಬೈಲ್ ವಲಯಗಳತ್ತ ವಿದೇಶಿ ಹೂಡಿಕೆದಾರರ ಒಲವು
ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ನೀಡಿದ ಅಂಕಿ-ಅಂಶಗಳ ಪ್ರಕಾರ, ಆಗಸ್ಟ್ ಮೊದಲಾರ್ಧದಲ್ಲಿ ಹಣಕಾಸು ಸೇವಾ ವಲಯವು ವಿದೇಶಿ ಹೂಡಿಕೆದಾರರನ್ನು (FII) ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿದೆ. ಈ ಅವಧಿಯಲ್ಲಿ ಹೂಡಿಕೆದಾರರು 68.5 ಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆಟೋಮೊಬೈಲ್ ವಲಯವು 46.2 ಕೋಟಿ ಡಾಲರ್ ಬಂಡವಾಳ ಹೂಡಿಕೆಯನ್ನು ಕಂಡಿದೆ. ಗ್ರಾಹಕ ಸೇವೆಗಳು, ಆರೋಗ್ಯ ಹಾಗೂ ಮಾಹಿತಿ ತಂತ್ರಜ್ಞಾನ ವಲಯಗಳು ಸಹ 20 ಕೋಟಿ ಡಾಲರ್ನಿಂದ 40 ಕೋಟಿ ಡಾಲರ್ವರೆಗಿನ ಭಾರೀ ಹೂಡಿಕೆಯನ್ನು ಪಡೆದುಕೊಂಡಿವೆ.
ಹಣಕಾಸು ಸೇವಾ ವಲಯವನ್ನು ಹೊರತುಪಡಿಸಿ, ಉಳಿದೆಲ್ಲಾ ವಲಯಗಳು ಹಿಂದಿನ 15 ದಿನಗಳಲ್ಲಿಯೂ ಧನಾತ್ಮಕ ಹೂಡಿಕೆಯನ್ನೇ ದಾಖಲಿಸಿದ್ದವು.
ಆಗಸ್ಟ್ ದ್ವಿತೀಯಾರ್ಧದ ಅಧಿಕೃತ ಅಂಕಿ-ಅಂಶಗಳು ಇನ್ನು ಬಿಡುಗಡೆಯಾಗಬೇಕಿದ್ದರೂ, ಈ ಹೆಚ್ಚಿನ ವಲಯಗಳು ಉತ್ತಮ ಸಾಧನೆ ಕಾಯ್ದುಕೊಂಡಿವೆ. ಆಗಸ್ಟ್ನಲ್ಲಿ ಹೆಲ್ತ್ಕೇರ್ ವಲಯವು ಶೇ 1.2ರಷ್ಟು ಚೇತರಿಸಿಕೊಂಡಿದ್ದರೆ, ಐಟಿ ಮತ್ತು ಆಟೋಮೊಬೈಲ್ ವಲಯಗಳು ಶೇ. 1ರವರೆಗೆ ಏರಿಕೆ ಕಂಡಿವೆ. ಹಣಕಾಸು ಸೇವಾ ವಲಯವು ಆಗಸ್ಟ್ ಆರಂಭದಲ್ಲಿ ಶೇ. 1.6ರಷ್ಟು ಏರಿಕೆ ಕಂಡು, ನಂತರ ತನ್ನ ಗಳಿಕೆಯಲ್ಲಿ ಕೆಲವನ್ನು ಕಳೆದುಕೊಂಡಿತು.
►ವಿದೇಶಿ ಬಂಡವಾಳ ಹರಿವಿನಲ್ಲಿ ಅನಿಶ್ಚಿತತೆ ಮುಂದುವರಿಕೆ
ಕಳೆದ ಎರಡು ತಿಂಗಳುಗಳಿಂದ ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಂಡುಬಂದಿದ್ದರೂ, ಹೆಚ್ಚಿನ ಮಾರುಕಟ್ಟೆ ತಜ್ಞರು ಈ ಷೇರು ಖರೀದಿಯನ್ನು ಕೇವಲ ಅವಕಾಶವಾದಿ ಹಾಗೂ ಹಂತ ಹಂತದ ನಡೆಯಾಗಿ ನೋಡುತ್ತಿದ್ದಾರೆಯೇ ಹೊರತು, ಇದು ದೀರ್ಘಕಾಲೀನ ಮಾರುಕಟ್ಟೆ ಚೇತರಿಕೆಯ ಆರಂಭವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಕಚ್ಚಾ ತೈಲದ ಬೆಲೆಗಳು, ಜಾಗತಿಕ ರಾಜಕೀಯ ಸ್ಥಿರತೆ ಮತ್ತು ತೆರಿಗೆ ನೀತಿಗಳ ಆಧಾರದ ಮೇಲೆ ವಿದೇಶಿ ಬಂಡವಾಳ ಹರಿವು ಮುಂಬರುವ ದಿನಗಳಲ್ಲೂ ಅಸ್ಥಿರವಾಗಿರುವ ಸಾಧ್ಯತೆಯಿದೆ.
"ಕಳೆದ 2 ವರ್ಷಗಳಲ್ಲಿ ವಿದೇಶಿ ಹೂಡಿಕೆದಾರರು ಮಾಡಿದ ಮಾರಾಟಕ್ಕೆ ಹೋಲಿಸಿದರೆ ಈಗಿನ ಹೂಡಿಕೆಯ ಪ್ರಮಾಣ ಬಹಳ ಸಣ್ಣದು. ಆದ್ದರಿಂದ ಇದನ್ನು ದೀರ್ಘಕಾಲೀನ ಚೇತರಿಕೆಯಾಗಿ ನೋಡಲಾಗುವುದಿಲ್ಲ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಿ, ತೈಲ ಬೆಲೆ ಪ್ರಸ್ತುತ ಮಟ್ಟಕ್ಕಿಂತ ಶೇ 20ಕ್ಕಿಂತ ಹೆಚ್ಚು ಕುಸಿದರೆ ಮಾತ್ರ ಮಾರುಕಟ್ಟೆಯಲ್ಲಿ ಸುಸ್ಥಿರ ಚೇತರಿಕೆ ಸಾಧ್ಯ" ಎಂದು ಈಕ್ವಿನೋಮಿಕ್ಸ್ ರಿಸರ್ಚ್ ಸಂಸ್ಥೆಯ ಸಂಸ್ಥಾಪಕ ಜಿ. ಚೊಕ್ಕಲಿಂಗಂ ತಿಳಿಸಿದ್ದಾರೆ.
ದೇಶೀಯ ಬ್ರೋಕಿಂಗ್ ಸಂಸ್ಥೆಯೊಂದರ ಈಕ್ವಿಟಿ ವಿಭಾಗದ ಮುಖ್ಯಸ್ಥರು ಮಾತನಾಡಿ, "ಈ ಹೂಡಿಕೆಯನ್ನು ವಿದೇಶಿ ಸಂಸ್ಥೆಗಳ ಹಂತ ಹಂತದ ಅವಕಾಶವಾದಿ ಪಣ ಎಂದು ಪರಿಗಣಿಸಬೇಕು. ಜಾಗತಿಕ ಮಟ್ಟದಲ್ಲಿ ಎಐ ತಂತ್ರಜ್ಞಾನ ಆಧಾರಿತ ಷೇರುಗಳ ಏರಿಕೆ ಕುಸಿಯಲು ಪ್ರಾರಂಭಿಸಿದ ಸಮಯದಲ್ಲೇ ಭಾರತಕ್ಕೆ ಬಂಡವಾಳ ಹರಿದುಬಂದಿದೆ. ಇದರ ಜೊತೆಗೆ ಕಂಪೆನಿಗಳ ಆದಾಯ ಗಳಿಕೆ ಮತ್ತು ಇತರ ಅಂಶಗಳು ಮಾರುಕಟ್ಟೆಯ ವಾತಾವರಣವನ್ನು ಸಕಾರಾತ್ಮಕಗೊಳಿಸಿದವು. ಮುಂಬರುವ ದಿನಗಳಲ್ಲಿ ಇವು ಹೇಗೆ ಬದಲಾಗುತ್ತವೆ ಎಂಬುದರ ಮೇಲೆ ಎಲ್ಲವೂ ಆಧಾರಿತವಾಗಿದೆ" ಎಂದಿದ್ದಾರೆ.
ಮತ್ತೊಂದೆಡೆ, ತೆರಿಗೆ ನೀತಿಗಳನ್ನು ಸರಳೀಕರಣಗೊಳಿಸದ ಹೊರತು ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯ ಕುರಿತು ಸಂಪೂರ್ಣ ಸಕಾರಾತ್ಮಕ ನಿಲುವು ತಳೆಯುವುದು ಅನುಮಾನ ಎಂದು ಹಲವು ಮಾರುಕಟ್ಟೆ ತಜ್ಞರು ಭಾವಿಸಿದ್ದಾರೆ.
"ಭಾರತದಲ್ಲಿ ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರ ಮೇಲಿನ ಬಂಡವಾಳ ಲಾಭದ ತೆರಿಗೆಯನ್ನು ರದ್ದುಗೊಳಿಸಬೇಕು ಎಂಬುದು ನಮ್ಮ ಅಭಿಪ್ರಾಯ. ಏಕೆಂದರೆ ಇದು ಮಾರುಕಟ್ಟೆಗೆ ಲಾಭಕ್ಕಿಂತ ಹೆಚ್ಚಿನ ಹಾನಿ ಮಾಡುತ್ತಿದೆ. ಇದು ಅನಗತ್ಯ ಗೊಂದಲಗಳನ್ನು ಸೃಷ್ಟಿಸಿದ್ದು, ಡಬಲ್ ತೆರಿಗೆಗೆ ಕಾರಣವಾಗಿದೆ. ಅಲ್ಲದೆ ಎಫ್ಪಿಐಗಳ ತೆರಿಗೆ ನಂತರದ ಆದಾಯದಲ್ಲಿ ಶೇಕಡಾ 2.4ರಷ್ಟು ವಾರ್ಷಿಕ ನಷ್ಟಕ್ಕೆ ಕಾರಣವಾಗಿದೆ" ಎಂದು IIFL ಕ್ಯಾಪಿಟಲ್ ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.
ಭಾರತವು ಪ್ರಸ್ತುತ ಭದ್ರತಾ ವಹಿವಾಟು ತೆರಿಗೆ (STT) ಮತ್ತು ಬಂಡವಾಳ ಲಾಭದ ತೆರಿಗೆ ಎರಡನ್ನೂ ವಿಧಿಸುತ್ತಿದೆ. ವಿದೇಶಿ ಹೂಡಿಕೆದಾರರ ಮೇಲೆ STT ವಿಧಿಸುವ ಜಾಗತಿಕ ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದೆ. STTಯನ್ನು ತೆಗೆದುಹಾಕುವುದು ಭಾರತೀಯ ಮಾರುಕಟ್ಟೆಯನ್ನು ವಿದೇಶಿ ಹೂಡಿಕೆದಾರರಿಗೆ ಇನ್ನಷ್ಟು ಆಕರ್ಷಕವಾಗಿ ಮಾಡುತ್ತದೆ ಎಂಬುದನ್ನು ಹಲವು ಮಾರುಕಟ್ಟೆ ತಜ್ಞರು ಮತ್ತು ಅಧಿಕಾರಿಗಳು ಒಪ್ಪಿಕೊಂಡಿದ್ದರೂ, ಅಂತಿಮ ನಿರ್ಧಾರ ಹಣಕಾಸು ಸಚಿವಾಲಯದ ಕೈಯಲ್ಲಿದೆ.
ಸೌಜನ್ಯ: indianexpress.com






