‘ಮೋದಿ–ಅದಾನಿ ಹೇಗೆ ಭಾರತವನ್ನು ದೋಚಿದರು?’ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್ ಠಾಕ್ರೆ
ಹಲವು ಸಾಮಾಜಿಕ ಜಾಲತಾಣ ಖಾತೆಗಳಿಗೆ ನೋಟಿಸ್

ಮೋದಿ-ಅದಾನಿ । ಸಾಂದರ್ಭಿಕ ಚಿತ್ರ (Photo: Al Jazeera)
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ನಡುವಿನ ಸಂಬಂಧಗಳ ಕುರಿತು ಆರೋಪಗಳನ್ನು ಒಳಗೊಂಡಿರುವ ಸಾಕ್ಷ್ಯಚಿತ್ರವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಹಂಚಿಕೊಂಡಿರುವುದು ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಹಾಟ್ಮೇಲ್ ಸಹಸಂಸ್ಥಾಪಕ ಸಬೀರ್ ಭಾಟಿಯಾ ನಿರ್ಮಿಸಿರುವ ಸುಮಾರು 36 ನಿಮಿಷಗಳ How Adani and Modi Stole India ಅಥವಾ The Friendship Files ಎಂಬ ಸಾಕ್ಷ್ಯಚಿತ್ರವನ್ನು ರಾಜ್ ಠಾಕ್ರೆ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಸರಕಾರವು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಬಯಸುತ್ತಿದೆ ಎಂದು ಹೇಳಿದ್ದ ಅವರು, ಅದಕ್ಕೂ ಮುನ್ನ ವೀಕ್ಷಿಸುವಂತೆ ಜನರಿಗೆ ಮನವಿ ಮಾಡಿದ್ದರು. ಬಳಿಕ ಈ ಪೋಸ್ಟ್ಗೆ ಲಕ್ಷಾಂತರ ವೀಕ್ಷಣೆಗಳು ಲಭಿಸಿವೆ ಎಂದು ವರದಿಯಾಗಿದೆ.
ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಹಾಗೂ ಫ್ಯಾಕ್ಟ್ಚೆಕರ್ ಮಹಮ್ಮದ್ ಝುಬೈರ್ ಅವರು, ರಾಜ್ ಠಾಕ್ರೆ ಅವರಿಗೆ ಎಕ್ಸ್ ಕಳುಹಿಸಿದೆ ಎನ್ನಲಾದ ಪತ್ರವ್ಯವಹಾರದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಾಜ್ ಠಾಕ್ರೆ ಅವರ ಖಾತೆಯಲ್ಲಿನ ವಿಷಯವು ಭಾರತೀಯ ಕಾನೂನನ್ನು ಉಲ್ಲಂಘಿಸಿರಬಹುದು ಎಂಬ ಕಾರಣಕ್ಕೆ, ಅದರ ಕುರಿತು ಪೊಲೀಸರಿಂದ ವಿನಂತಿ ಸ್ವೀಕರಿಸಿರುವುದಾಗಿ ಎಕ್ಸ್ ತಿಳಿಸಿದೆ ಎನ್ನಲಾಗಿದೆ.
ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧ ಆಕ್ರೋಶ
@Rashtrabhasha_ ಎಂಬ ಮರಾಠಿ ಭಾಷೆಯ ಎಕ್ಸ್ ಖಾತೆಯು, ಸಾಕ್ಷ್ಯಚಿತ್ರದ ಬಗ್ಗೆ ಮುಖ್ಯವಾಹಿನಿ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡದಿರುವುದನ್ನು ಪ್ರಶ್ನಿಸಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ವಿಷಯಗಳು ಸಾರ್ವಜನಿಕ ಚರ್ಚೆಗೆ ಬರಬೇಕಾದರೆ ಮಾಧ್ಯಮಗಳ ಪಾತ್ರವೇನು ಎಂದು ಪ್ರಶ್ನಿಸಿರುವ ಖಾತೆದಾರರು, ಹಲವು ಮರಾಠಿ ಸುದ್ದಿ ವಾಹಿನಿಗಳನ್ನು ಟ್ಯಾಗ್ ಮಾಡಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್ ಪದಾಧಿಕಾರಿ ಮನೀಷ್ ಶರ್ಮಾ ಅವರು ರಾಜ್ ಠಾಕ್ರೆ ಅವರ ಪೋಸ್ಟ್ ಹಂಚಿಕೊಂಡು, ‘ಹಳೆಯ ಚಿತ್ರಗಳಲ್ಲಿ ಕುದುರೆ ಮೇಲೆ ಬರುತ್ತಿದ್ದ ಡಕಾಯಿತರ ರೂಪ ಈಗ ಬದಲಾಗಿದೆ’ ಎಂಬ ವ್ಯಂಗ್ಯದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಸಾಕ್ಷ್ಯಚಿತ್ರವನ್ನು ‘ಕಣ್ಣು ತೆರೆಸುವ ಚಿತ್ರ’ ಎಂದು ಬಣ್ಣಿಸಿ, ಅದನ್ನು ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.
ಇನ್ನೊಂದೆಡೆ, @Samhitab4u ಎಂಬ ಬಳಕೆದಾರರು ಸಾಕ್ಷ್ಯಚಿತ್ರದಲ್ಲಿನ ಅರ್ಧದಷ್ಟು ಆರೋಪಗಳು ನಿಜವಾಗಿದ್ದರೂ ಅದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವೇ ವ್ಯಕ್ತಿಗಳ ಅನುಕೂಲಕ್ಕಾಗಿ ನಿಯಮಗಳು, ಕಾನೂನುಗಳು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಪ್ರತಿಯೊಬ್ಬರೂ ಪ್ರಶ್ನಿಸಬೇಕು. ಯಾರೂ ವ್ಯವಸ್ಥೆಗಿಂತ ಮೇಲಲ್ಲ; ಯಾರೂ ಪರಿಶೀಲನೆಗೆ ಅತೀತರಲ್ಲ ಎಂದು ಅವರು ಬರೆದಿದ್ದಾರೆ.
ಈ ಬೆಳವಣಿಗೆಗೆ ಸಂಬಂಧಿಸಿದಂತೆ, ಈ ಹಿಂದೆ ಪತ್ರಕರ್ತೆ ಅರ್ಫಾ ಖಾನಂ ಶೆರ್ವಾನಿ ಅವರು ರಾಜ್ ಠಾಕ್ರೆ ಅವರ ನಡೆ ಭಾರತೀಯ ರಾಜಕೀಯದಲ್ಲಿ ಮಹತ್ವದ ತಿರುವು ಎಂದು ಪ್ರತಿಕ್ರಿಯಿಸಿದ್ದರು. ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಕೂಡ ಸಾಕ್ಷ್ಯಚಿತ್ರವನ್ನು ಹಂಚಿಕೊಂಡಿದ್ದರು.
ಈ ಹಿಂದೆ ಇದೇ ವಿಷಯವನ್ನು ಹಂಚಿಕೊಂಡ ಕನಿಷ್ಠ 24 ಎಕ್ಸ್ ಖಾತೆಗಳಿಗೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದರು ಎಂದು ವರದಿಯಾಗಿತ್ತು. ಸರಕಾರಕ್ಕೆ ಸಂಬಂಧಿಸಿದ ದೂರಿನ ಬಳಿಕ ಯೂಟ್ಯೂಬ್ನಲ್ಲಿ ಮೂಲ ಸಾಕ್ಷ್ಯಚಿತ್ರದ ಪ್ರಸಾರವನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು ಎನ್ನಲಾಗಿದೆ.
2003ರಿಂದ ಮೋದಿ ಮತ್ತು ಅದಾನಿ ನಡುವಿನ ಸಂಬಂಧ ಬೆಳೆದ ರೀತಿಯನ್ನು ಸಾಕ್ಷ್ಯಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಗುಜರಾತ್ನಲ್ಲಿ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ ಅದಾನಿ ಅವರು ಮೋದಿಗೆ ಹೇಗೆ ಬೆಂಬಲ ನೀಡಿದರು ಎಂಬುದನ್ನು ವಿವರಿಸಲಾಗಿದೆ ಎಂದು ಮರಾಠಿ ಮಾಧ್ಯಮದ ವರದಿ ತಿಳಿಸಿದೆ.
ಅದಾನಿ ಸಮೂಹಕ್ಕೆ ಗುಜರಾತ್ನಲ್ಲಿ ಸುಮಾರು 15,000 ಎಕರೆ ಭೂಮಿಯನ್ನು ಕಡಿಮೆ ದರದಲ್ಲಿ ನೀಡಲಾಗಿದೆ ಎಂಬ ಆರೋಪವನ್ನೂ ಸಾಕ್ಷ್ಯಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ವರದಿಯಾಗಿದೆ.
2014ರಲ್ಲಿ ಪ್ರಧಾನಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಲು ನರೇಂದ್ರ ಮೋದಿ ಗುಜರಾತ್ನಿಂದ ದಿಲ್ಲಿಗೆ ಪ್ರಯಾಣಿಸಿದ ವಿಮಾನ ಅದಾನಿ ಅವರಿಗೆ ಸೇರಿದ್ದಾಗಿತ್ತು ಎಂಬ ಅಂಶವನ್ನೂ ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರದಲ್ಲಿನ ಆರೋಪಗಳು ಮತ್ತು ಅವುಗಳಿಗೆ ಆಧಾರವಾಗಿ ನೀಡಿರುವ ದಾಖಲೆಗಳ ಕುರಿತು ಚರ್ಚೆ ಆರಂಭವಾಗಿದೆ.
ಹಲವು ಸಾಮಾಜಿಕ ಜಾಲತಾಣ ಖಾತೆಗಳಿಗೆ ನೋಟಿಸ್
ಅಕ್ಟೋಬರ್ 18ರಂದು ನೀಡಲಾದ ನೋಟಿಸ್ಗಳ ಪ್ರಕಾರ, ಪ್ರಸಿದ್ಧ ಕಂಪನಿಯೊಂದನ್ನು ಗುರಿಯಾಗಿಸಿಕೊಂಡು ಹಲವು ಎಕ್ಸ್ ಖಾತೆಗಳಲ್ಲಿ ಆಕ್ಷೇಪಾರ್ಹ ವಿಷಯ ಪ್ರಕಟಿಸಲಾಗಿದೆ ಎಂಬ ದೂರು ಪಶ್ಚಿಮ ಸೈಬರ್ ಪೊಲೀಸ್ ವಿಭಾಗ, ಅಪರಾಧ ವಿಭಾಗ ಮತ್ತು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಬಂದಿತ್ತು. ಪ್ರಕಟಿಸಲಾದ ವಿಷಯಗಳಿಗೆ ಸ್ಪಷ್ಟವಾದ ವಾಸ್ತವಿಕ ಅಥವಾ ಕಾನೂನುಬದ್ಧ ಆಧಾರವಿಲ್ಲದೆ ಕಂಪನಿಯ ಖ್ಯಾತಿಗೆ ಗಂಭೀರ ಹಾನಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೆಲವರು ನೋಟಿಸ್ ಪಡೆದ ಬಳಿಕ ವಿಡಿಯೊಗಳನ್ನು ಅಳಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು ಕೆಲವರು ನೋಟಿಸ್ಗಳನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡು, ಪೊಲೀಸರ ಕ್ರಮವನ್ನು ಅತಿರೇಕದ ಕ್ರಮ ಎಂದು ಟೀಕಿಸಿದ್ದಾರೆ.






