2024ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಕಾಯ್ದೆ ಅಂಗೀಕಾರಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದ್ದು ಹೇಗೆ?

Photo Credit : indianexpress.com
2024ರ ಲೋಕಸಭಾ ಚುನಾವಣೆಗೆ ಕೇವಲ ಎರಡೂವರೆ ತಿಂಗಳುಗಳಷ್ಟೇ ಬಾಕಿ ಇರುವಾಗ, ಅಂದಿನ ನರೇಂದ್ರ ಮೋದಿ ಸರಕಾರವು 'ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆ) ವಿಧೇಯಕ, 2024' ಅನ್ನು ಸಂಸತ್ತಿನಲ್ಲಿ ಮಂಡಿಸಿತು. ದೇಶದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯಲ್ಲಿ 'ಅಕ್ರಮಗಳನ್ನು' ತಡೆದು ಹೆಚ್ಚಿನ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ತರುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿತ್ತು.
ಯುಪಿಎಸ್ಸಿ (UPSC) ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸೇರಿದಂತೆ ವಿವಿಧ 'ಸಾರ್ವಜನಿಕ ಪರೀಕ್ಷಾ ಪ್ರಾಧಿಕಾರಗಳು' ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಮತ್ತು ಸರ್ಕಾರಿ ನೇಮಕಾತಿ ಪರೀಕ್ಷೆಗಳು ಈ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತವೆ.
2024ರ ಫೆಬ್ರವರಿಯಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನ ಎರಡೂ ಮನೆಗಳು ಈ ವಿಧೇಯಕವನ್ನು ಅಂಗೀಕರಿಸಿದವು.
2024ರ ಫೆಬ್ರವರಿ 6ರಂದು ಲೋಕಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಉತ್ತರ ಪತ್ರಿಕೆ ತಿದ್ದುಪಡಿ ಸೇರಿದಂತೆ ವಿವಿಧ ಅಕ್ರಮಗಳಲ್ಲಿ ತೊಡಗಿಕೊಳ್ಳುವ ಅಧಿಕಾರಿಗಳು ಅಥವಾ ಸಂಸ್ಥೆಗಳನ್ನು ಶಿಕ್ಷಿಸುವುದು ಈ ವಿಧೇಯಕದ ಉದ್ದೇಶವಾಗಿದೆ. ಆದರೆ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪರೀಕ್ಷೆಗಳಲ್ಲಿ ಅಕ್ರಮ ಎಸಗುವ ಯಾವುದೇ ವ್ಯಕ್ತಿಗೆ 3ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಅದೇ ರೀತಿ, 'ಸಂಘಟಿತ' ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿವರೆಗೆ ದಂಡ ಸೇರಿದಂತೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಈ ವಿಧೇಯಕಕ್ಕೆ ಸಂಸತ್ತಿನ ಎರಡೂ ಸದನಗಳಲ್ಲಿ ಪಕ್ಷಾತೀತ ಬೆಂಬಲ ವ್ಯಕ್ತವಾಗಿತ್ತು.
►ಲೋಕಸಭೆ
2024ರ ಫೆಬ್ರವರಿ 6ರಂದು ಲೋಕಸಭೆಯಲ್ಲಿ ವಿಧೇಯಕವನ್ನು ಮಂಡಿಸಿದ ಜಿತೇಂದ್ರ ಸಿಂಗ್, ಕೋಟಾದ 18 ವರ್ಷದ ವಿದ್ಯಾರ್ಥಿನಿ, ಜೆಇಇ ಆಕಾಂಕ್ಷಿಯಾಗಿದ್ದ ನಿಹಾರಿಕಾ ಸೋಲಂಕಿ ಕುರಿತ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದರು. ಈ ವಿದ್ಯಾರ್ಥಿನಿ 2024ರ ಜನವರಿ 31ರಂದು ನಡೆಯಬೇಕಿದ್ದ ಪರೀಕ್ಷೆಗೆ ಕೇವಲ ಎರಡು ದಿನಗಳ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಳು.
"ಅಮ್ಮ, ಅಪ್ಪ, ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನಿಂದ ಇದು ಸಾಧ್ಯವಿಲ್ಲ. ನಾನು ಅತ್ಯಂತ ಕೆಟ್ಟ ಮಗಳು" ಎಂದು ಆಕೆಯ ಆತ್ಮಹತ್ಯಾ ಟಿಪ್ಪಣಿಯ ಸಾಲುಗಳನ್ನು ಸಚಿವರು ಅಂದು ಉಲ್ಲೇಖಿಸಿದ್ದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ನೀಡುವ 2023ರ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ಕೆಲವೇ ತಿಂಗಳುಗಳಲ್ಲಿ ಸರಕಾರವು ಯುವಜನರ ಹಿತಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಿಂಗ್ ಹೇಳಿದರು. ಪ್ರಧಾನಿ ಮೋದಿ ಅವರ ಪ್ರಕಾರ ಮಹಿಳೆಯರು, ಯುವಕರು, ರೈತರು ಮತ್ತು ಬಡವರು ಎಂಬ ನಾಲ್ಕೇ ಜಾತಿಗಳಿವೆ ಎಂದಿದ್ದರು ಸಿಂಗ್.
"ಕಳೆದ 10 ವರ್ಷಗಳಲ್ಲಿ ಯುವಕರಿಗಾಗಿ ತರಲಾದ ಎಲ್ಲಾ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಯುವಕರು ತಮ್ಮ ಪ್ರತಿಭೆ, ಯೋಗ್ಯತೆ ಮತ್ತು ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂಬುದನ್ನು ನಾವು ಸಾಕ್ಷಿ ಸಮೇತ ಹೇಳಬಹುದು. ಪ್ರತಿಯೊಬ್ಬ ಯುವಕ ಅಥವಾ ಯುವತಿ ಯಾವುದೇ ಹುದ್ದೆಯನ್ನು ಅಲಂಕರಿಸುವ ಹಾಗೂ ಯಾವುದೇ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯುವ, ಪರೀಕ್ಷೆ ಬರೆದು ಉತ್ತೀರ್ಣರಾಗುವ ಕನಸು ಕಾಣುವುದೇ ಪ್ರಜಾಪ್ರಭುತ್ವದ ನಿಜವಾದ ವ್ಯಾಖ್ಯಾನವಾಗಿದೆ" ಎಂದು ಸಿಂಗ್ ಹೇಳಿದ್ದರು.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಈಗ ಹೆಚ್ಚಿನ ಪರೀಕ್ಷೆಗಳನ್ನು ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ ನಡೆಸಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ವಿವಿಧ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ದೂರುಗಳು ಬಂದಿವೆ ಎಂದ ಸಿಂಗ್, ಪರೀಕ್ಷಾ ಕೇಂದ್ರಗಳ ಹೊರಗೆ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವುದು ಮತ್ತು ಅಭ್ಯರ್ಥಿಯ ಬದಲು ಬೇರೆಯವರು ಪರೀಕ್ಷೆ ಬರೆಯುವುದು ನಂತಹ ಅಕ್ರಮಗಳ ಉದಾಹರಣೆಗಳನ್ನು ನೀಡಿದರು.
ಅಂದಿನ ತೃಣಮೂಲ ಕಾಂಗ್ರೆಸ್ ಆಡಳಿತದ ಪಶ್ಚಿಮ ಬಂಗಾಳದಲ್ಲಿ 2022ರಲ್ಲಿ ನಡೆದ ಪರೀಕ್ಷಾ ಅಕ್ರಮಗಳು, 2018ರಿಂದ 2022ರವರೆಗೆ ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಹಾಗೂ 2017ರಿಂದ 2022ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಘಟನೆಗಳನ್ನು ಸಿಂಗ್ ಉದಾಹರಣೆಯಾಗಿ ನೀಡಿದರು.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಇಂತಹ "ದುಷ್ಟ ಜನರಿಗೆ" ಶಿಕ್ಷೆ ವಿಧಿಸಲು ಈ ವಿಧೇಯಕದಲ್ಲಿ ದಂಡನಾತ್ಮಕ ನಿಬಂಧನೆಗಳಿವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸಂಸದ ಕೊಡಿಕ್ಕುನ್ನಿಲ್ ಸುರೇಶ್ ವಿಧೇಯಕವನ್ನು ಬೆಂಬಲಿಸಿದರು. ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ಆಧುನಿಕ ತಂತ್ರಜ್ಞಾನವನ್ನು ಬಳಸುವಂತೆ ಅವರು ಸರಕಾರಕ್ಕೆ ಮನವಿ ಮಾಡಿದರು. ರದ್ದಾದ ಪರೀಕ್ಷೆಗಳನ್ನು ಮರುಪರಿಶೀಲಿಸಿ ನಡೆಸಲು ಪ್ರತ್ಯೇಕ ಅಧಿಕೃತ ವಿಭಾಗವನ್ನು ರಚಿಸುವಂತೆಯೂ ಅವರು ಸಲಹೆ ನೀಡಿದರು.
ಕೇರಳದ ಅಂದಿನ ಸಿಪಿಐ (ಎಂ) ನೇತೃತ್ವದ ಎಲ್ಡಿಎಫ್ ಸರಕಾರವನ್ನು ಟೀಕಿಸಿದ ಅವರು, ಅಲ್ಲಿ ನಡೆದ ಪರೀಕ್ಷೆಗಳಲ್ಲಿ ಕೆಲ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು. ಇಂತಹ ಪ್ರಕರಣಗಳಲ್ಲಿ ಕೇವಲ "ನೇರ ಅಪರಾಧಿಗಳು" ಮಾತ್ರವಲ್ಲದೆ "ಷಡ್ಯಂತ್ರ ರೂಪಿಸಿದವರು" ಮತ್ತು "ಮಧ್ಯವರ್ತಿ ಏಜೆಂಟರನ್ನೂ" ಶಿಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.
ಲೋಕಸಭೆಯ ಅಂದಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, "ಈ ವಿಧೇಯಕದಲ್ಲಿ ಎಸಗಿದ ಅಪರಾಧಗಳಿಗೆ ಶಿಕ್ಷೆಯ ನಿಬಂಧನೆಗಳಿವೆ. ಆದರೆ ಇಂತಹ ಕೃತ್ಯಗಳನ್ನು ತಡೆಯುವ ಮುನ್ನೆಚ್ಚರಿಕಾ ಕ್ರಮಗಳ ಕೊರತೆಯಿದೆ" ಎಂದರು.
ಡಿಎಂಕೆ ಸಂಸದ ಡಿ.ಎಂ. ಕದಿರ್ ಆನಂದ್ ಮಾತನಾಡಿ, "ಈ ವಿಧೇಯಕವು ಕೇವಲ ಜೈಲು ಶಿಕ್ಷೆ, ದಂಡ ಮತ್ತು ಶಿಕ್ಷೆ ವಿಧಿಸುವಿಕೆಯ ಬಗ್ಗೆ ಮಾತ್ರ ಮಾತನಾಡುತ್ತದೆ" ಎಂದು ಹೇಳುತ್ತಾ, ಇಂತಹ ಅಕ್ರಮಗಳನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಬಗ್ಗೆ ಏನನ್ನೂ ಹೇಳಿಲ್ಲ ಎಂದರು.
ನಂತರ, ತಮ್ಮ ಉತ್ತರದಲ್ಲಿ ಸಚಿವರು, "ವಿಧಿಸಲಾಗುವ ಶಿಕ್ಷೆಯೇ ಅಪರಾಧಗಳನ್ನು ತಡೆಯುವ ಪ್ರಮುಖ ಅಸ್ತ್ರವಾಗಿದೆ" ಎಂದು ಸ್ಪಷ್ಟಪಡಿಸಿದರು.
ವೈಎಸ್ಆರ್ ಕಾಂಗ್ರೆಸ್ ಸಂಸದೆ ಚಿಂತಾ ಅನುರಾಧಾ ವಿಧೇಯಕವನ್ನು ಬೆಂಬಲಿಸಿದ್ದು, ದಂಡನಾತ್ಮಕ ನಿಬಂಧನೆಗಳ ಮೂಲಕ ಜನರು ಅಕ್ರಮಗಳಲ್ಲಿ ತೊಡಗದಂತೆ ತಡೆಯುವ ಈ ಯತ್ನವನ್ನು ಶ್ಲಾಘಿಸಿದರು. ಆದರೆ, ಅಕ್ರಮ ಎಸಗುವ ಅಭ್ಯರ್ಥಿಗಳನ್ನು ವಿಧೇಯಕದ ವ್ಯಾಪ್ತಿಯಿಂದ ಏಕೆ ಹೊರಗಿಡಲಾಗಿದೆ ಎಂದು ಪ್ರಶ್ನಿಸಿದರು.
ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ ವಿಧೇಯಕವನ್ನು ಬೆಂಬಲಿಸುತ್ತಲೇ, ಇದರಿಂದ ಏನು ಬದಲಾಗಲಿದೆ? ಎಂದು ಪ್ರಶ್ನಿಸಿದರು. ಈಗಾಗಲೇ ಒಂದು ವ್ಯವಸ್ಥೆಯಿದೆ. ಯಾವುದೇ ಹಗರಣ ನಡೆದರೂ ಜನ ಸಿಕ್ಕಿಬೀಳುತ್ತಿದ್ದಾರೆ. ಹಾಗಿರುವಾಗ, ಹಿಂದೆ ಇಲ್ಲದಿರುವಂತಹುದು ಈ ಹೊಸ ವಿಧೇಯಕದಲ್ಲಿ ಏನಿದೆ? ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಚಿವರು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಉದಾಹರಣೆ ನೀಡಿದ್ದಾರೆ. ಆದರೆ NDA ಆಡಳಿತದ ಮಹಾರಾಷ್ಟ್ರದಲ್ಲೂ ಇಂತಹ ಒಂದು ಸೋರಿಕೆ ನಡೆದಿತ್ತು ಎಂದು ನೆನಪಿಸಿದರು.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮಾತನಾಡಿ, ವಿಧೇಯಕದಲ್ಲಿ ಉಲ್ಲೇಖಿಸಲಾದ ಅಪರಾಧಗಳ ವಿಭಾಗಗಳು ಈಗಾಗಲೇ ಐಪಿಸಿ (IPC) ಮತ್ತು ಭಾರತೀಯ ನ್ಯಾಯ ಸಂಹಿತೆ–2023ರಲ್ಲಿ ಸೇರಿವೆ. ಸಮಸ್ಯೆ ಇರುವುದು ಕಾನೂನುಗಳ ಅಭಾವದಲ್ಲಿ ಅಲ್ಲ, ಬದಲಿಗೆ ಅವುಗಳ ಜಾರಿಯಲ್ಲಿ ಎಂದು ಹೇಳಿದರು.
ಚರ್ಚೆಗೆ ಉತ್ತರಿಸಿದ ಸಿಂಗ್, "ಇದು ಒಂದು ನಿರ್ದಿಷ್ಟ ಶಾಸನವಾಗಿದೆ. ಏಕೆಂದರೆ ಪ್ರಸ್ತುತ ಇರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ ಇಂತಹ ಅಪರಾಧಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಆದ್ದರಿಂದ ಪರೀಕ್ಷೆಗಳ ನಿರ್ವಹಣೆಯಲ್ಲಿ 'ಅಕ್ರಮ ವಿಧಾನಗಳನ್ನು' ಗುರುತಿಸಿ, ನಮಗೆ ಸಾಧ್ಯವಾದಷ್ಟು ಉತ್ತಮವಾಗಿ ವ್ಯಾಖ್ಯಾನಿಸಲು ನಾವು ಪ್ರಯತ್ನಿಸಿದ್ದೇವೆ" ಎಂದರು.
"ಅಪರಾಧದ ಪ್ರಮಾಣವು ಹೆಚ್ಚಾದರೆ, ಅದು ಖಂಡಿತವಾಗಿಯೂ ಭಾರತೀಯ ನ್ಯಾಯ ಸಂಹಿತೆ ಅಥವಾ ಹಿಂದಿನ ಐಪಿಸಿಯ ವ್ಯಾಪ್ತಿಗೆ ಬರುತ್ತದೆ" ಎಂದು ಸಚಿವರು ಸ್ಪಷ್ಟಪಡಿಸಿದರು. ತದನಂತರ ವಿಧೇಯಕವು ಸದನದಲ್ಲಿ ಅಂಗೀಕಾರಗೊಂಡಿತು.
►ರಾಜ್ಯಸಭೆ
ಲೋಕಸಭೆಯಲ್ಲಿ ಮಂಡಿಸಿದ ರೀತಿಯಲ್ಲೇ ಜಿತೇಂದ್ರ ಸಿಂಗ್ ಅವರು 2024ರ ಫೆಬ್ರವರಿ 9ರಂದು ರಾಜ್ಯಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಿದರು. ಅವರು ಮತ್ತೆ ಕೋಟಾ ವಿದ್ಯಾರ್ಥಿನಿಯ ಆತ್ಮಹತ್ಯೆ ಟಿಪ್ಪಣಿಯನ್ನು ಉಲ್ಲೇಖಿಸಿ, "ಭಾರತದ ಜನಸಂಖ್ಯೆಯ ಶೇಕಡಾ 70ಕ್ಕಿಂತ ಹೆಚ್ಚು ಭಾಗವಾಗಿರುವ ದೇಶದ ಯುವಜನತೆಯಲ್ಲಿ ನಾವೆಲ್ಲರೂ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಈ ಪ್ರಮುಖ ಯುವಶಕ್ತಿ ಬಲಿಯಾಗುವುದನ್ನು ನಮ್ಮಲ್ಲಿ ಯಾರೂ ಬಯಸುವುದಿಲ್ಲ," ಎಂದರು.
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿಧೇಯಕವನ್ನು ತಾತ್ವಿಕವಾಗಿ ಬೆಂಬಲಿಸಿದರು. ದೇಶದ ಅತ್ಯಂತ ದೊಡ್ಡ ಪರೀಕ್ಷಾ ಹಗರಣ ಎಂದರೆ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ 2008ರಿಂದ 2013ರವರೆಗೆ ನಡೆದ ವ್ಯಾಪಂ ಹಗರಣ ಎಂದು ಅವರು ಹೇಳಿದರು. ಲಂಚ ನೀಡಿದವರನ್ನು ಜೈಲಿಗೆ ಕಳುಹಿಸಲಾಯಿತು, ಆದರೆ ಲಂಚ ಪಡೆದವರು "ಮುಕ್ತವಾಗಿ ಓಡಾಡುತ್ತಿದ್ದಾರೆ" ಎಂದು ಅವರು ಆರೋಪಿಸಿದರು. ಆನ್ಲೈನ್ ಪರೀಕ್ಷೆಗಳು ಭ್ರಷ್ಟಾಚಾರದ ಪ್ರಮುಖ ಮೂಲವಾಗಿವೆ ಎಂದ ಅವರು, ಎಲ್ಲಾ ಪರೀಕ್ಷೆಗಳನ್ನು ಆಫ್ಲೈನ್ನಲ್ಲಿ ನಡೆಸುವಂತೆ ಸಲಹೆ ನೀಡಿದರು.
ವಿಧೇಯಕವನ್ನು ಬೆಂಬಲಿಸಿ ಮಾತನಾಡಿದ ಬಿಜೆಪಿ ಸಂಸದ ಹಾಗೂ ಮಾಜಿ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್, ಪರೀಕ್ಷಾ ವ್ಯವಸ್ಥೆಯಲ್ಲಿ 'ಪರಿಶುದ್ಧತೆ' ಇರಬೇಕು ಎಂಬ ಪ್ರಧಾನಿ ಮೋದಿ ಅವರ ಬಯಕೆಯಂತೆ ತಮ್ಮ ಅವಧಿಯಲ್ಲಿ ಸ್ಥಾಪನೆಯಾದ 'ರಾಷ್ಟ್ರೀಯ ಪರೀಕ್ಷಾ ಸಂಸ್ಥೆ'ಯನ್ನು (NTA) ಶ್ಲಾಘಿಸಿದರು.
NTA ಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ರೂಪಿಸಲಾಯಿತು. ನೀಟ್ ಹಾಗೂ ಇತರ ಪರೀಕ್ಷೆಗಳನ್ನು ಇದು ನಡೆಸಲು ಪ್ರಾರಂಭಿಸಿದ ನಂತರ ನಕಲು ಮಾಡುವುದು ನಿಂತಿತು ಎಂದು ಜಾವಡೇಕರ್ ಪ್ರತಿಪಾದಿಸಿದರು.
►2024 ಮತ್ತು 2026ರಲ್ಲಿ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆಗಳು ನಡೆದದ್ದು ಇದೇ NTA ಅಡಿಯಲ್ಲೇ!
ಎಪ್ರಿಲ್ 2026ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅಂದಿನ ಆಪ್ ಸಂಸದ ಸಂದೀಪ್ ಪಾಠಕ್, 2024ಕ್ಕೂ ಮುಂಚಿನ ಏಳು ವರ್ಷಗಳಲ್ಲಿ 70 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ ಎಂದು ಹೇಳಿದರು. "ನಾವು ಮಾತನಾಡುವ ಅಮೃತ ಕಾಲದ ಅಡಿಪಾಯವೇ ಇದು. ಇದರಲ್ಲಿ 'ಅಮೃತ' ಭ್ರಷ್ಟರಿಗೆ ಮತ್ತು ಮಾಫಿಯಾಕ್ಕೆ ತಲುಪಿದರೆ, ಜನರಿಗೆ 'ವಿಷ' ಸಿಗುತ್ತಿದೆ" ಎಂದು ಅವರು ವಾಗ್ದಾಳಿ ನಡೆಸಿದರು.
ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಮತ್ತು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪಾಠಕ್ ಸಲಹೆ ನೀಡಿದರು. ಈ ಪ್ರಸ್ತಾವನೆಗೆ ತಮಾಷೆಯಾಗಿ ಉತ್ತರಿಸಿದ ಜಿತೇಂದ್ರ ಸಿಂಗ್, ಈ ಪ್ರಸ್ತಾವನೆಯಂತೆ ಜೈಲಿನಲ್ಲಿರುವ ಎಲ್ಲಾ ಆಪ್ ನಾಯಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
ಚರ್ಚೆಗೆ ಸಚಿವರು ನೀಡಿದ ಸಂಕ್ಷಿಪ್ತ ಉತ್ತರದ ಬಳಿಕ ವಿಧೇಯಕವನ್ನು ರಾಜ್ಯಸಭೆ ಅಂಗೀಕರಿಸಿತು.






