2025ರ ಹೀನಾಯ ಸೋಲಿನಿಂದ ಬಂಕಿಪುರದಲ್ಲಿ ಐತಿಹಾಸಿಕ ಗೆಲುವಿನವರೆಗೆ: ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಅಸ್ತಿತ್ವ ಕಂಡುಕೊಂಡಿದ್ದು ಹೇಗೆ?

Photo credit: PTI
2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾದ ಸುಮಾರು ಒಂಬತ್ತು ತಿಂಗಳ ನಂತರ, ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಸೋಮವಾರ ತಮ್ಮ ಚೊಚ್ಚಲ ಚುನಾವಣಾ ಗೆಲುವು ದಾಖಲಿಸಿದ್ದಾರೆ.
ಹೈಪ್ರೊಫೈಲ್ ಬಂಕಿಪುರ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಶಾಂತ್ ಕಿಶೋರ್ ಜನ್ ಸುರಾಜ್ ಪಕ್ಷಕ್ಕೆ ಬಿಹಾರ ವಿಧಾನಸಭೆಯಲ್ಲಿ ಚೊಚ್ಚಲ ಪ್ರವೇಶ ತಂದುಕೊಟ್ಟಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ ಅವರನ್ನು 19,324 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಿಶೋರ್ 64,151 ಮತಗಳನ್ನು ಪಡೆದರೆ, ಸಿನ್ಹಾ 44,827 ಮತಗಳನ್ನು ಗಳಿಸಿದರು. ಸಕ್ರಿಯ ರಾಜಕೀಯ ಪ್ರವೇಶಿಸಿದ ನಂತರ ಕಿಶೋರ್ಗೆ ಲಭಿಸಿದ ಮೊದಲ ಚುನಾವಣಾ ಯಶಸ್ಸು ಇದಾಗಿದ್ದು, ಕಳೆದ ವರ್ಷದ ಚೊಚ್ಚಲ ಚುನಾವಣಾ ಹಿನ್ನಡೆಯಿಂದ ಕಂಗೆಟ್ಟಿದ್ದ ಜನ್ ಸುರಾಜ್ ಪಕ್ಷಕ್ಕೆ ಈ ಗೆಲುವು ಹೊಸ ಚೈತನ್ಯ ನೀಡಿದೆ.
► ವಿಧಾನಸಭೆಯ ಹಿನ್ನಡೆಯಿಂದ ಉಪಚುನಾವಣೆಯ ಚೇತರಿಕೆಯತ್ತ
200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗದ 2025ರ ಬಿಹಾರ ವಿಧಾನಸಭೆ ಚುನಾವಣೆಯ ನಂತರ, ಬಂಕಿಪುರ ಫಲಿತಾಂಶವು ಕಿಶೋರ್ ಅವರಿಗೆ ಪ್ರಮುಖ ರಾಜಕೀಯ ಚೇತರಿಕೆಯನ್ನು ತಂದುಕೊಟ್ಟಿದೆ. ಜನ್ ಸುರಾಜ್ ಪಾದಯಾತ್ರೆಯ ಮೂಲಕ ಸುಮಾರು ಎರಡು ವರ್ಷಗಳ ಕಾಲ ರಾಜ್ಯಾದ್ಯಂತ ಜನಸಂಪರ್ಕ ಸಾಧಿಸಿದ ನಂತರ ಆರಂಭವಾದ ಈ ಪಕ್ಷವು, ಸಾಂಪ್ರದಾಯಿಕ ಜಾತಿ ಆಧಾರಿತ ರಾಜಕೀಯಕ್ಕಿಂತ ಆಡಳಿತ ಸುಧಾರಣೆ, ಶಿಕ್ಷಣ, ಉದ್ಯೋಗ, ವಲಸೆ ತಡೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಯತ್ತ ಗಮನ ಹರಿಸಿ ಎನ್ಡಿಎ ಮತ್ತು ಮಹಾಘಟಬಂಧನ್ ಎರಡಕ್ಕೂ ಪರ್ಯಾಯವಾಗಿ ರೂಪುಗೊಂಡಿತ್ತು.
ಆದರೆ, ಈ ಬೃಹತ್ ಪ್ರಚಾರ ಅಭಿಯಾನವು ಚುನಾವಣಾ ಗೆಲುವಾಗಿ ಮಾರ್ಪಡಲು ವಿಫಲವಾಗಿತ್ತು. ಸೋಲಿನ ನಂತರ, ಪ್ರಶಾಂತ್ ಕಿಶೋರ್ ಪಕ್ಷದ ಕಳಪೆ ಸಾಧನೆಯ ಸಂಪೂರ್ಣ ಹೊಣೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. "ನಾವು ಪ್ರಾಮಾಣಿಕ ಪ್ರಯತ್ನ ಮಾಡಿದೆವು, ಆದರೆ ಅದು ಸಂಪೂರ್ಣವಾಗಿ ವಿಫಲವಾಯಿತು. ಇದನ್ನು ಒಪ್ಪಿಕೊಳ್ಳಲು ಯಾವುದೇ ಮುಜುಗರವಿಲ್ಲ. ವ್ಯವಸ್ಥಿತ ಬದಲಾವಣೆಯ ಮಾತು ಹಾಗಿರಲಿ ಅಧಿಕಾರದಲ್ಲೂ ನಮಗೆ ಬದಲಾವಣೆ ತರಲು ಸಾಧ್ಯವಾಗಲಿಲ್ಲ" ಎಂದು ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಅವರು ಹೇಳಿದ್ದರು. "ನಮ್ಮ ಶ್ರಮದಲ್ಲಿ, ನಮ್ಮ ಆಲೋಚನೆಯಲ್ಲಿ, ನಾವು ವಿಷಯಗಳನ್ನು ಜನರಿಗೆ ತಲುಪಿಸಿದ ರೀತಿಯಲ್ಲಿ ಎಲ್ಲೋ ತಪ್ಪಾಗಿದೆ. ಜನರು ನಮ್ಮ ಮೇಲೆ ನಂಬಿಕೆ ಇಡದಿದ್ದರೆ, ಅದರ ಸಂಪೂರ್ಣ ಹೊಣೆಗಾರಿಕೆ ನನ್ನದೇ ಆಗಿದೆ. ನಾನು ಅದನ್ನು 100% ನನ್ನ ಮೇಲೆಯೇ ತೆಗೆದುಕೊಳ್ಳುತ್ತೇನೆ" ಎಂದಿದ್ದರು. ಹೊಸ ರಾಜಕೀಯ ಪರ್ಯಾಯವನ್ನು ಏಕೆ ಬೆಂಬಲಿಸಬೇಕು ಎಂಬುದನ್ನು ಬಿಹಾರದ ಜನರಿಗೆ ಮನವರಿಕೆ ಮಾಡುವಲ್ಲಿ ತಾವು ವಿಫಲರಾಗಿದ್ದೇವೆ ಎಂದು ಹೇಳಿದ ಕಿಶೋರ್, ಪ್ರಾಯಶ್ಚಿತ್ತವಾಗಿ ದಿನಪೂರ್ತಿ ಮೌನವ್ರತ ಆಚರಿಸುವುದಾಗಿಯೂ ಘೋಷಿಸಿದ್ದರು. ಅದೇ ಸಮಯದಲ್ಲಿ, ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದರು. "ಕಳೆದ ಮೂರು ವರ್ಷಗಳಲ್ಲಿ ನೀವು ನೋಡಿದ್ದಕ್ಕಿಂತ ಎರಡರಷ್ಟು ಕಷ್ಟಪಟ್ಟು ಕೆಲಸ ಮಾಡುತ್ತೇನೆ.
ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಹಾರವನ್ನು ಉತ್ತಮಗೊಳಿಸುವ ನನ್ನ ಸಂಕಲ್ಪ ಈಡೇರುವವರೆಗೂ ಹಿಂತಿರುಗುವ ಮಾತಿಲ್ಲ," ಎಂದು ಅವರು ಹೇಳಿದ್ದರು.
ಬಂಕಿಪುರ ಯಾಕೆ ಮುಖ್ಯ?:
ಬಂಕಿಪುರ ಉಪಚುನಾವಣೆಯು ಬಿಜೆಪಿ ಮತ್ತು ಕಿಶೋರ್ ಇಬ್ಬರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾಗಿದ್ದು, ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಬಿಜೆಪಿಯ ರಾಜ್ಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಸಭೆಗೆ ಆಯ್ಕೆಯಾದ ನಂತರ ತೆರವಾದ ಸ್ಥಾನಕ್ಕೆ ಈ ಚುನಾವಣೆ ಅಗತ್ಯವಾಗಿತ್ತು. ಸುಮಾರು ಮೂರು ದಶಕಗಳಿಂದ ಬಂಕಿಪುರವು ಬಿಜೆಪಿಯ ಅತ್ಯಂತ ಸುರಕ್ಷಿತ ನಗರ ಕ್ಷೇತ್ರಗಳಲ್ಲಿ ಒಂದಾಗಿತ್ತು.
ನಿತಿನ್ ನಬಿನ್ ಈ ಕ್ಷೇತ್ರವನ್ನು ಪ್ರತಿನಿಧಿಸುವ ಮೊದಲು, ಅವರ ತಂದೆ ನವೀನ್ ಕಿಶೋರ್ ಪ್ರಸಾದ್ ಸಿನ್ಹಾ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಇದು ಬಿಹಾರದಲ್ಲಿ ಬಿಜೆಪಿಯ ಅತ್ಯಂತ ಬಲವಾದ ಕೋಟೆಗಳಲ್ಲಿ ಒಂದಾಗಿತ್ತು. 2025ರ ವಿಧಾನಸಭೆ ಚುನಾವಣೆಯಲ್ಲಿ ನಬಿನ್ ಅವರು 50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಈ ಕ್ಷೇತ್ರವನ್ನು ಸುಲಭವಾಗಿ ಉಳಿಸಿಕೊಂಡಿದ್ದರು.
ಕಿಶೋರ್ ಅವರಿಗೆ ಈ ಉಪಚುನಾವಣೆಯು ಕೇವಲ ಒಂದು ವಿಧಾನಸಭಾ ಕ್ಷೇತ್ರದ ಸ್ಪರ್ಧೆಗಿಂತ ಹೆಚ್ಚಿನದಾಗಿತ್ತು. ಜನ್ ಸುರಾಜ್ ಪಕ್ಷದ ನಿರಾಶಾದಾಯಕ ಚೊಚ್ಚಲ ಪ್ರವೇಶದ ನಂತರ, ವರ್ಷಗಳ ಕಾಲ ಕೆಳಹಂತದಲ್ಲಿ ಮಾಡಿದ ಸಂಘಟನಾತ್ಮಕ ಕೆಲಸವನ್ನು ನಿಜವಾದ ಚುನಾವಣಾ ಯಶಸ್ಸಾಗಿ ಪರಿವರ್ತಿಸಲು ಸಾಧ್ಯವೇ ಎಂಬುದಕ್ಕೆ ಈ ಚುನಾವಣೆ ನಿರ್ಣಾಯಕ ಪರೀಕ್ಷೆಯಾಗಿತ್ತು. ಅಲ್ಲದೆ, ಇತರ ರಾಜಕೀಯ ನಾಯಕರಿಗೆ ತೆರೆಮರೆಯಲ್ಲಿ ಚುನಾವಣಾ ತಂತ್ರ ಹೆಣೆಯುತ್ತಿದ್ದ ಕಿಶೋರ್ ಅವರಿಗೆ, ಇದು ಸ್ವತಃ ಎದುರಿಸಿದ ಮೊದಲ ನೇರ ಚುನಾವಣಾ ಕಣವಾಗಿತ್ತು.
ಚುನಾವಣಾ ತಂತ್ರಜ್ಞನಿಂದ ರಾಜಕಾರಣಿಯಾದ ಪ್ರಶಾಂತ್ ಕಿಶೋರ್:
ಖುದ್ದಾಗಿ ಚುನಾವಣಾ ರಾಜಕೀಯ ಪ್ರವೇಶಿಸುವ ಬಹು ಮುಂಚೆಯೇ, ಪ್ರಶಾಂತ್ ಕಿಶೋರ್ ಭಾರತದ ಅತ್ಯಂತ ಪ್ರಭಾವಿ ಚುನಾವಣಾ ತಂತ್ರಜ್ಞರಲ್ಲಿ ಒಬ್ಬರೆಂದು ಖ್ಯಾತರಾಗಿದ್ದರು. ತಮ್ಮ ಐ-ಪ್ಯಾಕ್ (I-PAC) ಸಂಸ್ಥೆಯ ಮೂಲಕ, ಅವರು ನರೇಂದ್ರ ಮೋದಿ, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಎಂ.ಕೆ. ಸ್ಟಾಲಿನ್, ಜಗನ್ ಮೋಹನ್ ರೆಡ್ಡಿ, ಉದ್ಧವ್ ಠಾಕ್ರೆ ಸೇರಿದಂತೆ ಹಲವು ಪಕ್ಷಗಳ ಪ್ರಮುಖ ನಾಯಕರ ಪರವಾಗಿ ಚುನಾವಣಾ ಪ್ರಚಾರ ಕಾರ್ಯತಂತ್ರಗಳನ್ನು ರೂಪಿಸಿದ್ದರು. ಚುನಾವಣಾ ತಂತ್ರಜ್ಞರಾಗಿ ಅವರ ಯಶಸ್ಸು ನಂತರ ಅವರನ್ನು ನಿತೀಶ್ ಕುಮಾರ್ ಅವರಿಗೆ ಹತ್ತಿರವಾಗಿಸಿತು. 2015 ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ಹಿಂತಿರುಗಿದ ನಂತರ ನಿತೀಶ್ ಕುಮಾರ್, ಕಿಶೋರ್ ಅವರನ್ನು ಕ್ಯಾಬಿನೆಟ್ ದರ್ಜೆಯ ಸಲಹೆಗಾರರನ್ನಾಗಿ ನೇಮಿಸಿಕೊಂಡರು. 2018 ರಲ್ಲಿ ಕಿಶೋರ್ ಅಧಿಕೃತವಾಗಿ ಜನತಾ ದಳ (ಯುನೈಟೆಡ್) ಸೇರಿದರು ಮತ್ತು ಶೀಘ್ರದಲ್ಲೇ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಬೆಳೆದರು. ಆದರೆ, ಪೌರತ್ವ (ತಿದ್ದುಪಡಿ) ಕಾಯ್ದೆ ಸೇರಿದಂತೆ ವಿವಿಧ ವಿಷಯಗಳಲ್ಲಿ ನಿತೀಶ್ ಕುಮಾರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ 2020 ರಲ್ಲಿ ಅವರನ್ನು ಜೆಡಿಯುನಿಂದ ಉಚ್ಚಾಟಿಸಲಾಯಿತು. ಸಂಘಟನಾತ್ಮಕ ಸುಧಾರಣೆಗಳ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ನೀಡಲು ಕೊಂಚ ಸಮಯ ಪ್ರಯತ್ನಿಸಿದ ನಂತರ, ಕಿಶೋರ್ ತಮ್ಮ ಗಮನವನ್ನು ಸಂಪೂರ್ಣವಾಗಿ ಬಿಹಾರದತ್ತ ಹರಿಸಿದರು. 2022 ಅಕ್ಟೋಬರ್ ನಲ್ಲಿ, ಅವರು ಜನ್ ಸುರಾಜ್ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಪೂರ್ಣಪ್ರಮಾಣದ ರಾಜಕೀಯ ಪಕ್ಷವಾಗಿ ಬದಲಾಗಬಲ್ಲ ಜನಪರ ರಾಜಕೀಯ ಚಳವಳಿಯನ್ನು ಕಟ್ಟಲು ಅವರು ರಾಜ್ಯಾದ್ಯಂತ ಪ್ರವಾಸ ಮಾಡಿದರು. ಈ ಚಳವಳಿಯು ಗಮನಾರ್ಹ ಜನಬೆಂಬಲವನ್ನು ಗಳಿಸಿದರೂ, 2025 ರ ವಿಧಾನಸಭೆ ಚುನಾವಣೆಯಲ್ಲಿ ಫಲ ನೀಡಲು ವಿಫಲವಾಗಿತ್ತು. ಇದೀಗ ಬಂಕಿಪುರ ಉಪಚುನಾವಣೆಯು ಕಿಶೋರ್ ಅವರಿಗೆ ಚುನಾವಣಾ ತಂತ್ರಜ್ಞನಾಗಿ ಅಲ್ಲದೆ, ಒಬ್ಬ ಪೂರ್ಣಪ್ರಮಾಣದ ರಾಜಕಾರಣಿಯಾಗಿ ಸಿಕ್ಕ ಮೊದಲ ಪ್ರಮುಖ ಜನಾದೇಶವಾಗಿದೆ.
ಬಿಜೆಪಿಯ ಭದ್ರಕೋಟೆಯಲ್ಲಿ ಸಿಕ್ಕ ಗೆಲುವು
ಬಂಕಿಪುರ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಹಿರಿಯ ನಾಯಕರು, ಸಚಿವರು ಮತ್ತು ಸಂಘಟನಾ ಕಾರ್ಯಕರ್ತರನ್ನು ಕಣಕ್ಕಿಳಿಸಿ ಬೃಹತ್ ಪ್ರಚಾರ ಅಭಿಯಾನವನ್ನೇ ನಡೆಸಿತ್ತು.
ಪಕ್ಷದ ತೀವ್ರ ಪ್ರಯತ್ನದ ನಡುವೆಯೂ, ಬಿಜೆಪಿಯ ಅತ್ಯಂತ ಸುರಕ್ಷಿತ ಕ್ಷೇತ್ರಗಳಲ್ಲಿ ಒಂದನ್ನು ಕಸಿದುಕೊಳ್ಳುವಲ್ಲಿ ಕಿಶೋರ್ ಯಶಸ್ವಿಯಾಗಿದ್ದಾರೆ. ಈ ಫಲಿತಾಂಶವು ವಿಧಾನಸಭೆಯ ಬಲಾಬಲದ ಲೆಕ್ಕಾಚಾರವನ್ನು ಬದಲಾಯಿಸುವುದಿಲ್ಲವಾದರೂ, ಜನ್ ಸುರಾಜ್ ಕೇವಲ ಚುನಾವಣಾ ಬೆಂಬಲವಿಲ್ಲದ ರಾಜಕೀಯ ಚಳವಳಿಯಷ್ಟೇ ಎಂಬ ಅಭಿಪ್ರಾಯವನ್ನು ಮುರಿದುಹಾಕಿರುವುದರಿಂದ ಪ್ರಮುಖ ಎನಿಸಿದೆ. ಜೊತೆಗೆ, ಇದು ಕಿಶೋರ್ ಅವರನ್ನು ಮೊದಲ ಬಾರಿಗೆ ಶಾಸಕರನ್ನಾಗಿ ಮಾಡಿದೆ. ಒಂದು ಕ್ಷೇತ್ರದ ಗೆಲುವಿಗಿಂತ ಹೆಚ್ಚಾಗಿ, ಈ ಯಶಸ್ಸು ಜನ್ ಸುರಾಜ್ ಪಕ್ಷಕ್ಕೆ ಸಾಂಸ್ಥಿಕ ಮಾನ್ಯತೆಯನ್ನು ತಂದುಕೊಟ್ಟಿದೆ. ಪಕ್ಷವೀಗ ಬಿಹಾರ ವಿಧಾನಸಭೆಯೊಳಗೆ ಅಧಿಕೃತ ಧ್ವನಿಯನ್ನು ಹೊಂದಲಿದ್ದು, ಮುಂಬರುವ ಚುನಾವಣೆಗಳಿಗೆ ಮುನ್ನ ತನ್ನ ಸಂಘಟನಾತ್ಮಕ ಅಸ್ತಿತ್ವವನ್ನು ಬಲಪಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. 2025 ರ ವಿಧಾನಸಭೆ ಚುನಾವಣೆಯ ನಂತರ ಬೆಂಬಲಿಸಲು ಹಿಂಜರಿಯುತ್ತಿದ್ದ ಮತದಾರರಲ್ಲಿ ವಿಶ್ವಾಸ ಮೂಡಿಸಲು ಮತ್ತು ಹೆಚ್ಚಿನ ನಾಯಕರು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಈ ಫಲಿತಾಂಶ ಪ್ರೇರಣೆಯಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಭಾವಿಸಿದ್ದಾರೆ. ಒಂದು ಉಪಚುನಾವಣೆಯು ಕಳೆದ ವರ್ಷದ ಚುನಾವಣಾ ಸೋಲಿನ ನಿರಾಸೆಯನ್ನು ಪೂರ್ತಿಯಾಗಿ ಅಳಿಸಿಹಾಕುವುದಿಲ್ಲವಾದರೂ, ಜನ್ ಸುರಾಜ್ ಕುರಿತ ರಾಜಕೀಯ ಚಿತ್ರಣವನ್ನು - ಅಂದರೆ ವಿಫಲ ಹೊಸಬರ ಪಕ್ಷ ಎಂಬ ಅಭಿಪ್ರಾಯದಿಂದ ಬಿಹಾರದ ಪ್ರಮುಖ ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಪಕ್ಷವಾಗಿ ಬದಲಾಯಿಸಿದೆ.
ಬಿಜೆಪಿ ನಾಯಕತ್ವಕ್ಕೆ ಸ್ಪಷ್ಟ ಸಂದೇಶ:
ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ, ಕಿಶೋರ್ ಈ ಉಪಚುನಾವಣೆಯನ್ನು ಕೇವಲ ಒಂದು ಕ್ಷೇತ್ರದ ಸ್ಪರ್ಧೆಗಿಂತ ದೊಡ್ಡದು ಎಂದು ಬಣ್ಣಿಸಿದ್ದರು. "ಬಿಹಾರದ ಜನರಿಗೆ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಸಂದೇಶವನ್ನು ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ತಲುಪಿಸಲು ಬಿಹಾರದ ಜನತೆ ಮಾಡಿದ ಪ್ರಯತ್ನ ಇದಾಗಿದೆ" ಎಂದಿದ್ದರು ಅವರು. ಜನ್ ಸುರಾಜ್ ಕೂಡ ಈ ಫಲಿತಾಂಶವನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಂಭ್ರಮಿಸಿದ್ದು, "ಪ್ರಜಾಪ್ರಭುತ್ವದಲ್ಲಿ ಕೋಟೆ ಎಂಬುದು ಜನರಿಗೆ ಮಾತ್ರ ಸೇರಿದ್ದು. ಧನ್ಯವಾದಗಳು ಬಂಕಿಪುರ — ಇದು ನಿಮ್ಮ ಗೆಲುವು," ಎಂದು ಬರೆದುಕೊಂಡಿದೆ.
ಒಂದು ರಾಜಕೀಯ ಮೈಲುಗಲ್ಲು:
ಅಂದಹಾಗೆ ಬಂಕಿಪುರ ಉಪಚುನಾವಣೆಯು ಬಿಹಾರದ ರಾಜಕೀಯ ಲೆಕ್ಕಾಚಾರವನ್ನು ರಾತ್ರೋರಾತ್ರಿ ಬದಲಾಯಿಸುವುದಿಲ್ಲ.
122 ಸ್ಥಾನಗಳನ್ನು ಹೊಂದಿರುವ ಎನ್ಡಿಎ, ವಿಧಾನಸಭೆಯಲ್ಲಿ ಇಂದಿಗೂ ಸುಲಭ ಬಹುಮತವನ್ನು ಹೊಂದಿದೆ. ಆದರೆ ರಾಜಕೀಯವಾಗಿ ಈ ಫಲಿತಾಂಶವು ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇತರ ನಾಯಕರ ಗೆಲುವಿನ ಹಿಂದಿನ ತಂತ್ರಜ್ಞ ಎಂದೇ ವರ್ಷಗಳ ಕಾಲ ಗುರುತಿಸಿಕೊಂಡಿದ್ದ ಮತ್ತು 2025 ರ ಚೊಚ್ಚಲ ಚುನಾವಣೆಯಲ್ಲಿ ನಿರಾಶಾದಾಯಕ ಹಿನ್ನಡೆ ಅನುಭವಿಸಿದ್ದ ಪ್ರಶಾಂತ್ ಕಿಶೋರ್, ಕೊನೆಗೂ ತಮ್ಮದೇ ಆದ ಸ್ವಂತ ಜನಾದೇಶವನ್ನು ಪಡೆದುಕೊಂಡಿದ್ದಾರೆ.
"ಚುನಾವಣೆಯಲ್ಲಿ ಸೋತವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ಪ್ರಜಾಪ್ರಭುತ್ವ. ಇಲ್ಲಿ ಗೆಲುವು-ಸೋಲು ಸಹಜ. ಆದರೆ ಬಂಕಿಪುರ ಚುನಾವಣೆಯು ಕೇವಲ ಒಬ್ಬ ಶಾಸಕನನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಾಗಿರಲಿಲ್ಲ. ಈ ಚುನಾವಣೆಯು ಬಿಜೆಪಿ-ಎನ್ಡಿಎ ಸರ್ಕಾರ ಮತ್ತು ಅದರ ನಾಯಕತ್ವವನ್ನು ನಿರ್ಧರಿಸಲು ನಡೆದಿದ್ದಾಗಿತ್ತು. ಬಿಜೆಪಿಯ ಕೇಂದ್ರ ನಾಯಕತ್ವವು ಈ ಫಲಿತಾಂಶವನ್ನು ಪರಿಗಣಿಸಬೇಕು ಹಾಗೂ ಬಿಹಾರದ ಹಿತದೃಷ್ಟಿಯಿಂದ ಬಿಹಾರದ ಅಧಿಕಾರವನ್ನು ಒಬ್ಬ ಒಳ್ಳೆಯ ವ್ಯಕ್ತಿಯ ಕೈಗೆ ಒಪ್ಪಿಸಬೇಕು ಎಂದು ಬ್ಯಾಂಕಿಪುರದ ಜನತೆ ಮತ ನೀಡಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಕೃಪೆ: Times of India






