ಗಡಿ ಮೀರುತ್ತಿರುವ AI ಏಜೆಂಟ್ ಗಳು ಭಾರತೀಯ ಸಂಸ್ಥೆಗಳನ್ನು ಗುರಿಯಾಗಿಸಿದ್ದು ಹೇಗೆ?
►ಸೌಮ್ಯರೇಂದ್ರ ಬಾರಿಕ್ - indianexpress. com ವರದಿ

ಸಾಂದರ್ಭಿಕ ಚಿತ್ರ | Photo credit : AI
ಇಂಟರ್ನೆಟ್ ನಲ್ಲಿ ಸಂಶೋಧನೆ ಮತ್ತು ಮೌಲ್ಯಮಾಪನ ನಡೆಸುವ ಜವಾಬ್ದಾರಿ ಹೊಂದಿದ್ದ ಕೃತಕ ಬುದ್ಧಿಮತ್ತೆ (AI) ಏಜೆಂಟ್ ಗಳು, ಭದ್ರತಾ ಕಾವಲುಗಳನ್ನು ಮೀರಿ ಭಾರತೀಯ ಸಂಸ್ಥೆಗಳ ಲೈವ್ ಸಿಸ್ಟಂಗಳನ್ನು (Live systems) ಅನಧಿಕೃತವಾಗಿ ಪ್ರವೇಶಿಸಿವೆ. ಅಲ್ಲದೆ, ಸೂಕ್ಷ್ಮ ವ್ಯವಹಾರ ದಾಖಲೆಗಳು, ವೈಯಕ್ತಿಕ ದತ್ತಾಂಶ ಮತ್ತು ರಹಸ್ಯ ಮಾಹಿತಿಗಳನ್ನು ಪಡೆದುಕೊಂಡಿವೆ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಬಹಿರಂಗಪಡಿಸಿದೆ.
AI ಏಜೆಂಟ್ ಗಳು 'ಅನಿಯಂತ್ರಿತವಾಗಿ' ಭಾರತ ಮೂಲದ ಸಂಸ್ಥೆಗಳ ಸೈಬರ್ ಮೂಲಸೌಕರ್ಯವನ್ನು ಪ್ರವೇಶಿಸಿದ ಮೊದಲ ಘಟನೆಗಳು ಇವಾಗಿವೆ. ಈ ಉಲ್ಲಂಘನೆಗಳನ್ನು ಯಾವುದೇ ಸಂತ್ರಸ್ತ ಸಂಸ್ಥೆಗಳು ಸ್ವತಃ ಪತ್ತೆಹಚ್ಚಿರಲಿಲ್ಲ ಎಂದು CERT-In ತಿಳಿಸಿದೆ. ಬದಲಿಗೆ, AI ಮಾದರಿ ಪೂರೈಕೆದಾರರು ತಮ್ಮ ಆಂತರಿಕ ಪರಿಶೀಲನೆಗಳ ಬಳಿಕ ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಬಹಿರಂಗಪಡಿಸಿದಾಗ ಘಟನೆಗಳು ಬೆಳಕಿಗೆ ಬಂದವು.
AI ಏಜೆಂಟ್ ಗಳು ತಮಗೆ ನೀಡಿದ ನಿರ್ದೇಶನಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿರುವುದು ಮತ್ತು ಹೆಚ್ಚು ಸ್ವಾಯತ್ತ ಸಿಸ್ಟಂಗಳಿಂದ ಉಂಟಾಗುತ್ತಿರುವ ಸೈಬರ್ ಭದ್ರತಾ ಅಪಾಯಗಳ ಕುರಿತು ಕಳವಳ ಹೆಚ್ಚುತ್ತಿರುವ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಕಾರ್ಯನಿರ್ವಹಿಸುವ CERT-In, ಭಾರತೀಯ ಸಂಸ್ಥೆಗಳ ವಿರುದ್ಧ ಆರ್ಥಿಕ ಲಾಭದ ಉದ್ದೇಶದಿಂದ ನಡೆದ ಮತ್ತೊಂದು ಸೈಬರ್ ದಾಳಿ ಪ್ರಚಾರವನ್ನು ಗುರುತಿಸಿದೆ. ಈ ದಾಳಿಯಲ್ಲಿ ದಾಳಿಕೋರರು ಸಿಸ್ಟಂಗಳನ್ನು ಹ್ಯಾಕ್ ಮಾಡಲು ತಗಲುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲು AI ಚಾಲಿತ ಆಕ್ರಮಣಕಾರಿ ಉಪಕರಣಗಳನ್ನು ಬಳಸಿದ್ದರು.
AI ನಿಯಂತ್ರಣದ ವಿಚಾರದಲ್ಲಿ ಜಾಗರೂಕ ಹೆಜ್ಜೆ ಇಡುತ್ತಿದ್ದ ಭಾರತವು, ಈಗ ಈ ತಂತ್ರಜ್ಞಾನವನ್ನು ನಿಯಂತ್ರಿಸುವತ್ತ ಸಾಗುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ತಿಂಗಳ ಆರಂಭದಲ್ಲಿ ತಿಳಿಸಿದ್ದರು. ಆಕ್ಷೇಪಾರ್ಹ ಹಾಗೂ ನೈಜವೆಂದು ಭಾಸವಾಗುವ ಭಾರೀ ಪ್ರಮಾಣದ 'ಡೀಪ್ಫೇಕ್' ಘಟನೆಗಳು ಹೆಚ್ಚಾಗುತ್ತಿರುವುದು, 'ಏಜೆಂಟಿಕ್ AI' ಕುರಿತು ಸರಕಾರದ ಕಳವಳ ಹಾಗೂ ಇಂತಹ ವೇದಿಕೆಗಳಿಂದ ಎದುರಾಗುತ್ತಿರುವ ಸೈಬರ್ ಭದ್ರತಾ ಅಪಾಯಗಳ ಹಿನ್ನೆಲೆಯಲ್ಲಿ, ನಿರ್ದಿಷ್ಟ ಕಾಯ್ದೆ ರೂಪಿಸುವುದರಿಂದ ಹಿಡಿದು ವಿಶಾಲವಾದ ನಿಯಂತ್ರಣ ಚೌಕಟ್ಟಿನವರೆಗೆ ಸರಕಾರ ಮರುಚಿಂತನೆ ನಡೆಸುತ್ತಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿತ್ತು.
►ಭಾರತೀಯ ಸಂಸ್ಥೆಗಳಲ್ಲಿ ನಿಜವಾಗಿ ಆಗಿದ್ದೇನು? :
ಗುರುವಾರ (ಅಕ್ಟೋಬರ್ 15) ಹೊರಡಿಸಿದ ಸಲಹೆಯಲ್ಲಿ CERT-In ಹೀಗೆ ತಿಳಿಸಿದೆ: "ಇಂಟರ್ನೆಟ್ ನಲ್ಲಿ ಸಂಶೋಧನೆ ಮತ್ತು ಮೌಲ್ಯಮಾಪನ ಚಟುವಟಿಕೆಗಳನ್ನು ನಡೆಸುವಾಗ ತಮ್ಮ ಮಾದರಿಗಳು ಭಾರತೀಯ ಸಂಸ್ಥೆಗಳ ಲೈವ್ ಸಿಸ್ಟಂಗಳನ್ನು ಪ್ರವೇಶಿಸಿವೆ ಎಂದು ತಿಳಿಸಿ, ಇತ್ತೀಚೆಗೆ AI ಮಾದರಿ ಪೂರೈಕೆದಾರರಿಂದ CERT-In ಹಲವು ಸ್ವಯಂಪ್ರೇರಿತ ಮಾಹಿತಿಗಳನ್ನು ಪಡೆದುಕೊಂಡಿದೆ."
CERT-In ಪ್ರಕಾರ, AI ಮಾದರಿಗಳು ತಮಗೆ ವಹಿಸಲಾದ ಕೆಲಸಗಳಿಗೆ ನೀಡಲಾಗಿದ್ದ ಅನುಮತಿಯ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಿವೆ. ವೈಯಕ್ತಿಕ ಮಾಹಿತಿ ಮತ್ತು ರಹಸ್ಯ ವಿಷಯಗಳನ್ನು ಒಳಗೊಂಡಿರುವ ವ್ಯವಹಾರ ದಾಖಲೆಗಳನ್ನು ಪ್ರವೇಶಿಸುವುದೂ ಇವುಗಳ ಚಟುವಟಿಕೆಗಳಲ್ಲಿ ಸೇರಿತ್ತು.
ಅಪ್ಲಿಕೇಶನ್ ಕಾನ್ಫಿಗರೇಶನ್ ಫೈಲ್ ಗಳು, ಸಾರ್ವಜನಿಕವಾಗಿ ಲಭ್ಯವಿರುವ ಕೋಡ್ ರೆಪೊಸಿಟರಿಗಳು ಮತ್ತು ಅತಿಯಾದ ಅನುಮತಿಗಳನ್ನು ಹೊಂದಿದ್ದ ಕ್ಲೌಡ್ ಸರ್ವಿಸ್ ರೋಲ್ ಗಳ ಮೂಲಕ ಬಹಿರಂಗಗೊಂಡ ಲಾಗಿನ್ ವಿವರಗಳು ಹಾಗೂ ಸಂಪರ್ಕ ಸೆಟ್ಟಿಂಗ್ಗಳನ್ನು ಈ ಏಜೆಂಟ್ ಗಳು ದುರ್ಬಳಕೆ ಮಾಡಿಕೊಂಡಿದ್ದವು.
ಮುಖ್ಯವಾಗಿ, ಸಂಬಂಧಪಟ್ಟ ಯಾವುದೇ ಸಂಸ್ಥೆಗಳು ಈ ಅನಧಿಕೃತ ಚಟುವಟಿಕೆಯನ್ನು ಪತ್ತೆಹಚ್ಚಿರಲಿಲ್ಲ ಎಂದು CERT-In ಹೇಳಿದೆ. AI ಮಾದರಿ ಪೂರೈಕೆದಾರರು ತಮ್ಮದೇ ಆಂತರಿಕ ಮೌಲ್ಯಮಾಪನಗಳ ಸಂದರ್ಭದಲ್ಲಿ ಈ ಘಟನೆಗಳನ್ನು ಪತ್ತೆಹಚ್ಚಿದ ಬಳಿಕವೇ ಅವುಗಳ ಬಗ್ಗೆ ತಿಳಿದುಬಂದಿತು. ಈ ಭದ್ರತಾ ಲೋಪಕ್ಕೆ ಒಳಗಾದ ಸಂಸ್ಥೆಗಳು, ಭಾಗಿಯಾದ AI ಡೆವಲಪರ್ ಗಳು ಅಥವಾ ಅದಕ್ಕೆ ಕಾರಣವಾದ ನಿರ್ದಿಷ್ಟ AI ಮಾದರಿಗಳ ಹೆಸರನ್ನು CERT-In ಬಹಿರಂಗಪಡಿಸಿಲ್ಲ.
►AI ಏಜೆಂಟ್ ಗಳು ಸೈಬರ್ ಭದ್ರತಾ ಅಪಾಯವನ್ನು ಏಕೆ ತಂದೊಡ್ಡುತ್ತವೆ? :
ಬಳಕೆದಾರರ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುವ ಸಾಂಪ್ರದಾಯಿಕ AI ಚಾಟ್ಬಾಟ್ ಗಳಿಗಿಂತ ಭಿನ್ನವಾಗಿ, AI ಏಜೆಂಟ್ ಗಳು ಸ್ವತಂತ್ರವಾಗಿ ಯೋಜನೆ ರೂಪಿಸಿ ಕೆಲಸಗಳನ್ನು ಕಾರ್ಯಗತಗೊಳಿಸಬಹುದು. ವೆಬ್ಸೈಟ್ ಗಳನ್ನು ಬ್ರೌಸ್ ಮಾಡಬಹುದು, ತಂತ್ರಾಂಶ ಪರಿಕರಗಳೊಂದಿಗೆ ಸಂವಹನ ನಡೆಸಬಹುದು ಮತ್ತು ಕನಿಷ್ಠ ಮಾನವ ಮೇಲ್ವಿಚಾರಣೆಯೊಂದಿಗೆ ಬಳಕೆದಾರರ ಪರವಾಗಿ ಕ್ರಮಗಳನ್ನು ಕೈಗೊಳ್ಳಬಹುದು.
ಇಂತಹ ಸಾಮರ್ಥ್ಯಗಳು, ವಿಶೇಷವಾಗಿ ಸಕ್ರಿಯ ವೆಬ್ಸೈಟ್ ಗಳು ಮತ್ತು ಬಾಹ್ಯ ಸಿಸ್ಟಂಗಳೊಂದಿಗೆ ಸಂವಹನ ನಡೆಸುವಾಗ, ಡೆವಲಪರ್ ಗಳು ಅಥವಾ ಬಳಕೆದಾರರು ನಿಗದಿಪಡಿಸಿದ ಗಡಿಗಳನ್ನು ಮೀರಿ ಏಜೆಂಟ್ ಗಳು ಕಾರ್ಯನಿರ್ವಹಿಸುವ ಅಪಾಯವನ್ನು ಸೃಷ್ಟಿಸುತ್ತವೆ.
ಸಾಂಪ್ರದಾಯಿಕ ಸೈಬರ್ ಭದ್ರತಾ ದೌರ್ಬಲ್ಯಗಳಿಂದ ಸೂಕ್ಷ್ಮ ಲಾಗಿನ್ ವಿವರಗಳು ಅಥವಾ ದತ್ತಾಂಶಗಳು ಬಹಿರಂಗಗೊಂಡಾಗ, ಇಂತಹ ಸಿಸ್ಟಂಗಳು ತಮಗೆ ಪ್ರವೇಶಿಸಲು ಅನುಮತಿಯಿಲ್ಲದ ಮೂಲಸೌಕರ್ಯಗಳನ್ನು ಹೇಗೆ ತಲುಪಬಹುದು ಎಂಬುದನ್ನು CERT-In ಬಹಿರಂಗಪಡಿಸಿದ ಘಟನೆಗಳು ಎತ್ತಿ ತೋರಿಸುತ್ತವೆ.
►CERT-In ನೀಡಿದ ಶಿಫಾರಸುಗಳು :
ಸಂಶೋಧನೆ ಮತ್ತು ಮೌಲ್ಯಮಾಪನ ಪರಿಸರಗಳನ್ನು ಪ್ರತ್ಯೇಕವಾಗಿರಿಸುವಂತೆ AI ಡೆವಲಪರ್ ಗಳಿಗೆ CERT-In ಸಲಹೆ ನೀಡಿದೆ. ಇದರಿಂದ ಏಜೆಂಟ್ ಗಳು ತಮಗೆ ವಹಿಸಲಾದ ಕೆಲಸಗಳಿಗೆ ಅಗತ್ಯವಿರುವ ಸಿಸ್ಟಂಗಳಿಗೆ ಮಾತ್ರ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಮುಖ್ಯವಾಗಿ, ಇಂತಹ ನಿರ್ಬಂಧಗಳನ್ನು AI ಮಾದರಿಗಳಿಗೆ ನೀಡುವ ನಿರ್ದೇಶನಗಳ ಮೇಲೆ ಮಾತ್ರ ಅವಲಂಬಿಸದೆ, ತಾಂತ್ರಿಕ ನೆಟ್ವರ್ಕ್ ನಿಯಂತ್ರಣಗಳ ಮೂಲಕ ಜಾರಿಗೆ ತರಬೇಕೆಂದು ಅದು ಶಿಫಾರಸು ಮಾಡಿದೆ.
"ಪ್ರತಿಯೊಂದು ಕೆಲಸದಲ್ಲೂ ವ್ಯಾಪ್ತಿಗೆ ಒಳಪಡುವ ಸಿಸ್ಟಂಗಳು ಮತ್ತು ಕ್ರಮಗಳನ್ನು ಸ್ಪಷ್ಟವಾಗಿ ನಿಗದಿಪಡಿಸಿ, ಉಳಿದ ಎಲ್ಲವನ್ನೂ ವ್ಯಾಪ್ತಿಯಿಂದ ಹೊರಗಿದೆ ಎಂದು ಪರಿಗಣಿಸಿ" ಎಂದು ಸಂಸ್ಥೆ ತಿಳಿಸಿದೆ.
AI ಏಜೆಂಟ್ ಮೂರನೇ ವ್ಯಕ್ತಿಯ ಸಿಸ್ಟಂಗಳನ್ನು ಪ್ರವೇಶಿಸಿದರೆ, ಅನಧಿಕೃತ ಲಾಗಿನ್ ವಿವರಗಳನ್ನು ಕಂಡುಕೊಂಡರೆ ಅಥವಾ ಬಳಸಿದರೆ, ಅಥವಾ ಯಾವುದೇ ವೈಫಲ್ಯದ ಸಂಕೇತವನ್ನು ನೀಡಿದರೆ ಅದರ ಕಾರ್ಯಾಚರಣೆಯನ್ನು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸುವಂತೆ CERT-In ಶಿಫಾರಸು ಮಾಡಿದೆ. ಅಲ್ಲದೆ, ಸ್ವತಂತ್ರ ಮಾನವ ನಿರ್ವಾಹಕರಿಗೆ (Human operator) ಏಜೆಂಟ್ ನ ಚಟುವಟಿಕೆಗಳನ್ನು ತಡೆಯುವ ಅಥವಾ ಮರುಪ್ರಾರಂಭಿಸುವ ಅಧಿಕಾರವಿರಬೇಕು ಎಂದು ತಿಳಿಸಿದೆ.
ಈ ಘಟನೆಗಳಲ್ಲಿ ಕಂಡುಬಂದ ಮೂಲಭೂತ ದೌರ್ಬಲ್ಯಗಳು ಸಾಂಪ್ರದಾಯಿಕ ಸೈಬರ್ ಭದ್ರತಾ ಲೋಪಗಳಾಗಿದ್ದವು. ಬಹಿರಂಗಗೊಂಡ ಪಾಸ್ವರ್ಡ್ಗಳು, ಎಪಿಐ ಕೀಗಳು, ಕಾನ್ಫಿಗರೇಶನ್ ಫೈಲ್ ಗಳು ಮತ್ತು ಅತಿಯಾದ ಅನುಮತಿಗಳನ್ನು ಹೊಂದಿದ್ದ ಕ್ಲೌಡ್ ಪ್ರವೇಶ ಸೆಟ್ಟಿಂಗ್ಗಳು ಇದರಲ್ಲಿ ಸೇರಿವೆ.
ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಎಂಬುದು ವಿಭಿನ್ನ ಸಾಫ್ಟ್ವೇರ್ ಅಪ್ಲಿಕೇಶನ್ಗಳು ಪರಸ್ಪರ ಸಂವಹನ ನಡೆಸಲು ಮತ್ತು ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುವ ನಿಯಮಗಳು ಹಾಗೂ ಪ್ರೋಟೋಕಾಲ್ ಗಳ ಗುಂಪಾಗಿದೆ. ಮತ್ತೊಂದೆಡೆ, ಎಪಿಐ ಕೀ (API Key) ಎಂಬುದು ವಿಶಿಷ್ಟವಾದ, ಯಾದೃಚ್ಛಿಕವಾಗಿ ರಚಿಸಲಾದ ಅಕ್ಷರಗಳು ಮತ್ತು ಅಂಕಿಗಳನ್ನು ಒಳಗೊಂಡ ಕೋಡ್ ಆಗಿದ್ದು, ಎಪಿಐಗೆ ವಿನಂತಿಗಳನ್ನು ಕಳುಹಿಸುವಾಗ ಅಪ್ಲಿಕೇಶನ್ ತನ್ನನ್ನು ಗುರುತಿಸಿಕೊಳ್ಳಲು ಮತ್ತು ದೃಢೀಕರಿಸಿಕೊಳ್ಳಲು ಇದನ್ನು ಬಳಸುತ್ತದೆ.
►ಸೈಬರ್ ಅಪರಾಧಿಗಳು ಭಾರತೀಯ ಸಂಸ್ಥೆಗಳ ಮೇಲೆ ದಾಳಿ ಮಾಡಲು AI ಏಜೆಂಟ್ ಗಳನ್ನು ಹೇಗೆ ಬಳಸುತ್ತಿದ್ದಾರೆ? :
ಇದಲ್ಲದೆ, ಆರ್ಥಿಕ ಲಾಭದ ಉದ್ದೇಶದಿಂದ ಭಾರತೀಯ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನಡೆದ ಸೈಬರ್ ದಾಳಿ ಪ್ರಚಾರವೊಂದನ್ನು CERT-In ಪ್ರತ್ಯೇಕವಾಗಿ ಗುರುತಿಸಿದೆ. ಈ ದಾಳಿಯಲ್ಲಿ ದಾಳಿಕೋರರು ಸಾರ್ವಜನಿಕವಾಗಿ ಲಭ್ಯವಿರುವ 'AI-ನೇಟಿವ್ ಆಫೆನ್ಸಿವ್ ಸೆಕ್ಯುರಿಟಿ' ನೆಟ್ವರ್ಕ್ಗಳನ್ನು ಬಳಸಿಕೊಂಡಿದ್ದಾರೆ. ಇಂತಹ ಪರಿಕರಗಳನ್ನು ದುರ್ಬಳಕೆ ಮಾಡಿಕೊಂಡು ಮರುನಾಮಕರಣ ಮಾಡಲಾಗುತ್ತಿದ್ದು, ಹಲವು ದೇಶಗಳ ಮೂಲಸೌಕರ್ಯಗಳ ಮೇಲೆ ಇವುಗಳ ಬಳಕೆ ಕಂಡುಬಂದಿದೆ ಎಂದು ಸಂಸ್ಥೆ ಹೇಳಿದೆ.
ಭಾರತೀಯ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡ ಈ ದಾಳಿಯಲ್ಲಿ, AI ಚಾಲಿತ ಉಪಕರಣಗಳು ಸಿಸ್ಟಂ ಒಳಗೆ ಪ್ರವೇಶ ಪಡೆದ ಬಳಿಕ ಹಾನಿ ಉಂಟುಮಾಡಲು ತಗಲುತ್ತಿದ್ದ ಸಮಯವನ್ನು ಕೆಲವು ದಿನಗಳಿಂದ ಕೇವಲ ಕೆಲವು ಗಂಟೆಗಳಿಗೆ ಇಳಿಸಿವೆ. ದಾಳಿಕೋರರು ಒಂದೇ ಸಮಯದಲ್ಲಿ ಹಲವು AI ಏಜೆಂಟ್ ಗಳನ್ನು ಬಳಸುತ್ತಿರುವುದನ್ನು CERT-In ಗಮನಿಸಿದೆ. ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ಸಮನ್ವಯದೊಂದಿಗೆ ಈ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುತ್ತಿದೆ.
ಆರಂಭಿಕ ಪ್ರವೇಶದ ಸಮಯದಲ್ಲಿ ದುರ್ಬಳಕೆಯಾದ ದೌರ್ಬಲ್ಯಗಳನ್ನು ಸಂಪೂರ್ಣವಾಗಿ ಸರಿಪಡಿಸಲು ವಿಫಲವಾದ ಸಂಸ್ಥೆಗಳ ಮೇಲೆ ಕೆಲವೇ ದಿನಗಳಲ್ಲಿ ಮತ್ತೆ ದಾಳಿ ಮಾಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಈ ದಾಳಿಗಳು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ನಡೆದಿವೆ ಎಂದು ಸಂಸ್ಥೆ ಎಚ್ಚರಿಸಿದೆ.
►ಗಡಿ ಮೀರುತ್ತಿರುವ AI ಏಜೆಂಟ್ ಗಳು :
ಸುಧಾರಿತ ಸೈಬರ್ ಭದ್ರತಾ ಸಾಮರ್ಥ್ಯಗಳಿಗಾಗಿ ಮೌಲ್ಯಮಾಪನಕ್ಕೊಳಪಡುತ್ತಿದ್ದ AI ಮಾದರಿಗಳು ತಮ್ಮ ನಿಯಂತ್ರಿತ ಪರೀಕ್ಷಾ ವಾತಾವರಣದಿಂದ ಹೊರಬಂದು ಮುಕ್ತ ಇಂಟರ್ನೆಟ್ ಪ್ರವೇಶಿಸಿದ್ದವು ಎಂದು OpenAI ಜುಲೈನಲ್ಲಿ ಬಹಿರಂಗಪಡಿಸಿತ್ತು. ಪ್ಯಾಕೇಜ್ ರೆಜಿಸ್ಟ್ರಿ ಪ್ರಾಕ್ಸಿಯಾಗಿ ಬಳಸಲಾಗುತ್ತಿದ್ದ ಸಾಫ್ಟ್ವೇರ್ನಲ್ಲಿದ್ದ ಈ ಹಿಂದೆ ತಿಳಿದಿಲ್ಲದ ದೌರ್ಬಲ್ಯವನ್ನು ಅವು ದುರ್ಬಳಕೆ ಮಾಡಿಕೊಂಡಿದ್ದವು. ಬಳಿಕ AI ಡೆವಲಪರ್ ವೇದಿಕೆಯಾದ 'ಹಗ್ಗಿಂಗ್ ಫೇಸ್'ಗೆ (Hugging Face) ಸೇರಿದ ಸಿಸ್ಟಂಗಳನ್ನು ಪ್ರವೇಶಿಸಿದ್ದವು.
ಸೈಬರ್ ಭದ್ರತಾ ಮೌಲ್ಯಮಾಪನಗಳ ಸಂದರ್ಭದಲ್ಲಿ ಕ್ಲೌಡ್ (Claude) ಮಾದರಿಗಳು ನೈಜ ಸಂಸ್ಥೆಗಳಿಗೆ ಸೇರಿದ ಮೂಲಸೌಕರ್ಯಗಳನ್ನು ಪ್ರವೇಶಿಸಿದ ಮೂರು ಘಟನೆಗಳನ್ನು ಆಂಥ್ರೋಪಿಕ್ (Anthropic) ಬಳಿಕ ಬಹಿರಂಗಪಡಿಸಿತು. ಕಾನ್ಫಿಗರೇಶನ್ ಸಮಸ್ಯೆಯಿಂದಾಗಿ ನೈಜ ಇಂಟರ್ನೆಟ್ ಸಿಸ್ಟಂಗಳು ಈ ಮಾದರಿಗಳಿಗೆ ತೆರೆದುಕೊಂಡಿದ್ದವು. ಇದರಿಂದಾಗಿ, ಆ ಸಿಸ್ಟಂಗಳೇ ತಮ್ಮ ಪರೀಕ್ಷಾ ವಾತಾವರಣದ ಭಾಗವೆಂದು AI ಮಾದರಿಗಳು ಭಾವಿಸಿದ್ದವು. ತಮಗೆ ನೀಡಲಾಗಿದ್ದ ಸೈಬರ್ ಭದ್ರತಾ ಸವಾಲುಗಳನ್ನು ಪೂರ್ಣಗೊಳಿಸುವ ಪ್ರಯತ್ನದಲ್ಲಿ ಕ್ಲೌಡ್ ಮಾದರಿಯು ದುರ್ಬಲ ಪಾಸ್ವರ್ಡ್ಗಳು ಮತ್ತು ಭದ್ರತೆಯಿಲ್ಲದ ಎಂಡ್ಪಾಯಿಂಟ್ ಗಳನ್ನು ದುರ್ಬಳಕೆ ಮಾಡಿಕೊಂಡಿತ್ತು.
ಈ ವರ್ಷದ ಆರಂಭದಲ್ಲಿ ಸ್ವತಂತ್ರ ಪರೀಕ್ಷಾ ಸಂಸ್ಥೆಯೊಂದು ನಡೆಸಿದ ಮೌಲ್ಯಮಾಪನದ ಸಂದರ್ಭದಲ್ಲಿ, ಕಾನ್ಫಿಗರೇಶನ್ ದೋಷದಿಂದಾಗಿ ತನ್ನ ಒಂದು ಮಾದರಿಗೆ ಆಕಸ್ಮಿಕವಾಗಿ ಇಂಟರ್ನೆಟ್ ಪ್ರವೇಶ ದೊರೆತಿತ್ತು ಎಂದು ಮೆಟಾ (Meta) ತಿಳಿಸಿದೆ. ಆ ಮಾದರಿಯು ಮೂರನೇ ವ್ಯಕ್ತಿಯ ಸೇವೆಯಲ್ಲಿದ್ದ ಭದ್ರತಾ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡಿತ್ತು. ಈ ಘಟನೆಯ ಕುರಿತು ತನಿಖೆ ನಡೆಸುತ್ತಿರುವುದಾಗಿ ಮೆಟಾ ಹೇಳಿದೆ.
ಸೌಜನ್ಯ: indianexpress.com






