ಸೆರ್ಬಿಯಾದ ವಿದ್ಯಾರ್ಥಿ ಚಳವಳಿಯು ಕೇವಲ ಎರಡೇ ವರ್ಷಗಳಲ್ಲಿ ರಾಷ್ಟ್ರೀಯ ಚುನಾವಣೆ ಗೆದ್ದಿದ್ದು ಹೇಗೆ?
►ಗುಲ್ಶನ್ ಸಚ್ ದೇವ

Photo Credit : AP
ಸೆರ್ಬಿಯಾದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಚಳವಳಿಯೊಂದು ರವಿವಾರ (ಅಕ್ಟೋಬರ್ 25) ನಡೆದ ಸಂಸತ್ತಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ದಶಕಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಅಧ್ಯಕ್ಷ ಅಲೆಕ್ಸಾಂಡರ್ ವುಚಿಕ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದೆ.
ಇತ್ತೀಚೆಗೆ ಯುರೋಪ್ ಸೇರಿದಂತೆ ವಿಶ್ವದಾದ್ಯಂತ ಭ್ರಷ್ಟಾಚಾರದಿಂದ ಹಿಡಿದು ಶಿಕ್ಷಣ ವ್ಯವಸ್ಥೆಯವರೆಗಿನ ವ್ಯವಸ್ಥಿತ ಸಮಸ್ಯೆಗಳ ಸುಧಾರಣೆಗೆ ಆಗ್ರಹಿಸಿ ವಿದ್ಯಾರ್ಥಿ ಹೋರಾಟಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸೆರ್ಬಿಯಾ ಕೇವಲ ಎರಡೇ ವರ್ಷಗಳಲ್ಲಿ ವಿದ್ಯಾರ್ಥಿ ಚಳವಳಿಯಿಂದ ಅಧ್ಯಕ್ಷರನ್ನೇ ಅಧಿಕಾರದಿಂದ ಕೆಳಗಿಳಿಸುವ ಹಂತಕ್ಕೆ ಹೇಗೆ ತಲುಪಿತು ಮತ್ತು ಇದು ಈ ಭಾಗದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಈ ಕುರಿತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಯುರೋಪಿಯನ್ ಅಧ್ಯಯನ ಕೇಂದ್ರದ ಪ್ರೊಫೆಸರ್ ಹಾಗೂ ಜೀನ್ ಮೊನೆಟ್ ಚೇರ್ ಆಫ್ ಎಕ್ಸಲೆನ್ಸ್ ಜವಾಬ್ದಾರಿ ಹೊತ್ತಿರುವ ಗುಲ್ಶನ್ ಸಚ್ದೇವ್ ವಿವರಿಸಿದ್ದಾರೆ.
2024ರ ನವೆಂಬರ್ನಲ್ಲಿ ನೋವಿ ಸಾದ್ ನಗರದ ರೈಲ್ವೆ ನಿಲ್ದಾಣದ ಛಾವಣಿ ಕುಸಿದು 16 ಜನರು ಮೃತಪಟ್ಟ ಘಟನೆ ಈ ವಿದ್ಯಾರ್ಥಿ ಹೋರಾಟಕ್ಕೆ ಪ್ರಮುಖ ಕಾರಣವಾಯಿತು. ಈ ದುರಂತವು ಆಡಳಿತ ವ್ಯವಸ್ಥೆಯಲ್ಲಿದ್ದ ಭ್ರಷ್ಟಾಚಾರ ಮತ್ತು ಹೊಣೆಗಾರಿಕೆಯ ಕೊರತೆಯ ಸಂಕೇತವಾಗಿ ಹೊರಹೊಮ್ಮಿತು.
ಇದರ ಬೆನ್ನಲ್ಲೇ ಕಾಲೇಜು ಆವರಣಗಳಲ್ಲಿ ಆರಂಭವಾದ ಪ್ರತಿಭಟನೆಗಳು ಕ್ರಮೇಣ ಬೃಹತ್ ಹೋರಾಟವಾಗಿ ಮಾರ್ಪಟ್ಟವು. ವಿದ್ಯಾರ್ಥಿಗಳು ತಮ್ಮ ಮುಕ್ತ ಸಭೆಗಳ ಮೂಲಕ ಚರ್ಚಿಸಿ, ಹೋರಾಟದ ಮುಂದಿನ ಹಂತಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡರು. ವಾರಕ್ಕೊಮ್ಮೆ ನಡೆಯುತ್ತಿದ್ದ ಪ್ರತಿಭಟನೆಗಳು ಮತ್ತು ಕಾಲೇಜು ಬಂದ್ ಗಳು ಶೀಘ್ರದಲ್ಲೇ ರಾಷ್ಟ್ರಮಟ್ಟದ ಚಳವಳಿಯಾಗಿ ಬೆಳೆದವು. ಶಿಕ್ಷಕರು, ಕಲಾವಿದರು ಮತ್ತು ರೈತರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರು ಈ ಹೋರಾಟಕ್ಕೆ ಕೈಜೋಡಿಸಿದರು. ಆಡಳಿತ ಪಕ್ಷ ಮತ್ತು ಸಂಘಟಿತ ಅಪರಾಧ ಜಾಲಗಳ ನಡುವಿನ ಶಾಮೀಲಾತಿಯ ಆರೋಪಗಳು ತೀವ್ರಗೊಂಡಿದ್ದು, "ಸೆರ್ಬಿಯಾ ಬೇಕೋ ಅಥವಾ ಮಾಫಿಯಾ ಬೇಕೋ?" ಎಂಬ ಘೋಷಣೆ ಮುಂಚೂಣಿಗೆ ಬಂದಿತು.
ಸೆಪ್ಟೆಂಬರ್ ನಲ್ಲಿ ದಿಢೀರ್ ಚುನಾವಣೆ ಘೋಷಣೆಯಾದಾಗ, ಈ ಚಳವಳಿಯು ಸುಮಾರು ಎರಡು ವರ್ಷಗಳ ಹೋರಾಟವನ್ನು ಸಂಘಟಿತ ರಾಜಕೀಯ ವೇದಿಕೆಯಾಗಿ ಮಾರ್ಪಡಿಸಲು ನಿರ್ಧರಿಸಿತು. ಹೀಗೆ "Student List – Students Win" ಎಂಬ ರಾಜಕೀಯ ವೇದಿಕೆ ಉದಯಿಸಿತು. ಈ ಕೂಟವು 160ಕ್ಕೂ ಹೆಚ್ಚು ಪಿಎಚ್ಡಿ ಪದವೀಧರರು ಸೇರಿದಂತೆ ವಿವಿಧ ಕ್ಷೇತ್ರಗಳ 250 ಅಭ್ಯರ್ಥಿಗಳನ್ನು ಒಳಗೊಂಡಿತ್ತು. ಆಡಳಿತ ಪಕ್ಷ ಅಥವಾ ಇತರ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದ ವಿದ್ಯಾರ್ಥಿಗಳು ಮತ್ತು ವ್ಯಕ್ತಿಗಳನ್ನು ಇದರಿಂದ ದೂರವಿಡಲಾಗಿತ್ತು. ವಿಶ್ವವಿದ್ಯಾಲಯದ ಶಿಕ್ಷಕರು, ನಟರು, ರೈತರು ಮತ್ತು ಗಾಯಕರು ಇದರ ಅಭ್ಯರ್ಥಿಗಳಾಗಿದ್ದರು. ಇವರೆಲ್ಲರೂ ಸೇರಿ ದೇಶದ ಅಭಿವೃದ್ಧಿಗಾಗಿ ತಮ್ಮದೇ ಆದ ಕಾರ್ಯಕ್ರಮಗಳ ಸರಣಿಯನ್ನು ರೂಪಿಸಿದರು.
ತಮ್ಮ ಹೋರಾಟಕ್ಕೆ ವ್ಯಾಪಕ ಬೆಂಬಲ ಗಳಿಸಲು ಮತ್ತು ಆಂತರಿಕ ಭಿನ್ನಾಭಿಪ್ರಾಯಗಳನ್ನು ತಡೆಯಲು, ಈ ಚಳವಳಿಯು ಮಾಧ್ಯಮ ಸ್ವಾತಂತ್ರ್ಯ, ಭ್ರಷ್ಟಾಚಾರ ತಡೆ, ಆಡಳಿತಾತ್ಮಕ ಸುಧಾರಣೆ ಮತ್ತು ಶಿಕ್ಷಣದಂತಹ ದೇಶೀಯ ವಿಷಯಗಳಿಗೆ ಆದ್ಯತೆ ನೀಡಿತು. ಜೊತೆಗೆ, ಸ್ವಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬದಲು ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಎಲ್ಲಾ ವಿರೋಧ ಪಕ್ಷಗಳಿಗೆ ಕರೆ ನೀಡಿತು. ಅಂತಿಮವಾಗಿ, ಈ ಪಟ್ಟಿಯು 250 ಸ್ಥಾನಗಳಲ್ಲಿ 141 ಸ್ಥಾನಗಳನ್ನು ಗೆದ್ದು ಬೀಗಿತು. ಇತ್ತ ಅಲೆಕ್ಸಾಂಡರ್ ವುಚಿಕ್ ಸೋಲೊಪ್ಪಿಕೊಂಡರು.
ವಿದೇಶಾಂಗ ನೀತಿಯಂತಹ ಸೂಕ್ಷ್ಮ ವಿಷಯಗಳಲ್ಲಿ ಈ ಚಳವಳಿಯು ಎಚ್ಚರಿಕೆಯ ನಡಾವಳಿಯನ್ನು ಅನುಸರಿಸಿದ್ದು ಗಮನಾರ್ಹ. 2008ರಲ್ಲಿ ಕೊಸೊವೊ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದರೂ, ಅದು ಸೆರ್ಬಿಯಾದ ಭಾಗವಾಗಿಯೇ ಉಳಿದಿದೆ ಎಂದು ಈ ಲಿಸ್ಟ್ ಪ್ರತಿಪಾದಿಸಿತು. ಸುಮಾರು 100 ದೇಶಗಳು ಕೊಸೊವೊದ ಸ್ವಾತಂತ್ರ್ಯವನ್ನು ಗುರುತಿಸಿದ್ದರೂ, ಭಾರತ, ಚೀನಾ, ರಷ್ಯಾ ಮತ್ತು ಯುರೋಪಿಯನ್ ಯೂನಿಯನ್ನ ಐದು ಸದಸ್ಯ ರಾಷ್ಟ್ರಗಳು ಇದನ್ನು ಇಂದಿಗೂ ಸ್ವೀಕರಿಸಿಲ್ಲ. ಜೊತೆಗೆ, ಯುರೋಪಿಯನ್ ಯೂನಿಯನ್ ಗೆ ಸೆರ್ಬಿಯಾದ ಸೇರ್ಪಡೆ ಕುರಿತು ಜನಮತಸಂಗ್ರಹ ನಡೆಸಲು ಇದು ಪ್ರಸ್ತಾಪಿಸಿತು ಮತ್ತು ಉಕ್ರೇನ್ ಯುದ್ಧದ ವಿಚಾರವಾಗಿ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರುವುದನ್ನು ವಿರೋಧಿಸಿತು.
►ಅಲೆಕ್ಸಾಂಡರ್ ವುಚಿಕ್ ಸೋಲು
ಅಲೆಕ್ಸಾಂಡರ್ ವುಚಿಕ್ 2014ರಿಂದ ಸೆರ್ಬಿಯಾದ ರಾಜಕೀಯದಲ್ಲಿ ಮೇಲುಗೈ ಸಾಧಿಸಿದ್ದರು. ಮೊದಲು ಪ್ರಧಾನಿಯಾಗಿ, ಬಳಿಕ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. 1999ರ ಯುಗೋಸ್ಲಾವ್ ಯುದ್ಧಗಳು ಮತ್ತು ನ್ಯಾಟೋ ನಡೆಸಿದ ಬಾಂಬ್ ದಾಳಿಯ ಸಂದರ್ಭದಲ್ಲಿ ಅವರು ಪ್ರಮುಖ ತೀವ್ರ ರಾಷ್ಟ್ರವಾದಿ ನಾಯಕರಾಗಿ ಹೊರಹೊಮ್ಮಿದರು. ನಂತರ ಅವರು ಸೆರ್ಬಿಯನ್ ಪ್ರೋಗ್ರೆಸಿವ್ ಪಾರ್ಟಿ (SNS) ಅನ್ನು ಸ್ಥಾಪಿಸಿ, ತಮ್ಮನ್ನು ಪ್ರಾಯೋಗಿಕ ಹಾಗೂ ವಾಸ್ತವವಾದಿ ನಾಯಕರನ್ನಾಗಿ ಬಿಂಬಿಸಿಕೊಂಡರು.
ಅಧಿಕಾರದಲ್ಲಿದ್ದಾಗ ವುಚಿಕ್ ಅವರು ವಿವಿಧ ದೇಶಗಳ ವಿದೇಶಾಂಗ ನೀತಿಯನ್ನು ಅನುಸರಿಸಿದರು. ಯುರೋಪಿಯನ್ ಯೂನಿಯನ್ ಜೊತೆ ಸಂಪರ್ಕದಲ್ಲಿದ್ದುಕೊಂಡೇ ರಷ್ಯಾದೊಂದಿಗೂ ನಿಕಟ ಸಂಬಂಧ ಕಾಯ್ದುಕೊಂಡರು. ಸೆರ್ಬಿಯಾವನ್ನು ಚೀನಾದ ಹೂಡಿಕೆಗೆ ಮುಕ್ತಗೊಳಿಸಿದರು, ಬೀಜಿಂಗ್ ಜೊತೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಸ್ಥಾಪಿಸಿದರು ಮತ್ತು ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರು. ಬೆಲ್ಗ್ರೇಡ್–ಬುಡಾಪೆಸ್ಟ್ ಹೈಸ್ಪೀಡ್ ರೈಲ್ವೆ ಯೋಜನೆ ಸೇರಿದಂತೆ ಚೀನಾದ 'ಬೆಲ್ಟ್ ಆ್ಯಂಡ್ ರೋಡ್' ಯೋಜನೆಯಿಂದ ಸೆರ್ಬಿಯಾ ಸಾಕಷ್ಟು ಪ್ರಯೋಜನ ಪಡೆಯಿತು.
ಯುರೋಪಿಯನ್ ಯೂನಿಯನ್ಗೆ ಸೇರುವ ಹಂಬಲ, ರಷ್ಯಾದ ಇಂಧನ ಹಾಗೂ ಕೊಸೊವೊ ವಿಚಾರದಲ್ಲಿ ಅದರ ರಾಜತಾಂತ್ರಿಕ ಬೆಂಬಲ ಮತ್ತು ಚೀನಾದೊಂದಿಗೆ ಬೆಳೆಯುತ್ತಿರುವ ಆರ್ಥಿಕ ಸಂಬಂಧಗಳು ಅವರ ವಿದೇಶಾಂಗ ನೀತಿಯನ್ನು ರೂಪಿಸಿದವು. ಇದನ್ನು "ನಾಲ್ಕು ಕಂಬಗಳ" ವಿದೇಶಾಂಗ ನೀತಿ ಎಂದು ಕರೆಯಲಾಗುತ್ತಿತ್ತು. ಅವರ ಆಡಳಿತಾವಧಿಯಲ್ಲಿ ಸೆರ್ಬಿಯಾದ ಆರ್ಥಿಕತೆ ಉತ್ತಮ ಬೆಳವಣಿಗೆಯನ್ನು ದಾಖಲಿಸಿತು.
ಕಳೆದ ಎರಡು ವರ್ಷಗಳಿಂದ ನಡೆದ ನಿರಂತರ ಪ್ರತಿಭಟನೆಗಳು ವುಚಿಕ್ ಅವರ ನಾಯಕತ್ವಕ್ಕೆ ದೊಡ್ಡ ಸವಾಲನ್ನೊಡ್ಡಿದವು. ಸೆಪ್ಟೆಂಬರ್ನಲ್ಲಿ, ತಮ್ಮ ಎರಡನೇ ಹಾಗೂ ಕೊನೆಯ ಅವಧಿ ಮುಗಿಯಲು ಐದು ತಿಂಗಳು ಬಾಕಿ ಇರುವಾಗಲೇ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಮಾಧ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದ ವುಚಿಕ್, ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೆ ಬರುವ ಮತ್ತು ಅಧಿಕಾರವನ್ನು ಉಳಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದ್ದರು.
ಆದರೆ ಈ ಚುನಾವಣಾ ಫಲಿತಾಂಶ ಸೆರ್ಬಿಯಾದ ಪಾಲಿಗೆ ಒಂದು ಐತಿಹಾಸಿಕ ತಿರುವಾಗಿದೆ. ಇದು ಕೇವಲ ಸರ್ಕಾರ ಬದಲಾವಣೆಯಷ್ಟೇ ಅಲ್ಲ; ವುಚಿಕ್ ಆಡಳಿತದಲ್ಲಿದ್ದ ರಾಜಕೀಯ ವ್ಯವಸ್ಥೆಯ ಸಂಪೂರ್ಣ ಪತನವನ್ನು ಸೂಚಿಸುತ್ತದೆ.
►ಪ್ರಬಲ ಸರ್ಕಾರಿ ವ್ಯವಸ್ಥೆಯನ್ನು ಎದುರಿಸಿ ಈ ಚಳವಳಿ ಹೇಗೆ ಉಳಿದುಕೊಂಡಿತು?
ವಿದ್ಯಾರ್ಥಿ ಚಳವಳಿಯ ನಿರ್ಧಾರಗಳು ಯಾವುದೇ ಒಬ್ಬ ನಾಯಕನಿಗೆ ಸೀಮಿತವಾಗಿರಲಿಲ್ಲ. ಈ ವಿಕೇಂದ್ರೀಕೃತ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯು, ವುಚಿಕ್ ಆಡಳಿತಕ್ಕೆ ಚಳವಳಿಯನ್ನು ಕಡೆಗಣಿಸಲು ಅಥವಾ ಪ್ರಮುಖ ನಾಯಕರನ್ನು ಬಂಧಿಸಲು ಅವಕಾಶ ನೀಡಲಿಲ್ಲ. ಚಾಲ್ತಿಯಲ್ಲಿದ್ದ ರಾಜಕೀಯ ಪಕ್ಷಗಳಿಂದ ದೂರ ಉಳಿದಿದ್ದು ಜನರಲ್ಲಿ ನಂಬಿಕೆ ಹೆಚ್ಚಿಸಲು ನೆರವಾಯಿತು.
ವಿದ್ಯಾರ್ಥಿಗಳು ಕೇವಲ ಕಾಲೇಜು ಆವರಣದ ಪ್ರತಿಭಟನೆಗೆ ಸೀಮಿತವಾಗದೆ, ಮನೆಮನೆಗೆ ತೆರಳಿ ಪ್ರಚಾರ ಮಾಡಿದರು. ಸಾಂಪ್ರದಾಯಿಕವಾಗಿ ವುಚಿಕ್ ಅವರನ್ನು ಬೆಂಬಲಿಸುತ್ತಿದ್ದ ಹಳ್ಳಿಗಳನ್ನು ತಲುಪಿದರು. ರಾಜಕೀಯ ಹಿನ್ನೆಲೆಯಿಲ್ಲದ, ಸಮಾಜದಲ್ಲಿ ಗೌರವಯುತ ವ್ಯಕ್ತಿಗಳನ್ನೊಳಗೊಂಡ 250 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದರು. ಪ್ರಮುಖವಾಗಿ, ಈ ಚಳವಳಿಯು ಶಾಂತಿಯುತವಾಗಿತ್ತು ಮತ್ತು ದೇಶೀಯ ಸಮಸ್ಯೆಗಳಿಗಷ್ಟೇ ಗಮನ ಹರಿಸಿತು. ಪ್ರತಿಭಟನಾಕಾರರು ಯುರೋಪಿಯನ್ ಯೂನಿಯನ್ ಧ್ವಜಗಳ ಬದಲಿಗೆ ರಾಷ್ಟ್ರೀಯ ಸಂಕೇತಗಳನ್ನು ಬಳಸಿದ್ದರಿಂದ, ಈ ಹೋರಾಟವನ್ನು ವಿದೇಶಿ ಪ್ರಚೋದಿತ ಅಥವಾ ವಿದೇಶಿ ಹಣದಿಂದ ನಡೆಯುತ್ತಿದೆ ಎಂದು ಬಿಂಬಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.
►ಇದು ಯುರೋಪ್ ಗೆ ನೀಡುವ ಸಂದೇಶವೇನು?
ವಿದ್ಯಾರ್ಥಿಗಳ ಈ ಗೆಲುವು ಯುರೋಪ್ ನಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿಗಳಿಗೆ ಪ್ರಮುಖ ಉತ್ತೇಜನ ನೀಡಬಹುದು. ನಿರಂತರ ಮತ್ತು ಶಾಂತಿಯುತ ಹೋರಾಟದ ಮೂಲಕ ಅತ್ಯಂತ ಪ್ರಬಲ ರಾಜಕೀಯ ಆಡಳಿತಗಳನ್ನೂ ಮೆಟ್ಟಿ ನಿಲ್ಲಬಹುದು ಹಾಗೂ ಹಿಂಸಾಚಾರವಿಲ್ಲದೆ ರಾಜಕೀಯ ಬದಲಾವಣೆ ತರಬಹುದು ಎಂಬುದನ್ನು ಇದು ಇತರ ಚಳವಳಿಗಳಿಗೆ ತೋರಿಸಿಕೊಟ್ಟಿದೆ.
ಇದು ರಷ್ಯಾ–ಉಕ್ರೇನ್ ಯುದ್ಧದ ಮೇಲೆಯೂ ಪರಿಣಾಮ ಬೀರಲಿದೆ. ರಷ್ಯಾದೊಂದಿಗೆ ಸೆರ್ಬಿಯಾ ಹೊಂದಿರುವ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಬಾಂಧವ್ಯವನ್ನು ಬೆಲ್ ಗ್ರೇಡ್ ನ (ಸೆರ್ಬಿಯಾದ ರಾಜಧಾನಿ) ಯಾವುದೇ ಸರ್ಕಾರ ನಿರ್ಲಕ್ಷಿಸಲು ಸಾಧ್ಯವಿಲ್ಲ. ಎರಡೂ ದೇಶಗಳು ಆರ್ಥೊಡಾಕ್ಸ್ ಕ್ರಿಶ್ಚಿಯನ್ ಪರಂಪರೆಯನ್ನು ಹಂಚಿಕೊಂಡಿವೆ. ಮುಂದಿನ ದಿನಗಳಲ್ಲಿ ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಸುವ ಪಾಶ್ಚಿಮಾತ್ಯ ದೇಶಗಳು ಸೇರಿದಂತೆ, ಯುದ್ಧಪೀಡಿತ ಯಾವುದೇ ಪ್ರದೇಶಗಳಿಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಸೆರ್ಬಿಯಾ ತಡೆಹಿಡಿಯಲಿದೆ ಎಂದು ಈ ಕೂಟ (ಲಿಸ್ಟ್) ಘೋಷಿಸಿದೆ.
ಯುರೋಪಿಯನ್ ಯೂನಿಯನ್ಗೆ ಸೇರುವ ಸೆರ್ಬಿಯಾದ ಪ್ರಯತ್ನಕ್ಕೆ ಇಂದಿಗೂ ದೊಡ್ಡ ಸವಾಲುಗಳಿವೆ. 2012ರಿಂದ ಇಯು ಸೇರ್ಪಡೆಯ ಪ್ರಕ್ರಿಯೆಯಲ್ಲಿರುವ ಸೆರ್ಬಿಯಾ, ಒಟ್ಟು 35 ಮಾತುಕತೆ ವಿಷಯಗಳಲ್ಲಿ 22 ವಿಷಯಗಳನ್ನು ಚರ್ಚೆಗೆ ತೆಗೆದುಕೊಂಡಿದ್ದು, ಅವುಗಳಲ್ಲಿ ಕೇವಲ ಎರಡನ್ನು ಮಾತ್ರ ತಾತ್ಕಾಲಿಕವಾಗಿ ಪೂರ್ಣಗೊಳಿಸಿದೆ.
ಕಾನೂನಿನ ಆಡಳಿತ, ನ್ಯಾಯಾಂಗ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ, ಕೊಸೊವೊ ಜೊತೆಗಿನ ಬಾಂಧವ್ಯ ಸುಧಾರಣೆ ಮತ್ತು ರಷ್ಯಾ ವಿರುದ್ಧದ ನಿರ್ಬಂಧಗಳಿಗೆ ಸಂಪೂರ್ಣ ಬೆಂಬಲ ನೀಡದಿರುವುದು ಸೇರಿದಂತೆ ಯುರೋಪಿಯನ್ ಯೂನಿಯನ್ನ ವಿದೇಶಾಂಗ ನೀತಿಗೆ ಸೆರ್ಬಿಯಾ ಸರಿಯಾಗಿ ಸ್ಪಂದಿಸದ ಕಾರಣ ಈ ಪ್ರಕ್ರಿಯೆ ಮಂದಗತಿಯಲ್ಲಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದರಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ತಕ್ಷಣವೇ ಪ್ರತಿಕ್ರಿಯಿಸಿ, “ಕಾನೂನಿನ ಆಡಳಿತ, ಮಾಧ್ಯಮ ಸ್ವಾತಂತ್ರ್ಯ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವ ಸುಧಾರಣೆಗಳಿಗೆ ಬೆಂಬಲ ನೀಡಲು ಹಾಗೂ ಯುರೋಪಿಯನ್ ಯೂನಿಯನ್ನಲ್ಲಿ ಸೆರ್ಬಿಯಾದ ಭವಿಷ್ಯವನ್ನು ಮುನ್ನಡೆಸಲು ನಾವು ಒಟ್ಟಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ” ಎಂದಿದ್ದಾರೆ. ಚೀನಾದ ಮೂಲಸೌಕರ್ಯ ಹೂಡಿಕೆಗಳ ವಿಷಯದಲ್ಲಿ ಹೊಸ ಸರ್ಕಾರವು ತುಸು ಎಚ್ಚರಿಕೆಯ ನಡಾವಳಿಯನ್ನು ಅನುಸರಿಸಬಹುದು.
►ಯಾರು ಆಡಳಿತ ನಡೆಸುತ್ತಾರೆ?
ಆಡಳಿತ ನಡೆಸುವುದು ಈ ಚಳವಳಿಗೆ ಅತ್ಯಂತ ನಿರ್ಣಾಯಕ ಪರೀಕ್ಷೆಯಾಗಲಿದೆ. ಈ ಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿರುವುದು ದೊಡ್ಡ ಅನುಕೂಲವಾಗಿದ್ದು, ಸರ್ಕಾರ ರಚನೆಗೆ ಯಾವುದೇ ಮೈತ್ರಿಕೂಟದ ಬೆಂಬಲ ಪಡೆಯುವ ಅಗತ್ಯವಿಲ್ಲ.
ಈಗ ಈ ಕೂಟವು ತನ್ನ ಪ್ರಧಾನಿಯನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. 250 ಅಭ್ಯರ್ಥಿಗಳ ಪಟ್ಟಿಯಲ್ಲಿ ಹೃದ್ರೋಗ ತಜ್ಞ ಡಾ. ಇಲಿಜಾ ಶ್ರ್ದಾನೊವಿಕ್ ಮೊದಲ ಸ್ಥಾನದಲ್ಲಿದ್ದರೆ, ಸೆರ್ಬಿಯಾದ ರಾಷ್ಟ್ರೀಯ ಬ್ಯಾಂಕ್ನ ಮಾಜಿ ಗವರ್ನರ್ ಹಾಗೂ ಅರ್ಥಶಾಸ್ತ್ರಜ್ಞ ದೇವನ್ ಶೋಸ್ಕಿಚ್ ಅವರಂತಹ ಇತರ ಪ್ರಮುಖ ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ಈ ಕೂಟದ ಸದಸ್ಯರೊಬ್ಬರ ಪ್ರಕಾರ, ದೇಶದ "ಸಾಮಾಜಿಕ ಮತ್ತು ಮಾನಸಿಕ ಸುಧಾರಣೆ" ಮಾಡುವುದು ಅವರ ಮೊದಲ ಆದ್ಯತೆಯಾಗಿದೆ. ತಮ್ಮ ಯೋಜನೆಯಲ್ಲಿ ತಿಳಿಸಿರುವಂತೆ ಮಾಧ್ಯಮ ಸ್ವಾತಂತ್ರ್ಯವನ್ನು ಖಚಿತಪಡಿಸುವುದು, ವುಚಿಕ್ ಆಡಳಿತಕ್ಕೆ ಹತ್ತಿರವಾಗಿದ್ದ ಪ್ರಮುಖ ಅಧಿಕಾರಿಗಳನ್ನು ಬದಲಾಯಿಸುವುದು ಮತ್ತು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳನ್ನು ಸುಧಾರಿಸುವುದು ಅವರ ಮುಖ್ಯ ಗುರಿಯಾಗಿದೆ. ವಿದೇಶಾಂಗ ನೀತಿಯಲ್ಲಿ ತಕ್ಷಣಕ್ಕೆ ಯಾವುದೇ ದೊಡ್ಡ ಬದಲಾವಣೆಗಳು ಕಂಡುಬರದಿದ್ದರೂ, ಯುರೋಪಿಯನ್ ಯೂನಿಯನ್ ಸೇರ್ಪಡೆಯ ಕುರಿತು ಜನಮತಸಂಗ್ರಹ ನಡೆಸುವ ದಿನಾಂಕವನ್ನು ಹೊಸ ಸರ್ಕಾರ ಘೋಷಿಸುವ ಸಾಧ್ಯತೆಯಿದೆ.
ಸೌಜನ್ಯ: indianexpress.com






