ಚುನಾವಣಾ ಆಯೋಗವನ್ನು ಮೊದಲು ಹೇಗೆ ರಚಿಸಲಾಯಿತು? 1993ರಲ್ಲಿ ಇದು ಮೂರು ಸದಸ್ಯರ ವ್ಯವಸ್ಥೆಗೆ ಬದಲಾಗಿದ್ದು ಹೇಗೆ ಮತ್ತು ಏಕೆ?

Photo Credit : PTI
ಸ್ವತಂತ್ರ ಮತ್ತು ಮುಕ್ತ ಚುನಾವಣೆಗಳನ್ನು ನಡೆಸುವ ನಿರ್ಣಾಯಕ ಜವಾಬ್ದಾರಿಯನ್ನು ಹೊಂದಿರುವ ಕಾರಣ, ಚುನಾವಣಾ ಆಯೋಗದ ಕಾರ್ಯವೈಖರಿಯು ಸದಾ ಪರಿಶೀಲನೆಗೆ ಒಳಪಡುತ್ತದೆ. ಹಾಗಾದರೆ, ಚುನಾವಣಾ ಆಯೋಗವು ಮೊದಲು ಹೇಗೆ ರೂಪುಗೊಂಡಿತು? ಅದು ಏಕಸದಸ್ಯರಿಂದ ಮೂರು ಸದಸ್ಯರ ಆಯೋಗವಾಗಿ ನಂತರ ಮತ್ತೆ ಏಕಸದಸ್ಯ ಹಾಗೂ ಬಳಿಕ ಪುನಃ ಮೂರು ಸದಸ್ಯರ ಆಯೋಗವಾಗಿ ಬದಲಾಗಲು ಕಾರಣವೇನು? ಚುನಾವಣಾ ಆಯೋಗಕ್ಕೆ ಹೇಗೆ ಹಣಕಾಸು ಒದಗಿಸಲಾಗುತ್ತದೆ? ಈ ಕುರಿತು ಮಾಹಿತಿ ಇಲ್ಲಿದೆ.
ಭಾರತೀಯ ಚುನಾವಣಾ ಆಯೋಗವು (ECI) ಖಾಯಂ ಸಾಂವಿಧಾನಿಕ ಸಂಸ್ಥೆಯಾಗಿದೆ. ಅಧಿಕೃತ ವೆಬ್ಸೈಟ್ ಪ್ರಕಾರ, ಇದು ಸಂವಿಧಾನಕ್ಕೆ ಅನುಗುಣವಾಗಿ 1950 ಜನವರಿ 25ರಂದು ಸ್ಥಾಪನೆಯಾಯಿತು.
ಸಂಸತ್ತು ಮತ್ತು ಪ್ರತಿ ರಾಜ್ಯದ ವಿಧಾನಸಭೆ ಹಾಗೂ ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಚುನಾವಣೆಗಳನ್ನು ನಡೆಸುವ ಸಂಪೂರ್ಣ ಪ್ರಕ್ರಿಯೆಯ "ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣ"ದ ಅಧಿಕಾರವನ್ನು ಸಂವಿಧಾನವು ಆಯೋಗಕ್ಕೆ ನೀಡಿದೆ ಎಂದು ಆಯೋಗದ ವೆಬ್ಸೈಟ್ ತಿಳಿಸುತ್ತದೆ.
ಚುನಾವಣಾ ಆಯೋಗದಲ್ಲಿ ಯಾರು ಇರುತ್ತಾರೆ?
ಆರಂಭದಲ್ಲಿ ಆಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು (CEC) ಮಾತ್ರ ಹೊಂದಿತ್ತು. ಈಗ ಇದು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು (ECs) ಒಳಗೊಂಡಿದೆ. ರಾಷ್ಟ್ರಪತಿಯವರು ಇವರನ್ನು ನೇಮಕ ಮಾಡುತ್ತಾರೆ ಮತ್ತು ಇವರು ಆರು ವರ್ಷಗಳ ಕಾಲ ಅಥವಾ 65 ವರ್ಷ ವಯಸ್ಸಿನವರೆಗೆ (ಯಾವುದು ಮೊದಲೋ ಅದು) ಸೇವೆ ಸಲ್ಲಿಸುತ್ತಾರೆ.
ಇವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಂದಿಗೆ ಸಮಾನ ಸ್ಥಾನಮಾನ, ವೇತನ ಮತ್ತು ಸೌಲಭ್ಯಗಳನ್ನು ಹೊಂದಿರುತ್ತಾರೆ. ಅದೇ ರೀತಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆ ಸಂಸದೀಯ ಪದಚ್ಯುತಿ ಪ್ರಕ್ರಿಯೆಯ ಮಾತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸಬಹುದು.
ಸಂವಿಧಾನದ 324 ನೇ ವಿಧಿಯು, ‘ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣವು ಚುನಾವಣಾ ಆಯೋಗದಲ್ಲಿರಬೇಕು’ ಎಂದು ತಿಳಿಸುತ್ತದೆ. ಆದರೆ ಆಯೋಗವು ಎಷ್ಟು ಸದಸ್ಯರನ್ನು ಹೊಂದಿರಬೇಕು ಎಂಬುದನ್ನು ಇದು ಉಲ್ಲೇಖಿಸುವುದಿಲ್ಲ.
"ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಮತ್ತು ರಾಷ್ಟ್ರಪತಿಗಳು ಕಾಲಾಕಾಲಕ್ಕೆ ನಿಗದಿಪಡಿಸುವ ಇತರ ಚುನಾವಣಾ ಆಯುಕ್ತರನ್ನು (ಯಾರಾದರೂ ಇದ್ದರೆ) ಹೊಂದಿರಬೇಕು. ಸಂಸತ್ತು ಈ ಕುರಿತು ಮಾಡುವ ಯಾವುದೇ ಕಾನೂನಿನ ನಿಬಂಧನೆಗಳಿಗೆ ಒಳಪಟ್ಟು, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಯನ್ನು ರಾಷ್ಟ್ರಪತಿಗಳು ಮಾಡಬೇಕು" ಎಂದು ಅದು ಹೇಳುತ್ತದೆ.
ಚುನಾವಣಾ ಆಯೋಗದಲ್ಲಿ ಒಬ್ಬ ಸದಸ್ಯರಿದ್ದದ್ದು ಮೂರು ಸದಸ್ಯರಾಗಿದ್ದು ಹೇಗೆ?
ಸುಮಾರು ನಾಲ್ಕು ದಶಕಗಳ ಕಾಲ ಆಯೋಗವು ಒಬ್ಬ ಸದಸ್ಯರನ್ನು ಮಾತ್ರ ಹೊಂದಿತ್ತು. ಒಂಬತ್ತನೇ ಲೋಕಸಭಾ ಚುನಾವಣೆಗೂ ಮುಂಚೆ ಈ ಸ್ಥಿತಿ ಬದಲಾಯಿತು.
ಭಾರತೀಯ ಚುನಾವಣಾ ಆಯೋಗದಲ್ಲಿ 53 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಎಸ್.ಕೆ. ಮೆಂಡಿರತ್ತ ಅವರು ಈ ಹಿಂದೆ 'ದಿ ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದಂತೆ, ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತ ಆರ್.ವಿ.ಎಸ್. ಪೆರಿಶಾಸ್ತ್ರಿ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಇಸಿಐ ಅನ್ನು ವಿಸ್ತರಿಸಲಾಯಿತು.
"ಈ ಭಿನ್ನಾಭಿಪ್ರಾಯಗಳು 1987 ರ ರಾಷ್ಟ್ರಪತಿ ಚುನಾವಣೆಯೊಂದಿಗೆ ಪ್ರಾರಂಭವಾದವು. ರಾಜೀವ್ ಅವರೊಂದಿಗೆ ಹದಗೆಟ್ಟ ಸಂಬಂಧ ಹೊಂದಿದ್ದ ಗ್ಯಾನಿ ಜೈಲ್ ಸಿಂಗ್ ಅವರು ಎರಡನೇ ಅವಧಿಗೆ ಸ್ಪರ್ಧಿಸುವುದನ್ನು ತಡೆಯುವ ರೀತಿಯಲ್ಲಿ ನಾಮಪತ್ರ ಪ್ರಕ್ರಿಯೆಯ ಸಮಯವನ್ನು ನಿಗದಿಪಡಿಸಲು ಕೇಂದ್ರ ಸರ್ಕಾರ ಬಯಸಿತ್ತು. ಆದರೆ ಪೆರಿಶಾಸ್ತ್ರಿ ಇದಕ್ಕೆ ಒಪ್ಪಲಿಲ್ಲ. ಎರಡು ವರ್ಷಗಳ ನಂತರ ಲೋಕಸಭಾ ಚುನಾವಣೆ ಬಂದಾಗ, ಅವರು ಹೇಗೆ ವರ್ತಿಸುತ್ತಾರೆ ಎಂಬ ಬಗ್ಗೆ ಖಚಿತವಿಲ್ಲದ ಸರ್ಕಾರವು, ಇಸಿಐ ಅನ್ನು ಬಹುಸದಸ್ಯ ಆಯೋಗವನ್ನಾಗಿ ಮಾಡುವ ಮೂಲಕ ಮುಖ್ಯ ಚುನಾವಣಾ ಆಯುಕ್ತರ ಅಧಿಕಾರವನ್ನು ಮೊಟಕುಗೊಳಿಸಲು ನಿರ್ಧರಿಸಿತು" ಎಂದು ಮೆಂಡಿರತ್ತ 2019 ರಲ್ಲಿ ಹೇಳಿದ್ದರು.
1989 ಅಕ್ಟೋಬರ್ 7ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ಎರಡು ಹುದ್ದೆಗಳನ್ನು ಸೃಷ್ಟಿಸಲಾಯಿತು. ಅಕ್ಟೋಬರ್ 16 ರಂದು ಎಸ್.ಎಸ್. ಧನೋವಾ ಮತ್ತು ವಿ.ಎಸ್. ಸಿಗಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು. ಮೆಂಡಿರತ್ತ ಅವರ ಪ್ರಕಾರ, ಮೂವರು ಚುನಾವಣಾ ಆಯುಕ್ತರ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದರೂ ಮತ್ತು ಆಯೋಗದ ವ್ಯವಹಾರಗಳ ನಿರ್ವಹಣೆಗೆ ಯಾವುದೇ ನಿಯಮಗಳು ಇಲ್ಲದಿದ್ದರೂ, 1989 ರ ಲೋಕಸಭಾ ಚುನಾವಣೆ ಯಶಸ್ವಿಯಾಗಿ ನಡೆಯಿತು
ಮತ್ತೆ ಒಬ್ಬರೇ ಸದಸ್ಯರು:
ಆ ವ್ಯವಸ್ಥೆಯು ಹೆಚ್ಚು ದಿನ ಉಳಿಯಲಿಲ್ಲ. "ಅಧಿಕಾರಕ್ಕೆ ಬಂದ ತಕ್ಷಣ, ಪ್ರಧಾನಿ ವಿ.ಪಿ. ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವು ಅಕ್ಟೋಬರ್ 7, 1989 ರ ರಾಷ್ಟ್ರಪತಿಗಳ ಅಧಿಸೂಚನೆಯನ್ನು ರದ್ದುಗೊಳಿಸಿತು" ಎಂದು ಮೆಂಡಿರತ್ತ ಹೇಳಿದರು. ತಮ್ಮನ್ನು ತೆಗೆದುಹಾಕುವುದನ್ನು ವಿರೋಧಿಸಿ ಧನೋವಾ ಅವರು ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದರು, ಆದರೆ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿತು. ಆದರೆ, "ಒಬ್ಬರಿಗಿಂತ ಹೆಚ್ಚು ಮಂದಿ ಇರುವುದು ಉತ್ತಮ" ಮತ್ತು ಆಯೋಗವನ್ನು ಮತ್ತೆ ಬಹುಸದಸ್ಯ ಆಯೋಗವನ್ನಾಗಿ ಮಾಡಿದರೆ ವ್ಯವಹಾರ ನಿರ್ವಹಣೆಗೆ ನಿಯಮವಿರಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಡಿತು ಎಂದು ಮೆಂಡಿರತ್ತ ಸ್ಮರಿಸುತ್ತಾರೆ.
ನಂತರ ಸರ್ಕಾರವು 'ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ (ಸೇವಾ ಷರತ್ತುಗಳು) ಕಾಯ್ದೆ, 1991' ಅನ್ನು ಜಾರಿಗೆ ತಂದಿತು. ಇದು ಮುಖ್ಯ ಚುನಾವಣಾ ಆಯುಕ್ತರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಾನ ಸ್ಥಾನಮಾನವನ್ನು ನೀಡಿತು ಮತ್ತು ಅವರ ನಿವೃತ್ತಿ ವಯಸ್ಸನ್ನು 65 ವರ್ಷಗಳೆಂದು ನಿಗದಿಪಡಿಸಿತು. ಚುನಾವಣಾ ಆಯುಕ್ತರಿಗೆ ಹೈಕೋರ್ಟ್ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಲಾಗಿದ್ದು, ಅವರ ನಿವೃತ್ತಿ ವಯಸ್ಸು 62 ವರ್ಷಗಳೆಂದು ನಿಗದಿಯಾಯಿತು. ಆ ಸಮಯದಲ್ಲಿ ಆಯೋಗದ ವ್ಯವಹಾರ ನಿರ್ವಹಣೆಯನ್ನು ನಿಯಂತ್ರಿಸಲು ಯಾವುದೇ ನಿಯಮಗಳು ಈ ಕಾಯ್ದೆಯಲ್ಲಿ ಇರಲಿಲ್ಲ.
ಹಾಗಿದ್ದರೂ, ಮುಂದಿನ ಎರಡು ವರ್ಷಗಳ ಕಾಲ ಚುನಾವಣಾ ಆಯೋಗವು ಏಕಸದಸ್ಯ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸಿತು.
ಮೂರು ಸದಸ್ಯರ ವ್ಯವಸ್ಥೆಗೆ ಮರಳಿದ್ದು ಹೇಗೆ?
ನಂತರ 1990 ಡಿಸೆಂಬರ್ 12ರಂದು ಟಿ.ಎನ್. ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. "ಆಯೋಗದ ಸ್ವಾಯತ್ತತೆಯನ್ನು ಶೇಷನ್ ಅವರು ಗಟ್ಟಿಯಾಗಿ ಪ್ರತಿಪಾದಿಸುತ್ತಿರುವುದಕ್ಕೆ ಅತೃಪ್ತರಾದ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು, 1993 ಅಕ್ಟೋಬರ್ 1ರಂದು ಮತ್ತೆ ಚುನಾವಣಾ ಆಯೋಗವನ್ನು ವಿಸ್ತರಿಸಲು ನಿರ್ಧರಿಸಿತು. ಎಂ.ಎಸ್. ಗಿಲ್ ಮತ್ತು ಜಿ.ವಿ.ಜಿ. ಕೃಷ್ಣಮೂರ್ತಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು.
ಅದೇ ಸಮಯದಲ್ಲಿ, 'ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ (ಸೇವಾ ಷರತ್ತುಗಳು) ಕಾಯ್ದೆ, 1991' ಅನ್ನು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಲಾಯಿತು. ಈ ಕಾನೂನಿನ ಹೆಸರನ್ನು 'ಚುನಾವಣಾ ಆಯೋಗದ (ಚುನಾವಣಾ ಆಯುಕ್ತರ ಸೇವಾ ಷರತ್ತುಗಳು ಮತ್ತು ವ್ಯವಹಾರ ನಿರ್ವಹಣೆ) ಕಾಯ್ದೆ, 1991' ಎಂದು ಬದಲಾಯಿಸಲಾಯಿತು. ಮೂವರಿಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನ ಮತ್ತು 65 ವರ್ಷಕ್ಕೆ ನಿವೃತ್ತಿ ಹೊಂದುವ ನಿಯಮವನ್ನು ನೀಡುವ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಆಯುಕ್ತರನ್ನು ಸರ್ಕಾರವು ಸಮಾನರನ್ನಾಗಿ ಮಾಡಿತು. ಅಂದರೆ, ಈಗ ಮೂವರು ಆಯುಕ್ತರು ಸಮಾನ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೊಂದಿದ್ದರು" ಎಂದು ಮೆಂಡಿರತ್ತ ವಿವರಿಸಿದ್ದಾರೆ.
ಕಾಯ್ದೆಯಲ್ಲಿ 9, 10 ಮತ್ತು 11 ನೇ ವಿಭಾಗಗಳನ್ನು ಒಳಗೊಂಡ 'ವ್ಯವಹಾರ ನಿರ್ವಹಣೆ' ಎಂಬ ಹೊಸ ಅಧ್ಯಾಯವನ್ನು ಪರಿಚಯಿಸಲಾಯಿತು. ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರು ತಮ್ಮ ನಿರ್ಧಾರಗಳಲ್ಲಿ ಒಮ್ಮತ ಮೂಡುವಂತೆ ಕಾರ್ಯನಿರ್ವಹಿಸಬೇಕು ಎಂದೂ, ಒಂದು ವೇಳೆ ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿದರೆ ಬಹುಮತದ ತೀರ್ಮಾನವೇ ಅಂತಿಮವಾಗಬೇಕು ಎಂದು ಈ ಮೂರು ವಿಭಾಗಗಳು ಪ್ರತಿಪಾದಿಸಿದವು.
ಸರ್ಕಾರದ ಈ ಮೂರು ನಿಬಂಧನೆಗಳು ತನ್ನ ಅಧಿಕಾರವನ್ನು ಮೊಟಕುಗೊಳಿಸುವ ಯತ್ನ ಎಂದು ಆರೋಪಿಸಿ ಶೇಷನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಎ.ಎಂ. ಅಹ್ಮದಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ಅರ್ಜಿಯನ್ನು ವಜಾಗೊಳಿಸಿತು (ಟಿ.ಎನ್. ಶೇಷನ್ ಮುಖ್ಯ ಚುನಾವಣಾ ಆಯುಕ್ತರು ಮತ್ತು ಭಾರತ ಒಕ್ಕೂಟ ಹಾಗೂ ಇತರರು, ಜುಲೈ 14, 1995). ಅಂದಿನಿಂದ ಚುನಾವಣಾ ಆಯೋಗವು ಮೂರು ಸದಸ್ಯರ ಆಯೋಗವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.
ಚುನಾವಣಾ ಆಯೋಗಕ್ಕೆ ಹೇಗೆ ಹಣಕಾಸು ಒದಗಿಸಲಾಗುತ್ತದೆ?
ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, "ಆಯೋಗದ ಸಚಿವಾಲಯವು ಸ್ವತಂತ್ರ ಬಜೆಟ್ ಅನ್ನು ಹೊಂದಿದ್ದು, ಇದನ್ನು ಆಯೋಗ ಮತ್ತು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ನಡುವಿನ ನೇರ ಸಮಾಲೋಚನೆಯ ಮೂಲಕ ಅಂತಿಮಗೊಳಿಸಲಾಗುತ್ತದೆ. ತನ್ನ ಬಜೆಟ್ಗಾಗಿ ಆಯೋಗ ಮಾಡುವ ಶಿಫಾರಸುಗಳನ್ನು ಹಣಕಾಸು ಸಚಿವಾಲಯವು ಸಾಮಾನ್ಯವಾಗಿ ಸ್ವೀಕರಿಸುತ್ತದೆ."
ಚುನಾವಣೆಗಳನ್ನು ನಡೆಸುವುದು ಮಾತ್ರವಲ್ಲದೆ, ಚುನಾವಣಾ ಆಯೋಗವು ಬೇರೆ ಏನೆಲ್ಲ ಕೆಲಸಗಳನ್ನು ಮಾಡುತ್ತದೆ?
ಸಂಸತ್ತಿನ ಸದಸ್ಯರು ಮತ್ತು ವಿಧಾನಸಭೆಗಳ ಸದಸ್ಯರನ್ನು ಅನರ್ಹಗೊಳಿಸುವ ವಿಷಯಗಳಲ್ಲಿ ಆಯೋಗವು ಸಲಹಾ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. "ಚುನಾವಣೆಗಳಲ್ಲಿ ಭ್ರಷ್ಟಾಚಾರದ ಚಟುವಟಿಕೆಗಳಲ್ಲಿ ದೋಷಿಗಳೆಂದು ಸಾಬೀತಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ಮುಂದೆ ಬರುವ ವ್ಯಕ್ತಿಗಳ ಪ್ರಕರಣಗಳನ್ನು ಸಹ ಆಯೋಗಕ್ಕೆ ಕಳುಹಿಸಲಾಗುತ್ತದೆ. ಅಂಥ ವ್ಯಕ್ತಿಗಳು ಚುನಾವಣೆಗಳಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳ್ಳಬೇಕೇ ಮತ್ತು ಹಾಗಿದ್ದಲ್ಲಿ, ಎಷ್ಟು ಅವಧಿಗೆ ಎಂಬ ಪ್ರಶ್ನೆಯ ಕುರಿತು ಆಯೋಗವು ತನ್ನ ಅಭಿಪ್ರಾಯವನ್ನು ನೀಡುತ್ತದೆ" ಎಂದು ಚುನಾವಣಾ ಆಯೋಗದ ವೆಬ್ಸೈಟ್ ತಿಳಿಸುತ್ತದೆ.
ಕೃಪೆ: indianexpress.com






