ECINET, ERONET: ಚುನಾವಣಾ ಆಯೋಗದ ಮತದಾರರ ಪಟ್ಟಿ ನಿರ್ವಹಣಾ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಅವು ಯಾಕೆ ಮುಖ್ಯ?
ERONET ಮತ್ತು ECINET ಎಂದರೇನು?; ಇಲ್ಲಿದೆ ಮಾಹಿತಿ...

ಸಾಂದರ್ಭಿಕ ಚಿತ್ರ (Photo: Indian Express)
ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮುಗಿದ ರಾಜ್ಯಗಳಲ್ಲಿ, ತನ್ನ ಇಸಿನೆಟ್ (ECINET) ಪೋರ್ಟಲ್ನಲ್ಲಿ ಫಾರ್ಮ್ 6ರಿಂದ ಹೆಚ್ಚುವರಿ ಎಸ್ಐಆರ್ (SIR) ಘೋಷಣೆಯನ್ನು ತೆಗೆದುಹಾಕಿದೆ. ಆನ್ಲೈನ್ ಫಾರ್ಮ್ನಲ್ಲಿ ಕಾನೂನು ಅನುಮತಿಸುವುದಕ್ಕಿಂತ ಮೀರಿ ಬದಲಾಗಿದೆಯೇ ಎಂಬ ಪ್ರಶ್ನೆಗಳು ಎದ್ದ ಕೆಲವು ದಿನಗಳ ನಂತರ ಈ ಬೆಳವಣಿಗೆಯು ಆಯೋಗದ ಚುನಾವಣಾ ಪಟ್ಟಿ ಸಾಫ್ಟ್ವೇರ್ ಬಗ್ಗೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಇದಕ್ಕೂ ಮುನ್ನ, ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿಯು (CEO) ಕಳೆದ ವಾರ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಇಸಿನೆಟ್ ಪೋರ್ಟಲ್ನಲ್ಲಿ ನಾಲ್ಕು ಬದಲಾವಣೆಗಳನ್ನು ಕೋರಿದ್ದಾರೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿತ್ತು.
ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ರಾಜ್ಯದ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಈ ವೇದಿಕೆಯ ಮೂಲಕ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಹೇಗೆ ಬಳಸಬಹುದು ಎಂಬುದಕ್ಕೆ ಈ ಪ್ರಸ್ತಾವಿತ ಬದಲಾವಣೆಗಳು ಸಂಬಂಧಿಸಿವೆ.
ಮಹಾರಾಷ್ಟ್ರದ ಸಿಇಒ ಎಸ್. ಚೋಕಲಿಂಗಮ್ ಅವರು, ಯಾವ 'ತಾರ್ಕಿಕ ವ್ಯತ್ಯಾಸ' ಪ್ರಕರಣಗಳ ವಿಚಾರಣೆ ನಡೆಯಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಇಆರ್ಒಗಳಿಗೆ ನೀಡುವಂತೆ ಕೋರಿದ್ದಾರೆ. ಇದು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಚುನಾವಣಾ ಪಟ್ಟಿ ಸಾಫ್ಟ್ವೇರ್ ಕಾರ್ಯನಿರ್ವಹಣೆಯ ಬಗ್ಗೆ ವ್ಯಕ್ತಪಡಿಸಿದ್ದ ಕಳವಳವನ್ನು ಹೋಲುತ್ತದೆ.
ಸೆಪ್ಟೆಂಬರ್ 23ರಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ನಡೆಸಿದ ತನಿಖೆಯು ಈ ವಿಷಯವನ್ನು ಪ್ರಕಟಿಸಿತ್ತು. ಈ ಸಾಫ್ಟ್ವೇರ್ ಇಆರ್ಒಗಳ ಅಧಿಕಾರವನ್ನು ಮೊಟಕುಗೊಳಿಸುತ್ತಿದೆ ಎಂದು ಇಬ್ಬರು ಚುನಾವಣಾ ಆಯುಕ್ತರು ದಾಖಲೆಗಳಲ್ಲಿ ಎಚ್ಚರಿಸಿದ್ದರು. ಅಲ್ಲದೆ, ಐತಿಹಾಸಿಕವಾಗಿ ವಿಕೇಂದ್ರೀಕೃತವಾಗಿದ್ದ ಚುನಾವಣಾ ಪಟ್ಟಿ ಡೇಟಾವು ಕ್ರಮೇಣ 'ಕೇಂದ್ರೀಕರಣ'ಗೊಳ್ಳುತ್ತಿದೆ ಎಂದೂ ಸಂಧು ಮತ್ತು ಜೋಶಿ ಆತಂಕ ವ್ಯಕ್ತಪಡಿಸಿದ್ದರು.
ಹಾಗಾದರೆ ಈ ಎರೋನೆಟ್ (ERONET) ಮತ್ತು ಇಸಿನೆಟ್ (ECINET) ಎಂದರೇನು? ಮತದಾರರ ಪಟ್ಟಿ ಸಿದ್ಧತೆ ಮತ್ತು ಪರಿಷ್ಕರಣೆಯಲ್ಲಿ ಈ ಡಿಜಿಟಲ್ ವ್ಯವಸ್ಥೆಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತಿವೆ? ಎಂಬುದನ್ನು ನೋಡೋಣ
ಮೊದಲನೆಯದಾಗಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಎಂದರೆ ಏನು ಎಂಬುದು ತಿಳಿಯುವುದು ಮುಖ್ಯ. 1950ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 21(3)ರ ಅಡಿಯಲ್ಲಿ, ಚುನಾವಣಾ ಆಯೋಗವು "ಯಾವಾಗ ಬೇಕಾದರೂ... ಯಾವುದೇ ಕ್ಷೇತ್ರ ಅಥವಾ ಕ್ಷೇತ್ರದ ಭಾಗಕ್ಕೆ ಸಂಬಂಧಿಸಿದಂತೆ ತನ್ನ ಇಚ್ಛೆಯಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಕೈಗೊಳ್ಳುವಂತೆ ಸೂಚಿಸಬಹುದು."
1960ರ ಮತದಾರರ ನೋಂದಣಿ ನಿಯಮಗಳ ಪ್ರಕಾರ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು "ಚುನಾವಣಾ ಆಯೋಗದ ಸೂಚನೆಯಂತೆ ಸಂಪೂರ್ಣ ತೀವ್ರವಾಗಿ, ಅಥವಾ ಸಂಕ್ಷಿಪ್ತವಾಗಿ , ಇಲ್ಲವೇ ಭಾಗಶಃ ತೀವ್ರವಾಗಿ ಮತ್ತು ಭಾಗಶಃ ಸಂಕ್ಷಿಪ್ತವಾಗಿ" ನಡೆಸಬಹುದು. ತೀವ್ರ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಯನ್ನು ಮೊದಲಿನಿಂದ ಹೊಸದಾಗಿ ಸಿದ್ಧಪಡಿಸಲಾಗುತ್ತದೆ. ಆದರೆ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಅಸ್ತಿತ್ವದಲ್ಲಿರುವ ಪಟ್ಟಿಗೆ ತಿದ್ದುಪಡಿ ಮಾಡಲಾಗುತ್ತದೆ.
ಪ್ರತಿ ವರ್ಷ ಹಾಗೂ ಪ್ರತಿಯೊಂದು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಮೊದಲು ಸಂಕ್ಷಿಪ್ತ ಪರಿಷ್ಕರಣೆಗಳು ನಡೆಯುತ್ತವೆ.
►ಹಾಗಾದರೆ ಇಆರ್ಒ (ERO) ಅಧಿಕಾರಗಳು ಏನೇನು?
1950ರ ಜನಪ್ರತಿನಿಧಿ ಕಾಯಿದೆ ಮತ್ತು 1960ರ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ, ಮತದಾರರ ಪಟ್ಟಿಯನ್ನು ನವೀಕರಿಸುವ ಜವಾಬ್ದಾರಿಯು ಚುನಾವಣಾ ನೋಂದಣಿ ಅಧಿಕಾರಿಯ (ERO) ಮೇಲಿರುತ್ತದೆ.
ಇಆರ್ಒ ಎಂದರೆ ಸಾಮಾನ್ಯವಾಗಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (SDM) ಹುದ್ದೆಯ ಅಧಿಕಾರಿಯಾಗಿದ್ದು, ಇವರು ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಆಲಿಸುತ್ತಾರೆ ಹಾಗೂ ಯಾವ ಹೆಸರುಗಳು ಪಟ್ಟಿಯಲ್ಲಿ ಉಳಿಯಬೇಕು ಮತ್ತು ಯಾವ ಹೆಸರುಗಳನ್ನು ತೆಗೆದುಹಾಕಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬ ಇಆರ್ಒ ಇರುತ್ತಾರೆ.
ಮತದಾರರ ಪಟ್ಟಿಗೆ ಯಾವ ಹೆಸರು ಸೇರಬೇಕು ಎಂಬುದರ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕಿದ್ದ ಇಆರ್ಒಗೆ ಈ ಸಾಫ್ಟ್ವೇರ್ ಅಡ್ಡಿಯಾಗುತ್ತಿದೆ ಎಂಬುದನ್ನು 'ದಿ ಇಂಡಿಯನ್ ಎಕ್ಸ್ಪ್ರೆಸ್' ತನಿಖೆಯು ಬಹಿರಂಗಪಡಿಸಿದೆ. ಆಗಸ್ಟ್ 14ರಂದು ಚುನಾವಣಾ ಆಯುಕ್ತ ಸಂಧು ಅವರು ಇದೇ ಕಳವಳವನ್ನು ವ್ಯಕ್ತಪಡಿಸಿದ್ದರು. ವಾಸ್ತವದಲ್ಲಿ, ಇಆರ್ಒಗಳು ಕೇವಲ ಹೆಸರುಗಳನ್ನು ಸೇರಿಸಲು, ತೆಗೆದುಹಾಕಲು, ತೀರ್ಮಾನವನ್ನು ಬದಲಾಯಿಸಲು ಅಥವಾ ಮೇಲ್ಮನವಿಗಳನ್ನು ಪ್ರಕ್ರಿಯೆಗೊಳಿಸಲು ಮಾತ್ರ ಸಾಧ್ಯವಾಗುತ್ತಿದ್ದು, ಅಂತಿಮ ನಿರ್ಧಾರವು ಮಾತ್ರ ಹೊಸದಿಲ್ಲಿಯ ಕೇಂದ್ರ ಕಚೇರಿಯದ್ದೇ ಆಗಿರುತ್ತದೆ.
►ERONET ಮತ್ತು ECINET ಎಂದರೇನು?
ಮತದಾರರ ನೋಂದಣಿ, ಸ್ಥಳಾಂತರ ಮತ್ತು ಹೆಸರುಗಳ ಡಿಲೀಷನ್ ನಿರ್ವಹಿಸಲು ಎರೋನೆಟ್ ಅನ್ನು "ಕೇಂದ್ರೀಕೃತ ನಮೂನೆ ಸಂಸ್ಕರಣಾ ವ್ಯವಸ್ಥೆ" (centralized form processing system) ಎಂದು ಚುನಾವಣಾ ಆಯೋಗ ಹೇಳಿದೆ. ಇದು ರಾಜ್ಯಗಳು ತಮ್ಮ ಮತದಾರರ ಪಟ್ಟಿಯನ್ನು ನಿರ್ವಹಿಸಲು ಬಳಸುತ್ತಿದ್ದ 36 ಪ್ರತ್ಯೇಕ ವ್ಯವಸ್ಥೆಗಳು ಮತ್ತು ಡೇಟಾಗಳನ್ನು ಬದಲಾಯಿಸಿತು.
ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಮತ್ತು ಪರಿಷ್ಕರಿಸುವ ಪ್ರಕ್ರಿಯೆಯಲ್ಲಿ, ಚುನಾವಣಾ ನೋಂದಣಿ ಅಧಿಕಾರಿಗೆ (ERO) "ನಿರ್ಧಾರ ಬೆಂಬಲ ವ್ಯವಸ್ಥೆ"ಯಾಗಿ ಸಹಾಯ ಮಾಡಲು ಎರೋನೆಟ್ ಅನ್ನು ಉದ್ದೇಶಿಸಲಾಗಿದೆ.
1950ರ ಜನಪ್ರತಿನಿಧಿ ಕಾಯಿದೆಯ ಪ್ರಕಾರ, ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಮತ್ತು ಪರಿಷ್ಕರಿಸುವ ಜವಾಬ್ದಾರಿಯನ್ನು ಹೊಂದಿರುವ ಸಾಂವಿಧಾನಿಕ ಪ್ರಾಧಿಕಾರವೇ ಚುನಾವಣಾ ನೋಂದಣಿ ಅಧಿಕಾರಿ (ERO). ಆದ್ದರಿಂದ, ಒಬ್ಬ ವ್ಯಕ್ತಿಯು ಮತದಾರರ ಪಟ್ಟಿಗೆ ಸೇರಬೇಕೇ ಅಥವಾ ಬೇಡವೇ ಎಂಬುದನ್ನು ಎರೋನೆಟ್ ಸ್ವಯಂಪ್ರೇರಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಬದಲಿಗೆ, ಒಬ್ಬ ಮತದಾರನ ಒಂದೇ ರೀತಿಯ ಜನಸಂಖ್ಯಾ ವಿವರಗಳಿಗೆ ಹೊಂದಿಕೆಯಾಗುವ ನಕಲಿ ನಮೂದುಗಳನ್ನು ಮಾತ್ರ ಇದು ಇಆರ್ಒ ಅವರ ಗಮನಕ್ಕೆ ತರಬಲ್ಲದು. ತದನಂತರ ಇಆರ್ಒ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ನಿರ್ಧಾರ ಕೈಗೊಳ್ಳುವ ಮುನ್ನ ಕ್ಷೇತ್ರ ಪರಿಶೀಲನೆಯನ್ನು ನಡೆಸಬಹುದು.
ಇದಕ್ಕೆ ವ್ಯತಿರಿಕ್ತವಾಗಿ, ಇಸಿನೆಟ್ ಎನ್ನುವುದು ಹೊಸ ಮತ್ತು ವಿಶಾಲವಾದ ವೇದಿಕೆಯಾಗಿದ್ದು, ಈ ಹಿಂದೆ ಅನೇಕ ಪ್ಲಾಟ್ಫಾರ್ಮ್ಗಳಲ್ಲಿ ಹರಡಿಕೊಂಡಿದ್ದ ಚುನಾವಣಾ ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ಒಂದೆಡೆ ತರುತ್ತದೆ. 2026ರ ಜನವರಿಯಲ್ಲಿ ಅಧಿಕೃತವಾಗಿ ಪ್ರಾರಂಭವಾದ ಇದು, ಮತದಾರರು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಅಧಿಕಾರಿಗಳು ಬಳಸುತ್ತಿದ್ದ 40ಕ್ಕೂ ಹೆಚ್ಚು ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಸರಳಗೊಳಿಸಿದೆ.
ಮತದಾರರಿಗಾಗಿರುವ ಪ್ರಮುಖ ಸೇವೆಗಳು ನೋಂದಣಿ ಮತ್ತು ಮತದಾರರ ಪಟ್ಟಿ ಹುಡುಕಾಟದಿಂದ ಹಿಡಿದು, ಅರ್ಜಿಗಳ ಟ್ರ್ಯಾಕಿಂಗ್, ಎಲೆಕ್ಟ್ರಾನಿಕ್ ಮತದಾರರ ಗುರುತಿನ ಚೀಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹಾಗೂ ಮತಗಟ್ಟೆಗಳು ಮತ್ತು ಅಭ್ಯರ್ಥಿಗಳ ಬಗ್ಗೆ ಮಾಹಿತಿ ಪಡೆಯುವುದನ್ನು ಒಳಗೊಂಡಿವೆ.
ಈ ಹಿಂದೆ ಎರೋನೆಟ್ ಮೂಲಕ ನಿರ್ವಹಿಸಲ್ಪಡುತ್ತಿದ್ದ ಇದರ ಚುನಾವಣಾ ಪಟ್ಟಿ ಕಾರ್ಯಗಳನ್ನು, "ಇಸಿನೆಟ್ ಪೋರ್ಟಲ್ನ ಚುನಾವಣಾ ಪಟ್ಟಿ ಮಾಡ್ಯೂಲ್ (ಹಿಂದಿನ ಎರೋನೆಟ್)" ಎಂದು ಚುನಾವಣಾ ಆಯೋಗವು ಅಧಿಕೃತವಾಗಿ ವಿವರಿಸಿದೆ.
ಈ ಪ್ರಕ್ರಿಯೆಯಲ್ಲಿ ಇಸಿನೆಟ್ ಸಾಫ್ಟ್ವೇರ್ ಪತ್ತೆಹಚ್ಚುವ "ತಾರ್ಕಿಕ ವ್ಯತ್ಯಾಸಗಳನ್ನು" ಪರಿಹರಿಸಲು ಸಹ ಇಆರ್ಒ ಅಧಿಕಾರ ಹೊಂದಿದ್ದಾರೆ. ಇವು ಕೊನೆಯ ವಿಶೇಷ ಸಮಗ್ರ ಪರಿಷ್ಕರಣೆಯಿಂದ ಬಂದ ಮತದಾರರ ಪಟ್ಟಿಯಲ್ಲಿರುವ ಪೋಷಕರು ಅಥವಾ ಅಜ್ಜ-ಅಜ್ಜಿಯರೊಂದಿಗೆ ಮತದಾರನನ್ನು ಮ್ಯಾಪ್ ಮಾಡಲು ಸಾಫ್ಟ್ವೇರ್ ಪ್ರಯತ್ನಿಸಿದಾಗ ಉಂಟಾಗುವ ವ್ಯತ್ಯಾಸಗಳಾಗಿವೆ. ಉದಾಹರಣೆಗೆ, ಪೋಷಕರ ಹೆಸರು ಹೊಂದಾಣಿಕೆಯಾಗದಿರುವುದು, ಪೋಷಕರು ಮತ್ತು ಮಗುವಿನ ನಡುವಿನ ವಯಸ್ಸಿನ ವ್ಯತ್ಯಾಸವು 15 ವರ್ಷಕ್ಕಿಂತ ಕಡಿಮೆ ಅಥವಾ 50 ವರ್ಷಕ್ಕಿಂತ ಹೆಚ್ಚಿರುವುದು, ಹಳೆಯ ಮತ್ತು ಹೊಸ ಪಟ್ಟಿಯ ನಡುವೆ ವಯಸ್ಸು ಸರಿಯಾಗಿ ಇಲ್ಲದೇ ಇರುವುದು, ಅಥವಾ ಮತದಾರರು ಯಾವುದೇ ದಾಖಲೆಯನ್ನು ಸಲ್ಲಿಸದ ಅಥವಾ ಕೇವಲ ಆಧಾರ್ ಮಾತ್ರ ಸಲ್ಲಿಸಿದ ಸಂದರ್ಭಗಳು ಇದರಲ್ಲಿ ಸೇರಿವೆ.
►ಯಾವ ಕಳವಳಗಳು ವ್ಯಕ್ತವಾದವು ಮತ್ತು ಚುನಾವಣಾ ಆಯೋಗ ಹೇಗೆ ಪ್ರತಿಕ್ರಿಯಿಸಿತು?
ಪ್ರಸ್ತುತ ವಿವಾದವು ಸಾಫ್ಟ್ವೇರ್ ವಿನ್ಯಾಸದ ಸುತ್ತಲೇ ಇದೆ. ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಕಾನೂನುಬದ್ಧ ಅಧಿಕಾರ ಇಆರ್ಒ (ERO) ಬಳಿಯಿದ್ದರೂ, ಸಿಸ್ಟಮ್ನ ವಿನ್ಯಾಸ ಅಥವಾ ಕಾರ್ಯನಿರ್ವಹಣೆಯು ಇಆರ್ಒ ಅವರ ಸ್ವತಂತ್ರ ಅಧಿಕಾರಕ್ಕೆ ತಡೆಯೊಡ್ಡುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.
ಚುನಾವಣಾ ಸಾಫ್ಟ್ವೇರ್ ಕುರಿತ ಕಳವಳಗಳನ್ನು ಮೊದಲು 2025ರ ನವೆಂಬರ್ನಲ್ಲಿ ಎತ್ತಲಾಗಿತ್ತು ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ERONET ಕುರಿತೂ ಇದೇ ರೀತಿಯ ಕಳವಳಗಳು ವ್ಯಕ್ತವಾಗಿದ್ದವು. ಈಗ ECINET ವ್ಯವಸ್ಥೆಯು ಅದನ್ನು ನಿರ್ವಹಿಸುತ್ತಿದ್ದು, ಆ ಕಾಲದ ಐಟಿ ವ್ಯವಸ್ಥೆಯು ಇಆರ್ಒಗಳ ಸಾಂವಿಧಾನಿಕ ಅಧಿಕಾರಕ್ಕೆ ಯಾವುದೇ ನಿರ್ಬಂಧ ವಿಧಿಸಬಾರದು ಎಂದು ಗಮನಿಸಲಾಗಿತ್ತು.
ತನಿಖೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 23 ರಂದು ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ, ಇಆರ್ಒಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು "ಕಾಯ್ದೆಯಡಿ ನೋಂದಣಿ ಮತ್ತು ಹೆಸರು ಕೈಬಿಡುವ ಕುರಿತು ತಮ್ಮ ಸಾಂವಿಧಾನಿಕ ಅಧಿಕಾರದಂತೆ ಕಾರ್ಯನಿರ್ವಹಿಸುತ್ತಾರೆ" ಎಂದೂ, ಇದರ ಡಿಜಿಟಲ್ ವೇದಿಕೆಗಳು "ಅನಧಿಕೃತವಾಗಿ ತಿದ್ದುವುದನ್ನು ತಡೆಯಲು ಕಟ್ಟುನಿಟ್ಟಾದ ದತ್ತಾಂಶ ಸುರಕ್ಷತಾ ಶಿಷ್ಟಾಚಾರಗಳಡಿಯಲ್ಲಿ ಕೆಲಸ ಮಾಡುತ್ತವೆ" ಎಂದೂ ಆಯೋಗ ತಿಳಿಸಿತ್ತು.
ನಂತರ,ರವಿವಾರ (ಸೆಪ್ಟೆಂಬರ್ 27) ಚುನಾವಣಾ ಆಯೋಗವು ಪ್ರಮುಖ ಘೋಷಣೆಯೊಂದನ್ನು ಮಾಡಿದ್ದು, ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಹಾಗೂ ಐಐಟಿ ಅಥವಾ ಐಐಐಟಿಯ ಸ್ವತಂತ್ರ ತಜ್ಞರನ್ನೊಳಗೊಂಡ ಸಮಿತಿಯು 'ಇಸಿನೆಟ್' ವ್ಯವಸ್ಥೆಯನ್ನು ಪರಿಶೀಲಿಸಲಿದೆ ಎಂದು ತಿಳಿಸಿದೆ. ಅಲ್ಲದೆ, ಸಿಸ್ಟಮ್ನಲ್ಲಿ ಹೆಚ್ಚಿನ ವಿನಾಯಿತಿ ಕೋರುವ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಅದನ್ನು ಕಲ್ಪಿಸಲಾಗುವುದು ಹಾಗೂ ಆಯುಕ್ತರು ಅಧಿಕಾರಿಗಳಿಗೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದೂ ಆಯೋಗ ಸ್ಪಷ್ಟಪಡಿಸಿದೆ.
ಕೃಪೆ: indianexpress.com






