6 ತಿಂಗಳಲ್ಲಿ ಭಾರತದ LPG ಆಮದಿನಲ್ಲಿ ಅಮೆರಿಕದ ಪಾಲು ಶೇ. 50ಕ್ಕೂ ಹೆಚ್ಚು ಏರಿಕೆಯಾಗಿದ್ದು ಹೇಗೆ?
►ಸುಕಲ್ಪ್ ಶರ್ಮಾ- indianexpress. com ವರದಿ

Photo Credit : PTI
ಪಶ್ಚಿಮ ಏಷ್ಯಾದಲ್ಲಿನ ಪ್ರಾದೇಶಿಕ ಸಂಘರ್ಷದಿಂದಾಗಿ LPG ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ 12 ತಿಂಗಳ LPG ಹಡಗು ರವಾನೆ ದತ್ತಾಂಶಗಳ ವಿಶ್ಲೇಷಣೆಯ ಪ್ರಕಾರ, ಯುದ್ಧ ಪ್ರಾರಂಭವಾದ ನಂತರದ ಆರು ತಿಂಗಳಲ್ಲಿ ಭಾರತದ LPG ಆಮದಿನಲ್ಲಿ ಅಮೆರಿಕದ ಪಾಲು ಶೇ. 50ಕ್ಕಿಂತ ಹೆಚ್ಚಿದೆ. ಇದಕ್ಕೂ ಹಿಂದಿನ ಆರು ತಿಂಗಳಲ್ಲಿ ಈ ಪಾಲು ಶೇ. 10ಕ್ಕಿಂತ ಕಡಿಮೆಯಿತ್ತು.
ಫೆಬ್ರವರಿ ಕೊನೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡುವುದರೊಂದಿಗೆ ಪ್ರಾರಂಭವಾದ ಪಶ್ಚಿಮ ಏಷ್ಯಾ ಯುದ್ಧವು ಭಾರತದ LPG ಆಮದು ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಸಾಂಪ್ರದಾಯಿಕವಾಗಿ ಯುಎಇ, ಖತರ್, ಕುವೈತ್ ಮತ್ತು ಸೌದಿ ಅರೇಬಿಯಾದಂತಹ ಗಲ್ಫ್ ದೇಶಗಳು ಭಾರತಕ್ಕೆ LPG ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಆದರೆ ಪೂರೈಕೆ ಕೊರತೆಯ ನಡುವೆ, ಮಾರ್ಚ್-ಆಗಸ್ಟ್ ಅವಧಿಯಲ್ಲಿ ಭಾರತದ ಒಟ್ಟಾರೆ LPG ಆಮದು ಶೇ. 40ಕ್ಕಿಂತ ಹೆಚ್ಚು ಕುಸಿದಿದೆ. ಭೌಗೋಳಿಕ ರಾಜಕೀಯ ಸಂಘರ್ಷಗಳಿಂದ ದೂರವಿರುವ ಪರ್ಯಾಯ ಮೂಲಗಳನ್ನು ಹುಡುಕಲು ಭಾರತ ಮುಂದಾದ ಕಾರಣ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.
ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸರಬರಾಜಿನ ಐದನೇ ಒಂದು ಭಾಗ ಹಾದುಹೋಗುವ ‘ಹಾರ್ಮುಝ್ ಜಲಸಂಧಿ’ ಎಂಬ ಪ್ರಮುಖ ಜಲಮಾರ್ಗದಲ್ಲಿ ಹಡಗುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಕಿರಿದಾದ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ವಿಶಾಲ ಗಲ್ಫ್ ಪ್ರದೇಶದಿಂದ ಇಂಧನ ಪೂರೈಕೆಗೆ ಇದು ಪ್ರಮುಖ ಮಾರ್ಗವಾಗಿದೆ.
ಈ ಜಲಸಂಧಿಯ ಮೂಲಕ ಇಂಧನ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವು ಭಾರತ ಸೇರಿದಂತೆ ವಿವಿಧ ಇಂಧನ ಆಮದುದಾರ ದೇಶಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದೇಶದ ಕಚ್ಚಾ ತೈಲ ಮತ್ತು LNG ಪೂರೈಕೆಯ ಮೇಲೆಯೂ ಪರಿಣಾಮ ಬೀರಿದ್ದರೂ, LPG ಪೂರೈಕೆಯು ಅತ್ಯಂತ ತೀವ್ರವಾಗಿ ಸಂಕಷ್ಟಕ್ಕೆ ಈಡಾಗಿದೆ.
ಭಾರತದ ಕಚ್ಚಾ ತೈಲ ಆಮದಿನ ಸುಮಾರು ಶೇ. 40, LNG ಆಮದಿನ ಶೇ. 60 ಮತ್ತು LPG ಆಮದಿನ ಶೇ. 90ರಷ್ಟು ಭಾಗವು ಹಾರ್ಮುಝ್ ಜಲಸಂಧಿಯ ಮೂಲಕ ಪಶ್ಚಿಮ ಏಷ್ಯಾದಿಂದ ನಿಯಮಿತವಾಗಿ ಬರುತ್ತಿತ್ತು. ಭಾರತದ ಆಮದು ಅವಲಂಬನೆಯು ತೈಲಕ್ಕಾಗಿ ಶೇ. 88ಕ್ಕಿಂತ ಹೆಚ್ಚು, LPGಗಾಗಿ ಶೇ. 60 ಮತ್ತು ನೈಸರ್ಗಿಕ ಅನಿಲಕ್ಕಾಗಿ ಸುಮಾರು ಶೇ. 50ರಷ್ಟಿದೆ. ಇದರರ್ಥ ಭಾರತದ ಒಟ್ಟು LPG ಬಳಕೆಯ ಸುಮಾರು ಶೇ. 54ರಷ್ಟು ಭಾಗವು ಹಾರ್ಮುಝ್ ಜಲಸಂಧಿಯ ಮೂಲಕವೇ ರವಾನೆಯಾಗುತ್ತಿತ್ತು.
►ಪಶ್ಚಿಮ ಏಷ್ಯಾ ಹಿನ್ನಡೆ, ಅಮೆರಿಕದ ಮೇಲುಗೈ
ಸರಕು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ನೀಡಿರುವ ಹಡಗು ರವಾನೆ ದತ್ತಾಂಶಗಳ ವಿಶ್ಲೇಷಣೆಯ ಪ್ರಕಾರ, ಆಗಸ್ಟ್ವರೆಗಿನ ಆರು ತಿಂಗಳಲ್ಲಿ ಭಾರತದ ಒಟ್ಟಾರೆ LPG ಆಮದು ಹಿಂದಿನ ಆರು ತಿಂಗಳಿಗೆ (ಸೆಪ್ಟೆಂಬರ್-ಫೆಬ್ರವರಿ) ಹೋಲಿಸಿದರೆ ಶೇ. 43.1ರಷ್ಟು ಕುಸಿದು 71.4 ಲಕ್ಷ ಟನ್ಗಳಿಗೆ ತಲುಪಿದೆ. ಇದೇ ವೇಳೆ, ಅಮೆರಿಕದಿಂದ ಪೂರೈಕೆಯು ಶೇ. 281.1ರಷ್ಟು ಜಿಗಿತ ಕಂಡು 37.8 ಲಕ್ಷ ಟನ್ಗಳಿಗೆ ತಲುಪಿದ್ದು, ಮಾರ್ಚ್-ಆಗಸ್ಟ್ ಅವಧಿಯಲ್ಲಿ ಭಾರತದ ಒಟ್ಟು LPG ಆಮದಿನಲ್ಲಿ ಶೇ. 53ರಷ್ಟು ಪಾಲು ಪಡೆದುಕೊಂಡಿದೆ. ಸೆಪ್ಟೆಂಬರ್-ಫೆಬ್ರವರಿ ಅವಧಿಯಲ್ಲಿ ಅಮೆರಿಕವು ಸುಮಾರು 9.93 ಲಕ್ಷ ಟನ್ LPG ಪೂರೈಸಿತ್ತು, ಇದು ಭಾರತದ ಒಟ್ಟು ಆಮದಿನ ಶೇ. 7.9ರಷ್ಟಿತ್ತು.
ಯುದ್ಧಕ್ಕೂ ಮುನ್ನ ಭಾರತಕ್ಕೆ ಅತಿ ಹೆಚ್ಚು LPG ಪೂರೈಸುತ್ತಿದ್ದ ಯುಎಇ ಪಾಲು, ಸೆಪ್ಟೆಂಬರ್-ಫೆಬ್ರವರಿಯಲ್ಲಿದ್ದ ಶೇ. 37.8ರಿಂದ ಆಗಸ್ಟ್ವರೆಗಿನ ಆರು ತಿಂಗಳಲ್ಲಿ ಶೇ. 13.4ಕ್ಕೆ ಕುಸಿದಿದೆ. ಆಮದು ಪ್ರಮಾಣ ಶೇ. 79.8ರಷ್ಟು ಇಳಿಕೆಯಾಗಿ ಸುಮಾರು 9.58 ಲಕ್ಷ ಟನ್ಗಳಿಗೆ ತಲುಪಿದೆ. ಅದೇ ರೀತಿ, ಖತರ್ನಿಂದ ಆಮದು ಪ್ರಮಾಣವು ಮಾರ್ಚ್-ಆಗಸ್ಟ್ ನಲ್ಲಿ ಶೇ. 84.7ರಷ್ಟು ಭಾರೀ ಕುಸಿತ ಕಂಡು ಸುಮಾರು 4.05 ಲಕ್ಷ ಟನ್ಗಳಿಗೆ ತಲುಪಿದೆ. ಭಾರತದ LPG ಆಮದಿನಲ್ಲಿ ಅದರ ಪಾಲು ಹಿಂದಿನ ಆರು ತಿಂಗಳಲ್ಲಿದ್ದ ಶೇ. 21.1ರಿಂದ ಶೇ. 5.7ಕ್ಕೆ ಕುಸಿದಿದೆ.
ಸೆಪ್ಟೆಂಬರ್-ಫೆಬ್ರವರಿಯಲ್ಲಿ ಭಾರತದ LPG ಆಮದಿನಲ್ಲಿ ಶೇ. 15.1ರಷ್ಟು ಪಾಲು ಹೊಂದಿದ್ದ ಕುವೈತ್, ಮಾರ್ಚ್-ಆಗಸ್ಟ್ನಲ್ಲಿ ಶೇ. 81.7ರಷ್ಟು ಕುಸಿತ ಕಂಡು ಶೇ. 4.9ಕ್ಕೆ ಇಳಿದಿದೆ. ಆಮದು ಪ್ರಮಾಣ ಸುಮಾರು 3.46 ಲಕ್ಷ ಟನ್ ಗಳಿಗೆ ತಲುಪಿದೆ. ಸೌದಿ ಅರೇಬಿಯಾದಿಂದ LPG ಆಮದು ಪ್ರಮಾಣವು ಆಗಸ್ಟ್ವರೆಗಿನ ಆರು ತಿಂಗಳಲ್ಲಿ ಶೇ. 76.1ರಷ್ಟು ಇಳಿಕೆಯಾಗಿ ಸುಮಾರು 4.23 ಲಕ್ಷ ಟನ್ಗಳಿಗೆ ತಲುಪಿದೆ. ಸೆಪ್ಟೆಂಬರ್-ಫೆಬ್ರವರಿಯಲ್ಲಿ ಭಾರತದ ಆಮದಿನಲ್ಲಿ ಶೇ. 14.1ರಷ್ಟಿದ್ದ ರಿಯಾದ್ನ ಪಾಲು, ನಂತರದ ಆರು ತಿಂಗಳಲ್ಲಿ ಕೇವಲ ಶೇ. 5.9ಕ್ಕೆ ಕುಸಿದಿದೆ.
"ಮಧ್ಯಪ್ರಾಚ್ಯದಿಂದ ಪೂರೈಕೆ ಕಡಿಮೆಯಾಗಿರುವುದೇ ಅಮೆರಿಕದಿಂದ LPG ಆಮದು ಹೆಚ್ಚಾಗಲು ಪ್ರಮುಖ ಕಾರಣ. ಜಾಗತಿಕವಾಗಿ ಅಮೆರಿಕ ದೊಡ್ಡ LPG ಪೂರೈಕೆದಾರ ದೇಶವಾಗಿದ್ದು, ಭಾರತಕ್ಕೆ ತಕ್ಷಣಕ್ಕೆ ಲಭ್ಯವಿದ್ದ ಪರ್ಯಾಯ ಮಾರ್ಗವಾಯಿತು. ಪೂರೈಕೆ ಕೊರತೆಯ ಈ ವಾತಾವರಣದಲ್ಲೂ ಈ LPG ಸುಲಭವಾಗಿ ಸಿಗುತ್ತಿದೆ. ಇದು ಪಶ್ಚಿಮ ಏಷ್ಯಾದ ಪೂರೈಕೆ ವ್ಯತ್ಯಯದ ಸಮಯದಲ್ಲಿ ರಷ್ಯಾದ ತೈಲವು ಭಾರತಕ್ಕೆ ಹರಿದುಬಂದಂತೆಯೇ ಇದೆ" ಎಂದು ಕೆಪ್ಲರ್ನ ಮುಖ್ಯ ವಿಶ್ಲೇಷಕ ನಿಖಿಲ್ ದುಬೆ ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸಿದ್ದಾರೆ.
►ಹಾರ್ಮುಝ್ ಜಲಸಂಧಿಯ ಸವಾಲು ನಿರ್ಣಾಯಕ
ತಜ್ಞರ ಪ್ರಕಾರ, ಪಶ್ಚಿಮ ಏಷ್ಯಾದ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಭಾರತಕ್ಕೆ ಅಮೆರಿಕದ LPG ಪೂರೈಕೆ ಪ್ರಬಲವಾಗಿಯೇ ಮುಂದುವರಿಯುವ ನಿರೀಕ್ಷೆಯಿದೆ. ಆದರೆ ಪೂರೈಕೆ ಯಾವಾಗ ಸಹಜ ಸ್ಥಿತಿಗೆ ಬರಲಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟತೆಯಿಲ್ಲ.
"ಈ ಬಿಕ್ಕಟ್ಟಿಗೂ ಮುನ್ನವೇ ಜಾಗತಿಕವಾಗಿ ಅಮೆರಿಕವೇ ಅತಿ ದೊಡ್ಡ LPG ರಫ್ತುದಾರ ದೇಶವಾಗಿತ್ತು. ಯುದ್ಧಕ್ಕೂ ಮುನ್ನ ಅಮೆರಿಕದ ಪ್ರೋಪೇನ್ ಅನಿಲವು ಏಷ್ಯಾದ ಪೂರೈಕೆಗಿಂತ ಅಗ್ಗವಾಗಿತ್ತು. ಒಮ್ಮೆ ಕೊರತೆ ಎದುರಾದಾಗ ಮತ್ತು ಹತ್ತಿರದಲ್ಲಿ ಬೇರೆ ಯಾವುದೇ ಮಾರ್ಗವಿಲ್ಲದಿದ್ದಾಗ, ಭಾರತವು ಅಡುಗೆ ಅನಿಲದ ಲಭ್ಯತೆಗೆ ಮೊದಲ ಆದ್ಯತೆ ನೀಡಿತು. ಹೀಗಾಗಿ ದೂರದ ದೇಶದಿಂದ ಹೆಚ್ಚಿನ ವೆಚ್ಚ ತೆತ್ತಾದರೂ ತರಿಸಿಕೊಳ್ಳಲು ಮುಂದಾಯಿತು" ಎಂದು ಅಬುಧಾಬಿ ಮೂಲದ ಇಂಧನ ವಿಶ್ಲೇಷಕಿ ನಟಾಲಿಯಾ ಕಟೋನಾ ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಿಂದ ಪೂರೈಕೆ ಚೇತರಿಸಿಕೊಂಡರೆ ಅಮೆರಿಕದ ಪಾಲು ಕಡಿಮೆಯಾಗಬಹುದು ಎಂದು ಅವರು ನಿರೀಕ್ಷಿಸುತ್ತಾರೆ. ಆದರೆ ಹಾರ್ಮುಝ್ ಜಲಸಂಧಿಯ ಭದ್ರತೆಯು ಪ್ರಮುಖ "ಅನಿಶ್ಚಿತತೆ"ಯಾಗಿಯೇ ಉಳಿದಿದೆ.
"2027ರ ಒಪ್ಪಂದಗಳ ಕುರಿತು ನಡೆಯುತ್ತಿರುವ ಚರ್ಚೆ ಈಗ ಕುತೂಹಲಕಾರಿಯಾಗಿದೆ. ಮುಂದಿನ ವರ್ಷದ LPG ಆಮದಿನಲ್ಲಿ ಕನಿಷ್ಠ ಶೇ. 15ರಷ್ಟನ್ನು ಅಮೆರಿಕದೊಂದಿಗೆ ವಾರ್ಷಿಕ ಒಪ್ಪಂದಗಳ ಮೂಲಕ ಕಾಯ್ದಿರಿಸಲು ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದೆ ಎಂದು ವರದಿಯಾಗಿದೆ. ಯಾವುದೂ ಇನ್ನು ಅಂತಿಮಗೊಂಡಿಲ್ಲ, ಆದರೆ ಭಾರತವು ತನ್ನ ಆಮದು ಮೂಲಗಳನ್ನು ವಿಸ್ತರಿಸಲು ಬಯಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದರಲ್ಲಿ ವಾಣಿಜ್ಯ ಮಾತುಕತೆಯ ಕೋನವೂ ಇದೆ. ಹೆಚ್ಚಿನ ಅಮೆರಿಕನ್ ಇಂಧನವನ್ನು ಖರೀದಿಸುವುದು ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ನೆರವಾಗಬಹುದು" ಎಂದಿದ್ದಾರೆ ನಟಾಲಿಯಾ ಕಟೋನಾ.
ಪಶ್ಚಿಮ ಏಷ್ಯಾದಿಂದ LPG ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ, ಅಡುಗೆ ಅನಿಲ ನೆಚ್ಚಿಕೊಂಡಿರುವ ಕೋಟ್ಯಂತರ ಕುಟುಂಬಗಳಿಗೆ ಆದ್ಯತೆ ನೀಡಲು ಭಾರತವು ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರಿಗೆ LPG ವಿತರಣೆಯನ್ನು ನಿಯಂತ್ರಿಸಬೇಕಾಯಿತು. ಭಾರತದಲ್ಲಿ 33 ಕೋಟಿಗೂ ಹೆಚ್ಚು ಕುಟುಂಬಗಳು LPG ಸಂಪರ್ಕವನ್ನು ಹೊಂದಿವೆ. ಬೇಡಿಕೆಯನ್ನು ಸರಿದೂಗಿಸಲು ಕುಟುಂಬಗಳು LPG ಸಿಲಿಂಡರ್ ಕಾಯ್ದಿರಿಸುವ ಸಮಯದ ಅಂತರವನ್ನು ಸಹ ಹೆಚ್ಚಿಸಲಾಯಿತು.
ಆಮದು ನಷ್ಟವನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಲು ದೇಶೀಯ ರಿಫೈನರಿಗಳು ಉತ್ಪಾದನೆಯನ್ನು ಹೆಚ್ಚಿಸಿದವು. ಜೊತೆಗೆ ತೈಲ ಸಂಸ್ಥೆಗಳು ಪರ್ಯಾಯ ದೇಶಗಳಿಂದ LPG ಪಡೆಯಲು ತೀವ್ರ ಶ್ರಮಿಸಿದವು.
ದೇಶೀಯ ಉತ್ಪಾದನೆ ಹೆಚ್ಚಾದಂತೆ ಮತ್ತು ಅಮೆರಿಕ ಸೇರಿದಂತೆ ಪರ್ಯಾಯ ದೇಶಗಳಿಂದ ಆಮದು ಚೇತರಿಸಿಕೊಂಡಂತೆ ಕೆಲವು ತುರ್ತು ಕ್ರಮಗಳನ್ನು ಹಿಂಪಡೆಯಲಾಗಿದೆ. ಆದರೆ ಪೂರೈಕೆಯಲ್ಲಿ ಉಂಟಾದ ಕೊರತೆಯನ್ನು ಸಂಪೂರ್ಣವಾಗಿ ಸರಿದೂಗಿಸಲು ಇನ್ನೂ ಸಾಧ್ಯವಾಗಿಲ್ಲ.
ಭಾರತದ ವಾರ್ಷಿಕ LPG ಬಳಕೆ 3.3 ಕೋಟಿ ಟನ್ಗಳಿಗಿಂತ ಸ್ವಲ್ಪ ಹೆಚ್ಚಿದ್ದು, ಅಂದರೆ ದಿನಕ್ಕೆ ಸುಮಾರು 90,000 ಟನ್ ಗಳಷ್ಟಿದೆ. ಇದರಲ್ಲಿ ಶೇ. 60ರಷ್ಟು ಭಾಗ ಆಮದನ್ನೇ ಅವಲಂಬಿಸಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ, ದೇಶದ LPG ಬಳಕೆ ದಿನಕ್ಕೆ ಸುಮಾರು 80,000 ಟನ್ಗಳಿಗೆ ಕುಸಿದಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮೇ ತಿಂಗಳಲ್ಲಿ ಹಂಚಿಕೊಂಡ ಅಂದಾಜಿನಲ್ಲಿ ತಿಳಿಸಲಾಗಿದೆ.
ಸೌಜನ್ಯ: indianexpress.com






