Flydubai ಕ್ಯಾಪ್ಟನ್ ಗೆ ಚಾಕು ಇರಿತ: ಸಹ–ಪೈಲಟ್ ಗೆ ಹಾರಾಟದ ಅನುಮತಿ ಸಿಕ್ಕಿದ್ದು ಹೇಗೆ?
► ಇಸ್ರೇಲ್ ಗೆ ತೆರಳುತ್ತಿದ್ದ ವಿಮಾನದಲ್ಲಿನ ಘಟನೆ ಹುಟ್ಟುಹಾಕಿದ ಪೈಲಟ್ ಗಳ ಪರಿಶೀಲನೆ, ಭದ್ರತಾ ವ್ಯವಸ್ಥೆ ಕುರಿತು ಹಲವು ಪ್ರಶ್ನೆ ►ಯಶ್ ರಾಜ್ ಶರ್ಮಾ – Aljazeera. com

PhotoCredit : aljazeera.com
ದುಬೈ: ಕ್ಯಾಪ್ಟನ್ ಮೇಲೆ ಸಹ–ಪೈಲಟ್ ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ದುಬೈನಿಂದ ಟೆಲ್ ಅವೀವ್ ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಸೌದಿ ಅರೇಬಿಯ ದತ್ತ ತಿರುಗಿಸಿದ ಘಟನೆ ಪೈಲಟ್ ಗಳ ನೇಮಕಾತಿ, ಹಿನ್ನೆಲೆ ಪರಿಶೀಲನೆ, ಮಾನಸಿಕ ಆರೋಗ್ಯ ತಪಾಸಣೆ ಮತ್ತು ವಿಮಾನಯಾನ ಭದ್ರತೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಮಾನದಲ್ಲಿದ್ದ ಕ್ಯಾಪ್ಟನ್ ಚಾಕು ಇರಿತಕ್ಕೆ ಒಳಗಾದ ಸ್ಥಿತಿಯಲ್ಲಿಯೇ ಕಾಕ್ ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಪ್ರವೇಶಿಸಿ ಆರೋಪಿತ ಸಹ–ಪೈಲಟ್ ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಇಸ್ರೇಲಿನ ಅಧಿಕಾರಿಗಳು ತಿಳಿಸಿದ್ದಾರೆ.
‘ಆಕಾಶದಲ್ಲಿ ಸಂಭವಿಸಬಹುದಾಗಿದ್ದ ಭೀಕರ ದುರಂತ’ವನ್ನು ತಪ್ಪಿಸಿದ್ದಕ್ಕಾಗಿ ಭಾರತೀಯ ಪ್ರಜೆಯ ದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‘ನಿಜವಾದ ಹೀರೋ’ ಎಂದು ಬಣ್ಣಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಲು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಆದೇಶಿಸಿದೆ. ಘಟನೆಯ ಸತ್ಯಾಸತ್ಯತೆ, ಸಂದರ್ಭಗಳು, ವಿವರಗಳು ಮತ್ತು ಉದ್ದೇಶಗಳನ್ನು ನಿರ್ಧರಿಸಲು ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುವುದು. ಯಾವುದೇ ಭಯೋತ್ಪಾದಕ ಚಟುವಟಿಕೆ ಅಥವಾ ಉದ್ದೇಶದೊಂದಿಗೆ ಘಟನೆಗೆ ಸಂಪರ್ಕವಿದೆಯೇ, ಪೂರ್ವಯೋಜನೆ ಅಥವಾ ನಿರ್ದೇಶನವಿದೆಯೇ ಎಂಬುದನ್ನೂ ಪರಿಶೀಲಿಸಲಾಗುವುದು ಎಂದು UAE ಅಟಾರ್ನಿ ಜನರಲ್ ಹಮದ್ ಸೈಫ್ ಅಲ್–ಶಮ್ಸಿ ಗುರುವಾರ ತಿಳಿಸಿದ್ದಾರೆ.
ಸೌದಿ ಅರೇಬಿಯ ಇದುವರೆಗೆ ಘಟನೆಯ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ಹೀಗಾಗಿ, ಘಟನೆಯ ಕುರಿತು ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚಾಗಿವೆ. ಆರೋಪಿತ ದಾಳಿಕೋರನಿಗೆ ವಿಮಾನದಲ್ಲಿ ಪ್ರಯಾಣಿಸಲು ಹಾಗೂ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಲು ಹೇಗೆ ಅವಕಾಶ ದೊರೆಯಿತು ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
A second Flydubai plane was sent to Saudi Arabia to retrieve the stranded passengers and return them to Israel [Erik Marmor/Getty Images]
►FZ1073 ವಿಮಾನದಲ್ಲಿ ಏನಾಯಿತು?
ಫ್ಲೈದುಬೈನ FZ1073 ವಿಮಾನವು ದುಬೈನಿಂದ ಟೇಕ್ಆಫ್ ಆದ ಸುಮಾರು ಎರಡೂವರೆ ಗಂಟೆಗಳ ಬಳಿಕ, ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ 8.44ರ ಸುಮಾರಿಗೆ ತುರ್ತು ಸಂದೇಶ (distress call) ರವಾನಿಸಿತು.
ಇಸ್ರೇಲಿನ ಅಧಿಕಾರಿಗಳ ಪ್ರಕಾರ, ಕ್ಯಾಪ್ಟನ್ ಮತ್ತು ಸಹ–ಪೈಲಟ್ ನಡುವೆ ಕಾಕ್ ಪಿಟ್ ನಲ್ಲಿ ಜಗಳ ನಡೆಯುತ್ತಿದ್ದ ವೇಳೆ ವಿಮಾನವು ಕೇವಲ ಒಂದು ನಿಮಿಷದಲ್ಲಿ 33,000 ಅಡಿ (10,000 ಮೀಟರ್) ಎತ್ತರದಿಂದ 17,000 ಅಡಿಗೆ (5,000 ಮೀಟರ್) ವೇಗವಾಗಿ ಇಳಿಯಿತು.
ಪೈಲಟ್ ಗಳಲ್ಲಿ ಒಬ್ಬರು ಮತ್ತೊಬ್ಬರಿಗೆ ಚಾಕುವಿನಿಂದ ಇರಿದು, ಬಳಿಕ ವಿಮಾನವನ್ನು ಪತನಗೊಳಿಸಲು ಪ್ರಯತ್ನಿಸಿದರು ಎಂದು ನೆತನ್ಯಾಹು ಹೇಳಿದ್ದಾರೆ.
ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಛಾರ್ ಕಾಕ್ ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್ ಪಿಟ್ ಪ್ರವೇಶಿಸಿ ಆರೋಪಿತ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಬಳಿಕ ಸಿಬ್ಬಂದಿ ವಿಮಾನದ ನಿಯಂತ್ರಣವನ್ನು ಮರಳಿ ಪಡೆದರು. ಸುಮಾರು ಒಂದು ಗಂಟೆಯ ಬಳಿಕ ಸೌದಿ ಅರೇಬಿಯ ದ ತಬುಕ್ ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು.
ಘರ್ಷಣೆಯಲ್ಲಿ ಇಬ್ಬರೂ ಪೈಲಟ್ ಗಳು ಗಾಯಗೊಂಡಿದ್ದು, ಸೌದಿ ಅರೇಬಿಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Yaniv Hayun, one of the men who helped incapacitate the attacker on the Flydubai aircraft, holds an Israeli flag after arriving at the Ben Gurion International Airport, in Lod, near Tel Aviv, on September 30, 2026 [Ammar Awad/Reuters]
►ಆರೋಪಿತ ಸಹ–ಪೈಲಟ್ ಯಾರು?
ಕ್ಯಾಪ್ಟನ್ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿರುವ ಸಹ–ಪೈಲಟ್ ಕುರಿತು ಇದುವರೆಗೆ ಅತ್ಯಲ್ಪ ದೃಢೀಕೃತ ಮಾಹಿತಿ ಮಾತ್ರ ಲಭ್ಯವಾಗಿದೆ.
ಪ್ರಾಥಮಿಕ ಚಿಕಿತ್ಸೆ ಬಳಿಕ ಸೌದಿ ಅರೇಬಿಯ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅವರ ವಿರುದ್ಧ ಇದುವರೆಗೆ ಯಾವುದೇ ಅಧಿಕೃತ ಆರೋಪ ಹೊರಿಸಲಾಗಿಲ್ಲ. ಅವರ ಪೌರತ್ವದ ಬಗ್ಗೆಯೂ ಅಧಿಕೃತ ದೃಢೀಕರಣ ಹೊರಬಂದಿಲ್ಲ.
ಅವರ ಒಟ್ಟು ಹಾರಾಟದ ಗಂಟೆಗಳು, ಅರ್ಹತೆಗಳು ಅಥವಾ ಈ ಹಿಂದೆ ಫ್ಲೈದುಬೈ ವಿಮಾನದಲ್ಲಿ ಇಸ್ರೇಲ್ ಗೆ ಹಾರಾಟ ನಡೆಸಿದ್ದರೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವರದಿಗಳ ಪ್ರಕಾರ, ಅವರು ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಹಿಂದೆ ಫ್ಲೈದುಬೈನಲ್ಲಿ ಕೆಲಸಕ್ಕೆ ಸೇರಿದ್ದರು.
ಕೆಲವು ಇಸ್ರೇಲಿನ ಅಧಿಕಾರಿಗಳು ಘಟನೆಯನ್ನು ‘ಜಿಹಾದಿ ದಾಳಿ’ ಎಂದು ಹೇಳಲು ಮುಂದಾದರೂ, ಇದು ಉದ್ದೇಶಪೂರ್ವಕ ದಾಳಿಯೇ ಅಥವಾ ಇರಾನ್ ನ ಪಾತ್ರವಿದೆಯೇ ಎಂಬುದನ್ನು ಹೇಳಲು ‘ಇನ್ನೂ ಸಮಯವಿದೆ’ ಎಂದು ನೆತನ್ಯಾಹು ಹೇಳಿದ್ದಾರೆ. ದಾಳಿಯ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ.
‘ಆರೋಪಿತ ಪೈಲಟ್ ನನ್ನು ಅವರು ಬಂದಿರುವ UAEಗೆ ಅಥವಾ ವಿಮಾನ ಪ್ರಯಾಣ ಆರಂಭಿಸಿದ ಸ್ಥಳಕ್ಕೆ ವಾಪಸ್ ಕರೆದೊಯ್ಯಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ತನಿಖೆಯ ಮೇಲೆ ನಿಗಾ ಇರಿಸುತ್ತೇವೆ. ಅಗತ್ಯವಿದ್ದರೆ ತನಿಖೆಯಲ್ಲಿ ಭಾಗವಹಿಸಲೂಬಹುದು’ ಎಂದು ನೆತನ್ಯಾಹು ‘ಫಾಕ್ಸ್ ನ್ಯೂಸ್’ಗೆ ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆ ಮತ್ತು ಸೌದಿ ಅಧಿಕಾರಿಗಳ ಆರಂಭಿಕ ಹೇಳಿಕೆಗಳ ಪ್ರಕಾರ ತನಿಖೆ ಮುಂದುವರಿದಿದ್ದು, ಜನರು ಊಹಾಪೋಹಗಳಿಂದ ದೂರವಿರಬೇಕು ಎಂದು ಹೇಳಲಾಗಿದೆ.
►ಹಾರಾಟಕ್ಕೆ ಅನುಮತಿ ಸಿಕ್ಕಿದ್ದು ಹೇಗೆ?
ಫ್ಲೈದುಬೈ UAE ಮೂಲದ ವಿಮಾನಯಾನ ಸಂಸ್ಥೆಯಾಗಿದ್ದು, ಅದರ ಪ್ರಮಾಣೀಕರಣ ಮತ್ತು ಕಾರ್ಯಾಚರಣೆಯ ಮೇಲ್ವಿಚಾರಣೆಯು UAEಯ ‘ಜನರಲ್ ಸಿವಿಲ್ ಏವಿಯೇಷನ್ ಅಥಾರಿಟಿ’ (GCAA) ವ್ಯಾಪ್ತಿಗೆ ಬರುತ್ತದೆ.
ಫ್ಲೈದುಬೈನ ಪ್ರಮಾಣೀಕರಣ ಮತ್ತು ಸುರಕ್ಷತಾ ಮೇಲ್ವಿಚಾರಣೆಯ ಜವಾಬ್ದಾರಿ GCAAಗೆ ಸೇರಿದೆ ಎಂದು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (EASA) ರಾಯಿಟರ್ಸ್ ಗೆ ತಿಳಿಸಿದೆ. ವಿಮಾನ ಸಿಬ್ಬಂದಿ ಮತ್ತು ಅವರ ಹಾರಾಟದ ಅರ್ಹತೆಗೆ ಸಂಬಂಧಿಸಿದ ಅಗತ್ಯ ಮಾನದಂಡಗಳನ್ನು ವಿಮಾನಯಾನ ಸಂಸ್ಥೆ ಪೂರೈಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದೂ ಇದರ ಭಾಗವಾಗಿದೆ ಎಂದು EASA ಹೇಳಿದೆ.
GCAAಯ ನಿಯಂತ್ರಕ ಚೌಕಟ್ಟಿನ ಪ್ರಕಾರ, ಪೈಲಟ್ ಗೆ ಮಾನ್ಯವಾದ ವೃತ್ತಿಪರ ಪೈಲಟ್ ಪರವಾನಗಿ, ಸೂಕ್ತ ವಿಮಾನದ ಪ್ರಕಾರದ ರೇಟಿಂಗ್ (type rating), ಚಾಲ್ತಿಯಲ್ಲಿರುವ ‘ಕ್ಲಾಸ್ 1’ ವೈದ್ಯಕೀಯ ಪ್ರಮಾಣಪತ್ರ, ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಮತ್ತು ಅಗತ್ಯ ಹಾರಾಟದ ಅನುಭವ ಇರಬೇಕು.
‘ಕ್ಲಾಸ್ 1’ ವೈದ್ಯಕೀಯ ತಪಾಸಣೆಯಲ್ಲಿ ಪೈಲಟ್ ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೂ ಪರಿಶೀಲಿಸಲಾಗುತ್ತದೆ. ನಿರ್ದಿಷ್ಟ ಮಾನಸಿಕ ಆರೋಗ್ಯ ಸಮಸ್ಯೆಗಳು, ಮಾದಕ ದ್ರವ್ಯಗಳ ದುರುಪಯೋಗ ಅಥವಾ ಇತರ ಸಮಸ್ಯೆಗಳಿರುವ ಪೈಲಟ್ ಗಳನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಬಹುದು.
ಲಂಡನ್ ಮೂಲದ ವಾಯುಯಾನ ಸಲಹಾ ಸಂಸ್ಥೆ ‘ಸ್ಟ್ರಾಟೆಜಿಕ್ ಏರೋ ರಿಸರ್ಚ್’ನ ಮುಖ್ಯ ವಿಶ್ಲೇಷಕ ಸಾಜ್ ಅಹ್ಮದ್ ಪ್ರಕಾರ, ಪೈಲಟ್ ಗಳ ಭದ್ರತೆ, ಆರ್ಥಿಕ ಹಿನ್ನೆಲೆ ಮತ್ತು ಮಾನಸಿಕ ಆರೋಗ್ಯ ಸೇರಿದಂತೆ ವಿವಿಧ ಅಂಶಗಳ ಪರಿಶೀಲನೆ ನಡೆಯುತ್ತದೆ.
ಆದರೆ, ಈ ಪರಿಶೀಲನೆಗಳು ನಿರ್ದಿಷ್ಟ ಸಮಯದಲ್ಲಿ ವ್ಯಕ್ತಿಯ ಸ್ಥಿತಿಯನ್ನು ತೋರಿಸುವ ಒಂದು ಚಿತ್ರಣ ಮಾತ್ರ. ಕೆಲಸದ ಸ್ಥಳದಲ್ಲಿ ಅಥವಾ ಕಾಕ್ ಪಿಟ್ ನಲ್ಲಿ ವ್ಯಕ್ತವಾಗಬಹುದಾದ ಸಮಸ್ಯೆಗಳನ್ನು ಅವು ಯಾವಾಗಲೂ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಅವರು Aljazeera ಗೆ ತಿಳಿಸಿದ್ದಾರೆ.
ಅನ್ಯಾಯದ ಭಾವನೆ ಉಂಟಾದಾಗ ವ್ಯಕ್ತಿಯೊಬ್ಬ ಹೇಗೆ ಯೋಚಿಸುತ್ತಾನೆ ಮತ್ತು ಹೇಗೆ ವರ್ತಿಸಬಹುದು ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಕಷ್ಟ ಎಂದು ಅಹ್ಮದ್ ಹೇಳಿದ್ದಾರೆ.
A Flydubai aircraft carrying passengers from Tabuk, Saudi Arabia, stands on the tarmac after landing at Ben Gurion International Airport near Tel Aviv, Israel, on September 30, 2026 [Abir Sultan/EPA]
►ಇಸ್ರೇಲ್ ನಲ್ಲಿ ಭದ್ರತಾ ತಪಾಸಣೆ ಹೆಚ್ಚಳ
ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶಗಳ ಪಾಸ್ ಪೋರ್ಟ್ ಹೊಂದಿರುವ ಪೈಲಟ್ ಗಳಿಗೆ ಮಾತ್ರ ಇಸ್ರೇಲ್ ನಲ್ಲಿ ಇಳಿಯಲು ಅವಕಾಶ ನೀಡಲಾಗುತ್ತದೆ ಎಂಬುದು UAE ಜತೆಗಿನ ಒಪ್ಪಂದದ ಷರತ್ತು ಎಂದು ಇಸ್ರೇಲ್ ಸಾರಿಗೆ ಸಚಿವೆ ಮಿರಿ ರೆಗೆವ್ ಅವರನ್ನು ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಸಾರಿಗೆ ಸಚಿವಾಲಯದ ಭದ್ರತಾ ವಿಭಾಗದ ಜವಾಬ್ದಾರಿಗಳಲ್ಲಿ ಇಸ್ರೇಲ್ ಮೇಲೆ ಹಾರುವ ಅಥವಾ ದೇಶದಲ್ಲಿ ಇಳಿಯುವ ವಿದೇಶಿ ವಿಮಾನಗಳ ಭದ್ರತಾ ತಪಾಸಣೆ ಹಾಗೂ ವಾಯು ಸಾರಿಗೆ ಸೇವೆಗಳಿಗೆ ಭದ್ರತಾ ವ್ಯವಸ್ಥೆಗಳನ್ನು ನಿರ್ದೇಶಿಸುವುದು ಸೇರಿದೆ. ಆದರೆ, ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಪೈಲಟ್ ಗಳು ಅಥವಾ ಕ್ಯಾಬಿನ್ ಸಿಬ್ಬಂದಿಯ ದಿನನಿತ್ಯದ ವೈಯಕ್ತಿಕ ಹಿನ್ನೆಲೆ ಪರಿಶೀಲನೆಯ ಬಗ್ಗೆ ನಿರ್ದಿಷ್ಟ ಉಲ್ಲೇಖವಿಲ್ಲ.
ಘಟನೆಯ ಬಳಿಕ ಇಸ್ರೇಲ್ ಗೆ ವಿಮಾನ ಹಾರಿಸುವ ಪೈಲಟ್ ಗಳ ಮೇಲಿನ ಭದ್ರತಾ ತಪಾಸಣೆಯನ್ನು ಹೆಚ್ಚಿಸುವುದಾಗಿ ಇಸ್ರೇಲ್ ತಿಳಿಸಿದೆ.
‘ಇಸ್ರೇಲ್ ಗೆ ವಿಮಾನ ಹಾರಿಸುವ ಪ್ರತಿಯೊಬ್ಬ ಪೈಲಟ್ ನ ಗುರುತನ್ನು ನಾವು ತಿಳಿದುಕೊಳ್ಳುತ್ತೇವೆ, ಅವರು ಯಾರೆಂದು ಅರಿಯುತ್ತೇವೆ ಮತ್ತು ಒಂದು ರೀತಿಯ ಭದ್ರತಾ ತಪಾಸಣೆ ನಡೆಸುತ್ತೇವೆ’ ಎಂದು ಇಸ್ರೇಲ್ ಪ್ರಧಾನ ಮಂತ್ರಿಯ ಕಚೇರಿಯ ವಕ್ತಾರ ಡೊರಾನ್ ಸ್ಪೀಲ್ ಮನ್ ಹೇಳಿದ್ದಾರೆ.
►ಭಾರತೀಯ ಕ್ಯಾಪ್ಟನ್ ಮಚ್ಛಾರ್ ಯಾರು?
ಸಹ–ಪೈಲಟ್ ನ ದಾಳಿಯ ನಡುವೆಯೂ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರನ್ನು ಇಸ್ರೇಲ್ ಮತ್ತು ಭಾರತದ ನಾಯಕರು ‘ಹೀರೋ’ ಎಂದು ಶ್ಲಾಘಿಸಿದ್ದಾರೆ.
ಮಚ್ಛಾರ್ ಮುಂಬೈನ ಉಪನಗರದವರು. ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಅವರು ದುಬೈನಲ್ಲಿ ವಾಸಿಸುತ್ತಿದ್ದಾರೆ. ಸೌದಿ ಅರೇಬಿಯದ ತಬುಕ್ ನ ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
Indian pilot Smit Machchhar smiles in an unidentified location in this undated handout image released on September 30, 2026 [Israel Foreign Ministry/Handout via Reuters]
ಇಸ್ರೇಲಿ ಅಧಿಕಾರಿಗಳ ಪ್ರಕಾರ, ಮಚ್ಛಾರ್ ಕಾಕ್ ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಪ್ರವೇಶಿಸಿ ಸಹ–ಪೈಲಟ್ ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು. ಮಚ್ಛಾರ್ 2022ರಲ್ಲಿ ಫ್ಲೈದುಬೈ ಸೇರುವ ಮೊದಲು ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ವಾಣಿಜ್ಯ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ನಲ್ಲಿ ಕೆಲಸ ಮಾಡಿದ್ದರು ಎಂದು ಅವರ ಲಿಂಕ್ಡ್ಇನ್ ಪ್ರೊಫೈಲ್ ತಿಳಿಸುತ್ತದೆ. ಸುಮಾರು 15 ವರ್ಷಗಳ ವೃತ್ತಿಜೀವನದಲ್ಲಿ ಅವರು ಸುಮಾರು 9,750 ಹಾರಾಟದ ಗಂಟೆಗಳನ್ನು ಪೂರ್ಣಗೊಳಿಸಿದ್ದಾರೆ.
ಶಾಲಾ ಶಿಕ್ಷಣದ ಬಳಿಕ ಕುಟುಂಬದ ವ್ಯವಹಾರವನ್ನು ಮುಂದುವರಿಸುವ ಉದ್ದೇಶದಿಂದ ಅವರು ಗಾರ್ಮೆಂಟ್ ಇಂಜಿನಿಯರಿಂಗ್ ಕೋರ್ಸ್ಗೆ ಸೇರಿದ್ದರು. ಬಳಿಕ ಮುಂಬೈನ ವೆಲಿಂಗ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಅಧ್ಯಯನ ಮಾಡಿದರು.
ಸುಮಾರು 19 ವರ್ಷ ವಯಸ್ಸಿನವರಾಗಿದ್ದಾಗ ಅಲ್ಲಿ ನಡೆದ ವಿಮಾನಯಾನ ಕುರಿತ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ ಬಳಿಕ ಅವರಿಗೆ ವಿಮಾನ ಚಾಲನೆಯ ಬಗ್ಗೆ ಆಸಕ್ತಿ ಮೂಡಿತು.
ನಂತರ ನ್ಯೂಝಿಲೆಂಡ್ ನಲ್ಲಿ ವಿಮಾನ ಚಾಲನಾ ತರಬೇತಿ ಪಡೆದ ಮಚ್ಛಾರ್ ಸ್ಪೈಸ್ಜೆಟ್ ಸೇರಿದರು. ಅಲ್ಲಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ಫ್ಲೈದುಬೈ ಸೇರಿದ್ದು, ಕಳೆದ ನಾಲ್ಕು ವರ್ಷಗಳಿಂದ ಆ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
2025ರಲ್ಲಿ ಯೂಟ್ಯೂಬ್ ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ್ದ ಮಚ್ಛಾರ್, ‘ವಿಮಾನ ವಿಳಂಬವಾಗುವುದರ ಬಗ್ಗೆ ನನಗೆ ಚಿಂತೆಯಿಲ್ಲ. ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಇಳಿಯುವುದು ಮುಖ್ಯ’ ಎಂದು ಹೇಳಿದ್ದರು.
‘ನಾನು ಕಾಕ್ ಪಿಟ್ ಅಥವಾ ವಿಮಾನದಿಂದ ಹೊರಬಂದಾಗ, ನಾನು ಪೈಲಟ್ ಎಂದು ಇತರರಿಗೆ ತಿಳಿಯಬಾರದು ಎಂದು ನಾನು ಬಯಸುತ್ತೇನೆ’ ಎಂದೂ ಅವರು ಹೇಳಿದ್ದರು.
‘ಸಮವಸ್ತ್ರ ಧರಿಸಿದ ಬಳಿಕ ನನ್ನ ಸಂಪೂರ್ಣ ಗಮನ ಕೆಲಸದ ಮೇಲಿರುತ್ತದೆ. ಕೆಲಸ ಮುಗಿಸಿ ಕಾಕ್ಪಿಟ್ನಿಂದ ಹೊರಬಂದ ತಕ್ಷಣ ಪೈಲಟ್ ಕೆಲಸದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತೇನೆ. ಆಗ ಕುಟುಂಬದವರಿಗೆ ಸಮಯ ನೀಡಬೇಕು. ಮಕ್ಕಳಿಗೆ ನಮ್ಮೊಂದಿಗೆ ಆಟವಾಡಬೇಕಿರುತ್ತದೆ’ ಎಂದು ಮಚ್ಛಾರ್ ಹೇಳಿದ್ದರು.
►ಕಾಕ್ ಪಿಟ್ ನಲ್ಲಿ ಹಿಂಸಾಚಾರ ಎಷ್ಟು ಅಪರೂಪ?
ವಿಮಾನದೊಳಗೆ ಉದ್ದೇಶಪೂರ್ವಕ ಹಿಂಸಾಚಾರದ ಘಟನೆಗಳು ಅತ್ಯಂತ ಅಪರೂಪ. ಆದರೆ ಇಂತಹ ಘಟನೆ ಸಂಭವಿಸಿದಾಗ ಅದನ್ನು ನಿಯಂತ್ರಿಸುವುದು ಕಷ್ಟಕರವಾಗಿರುತ್ತದೆ.
ವಿಮಾನ ಸಿಬ್ಬಂದಿ ನೆರವು ಪಡೆಯಲು ಕಾಕ್ ಪಿಟ್ ಬಾಗಿಲು ತೆರೆಯುವುದು ಅಂತಹ ಸಂದರ್ಭಗಳಲ್ಲಿ ಅನುಸರಿಸಬಹುದಾದ ಕ್ರಮವಾಗಿದೆ ಎಂದು ಸಾಜ್ ಅಹ್ಮದ್ ಹೇಳಿದ್ದಾರೆ.
ಇಂತಹ ನೈಜ–ಸಮಯದ ಘಟನೆಗಳನ್ನು ಮುಂಚಿತವಾಗಿ ಊಹಿಸುವುದು ಮತ್ತು ನಿಯಂತ್ರಣಕ್ಕೆ ತರುವುದು ಕಷ್ಟ. ಫ್ಲೈದುಬೈ ಘಟನೆಯಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಇತರ ವಿಮಾನ ಸಿಬ್ಬಂದಿ ಇದ್ದದ್ದು ವಿಶೇಷವಾಗಿತ್ತು. ಬಳಿಕ ಅವರು ಸಿಬ್ಬಂದಿಯಾಗಿ ಮತ್ತೊಂದು ವಿಮಾನದಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು ಎಂದು ಅಹ್ಮದ್ ಹೇಳಿದ್ದಾರೆ. ಹೆಚ್ಚುವರಿ ಪೈಲಟ್ ಗಳು ನಿಯಂತ್ರಣ ತೆಗೆದುಕೊಳ್ಳಲು ಇಲ್ಲದಿದ್ದರೆ ಫಲಿತಾಂಶ ಏನಾಗುತ್ತಿತ್ತು ಎಂಬುದನ್ನು ಊಹಿಸುವುದೇ ಭಯಾನಕ ಎಂದು ಅವರು ಹೇಳಿದ್ದಾರೆ.
ಸೌಜನ್ಯ: Aljazeera.com






