ಶೇ. 50ರಷ್ಟು ರಿಯಾಯಿತಿಗೆ ನಕಲಿ ಕ್ಯಾನ್ಸರ್ ಔಷಧಗಳು, ಐಸಿಯು ಇಂಜೆಕ್ಷನ್ಗಳ ಮಾರಾಟ: ಬೆಂಗಳೂರು ಸೇರಿದಂತೆ 90 ಆಸ್ಪತ್ರೆಗಳಿಗೆ ನಕಲಿ ಕ್ಯಾನ್ಸರ್ ಔಷಧಗಳ ಸರಬರಾಜು ಆಗಿದ್ದು ಹೇಗೆ?
ತಂತ್ರಜ್ಞಾನವು ಮುಂದಿನ ನಕಲಿ ಔಷಧ ಜಾಲವನ್ನು ತಡೆಯಬಲ್ಲದೇ?

ಸಾಂದರ್ಭಿಕ ಚಿತ್ರ | Photo Credit : magnific.com
ಬೆಂಗಳೂರಿನಲ್ಲಿ ನಕಲಿ ಔಷಧಿ ಜಾಲದ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿರುವ ತನಿಖೆಯು ಕೇವಲ ಒಂದು ಔಷಧ ಅಂಗಡಿ ಅಥವಾ ಒಂದು ನಗರಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಭಾರತದ ಅಧಿಕೃತ ಆರೋಗ್ಯ ವ್ಯವಸ್ಥೆಗೆ ಕಳಪೆ ಅಥವಾ ನಕಲಿ ಔಷಧಗಳು ಎಷ್ಟು ಸುಲಭವಾಗಿ ನುಸುಳಬಲ್ಲವು ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ 90ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಿಗೆ ನಕಲಿ ಮತ್ತು ತಪ್ಪಾಗಿ ಲೇಬಲ್ ಮಾಡಲಾದ ಔಷಧಿಗಳನ್ನು ಪೂರೈಸಿರುವುದನ್ನು ಎಸ್ಐಟಿ ಪತ್ತೆ ಹಚ್ಚಿದೆ.
ಈ ತನಿಖೆಯ ಕೇಂದ್ರಬಿಂದುವಾಗಿ ಪರವಾನಗಿ ಪಡೆದ ಔಷಧ ವ್ಯಾಪಾರಿಯೊಬ್ಬರಿದ್ದು, ಅವರು ತಮ್ಮ ಅಧಿಕೃತ ಔಷಧ ವ್ಯವಹಾರವನ್ನು ಬಳಸಿ ವಿಶಾಲವಾದ ವಿತರಣಾ ಜಾಲವನ್ನು ನಿರ್ಮಿಸಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಹೆಚ್ಚಿನ ಬೇಡಿಕೆಯಿರುವ ಫೈಜರ್ (Pfizer) ಕಂಪನಿಯ ನಕಲಿ ಉತ್ಪನ್ನಗಳು, ಕ್ಯಾನ್ಸರ್ ಔಷಧಗಳು ಮತ್ತು ಐಸಿಯು ಇಂಜೆಕ್ಷನ್ಗಳು ಸೇರಿದಂತೆ ನಕಲಿ ಹಾಗೂ ತಪ್ಪಾಗಿ ಲೇಬಲ್ ಮಾಡಲಾದ ಔಷಧಿಗಳನ್ನು ಈ ಜಾಲವು ಪೂರೈಸಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ಔಷಧಿಗಳನ್ನು ಶೇಕಡಾ 50ರವರೆಗೆ ಭಾರೀ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಕೆಲವು ಕ್ಯಾನ್ಸರ್ ಔಷಧಿಗಳು ಹತ್ತಾರು ಸಾವಿರ ರೂಪಾಯಿ ಬೆಲೆ ಬಾಳುವ ಮಾರುಕಟ್ಟೆಯಲ್ಲಿ ಈ ರಿಯಾಯಿತಿಯು ಆಕರ್ಷಕವಾಗಿ ಕಾಣುವಂತೆ ಮಾಡಿತ್ತು.
15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್ ಒಳಗೊಂಡಿರುವ ಈ ವ್ಯಾಪಕ ಕಾರ್ಯಾಚರಣೆಯ ಕುರಿತು ತನಿಖಾಧಿಕಾರಿಗಳಿಗೆ ಸಾಕ್ಷ್ಯಗಳು ಲಭಿಸಿವೆ. ಇದರ ಪೂರೈಕೆಯು ಮಹಾರಾಷ್ಟ್ರ ಮತ್ತು ಗುಜರಾತ್ವರೆಗೂ ತಲುಪಿದೆ ಎಂದು ಶಂಕಿಸಲಾಗಿದೆ.
ಮಾಗಡಿಯ ತಾವರೆಕೆರೆಯಲ್ಲಿರುವ ರಹಸ್ಯ ಗೋದಾಮಿನ ಮೇಲೆ ದಾಳಿ ನಡೆಸಿದ ನಂತರ ಈ ಜಾಲದ ಬಣ್ಣ ಬಯಲಾಗಿದ್ದು, ತನಿಖೆ ಆರಂಭವಾಗಿದೆ.
ಈ ಅಂಕಿ-ಅಂಶಗಳಲ್ಲಿ 90 ಎಂಬ ಸಂಖ್ಯೆ ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ. ಆದರೆ ಈ ಔಷಧಿಗಳು ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳನ್ನು ತಲುಪಿದ ನಂತರ ಏನಾಯಿತು ಎಂಬುದು ಅತ್ಯಂತ ಮುಖ್ಯವಾದ ಪ್ರಶ್ನೆಯಾಗಿದೆ. ಇವುಗಳನ್ನು ರೋಗಿಗಳಿಗೆ ನೀಡಲಾಗಿದೆಯೇ? ಎಷ್ಟು ಸೀಸೆಗಳು ಅಥವಾ ಬ್ಯಾಚ್ಗಳು ಇದರಲ್ಲಿ ಶಾಮೀಲಾಗಿವೆ? ಔಷಧಿಗಳು ಎಲ್ಲಿಂದ ಬಂದವು ಎಂಬುದನ್ನು ಆಸ್ಪತ್ರೆಗಳು ಪರಿಶೀಲನೆ ಮಾಡಿದ್ದವೇ? ತಯಾರಕರ ದಾಖಲೆಗಳೊಂದಿಗೆ ಬ್ಯಾಚ್ ಸಂಖ್ಯೆಗಳನ್ನು ತಾಳೆ ಮಾಡಿ ನೋಡಲಾಗಿದೆಯೇ? ನಕಲಿ ಔಷಧಿಯೊಂದು ನೇರವಾಗಿ ಕಾನೂನುಬಾಹಿರ ಮಾರ್ಗದ ಮೂಲಕವೇ ವ್ಯವಸ್ಥೆಗೆ ಪ್ರವೇಶಿಸಬೇಕಿಲ್ಲದಿರುವುದರಿಂದ, ಈ ಪ್ರಶ್ನೆಗಳು ಅತ್ಯಂತ ನಿರ್ಣಾಯಕವಾಗಿವೆ.
ಔಷಧಿಯೊಂದು ಆಸ್ಪತ್ರೆಯನ್ನು ತಲುಪುವಷ್ಟರಲ್ಲಿ ಅದರೊಂದಿಗೆ ಇನ್ವಾಯ್ಸ್ಗಳು , ಉತ್ತಮ ಪ್ಯಾಕಿಂಗ್, ಔಷಧ ವ್ಯಾಪಾರಿಯ ಪರವಾನಗಿ ಮತ್ತು ಸಂಪೂರ್ಣ ಕಾನೂನುಬದ್ಧವಾಗಿ ಕಾಣುವ ಪೂರೈಕೆ ಸರಪಳಿಯೂ ಇರುತ್ತದೆ.
ಅಂತರ್ರಾಜ್ಯ ಜಾಲದ ಕಡೆಗೆ ಬೆರಳು ಮಾಡಿದ ದಿಲ್ಲಿ ಪ್ರಕರಣದ ತನಿಖೆ:
ಕ್ಯಾನ್ಸರ್ ಔಷಧಗಳು ದೊಡ್ಡ ತನಿಖೆಯ ಭಾಗವಾಗಿರುವುದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಆಗಸ್ಟ್ ತಿಂಗಳಲ್ಲಿ ದಿಲ್ಲಿ ಪೊಲೀಸರು ಕ್ಯಾನ್ಸರ್ ಔಷಧಿಗಳ್ಳತನ ಹಾಗೂ ಕಾನೂನುಬಾಹಿರ ವ್ಯಾಪಾರಕ್ಕೆ ಸಂಬಂಧಿಸಿದ ಅಂತರ್ರಾಜ್ಯ ಜಾಲವೊಂದನ್ನು ಭೇದಿಸಿ 17 ಜನರನ್ನು ಬಂಧಿಸಿದ್ದರು. ಈ ಜಾಲವು ಕಳ್ಳತನ ಮಾಡಲಾದ ಮತ್ತು ನಕಲಿ ಕ್ಯಾನ್ಸರ್ ಔಷಧಿಗಳ ವ್ಯವಹಾರ ನಡೆಸುತ್ತಿತ್ತು ಹಾಗೂ ಕೆಲವು ಸರ್ಕಾರಿ ಆಸ್ಪತ್ರೆಗಳಿಂದಲೇ ಔಷಧಿಗಳನ್ನು ಕದ್ದು ಕಾಳಸಂತೆಗೆ ಮಾರಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಈ ತನಿಖೆಯು ಹಲವು ರಾಜ್ಯಗಳಿಗೆ ಹಬ್ಬಿದ್ದು, ಇದು ಚಿಲ್ಲರೆ ಮಟ್ಟದ ಸಾಮಾನ್ಯ ವಂಚನೆಯಲ್ಲ, ಬದಲಿಗೆ ಸಂಘಟಿತ ಜಾಲಗಳ ಕೈವಾಡವಿರುವ ಗಂಭೀರ ಸಮಸ್ಯೆ ಎಂಬುದನ್ನು ಸೂಚಿಸುತ್ತದೆ. ದಿಲ್ಲಿ ಪ್ರಕರಣವು ಬೆಂಗಳೂರು ತನಿಖೆಯ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಏಕೆಂದರೆ ಈ ಎರಡೂ ಪ್ರಕರಣಗಳು ತಯಾರಕರಿಂದ ರೋಗಿಯವರೆಗೆ ಇರುವ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುತ್ತವೆ. ಔಷಧಿಗಳು ವಿತರಕರು, ಸಗಟು ವ್ಯಾಪಾರಿಗಳು, ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗಳ ಖರೀದಿ ವ್ಯವಸ್ಥೆಯ ಮೂಲಕ ಹಾದುಹೋಗುತ್ತವೆ. ಈ ಹಾದಿಯಲ್ಲಿ ಉತ್ಪನ್ನಗಳನ್ನು ಬೇರೆಡೆಗೆ ತಿರುಗಿಸಲು, ಬದಲಿಸಲು ಅಥವಾ ತಪ್ಪಾಗಿ ಲೇಬಲ್ ಮಾಡಲು ಹಲವು ಅವಕಾಶಗಳಿರುತ್ತವೆ.
ಸರ್ಕಾರಿ ಆಸ್ಪತ್ರೆಗಳ ಮೂಲಕ ರೋಗಿಗಳನ್ನು ತಲುಪಬೇಕಾದ ಔಷಧಿಗಳನ್ನೇ ಕಾಳಸಂತೆಗೆ ತಿರುಗಿಸಿದರೆ, ಆ ಸಮಸ್ಯೆ ಕೇವಲ ನಕಲಿ ಔಷಧಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ.ಇದು ಸಾರ್ವಜನಿಕ ಹಣದ ನಷ್ಟ ಮತ್ತು ದುಬಾರಿ ಚಿಕಿತ್ಸೆ ಭರಿಸಲಾರದ ರೋಗಿಗಳಿಗೆ ಚಿಕಿತ್ಸೆ ನೀಡಲು ಉದ್ದೇಶಿಸಿರುವ ವ್ಯವಸ್ಥೆಯ ವೈಫಲ್ಯದ ಪ್ರಶ್ನೆಯೂ ಹೌದು.
ರಾಜಸ್ಥಾನ ಹುಟ್ಟುಹಾಕಿರುವ ಆತಂಕಕಾರಿ ಪ್ರಶ್ನೆ:
ಬಿಕಾನೇರ್ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮತ್ತು ಸರ್ಕಾರದ ಪೂರೈಕೆ ಸರಪಳಿಯಲ್ಲಿ ಕ್ಯಾನ್ಸರ್ ಔಷಧಿಯ ಸೀಸೆಗಳು ಪತ್ತೆಯಾಗಿದ್ದವು. ಇದು ದಿಲ್ಲಿ ತನಿಖೆಯ ಬಳಿಕ ರಾಜಸ್ಥಾನದಲ್ಲೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಕಳ್ಳಸಾಗಣೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಆಸ್ಪತ್ರೆಯು ನಿರಾಕರಿಸಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಔಷಧಿಗಳನ್ನು ಪೂರೈಸುವ 'ರಾಜಸ್ಥಾನ ಮೆಡಿಕಲ್ ಸರ್ವೀಸಸ್ ಕಾರ್ಪೊರೇಷನ್ ಲಿಮಿಟೆಡ್' ಮೂಲಕ ತಮಗೆ ಬಂದ ಔಷಧಿಗಳ ಸರಿಯಾದ ದಾಖಲೆಗಳಿವೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಪೂರೈಕೆ ಸರಪಳಿಯ ಕುರಿತು ಕಠಿಣ ಪರಿಶೀಲನೆಗೆ ಆದೇಶಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರು, ದಿಲ್ಲಿ ಮತ್ತು ರಾಜಸ್ಥಾನದ ಪ್ರಕರಣಗಳು ಕೇವಲ ಕಳಪೆ ಗುಣಮಟ್ಟದ ಔಷಧಿಗಳ ತಯಾರಿಕೆಗೆ ಮಾತ್ರ ಸಂಬಂಧಿಸಿದ್ದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಔಷಧಿಯು ಕಾರ್ಖಾನೆಯಿಂದ ಹೊರಬಂದ ನಂತರ ಏನಾಗುತ್ತದೆ ಎಂಬುದರ ಕುರಿತು ಕೂಡ ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಭಾರತದಲ್ಲಿ 10,000ಕ್ಕೂ ಹೆಚ್ಚು ಔಷಧ ಉತ್ಪಾದನಾ ಘಟಕಗಳು ಮತ್ತು ಸುಮಾರು ಹತ್ತು ಲಕ್ಷ ಔಷಧದ ಅಂಗಡಿಗಳಿವೆ. ಹೀಗಾಗಿ ಇಡೀ ಸರಪಳಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಸರ್ಕಾರದ ಡೇಟಾ ಪ್ರಕಾರ, 2022ರ ಕೊನೆಯಿಂದ ನಿಯಂತ್ರಕರು ಔಷಧ ಘಟಕಗಳ ಮೇಲೆ 960ಕ್ಕೂ ಹೆಚ್ಚು ಅಪಾಯ-ಆಧಾರಿತ ತಪಾಸಣೆಗಳನ್ನು ನಡೆಸಿದ್ದು, ಸುಮಾರು 860 ಜಾರಿ ಕ್ರಮಗಳನ್ನು ಕೈಗೊಂಡಿದ್ದಾರೆ.
ತಂತ್ರಜ್ಞಾನವು ಮುಂದಿನ ನಕಲಿ ಔಷಧ ಜಾಲವನ್ನು ತಡೆಯಬಲ್ಲದೇ?
ಕಳಪೆ ಗುಣಮಟ್ಟದ ಮತ್ತು ನಕಲಿ ಔಷಧಿಗಳನ್ನು ಗುರುತಿಸಲು ಭಾರತವು ಡಿಜಿಟಲ್ ಪತ್ತೆಹಚ್ಚುವಿಕೆ, ಬಾರ್ಕೋಡ್ ವ್ಯವಸ್ಥೆಗಳು ಮತ್ತು ಅಪಾಯ-ಆಧಾರಿತ ತಪಾಸಣೆಗಳ ಬಳಕೆಯತ್ತ ಹೆಚ್ಚು ಗಮನ ಹರಿಸುತ್ತಿದೆ.
ಆದರೆ ಸರಪಳಿಯಲ್ಲಿರುವ ಪ್ರತಿಯೊಂದು ಕೊಂಡಿಯೂ ಅದನ್ನು ಸರಿಯಾಗಿ ಬಳಸಿದರೆ ಮಾತ್ರ ತಂತ್ರಜ್ಞಾನವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ಔಷಧಿಯ ಲೇಬಲ್ ಮತ್ತು ಪ್ಯಾಕಿಂಗ್ ಅಸಲಿಯಂತೆ ಕಾಣಿಸಬಹುದು, ಆದರೆ ತಯಾರಕರಿಂದ ಹಿಡಿದು ವಿತರಕರು, ಆಸ್ಪತ್ರೆ ಮತ್ತು ಅಂತಿಮವಾಗಿ ರೋಗಿಯನ್ನು ತಲುಪುವವರೆಗೆ ಅದರ ಇಡೀ ಪ್ರಯಾಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವೇ ಎಂಬುದು ನಿಜವಾದ ಪರೀಕ್ಷೆಯಾಗಿದೆ.
ಈ ಕಾರಣಕ್ಕಾಗಿಯೇ ಬೆಂಗಳೂರು ತನಿಖೆಯು ಕೇವಲ ಆ ನಗರಕ್ಕೆ ಮಾತ್ರ ಸೀಮಿತಗೊಳ್ಳದೆ ವ್ಯಾಪಕ ಗಮನ ಸೆಳೆಯುತ್ತದೆ. ಶಂಕಿತ ನಕಲಿ ಔಷಧಿಗಳು 90 ಆಸ್ಪತ್ರೆಗಳನ್ನು ತಲುಪಿವೆ ಎಂದು ಎಸ್ಐಟಿ ದೃಢಪಡಿಸಿದರೆ, ಅವುಗಳನ್ನು ಪೂರೈಸಿದವರು ಯಾರು ಎಂಬುದನ್ನು ಮಾತ್ರವಲ್ಲದೆ, ಈ ವ್ಯವಸ್ಥೆಯು ಎಲ್ಲಿ ಎಡವಿತು ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಬೇಕಾಗುತ್ತದೆ. ದಿಲ್ಲಿ, ರಾಜಸ್ಥಾನ, ಮುಂಬೈ, ಹೈದರಾಬಾದ್ ಮತ್ತು ಇತರ ಪ್ರಮುಖ ಆರೋಗ್ಯ ಮಾರುಕಟ್ಟೆಗಳಲ್ಲೂ ಇದೇ ರೀತಿಯ ಗಂಭೀರ ಪ್ರಶ್ನೆಗಳನ್ನು ಕೇಳಬೇಕಿದೆ. ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರಿಗೆ, ಔಷಧಿಯ ಅಸಲಿಯತ್ತು ಎನ್ನುವುದು ಕೇವಲ ತಾಂತ್ರಿಕ ವಿವರವಲ್ಲ.
ಅವರು ಹಣ ಪಾವತಿಸಿ ಪಡೆದ ಅಥವಾ ಸರ್ಕಾರದ ಯೋಜನೆಯಡಿ ಪಡೆದ ಚಿಕಿತ್ಸೆಯು, ವಾಸ್ತವವಾಗಿ ತಮಗೆ ಸಿಗಬೇಕಿದ್ದ ಸರಿಯಾದ ಚಿಕಿತ್ಸೆಯೇ ಹೌದೋ ಅಲ್ಲವೋ ಎಂಬುದಕ್ಕೆ ಅದೇ ಮೂಲವಾಗಿದೆ.
ಕೃಪೆ: Times of India






