ʼಈಗ 0%, ಮುಂದೆ 200%ʼ: ಭಾರತದ ಮೇಲೆ ಟ್ರಂಪ್ ಅವರ ಜೆನೆರಿಕ್ ಔಷಧ ಸುಂಕ ಯಾವ ರೀತಿ ಪರಿಣಾಮ ಬೀರಲಿದೆ ?

ಡೊನಾಲ್ಡ್ ಟ್ರಂಪ್ |Photo Credit : PTI
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಮದು ಸುಂಕಗಳ ಬಗ್ಗೆ ತಮ್ಮ ಒಲವನ್ನು ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಹೀಗೆ ಸುಂಕಗಳನ್ನು ವಿಧಿಸುವ ಅಥವಾ ಬೆದರಿಕೆ ಹಾಕುವ ಅವರ ಅಭ್ಯಾಸದಿಂದಾಗಿ ಅವರಿಗೆ ‘ಟ್ಯಾರಿಫ್ ಮ್ಯಾನ್’ ಎಂಬ ಅಡ್ಡಹೆಸರೂ ಬಂದಿದೆ. ಇದೀಗ ಅವರು ಮತ್ತೆ ಸುಂಕ ವಿಧಿಸುವ ಯೋಜನೆಯನ್ನು ಪ್ರಕಟಿಸಿದ್ದು, ಈ ಬಾರಿ ಜೆನೆರಿಕ್ ಔಷಧಗಳ ಮೇಲೆ ಸುಂಕ ವಿಧಿಸುತ್ತಿದ್ದಾರೆ.
ಔಷಧ ಉತ್ಪಾದನೆಯನ್ನು ಮತ್ತೆ ಅಮೆರಿಕಕ್ಕೆ ತರುವ ಪ್ರಯತ್ನದ ಭಾಗವಾಗಿ, ಜುಲೈ 21 ರಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಸುಂಕ ವಿಧಿಸುವ ಯೋಜನೆಯನ್ನು ಘೋಷಿಸಿದರು.
ಟ್ರಂಪ್ ಅವರ ಈ ನಡೆ ಭಾರತದ ಮೇಲೆ ಗಣನೀಯ ಪರಿಣಾಮ ಬೀರುವ ಸಾಧ್ಯತೆಯಿದೆ.
ಟ್ರಂಪ್ ಘೋಷಿಸಿದ್ದೇನು?
ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಭಾರೀ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 21 ರಂದು ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿವರಿಸಿರುವ ಅವರು, ಹಂತ ಹಂತವಾಗಿ ಸುಂಕ ವಿಧಿಸಲಾಗುವುದು ಎಂದಿದ್ದಾರೆ. ಮೊದಲ ಎರಡು ವರ್ಷ 0% ಸುಂಕ ಇರಲಿದ್ದು, 2028 ರಲ್ಲಿ ಇದು ಶೇಕಡಾ 100 ಕ್ಕೆ ಹಾಗೂ ಆನಂತರ ಶೇಕಡಾ 200 ಕ್ಕೆ ಏರಿಕೆಯಾಗಲಿದೆ.
ಆಮದುಗಳ ಮೇಲಿನ ಅವಲಂಬನೆಯಿಂದ ಉಂಟಾಗುವ ರಾಷ್ಟ್ರೀಯ ಭದ್ರತಾ ಕಳಕಳಿಗಳನ್ನು ನಿವಾರಿಸಲು ಬಳಸಲಾಗುವ 1962 ರ ಟ್ರೇಡ್ ಎಕ್ಸ್ಪ್ಯಾನ್ಷನ್ ಆಕ್ಟ್ನ 'ಸೆಕ್ಷನ್ 232' ಅನ್ನು ಈ ಸುಂಕಗಳನ್ನು ವಿಧಿಸಲು ಆಡಳಿತ ಮಂಡಳಿ ಬಳಸಿಕೊಳ್ಳಲು ಯೋಜಿಸಿದೆ ಎಂದು ವೈಟ್ಹೌಸ್ ಅಧಿಕಾರಿಯೊಬ್ಬರು 'ದಿ ಪೊಲಿಟಿಕೋ' ಪತ್ರಿಕೆಗೆ ಇಮೇಲ್ ಮೂಲಕ ತಿಳಿಸಿದ್ದಾರೆ.
ತಮ್ಮ ಪ್ರಕಟಣೆಯಲ್ಲಿ, ಪೇಟೆಂಟ್ ಹೊಂದಿರುವ ಬ್ರ್ಯಾಂಡೆಡ್ ಔಷಧಗಳ ಮೇಲಿನ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. "ಪೇಟೆಂಟ್ ಪಡೆದ, ಬ್ರ್ಯಾಂಡೆಡ್ ಅಥವಾ ಹೊಸ ಮಾದರಿಯ ಔಷಧಗಳ ಮೇಲಿನ ನೀತಿಯು ಅತ್ಯಂತ ಯಶಸ್ವಿಯಾಗಿದ್ದು, ಅದು ಈಗಿರುವಂತೆಯೇ ಮುಂದುವರಿಯಲಿದೆ" ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಟ್ರಂಪ್ ಶೇಕಡಾ 100 ರಷ್ಟು ಸುಂಕ ವಿಧಿಸಿದ್ದರು. ಔಷಧ ಕಂಪನಿಯು ಅಮೆರಿಕದಲ್ಲಿಯೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದರೆ ಅಷ್ಟು ಭಾರೀ ಸುಂಕ ವಿಧಿಸುವುದಿಲ್ಲ ಎಂದು ಅವರು ಅಂದು ತಿಳಿಸಿದ್ದರು.
ಟ್ರಂಪ್ ಅವರ ಪ್ರಸ್ತಾವನೆಯು ಮೂರು ಹಂತಗಳ ಯೋಜನೆಯನ್ನು ಒಳಗೊಂಡಿದೆ:
ಆಗಸ್ಟ್ 1, 2026 ರಿಂದ ಆಗಸ್ಟ್ 2028: ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಶೂನ್ಯ ಶೇಕಡಾ ಸುಂಕ.
ಆಗಸ್ಟ್ 2028 ರಿಂದ ಆಗಸ್ಟ್ 2029: ಆಮದುಗಳ ಮೇಲೆ ಶೇಕಡಾ 100 ರಷ್ಟು ಸುಂಕ.
ಆಗಸ್ಟ್ 2029 ರಿಂದ: ಸುಂಕವು ದ್ವಿಗುಣಗೊಂಡು ಶೇಕಡಾ 200 ಕ್ಕೆ ಏರಿಕೆ.
ಹೆಚ್ಚಿನ ಸುಂಕಗಳು ಜಾರಿಗೆ ಬರುವ ಮುನ್ನ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸವಲತ್ತಿನ ಅವಧಿಯನ್ನು ನೀಡಲಾಗಿದೆ.
ಜೆನೆರಿಕ್ ಔಷಧಗಳು ಎಂದರೆ ಏನು?
ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಪ್ರಕಾರ, ಜೆನೆರಿಕ್ ಔಷಧಗಳು ಬ್ರ್ಯಾಂಡೆಡ್ ಔಷಧಗಳ ತದ್ರೂಪುಗಳಾಗಿವೆ. ಅವು ಬ್ರ್ಯಾಂಡೆಡ್ ಔಷಧಗಳಲ್ಲಿರುವಂತೆಯೇ ಸಕ್ರಿಯ ಘಟಕಾಂಶಗಳನ್ನು ಹೊಂದಿದ್ದು, ದೇಹದಲ್ಲಿ ಅದೇ ರೀತಿಯಲ್ಲಿ ಕೆಲಸ ಮಾಡುತ್ತವೆ. ಆದರೆ, ಮುಖ್ಯವಲ್ಲದ ಇತರೆ ಘಟಕಾಂಶಗಳು ಬ್ರ್ಯಾಂಡೆಡ್ ಔಷಧದಲ್ಲಿ ಇರುವಂತೆಯೇ ಇರಬೇಕಾದ ಅಗತ್ಯವಿಲ್ಲ.
ಸಾಮಾನ್ಯವಾಗಿ ಜೆನೆರಿಕ್ ಔಷಧಗಳು ಬ್ರ್ಯಾಂಡೆಡ್ ಔಷಧಗಳಿಗಿಂತ ಶೇಕಡಾ 80 ರಿಂದ 85 ರಷ್ಟು ಅಗ್ಗವಾಗಿರುತ್ತವೆ. ತಯಾರಕರು ಔಷಧದ ಸಂಶೋಧನೆ, ಅಭಿವೃದ್ಧಿ ಮತ್ತು ಮಾರುಕಟ್ಟೆಗಾಗಿ ಹಣವನ್ನು ವೆಚ್ಚ ಮಾಡದಿರುವುದೇ ಇದಕ್ಕೆ ಪ್ರಮುಖ ಕಾರಣ.
ಇಂದು ಅಮೆರಿಕದಲ್ಲಿ ನೀಡಲಾಗುವ ಹೆಚ್ಚಿನ ಪ್ರಿಸ್ಕ್ರಿಪ್ಷನ್ಗಳಲ್ಲಿ ಜೆನೆರಿಕ್ ಔಷಧಗಳೇ ಪ್ರಮುಖ ಸ್ಥಾನ ಪಡೆದಿವೆ. 2025 ರಲ್ಲಿ ಎಫ್ಡಿಎ ನೀಡಿದ ವರದಿಯ ಪ್ರಕಾರ, ಅಲ್ಲಿ ನೀಡಲಾಗುವ ಪ್ರತಿ 10 ಪ್ರಿಸ್ಕ್ರಿಪ್ಷನ್ಗಳಲ್ಲಿ 9 ಜೆನೆರಿಕ್ ಔಷಧಗಳಿಗೇ ಸಂಬಂಧಿಸಿವೆ.
ಟ್ರಂಪ್ ಅವರ ಸುಂಕದ ಯೋಜನೆ ಭಾರತದ ಮೇಲೆ ಹೇಗೆ ಪ್ರಭಾವ ಬೀರಬಹುದು?
ಜೆನೆರಿಕ್ ಔಷಧಗಳ ಮೇಲೆ ಸುಂಕ ವಿಧಿಸುವ ಟ್ರಂಪ್ ಅವರ ಪ್ರಕಟಣೆಯು 'ವಿಶ್ವದ ಔಷಧಾಲಯ' ಎಂದೇ ಹೆಸರು ಪಡೆದಿರುವ ಭಾರತಕ್ಕೆ ಅತ್ಯಂತ ಪ್ರಮುಖವಾಗಿದೆ. ಜಾಗತಿಕ ಜೆನೆರಿಕ್ ಔಷಧ ಪೂರೈಕೆಯಲ್ಲಿ ಭಾರತವು ಶೇಕಡಾ 20 ರಷ್ಟು ಪಾಲು ಹೊಂದಿದ್ದು, 60 ವೈದ್ಯಕೀಯ ವಿಭಾಗಗಳಲ್ಲಿ ಸುಮಾರು 60,000 ಜೆನೆರಿಕ್ ಬ್ರ್ಯಾಂಡ್ಗಳನ್ನು ಉತ್ಪಾದಿಸುವ ಮೂಲಕ ವಿಶ್ವದ ಅತಿ ದೊಡ್ಡ ಪೂರೈಕೆದಾರ ಎನಿಸಿದೆ.
ಭಾರತದ ವಾಣಿಜ್ಯ ಸಚಿವಾಲಯದ ಪ್ರಕಾರ, 2024-25 ರಲ್ಲಿ ಅಮೆರಿಕಕ್ಕೆ ನಡೆದ ಔಷಧ ರಫ್ತು 10.5 ಶತಕೋಟಿ ಡಾಲರ್ಗಳಷ್ಟಿತ್ತು. ಇದು ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ಪ್ರಮುಖ ಸರಕುಗಳಲ್ಲಿ ಒಂದಾಗಿದೆ.
ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ವರದಿಯ ಅಂದಾಜಿನ ಪ್ರಕಾರ, ಭಾರತವು 2025 ರಲ್ಲಿ ಅಮೆರಿಕಕ್ಕೆ 9.7 ಶತಕೋಟಿ ಡಾಲರ್ ಮೌಲ್ಯದ ಔಷಧಗಳನ್ನು ರಫ್ತು ಮಾಡಿದೆ. ಇದು ಭಾರತದ ಒಟ್ಟು ಜಾಗತಿಕ ಔಷಧ ರಫ್ತಿನ ಶೇಕಡಾ 38 ರಷ್ಟಾಗಿದೆ.
ಅಮೆರಿಕದಲ್ಲಿ ಬಳಸಲಾಗುವ ಒಟ್ಟು ಜೆನೆರಿಕ್ ಔಷಧಗಳ ಪ್ರಮಾಣದಲ್ಲಿ ಭಾರತದ್ದೇ ಸುಮಾರು ಶೇಕಡಾ 40 ರಷ್ಟು ಪಾಲಿದೆ. ಅಲ್ಲಿ ರಕ್ತದೊತ್ತಡ, ಖಿನ್ನತೆ, ಮಧುಮೇಹ, ಕ್ಯಾನ್ಸರ್ ಮತ್ತು ಸಾಂಕ್ರಾಮಿಕ ರೋಗಗಳಿಗೆ ಭಾರತೀಯ ಜೆನೆರಿಕ್ ಔಷಧಗಳನ್ನು ವ್ಯಾಪಕವಾಗಿ ಶಿಫಾರಸು ಮಾಡಲಾಗುತ್ತದೆ. 2024 ರಲ್ಲಿ ʼಫೈನಾನ್ಶಿಯಲ್ ಪೋಸ್ಟ್ʼ ನೀಡಿದ ವರದಿಯ ಪ್ರಕಾರ, ಗರ್ಭನಿರೋಧಕ ಔಷಧಗಳ ಒಟ್ಟು ಪ್ರಿಸ್ಕ್ರಿಪ್ಷನ್ಗಳಲ್ಲಿ ಸುಮಾರು ಶೇಕಡಾ 65 ರಷ್ಟನ್ನು ಭಾರತದ 'ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್' ಮತ್ತು 'ಲುಪಿನ್ ಲಿಮಿಟೆಡ್' ಕಂಪನಿಗಳು ತಯಾರಿಸಿದ್ದವು.
ಟ್ರಂಪ್ ಅವರ ಪ್ರಕಟಣೆಯಿಂದ ತಕ್ಷಣಕ್ಕೆ ಯಾವುದೇ ಪರಿಣಾಮ ಬೀರದಿದ್ದರೂ, ಮುಂದಿನ ದಿನಗಳಲ್ಲಿ ಈ ಸುಂಕ ಜಾರಿಯಾದರೆ ಅಮೆರಿಕ ಮಾರುಕಟ್ಟೆಯಲ್ಲಿ ಭಾರತದ ಜೆನೆರಿಕ್ ಔಷಧಗಳ ರಫ್ತು ವೆಚ್ಚ ಹೆಚ್ಚಾಗಲಿದೆ. ಇದು ಭಾರತೀಯ ಔಷಧಗಳ ಸ್ಪರ್ಧಾತ್ಮಕತೆಯನ್ನು ತಗ್ಗಿಸಲಿದೆ.
ಸನ್ ಫಾರ್ಮಾ, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಅರವಿಂದೋ ಫಾರ್ಮಾ, ಲುಪಿನ್, ಜೈಡಸ್ ಲೈಫ್ಸೈನ್ಸಸ್, ಸಿಪ್ಲಾ, ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ನಂತಹ ಭಾರತೀಯ ಔಷಧ ಕಂಪನಿಗಳು ಈ ಸುಂಕದಿಂದ ಬಾಧಿತವಾಗಲಿವೆ.
ಚರ್ಮರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಅಮೆರಿಕದ ಮಾರುಕಟ್ಟೆಯಲ್ಲಿ ಸನ್ ಫಾರ್ಮಾ ದೊಡ್ಡ ಪಾಲು ಹೊಂದಿದೆ. ಅಂತೆಯೇ, ಇನ್ಹೇಲರ್ಗಳಂತಹ ಜೆನೆರಿಕ್ ಉಸಿರಾಟದ ಔಷಧಗಳು ಮತ್ತು ಸಂಕೀರ್ಣ ಔಷಧಗಳನ್ನು ಸಿಪ್ಲಾ ಪೂರೈಸುತ್ತದೆ. ಆಲ್ಕೆಮ್ ಲ್ಯಾಬೊರೇಟರೀಸ್ ಅಮೆರಿಕಕ್ಕೆ ಹೆಚ್ಚಿನ ಸಂಖ್ಯೆಯ ಜೆನೆರಿಕ್ ಆಂಟಿಬಯೋಟಿಕ್, ಗ್ಯಾಸ್ಟ್ರೋಇಂಟೆಸ್ಟೈನಲ್ ಮತ್ತು ನೋವು ನಿವಾರಕ ಔಷಧಗಳನ್ನು ರಫ್ತು ಮಾಡುತ್ತದೆ.
ಪ್ರತಿಯೊಂದು ಕಂಪನಿಯ ಮೇಲೂ ಬೀರುವ ಪರಿಣಾಮವು ಭಿನ್ನವಾಗಿರುತ್ತದೆ.
ಟ್ರಂಪ್ ಅವರ ಪ್ರಕಟಣೆ ಹೊರಬಿದ್ದ ತಕ್ಷಣವೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಫಾರ್ಮಾ ಷೇರುಗಳು ಕುಸಿತ ಕಂಡವು. ಲೈವ್ಮಿಂಟ್ ವರದಿಯ ಪ್ರಕಾರ, ನಿಫ್ಟಿ ಫಾರ್ಮಾ ಸೂಚ್ಯಂಕದಲ್ಲಿ ಲುಪಿನ್, ಗ್ಲ್ಯಾಂಡ್ ಫಾರ್ಮಾ, ಅರವಿಂದೋ ಫಾರ್ಮಾ, ಅಜಂತಾ ಫಾರ್ಮಾ, ಸಾಯಿ ಲೈಫ್ ಸೈನ್ಸಸ್ ಮತ್ತು ಜೈಡಸ್ ಲೈಫ್ಸೈನ್ಸಸ್ ಷೇರುಗಳು ತಲಾ ಶೇಕಡಾ ಎರಡಕ್ಕಿಂತ ಹೆಚ್ಚು ಕುಸಿತ ಕಂಡು ಪ್ರಮುಖ ನಷ್ಟ ಅನುಭವಿಸಿದವು.
ಟ್ರಂಪ್ ವಿಧಿಸಿರುವ ಈ ಸುಂಕಗಳು ಭಾರತೀಯ ಕಂಪನಿಗಳು ಅಮೆರಿಕದ ನೆಲದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವಂತೆ ಒತ್ತಾಯಿಸಲಿದ್ದು, ಇದು ಭಾರತದ ರಫ್ತು ಪ್ರಮಾಣದ ಮೇಲೆ ದುಷ್ಪರಿಣಾಮ ಬೀರಲಿದೆ.
ಜೆನೆರಿಕ್ ಔಷಧ ತಯಾರಕರಿಗೆ ಹೆಚ್ಚಿನ ಸವಾಲು ಏಕೆ?
ಪೇಟೆಂಟ್ ಹೊಂದಿದ ಔಷಧಗಳ ತಯಾರಕರಿಗಿಂತ ಭಿನ್ನವಾಗಿ, ಜೆನೆರಿಕ್ ಔಷಧ ಕಂಪನಿಗಳು ಕಡಿಮೆ ಲಾಭದ ಪ್ರಮಾಣದಲ್ಲಿ ಕೆಲಸ ಮಾಡುತ್ತವೆ. ವೆಚ್ಚವನ್ನು ಕಡಿಮೆಯಿರಿಸಲು ಇವು ಜಾಗತಿಕ ಉತ್ಪಾದನಾ ಜಾಲಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿವೆ.
ಹೀಗಾಗಿ, ಈ ಹೆಚ್ಚುವರಿ ಸುಂಕದ ಹೊರೆಯನ್ನು ಭರಿಸುವುದು ಅಥವಾ ತಮ್ಮ ಉತ್ಪಾದನಾ ಘಟಕಗಳನ್ನು ತಕ್ಷಣವೇ ಅಮೆರಿಕಕ್ಕೆ ಸ್ಥಳಾಂತರಿಸುವುದು ಇವುಗಳಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ.
ಸ್ಯಾಂಡೋಜ್, ಟೆವಾ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಮತ್ತು ವಯಾಟ್ರಿಸ್ನಂತಹ ಜಾಗತಿಕ ಪ್ರಮುಖ ಜೆನೆರಿಕ್ ಔಷಧ ತಯಾರಕ ಸಂಸ್ಥೆಗಳು ತಮ್ಮ ಹೆಚ್ಚಿನ ಉತ್ಪನ್ನಗಳನ್ನು ಅಮೆರಿಕದ ಹೊರಗಿನ ದೇಶಗಳಲ್ಲೇ ತಯಾರಿಸುತ್ತವೆ. ಜೆನೆರಿಕ್ ಔಷಧಗಳ ಮೇಲೆ ಅಮೆರಿಕ ವಿಧಿಸುವ ಭಾರೀ ಸುಂಕವು ಔಷಧಗಳ ಬೆಲೆಯನ್ನು ಹೆಚ್ಚಿಸಿ, ರೋಗಿಗಳಿಗೆ ಔಷಧ ದೊರೆಯುವುದನ್ನು ಕಷ್ಟಕರವಾಗಿಸಬಹುದು ಎಂದು 'ಸ್ಯಾಂಡೋಜ್' ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್ ಸೇನರ್ ಮುಂಚಿತವಾಗಿಯೇ ಎಚ್ಚರಿಸಿದ್ದರು.
ಈ ತೀರ್ಮಾನವು ಅಮೆರಿಕದಲ್ಲಿ ಔಷಧಗಳ ಬೆಲೆಯನ್ನು ಹೆಚ್ಚಿಸಲಿದೆಯೇ?
ದೀರ್ಘಾವಧಿಯಲ್ಲಿ, ಟ್ರಂಪ್ ಅವರ ಈ ಸುಂಕದ ನಿರ್ಧಾರವು ಅಮೆರಿಕದಲ್ಲಿ ಔಷಧಗಳನ್ನು ಮತ್ತಷ್ಟು ದುಬಾರಿಯಾಗಿಸುವ ಸಾಧ್ಯತೆಯಿದೆ. ಸುಂಕದ ಕಾರಣದಿಂದ ಆಮದು ವೆಚ್ಚಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾದರೆ, ಔಷಧ ತಯಾರಕರು ಆ ಹೆಚ್ಚುವರಿ ವೆಚ್ಚದ ಹೊಣೆಯನ್ನು ವಿತರಕರು ಮತ್ತು ಆರೋಗ್ಯ ರಕ್ಷಣಾ ಸಂಸ್ಥೆಗಳ ಮೇಲೆ ವರ್ಗಾಯಿಸಬಹುದು. ಇದರಿಂದ ವಿಮಾ ಕಂಪನಿಗಳ ಮೇಲಿನ ಪರಿಹಾರದ ವೆಚ್ಚ ಹೆಚ್ಚಾಗಲಿದ್ದು, ಅಂತಿಮವಾಗಿ ರೋಗಿಗಳೇ ಔಷಧಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿ ಬರಬಹುದು.
ಅಮೆರಿಕಕ್ಕೆ ಔಷಧ ರಫ್ತು ಮಾಡುವುದು ಲಾಭದಾಯಕವಲ್ಲ ಎಂದು ಕಂಪನಿಗಳು ಭಾವಿಸಿದರೆ, ಮಾರುಕಟ್ಟೆಯಲ್ಲಿ ಸ್ಪರ್ಧೆ ಕಡಿಮೆಯಾಗಿ ಈಗಾಗಲೇ ಇರುವ ಔಷಧಗಳ ಅಭಾವ ಮತ್ತಷ್ಟು ಉಲ್ಬಣಗೊಳ್ಳಬಹುದು ಎಂದು ಕೆಲವು ವಿಶ್ಲೇಷಕರು 'ರಾಯಿಟರ್ಸ್'ಗೆ ತಿಳಿಸಿದ್ದಾರೆ.
ಅದೇನೇ ಇದ್ದರೂ, ಇದರ ನೈಜ ಪರಿಣಾಮವು ಅಮೆರಿಕದಲ್ಲಿಯೇ ನಡೆಯುವ ಔಷಧ ಉತ್ಪಾದನೆಯು ಎಷ್ಟು ವೇಗವಾಗಿ ವಿಸ್ತರಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.






