ಹುಮಾಯೂನ್ ಸಮಾಧಿ-ಮೊಗಲರ ಕಾಲದ ವಾಸ್ತುಶಿಲ್ಪದ ಪರಿವರ್ತನೆಯ ಸಂಕೇತ

ದಿಲ್ಲಿ: ಮೊಗಲ್ ಚಕ್ರವರ್ತಿ ಹುಮಾಯೂನ್ ಸಮಾಧಿ(ಹುಮಾಯೂನ್-ಕಾ-ಮಖ್ಬರಾ)ಯು ಹೊಸದಿಲ್ಲಿಯಲ್ಲಿರುವ ಇತಿಹಾಸ ಪ್ರಸಿದ್ಧ ಸ್ಮಾರಕ. ಇದು ಕೇವಲ ಒಂದು ಸಮಾಧಿಯಲ್ಲ, ಬದಲಾಗಿ ಭಾರತದಲ್ಲಿ ಮೊಗಲರ ಕಾಲದ ವಾಸ್ತುಶಿಲ್ಪದ ಪರಿವರ್ತನೆಯ ಸಂಕೇತವಾಗಿ ಗುರುತಿಸಿಕೊಂಡಿದೆ. ಇದರ ವಾಸ್ತುಶಿಲ್ಪದ ಶೈಲಿಯು ತಾಜ್‌ಮಹಲ್ ಸೇರಿದಂತೆ ಅನೇಕ ಸ್ಮಾರಕಗಳಿಗೆ ಮಾದರಿಯಾಯಿತು.
ಹುಮಾಯೂನ್ ಸಮಾಧಿಯನ್ನು ಅವರ ಪತ್ನಿ ಬೇಗಮ್ ಹಾಜಿ ಬೀಗಾ (ಹಮೀದಾ ಬಾನು ಬೇಗಮ್) ಅವರು ಕ್ರಿ.ಶ.1565ರಲ್ಲಿ ನಿರ್ಮಾಣ ಮಾಡಲು ಆದೇಶಿಸಿದರು. ಇದರ ನಿರ್ಮಾಣ ಕಾರ್ಯವನ್ನು ಪರ್ಷಿಯಾ(ಇಂದಿನ ಇರಾನ್)ದ ವಾಸ್ತುಶಿಲ್ಪಿಹಾಗೂ ಉದ್ಯಾನ ವಿನ್ಯಾಸಗಾರ ಮಿರಾಕ್ ಮಿರ್ಝಾ ಘಿಯಾಸ್ ಅವರ ಮಾರ್ಗ ದರ್ಶನದಲ್ಲಿ ನಡೆಸಲಾಯಿತು. ಈ ಸಮಾಧಿ ಕ್ರಿ.ಶ.1572ರಲ್ಲಿ ಪೂರ್ಣಗೊಂಡಿತು. ಇದು ಭಾರತದ ಮೊಗಲರ ಕಾಲದ ವಾಸ್ತುಶಿಲ್ಪದಲ್ಲಿ ಹೊಸ ಶೈಲಿಯ ಆರಂಭಕ್ಕೆ ಕಾರಣವಾಯಿತು.
ಪರ್ಷಿಯನ್ ಹಾಗೂ ಇಂಡೋ-ಇಸ್ಲಾಮಿಕ್ ವಿನ್ಯಾಸ ಶೈಲಿಯನ್ನು ಸಂಯೋಜನೆ ಮಾಡಿ, ಚಾರ್‌ಬಾಗ್(ನಾಲ್ಕು ಉದ್ಯಾನ) ವಿನ್ಯಾಸವನ್ನು ಭಾರತದಲ್ಲಿ ಮೊದಲ ಬಾರಿ ಪರಿಚಯಿಸಿದವರು ಮಿರಾಕ್ ಮಿರ್ಝಾ ಘಿಯಾಸ್. ಸುಮಾರು 8 ಸಾವಿರ ಮಂದಿ ಕಾರ್ಮಿಕರು ಏಳು ವರ್ಷಗಳ ಕಾಲ ಈ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದರು.
ಹುಮಾಯೂನ್ ಸಮಾಧಿ ಭಾರತೀಯ ಇತಿಹಾಸದ ಒಂದು ಜೀವಂತ ಅಧ್ಯಾಯವಾಗಿದೆ. ಅದು ಮೊಗಲ್ ಕಾಲದ ಕಲಾ ನೈಪುಣ್ಯ, ಪರ್ಷಿಯನ್ ಪ್ರಭಾವ ಮತ್ತು ಭಾರತದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ. ಇಂದಿಗೂ ಅದು ಶೌರ್ಯ, ಕಲಾತ್ಮಕತೆ ಮತ್ತು ಶಾಂತಿಯ ಸಂಕೇತವಾಗಿ ನಿಂತಿದೆ. ಹೊಸದಿಲ್ಲಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಸುಂದರ ತೋಟಗಳು, ನದಿ ದೃಶ್ಯ ಮತ್ತು ಶಾಂತ ವಾತಾವರಣ ಪ್ರವಾಸಿಗರ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
ವಾಸ್ತುಶಿಲ್ಪದ ವೈಶಿಷ್ಟ್ಯಗಳು :
ಹುಮಾಯೂನ್ ಸಮಾಧಿ ಕೆಂಪು ಮರಳುಗಲ್ಲು ಮತ್ತು ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಉತ್ತರಪ್ರದೇಶದ ಆಗ್ರಾದಿಂದ ಕೆಂಪು ಕಲ್ಲು ಹಾಗೂ ರಾಜಸ್ತಾನದ ಜೈಪುರದಿಂದ ಬಿಳಿ ಅಮೃತಶಿಲೆಯನ್ನು ತರಿಸಿ ಈ ಸ್ಮಾರಕ ನಿರ್ಮಿಸಲಾಗಿದೆ. ಇದರ ಎತ್ತರವು ಸುಮಾರು 47 ಮೀಟರ್ ಹಾಗೂ ಅಗಲ 91 ಮೀಟರ್‌ಗಳಷ್ಟು ಇದೆ. ಈ ಸಮಾಧಿಯೂ ವಿಶಾಲವಾದ ತೋಟದ ಮಧ್ಯದಲ್ಲಿ ಇದೆ.
ಈ ತೋಟವನ್ನು ಚಾರ್‌ಬಾಗ್ ಶೈಲಿಯಲ್ಲಿ (ನಾಲ್ಕು ಉದ್ಯಾನಗಳು) ವಿನ್ಯಾಸಗೊಳಿಸಲಾಗಿದ್ದು, ಪರ್ಷಿಯನ್ ತೋಟದ ಶೈಲಿಯಿಂದ ಪ್ರೇರಣೆ ಪಡೆದಿದೆ. ಸಮಾಧಿಯನ್ನು ಸುತ್ತುವರಿದಿರುವ ಚಾರ್‌ಬಾಗ್ ಉದ್ಯಾನ ನಾಲ್ಕು ಭಾಗಗಳಿಗೆ ವಿಭಜಿಸಲ್ಪಟ್ಟಿದೆ, ಮಧ್ಯದಲ್ಲಿ ಹರಿಯುವ ನದಿಯನ್ನು ಸೂಚಿಸುವ ಜಲವಿನ್ಯಾಸಗಳಿವೆ.
ಮೊಗಲರಿಂದ ನಿರ್ಮಾಣವಾದ ಎರಡು ಅಂತಸ್ತಿನ ಮೊದಲ ಸ್ಮಾರಕವು ಇದಾಗಿದೆ. ನೆಲ ಅಂತಸ್ತಿನಲ್ಲಿ 68 ಕೊಠಡಿಗಳಿದ್ದು, ಅದರಲ್ಲಿ ರಾಜ ಮನೆತದವರ 150ಕ್ಕೂ ಹೆಚ್ಚು ಸಮಾಧಿಗಳಿವೆ. ಹುಮಾಯೂನ್ ಸ್ಮಾರಕಕ್ಕೆ ಪ್ರವೇಶಿ ಸಲು ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ 4 ದಿಕ್ಕು ಗಳಿಂದ ಪ್ರವೇಶ ದ್ವಾರ ಗಳಿವೆ. ಆದರೆ, ಪಶ್ಚಿಮ ದ್ವಾರದ ಮೆಟ್ಟಿಲುಗಳು 75 ಡಿಗ್ರಿ ಕೋನದಲ್ಲಿದ್ದರೆ, ಉಳಿದ ದ್ವಾರಗಳು 60 ಡಿಗ್ರಿ ಕೋನದಲ್ಲಿವೆ.
ಯುನೆಸ್ಕೋ ವಿಶ್ವಪಾರಂಪರಿಕ ತಾಣದ ಸ್ಥಾನಮಾನ :
1857ರಲ್ಲಿ ಸಿಪಾಯಿ ದಂಗೆ ನಡೆದಾಗ ಬ್ರಿಟಿಷ್ ಜನರಲ್ ಹಟ್ಸನ್ ಮೊಗಲರ ಕೊನೆಯ ದೊರೆ ಬಹಾದೂರ್ ಶಾ ಝಫರ್-2 ನನ್ನು ಇದೆ ಸ್ಮಾರಕದ ಒಳಗಡೆಯಿಂದ ಬಂಧಿಸಿದನು. ಅಲ್ಲದೆ, ಅವರ ಕುಟುಂಬ ಸದಸ್ಯರನ್ನು ಇದೇ ಸ್ಮಾರಕದ ಬಳಿ ಹತ್ಯೆ ಮಾಡಲಾಯಿತು. ಸ್ಮಾರಕದ ಹೊರಭಾಗದಲ್ಲಿ ಬಹಾದೂರ್ ಶಾ ಝಫರ್ ಕುಟುಂಬ ಸದಸ್ಯರ, ಕೆಲವು ಬ್ರಿಟಿಷ್ ಅಧಿಕಾರಿಗಳ ಸಮಾಧಿ, ಮಸೀದಿ ಸಹಿತ ಇನ್ನಿತರ ಕಟ್ಟಡಗಳನ್ನು ಕಾಣಬಹುದು. 1993ರಲ್ಲಿ ಈ ಸ್ಮಾರಕಕ್ಕೆ ಯುನೆಸ್ಕೋ ವಿಶ್ವಪಾರಂಪರಿಕ ತಾಣದ ಸ್ಥಾನಮಾನ ಲಭ್ಯವಾಯಿತು.
ಇಸ್ಲಾಮಿಕ್, ಪರ್ಷಿಯನ್, ಭಾರತೀಯ ವಾಸ್ತುಶಿಲ್ಪ :
ಮೊಗಲರು ದಕ್ಷಿಣ ಭಾಗದಿಂದ ಕಟ್ಟಡದೊಳಗೆ ಪ್ರವೇಶಿಸಿದರೆ, ಪಶ್ಚಿಮ ಭಾಗದಿಂದ ನಿರ್ಗಮಿಸುತ್ತಿದ್ದರು. ಪವಿತ್ರ ಮಕ್ಕಾ ನಗರದ ಕಅಬಾ ದಿಕ್ಕು ಪಶ್ಚಿಮದ ಕಡೆ ಇರುವುದರಿಂದ ಮೆಟ್ಟಿಲುಗಳಿಂದ ಇಳಿಯುವಾಗ ತಲೆ ಬಾಗಿ ಹೊರ ನಡೆಯುವಂತೆ ಮೆಟ್ಟಿಲುಗಳ ವಿನ್ಯಾಸ ಮಾಡಲಾಗಿದೆ. ಸ್ಮಾರಕದ ಪ್ರವೇಶ ದ್ವಾರವನ್ನು ಇಸ್ಲಾಮಿಕ್, ಪರ್ಷಿಯನ್ ಹಾಗೂ ಭಾರ ತೀಯ ವಾಸ್ತುಶಿಲ್ಪದ ಸಂಯೋಜನೆಯಂತೆ ವಿನ್ಯಾಸಗೊಳಿಸಲಾಗಿದೆ. ಹುಮಾಯೂನ್ ಸಮಾಧಿಯು ಕಟ್ಟಡದ ಮಧ್ಯಭಾಗದಲ್ಲಿದ್ದರೆ, ಅವರ ಪತ್ನಿ ಹಾಮೀದಾ ಬಾನು ಬೇಗಮ್, ಶಾಹಜಹಾನ್‌ನ ಪುತ್ರ ದಾರಾ ಶಿಕೋಹ್ ಸೇರಿದಂತೆ ಕುಟುಂಬ ಸದಸ್ಯರ ಸಮಾಧಿಗಳು ಕಟ್ಟಡದ ಬದಿಗಳಲ್ಲಿ ನಿರ್ಮಿಸಲಾಗಿದೆ. ಹುಮಾಯೂನ್ ಸಮಾಧಿ ಇರುವ ಸ್ಥಳದಿಂದ ಕಟ್ಟಡದ ಒಳಗೆ ಇರುವ ಎಲ್ಲ ಸಮಾಧಿಗಳು ಗೋಚರಿಸುವಂತೆ ಒಳ ಭಾಗವನ್ನು ವಿನ್ಯಾಸಗೊಳಿಸಲಾಗಿದೆ.







