NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ | ಟೆಲಿಗ್ರಾಮ್, ವೆರ್ನಾ ಕಾರು, ಕೇರಳ ಹಾಸ್ಟೆಲ್ ನೀಡಿದ ಸುಳಿವು; 13 ಮಂದಿಯ ವಿರುದ್ಧ CBI ಆರೋಪಪಟ್ಟಿ

Photo Credit : NDTV
ಹೊಸದಿಲ್ಲಿ: NEET UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಹುರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದ ಸೋರಿಕೆ ಜಾಲದ ಕಾರ್ಯವೈಖರಿ ಬಹಿರಂಗಗೊಂಡಿದೆ. ರಾಜಸ್ಥಾನದ ಸಿಕಾರ್ ಕೇಂದ್ರವಾಗಿ ಕಾರ್ಯನಿರ್ವಹಿಸಿದ್ದ ಈ ಜಾಲವು ಟೆಲಿಗ್ರಾಮ್, ವಾಟ್ಸಾಪ್, ಮುದ್ರಿತ ಪ್ರಶ್ನೆಪತ್ರಿಕೆಗಳು, ಕಪ್ಪು ಬಣ್ಣದ ಹುಂಡೈ ವೆರ್ನಾ ಕಾರು ಹಾಗೂ ಕೇರಳದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ವರೆಗೆ ವಿಸ್ತರಿಸಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಮೇ 3ರಂದು ಸುಮಾರು 20 ಲಕ್ಷ ಅಭ್ಯರ್ಥಿಗಳಿಗಾಗಿ ನಡೆದಿದ್ದ NEET UG 2026 ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಬಳಿಕ ಜೂನ್ 21ರಂದು ಮರುಪರೀಕ್ಷೆ ನಡೆಸಲಾಗಿತ್ತು.
CBI ಆರೋಪಪಟ್ಟಿಯ ಪ್ರಕಾರ, ಎಪ್ರಿಲ್ 30ರಂದು ರಾಜಸ್ಥಾನದ ಜುನ್ಜುನು ಬೈಪಾಸ್ ನಲ್ಲಿ ಕಪ್ಪು ಬಣ್ಣದ ಹುಂಡೈ ವೆರ್ನಾ ಕಾರಿನ ಮೂಲಕ ಸೋರಿಕೆಯಾದ 11 ಮುದ್ರಿತ ಪ್ರಶ್ನೆಗಳನ್ನು ಅಮಿತ್ ಕುಮಾರ್ ಮೀನಾ ಅವರಿಗೆ ಹಸ್ತಾಂತರಿಸಲಾಗಿತ್ತು. ಸಿಕಾರ್ ನ ಮಂಗಿಲಾಲ್ ಬಿವಾಲ್ ಮತ್ತು ದಿನೇಶ್ ಬಿವಾಲ್ ಅವರು ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಪ್ರಶ್ನೆಗಳ ಪ್ರತ್ಯೇಕ ಸೆಟ್ ಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.
ಪ್ರಶ್ನೆಪತ್ರಿಕೆ ಪಡೆದ ತಕ್ಷಣ ಹಣ ಪಾವತಿಸದೆ, ಅಮಿತ್ ಕುಮಾರ್ ಮೀನಾ ಅವರು ನಾಲ್ವರು ಅಭ್ಯರ್ಥಿಗಳ 10ನೇ ಮತ್ತು 12ನೇ ತರಗತಿಯ ಮೂಲ ಅಂಕಪಟ್ಟಿಗಳನ್ನು ಭದ್ರತೆಯಾಗಿ ನೀಡಿದ್ದರು. ನಿಜವಾದ ಪರೀಕ್ಷೆಯಲ್ಲಿ 150ಕ್ಕೂ ಹೆಚ್ಚು ಪ್ರಶ್ನೆಗಳು ಹೊಂದಿಕೆಯಾಗಿದ್ದರೆ ಮಾತ್ರ ಹಣ ಪಾವತಿಸುವ ಒಪ್ಪಂದ ಮಾಡಿಕೊಂಡಿದ್ದರು ಎಂದು CBI ತಿಳಿಸಿದೆ.
ಪ್ರಶ್ನೆಪತ್ರಿಕೆ ಪಡೆಯುವ ಮೊದಲು ಅಮಿತ್ ಅವರ ಸ್ನೇಹಿತ ರೋಹಿತ್ ಮವಾಲಿಯಾ ಅವರು ಸಿಕಾರ್ ನಲ್ಲಿದ್ದ ರಿಷಿ ಬಿವಾಲ್ ಅವರ ಫ್ಲಾಟ್ ನಿಂದ ಅಭ್ಯರ್ಥಿಗಳ ಮೂಲ ಅಂಕಪಟ್ಟಿಗಳನ್ನು ಸಂಗ್ರಹಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಕಾರ್ ನಲ್ಲಿ NEET ಗೆ ಸಿದ್ಧತೆ ನಡೆಸುತ್ತಿದ್ದ ಅಮಿತ್ ಅವರಿಗೆ ರಿಷಿ ಬಿವಾಲ್ ಪರಿಚಿತರಾಗಿದ್ದರು. 10ರಿಂದ 12 ಅಭ್ಯರ್ಥಿಗಳನ್ನು ಒಟ್ಟುಗೂಡಿಸಿದರೆ ಪ್ರಶ್ನೆಪತ್ರಿಕೆಯನ್ನು ಉಚಿತವಾಗಿ ನೀಡುವುದಾಗಿ, ಇಲ್ಲದಿದ್ದರೆ 10ರಿಂದ 12 ಲಕ್ಷ ರೂ. ವ್ಯವಸ್ಥೆ ಮಾಡುವಂತೆ ರಿಷಿ ಸೂಚಿಸಿದ್ದ ಎಂದು ಆರೋಪಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದ ಅಮಿತ್, ಸ್ನೇಹಿತ ರೋಹಿತ್ ಮವಾಲಿಯಾ ನೆರವಿನಿಂದ ಅಭ್ಯರ್ಥಿಗಳನ್ನು ಹುಡುಕಲು ಮುಂದಾಗಿದ್ದರು.
ಆದರೆ, ಸೋರಿಕೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ರಿಷಿ ಬಿವಾಲ್ ಅವರು NEET ಪರೀಕ್ಷೆಯಲ್ಲಿ 720 ಅಂಕಗಳಿಗೆ ಕೇವಲ 107 ಅಂಕಗಳನ್ನು ಮಾತ್ರ ಪಡೆದಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
►ಶಿಕ್ಷಕರ ದೂರು ತನಿಖೆಗೆ ಕಾರಣ
ಸಿಕಾರ್ ನ ರಸಾಯನಶಾಸ್ತ್ರ ಶಿಕ್ಷಕ ಶಶಿಕಾಂತ್ ಸುತಾರ್ ಅವರಿಗೆ ವಿದ್ಯಾರ್ಥಿಗಳ ನಡುವೆ ಹರಿದಾಡುತ್ತಿದ್ದ 'ಊಹೆ ಪ್ರಶ್ನೆಪತ್ರಿಕೆ' ನಿಜವಾದ ಪ್ರಶ್ನೆಪತ್ರಿಕೆಗೆ ಅತ್ಯಂತ ಹೋಲಿಕೆಯಾಗಿರುವುದು ಗಮನಕ್ಕೆ ಬಂದಿತ್ತು. ಅವರು NTAಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಲ್ಲದೆ, ರಾಜಸ್ಥಾನ ಪೊಲೀಸರಿಗೂ ದೂರು ಸಲ್ಲಿಸಿದ್ದರು.
ಹಲವು ರಾಜ್ಯಗಳಲ್ಲಿ ಈ ಪ್ರಶ್ನೆಪತ್ರಿಕೆಯನ್ನು 10 ಲಕ್ಷದಿಂದ 25 ಲಕ್ಷ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ಗುಂಪು (SOG) ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಕೇಂದ್ರ ಶಿಕ್ಷಣ ಸಚಿವಾಲಯ ದೂರು ದಾಖಲಿಸಿತು. ಅದರ ಆಧಾರದ ಮೇಲೆ ಮೇ 12ರಂದು CBI ಪ್ರಕರಣ ದಾಖಲಿಸಿ ವಿಶೇಷ ತನಿಖಾ ತಂಡಗಳನ್ನು ರಚಿಸಿತು.
NTA ವಿಷಯ ತಜ್ಞರು, ಮಧ್ಯವರ್ತಿಗಳು ಮತ್ತು ಫಲಾನುಭವಿ ಅಭ್ಯರ್ಥಿಗಳನ್ನು ಒಳಗೊಂಡ ಬಹುರಾಜ್ಯ ಪಿತೂರಿ ಪತ್ತೆಯಾಗಿದ್ದು, 13 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
►NTA ಒಳಗೇ ಆರಂಭವಾದ ಪಿತೂರಿ
CBI ಆರೋಪಪಟ್ಟಿಯ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆ NTA ಯ ಪ್ರಶ್ನೆ ಸಿದ್ಧಪಡಿಸುವ ಮತ್ತು ಭಾಷಾಂತರಿಸುವ ಗೌಪ್ಯ ಪ್ರಕ್ರಿಯೆಯಲ್ಲಿಯೇ ಆರಂಭವಾಗಿತ್ತು.
ವಿಷಯ ತಜ್ಞರಾದ ಪಿ.ವಿ. ಕುಲಕರ್ಣಿ, ಮನೀಷಾ ಮಾಂಧರೆ ಹಾಗೂ ಮನೀಷಾ ಹವಾಲ್ದಾರ್ ಅವರು ಪ್ರಶ್ನೆಗಳನ್ನು ಕಂಠಪಾಠ ಮಾಡುವುದು, ಚಿಟ್ ಗಳನ್ನು ಬರೆಯುವುದು ಮತ್ತು NCERT ಪಠ್ಯಪುಸ್ತಕಗಳಲ್ಲಿನ ಸಂಬಂಧಿತ ಪ್ಯಾರಾಗಳನ್ನು ಗುರುತಿಸುವ ಮೂಲಕ ಪ್ರಶ್ನೆಗಳನ್ನು ಪುನರ್ನಿರ್ಮಿಸಲು ನೆರವಾಗಿದ್ದರು ಎಂದು ಆರೋಪಿಸಲಾಗಿದೆ.
135 ಪ್ರಶ್ನೆಗಳ ಮೂರು ಸೆಟ್ ಗಳಿಗೆ ಮರು ಅನುವಾದ ನಡೆಸಿದ್ದ ಕುಲಕರ್ಣಿ ಅವರು ಗೌಪ್ಯ ವಿಭಾಗದಲ್ಲಿದ್ದಾಗ ಪ್ರಶ್ನೆಗಳನ್ನು ನೆನಪಿನಲ್ಲಿಟ್ಟುಕೊಂಡು, ನಂತರ ಹೋಟೆಲ್ ಗೆ ತೆರಳಿ ಅವುಗಳನ್ನು ಬರೆದುಕೊಂಡಿದ್ದರು ಎಂದು CBI ತಿಳಿಸಿದೆ.
ಗೌಪ್ಯ ವಿಭಾಗಕ್ಕೆ ಪ್ರವೇಶಿಸುವ ಮತ್ತು ಹೊರಬರುವ ವಿಷಯ ತಜ್ಞರ ತಪಾಸಣೆ ನಡೆಯದಿದ್ದುದರಿಂದ ಈ ಕೃತ್ಯ ಸಾಧ್ಯವಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಕುಲಕರ್ಣಿ ಅವರು ಕಷ್ಟಕರ ಪ್ರಶ್ನೆಗಳಿಗಾಗಿ ಕೈಬರಹದ ಚಿಟ್ ಗಳನ್ನು ಸಿದ್ಧಪಡಿಸಿದ್ದರೆ, ಮನೀಷಾ ಮಾಂಧರೆ ಅವರು ಸಸ್ಯಶಾಸ್ತ್ರ ಪ್ರಶ್ನೆಗಳ ಭಾಷಾಂತರದ ವೇಳೆ NCERT ಪಠ್ಯಪುಸ್ತಕಗಳಲ್ಲಿನ ಸಂಬಂಧಿತ ಭಾಗಗಳನ್ನು ಗುರುತಿಸಿದ್ದರು. ನಂತರ ಮನೀಷಾ ಹವಾಲ್ದಾರ್ ಅವರೊಂದಿಗೆ ಸೇರಿ ಪ್ರಶ್ನೆಪತ್ರಿಕೆಯನ್ನು ಪುನರ್ ನಿರ್ಮಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ಪ್ರಶ್ನೆಗಳು ಬಳಿಕ ವಿವಿಧ ಮಧ್ಯವರ್ತಿಗಳ ಮೂಲಕ ರಾಜಸ್ಥಾನ ಹಾಗೂ ಕೇರಳದವರೆಗೆ ತಲುಪಿದ್ದವು ಎಂದು CBI ಹೇಳಿದೆ.
►ಕೇರಳದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಗೂ ತಲುಪಿದ ಪ್ರಶ್ನೆಪತ್ರಿಕೆ
ತನಿಖೆಯಲ್ಲಿ ಕೇರಳದ ಅಡೂರ್ ನ ಮೌಂಟ್ ಜಿಯಾನ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಗೂ ಸೋರಿಕೆ ಜಾಲದ ಸಂಪರ್ಕ ಪತ್ತೆಯಾಗಿದೆ.
ಪ್ರಥಮ ವರ್ಷದ MBBS ವಿದ್ಯಾರ್ಥಿ ಹಿತೇಶ್ ಕುಮಾರ್ ಅವರು ತಮ್ಮ ರೂಮ್ ಮೇಟ್ ಲಕ್ಷಯ್ ರಾಜ್ ಅವರಿಂದ ಸೋರಿಕೆಯಾದ ಪ್ರಶ್ನೆಪತ್ರಿಕೆಯ PDFಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಬಳಿಕ ಲಕ್ಷಯ್ ರಾಜ್ ತಮ್ಮ ಚಾಟ್ಗಳನ್ನು ಅಳಿಸಿಹಾಕಿದ್ದರು ಎಂದು CBI ತಿಳಿಸಿದೆ.
ಲಕ್ಷಯ್ ಗೆ ಅಲೆನ್ ಕೋಚಿಂಗ್ ಇನ್ಸ್ಟಿಟ್ಯೂಟ್ನ ಮಾಜಿ ಸಹಪಾಠಿ ರಜತ್ ಚೌಧರಿ ಪರಿಚಯವಿದ್ದು, ರಜತ್ ಅವರ ತಮ್ಮ ರಿಷಭ್ ಚೌಧರಿ NEET UG 2026 ಪರೀಕ್ಷೆಗೆ ಹಾಜರಾಗುತ್ತಿದ್ದರು.
ಮೇ 2ರಂದು ರಾತ್ರಿ ಅಭಿಷೇಕ್ ಸೈನಿ ಅವರು ರಜತ್ ಅವರನ್ನು ಸಂಪರ್ಕಿಸಿ ತಮ್ಮ ಬಳಿ ಸೋರಿಕೆಯಾದ ಪ್ರಶ್ನೆಪತ್ರಿಕೆ ಇದೆ ಎಂದು ಹೇಳಿ 40,000 ರೂ. ಕೇಳಿದ್ದರು ಎಂದು ಆರೋಪಿಸಲಾಗಿದೆ. ಅವರ ಸೂಚನೆಯಂತೆ ರಜತ್ ಅವರು ಲಕ್ಷಯ್ ರಾಜ್ ಅವರ ರಾಜಸ್ಥಾನ ಗ್ರಾಮೀಣ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿದ್ದ ಫೋನ್ ಪೇ ಮೂಲಕ 30,000 ರೂ. ವರ್ಗಾಯಿಸಿದ್ದರು.
ಸುಮಾರು ಒಂದು ಗಂಟೆಯ ಬಳಿಕ, ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು, ರಿಷಭ್ ಗೆ ಸುಮಾರು 450 ಪ್ರಶ್ನೆ–ಉತ್ತರಗಳನ್ನು ಒಳಗೊಂಡ PDFಗಳು ತಲುಪಿದ್ದವು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
►ಸಿಕಾರ್ ನಲ್ಲಿ ಸಮಾನಾಂತರ ವಿತರಣಾ ಜಾಲ
ಸಿಕಾರ್ ಕೇಂದ್ರವಾಗಿ ಮತ್ತೊಂದು ಸಮಾನಾಂತರ ವಿತರಣಾ ಜಾಲವೂ ಕಾರ್ಯನಿರ್ವಹಿಸುತ್ತಿತ್ತು ಎಂದು CBI ಹೇಳಿದೆ.
ಆರ್ ಕೆ ಎಜುಕೇಷನಲ್ ಕನ್ಸಲ್ಟೆನ್ಸಿಯ ಮಾಲೀಕ ರಾಕೇಶ್ ಮಾಂಡವಾರಿಯಾ ಅವರನ್ನು ಎಪ್ರಿಲ್ 30ರಂದು ನಿತೇಶ್ ಚೌಧರಿ ಸಂಪರ್ಕಿಸಿ ಹಣಕ್ಕಾಗಿ ಪ್ರಶ್ನೆಪತ್ರಿಕೆ ವ್ಯವಸ್ಥೆ ಮಾಡಬಹುದು ಎಂದು ಹೇಳಿದ್ದರು. ಮೇ 2ರಂದು ಸುಮಾರು 500 ಪ್ರಶ್ನೆಗಳಿರುವ ಎರಡು PDFಗಳನ್ನು ತಂದಿದ್ದರು ಎನ್ನಲಾಗಿದೆ.
ಬ್ಲೂಟೂತ್ ಮತ್ತು ಪೆನ್ ಡ್ರೈವ್ ಮೂಲಕ ವರ್ಗಾವಣೆ ವಿಫಲವಾದ ಬಳಿಕ ಆ PDFಗಳನ್ನು ವಾಟ್ಸಾಪ್ ಮೂಲಕ ಸಲಹಾ ಸಂಸ್ಥೆಯ ಕಚೇರಿ ಕಂಪ್ಯೂಟರ್ ಗೆ ಕಳುಹಿಸಲಾಗಿತ್ತು.
ಸಲಹಾ ಸಂಸ್ಥೆಯ ಉದ್ಯೋಗಿ ಅಭಿಷೇಕ್ ಸೈನಿ ಅವರು ಸಹೋದ್ಯೋಗಿ ಜಿತೇಂದ್ರ ಕುಮಾರ್ ಅವರ ಸೂಚನೆಯಂತೆ ಆ PDF ಗಳನ್ನು ವಿದ್ಯಾರ್ಥಿಯೊಬ್ಬರಿಗೆ ರವಾನಿಸಿದ್ದರು. ಬಳಿಕ ಫೈಲ್ಗಳನ್ನು ಅಳಿಸುವಂತೆ ಸೂಚಿಸಲಾಗಿದ್ದರೂ, ಅವುಗಳನ್ನು ಸಚಿನ್ ಧಂಗರ್ಗೆ ಕಳುಹಿಸಲಾಗಿತ್ತು. ಇದರಿಂದ ಸಿಕಾರ್ ಜಾಲ ಮತ್ತು ಕೇರಳ ಸಂಪರ್ಕದ ನಡುವಿನ ಕೊಂಡಿ ಪತ್ತೆಯಾಗಿದೆ ಎಂದು CBI ತಿಳಿಸಿದೆ.
ಇದಲ್ಲದೆ, ಅಮಿತ್ ಕುಮಾರ್ ಮೀನಾ ಅವರು ಸಾಕಷ್ಟು ಅಭ್ಯರ್ಥಿಗಳನ್ನು ಒಟ್ಟುಗೂಡಿಸಿದರೆ ಪ್ರಶ್ನೆಪತ್ರಿಕೆ ವ್ಯವಸ್ಥೆ ಮಾಡುವುದಾಗಿ ರಿಷಿ ಬಿವಾಲ್ ಭರವಸೆ ನೀಡಿದ್ದರು. ಎಪ್ರಿಲ್ 29ರಂದು ಟೆಲಿಗ್ರಾಮ್ ಮೂಲಕ ಪ್ರಶ್ನೆಗಳು ಮತ್ತು ಉತ್ತರಗಳ ಸಾಫ್ಟ್ ಕಾಪಿಯನ್ನು ಕಳುಹಿಸಿ, ಮರುದಿನ ಮುದ್ರಿತ ಪ್ರತಿಗಳನ್ನು ನೀಡುವುದಾಗಿ ರಿಷಿ ತಿಳಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತ್ಯೇಕ ಘಟನೆಯಲ್ಲಿ ರಾಹುಲ್ ಪುನಿಯಾ ಮತ್ತು ರಂಜಿತ್ ಸೈನಿ ಅವರು ಮೇ 1ರಂದು ಅಧ್ಯಯನ ಸಾಮಗ್ರಿಗಾಗಿ ರೋಹಿತ್ ಮವಾಲಿಯಾ ಅವರನ್ನು ಸಂಪರ್ಕಿಸಿದ್ದರು. ಅವರ ಸೂಚನೆಯಂತೆ ಜಜೋದ್–ಟಿಕಿರಿಯಾ ಗ್ರಾಮದ ಮನೆಯೊಂದಕ್ಕೆ ತೆರಳಿದಾಗ, ರೋಹಿತ್ ಅವರ ಸಂಬಂಧಿ ಪ್ರವೀಣ್ ಸುಮಾರು 500 ಪ್ರಶ್ನೆಗಳನ್ನು ಒಳಗೊಂಡ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಶ್ನೆ–ಉತ್ತರಗಳ ಮುದ್ರಿತ ಪ್ರತಿಗಳನ್ನು ಅವರಿಗೆ ನೀಡಿದ್ದರು. ಮೇ 2ರಂದು ಮಧ್ಯಾಹ್ನ 1 ಗಂಟೆಯವರೆಗೆ ಅವರು ಅಲ್ಲಿಯೇ ಇದ್ದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಸೌಜನ್ಯ: NDTV






