ICC ಮಹತ್ವದ ನಿರ್ಧಾರ; ಮಹಿಳಾ ಕ್ರಿಕೆಟಿಗರಿಗೆ ಹೆರಿಗೆಯ ನಂತರ ಆಟಕ್ಕೆ ಮರಳುವ ಮಾರ್ಗಸೂಚಿ ಏಕೆ ಅಗತ್ಯವಿದೆ?

Photo Credit: @ICC
ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಹಿಳಾ ಕ್ರಿಕೆಟಿಗರಿಗೆ ಹೆರಿಗೆಯ ನಂತರ ಆಟಕ್ಕೆ ಮರಳುವ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಐಸಿಸಿ ವೈದ್ಯಕೀಯ ಸಲಹಾ ಸಮಿತಿ ಸದಸ್ಯೆ ಮತ್ತು ಆಸ್ಟ್ರೇಲಿಯ ತಂಡದ ವೈದ್ಯೆ ಡಾ ಫಿಲಿಪ್ಪಾ ಇಂಗ ನೇತೃತ್ವದಲ್ಲಿ ಸಿದ್ಧವಾದ ಮಾರ್ಗಸೂಚಿ ಕರಡು 6 ಹಂತದ ಪ್ರಕ್ರಿಯೆಯನ್ನು ಮುಂದಿಟ್ಟಿದೆ.
ನಿಯಮಗಳ ಅನ್ವಯ ಗರ್ಭಾವಸ್ಥೆಯಲ್ಲಿ ಆಟ ನಿಲ್ಲಿಸುವ ಮತ್ತು ಹೆರಿಗೆ ನಂತರ ಮರಳುವ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಇದರನ್ವಯ ಪ್ರತಿ ಮಂಡಳಿ ಕೇಸ್ ಮ್ಯಾನೇಜರ್ ನೇಮಿಸಬೇಕು. ವೈದ್ಯಕೀಯ, ಮಾನಸಿಕ ಮತ್ತು ಕೌಟುಂಬಿಕ ಬೆಂಬಲ ವ್ಯವಸ್ಥೆ ಒದಗಿಸಬೇಕು. ಮೈದಾನದಲ್ಲಿ ಹಾಲುಣಿಸುವ ಪ್ರತ್ಯೇಕ ಸ್ಥಳಾವಕಾಶ ಮತ್ತು ನಿಯಮಿತ ಸಭೆಗಳನ್ನು ಶಿಫಾರಸು ಮಾಡಲಾಗಿದ್ದು, ಈ ಪುನರಾಗಮನ ಪ್ರಕ್ರಿಯೆಯನ್ನು ಆರು ಹಂತದಲ್ಲಿ ವಿನ್ಯಾಸಗೊಳಿಸಲಾಗಿದೆ.
ಆರು ಹಂತಗಳ ಪ್ರಕ್ರಿಯೆ:
ಹೆರಿಗೆಯ ನಂತರ ಮತ್ತೆ ಮೈದಾನಕ್ಕೆ ಮರಳುವ ಪ್ರಕ್ರಿಯೆಯನ್ನು ( Return to Play - RTP ) ಆರು ಪ್ರಮುಖ ಹಂತಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ: Ready (ಸಿದ್ಧತೆ), Review (ಪರಿಶೀಲನೆ), Restore (ಮರುಸ್ಥಾಪನೆ), Recondition (ಮರುಸ್ಥಿತೀಕರಣ) Return (ಪುನರಾಗಮನ), Refine (ಪರಿಷ್ಕರಣೆ) ಆ 6 ಪ್ರಮುಖ ಹಂತಗಳಾಗಿವೆ.
ತಾರೆಯರಿಂದ ಪ್ರಶಂಸೆ:
ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಐಸಿಸಿಯ ಮಾರ್ಗಸೂಚಿಗಳನ್ನು ಸ್ವಾಗತಿಸಿದ್ದಾರೆ. “ಕ್ರೀಡೆಯಲ್ಲಿ ಸಬಲೀಕರಣ ಎಂದರೆ ಆಟಗಾರರ ಪ್ರಯಾಣವು ಎಲ್ಲಾ ಹಂತಗಳಲ್ಲೂ ಸರಿಯಾದ ಚೌಕಟ್ಟಿನಲ್ಲಿ ಬೆಂಬಲಿತವಾಗಿದೆ ಎಂದು ಖಚಿತಪಡಿಸುವುದು. “ಎರಡರ ನಡುವೆ ಆಯ್ಕೆಯ” ಬದಲಾಗಿ “ಎರಡನ್ನೂ ಮಾಡುವತ್ತ” ನಾವು ಪರಿವರ್ತನೆಯನ್ನು ನೀಡುತ್ತಿರುವುದು ಆಟವನ್ನು ಸರಿಯಾದ ರೀತಿಯಲ್ಲಿ ಆಡುತ್ತಿದ್ದೇವೆ ಎಂಬುದಕ್ಕೆ ಪುರಾವೆಯಾಗಿದೆ, ವಿಶ್ವಾದ್ಯಂತ ಮಹಿಳಾ ಕ್ರಿಕೆಟಿಗರ ಭವಿಷ್ಯಕ್ಕೆ ಇದು ದೊಡ್ಡ ಉತ್ತೇಜನವಾಗಿದೆ” ಎಂದು ಅವರು ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಸ್ವತಃ ಎರಡನೇ ಮಗುವಿಗೆ ಗರ್ಭಿಣಿಯಾಗಿರುವ ನಟಿ ದೀಪಿಕಾ ಪಡುಕೋಣೆಯವರೂ ಐಸಿಸಿಯ ಮಾರ್ಗಸೂಚಿಗಳನ್ನು ಪ್ರಶಂಸಿಸಿದ್ದಾರೆ. “ಕ್ರೀಡೆಯಲ್ಲಿರುವ ಮಹಿಳೆಯರಿಗೆ ಮಹತ್ವದ ಕ್ಷಣ” ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಮಹಿಳಾ ಕ್ರಿಕೆಟರಿಗೆ ಮಹತ್ವದ ಸಂಗತಿ:
ಅಂತಾರಾಷ್ಟ್ರೀಯ ಕ್ರೀಡಾಪುಟಗಳು ಮಗುವಿಗೆ ಜನ್ಮ ನೀಡಿದ ನಂತರ ಮೈದಾನಕ್ಕೆ ಮರಳುವುದು ಬಹಳ ಮಹತ್ವದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಾರ್ಗಸೂಚಿಗಳನ್ನು ನೀಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳಾ ಕ್ರಿಕೆಟಿಗರು ಹೆರಿಗೆಯ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ನೆರವಾಗುವ ನಿಟ್ಟಿನಲ್ಲಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನಾವರಣಗೊಳಿಸಿರುವುದು ವೃತ್ತಿಪರ ಆಟಗಾರರಿಗೆ ಯಾವಾಗ ಆಟ ನಿಲ್ಲಿಸಬೇಕು ಮತ್ತು ಯಾವಾ ಪ್ರಾರಂಭಿಸಬೇಕು ಎನ್ನುವ ಕುರಿತಾದ ವೃತ್ತಿಪರ ಸಲಹೆ ಮತ್ತು ಆರೈಕೆ ಪಡೆಯಲು ಸಾಧ್ಯವಾಗಲಿದೆ. ಐಸಿಸಿ ವೈದ್ಯಕೀಯ ಸಲಹಾ ಸಮಿತಿಯ ಸದಸ್ಯೆ ಹಾಗೂ ಆಸ್ಟ್ರೇಲಿಯಾ ತಂಡದ ವೈದ್ಯರಾದ ಡಾ. ಫಿಲಿಪ್ಪಾ ಇಂಗ ಈ ಮಾರ್ಗಸೂಚಿಗಳ ಕರಡು ಸಿದ್ಧಪಡಿಸುವ ತಂಡದ ನೇತೃತ್ವ ವಹಿಸಿದ್ದರು. ಆಟಗಾರ್ತಿಯರಿಗೆ ನೀಡಬೇಕಾದ ಪ್ರಾಯೋಗಿಕ ಬೆಂಬಲದ ಅಂಶಗಳನ್ನು ರೂಪಿಸಲು ಅವರು ಸಹಾಯ ಮಾಡಿದ್ದಾರೆ ಎಂದು ಐಸಿಸಿ ಹೇಳಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಐಸಿಸಿ, "ಆಟಗಾರ್ತಿಯರ ಪುನರಾಗಮನದ ಪ್ರಕ್ರಿಯೆಗೆ ನೆರವಾಗಲು ಮತ್ತು ಆಟಗಾರರ ಆರೋಗ್ಯ, ಯೋಗಕ್ಷೇಮ ಹಾಗೂ ಮಹಿಳಾ ಕ್ರಿಕೆಟ್ನ ನಿರಂತರ ಬೆಳವಣಿಗೆಗೆ ಐಸಿಸಿ ಹೊಂದಿರುವ ವಿಶಾಲ ಬದ್ಧತೆಯ ಭಾಗವಾಗಿ ಈ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ" ಎಂದು ತಿಳಿಸಿದೆ.
ಇದರಲ್ಲಿ ಹೊಂದಿಕೊಳ್ಳುವಂತಹ ತರಬೇತಿ ವಾತಾವರಣ, ಕ್ರೀಡಾ ಸೌಲಭ್ಯಗಳು ಮತ್ತು ಸೇವೆಗಳ ನಿರಂತರ ಲಭ್ಯತೆ, ಮಕ್ಕಳ ಆರೈಕೆಯ ಸಲಹೆಗಳು, ಪಂದ್ಯ ನಡೆಯುವ ಕ್ರೀಡಾಂಗಣಗಳಲ್ಲಿ ಮಗುವಿಗೆ ಹಾಲುಣಿಸಲು ಅಥವಾ ಆರೈಕೆ ಮಾಡಲು ಸೂಕ್ತವಾದ ಸ್ಥಳಾವಕಾಶ ಮತ್ತು ಸಾಧ್ಯವಿರುವ ಕಡೆಗಳಲ್ಲಿ ಪ್ರಯಾಣದ ಸಂದರ್ಭದಲ್ಲಿ ಬೆಂಬಲ ನೀಡುವುದು ಸೇರಿದೆ ಎಂದು ಐಸಿಸಿ ಹೇಳಿದೆ.
ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?:
ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮುಂಬೈ ಸೆಂಟ್ರಲ್ ನ ವೋಹಕ್ಹಾರ್ಡ್ ಆಸ್ಪತ್ರೆಗಳ ಸಲಹೆಗಾರ್ತಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ ರಿಚಾ ಭಾರದ್ವಾಜ್ ಇದನ್ನು “ಮಹತ್ವದ ಮತ್ತು ಹೆಚ್ಚು ಅಗತ್ಯವಿರುವ ಕ್ರಮ” ಎಂದು ಹೇಳಿದ್ದಾರೆ. “ವರ್ಷಗಳಿಂದ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಅನೇಕ ಮಹಿಳೆಯರು ಸೂಕ್ತ ವೈದ್ಯಕೀಯ ಬೆಂಬಲ ಅಥವಾ ಮಾರ್ಗದರ್ಶನವಿಲ್ಲದೆ ಗರ್ಭಧಾರಣೆ ಮತ್ತು ತಾಯ್ತನವನ್ನು ಎದುರಿಸಿದ್ದಾರೆ. ಮಾತೃತ್ವ ಮತ್ತು ಪ್ರತಿಷ್ಠಿತ ಕ್ರೀಡೆಗಳು ಜೊತೆಯಾಗಿ ಸಾಗಬಹುದು ಎಂದು ಐಸಿಸಿ ನಿರ್ಧಾರ ಗುರುತಿಸಿದೆ. ಕ್ರೀಡಾಪಟುಗಳು ಸಿದ್ಧರಾಗುವ ಮೊದಲು ಸ್ಪರ್ಧೆಗೆ ಮರಳಲು ಒತ್ತಡ ಅನುಭವಿಸದೆ ತಮ್ಮ ಆರೋಗ್ಯದ ಮೇಲೆ ಗಮನಹರಿಸಲು ಇದು ಪ್ರೋತ್ಸಾಹಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೈಹಿಕ ಮತ್ತು ಭಾವನಾತ್ಮಕ ಸವಾಲುಗಳು:
ಡಾ ಭಾರದ್ವಾಜ್ ಪ್ರಕಾರ ಪ್ರಸವಾಂತರ ಅವಧಿಯು ಪ್ರಮುಖ ದೈಹಿಕ ಮತ್ತು ಹಾರ್ಮೋನುಗಳ ಬದಲಾವಣೆ ಒಳಗೊಂಡಿದೆ. “ಚೇತರಿಕೆಯು ತೂಕ ಇಳಿಸುವುದು ಅಥವಾ ಮತ್ತೆ ಫಿಟ್ನೆಸ್ಗೆ ಬರುವುದು ಒಳಗೊಂಡಿರುತ್ತದೆ. ಕ್ರೀಡಾಪಟುಗಳು ಸಾಮಾನ್ಯವಾಗಿ ದುರ್ಬಲಗೊಂಡ ಕೋರ್ ಮತ್ತು ಪೆಲ್ವಿಕ್ ಫ್ಲೋರ್ ಸ್ನಾಯುಗಳ ಸಮಸ್ಯೆ ಎದುರಿಸುತ್ತಾರೆ. ತ್ರಾಣ ಕಡಿಮೆ ಇರುತ್ತದೆ. ನಿದ್ರಾಹೀನತೆ ಆವರಿಸುತ್ತದೆ. ಬದಲಾಗುತ್ತಿರುವ ಹಾರ್ಮೋನ್ ಮಟ್ಟ ಸರಿತೂಗಿಸಬೇಕಾಗುತ್ತದೆ. ಕೆಲವೊಮ್ಮೆ ಬೆನ್ನು ನೋವು, ನಿದ್ರಾಹೀನತೆ ಮತ್ತು ಮೂತ್ರ ಸೋರಿಕೆ, ಶ್ರೋಣಿಯ ಅಸ್ವಸ್ಥತೆ ಅಥವಾ ಸಿಸೇರಿಯನ್ ಸೆಕ್ಷನ್ ನಂತರ ನಿಧಾನ ಗುಣವಾಗುವ ಸಮಸ್ಯೆಯನ್ನೂ ಎದುರಿಸಬಹುದು” ಎಂದು ಅಭಿಪ್ರಾಯಪಟ್ಟರು.






