ಪಾಸ್ಪೋರ್ಟ್ ಪೌರತ್ವದ ಪುರಾವೆ ಅಲ್ಲದಿದ್ದರೆ ಇನ್ಯಾವುದು? ಭಾರತದ ಕಾನೂನುಗಳು ಏನು ಹೇಳುತ್ತವೆ?

ಸಾಂದರ್ಭಿಕ ಚಿತ್ರ | Photo Credit : magnific.com
ಭಾರತೀಯ ಪಾಸ್ಪೋರ್ಟ್ ಎಂಬುದು ಮುಖ್ಯವಾಗಿ ಒಂದು ಪ್ರಯಾಣದ ದಾಖಲೆಯಷ್ಟೇ, ಅದನ್ನು ಪೌರತ್ವದ ಏಕೈಕ ಅಥವಾ ಅಂತಿಮ ಪುರಾವೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟನೆ ನೀಡಿದೆ. ಈ ಹೇಳಿಕೆ ಸಾರ್ವಜನಿಕರಲ್ಲಿ ಭಾರೀ ಗೊಂದಲ ಮೂಡಿಸಿದೆ. ಏಕೆಂದರೆ, ಬಹುತೇಕ ಭಾರತೀಯರಿಗೆ ಪಾಸ್ಪೋರ್ಟ್ ಎನ್ನುವುದೇ ಸರ್ಕಾರದ ಅತ್ಯಂತ ಅಧಿಕೃತ ದಾಖಲೆಯಾಗಿದೆ. ದೇಶದ ಹೆಸರನ್ನು ಹೊತ್ತಿರುವ, ವಿಶ್ವದಾದ್ಯಂತ ಮಾನ್ಯತೆ ಪಡೆದ ಹಾಗೂ ಸರ್ಕಾರಿ ಅಧಿಕಾರಿಗಳ ತೀವ್ರ ಪರಿಶೀಲನೆಯ ನಂತರವೇ ಸಿಗುವ ಈ ದಾಖಲೆಯ ಬಗ್ಗೆ ಇಂತಹ ಹೇಳಿಕೆ ಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಆದರೆ, ವಿದೇಶಾಂಗ ಸಚಿವಾಲಯದ ಈ ಸ್ಪಷ್ಟನೆ ಹೊಸದೇನಲ್ಲ. ಇದು ದೀರ್ಘಕಾಲದಿಂದ ಇರುವ ಕಾನೂನು ನಿಲುವನ್ನೇ ಪ್ರತಿಬಿಂಬಿಸುತ್ತದೆ. ಒಬ್ಬ ವ್ಯಕ್ತಿ ಭಾರತದ ಪ್ರಜೆ ಎಂದು ಸರ್ಕಾರಕ್ಕೆ ಮನವರಿಕೆಯಾದ ಮೇಲೆಯೇ ಪಾಸ್ಪೋರ್ಟ್ ನೀಡಲಾಗುತ್ತದೆ ನಿಜ. ಆದರೆ, ಪಾಸ್ಪೋರ್ಟ್ ಸ್ವತಃ ಪೌರತ್ವವನ್ನು ಸೃಷ್ಟಿಸುವುದಿಲ್ಲ. ಒಂದು ವೇಳೆ ಕಾನೂನಾತ್ಮಕವಾಗಿ ಪೌರತ್ವದ ಪ್ರಶ್ನೆ ಎದುರಾದರೆ, ಪಾಸ್ಪೋರ್ಟ್ ಅನ್ನೇ ಅದಕ್ಕೆ ನಿರ್ಣಾಯಕ ಪುರಾವೆ ಎಂದು ಹೇಳಲು ಬರುವುದಿಲ್ಲ.
ಈ ವಿವಾದವು ಭಾರತ ದಶಕಗಳಿಂದ ಎದುರಿಸುತ್ತಿರುವ ಗಂಭೀರವಾದ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಪಾಸ್ಪೋರ್ಟ್ ಪೌರತ್ವಕ್ಕೆ ಪುರಾವೆಯಲ್ಲದಿದ್ದರೆ, ಇನ್ಯಾವುದು? ಎಂಬುದೇ ಆ ಪ್ರಶ್ನೆ.
ಪೌರತ್ವ ಎಂಬುದು ಕಾನೂನಾತ್ಮಕ ಅರ್ಹತೆ, ಕೇವಲ ದಾಖಲೆಯಲ್ಲ
ಇದಕ್ಕೆ ಉತ್ತರ ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿದೆ. ಭಾರತದ ಸಂವಿಧಾನದ 5 ರಿಂದ 11 ರವರೆಗಿನ ವಿಧಿಗಳು ಮತ್ತು 1955ರ ಪೌರತ್ವ ಕಾಯ್ದೆಯು ಯಾರು ಭಾರತದ ಪ್ರಜೆ ಎಂಬುದನ್ನು ವ್ಯಾಖ್ಯಾನಿಸುತ್ತವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವುಗಳಲ್ಲಿ ಯಾವುದೇ ಒಂದು ನಿರ್ದಿಷ್ಟ ದಾಖಲೆಯನ್ನು 'ಪೌರತ್ವದ ಪುರಾವೆ' ಎಂದು ಉಲ್ಲೇಖಿಸಿಲ್ಲ.
ಬದಲಿಗೆ, ಪೌರತ್ವ ಎನ್ನುವುದನ್ನು ಒಬ್ಬ ವ್ಯಕ್ತಿಯ ಜನ್ಮಸ್ಥಳ, ಪೋಷಕರು, ವಾಸಸ್ಥಳ ಅಥವಾ ದೇಶದ ಪ್ರಜೆಯಾಗುವ ಪ್ರಕ್ರಿಯೆ ಮುಂತಾದ ನೈಜ ಅಂಶಗಳ ಆಧಾರದ ಮೇಲೆ ನಿರ್ಧಾರವಾಗುವ ಒಂದು ಕಾನೂನಾತ್ಮಕ ಅರ್ಹತೆ ಎಂದು ಪರಿಗಣಿಸಲಾಗುತ್ತದೆ. ದಾಖಲೆಗಳು ಕೇವಲ ಈ ನೈಜ ಅಂಶಗಳನ್ನು ಸಾಬೀತುಪಡಿಸುವ ಪುರಾವೆಗಳಷ್ಟೇ ಆಗಿರುತ್ತವೆ. ಉದಾಹರಣೆಗೆ, ಭಾರತದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿಯ ಪೌರತ್ವವು, ಅವನು ಯಾವಾಗ ಜನಿಸಿದ ಮತ್ತು ಆತನ ಪೋಷಕರ ಪೌರತ್ವದ ಸ್ಥಿತಿ ಏನಿತ್ತು ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಅದೇ ರೀತಿ, ದೇಶದ ಪೌರತ್ವ ಪಡೆದ ಮತ್ತೊಬ್ಬ ವ್ಯಕ್ತಿಯ ಪೌರತ್ವವು, ಆತ ಕಾನೂನಿನ ನಿಯಮಗಳನ್ನು ಎಷ್ಟು ಮಟ್ಟಿಗೆ ಪಾಲಿಸಿದ್ದಾನೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ಯಾರು ಭಾರತದ ಪ್ರಜೆ?
ಈ ಸೂಕ್ಷ್ಮ ವ್ಯತ್ಯಾಸವು ಫೆಬ್ರುವರಿ 2020ರಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಸಂಸತ್ತಿನಲ್ಲಿ ನೀಡಿದ, ಆದರೆ ಅಷ್ಟಾಗಿ ಗಮನ ಸೆಳೆಯದ ಉತ್ತರವೊಂದರಲ್ಲಿ ಪ್ರತಿಫಲಿಸುತ್ತದೆ. ಆಧಾರ್, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಅಥವಾ ಜನನ ಪ್ರಮಾಣಪತ್ರಗಳು ಪೌರತ್ವಕ್ಕೆ ಮಾನ್ಯವಾದ ಪುರಾವೆಗಳಾಗುತ್ತವೆಯೇ ಎಂದು ಕೇಳಿದ ಪ್ರಶ್ನೆಗೆ ಸರ್ಕಾರ ಹೀಗೆ ಉತ್ತರಿಸಿತ್ತು:
"ಭಾರತೀಯ ಪೌರತ್ವದ ಪಡೆಯುವಿಕೆಯನ್ನು 1955ರ ಪೌರತ್ವ ಕಾಯ್ದೆ ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ. ಭಾರತದ ಪೌರತ್ವವನ್ನು ಜನ್ಮ, ವಂಶಾವಳಿ, ನೋಂದಣಿ, ದೇಶದ ಪ್ರಜೆಯಾಗುವ ಪ್ರಕ್ರಿಯೆ ಅಥವಾ ಪ್ರದೇಶವನ್ನು ದೇಶದೊಳಗೆ ಸೇರಿಸಿಕೊಳ್ಳುವ ಮೂಲಕ ಪಡೆಯಬಹುದು. ಪೌರತ್ವದ ಪಡೆಯುವಿಕೆ ಮತ್ತು ನಿರ್ಧಾರದ ಅರ್ಹತಾ ಮಾನದಂಡಗಳು 1955ರ ಪೌರತ್ವ ಕಾಯ್ದೆಯ ನಿಬಂಧನೆಗಳ ಪ್ರಕಾರ ಇರುತ್ತವೆ."
ಗಮನಿಸಬೇಕಾದ ಅಂಶವೆಂದರೆ, ಸರ್ಕಾರವು ಇಲ್ಲಿ ಉಲ್ಲೇಖಿಸಲಾದ ಯಾವುದೇ ದಾಖಲೆಗಳನ್ನು ಪೌರತ್ವದ ದಾಖಲೆಗಳೆಂದು ಗುರುತಿಸಿಲ್ಲ. ಆದರೂ, 2003ರ ಪೌರತ್ವ ನಿಯಮಗಳ ಪ್ರಕಾರ, ಕೆಲವು ನಿಬಂಧನೆಗಳ ಅಡಿಯಲ್ಲಿ ಭಾರತೀಯ ಪೌರತ್ವವನ್ನು ಪಡೆಯಲು ಬಯಸುವವರು ತಮ್ಮ ಪೋಷಕರು ಭಾರತದ ಪ್ರಜೆಗಳು ಎಂದು ನಿರೂಪಿಸಲು ಅವರ ಪಾಸ್ಪೋರ್ಟ್ಗಳ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಪಾಸ್ಪೋರ್ಟ್ ಏಕೆ ಮುಖ್ಯ? ಆದರೆ ಪೌರತ್ವಕ್ಕೆ ಪುರಾವೆಯಲ್ಲ ಏಕೆ?
ಪಾಸ್ಪೋರ್ಟ್ ಅನ್ನು ಭಾರತೀಯ ಪ್ರಜೆಗಳಿಗೆ ಮಾತ್ರ ನೀಡಲಾಗುವುದರಿಂದ ಮತ್ತು ವಿದೇಶಗಳಲ್ಲಿ ಇದನ್ನು ಮಾನ್ಯ ಮಾಡುವುದರಿಂದ, ಪ್ರಾಯೋಗಿಕವಾಗಿ ಒಬ್ಬ ವ್ಯಕ್ತಿಯು ಭಾರತದ ಪ್ರಜೆ ಎಂಬುದಕ್ಕೆ ಇದು ಅತ್ಯಂತ ಬಲವಾದ ಪುರಾವೆಗಳಲ್ಲಿ ಒಂದಾಗಿದೆ.
ಆದರೆ, ಕಾನೂನಾತ್ಮಕವಾಗಿ ನೋಡುವುದಾದರೆ ಪೌರತ್ವದ ದಾಖಲೆಯಾಗಿ ಇದರ ಸ್ಥಾನಮಾನವು ಪಾಸ್ಪೋರ್ಟ್ ಕಾಯ್ದೆಯ ಕಾರಣದಿಂದಾಗಿಯೇ ಕೊಂಚ ಜಟಿಲವಾಗಿದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯ ಎಂದು ಕಂಡುಬಂದಲ್ಲಿ, ಭಾರತದ ಪ್ರಜೆಯಲ್ಲದ ವ್ಯಕ್ತಿಗೂ ಪಾಸ್ಪೋರ್ಟ್ ಅಥವಾ ಪ್ರಯಾಣದ ದಾಖಲೆಯನ್ನು ನೀಡಲು ಈ ಕಾಯ್ದೆಯ ಸೆಕ್ಷನ್ 20 ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ವಿಶೇಷ ಸಂದರ್ಭಗಳಲ್ಲಿ ಪಾಸ್ಪೋರ್ಟ್ ನೀಡಲು ಈ ನಿಬಂಧನೆಯನ್ನು ಬಳಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. "ಕೆಲವು ಭೌಗೋಳಿಕ-ರಾಜಕೀಯ ಬೆಳವಣಿಗೆಗಳಿಂದಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯಾವುದೇ ದೇಶದ ಪೌರತ್ವವಿಲ್ಲದವರಾಗಿ ಉಳಿದಾಗ ಅಥವಾ ಯಾರಾದರೂ ಭಾರತದಲ್ಲಿದ್ದು ಪೌರತ್ವ ಕಳೆದುಕೊಂಡಿದ್ದರೂ ವಿದೇಶಕ್ಕೆ ಪ್ರಯಾಣಿಸುವುದು ಅನಿವಾರ್ಯವಾದಾಗ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ಉಲ್ಲೇಖಿಸಿದೆ.
ಇತಿಹಾಸವನ್ನು ಗಮನಿಸಿದರೆ, ಭಾರತದಲ್ಲಿರುವ ಟಿಬೆಟಿಯನ್ ನಿರಾಶ್ರಿತರು ಮತ್ತು ಶ್ರೀಲಂಕಾದ ತಮಿಳರು ವಿದೇಶಗಳಿಗೆ ಭೇಟಿ ನೀಡುವಾಗ ಭಾರತೀಯ ಅಧಿಕಾರಿಗಳು ಅವರಿಗೆ ವಿಶೇಷ ಪ್ರಯಾಣದ ದಾಖಲೆಗಳನ್ನು ನೀಡಿದ ಉದಾಹರಣೆಗಳಿವೆ ಎಂದು ಮೂಲಗಳು ತಿಳಿಸಿವೆ. 2023ರಲ್ಲಿ ಮದ್ರಾಸ್ ಹೈಕೋರ್ಟ್, ಪಾಸ್ಪೋರ್ಟ್ ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ಶ್ರೀಲಂಕಾದ ತಮಿಳು ನಿರಾಶ್ರಿತರೊಬ್ಬರಿಗೆ ಪಾಸ್ಪೋರ್ಟ್ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಈ ತತ್ವವು ಎಲ್ಲಾ ಪ್ರಜಾಪ್ರಭುತ್ವ ದೇಶಗಳಲ್ಲೂ ಸಾಮಾನ್ಯವಾಗಿದೆ. ಬ್ರಿಟನ್ ಮತ್ತು ಅಮೆರಿಕದಲ್ಲೂ ಒಬ್ಬ ವ್ಯಕ್ತಿ ಈಗಾಗಲೇ ಆ ದೇಶದ ಪ್ರಜೆ ಎಂದು ಸರ್ಕಾರ ನಿರ್ಧರಿಸಿದ ಮೇಲೆಯೇ ಪಾಸ್ಪೋರ್ಟ್ ನೀಡಲಾಗುತ್ತದೆ. ಪಾಸ್ಪೋರ್ಟ್ ಸ್ವತಃ ಪೌರತ್ವವನ್ನು ಸೃಷ್ಟಿಸುವುದಿಲ್ಲ. ವ್ಯತ್ಯಾಸವೆಂದರೆ, ಈ ಎರಡೂ ದೇಶಗಳಲ್ಲಿ ನಾಗರಿಕರ ನೋಂದಣಿ ವ್ಯವಸ್ಥೆಯು ಅತ್ಯಂತ ಬಲವಾಗಿದೆ ಮತ್ತು ಅಲ್ಲಿನ ಪೌರತ್ವ ಪಡೆದ ನಾಗರಿಕರಿಗೆ ಪೌರತ್ವದ ಔಪಚಾರಿಕ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ, ಇವುಗಳೇ ಪ್ರಾಥಮಿಕ ಕಾನೂನು ಪುರಾವೆಗಳಾಗಿ ಕಾರ್ಯನಿರ್ವಹಿಸುತ್ತವೆ.
ಕಾನೂನಿನ ನಿಖರತೆ ಮತ್ತು ಸಾರ್ವಜನಿಕರ ತಿಳಿವಳಿಕೆ ಬೇರೆ ಬೇರೆಯಾಗಿರುವುದರಿಂದಲೇ ಈ ವಿವಾದ ಉಂಟಾಗಿದೆ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್ ಹೇಳಿದ್ದಾರೆ.
"ಪಾಸ್ಪೋರ್ಟ್ ಪೌರತ್ವವನ್ನು ಸೃಷ್ಟಿಸುವುದಿಲ್ಲ, ಹಾಗೆಯೇ ನ್ಯಾಯಾಲಯದ ಮುಂದೆ ಪೌರತ್ವದ ಸ್ಥಾನಮಾನದ ಬಗ್ಗೆ ಪ್ರಶ್ನೆ ಎದುರಾದಾಗ ಅದನ್ನು ನಿರ್ಧರಿಸುವ ಕಾನೂನುಬದ್ಧ ಸಾಧನವೂ ಇದಲ್ಲ. ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಂತೆ, ಭಾರತವೂ ಪೌರತ್ವ ಕಾನೂನು ಮತ್ತು ಪಾಸ್ಪೋರ್ಟ್ ಕಾನೂನಿನ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಕಾಯ್ದುಕೊಂಡಿದೆ" ಎಂದು ನಿರುಪಮಾ ಮೆನನ್ ರಾವ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ನ್ಯಾಯಾಲಯಗಳು ಏನು ಹೇಳಿವೆ?
ನ್ಯಾಯಾಂಗದ ತೀರ್ಪುಗಳು ಸಹ ಈ ಬಗ್ಗೆ ಯಾವುದೇ ಸರಳವಾದ ಉತ್ತರವನ್ನು ನೀಡುವುದಿಲ್ಲ.
ಕಳೆದ ವರ್ಷ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರ ಪೀಠವು "ನೀವು ಇದನ್ನು ಸ್ಪಷ್ಟಪಡಿಸಬೇಕೆಂದು ನಾವು ಬಯಸುತ್ತೇವೆ... ಉದಾಹರಣೆಯಾಗಿ ನೀಡಲಾದ ಪಟ್ಟಿಯು 11 ದಾಖಲೆಗಳನ್ನು ಸೂಚಿಸುತ್ತದೆ ಎಂದು ನಾವು ಪದೇ ಪದೇ ಆದೇಶ ನೀಡಿದ್ದೇವೆ. ಆ 11 ದಾಖಲೆಗಳನ್ನು ನೀವು ಗಮನಿಸಿದರೆ, ಪಾಸ್ಪೋರ್ಟ್ ಮತ್ತು ಜನನ ಪ್ರಮಾಣಪತ್ರವನ್ನು ಹೊರತುಪಡಿಸಿ, ಬೇರೆ ಯಾವುದೂ ಪೌರತ್ವಕ್ಕೆ ನಿರ್ಣಾಯಕ ಪುರಾವೆಯಲ್ಲ" ಎಂದು ಹೇಳಿತ್ತು.
ಈ ಅಭಿಪ್ರಾಯವು, ಮತದಾರರ ಪರಿಶೀಲನೆಗಾಗಿ ಚುನಾವಣಾ ಆಯೋಗವು ಸ್ವೀಕರಿಸುವ ಇತರ ದಾಖಲೆಗಳಿಗಿಂತ ಪಾಸ್ಪೋರ್ಟ್ ಮತ್ತು ಜನನ ಪ್ರಮಾಣಪತ್ರಗಳನ್ನು ಉನ್ನತ ಸಾಕ್ಷ್ಯದ ವರ್ಗದಲ್ಲಿ ಇರಿಸಿದಂತೆ ಕಂಡುಬಂದಿತ್ತು.
ಆದರೆ, ಪೌರತ್ವ ವಿವಾದಗಳಿಗೆ ನೇರವಾಗಿ ಸಂಬಂಧಿಸಿದ ಪ್ರಕರಣಗಳನ್ನು ಕೈಗೆತ್ತಿಕೊಂಡಾಗ, ನ್ಯಾಯಾಲಯಗಳು ಹೆಚ್ಚಾಗಿ ಪಾಸ್ಪೋರ್ಟ್ಗಳ ಆಚೆಗಿನ ಅಂಶಗಳನ್ನು ಗಮನಿಸಿವೆ.
2013ರಲ್ಲಿ, ಬಾಂಬೆ ಹೈಕೋರ್ಟ್ ಅಕ್ರಮ ವಲಸಿಗರೆಂದು ಆರೋಪಿಸಲ್ಪಟ್ಟಿದ್ದ ನಾಲ್ಕು ಜನರಿಗೆ ಪರಿಹಾರ ನೀಡಲು ನಿರಾಕರಿಸಿತ್ತು. ಅವರು ಪಾಸ್ಪೋರ್ಟ್ಗಳು (ಅವುಗಳನ್ನು ನಂತರ ರದ್ದುಗೊಳಿಸಲಾಗಿತ್ತು), ಆಧಾರ್ ಕಾರ್ಡ್ಗಳು ಮತ್ತು ಜನನ ಪ್ರಮಾಣಪತ್ರಗಳನ್ನು ಹಾಜರುಪಡಿಸಿದ್ದರೂ ನ್ಯಾಯಾಲಯ ಅವರಿಗೆ ಸಮ್ಮತಿ ಸೂಚಿಸಿರಲಿಲ್ಲ.
ಆಗ ನ್ಯಾಯಮೂರ್ತಿ ಕೆ. ಯು. ಚಾಂಡಿವಾಲ್ ಅವರು, "ಅರ್ಜಿದಾರರಲ್ಲಿ ಒಬ್ಬರ ಜನನ ಪ್ರಮಾಣಪತ್ರವಷ್ಟೇ ಇಲ್ಲಿ ಸಾಕಾಗುವುದಿಲ್ಲ, ಏಕೆಂದರೆ ಕಾನೂನಿನ ಪ್ರಕಾರ ಆ ಅರ್ಜಿದಾರನು ತನ್ನ ಪೋಷಕರು ಭಾರತೀಯ ಪ್ರಜೆಗಳಾಗಿದ್ದರು ಎಂಬುದನ್ನು ಸಾಬೀತುಪಡಿಸುವುದು ಕಡ್ಡಾಯವಾಗಿದೆ. ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳನ್ನು ಇಲ್ಲಿ ಒದಗಿಸಿಲ್ಲ" ಎಂದು ಹೇಳಿದ್ದರು.
2005ರ 'ಸರ್ಬಾನಂದ ಸೋನೋವಾಲ್ vs ಭಾರತ ಸರ್ಕಾರ' ಪ್ರಕರಣದ ತೀರ್ಪಿನಲ್ಲಿ, ಪೌರತ್ವವನ್ನು ಸಾಬೀತುಪಡಿಸುವ ಜವಾಬ್ದಾರಿಯು ಅದನ್ನು ಕ್ಲೈಮ್ ಮಾಡುವ (ನಾನು ಈ ದೇಶದ ಪ್ರಜೆ ಎನ್ನುವ) ವ್ಯಕ್ತಿಯ ಮೇಲೆಯೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿತ್ತು. "ತಾವು ಒಂದು ನಿರ್ದಿಷ್ಟ ದೇಶದ ಪ್ರಜೆ ಎಂದು ಪ್ರತಿಪಾದಿಸುವ ವ್ಯಕ್ತಿಯ ಮೇಲೆಯೇ ಇದನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಹೊರಿಸುವುದರ ಹಿಂದೆ ಸೂಕ್ತ ಮತ್ತು ಬಲವಾದ ಕಾರಣವಿದೆ" ಎಂದು ನ್ಯಾಯಾಲಯ ಹೇಳಿತ್ತು.
ಇದಕ್ಕಿಂತಲೂ ಮುಂಚೆ, 1962ರ 'ಆಂಧ್ರಪ್ರದೇಶ ಸರ್ಕಾರ vs ಅಬ್ದುಲ್ ಖಾದರ್' ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಪಾಸ್ಪೋರ್ಟ್ ಅನ್ನು ರಾಷ್ಟ್ರೀಯತೆಯ ಪುರಾವೆಯಾಗಿ ಪರಿಗಣಿಸಿತ್ತಾದರೂ, ಪೌರತ್ವವನ್ನು ನಿರ್ಧರಿಸುವ ಮುನ್ನ ಜನ್ಮಸ್ಥಳ, ವಾಸಸ್ಥಳ ಮತ್ತು ವಲಸೆಯ ಇತಿಹಾಸದಂತಹ ಸಾಂವಿಧಾನಿಕ ಮಾನದಂಡಗಳನ್ನು ಪರಿಶೀಲಿಸಿತ್ತು.
ಭಾರತದಲ್ಲಿ ಎಲ್ಲರಿಗೂ ಅನ್ವಯಿಸುವ ಒಂದೇ ಪೌರತ್ವ ದಾಖಲೆ ಇಲ್ಲ
ಪ್ರಸ್ತುತ ನಡೆಯುತ್ತಿರುವ ಚರ್ಚೆಯು ಭಾರತೀಯ ವ್ಯವಸ್ಥೆಯ ಒಂದು ಕೊರತೆಯನ್ನು ಎತ್ತಿ ತೋರಿಸುತ್ತದೆ. ಹಲವು ದೇಶಗಳಿಗಿಂತ ಭಿನ್ನವಾಗಿ, ಭಾರತವು ತನ್ನ ಎಲ್ಲಾ ನಾಗರಿಕರಿಗೂ ಅನ್ವಯಿಸುವಂತಹ ಯಾವುದೇ ಸಾರ್ವತ್ರಿಕ ಪೌರತ್ವ ಪ್ರಮಾಣಪತ್ರವನ್ನು ನೀಡುವುದಿಲ್ಲ.
ಪೌರತ್ವ ಪ್ರಮಾಣಪತ್ರಗಳು ಇವೆಯಾದರೂ, ಅವು ಕೇವಲ ಒಂದು ಸೀಮಿತ ವರ್ಗದ ಜನರಿಗೆ ಮಾತ್ರ ಸಿಗುತ್ತವೆ. ಅಂದರೆ, ಪೌರತ್ವ ಕಾಯ್ದೆಯ ಸೆಕ್ಷನ್ 5 ಮತ್ತು 6ರ ಅಡಿಯಲ್ಲಿ ನೋಂದಣಿ ಅಥವಾ ದೇಶದ ಪ್ರಜೆಯಾಗುವ ಪ್ರಕ್ರಿಯೆಯ ಮೂಲಕ ಪೌರತ್ವ ಪಡೆಯುವವರಿಗೆ ಮಾತ್ರ ಇವು ಲಭ್ಯವಿವೆ. ಇಂತಹ ವ್ಯಕ್ತಿಗಳು ತಾವು ಪೌರತ್ವ ಪಡೆದಿರುವುದನ್ನು ದಾಖಲಿಸುವ ಅಧಿಕೃತ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ.
ಆದರೆ, ಭಾರತದ ಬಹುಪಾಲು ಜನರು ಹುಟ್ಟಿನಿಂದಲೇ ದೇಶದ ಪ್ರಜೆಗಳಾಗಿದ್ದಾರೆ. ಇವರಿಗೆ ಇಂತಹ ಯಾವುದೇ ಪೌರತ್ವ ಪ್ರಮಾಣಪತ್ರ ಸಿಗುವುದಿಲ್ಲ. ಇದರ ಪರಿಣಾಮವಾಗಿ, ಭಾರತದಲ್ಲಿ ನಾಗರಿಕರಿದ್ದರೂ, ಪೌರತ್ವವನ್ನು ಸಾಬೀತುಪಡಿಸುವ ಯಾವುದೇ ಏಕೈಕ ಅಧಿಕೃತ ದಾಖಲೆಯಿಲ್ಲ.
ಈ ಗೊಂದಲಕ್ಕೆ ನಮ್ಮ ಇತಿಹಾಸವೂ ಒಂದು ಕಾರಣವಾಗಿದೆ. ಭಾರತದ ನಾಗರಿಕ ನೋಂದಣಿ ವ್ಯವಸ್ಥೆಯು ದಶಕಗಳ ಕಾಲ ಒಂದೇ ಸಮನಾಗಿ ಬೆಳೆಯಲಿಲ್ಲ ಮತ್ತು ಎಲ್ಲರ ಜನನ ನೋಂದಣಿ ಮಾಡಿಸುವ ಪದ್ಧತಿ ಜಾರಿಗೆ ಬಂದಿದ್ದು ಇತ್ತೀಚಿನ ವರ್ಷಗಳಲ್ಲಷ್ಟೇ. ಹೀಗಾಗಿ, ವಯಸ್ಸಾದ ಕೋಟ್ಯಂತರ ಭಾರತೀಯರ ಪೌರತ್ವವನ್ನು ಯಾವುದೇ ಒಂದು ನಿರ್ಣಾಯಕ ದಾಖಲೆಯ ಮೂಲಕ ನಿರ್ಧರಿಸುವ ಬದಲು, ಸಾಂಪ್ರದಾಯಿಕವಾಗಿ ವಿವಿಧ ದಾಖಲೆಗಳ ಆಧಾರದ ಮೇಲೆ ಅಂದರೆ ಮತದಾರರ ಪಟ್ಟಿ, ಶಾಲಾ ಪ್ರಮಾಣಪತ್ರಗಳು, ಭೂ ದಾಖಲೆಗಳು, ಜನನ ಪ್ರಮಾಣಪತ್ರಗಳು, ಪಾಸ್ಪೋರ್ಟ್ಗಳು ಮತ್ತು ಇತರ ಸರ್ಕಾರಿ ದಾಖಲೆಗಳನ್ನು ಒಟ್ಟಾಗಿ ಪರಿಶೀಲಿಸಿ ನಿರ್ಧಾರಕ್ಕೆ ಬರಲಾಗುತ್ತದೆ.
ಎನ್ಆರ್ಸಿ: ಪೌರತ್ವ ದಾಖಲೆಯ ಹುಡುಕಾಟ
ಭಾರತವು ಇಂತಹದೊಂದು ಅಧಿಕೃತ ದಾಖಲೆಯನ್ನು ಸೃಷ್ಟಿಸಲು ಅತ್ಯಂತ ಹತ್ತಿರ ಬಂದಿದ್ದು 'ರಾಷ್ಟ್ರೀಯ ನಾಗರಿಕರ ನೋಂದಣಿ' (NRC) ಪ್ರಕ್ರಿಯೆಯ ಮೂಲಕ.
ಇದಕ್ಕೆ ಸಂಬಂಧಿಸಿದ ಕಾನೂನು ಚೌಕಟ್ಟನ್ನು ವಾಜಪೇಯಿ ಸರ್ಕಾರದ ಅವಧಿಯಲ್ಲಿ, 2003ರ ಪೌರತ್ವ ನಿಯಮಗಳ ಮೂಲಕ ಜಾರಿಗೆ ತರಲಾಯಿತು. ಈ ನಿಯಮಗಳು ಸ್ಥಳೀಯ ಮತ್ತು ರಾಜ್ಯ ಮಟ್ಟದ ನೋಂದಣಿಗಳ ಜೊತೆಗೆ 'ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ'ಯನ್ನು ರೂಪಿಸಲು ಮತ್ತು ಪೌರತ್ವಕ್ಕೆ ಲಿಂಕ್ ಮಾಡಲಾದ ಗುರುತಿನ ಚೀಟಿಗಳನ್ನು ನೀಡಲು ಉದ್ದೇಶಿಸಿದ್ದವು.
ನಂತರದ ಯುಪಿಎ ಸರ್ಕಾರದ ಅವಧಿಯಲ್ಲಿ, ಗುರುತಿನ ಪರಿಶೀಲನೆಯು ಪೌರತ್ವ ಪರಿಶೀಲನೆಗಿಂತ ಮುಂಚಿತವಾಗಿರಬೇಕೇ ಎಂಬ ವಿಷಯದ ಕುರಿತು ಗೃಹ ಸಚಿವಾಲಯ ಮತ್ತು ಯುಐಡಿಎಐ ನಡುವೆ ನಡೆದ ಚರ್ಚೆಯ ಸಂದರ್ಭದಲ್ಲಿ ಈ ಆಲೋಚನೆ ಮತ್ತೆ ಮುನ್ನೆಲೆಗೆ ಬಂದಿತು.
ದಿ ಇಂಡಿಯನ್ ಎಕ್ಸ್ಪ್ರೆಸ್ ಜೊತೆಗಿನ ಸಂವಾದದಲ್ಲಿ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಆರ್. ಕೆ. ಸಿಂಗ್ ಅವರು, ಆಧಾರ್ ಕಾರ್ಡ್ ಅನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಪದೇ ಪದೇ ವಾದಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
"ಆ ಸಮಯದಲ್ಲಿ, ಇದು ದೊಡ್ಡ ಸಂಖ್ಯೆಯ ಅಕ್ರಮ ನುಸುಳುಕೋರರಿಗೆ ದಾಖಲೆಗಳನ್ನು ಪಡೆಯಲು ದಾರಿ ಮಾಡಿಕೊಡುತ್ತದೆ ಎಂದು ನಾವು ಹೇಳಿದ್ದೆವು. ಈ ಕುರಿತು ಪ್ರಧಾನಿಯವರು ಸಭೆ ಕರೆದಿದ್ದರು. ನಂದನ್ ನಿಲೇಕಣಿ ಕೂಡ ಅಲ್ಲಿ ಇದ್ದರು. ನಾವು ನಮ್ಮ ನಿಲುವನ್ನು ಮಂಡಿಸಿದೆವು. ಆಧಾರ್ ಪೌರತ್ವಕ್ಕೆ ಪುರಾವೆಯಾಗಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ. ತಮ್ಮ ಪರಿಶೀಲನಾ ಪ್ರಕ್ರಿಯೆಯು ಕೇವಲ ಮೇಲ್ನೋಟದ್ದು ಎಂಬುದನ್ನು ನಿಲೇಕಣಿ ಕೂಡ ಒಪ್ಪಿಕೊಂಡಿದ್ದರು.
"ಪಾಸ್ಪೋರ್ಟ್ಗೆ ಸಂಬಂಧಿಸಿದಂತೆ ಹೇಳುವುದಾದರೆ, ಅದರ ಪರಿಶೀಲನಾ ಮಟ್ಟಗಳು ಹೆಚ್ಚು ಬಲವಾಗಿರುತ್ತವೆ. ಆದರೆ ಪಾಸ್ಪೋರ್ಟ್ ಅನ್ನು ಪೌರತ್ವದ ದಾಖಲೆಯಾಗಿ ವಿನ್ಯಾಸಗೊಳಿಸಲಾಗಿಲ್ಲ. ಅದನ್ನು ಯಾವಾಗಲೂ ಒಂದು ಪ್ರಯಾಣದ ದಾಖಲೆಯಾಗಿಯೇ ಪರಿಭಾವಿಸಲಾಗಿತ್ತು. ಆದರೆ ಎನ್ಆರ್ಸಿಯ ಆಲೋಚನೆಯು ಪೌರತ್ವಕ್ಕೆ ಒಂದು ನಿರ್ಣಾಯಕ ಪುರಾವೆಯನ್ನು ಒದಗಿಸುವುದರೊಂದಿಗೆ ಬೆಸೆದುಕೊಂಡಿತ್ತು" ಎಂದು ಹೇಳಿದ್ದಾರೆ ಸಿಂಗ್.
ಆದರೆ, ಎನ್ಆರ್ಸಿಯನ್ನು ದೇಶಾದ್ಯಂತ ಎಂದಿಗೂ ಜಾರಿಗೆ ತರಲು ಸಾಧ್ಯವಾಗಲಿಲ್ಲ. ಈ ಪ್ರಕ್ರಿಯೆಯು ರಾಜಕೀಯವಾಗಿ ವಿವಾದಕ್ಕೊಳಗಾಯಿತು. ನಂತರದ ದಿನಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಸುತ್ತಲಿನ ವಿವಾದಗಳು ಹಾಗೂ ದೇಶಾದ್ಯಂತ ನಡೆಯಬಹುದಾದ ಪೌರತ್ವ ಪರಿಶೀಲನೆಯ ಬಗೆಗಿನ ಆತಂಕಗಳ ನಡುವೆ ಇದು ನನೆಗುದಿಗೆ ಬಿತ್ತು.
ಇದರ ಏಕೈಕ ದೊಡ್ಡ ಮಟ್ಟದ ಅನುಷ್ಠಾನವು 2015 ಮತ್ತು 2019ರ ನಡುವೆ ಅಸ್ಸಾಂನಲ್ಲಿ ನಡೆಯಿತು. ಅಲ್ಲಿ ಅರ್ಜಿದಾರರು ಮಾರ್ಚ್ 24, 1971ಕ್ಕಿಂತ ಮುಂಚಿನ ಪರಂಪರಾಗತ ದಾಖಲೆಗಳೊಂದಿಗೆ ತಮ್ಮ ಸಂಬಂಧವನ್ನು ಸಾಬೀತುಪಡಿಸಬೇಕಾಗಿತ್ತು. ಆದರೆ, ದಾಖಲೆಗಳಲ್ಲಿನ ಅಸಮಂಜಸತೆ, ಹೆಸರಿನ ಸ್ಪೆಲ್ಲಿಂಗ್ಗಳಲ್ಲಿನ ವ್ಯತ್ಯಾಸಗಳು, ಕಾಣೆಯಾದ ದಾಖಲೆಗಳು ಮತ್ತು ಕೌಟುಂಬಿಕ ಸಂಬಂಧಗಳನ್ನು ಸಾಬೀತುಪಡಿಸುವಲ್ಲಿ ಎದುರಾದ ತೊಂದರೆಗಳಿಂದಾಗಿ ಸುಮಾರು 19 ಲಕ್ಷ ಜನರು ಅಂತಿಮ ಪಟ್ಟಿಯಿಂದ ಹೊರಗುಳಿದರು.
ಮಾಜಿ ವಿದೇಶಾಂಗ ಕಾರ್ಯದರ್ಶಿ ರಾವ್ ಅವರ ಪ್ರಕಾರ, "ಯಾವುದೇ ನಾಗರಿಕನ ಪೌರತ್ವವು ಕಾಣೆಯಾದ ಅಥವಾ ಗೊಂದಲಮಯ ದಾಖಲೆಗಳಿಗೆ ಒತ್ತೆಯಾಗದಂತೆ ತಡೆಯಲು ಬಲವಾದ ಮತ್ತು ಹೆಚ್ಚು ಸಮಗ್ರವಾದ ನಾಗರಿಕ ನೋಂದಣಿ ವ್ಯವಸ್ಥೆ, ಸಾರ್ವತ್ರಿಕ ಜನನ ನೋಂದಣಿ ಮತ್ತು ವಿಶ್ವಾಸಾರ್ಹ ದಾಖಲೆಗಳ ಸಂಗ್ರಹದ ಅಗತ್ಯವಿದೆ" ಎಂಬುದೇ ಇದರ ದೊಡ್ಡ ಪಾಠವಾಗಿದೆ.
ಕೊನೆಯದಾಗಿ ಹೇಳುವುದಾದರೆ, ಪಾಸ್ಪೋರ್ಟ್ ವಿವಾದವು ದೇಶದ ಒಂದು ಪ್ರಮುಖ ವಿರೋಧಾಭಾಸವನ್ನು ಬಿಚ್ಚಿಟ್ಟಿದೆ. ಅದೇನೆಂದರೆ ಭಾರತವು ಸಮಗ್ರ ಪೌರತ್ವ ಕಾನೂನನ್ನು ಹೊಂದಿದೆ, ಆದರೆ ಇಲ್ಲಿನ ಬಹುಪಾಲು ನಾಗರಿಕರಿಗೆ ತಾವು ಈ ದೇಶದವರು ಎಂದು ಖಚಿತವಾಗಿ ಸಾಬೀತುಪಡಿಸಲು ಯಾವುದೇ ಏಕೈಕ ನಿರ್ಣಾಯಕ ದಾಖಲೆಯಿಲ್ಲ.






