ಡೇಟಾದ ಪರಿಣಾಮ ಜನರು ಅರ್ಥಮಾಡಿಕೊಂಡರೆ ಕಡಿವಾಣ ಬೀಳಬಹುದು: ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು | Photo Credit : bookbrahma.com
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಅನುವಾದಕರಾಗಿ, ಸುದ್ದಿ ಸಂಪಾದಕರಾಗಿ, ಪತ್ರಕರ್ತರಾಗಿ ಮತ್ತು ಅಂಕಣ ಬರಹಗಳ ಮೂಲಕ ಚಿರಪರಿಚಿತರು. ಸಾಮಾಜಿಕ ಕಳಕಳಿಯುಳ್ಳ ಸಾಹಿತಿಗಳಲ್ಲಿ ಒಬ್ಬರು. ಇತ್ತೀಚಿನ ವರ್ಷಗಳಲ್ಲಿ ಅವರು ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಜನಪರ ಕಾಳಜಿಯಿಂದ ಬರೆಯುತ್ತಿದ್ದಾರೆ. ಕನ್ನಡದಲ್ಲಿ ಅನೇಕ ಲೇಖನಗಳನ್ನು ಬರೆಯುವ ಮೂಲಕ ಜನರನ್ನು ಗೌಪ್ಯತೆ ಮತ್ತು ಡೇಟಾ ಸುರಕ್ಷತೆ ಕುರಿತಾಗಿ ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದ್ದಾರೆ. ಡೇಟಾ ಸುರಕ್ಷತೆ ಕುರಿತ ಅವರ ‘ಮಮ ಡೇಟಾ’ ಪುಸ್ತಕ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಅವರು ‘ವಾರ್ತಾ ಭಾರತಿ’ಯೊಂದಿಗೆ ಮಾತನಾಡಿದ್ದಾರೆ. ಡೇಟಾ ಕಾಯಿದೆ ಮತ್ತು ಅದರ ನಿಯಮಗಳ ಅನುವಾದ ಮಾತ್ರವಲ್ಲದೆ, ಡೇಟಾದ ಹುಟ್ಟು-ಚರಿತ್ರೆ, ವ್ಯಕ್ತಿಯಾಗಿ ಅಥವಾ ಒಂದು ಸಂಸ್ಥೆಯಾಗಿ ಡೇಟಾ ಸಂರಕ್ಷಣೆಯ ಬಗ್ಗೆ ಏನು ಮಾಡಬೇಕು, ಸರ್ಕಾರ ಡೇಟಾಗಳನ್ನು ಬಳಸಿ ಏನೆಲ್ಲ ಮಾಡುತ್ತಿದೆ ಎಂಬ ಬಗ್ಗೆ ಪುಸ್ತಕದಲ್ಲಿ ವಿವರಗಳಿವೆ.
📌 ನಾವು ಇಂದು ಉಚಿತವಾಗಿ ಬಳಸುತ್ತಿರುವ ಅನೇಕ ಆ್ಯಪ್ಗಳು ಮತ್ತು ಸೇವೆಗಳ ನಿಜವಾದ ಬೆಲೆ ನಮ್ಮ ಡೇಟಾನೇ ಎಂದು ಹೇಳಬಹುದೇ?
ಹೌದು, ನೀವು ಡೇಟಾ ಯುಗದಲ್ಲಿ ಉತ್ಪನ್ನವೊಂದನ್ನು ಉಚಿತವಾಗಿ ಪಡೆಯುತ್ತಾ ಇದ್ದೀರಿ ಎಂದರೆ, ನೀವೇ ಅಥವಾ ನಿಮ್ಮ ಡೇಟಾಗಳೇ ಅದಕ್ಕೆ ಪಾವತಿ ಮಾಡುವ ಮೌಲ್ಯ ಆಗಿರುತ್ತವೆ. ಉದಾಹರಣೆಗೆ, ಇತ್ತೀಚೆಗೆ ಹಲವಾರು ಆ್ಯಪ್ಗಳು ನಿಮ್ಮ ಮುಖದ ಚಿತ್ರವನ್ನು ವಿವಿಧ ಸ್ವರೂಪಗಳಲ್ಲಿ ಚಿತ್ರಿಸಿ, ನಿಮಗೆ ಉಚಿತವಾಗಿ ಒದಗಿಸುತ್ತಿವೆ. ಆ ಸೇವೆಯನ್ನು ಪಡೆಯುವಾಗ ನೀವು ಅವರ ಒಪ್ಪಿಗೆ ಪತ್ರವೊಂದಕ್ಕೆ ಒಪ್ಪಿಗೆಯ ಮುದ್ರೆ ಒತ್ತಿರುತ್ತೀರಿ. ಅದರಲ್ಲಿ ನಿಮ್ಮಿಂದ ಸಿಗುವ ಮುಖದ ಡೇಟಾವನ್ನು ಅವರು ಮುಖಚಹರೆ ಪತ್ತೆ ತಂತ್ರಜ್ಞಾನದ ಅಭಿವೃದ್ಧಿಗೆ ಬಳಸಲಾಗುವುದು ಎಂಬುದನ್ನು ಜನಸಾಮಾನ್ಯರಿಗೆ ಅರ್ಥವಾಗದ ತಾಂತ್ರಿಕ ಭಾಷೆಯಲ್ಲಿ ಹೇಳುವ ಮೂಲಕ ತಮ್ಮ ಕಾನೂನು ಪಾಲನೆ ಮಾಡಿರುತ್ತಾರೆ. ನಿಮ್ಮ ಮುಖದ ಡೇಟಾ ಯಾವುದೋ ಮುಖಚಹರೆ ಪತ್ತೆ ಪರಿಕರ ರೂಪಿಸಲು ಬಳಕೆಯಾಗಿರುತ್ತದೆ. ಅದು ನಿಮ್ಮ ಅರಿವಿಗೇ ಬಂದಿರುವುದಿಲ್ಲ. ಈ ಡೇಟಾವನ್ನು ಯಾರು ಸಂಗ್ರಹಿಸಿರುತ್ತಾರೋ ಅವರಿಗೆ ಅದು ಆರ್ಥಿಕ ಲಾಭವನ್ನು ತಂದಿರುತ್ತದೆ.
📌 ಇಂದು ಮಕ್ಕಳು ಮತ್ತು ಯುವಜನರು ಡಿಜಿಟಲ್ ಜಗತ್ತಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅವರ ಡೇಟಾ ಸುರಕ್ಷತೆ ಬಗ್ಗೆ ಪೋಷಕರು ಯಾವ ವಿಷಯವನ್ನು ಹೆಚ್ಚು ಗಮನಿಸಬೇಕು?
ಹೆಚ್ಚಿನ ಮನೆಗಳಲ್ಲಿ ದುಡಿಯುವ ಪತಿ-ಪತ್ನಿ ತಮ್ಮ ಮಗುವಿಗೆ ತಮ್ಮ ಮೊಬೈಲ್ ಫೋನ್ ಕೊಟ್ಟು ತಮ್ಮ ಕಚೇರಿ ಕೆಲಸದಲ್ಲಿ ನಿರತರಾಗುವುದು, ಮಗು ಅತ್ತರೆ ಸಮಾಧಾನಕ್ಕೆ ಕೈಗೆ ಮೊಬೈಲ್ ಕೊಡುವುದು ಇವೆಲ್ಲ ತೀರಾ ಸಾಮಾನ್ಯವಾಗುತ್ತಿದೆ. ಇಂತಹ ಒಂದು ಪ್ರಕರಣದಲ್ಲಿ ಮಗು ನಾಲ್ಕೈದು ವರ್ಷಗಳಾದರೂ ಮಾತು ಕಲಿಯಲು ಸಾಧ್ಯವಾಗದದ್ದು ನನ್ನ ಗಮನಕ್ಕೆ ಬಂದಿದೆ. ಇದು ಒಂದು ಎಕ್ಸ್ಟ್ರೀಮ್ ಆದರೆ, ಇನ್ನೊಂದೆಡೆ ಮಕ್ಕಳು ಮತ್ತು ಎಳೆಯರು ಹ್ಯಾಂಡ್ಹೆಲ್ಡ್ ಪರಿಕರಗಳನ್ನು ಬಳಸಿಕೊಂಡು ಏನೆಲ್ಲ ಮಾಡುವ ಸಾಧ್ಯತೆಗಳಿವೆ ಎಂಬುದನ್ನು ಗಮನಿಸಿದರೆ, ಅಚ್ಚರಿ ಮತ್ತು ಆತಂಕ ಎರಡೂ ಆಗುತ್ತದೆ.
ಈವತ್ತು ಈ ಬಗ್ಗೆ ಪೋಷಕರಲ್ಲಿ ಆತಂಕ ಕಾಣುತ್ತಿದ್ದೇವೆ. ಸಣ್ಣ ಮಕ್ಕಳಲ್ಲಿ ಫೋನ್ ಅಡಿಕ್ಷನ್ಗೆ ಹೆತ್ತವರೇ ಕಾರಣ ಆಗಿರುತ್ತಾರೆ. ಆದರೆ ಎಳೆಯರಲ್ಲಿ, ಹಲವು ಬಾರಿ ಮಕ್ಕಳು ತಮ್ಮ ಸ್ಮಾರ್ಟ್ಫೋನ್ ಆ್ಯಪ್ಗಳ ಮೂಲಕ ಅಕಾಡೆಮಿಕ್ ಕೆಲಸಗಳನ್ನೇ ಮಾಡುತ್ತಿದ್ದಿರಬಹುದು; ಅಥವಾ ಸ್ನೇಹಿತರೊಂದಿಗೆ ಸಂಪರ್ಕ, ಜ್ಞಾನಾರ್ಜನೆ ಮತ್ತು ಮನರಂಜನೆಗಾಗಿ ಫೋನ್ ಬಳಸುತ್ತಿರಬಹುದು. ಮಕ್ಕಳ ಈ ಚಟುವಟಿಕೆಗಳ ಬಗ್ಗೆ ಕಣ್ಣಿರಿಸಿಕೊಳ್ಳದೇ, 24 ಗಂಟೆ ಮೊಬೈಲ್ನಲ್ಲೇ ಇರುತ್ತಾರೆ ಎಂಬ ಅಸಹನೆ ವ್ಯಕ್ತಪಡಿಸುವುದು ಹಲವಾರು ಕುಟುಂಬಗಳಲ್ಲಿ ಮಕ್ಕಳು ಮತ್ತು ಹೆತ್ತವರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಮಕ್ಕಳು ಫೋನ್ ಸಿಗಲಿಲ್ಲ ಎಂದು ಆತ್ಮಹತ್ಯೆಯಂತಹ ವಿಕೋಪದ ನಿರ್ಧಾರಗಳನ್ನು ತೆಗೆದುಕೊಂಡದ್ದೂ ಇದೆ. ಫೋನ್ ವ್ಯಸನ ಆಗಿದ್ದರೆ, ಅದಕ್ಕೆ ವೈದ್ಯಕೀಯ ಸಹಾಯವನ್ನು ಆರಂಭದ ಹಂತದಲ್ಲೇ ಪಡೆಯುವುದು ಒಳ್ಳೆಯದು. ಉಳಿದಂತೆ, ಎಳೆಯರ ಸ್ಮಾರ್ಟ್ಫೋನ್ ಬಳಕೆಯ ಕುರಿತು ಕಣ್ಣಿಟ್ಟುಕೊಳ್ಳಬೇಕು. ಡಿಪಿಡಿಪಿ (DPDP) ಕಾಯಿದೆಯಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳ ಹೆತ್ತವರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯ ಮಾಡಿದ್ದಾರೆ.
📌 ಸರ್ಕಾರ ಮತ್ತು ಖಾಸಗಿ ಕಂಪೆನಿಗಳು ಸಂಗ್ರಹಿಸುವ ಮಾಹಿತಿಯ ನಡುವೆ ಯಾವ ವ್ಯತ್ಯಾಸವಿದೆ? ನಾಗರಿಕರು ಯಾವುದರ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು?
ಸರ್ಕಾರಗಳು ಇನ್ನೂ ಖಾಸಗಿ ಕಂಪೆನಿಗಳ ಮಟ್ಟದಲ್ಲಿ ಡೇಟಾ ಸಂಗ್ರಹಕ್ಕೆ ಇಳಿದಿಲ್ಲ. ಆದರೆ, ಅವರಲ್ಲಿ ಈಗಾಗಲೇ ಅನೂಹ್ಯ ಪ್ರಮಾಣದ ಸಂಗ್ರಹಿತ ಡೇಟಾ ದಾಸ್ತಾನಿದೆ. ಈಗ ಆಧಾರ್ ಸಂಖ್ಯೆಯನ್ನು ತಳಪಾಯವಾಗಿಟ್ಟುಕೊಂಡು ಸರ್ಕಾರ ಡೇಟಾ ಸಂಗ್ರಹಕ್ಕಾಗಿ ಡೇಟಾ ಸ್ಟ್ಯಾಕ್ಗಳನ್ನು ರೂಪಿಸುತ್ತಿದೆ. ದುರಾದೃಷ್ಟವಶಾತ್, ಹೊಸ ಡಿಪಿಡಿಪಿ ಕಾಯಿದೆಯ ವ್ಯಾಪ್ತಿಯಿಂದ ಸರ್ಕಾರ ತನ್ನನ್ನು ಹೊರಗಿರಿಸಿಕೊಂಡಿದೆ. ಇದು ಕಾಯಿದೆ ಜಾರಿಗೆ ಬಂದ ಬಳಿಕ ಜನ ಎದುರಿಸಬೇಕಾಗಿರುವ ದೊಡ್ಡ ಸವಾಲು. ಉತ್ತರದಾಯಿತ್ವವಾಗಲಿ, ಪಾರದರ್ಶಕತೆಯಾಗಲಿ ಇಲ್ಲದ ಡೇಟಾ ದಾಸ್ತಾನು ಅಪಾಯಕಾರಿ.
ಒಂದು ಪ್ರಜಾತಾಂತ್ರಿಕ, ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡುವ ಸರ್ಕಾರಕ್ಕೆ ತನ್ನ ಪ್ರಜೆಗಳ ಬಗ್ಗೆ ಅಷ್ಟೊಂದು ಮಾಹಿತಿ ಏಕೆ ಬೇಕು ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವುದಕ್ಕೆ ಇದು ಸಕಾಲ. ಇನ್ನು ಖಾಸಗಿ ಕಂಪನಿಗಳು, ಅದರಲ್ಲೂ ಟೆಕ್ ಜೈಂಟ್ ಕಂಪನಿಗಳು ತಮ್ಮ ವ್ಯವಹಾರಕ್ಕೆ ಅನುಕೂಲ ಅನ್ನಿಸಬಲ್ಲ ಡೇಟಾಗಳನ್ನೆಲ್ಲ ಇಲ್ಲಿಯ ತನಕ ಯಾವುದೇ ಎಗ್ಗಿಲ್ಲದೆ ಸಂಗ್ರಹಿಸಿ ಬಳಸುತ್ತಾ ಬಂದಿವೆ. ಗ್ರಾಹಕ ಪ್ರೊಫೈಲಿಂಗ್, ಟಾರ್ಗೆಟೆಡ್ ಜಾಹೀರಾತುಗಳು ಎಲ್ಲವೂ ಯಾವುದೇ ಹಿಂಜರಿಕೆ ಇಲ್ಲದೆ ನಡೆಯುತ್ತಿವೆ. ಮನೆಯೊಳಗಿನ ಡಿಜಿಟಲ್ ಟೂಲ್ಗಳೂ ನಮ್ಮ ಡೇಟಾ ಸಂಗ್ರಹಿಸಿ ತಮ್ಮ ಮಾಲಕರಿಗೆ ಒಪ್ಪಿಸುತ್ತಿವೆ. ಇವೆಲ್ಲದರ ಪರಿಣಾಮ ಏನು ಎಂಬುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡಾಗ, ಈ ರೀತಿಯ ವ್ಯವಹಾರಗಳಿಗೆಲ್ಲ ಕಡಿವಾಣ ಬೀಳಬಹುದು.
📌 ‘ಮಮ ಡೇಟಾ’ ಪುಸ್ತಕದ ಬಗ್ಗೆ ಸ್ವಲ್ಪ ಹೇಳಿ.
ಡೇಟಾ ಕಾಯಿದೆ ಬಗ್ಗೆ ನಾನು ಹಲವು ವರ್ಷಗಳಿಂದ ಕುತೂಹಲ ಹೊಂದಿದ್ದೇನೆ. ನಾನು ದುಡಿಯುತ್ತಿರುವ ಸಂಸ್ಥೆ ಯುರೋಪಿನ ಜಿಡಿಪಿಆರ್ (GDPR) ಕಂಪ್ಲಯನ್ಸ್ ಕಡ್ಡಾಯವಾಗಿ ಮಾಡಿಕೊಳ್ಳಬೇಕಾಗಿತ್ತು. ಹಾಗಾಗಿ, ಸುಮಾರಿಗೆ 2010-11ರ ಹೊತ್ತಿಗೇ ನಾನು ಡೇಟಾ ಖಾಸಗಿತನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದೆ. ಆ ಬಗ್ಗೆ ಪುಸ್ತಕದಲ್ಲಿ ವಿವರವಾಗಿ ಹೇಳಿದ್ದೇನೆ.
ಕಳೆದ ಒಂದು ವರ್ಷದಿಂದ ಈ ಪುಸ್ತಕಕ್ಕಾಗಿ ಕೆಲಸ ಮಾಡಿದ್ದೇನೆ. ಇದರಲ್ಲಿ ಡೇಟಾ ಕಾಯಿದೆ ಮತ್ತು ಅದರ ನಿಯಮಗಳ ಅನುವಾದ ಮಾತ್ರವಲ್ಲದೆ, ಡೇಟಾದ ಹುಟ್ಟು-ಚರಿತ್ರೆ, ವ್ಯಕ್ತಿಯಾಗಿ ಅಥವಾ ಒಂದು ಸಂಸ್ಥೆಯಾಗಿ ಡೇಟಾ ಸಂರಕ್ಷಣೆಗಾಗಿ ಏನು ಮಾಡಬೇಕು, ಸರ್ಕಾರ ಡೇಟಾಗಳನ್ನು ಬಳಸಿ ಏನೆಲ್ಲ ಮಾಡುತ್ತಿದೆ ಎಂಬ ಬಗ್ಗೆ ವಿವರಗಳಿವೆ. ಸುಮಾರು 200 ಪುಟಗಳ ಪುಸ್ತಕ ಇದು. ಪುಸ್ತಕಕ್ಕೆ ಎನ್. ಎ. ಎಂ. ಇಸ್ಮಾಯಿಲ್ ಮತ್ತು ಕುಮಾರ್ ಎಸ್. ಅವರು ಕ್ರಮವಾಗಿ ಮುನ್ನುಡಿ ಮತ್ತು ಬೆನ್ನುಡಿ ಬರೆದಿದ್ದಾರೆ. ಬುಕ್ ಬ್ರಹ್ಮ ಪುಸ್ತಕವನ್ನು ಪ್ರಕಟಿಸಿದೆ. ಪುಸ್ತಕವು ಜುಲೈ 15ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
📌 ಇಂದಿನ ಡಿಜಿಟಲ್ ವ್ಯವಸ್ಥೆಯಲ್ಲಿ ಅನುಕೂಲತೆ ಮತ್ತು ಖಾಸಗಿತನದ ನಡುವೆ ಒಂದು ಸಂಘರ್ಷ ಇದೆಯೇ? ನಾವು ಎಲ್ಲಿ ಗಡಿ ಎಳೆಯಬೇಕು?
ಹಾಗೇನಿಲ್ಲ. ಡೇಟಾ ಮತ್ತು ಡೇಟಾ ನಿರ್ವಹಣೆ ಬಹಳ ಫ್ಲೆಕ್ಸಿಬಲ್ ಸಂಗತಿಗಳು. ಎಲ್ಲದಕ್ಕೂ ಒಂದೇ ಅಳತೆಯ ಡೇಟಾ ನಿರ್ವಹಣೆ ಸಾಧ್ಯವಿಲ್ಲ. ಅನುಕೂಲ ಇರಲಿ, ಇಲ್ಲದಿರಲಿ, ಖಾಸಗಿತನ ಪಾಲನೆ ಮತ್ತು ಡೇಟಾ ನಿರ್ವಹಣೆಯಲ್ಲಿ ಶಿಸ್ತು ಅನಿವಾರ್ಯ. ಅಲ್ಲಿ ಗಡಿ ಇಲ್ಲ.
ನಮಗೆ ಅನುಕೂಲ ಇರುವ ಸಂಗತಿಗಳಲ್ಲೂ ನಮ್ಮ ಖಾಸಗಿತನಕ್ಕೆ, ನಮ್ಮ ವರ್ತನೆಗೆ, ನಮ್ಮ ಆರ್ಥಿಕ-ಸಾಮಾಜಿಕ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಸಂಗತಿಗಳಿರಬಹುದು. ಅವೆಲ್ಲವೂ ಖಾಸಗಿತನದ ಕಾನೂನಿನ ವ್ಯಾಪ್ತಿಗೆ ಬಂದೇ ಬರುತ್ತವೆ. ಡೇಟಾ ಕಾಯಿದೆಯಲ್ಲಿ ಯಾರಿಗೆ ಅದು ಅನ್ವಯ ಎಂಬ ಮಿತಿ ಹೇರಲಾಗಿಲ್ಲ. ಸಣ್ಣ ಗೂಡಂಗಡಿಯಿಂದ ಆರಂಭಿಸಿ ಅಂಬಾನಿ-ಅದಾನಿ ತನಕ ಎಲ್ಲರಿಗೂ ಡೇಟಾ ಕಾಯಿದೆ ಅನ್ವಯವಾಗುತ್ತದೆ. ಪ್ರತಿಯೊಬ್ಬ ಪ್ರಜೆಯೂ ಡೇಟಾ ಮೂಲ ವ್ಯಕ್ತಿಯಾಗಿ (ಡೇಟಾ ಪ್ರಿನ್ಸಿಪಲ್) ಕಾಯಿದೆಯ ವ್ಯಾಪ್ತಿಗೆ ಬರುತ್ತಾರೆ.
📌 ಎಐ ಮತ್ತು ಡೇಟಾ ಆಧಾರಿತ ತಂತ್ರಜ್ಞಾನಗಳು ಸಮಾಜಕ್ಕೆ ದೊಡ್ಡ ಅವಕಾಶಗಳನ್ನು ನೀಡುತ್ತಿವೆ. ಆದರೆ ಅವುಗಳಿಂದ ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯಕ್ಕೆ ಯಾವ ಸವಾಲುಗಳು ಎದುರಾಗಬಹುದು ಅನ್ನಿಸುತ್ತಾ?
ಮೂಲಭೂತವಾದ ಪ್ರಶ್ನೆ ಏನೆಂದರೆ, ಎಐ ಅಥವಾ ಐಒಟಿ (Internet of Things) ಅಂತಹ ಸಂಗತಿಗಳು ತಮ್ಮ ಡೇಟಾಕ್ಕೆಂದು ಏನನ್ನು ಅವಲಂಬಿಸಿವೆ? ಆ ಡೇಟಾಗಳನ್ನು ಪಡೆಯುವಾಗ ಅವರು ಡೇಟಾ ಕಾಯಿದೆಯನ್ನು ಪಾಲನೆ ಮಾಡಿದ್ದಾರೆಯೇ? ಇಷ್ಟು ಅರ್ಥವಾದರೆ, ಮತ್ತೆ ಉಳಿದದ್ದೆಲ್ಲ ಸಲೀಸು.
ಎಐ ಜನರ ಬದುಕಿನಲ್ಲಿ ಹಸ್ತಕ್ಷೇಪ ಆರಂಭಿಸಿದ್ದು ಇದು ಹೊಸದೇನಲ್ಲ. ಡವಿಂಚಿಯಂತಹ ರೊಬೊಗಳು ಎರಡು ದಶಕಗಳಿಗೂ ಮಿಕ್ಕಿ ಸಮಯದಿಂದ ಆರೋಗ್ಯ ಸೇವೆ ಒದಗಿಸುತ್ತಿವೆ. ಈಗ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಮತ್ತು ಅದರ ಮಾರುಕಟ್ಟೆ ಹೈಪ್ ಕಾರಣಕ್ಕೆ ಎಐ ಗುಳ್ಳೆ ಹಿಗ್ಗತೊಡಗಿದೆ. ಎಐ ಕಂಪನಿಗಳಿಗೆ ತಮ್ಮ ಹೂಡಿಕೆದಾರರನ್ನು ಸೆಳೆಯುವುದಕ್ಕೆ ಈ ಹೈಪ್ ಅಗತ್ಯ ಇರಬಹುದು. ಯಾವುದೋ ಹಂತದಲ್ಲಿ ಇದೆಲ್ಲ ಸೆಟಲ್ ಆಗಿ, ನಾರ್ಮಲೈಸ್ ಆಗಲಿದೆ.
90ರ ದಶಕದಲ್ಲಿ ಕಂಪ್ಯೂಟರ್ಗಳು ಮಾರುಕಟ್ಟೆಗೆ ಬಂದಾಗ ಉದ್ಯೋಗಗಳೆಲ್ಲ ನಾಶವಾಗಲಿವೆ ಎಂಬ ಹೈಪ್ ಎದ್ದಿತ್ತು. ಹಾಗೆ ಆಗಿದೆಯೆ? ಈಗಲೂ ಅದೇ ರೀತಿ ಕೆಲವು ಉದ್ಯೋಗಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಅವಕ್ಕೆ ಪರ್ಯಾಯವಾಗಿ ಬೇರೆ ಕೌಶಲಗಳನ್ನು ಕಲಿಸುವುದು, ಉದ್ಯೋಗ ನೀಡುವುದು ನಡೆಯಬೇಕಾಗುತ್ತದೆ. ಅಲ್ಲಿ ಸರ್ಕಾರದ್ದಾಗಲಿ ಅಥವಾ ಖಾಸಗಿಯವರದ್ದಾಗಲಿ ಬೇಜವಾಬ್ದಾರಿಯಿಂದ ಅಸಮತೋಲನ ಉಂಟಾದರೆ, ಸಹಜ ಪ್ರಾಕೃತಿಕ ನಿಯಮಗಳೇ ಸಮತೋಲನ ತರಲಿವೆ.






