ಇರಾನ್ ಯುದ್ಧದ ಪರಿಣಾಮ: ಕಚ್ಚಾ ತೈಲ ಬೆಲೆ ಏರಿಕೆ ನಂತರ ಕುಸಿದ ಷೇರುಪೇಟೆ

ಸಾಂದರ್ಭಿಕ ಚಿತ್ರ | Photo Credit : freepik
ಸೋಮವಾರ ಮಾರುಕಟ್ಟೆ ಆರಂಭವಾಗುತ್ತಲೇ ಆರಂಭಿಕ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿದವು. ಹೂಡಿಕೆದಾರರು ನಿರಾಶೆಯಲ್ಲಿದ್ದು, ದಲಾಲ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಮಾರಾಟಗಳ ಮೂಲಕ ಭಾವನೆ ಪ್ರತಿಫಲಿಸಿದೆ.
ಇಸ್ರೇಲ್ ಮತ್ತು ಅಮೆರಿಕ ಜೊತೆಗೂಡಿ ಇರಾನ್ ಮೇಲೆ ಯುದ್ಧ ಹೇರಿರುವ ಕಾರಣದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ಈ ಬೆಳವಣಿಗೆ ಹೂಡಿಕೆದಾರರ ಭಾವನೆಗಳ ಮೇಲೆ ಭಾರೀ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು ಶೇ 3ರಷ್ಟು ಕುಸಿದಿವೆ. ಹೀಗಾಗಿ ಸೋಮವಾರ ಮಾರುಕಟ್ಟೆ ಆರಂಭವಾಗುತ್ತಲೇ ಬೆಂಚ್ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿದವು. ಹೂಡಿಕೆದಾರರು ನಿರಾಶೆಯಲ್ಲಿದ್ದು, ದಲಾಲ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಮಾರಾಟಗಳ ಮೂಲಕ ಅದು ಪ್ರತಿಫಲಿಸಿದೆ.
S&P BSE (ಮುಂಬೈ ಷೇರುಪೇಟೆ) ಸೂಚ್ಯಂಕವು 2,444.51 ಪಾಯಿಂಟ್ಗಳ (ಶೇ 2.97ರಷ್ಟು) ಕುಸಿತದ ಜೊತೆಗೆ 76,474.39 ಕ್ಕೆ ವಹಿವಾಟು ಆರಂಭಿಸಿದೆ. NSE Nifty50 (ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ) ಬೆಳಿಗ್ಗೆ 9.28ರ ಹೊತ್ತಿಗೆ 729.90 ಪಾಯಿಂಟ್ಗಳ (ಶೇ 2.89ರಷ್ಟು) ಕುಸಿತದೊಂದಿಗೆ 23,720.55 ಕ್ಕೆ ತಲುಪಿದೆ.
ಜಿಯೊಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ ನ ಮುಖ್ಯ ಹೂಡಿಕೆ ಕಾರ್ಯತಂತ್ರಜ್ಞರಾದ ವಿಕೆ ವಿಜಯಕುಮಾರ್ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ, “ಬ್ರೆಂಟ್ ಕಚ್ಚಾ ತೈಲವು 115 ಡಾಲರ್ ಮೀರಿ ಏರಿರುವುದು ಆರ್ಥಿಕತೆ ಮತ್ತು ಮಾರುಕಟ್ಟೆಗಳಿಗೆ ದೊಡ್ಡ ತೈಲ ಆಘಾತವನ್ನು ನೀಡಿದೆ. ಪಶ್ಚಿಮ ಏಷ್ಯಾದ ಸಂಘರ್ಷ ದೀರ್ಘಕಾಲದವರೆಗೆ ಮುಂದುವರಿದರೆ ಮತ್ತು ಕಚ್ಚಾ ತೈಲ ಬೆಲೆ ಏರಿದರೆ ಭಾರತದಂತಹ ದೊಡ್ಡ ತೈಲ ಆಮದುದಾರರಿಗೆ ತೀವ್ರ ಹೊಡೆತ ಬೀಳಲಿದೆ. ಈ ತೈಲ ಆಘಾತದ ಆರ್ಥಿಕ ಪರಿಣಾಮಗಳಲ್ಲಿ ಮಾರುಕಟ್ಟೆ ಬೆಲೆ ಏರಿಕೆಯಾಗುತ್ತದೆ. ತೈಲ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೂ ಅಥವಾ ಇಲ್ಲದಿದ್ದರೂ ಹಣದುಬ್ಬರ ಖಂಡಿತವಾಗಿ ಹೆಚ್ಚಾಗುತ್ತದೆ.”
ತೀವ್ರ ಮಾರಾಟದ ವಹಿವಾಟು
ಷೇರು ಮಾರುಕಟ್ಟೆ ತೆರೆದ ಆರಂಭಿಕ ಗಂಟೆಗಳಲ್ಲಿ ಮಾರುಕಟ್ಟೆಯಲ್ಲಿ ಭಾರೀ ಮಾರಾಟ ಕಂಡುಬಂದಿದೆ. ಅತಿ ಕಡಿಮೆ ಪರಿಣಾಮ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೇಲೆ ಉಂಟಾಗಿದೆ. ಅಂದರೆ ರಿಲಯನ್ಸ್ ಉದ್ಯಮ ಶೇ 0.04ರಷ್ಟು ಮಾತ್ರ ಕುಸಿದಿದೆ. ನಂತರದ ಸ್ಥಾನದಲ್ಲಿ ಶೇ 0.89 ಕುಸಿದ ಇನ್ಫೋಸಿಸ್ ಇದ್ದರೆ, ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಶೇ 1.00ರಷ್ಟು ಕುಸಿದಿದೆ. ಟೆಕ್ ಮಹೀಂದ್ರಾ ಲಿಮಿಟೆಡ್ ಶೇ 1.01ರಷ್ಟು ಮತ್ತು HCL ಟೆಕ್ನಾಲಜೀಸ್ ಲಿಮಿಟೆಡ್ ಶೇ 1.03ರಷ್ಟು ಕುಸಿದಿವೆ.
ನಷ್ಟ ಮಾಡಿಕೊಂಡವರಲ್ಲಿ ಮುಖ್ಯವಾಗಿ ಇಂಡಸ್ಇಂಡ್ ಬ್ಯಾಂಕ್ ಲಿಮಿಟೆಡ್ ಷೇರುಗಳು ತೀವ್ರ ಶೇ 7.55ರಷ್ಟು ಕುಸಿದಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್ ಷೇರುಗಳು ಶೇ 5.56ರಷ್ಟು, ಲಾರ್ಸೆನ್ ಮತ್ತು ಟೊಬ್ರೊ ಲಿಮಿಟೆಡ್ ಷೇರುಗಳು ಶೇ 4.87ರಷ್ಟು, ಟಾಟಾ ಸ್ಟೀಲ್ ಲಿಮಿಟೆಡ್ ಷೇರುಗಳು ಶೇ 4.61ರಷ್ಟು ಮತ್ತು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಷೇರುಗಳು ಶೇ 4.55ರಷ್ಟು ಕುಸಿದಿವೆ.
“ಪ್ರಸ್ತುತ ಯುದ್ಧ ಎಷ್ಟು ದೀರ್ಘಕಾಲ ಎಳೆಯಬಹುದು ಎನ್ನುವ ಬಗ್ಗೆ ಆತಂಕ ಹರಡಿದೆ. ಈ ಅನಿಶ್ಚಿತತೆ ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡುವ ವಿದೇಶಿ ಸಂಸ್ಥೆಗಳ ಹೂಡಿಕೆಗಳ (FII) ಮೇಲೂ ಪರಿಣಾಮ ಬೀರುತ್ತದೆ. ಫೆಬ್ರವರಿಯಲ್ಲಿ ವಿದೇಶಿ ಸಂಸ್ಥೆಗಳು ಅಲ್ಪಾವಧಿಗೆ ಖರೀದಿಯ ವಹಿವಾಟು ತೋರಿಸಿದ್ದರು. ಇದೀಗ ಮತ್ತೆ ಮಾರಾಟದ ವಹಿವಾಟು ಹೆಚ್ಚಾಗಿದೆ. ಆದರೆ ಸಂಘರ್ಷದಂತಹ ಭೌಗೋಳಿಕ-ರಾಜಕೀಯ ಸಮಸ್ಯೆಗಳ ಮಾರುಕಟ್ಟೆಗಳ ಮೇಲಿನ ಪರಿಣಾಮ ದೀರ್ಘಕಾಲ ಇರುವುದಿಲ್ಲ. ಹೀಗಾಗಿ ಹೂಡಿಕೆದಾರರು ತಾಳ್ಮೆಯಿಂದ ಇರಬೇಕು” ಎನ್ನುತ್ತಾರೆ ವಿಜಯಕುಮಾರ್.







