ಪ್ರಾಕೃತಿಕ ವಿಕೋಪ ತಡೆಗೆ ಗಾಡ್ಗೀಳ್ ವರದಿ ಜಾರಿಯೇ ಪರಿಹಾರ ಎಂಬುದು ಹಸಿಸುಳ್ಳು: ಪರಿಸರ ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ
"ವಯನಾಡ್ ನಲ್ಲಿ ಸಂಭವಿಸಿರುವ ಭೂಕುಸಿತಕ್ಕೆ ಮುಖ್ಯ ಕಾರಣ ಅತಿಯಾದ ಮಳೆ"

ವಾರ್ತಾಭಾರತಿ: ವಯನಾಡ್ ದುರಂತಕ್ಕೆ ಮಾಧವ ಗಾಡ್ಗೀಳ್ ವರದಿ ಜಾರಿ ನಿರ್ಲಕ್ಷ್ಯವೇ ಕಾರಣ ಎಂಬುದು ಸರಿಯೇ?
ಕಲ್ಕುಳಿ ವಿಠಲ್ ಹೆಗ್ಡೆ: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಎಲ್ಲ ಸಂದರ್ಭಗಳಲ್ಲೂ ಇಂತಹ ಅವಘಡಗಳಿಗೆ ಮಾಧವ ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ ಜಾರಿ ಮಾಡದಿರುವುದೇ ಕಾರಣ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಇದು ಉರಿಯುವ ಮನೆಯನ್ನು ದೋಚುವಂತಹ ಹೇಳಿಕೆಗಳಾಗಿವೆ. ಪ್ರಾಕೃತಿಕ ವಿಕೋಪಗಳಿಗೆ ಮನುಷ್ಯನ ಸ್ವಾರ್ಥದೊಂದಿಗೆ ನೈಸರ್ಗಿಕ ಕಾರಣವೂ ಇದೆ. ಇಂತಹ ನೈಸರ್ಗಿಕ ವಿಕೋಪಗಳನ್ನು ತಡೆಯಲು ಮಾಧವ ಗಾಡ್ಗೀಳ್ ವರದಿ ಅಥವಾ ಕಸ್ತೂರಿರಂಗನ್ ವರದಿಗಳ ಜಾರಿಯೇ ಪರಿಹಾರ ಎಂಬುದು ಹಸಿಸುಳ್ಳು. ಇಂತಹ ವರದಿಗಳ ಜಾರಿಯ ಹಿಂದೆ ಸ್ಪೆಷಲ್ ಇಕೋರೆನ್ ಸ್ಥಾಪನೆ ಹಾಗೂ ಮಲೆನಾಡಿನ ಜನರನ್ನು ಅಭಿವೃದ್ಧಿಯಿಂದ ವಂಚಿತರನ್ನಾಗಿಸುವ, ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆಯಷ್ಟೇ. ಕೇರಳದ ಮುನ್ನಾರ್ನಲ್ಲಿ ಈ ಹಿಂದೆಯೂ ಭೂಕುಸಿತ ಸಂಭವಿಸಿ ಅಪಾರ ಹಾನಿಯಾಗಿತ್ತು. ಅಂದೂ ಇಂತಹದ್ದೇ ಹುಯಿಲೆಬ್ಬಿಸಲಾಗಿತ್ತು. ಆದರೆ, ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪವು ಭೂಕುಸಿತದಂತಹ ಘಟನೆಗಳಿಗೆ ಎಷ್ಟು ಕಾರಣವಾಗಿದೆಯೋ, ಅದಕ್ಕಿಂತ ಹೆಚ್ಚು ನೈಸರ್ಗಿಕ ಘಟನೆಗಳೂ ಕಾರಣವಾಗಿವೆ.
ವಾರ್ತಾಭಾರತಿ: ವಯನಾಡ್ ದುರಂತಕ್ಕೆ ನಿಮ್ಮ ಪ್ರಕಾರ ಕಾರಣ ಏನಿರಬಹುದು?
ಕಲ್ಕುಳಿ ವಿಠಲ್ಹೆಗ್ಡೆ: ವಾಸ್ತವವಾಗಿ ಕೇರಳದ ವಯನಾಡ್ನಲ್ಲಿ ಸದ್ಯ ಸಂಭವಿಸಿರುವ ಭೂಕುಸಿತಕ್ಕೆ ಮುಖ್ಯ ಕಾರಣವಾಗಿರುವುದು ಅತಿಯಾದ ಮಳೆಯಾಗಿದೆ. ಈ ಅತಿಯಾದ ಮಳೆಗೆ ಕಾರಣವಾಗಿರುವುದು ಜಾಗತಿಕ ತಾಪಮಾನ ಏರಿಕೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿರುವುದು ಆಧುನಿಕತೆ ಹಾಗೂ ಅವೈಜ್ಞಾನಿಕವಾದ ಬೃಹತ್ ಯೋಜನೆಗಳು, ಕಾಮಗಾರಿಗಳಾಗಿವೆ. ಯಾವುದೇ ಒಂದು ಪರಿಸರ ಅಥವಾ ಬೆಟ್ಟಗುಡ್ಡಗಳು ನಿರ್ದಿಷ್ಟ ಪ್ರಮಾಣದ ತಾಳಿಕೆಯ ಗುಣವನ್ನು ಹೊಂದಿರುತ್ತವೆ. ಈ ತಾಳಿಕೆಯ ಗುಣ ಮೀರಿ ಮಳೆಯಾದಾಗ ಗುಡ್ಡಗಳಲ್ಲಿರುವ ಮಣ್ಣು, ಕಲ್ಲುಗಳ ಸ್ಥಾನ ಪಲ್ಲಟಗೊಳ್ಳುತ್ತದೆ. ಈ ವೇಳೆ ಬೆಟ್ಟ ಗುಡ್ಡಗಳಲ್ಲಿರುವ ಕಲ್ಲು, ಬಂಡೆಕಲ್ಲುಗಳಡಿಯ ಮಣ್ಣು ಸಡಿಲಗೊಂಡು ಗುಡ್ಡಗಳು ಕುಸಿಯುವುದು ಸಾಮಾನ್ಯ ಸಂಗತಿಯಾಗಿದೆ. ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಅಲ್ಲಿನ ಬೆಟ್ಟ ಗುಡ್ಡಗಳ ತಾಳಿಕೆಯ ಸಾಮರ್ಥ್ಯಕ್ಕೂ ಹೆಚ್ಚು ಮಳೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ಅಲ್ಲಿನ ಪರಿಸರದಲ್ಲಿ ಸಾಮಾನ್ಯವಾಗಿ 150ರಿಂದ 200 ಮಿ.ಮೀ. ಮಳೆಯಾಗುವುದು ವಾಡಿಕೆಯಾಗಿದೆ. ಆದರೆ, ಭೂಕುಸಿತ ಸಂಭವಿಸುವುದಕ್ಕೂ ಮುನ್ನ ಅಲ್ಲಿ 572 ಮಿ.ಮೀ. ಮಳೆ ಸುರಿದಿದ್ದು, ಅಲ್ಲಿ 24 ಗಂಟೆಯೊಳಗೆ ಆ ಪ್ರದೇಶ ತಾಳಿಕೊಳ್ಳಲು ಆಗದಷ್ಟು ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಭೂ ಕುಸಿತ ಸಂಭವಿಸಿದೆ. ಅಲ್ಲಿನ ಬೆಟ್ಟಗುಡ್ಡಗಳ ಮೇಲೆ ನಿರ್ದಿಷ್ಟ ಅವಧಿಯಲ್ಲಿ ತಾಳಿಕೆ ಸಾಮರ್ಥ್ಯ ಮೀರಿ ಮಳೆಯಾದ ಪರಿಣಾಮ ಬೆಟ್ಟದಡಿಯಲ್ಲಿ ಕಲ್ಲು ಮಣ್ಣಿನ ನಡುವಿನ ಜಾಗದಲ್ಲಿ ಸಂಭವಿಸಿದ ನೈಸರ್ಗಿಕ ಕ್ರಿಯೆಯಿಂದಾಗಿ ಭೂ ಕುಸಿತವಾಗಿದೆ. ಅಲ್ಲಿ ಅಂದು ಈ ಪ್ರಮಾಣದಲ್ಲಿ ಮಳೆಯಾಗಿದ್ದು ಏಕೆ? ಎಂಬುದರ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ.
ವಾರ್ತಾಭಾರತಿ: ಮಲೆನಾಡಿನ ಜನರೇ ಇಂತಹ ಅನಾಹುತಕ್ಕೆ ಕಾರಣ ಎಂಬ ಆರೋಪ ಆಗಾಗ ಕೇಳಿ ಬರುತ್ತಿದೆ. ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿಯಿಂದ ಇಂತಹ ಘಟನೆಗಳನ್ನು ತಡೆಯಲು ಸಾಧ್ಯವಿಲ್ಲವೇ?
ಕಲ್ಕುಳಿ ವಿಠಲ್ ಹೆಗ್ಡೆ: ಪಶ್ಚಿಮಘಟ್ಟ ಪ್ರದೇಶದಲ್ಲಿನ ಇಂತಹ ಪ್ರಾಕೃತಿಕ ವೈಪರೀತ್ಯಗಳಿಗೆ ಅಲ್ಲಿ ವಾಸಿಸುವ ಜನರೇ ಕಾರಣ ಎಂಬ ಆರೋಪ ಶುದ್ಧಸುಳ್ಳು. ಈ ಪರಿಸರದಲ್ಲಿ ಮಾಧವ ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ ಜಾರಿ ಎಂಬುದು ಜೀವವೈವಿಧ್ಯತೆ ಸಂರಕ್ಷಣೆ ಕಾರ್ಯಕ್ರಮವಾಗಿದ್ದು, ಈ ವರದಿಗಳನ್ನು ಜಾರಿ ಮಾಡುವುದರಿಂದ ಇಲ್ಲಿನ ಪರಿಸರ ಒಂದು ರೀತಿಯಲ್ಲಿ ಸ್ಪೆಷಲ್ ಇಕನಾಮಿಕಲ್ ರೆನ್ ಆಗಲಿದೆಯಷ್ಟೇ. ಇದರಿಂದ ಯಾರಿಗೆ ಲಾಭ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಂತಹ ವರದಿ ಜಾರಿ ಮಾಡಿ ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವುದು, ಅಭಿವೃದ್ಧಿಗೆ ತಡೆಯೊಡ್ಡಿ ಅವರ ನೆಮ್ಮದಿ ಜೀವನಕ್ಕೆ ಭಂಗ ತರುವುದಕ್ಕಿಂತ ಇರುವ ಅರಣ್ಯ ಕಾಯ್ದೆ, ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡಿದರೆ ಮಲೆನಾಡಿಗೆ ಯಾವ ವರದಿಗಳ ಅಗತ್ಯವೂ ಇಲ್ಲ.
ವಾರ್ತಾಭಾರತಿ: ಜಾಗತಿಕ ತಾಪಮಾನಕ್ಕೂ, ಪಶ್ಚಿಮಘಟ್ಟದಲ್ಲಿ ಆಗಾಗ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಕ್ಕೂ ಏನು ಸಂಬಂಧ?
ಕಲ್ಕುಳಿ ವಿಠಲ್ ಹೆಗ್ಡೆ: ಪಶ್ಚಿಮಘಟ್ಟದಲ್ಲಿನ ಮಾನ್ಸೂನ್ ಮಳೆಗೆ ತನ್ನದೇ ಆದ ವ್ಯವಸ್ಥೆ ಎಂಬುದು ಇದೆ. ಪಶ್ಚಿಮಘಟ್ಟ ಪ್ರದೇಶದ ಮೂಲಕ ಪ್ರತೀ ವರ್ಷ ಹಾದು ಹೋಗುವ ಮೋಡಗಳನ್ನು ಇಲ್ಲಿನ ಗಿರಿಶ್ರೇಣಿಗಳು ತಡೆದಾಗ ಅಲ್ಲಿ ಮಳೆಯಾಗುವುದು ಸಹಜ ಪ್ರಕ್ರಿಯೆಯಾಗಿದೆ. ಈ ವೇಳೆ ಕೆಲವೆಡೆ ಕನಿಷ್ಠ ಮಳೆ, ಮತ್ತೆ ಕೆಲವೆಡೆ ಗರಿಷ್ಠ ಮಳೆಯಾಗುವುದು ವಾಡಿಕೆಯಾಗಿದೆ. ಪ್ರತೀ ಮಾನ್ಸೂನ್ಗಳಲ್ಲೂ ಈ ಮಳೆಯ ಪ್ರಮಾಣ ಒಂದೇ ಸಮಾನವಾಗಿ ಇರುತ್ತದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮೇಘಸ್ಫೋಟ(ಕ್ಲೌಡ್ ಬ್ಲಾಸ್ಟ್) ದಂತಹ ಪ್ರಕೃತಿ ವಿಕೋಪ ಆಗುವುದಿಲ್ಲ. ಅದೇನಿದ್ದರೂ ಹಿಮಾಲಯ ಪರ್ವತ ಪ್ರದೇಶಗಳ ಆಸುಪಾಸಿನ ರಾಜ್ಯಗಳಲ್ಲಿ ಸಂಭವಿಸುವ ಸಹಜ
ವಿದ್ಯಮಾನವಾಗಿದೆ. ಮಲೆನಾಡಿನ ಪಶ್ಚಿಮ ಘಟ್ಟ ಪ್ರದೇಶಗಳ ವ್ಯಾಪ್ತಿಯಲ್ಲೂ ಇತ್ತೀಚಿನ ವರ್ಷಗಳಲ್ಲಿ ಮೇಘಸ್ಫೋಟ ದಂತಹ ಮಳೆಯಾಗುವ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ತಾಪಮಾನ ಏರಿಕೆಯೇ ಆಗಿದೆ. ಜಾಗತಿಕ ತಾಪಮಾನ ಏರಿಕೆಯು ಪಶ್ಚಿಮಘಟ್ಟದ ಪ್ರದೇಶದ ಮಾನ್ಸೂನ್ ಮೇಲೂ ಪ್ರಭಾವ ಬೀರುತ್ತಿ ರುವುದರಿಂದ ಇತ್ತೀಚಿನ ದಿನಗಳಲ್ಲಿ ಇಲ್ಲಿ ಅಕಾಲಿಕವಾಗಿ ಮೇಘಸ್ಫೋಟದಂತಹ ಮಳೆಯಾಗುತ್ತಿದೆ. ಹಿಂದೆ ಅಕಾಲಿಕವಾಗಿ ಭಾರೀ ಮಳೆಯಾಗುವ ಪರಿಸ್ಥಿತಿ ಇರಲಿಲ್ಲ. ಜಾಗತಿಕ ತಾಪಮಾನ ಏರಿಕೆ ಕಾರಣದಿಂದ ಇಲ್ಲಿನ ಮಾನ್ಸೂನ್ ಮೇಲಾಗುತ್ತಿರುವ ವೈಪರೀತ್ಯದ ಫಲವಾಗಿ ಇತ್ತೀಚಿನ ದಿನಗಳಲ್ಲಿ ವಯನಾಡ್ನಲ್ಲಿ ಸುರಿ ದಂತಹ ಮಳೆ, ಭೂಕುಸಿತ, ಬರ, ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳು ಪಶ್ಚಿಮಘಟ್ಟ ಪ್ರದೇಶದಲ್ಲೂ ಸಂಭವಿಸುತ್ತಿದೆ.
ವಾರ್ತಾಭಾರತಿ: ಜಾಗತಿಕ ತಾಪಮಾನ ಏರಿಕೆಗೆ ಕಾರಣ ಏನು? ಯಾರು ಕಾರಣ?
ಕಲ್ಕುಳಿ ವಿಠಲ್ ಹೆಗ್ಡೆ: ಜಾಗತಿಕ ತಾಪಮಾನ ಏರಿಕೆಗೆ ಇಂಗಾಲದ ಡೈ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದೇ ಕಾರಣವಾಗಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣರಾಗುತ್ತಿರುವವರು ಆಧುನೀಕರಣಕ್ಕೆ ಒತ್ತು ನೀಡಿರುವ ನಗರ, ಮುಂದುವರಿದ ದೇಶಗಳಲ್ಲಿರುವ ಮುಂದುವರಿದ ಜನ ಅಥವಾ ಪೆಟ್ರೋಲ್, ಡೀಸೆಲ್ಗಳಂತಹ ಪಳೆಯುಳಿಕೆ ಇಂಧನಗಳನ್ನು ಅತೀ ಹೆಚ್ಚು ಬಳಸುವವರು. ಕೈಗಾರಿಕೆಗಳಂತಹ ಬೃಹತ್ ಯೋಜನೆಗಳನ್ನು ಜಾರಿ ಮಾಡುತ್ತಿರುವವರಿಂದಾಗಿ ಜಾಗತಿಕವಾಗಿ ಇಂಗಾಲದ ಡೈಆಕ್ಸೈಡ್ ಭಾರೀ ಪ್ರಮಾಣದಲ್ಲಿ ವಾತಾವರಣ ಸೇರುತ್ತಿದೆ. ಇದರಿಂದ ಜಾಗತಿಕವಾಗಿ ತಾಪಮಾನದಲ್ಲಿ ಪ್ರತೀ ವರ್ಷವೂ ಏರಿಕೆಯಾಗುತ್ತಿದೆ. ಇದು ಮಳೆಯನ್ನು ತರುವ ಮಾನ್ಸೂನ್ಗಳ ಮೇಲೆ ಪರಿಣಾಮ ಬೀರುತ್ತಿದೆ. ಪರಿಣಾಮ ಯಾರೂ ನಿರೀಕ್ಷೆ ಮಾಡದಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಆ ಭೂ ಪ್ರದೇಶ ತಡೆದುಕೊಳ್ಳುವ ಸಾಮರ್ಥ್ಯ ಮೀರಿ ಮಳೆಯಾದಾಗ ಭೂಕುಸಿತ ಉಂಟಾಗುವುದು, ಪ್ರವಾಹ ಸಂಭವಿಸುವುದು ಸಾಮಾನ್ಯ ಸಂಗತಿಯಾಗಿದೆ. ಜಾಗತಿಕ ತಾಪಮಾನಕ್ಕೆ ಕಾರಣ ಕಂಡುಕೊಂಡು ಅದನ್ನು ನಿಯಂತ್ರಿಸದೆ ಮಾಧವ ಗಾಡ್ಗೀಳ್, ಕಸ್ತೂರಿರಂಗನ್ ವರದಿ ಜಾರಿ ಮಾಡಿ ಯಾವ ಪ್ರಯೋಜನವೂ ಇಲ್ಲ. ಇಂತಹ ವರದಿಗಳ ಜಾರಿಯಿಂದ ಊರು ಮತ್ತು ಅಲ್ಲಿನ ಜನರ ಅಭಿವೃದ್ಧಿಗೆ ತಡೆಯೊಡ್ಡಬಹುದಷ್ಟೇ.
ವಾರ್ತಾಭಾರತಿ: ಇಂತಹ ವಿಕೋಪಗಳಿಗೆ ಮನುಷ್ಯ ಕಾರಣ ಅಲ್ಲವಾ?
ಕಲ್ಕುಳಿ ವಿಠಲ್ಹೆಗ್ಡೆ: ಪ್ರಾಕೃತಿಕ ವಿಕೋಪಗಳು ಸಂಭವಿಸುವುದಕ್ಕೆ ಮನುಷ್ಯನ ಸ್ವಾರ್ಥವೂ ಕಾರಣವಾಗಿದೆ. ‘ಕಾಲು ಎಡವಿದರೆ ಆನೆ ಕೂಡ ಎಡವುತ್ತೆ’ ಎಂಬ ಮಾತಿನಂತೆ ಯಾವುದೇ ಬೆಟ್ಟ, ಗುಡ್ಡ, ಗಿರಿಶ್ರೇಣಿಗೆ ಒಂದು ತೂಕ, ಕಾಲು ಎಂಬುದು ಇರುತ್ತದೆ. ಒಂದು ಗುಡ್ಡದಲ್ಲಿ ಜಲದ ಮೂಲ ಅಥವಾ ನೀರು ಹರಿದು ಬರುವ ಜಾಗವು ಆ ಗುಡ್ಡದ ಕಾಲು ಆಗಿರುತ್ತದೆ. ರಸ್ತೆ, ಹೆದ್ದಾರಿ ಅಭಿವೃದ್ಧಿ, ಪ್ರವಾಸೋದ್ಯಮ ಹೆಸರಿನಲ್ಲಿ ಗುಡ್ಡದ ಈ ಕಾಲುಗಳನ್ನು ಕತ್ತರಿಸಿದಲ್ಲಿ ಅಥವಾ ಅದರ ಸ್ವರೂಪ ಬದಲಾಯಿಸಿದಲ್ಲಿ ಆ ಗುಡ್ಡದಲ್ಲಿ ನೀರಿನ ಮೂಲ ಇದ್ದ ಕಡೆಯಲ್ಲೇ ಗುಡ್ಡ ಕುಸಿಯುತ್ತದೆ. ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಜಾರಿ ಮಾಡಿ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿನ ಜನರ ಬದುಕಿಗೆ ತೊಂದರೆ ನೀಡುವುದರಿಂದ ಪ್ರಾಕೃತಿಕ ವಿಕೋಪ ತಡೆಯಲು ಸಾಧ್ಯವಿಲ್ಲ. ಅದನ್ನು ಜಾರಿ ಮಾಡುವ ಬದಲು ಪಶ್ಚಿಮಘಟ್ಟ ಪ್ರದೇಶದಲ್ಲಿ ಬಂಡೆ ಒಡೆಯುವ, ಗಣಿಗಾರಿಕೆ ಮಾಡುವವರಿಗೆ ಇರುವ ಕಾನೂನಿನಂತೆ ಗುಡ್ಡ ಕತ್ತರಿಸುವವರು, ಗಿರಿಯ ಸ್ವರೂಪ ಬದಲಾಯಿಸುವವರು, ಅಲ್ಲಿನ ನೆಲ ಮಟ್ಟ ಮಾಡುವವರಿಗೂ ಕಾನೂನು ಜಾರಿ ಮಾಡಬೇಕು. ಮುಖ್ಯವಾಗಿ ಅವೈಜ್ಞಾನಿಕ ಹೆದ್ದಾರಿ ಯೋಜನೆಗಳನ್ನು ತಡೆಯಬೇಕು. ಏಕೆಂದರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನ ಭೂಕುಸಿತಕ್ಕೆ ಅವೈಜ್ಞಾನಿಕ ಹೆದ್ದಾರಿ ಯೋಜನೆಯೇ ಕಾರಣ ಎಂದು ವರದಿ ಬಂದಿದೆ. ಹೆದ್ದಾರಿ ಹಾಗೂ ರಸ್ತೆ ಬದಿಯಲ್ಲಿ ಬಾಕ್ಸ್ ಚರಂಡಿ ಮಾಡಿ ಮಳೆ ನೀರನ್ನು ಇಂಗಲು ಬಿಡದೆ ಒಂದೇ ಕಡೆಯಲ್ಲಿ ಬಿಟ್ಟಿರುವುದೇ ಕಾರಣ ಎಂಬ ಅಂಶ ವರದಿಯಲ್ಲಿದೆ. ಕೇರಳದ ಮುನ್ನಾರ್ನಲ್ಲಿ ಈ ಹಿಂದೆಯೂ ಇಂತಹ ಘೋರ ಪ್ರಾಕೃತಿಕ ದುರಂತ ಸಂಭವಿ ಸಿತ್ತು. ನಾನು ಆ ಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿದ್ದೇನೆ.
ವಾರ್ತಾಭಾರತಿ: ವಯನಾಡ್ ದುರಂತದಂತಹ ಘಟನೆ ತಡೆಯಲು ಏನು ಮಾಡಬೇಕು?
ಕಲ್ಕುಳಿ ವಿಠಲ್ ಹೆಗ್ಡೆ: ಪ್ರಾಕೃತಿಕ ವಿಕೋಪಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರ, ಪರಿಸರ ಸಂಘಟನೆಗಳು, ಪರಿಸರವಾದಿಗಳು ಹಾಗೂ ಸಾರ್ವಜನಿಕರು ಮಾಡಬೇಕಾದ ಮುಖ್ಯ ಕೆಲಸ ಎಂದರೆ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲೇಬೇಕು. ಮಲೆನಾಡಿನಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳಿಗೆ ಇಲ್ಲಿ ವಾಸಿಸುತ್ತಿರುವವರೇ ಕಾರಣ ಎಂದು ದೂರುವ ನಗರದ ನಾಗರಿಕರು, ಮುಂದುವರಿದ ದೇಶದವರು ಎಂದು ಕರೆಸಿಕೊಳ್ಳುವವರಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದನ್ನು ನಗರದವರು, ಮುಂದುವರಿದ ದೇಶದವರು, ಪೆಟ್ರೋಲ್, ಡೀಸೆಲ್ಗಳನ್ನು ಅತಿಯಾಗಿ ಬಳಸಿ ಪರಿಸರ ವಿರೋಧಿಯಾಗಿ ನಡೆಯುತ್ತಿರುವವರೇ ತಡೆಯಬೇಕು. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಕಾರಣ ಕಡಿಮೆ ಅವಧಿಯಲ್ಲಿ ಅಲ್ಲಿನ ಭೂ ಪ್ರದೇಶದ ತಾಳಿಕೆ ಸಾಮರ್ಥ್ಯ ಮೀರಿ ಮಳೆಯಾಗಿರುವುದೇ ಕಾರಣ. ಇದಕ್ಕೆ ಅಲ್ಲಿನ ಜನರು ಕಾರಣ ಅಲ್ಲ, ಮಾಧವ ಗಾಡ್ಗೀಳ್ ವರದಿ ಜಾರಿಯನ್ನು ತಡೆದ ಕಾರಣದಿಂದ ಅಲ್ಲಿ ಘೋರ ದುರಂತ ಆಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ.







