ದಲಿತ ಉದ್ಯಮಶೀಲತೆ ಮತ್ತು ಸಾಮುದಾಯಿಕ ಒಗ್ಗಟ್ಟಿನ ಮಹತ್ವ

ನಗರ ಪ್ರದೇಶವೊಂದರಲ್ಲಿ ದಲಿತ ಸಮುದಾಯದವರೊಬ್ಬರು ಒಂದು ಅಂಗಡಿ ತೆರೆದಿದ್ದರು. ಅವರಿಗೆ ಕಿರುಕುಳ ಆರಂಭ ಆಗಿತ್ತು. ಬೇರೆ ಸಮುದಾಯಗಳಿಂದ ಅಲ್ಲ. ಅವರದೇ ಸಮುದಾಯದ ಅವರದೇ ಸಂಬಂಧಿಕರಿಂದ! ದೂರದ ರಾಜಸ್ಥಾನ, ಗುಜರಾತ್‌ನ ಮಾರ್ವಾಡಿಗಳು ಇವರ ಬೀದಿಗಳಲ್ಲಿ ಅಥವಾ ಬೀದಿಯ ಆರಂಭದ ಸ್ಥಳಗಳಲ್ಲಿ ಬಂದು ಅಂಗಡಿ ತೆರೆಯುತ್ತಾರೆ. ಅವರ ಮುಂದೆ ಇವರು ಹಲ್ಕಿರಿದು ‘‘ಶೇಟ್ ಜಿ, ಚೆನ್ನಾಗಿದ್ದೀರಾ?’’ ಎಂದು ವ್ಯಾಪಾರ ಮಾಡುತ್ತಾರೆ! ಅದೂ ಅಲ್ಲದೆ ಇವರ ವಿರುದ್ಧವೇ ದೌರ್ಜನ್ಯ, ಅಸ್ಪಶ್ಯತೆ ಆಚರಿಸುವವನೊಬ್ಬ ಇವರ ಬೀದಿಯ ಸಮೀಪ ಅಂಗಡಿ, ಹೊಟೇಲ್ ತೆರೆದು ಭರ್ಜರಿ ವ್ಯಾಪಾರ ಮಾಡಿ ಲಾಭ ಗಳಿಸುತ್ತಾನೆ! ಆದರೆ ಇವರದೇ ಸಮುದಾಯದವನೊಬ್ಬ ವ್ಯಾಪಾರ ಮಾಡಿದರೆ ‘‘ಭಾರೀ ಬೆಳೆದುಬಿಟ್ಟ, ಕೊಬ್ಬು ನೋಡಿ’’ ಎನ್ನುವುದು! ಇದು ಸಲ್ಲದು. ಸವರ್ಣೀಯನೊಬ್ಬ ದಲಿತರದೇ ದುಡ್ಡು ತಿಂದು ಅವರ ವಿರುದ್ಧವೇ ಸಮಯ ಸಿಕ್ಕಾಗ ಅಸ್ಪಶ್ಯತಾಚರಣೆ ಮಾಡುವುದಕ್ಕಿಂತ ದಲಿತ ಸಮುದಾಯದಲ್ಲೇ ಒಬ್ಬ ವ್ಯಕ್ತಿ ವ್ಯಾಪಾರ ವ್ಯವಹಾರದ ಮೂಲಕ ಬೆಳೆದು ಸ್ವಲ್ಪ ಅಹಂ ತೋರಿದರೆ ಅದಕ್ಕೆ ಅಸೂಯೆ ಪಡಬೇಕೇ? ಕ್ಷಮಿಸಿ ಮುಂದೆ ಹೋಗಬಹುದಲ್ಲವೆ? ಸಮುದಾಯದ ಹತ್ತಾರು ಜನಕ್ಕೆ ಆತ ಉದ್ಯೋಗ ನೀಡಿರುತ್ತಾನೆ. ಅದನ್ನಾದರೂ ಗೌರವಿಸಬೇಕಲ್ಲವೇ?
ದಲಿತ ಉದ್ಯಮಶೀಲತೆಯನ್ನು ಯಾವುದೇ ಕಾರಣಕ್ಕೂ ಯಾರೂ ವ್ಯಕ್ತಿಗತವಾಗಿ ತೆಗೆದುಕೊಳ್ಳಬಾರದು. ಸಮುದಾಯದ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕು. ದಲಿತ ಸಮುದಾಯ ಬೆಳೆಯುತ್ತಿದೆ ಎಂದು ಸುಮ್ಮನಾಗಬೇಕು. ಸಾಧ್ಯವಾದರೆ ಅಂತಹವರಿಗೆ ಗ್ರಾಹಕರಾಗಿ ಇರಬೇಕು, ಕಾಲೆಳೆಯಲಂತೂ ಖಂಡಿತ ಹೋಗಬಾರದು. ಯಾಕೆಂದರೆ ದಲಿತರೇ ಪರಸ್ಪರ ಕಾಲೆಳೆದುಕೊಂಡರೆ ದೌರ್ಜನ್ಯಕೋರರಿಗೆ ಅದು ಸಮುದಾಯದ ದೌರ್ಬಲ್ಯವಾಗಿ ಗೋಚರಿಸಲಿದೆ. ಅದರ ಬದಲು ‘‘ನಮ್ಮವನು ಒಬ್ಬ ಬೆಳೆಯಲಿ ಬಿಡಯ್ಯ’’ ಎಂದು ಸುಮ್ಮನಾದರೆ, ಪರಸ್ಪರ ಒಗ್ಗೂಡಿ ನಿಂತರೆ, ನೋಡನೋಡುತ್ತಲೇ ದಲಿತ ಸಮುದಾಯ ಆರ್ಥಿಕವಾಗಿ ಬೆಳೆದು ನಿಲ್ಲುತ್ತದೆ. ಅಸ್ಪಶ್ಯತೆ ಹಂತಹಂತವಾಗಿ ಕೊನೆಯಾಗಲಿದೆ, ಒಂದು ಬೃಹತ್ ಪ್ರಮಾಣದ ಸಾಮಾಜಿಕ ಪರಿವರ್ತನೆ ಆಗಲಿದೆ. ಇದಕ್ಕೆ ಕಾಯದೆ, ಚಿನ್ನದ ಮೊಟ್ಟೆಗೆ ಕಾಯದೆ ಆತುರಾತುರವಾಗಿ ದಲಿತರೇ ಪರಸ್ಪರ ಕಚ್ಚಾಡಿಕೊಂಡು ಕೋಳಿಯನ್ನೇ ಬಲಿ ಕೊಟ್ಟರೆ...? ಆದ್ದರಿಂದ ದಲಿತ ಉದ್ಯಮಶೀಲತೆ ಯಶಸ್ಸು ಕಾಣಲು ದಲಿತರ ಒಗ್ಗಟ್ಟು ಬಹಳ ಮುಖ್ಯ.
ದಲಿತ ಉದ್ಯಮಶೀಲತೆ ಬಲಗೊಳ್ಳದಿದ್ದರೆ?
ಈ ಪ್ರಶ್ನೆ ಬಹಳ ಮುಖ್ಯ ಮತ್ತು ಗಂಭೀರವಾದುದು. ಹೌದು, ಏನಾಗುತ್ತದೆ? ಅದರ ಅಂಶಗಳನ್ನು ಪಟ್ಟಿಮಾಡುವುದಾದರೆ,
1. ಸಾಂಪ್ರದಾಯಿಕ ಜಾತಿ ಉದ್ಯೋಗಗಳಿಗೆ ದಲಿತರು ಬಲಿ ಬೀಳಬೇಕಾಗುತ್ತದೆ. ತನ್ಮೂಲಕ ಜಾತಿ, ಆ ಮೂಲಕ ಬರುವ ಕೀಳು ಉದ್ಯೋಗ, ಅದು ತರುವ ಕೀಳುತನ, ದಲಿತರ ಸಾಮಾಜಿಕ ವಿಮೋಚನೆ ಅಕ್ಷರಶಃ ಕಷ್ಟ ಆಗಲಿದೆ.
2. ಸರಕಾರಿ ನೌಕರಿ ಕುಂಠಿತಗೊಳ್ಳುತ್ತಿರುವುದರಿಂದ ಅಥವಾ ದಲಿತರ ನೇಮಕಕ್ಕೆ ಅಲ್ಲಿ ಪರೋಕ್ಷ ನಾನಾ ಥರ ತಡೆ ಇರುವುದರಿಂದ ದಲಿತ ಸಮುದಾಯದ ವಿದ್ಯಾವಂತರನ್ನು ನಿರುದ್ಯೋಗ ತೀವ್ರವಾಗಿ ಕಾಡಲಿದೆ. ಪರಿಣಾಮ ಸಮುದಾಯದ ಯುವತಿಯರು/ಯುವಕರು ಹತಾಶೆಯೆಡೆಗೆ ಸಾಗಲಿದ್ದಾರೆ.
3. ದಲಿತರು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳದಿರುವುದರಿಂದ ಇವರ ಬೀದಿಗಳಲ್ಲಿ ಮತ್ತು ಸಮೀಪದ ಪ್ರದೇಶಗಳಲ್ಲಿ ಅನ್ಯ ಪ್ರಬಲ ಜಾತಿ ಜನರ ವ್ಯಾಪಾರ ವ್ಯವಹಾರದ ಪಾರುಪತ್ಯ ಏರುಮುಖ ಕಾಣಲಿದೆ. ಪರಿಣಾಮ ದಲಿತರ ಬಳಿ ಇರುವ ಅಲ್ಪಸ್ವಲ್ಪ ದುಡ್ಡು ಪ್ರಬಲ ಜಾತಿ ಜನರ ತಿಜೋರಿ ಸೇರಿ, ಅವರು ಇವರ ದುಡ್ಡು ಪಡೆದು ಬಲಗೊಂಡು ಇವರ ವಿರುದ್ಧವೇ ಅಸ್ಪಶ್ಯತೆಯನ್ನು ಮತ್ತಷ್ಟು ಜೋರಾಗಿ ಮುಂದುವರಿಸಲಿದ್ದಾರೆ.
4. ದಲಿತ ಉದ್ಯಮಶೀಲತೆ ಆರಂಭಗೊಳ್ಳದಿರುವುದರಿಂದ ಮುಖ್ಯವಾಗಿ ದಲಿತ ಮಹಿಳೆಯರ ಸ್ವಾವಲಂಬಿ ಬದುಕಿನ ಕನಸು ತೆರೆಗೆ ಸರಿಯಲಿದೆ. ಪರಿಣಾಮ ಅನ್ಯಜಾತಿ ಪುರುಷರಿಂದ ಆರ್ಥಿಕ ದೌರ್ಜನ್ಯಕ್ಕೆ ಸಿಲುಕುವ ದಲಿತ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ, ಶೋಷಣೆಗೆ ಸ್ವಯಂ ಒಳಗಾಗುವ ಅಪಾಯವಿದೆ. ಹಿಂದೆ ದೇವದಾಸಿ ಪದ್ಧತಿ ಅಲ್ಲಲ್ಲಿ ವ್ಯಾಪಕವಾಗಿ ಇದ್ದದ್ದು ಅಥವಾ ಈಗಲೂ ಇರುವುದು ಅವರ ಆರ್ಥಿಕ ಅಗತ್ಯತೆಯ ಕಾರಣಕ್ಕೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.
5. ಮಿಲಿಯನೇರ್‌ಗಳು, ಬಿಲಿಯನೇರ್‌ಗಳು ದಿಢೀರ್ ಹುಟ್ಟುವ ಈ ದಿನಗಳಲ್ಲಿ ದಲಿತ ಉದ್ಯಮಶೀಲತೆ ಪ್ರೋತ್ಸಾಹಗೊಳ್ಳದಿದ್ದರೆ ಅಥವಾ ದಲಿತರು ಉದ್ಯಮಶೀಲತೆಯಲ್ಲಿ ತೊಡಗಿಕೊಳ್ಳದಿದ್ದರೆ ಸವರ್ಣೀಯರು ಆರ್ಥಿಕವಾಗಿ ಬಲಾಢ್ಯರಾಗಿ ದಲಿತರ ರಾಜಕೀಯ ಅಸ್ತಿತ್ವಕ್ಕೂ ಧಕ್ಕೆ ತರಬಹುದು. ದಲಿತರ ವೋಟು ಖರೀದಿಸಿ ಗೆದ್ದು ದಲಿತರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯಬಹುದು. ಪರಿಣಾಮ ಡಾ.ಅಂಬೇಡ್ಕರರು ಗಳಿಸಿಕೊಟ್ಟ ರಾಜಕೀಯ ಹಕ್ಕುಗಳು ವ್ಯರ್ಥವಾಗಿ ತೆರೆಗೆ ಸರಿಯುವ ಅಪಾಯವಿದೆ.
6. ಇನ್ನು ದಲಿತ ಉದ್ಯಮಶೀಲತೆ ಆರಂಭಗೊಳ್ಳದಿರುವುದರಿಂದ ಎಲ್ಲವನ್ನೂ ಬೇಡುವ ಸ್ಥಿತಿಗೆ ತಲುಪುವ ದಲಿತರು ಕೊನೆಗೆ ತಮ್ಮ ಬಳಿ ಇರುವ ಅಲ್ಪಸ್ವಲ್ಪ ಜಮೀನುಗಳನ್ನು ಮಾರಾಟ ಮಾಡಿ ಕಳೆದುಕೊಳ್ಳಬಹುದು. ಆ ಮೂಲಕ ಮತ್ತೆ ಸವರ್ಣೀಯ ಜಾತಿಗಳ ಜೀತ ಮಾಡುವ ದಿನಗಳು ಮರುಕಳಿಸುವ ಅಪಾಯ. ಅಂದಹಾಗೆ ದಲಿತ ಉದ್ಯಮಶೀಲತೆ ಆರಂಭಗೊಳ್ಳದಿದ್ದರೆ ಅಥವಾ ಪ್ರೋತ್ಸಾಹ ಪಡೆದುಕೊಳ್ಳದಿದ್ದರೆ ದಲಿತರು ತಮ್ಮ ರಾಜಕೀಯ, ಧಾರ್ಮಿಕ, ಸಾಮಾಜಿಕ ಹೀಗೆ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
ದಲಿತ ಉದ್ಯಮಶೀಲತೆ: ಯಾರು ಹೆಚ್ಚು ಕೊಡುಗೆ ನೀಡಬಹುದು?
ದಲಿತ ಉದ್ಯಮಶೀಲತೆ ಬೆಳೆಯಬೇಕು, ಪ್ರೋತ್ಸಾಹಗೊಳ್ಳಬೇಕು. ಅಂದಹಾಗೆ ಅದನ್ನು ಯಾರು ಅಭಿವೃದ್ಧಿಪಡಿಸಬೇಕು? ಬೆಳವಣಿಗೆಗೆ ಯಾರು ಹೆಚ್ಚು ಕೊಡುಗೆ ಕೊಡಬೇಕು? ಉತ್ತರ: ದಲಿತ ಸಮುದಾಯದ ದುಡ್ಡಿರುವವರು, ಅಲ್ಪಸ್ವಲ್ಪ ದುಡ್ಡು ಇರುವ ದಲಿತ ನೌಕರರು. ಖಂಡಿತ ನಿಜ, ದಲಿತ ನೌಕರರು ದಲಿತ ಉದ್ಯಮಶೀಲತೆಗೆ ಭರಪೂರ ಕಾಣಿಕೆ ಕೊಡಬೇಕು.
ಹೇಗೆ? ಉದಾಹರಣೆಗೆ ಐದಾರು ಜನ ನೌಕರರು ತಮ್ಮ ಬಳಿ ಇರುವ ಹಣದ ಅಲ್ಪ ಸ್ವಲ್ಪ ಭಾಗವನ್ನು ಯಾವುದಾದರೂ ಒಂದು ಅಂಗಡಿ ತೆರೆಯಲು ಬಳಸಬಹುದು. ನಿಜ, ಅವರು ವ್ಯಾಪಾರ ವ್ಯವಹಾರ ನಡೆಸುವುದು ಕಷ್ಟ. ಆದರೆ ತಮ್ಮ ಸಂಬಂಧಿಕರನ್ನು, ಕುಟುಂಬ ಸದಸ್ಯರನ್ನು ಈ ಸಂಬಂಧ ಬಳಸಿಕೊಳ್ಳಬಹುದು. ಆ ಮೂಲಕ ಕುಟುಂಬ ಸದಸ್ಯರಿಗೂ ಉದ್ಯೋಗ ಒದಗಿಸಿದ ಹಾಗಾಯಿತು. ಸಮುದಾಯದ ಜನರೂ ಉದ್ಯಮಶೀಲತೆಯಲ್ಲಿ ಪಾಲ್ಗೊಂಡ ಹಾಗಾಯಿತು.
ಇನ್ನು ಎರಡನೇ ಮಾರ್ಗ, ಒಂದಷ್ಟು ಸಾವಿರ ಮಂದಿ ನೌಕರರು ಹಣಕಾಸು ತೊಡಗಿಸಿ ಸಹಕಾರ ತತ್ವದಡಿ ವ್ಯಾಪಾರ ವ್ಯವಹಾರ ಮಾಡಲು ಆಸಕ್ತಿ ತೋರುವ ಯುವತಿ/ಯುವಕರಿಗೆ ಬಂಡವಾಳ ಕೊಡಬಹುದು. ಆ ಮೂಲಕ ಅಲ್ಲಿ ಸ್ಥಾಪಿತವಾಗುವ ಅಂಗಡಿಗಳಿಗೆ ಗ್ರಾಹಕರು ದಲಿತ ನೌಕರರೇ ಆಗಬಹುದು. ಈ ನಿಟ್ಟಿನಲ್ಲಿ ಮತ್ತೊಂದು ಕೆಲಸ ದಲಿತ ನೌಕರರು ಮಾಡಬೇಕಾದುದು ಉದ್ಯಮಶೀಲತೆ, ವ್ಯಾಪಾರ-ವ್ಯವಹಾರ ಕುರಿತ ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದು. ಅಂತಹ ಶಿಬಿರಗಳಲ್ಲಿ ಸಮುದಾಯದ ಯುವತಿಯರನ್ನು ಯುವಕರನ್ನು ಒಂದೆಡೆ ಸೇರಿಸಿ ಐದು ಹತ್ತು ಹೀಗೆ ಗುಂಪು ಸೇರಿಸಿ ಉದ್ಯಮಶೀಲತೆ ಬಗ್ಗೆ ಜಾಗೃತಿ ಮೂಡಿಸಬಹುದು. ಆ ಮೂಲಕ ಉದ್ಯಮ ಬೆಳೆಸಿ ತಾವು ಕೂಡ ಲಾಭ ಗಳಿಸಬಹುದು, ಸಮುದಾಯದ ಆರ್ಥಿಕ ಸಂಪನ್ಮೂಲವನ್ನು ಕೂಡ ಹೆಚ್ಚಿಸಬಹುದು. ಆದ್ದರಿಂದ ದಲಿತ ಸಮುದಾಯದ ನಡುವೆ ಆರ್ಥಿಕ ವ್ಯವಹಾರ, ಸಂಪತ್ತು ಹೆಚ್ಚಳ ಆಗಬೇಕಾದರೆ ವಿಶೇಷವಾಗಿ ದಲಿತ ಸಮುದಾಯದ ನೌಕರರು ಸ್ವಲ್ಪ ಸ್ವಾರ್ಥ ಬಿಟ್ಟು, ತಮ್ಮ ಬುದ್ಧಿವಂತಿಕೆ ಮೂಲಕ ಕೆಲಕಾಲ ಈ ಕಡೆ ಗಮನಹರಿಸಿದರೆ ಉತ್ತಮ. ಹಾಗೆ ಆದರೆ ದಲಿತ ಉದ್ಯಮಶೀಲತೆ ಖಂಡಿತ ಅದು ಸಾಧ್ಯ ಆಗಲಿದೆ. ಹಿಂದೆ ಕಾನ್ಷೀರಾಮ್ ರವರು ದಲಿತರ ನಡುವೆ ರಾಜಕೀಯ ಅಧಿಕಾರ ಬಲಗೊಳಿಸಲು ಬಳಸಿಕೊಂಡದ್ದು ಇದೇ ದಲಿತ ನೌಕರ ಸಮುದಾಯವನ್ನೇ. ಈಗಲೂ ಅಷ್ಟೇ ದಲಿತ ಉದ್ಯಮಶೀಲತೆ ಅಥವಾ ದಲಿತ ಸಮುದಾಯದ ನಡುವೆ ವ್ಯಾಪಾರ-ವ್ಯವಹಾರ ಬೆಳೆಯಲು ನೌಕರ ಸಮುದಾಯ ಬಹು ದೊಡ್ಡ ಪಾತ್ರ ವಹಿಸಬಹುದು.







