ಬಾಂಗ್ಲಾದೇಶಕ್ಕೆ ಭಾರತೀಯ ಮಹಿಳೆಯ ಅಕ್ರಮ ಗಡೀಪಾರು: 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

Photo Credit : scroll.in
ಬಂಗಾಳಿ ಮೂಲದ ಮುಸ್ಲಿಂ ಮಹಿಳೆಯನ್ನು ನಿಯಮಬಾಹಿರವಾಗಿ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಿದ್ದಕ್ಕಾಗಿ ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ 2 ಲಕ್ಷ ರೂಪಾಯಿ ಪರಿಹಾರ ಪಾವತಿಸಲು ಆದೇಶಿಸಿದೆ. ಗಡೀಪಾರು ನಿಯಮಗಳನ್ನು ಉಲ್ಲಂಘಿಸಿ ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ಗಡೀಪಾರುಮಾಡಿದ್ದಕ್ಕಾಗಿ ನ್ಯಾಯಾಲಯವೊಂದು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿರುವುದು ಇದೇ ಮೊದಲ ಬಾರಿ ಎಂದು scroll.in ವರದಿ ಮಾಡಿದೆ.
scroll.in ವರದಿ ಮಾಡಿದಂತೆ, ಮುಮ್ತಾಝ್ ಬೇಗಂ ಕುಟುಂಬಸ್ಥರು ಗುವಾಹಟಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದಾಗಷ್ಟೇ ಆಕೆಯನ್ನು ದೇಶದಿಂದ ಹೊರಹಾಕಿರುವುದು ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಸೇರ್ಪಡೆಗೊಳಿಸಿರುವ ಹೈಕೋರ್ಟ್, "ಬಾಂಗ್ಲಾದೇಶದಲ್ಲಿರುವ ಮಹಿಳೆಯನ್ನು ಪತ್ತೆಹಚ್ಚಿ ಮತ್ತೆ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಸೂಚಿಸಿದೆ.
ಇದೇ ವೇಳೆ, ಮುಮ್ತಾಝ್ ಬೇಗಂ ಅವರ ಗಡೀಪಾರಿನಲ್ಲಿ ವಹಿಸಿದ ಪಾತ್ರಕ್ಕಾಗಿ ನಗಾಂವ್ ಫಾರಿನರ್ಸ್ ಟ್ರಿಬ್ಯೂನಲ್ ನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕಲ್ಯಾಣ್ ರಾಯ್ ಸುರಾನಾ ಮತ್ತು ಸುಸ್ಮಿತಾ ಫುಕನ್ ಖೌಂಡ್ ಅವರಿದ್ದ ಪೀಠ, "ವಿದೇಶಿಯರ ನ್ಯಾಯಾಧಿಕರಣದ ಕ್ರಮಗಳನ್ನು ಗಮನಿಸಿದರೆ ಕಾನೂನಾತ್ಮಕ ದುರುದ್ದೇಶ ಎದ್ದು ಕಾಣುತ್ತಿದೆ" ಎಂದು ಹೇಳಿದೆ.
ಫಾರಿನರ್ಸ್ ಟ್ರಿಬ್ಯೂನಲ್ ಅಸ್ಸಾಂನಲ್ಲಿ ಮಾತ್ರ ಕಂಡುಬರುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿದ್ದು, ದಾಖಲೆಗಳ ಆಧಾರದ ಮೇಲೆ ವ್ಯಕ್ತಿಯ ರಾಷ್ಟ್ರೀಯತೆಯನ್ನು ನಿರ್ಧರಿಸುತ್ತವೆ.
ಮುಮ್ತಾಜ್ ಬೇಗಂ ತಮ್ಮ ತಂದೆಯ ಮಗಳು ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿ ನಗಾಂವ್ ಟ್ರಿಬ್ಯೂನಲ್ 2019ರಲ್ಲಿ ಮುಮ್ತಾಜ್ ಅವರನ್ನು ವಿದೇಶಿ ಪ್ರಜೆ ಎಂದು ಘೋಷಿಸಿತ್ತು.
ಆದರೆ, ಬೇಗಂ ಸಲ್ಲಿಸಿದ್ದ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿಲ್ಲ ಎಂದು ಎತ್ತಿ ತೋರಿಸಿದ ಗುವಾಹಟಿ ಹೈಕೋರ್ಟ್, ಪ್ರಕರಣವನ್ನು ಮರುಪರಿಶೀಲಿಸುವಂತೆ ಟ್ರಿಬ್ಯೂನಲ್ ಗೆ ಸೂಚಿಸಿತ್ತು.
ಹೈಕೋರ್ಟ್ ನಿರ್ದೇಶನದಂತೆ ಮೇ 30ರಂದು ಬೇಗಂ ನ್ಯಾಯಾಧಿಕರಣಕ್ಕೆ ಹಾಜರಾಗಿದ್ದರು. ಆದರೆ, ಪ್ರಕರಣವನ್ನು ಮರುಪರಿಶೀಲಿಸುವ ಬದಲು ನ್ಯಾಯಾಧಿಕರಣದ ನ್ಯಾಯಾಧೀಶರು ಬೇಗಂ ಅವರನ್ನು ಬಂಧಿಸಲು ಆದೇಶಿಸಿದರು.
ಕೆಲವೇ ನಿಮಿಷಗಳಲ್ಲಿ ಆಕೆಯನ್ನು ನ್ಯಾಯಾಲಯದ ಅವರಣದಿಂದಲೇ ಬಂಧಿಸಲಾಯಿತು. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ತೀರ್ಪಿನ ಪ್ರತಿಯನ್ನೂ ಆಕೆಗೆ ನೀಡಲಾಗಿಲ್ಲ ಎಂದು ಬೇಗಂ ಪರ ವಕೀಲರು ಆರೋಪಿಸಿದ್ದಾರೆ.
ಅಸ್ಸಾಂನ ನ್ಯಾಯಾಧಿಕರಣಗಳು ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 1,30,000 ಜನರ ಭಾರತೀಯ ಪೌರತ್ವವನ್ನು ರದ್ದುಗೊಳಿಸಿವೆ. ಈ ಪ್ರಕ್ರಿಯೆಯು ನಿರಂಕುಶ ಹಾಗೂ ಬಡವರು ಮತ್ತು ಶೋಷಿತರ ವಿರುದ್ಧ ತಾರತಮ್ಯದಿಂದ ಕೂಡಿದೆ ಎಂದು ಮೇಲ್ಮನವಿ ನ್ಯಾಯಾಲಯಗಳು ಹಲವು ಬಾರಿ ಟೀಕಿಸಿವೆ.
► ಪೌರತ್ವ ಪರೀಕ್ಷೆ
1997ರ ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಮುಮ್ತಾಝ್ ಬೇಗಂ ಅವರನ್ನು 'ಡಿ' (doubtful- ಸಂದೇಹಾಸ್ಪದ) ಮತದಾರರು ಎಂದು ಗುರುತಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ರಾಜ್ಯದ ಸುಮಾರು 3 ಲಕ್ಷ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದರು. ಅವರಲ್ಲಿ ಹೆಚ್ಚಿನವರನ್ನು ಅಸ್ಸಾಂ ಗಡಿ ಪೊಲೀಸರು ವಿದೇಶಿಯರ ನ್ಯಾಯಾಧಿಕರಣಕ್ಕೆ ಒಪ್ಪಿಸಿದ್ದರು.
ಅಸ್ಸಾಂನ ಪೌರತ್ವ ನಿರ್ಧಾರ ವ್ಯವಸ್ಥೆಯಲ್ಲಿ ಬೇಗಂ ಅವರ ಪಯಣ ಅತ್ಯಂತ ಕಠಿಣವಾಗಿತ್ತು.
2017ರಲ್ಲಿ ನಗಾಂವ್ ವಿದೇಶಿಯರ ನ್ಯಾಯಾಧಿಕರಣವು ಆಕೆ ಭಾರತದ ಪೌರ ಅಲ್ಲ ಎಂದು ತೀರ್ಪು ನೀಡಿತು. ಇದನ್ನು ಗುವಾಹಟಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದಾಗ ಮರುವಿಚಾರಣೆಗೆ ಆದೇಶಿಸಲಾಯಿತು.
ಪ್ರಕರಣ ಮತ್ತೆ ನ್ಯಾಯಾಧಿಕರಣದ ಮೆಟ್ಟಿಲೇರಿದಾಗ, ಮುಮ್ತಾಝ್ ಬೇಗಂ ಅವರನ್ನು ವಿದೇಶಿ ಪ್ರಜೆ ಎಂದು ಘೋಷಿಸಲಾಯಿತು.
2019ರಲ್ಲಿ ಈ ಆದೇಶವನ್ನು ಬೇಗಂ ಮತ್ತೆ ಗುವಾಹಟಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದರು. ಆ ಸಮಯದಲ್ಲಿ, ಅವರು ಸಲ್ಲಿಸಿದ್ದ ಎಲ್ಲಾ ಸಾಕ್ಷ್ಯಗಳನ್ನು ನ್ಯಾಯಾಧಿಕರಣ ಪರಿಶೀಲಿಸಿಲ್ಲ ಎಂಬುದನ್ನು ತೋರಿಸಿ ಹೈಕೋರ್ಟ್, ಹೊಸದಾಗಿ ಅಭಿಪ್ರಾಯ ನೀಡುವಂತೆ ಸೂಚಿಸಿತ್ತು.
ಮೇ 30ರಂದು ನ್ಯಾಯಾಧಿಕರಣವು ಬೇಗಂ ಸಲ್ಲಿಸಿದ ದಾಖಲೆಗಳ ನೈಜತೆಯನ್ನು ಪರಿಶೀಲಿಸದೆ, ಅವರನ್ನು ಮತ್ತೆ ವಿದೇಶಿ ಪ್ರಜೆ ಎಂದು ಘೋಷಿಸಿತು.
ನ್ಯಾಯಾಧಿಕರಣದ ಈ ಕ್ರಮವನ್ನು ತೀವ್ರವಾಗಿ ಟೀಕಿಸಿದ ಹೈಕೋರ್ಟ್, "ಪ್ರಕರಣವನ್ನು ಮರುಪರಿಶೀಲನೆಗೆ ವಾಪಸ್ ಕಳುಹಿಸಿದ್ದನ್ನೇ ನ್ಯಾಯಾಧೀಶ ಬಿಪುಲ್ ಕುಮಾರ್ ನಾಥ್ ವೈಯಕ್ತಿಕ ದ್ವೇಷವಾಗಿ ತೆಗೆದುಕೊಂಡಿದ್ದಾರೆ" ಎಂದು ಕಿಡಿಕಾರಿತು.
ಮೇ 30ರ ಆದೇಶವನ್ನು ಪ್ರಶ್ನಿಸಲು ಬೇಗಂ ಅವರಿಗೆ ಅವಕಾಶವನ್ನೇ ನೀಡಲಾಗಿಲ್ಲ. ಇದು 1950ರ ಅಸ್ಸಾಂ ವಲಸಿಗರ (ಗಡೀಪಾರು) ಕಾಯ್ದೆಯ ಪ್ರಮಾಣಿತ ಕಾರ್ಯಾಚರಣೆ ವಿಧಾನದ ನೇರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಲಭ್ಯವಿರುವ ಎಲ್ಲಾ ಕಾನೂನು ಹೋರಾಟದ ಹಾದಿಗಳು ಮುಗಿದ ನಂತರವಷ್ಟೇ ವ್ಯಕ್ತಿಯನ್ನು ಗಡೀಪಾರು ಮಾಡಬಹುದು ಎಂದು ಈ ಕಾಯ್ದೆ ಹೇಳುತ್ತದೆ.
►ಆದೇಶ ಹೊರಡಿಸಿದ ದಿನಾಂಕ ಮತ್ತು ಸಮಯ
ಮೇ 30ರಂದು ನೀಡಲಾದ ನ್ಯಾಯಾಧಿಕರಣದ ಆದೇಶದ ದಿನಾಂಕ ಮತ್ತು ಸಮಯದ ಕುರಿತು ತನಿಖೆ ನಡೆಸುವಂತೆ ವಿದೇಶಿಯರ ನ್ಯಾಯಾಧಿಕರಣಗಳ ಆಡಳಿತ ಉಸ್ತುವಾರಿ ವಹಿಸಿರುವ ಅಸ್ಸಾಂನ ಗೃಹ ಮತ್ತು ರಾಜಕೀಯ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಅಗತ್ಯ ಬಿದ್ದರೆ, ನ್ಯಾಯಾಧೀಶರು ಈ ತೀರ್ಪನ್ನು ಯಾವಾಗ ಬರೆದಿದ್ದಾರೆ ಎಂಬುದನ್ನು ಕಂಡುಕೊಳ್ಳಲು ಅವರ ಕಂಪ್ಯೂಟರ್ ಅನ್ನು ವಶಪಡಿಸಿಕೊಳ್ಳುವಂತೆಯೂ ಸರ್ಕಾರಕ್ಕೆ ಸೂಚಿಸಲಾಗಿದೆ.
ಮೇ 30ರಂದು ಮಧ್ಯಾಹ್ನ 12.30ಕ್ಕೆ ಮುಮ್ತಾಜ್ ಬೇಗಂ ನ್ಯಾಯಾಧಿಕರಣದ ಮುಂದೆ ಹಾಜರಾಗಿದ್ದರು. ಅರ್ಧ ಗಂಟೆಯ ನಂತರ ಜೂರಿಯಾ ಪೊಲೀಸ್ ಠಾಣೆಯ ಸಿಬ್ಬಂದಿ ಅವರನ್ನು ಬಂಧಿಸಿದರು ಎಂದು ಬೇಗಂ ಕುಟುಂಬಸ್ಥರು ಆರೋಪಿಸಿದ್ದರು. ಆದರೆ ನ್ಯಾಯಾಧಿಕರಣದ ನ್ಯಾಯಾಧೀಶರು ಇದನ್ನು ನಿರಾಕರಿಸಿದ್ದರು.
ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಗಡಿ ಪೊಲೀಸರು ಬೇಗಂ ಅವರನ್ನು ನ್ಯಾಯಾಧಿಕರಣದ ಆವರಣದ ಬಳಿ ಬಂಧಿಸಿದ್ದಾರೆ ಎಂದು ನಗಾಂವ್ ಪೊಲೀಸ್ ವರಿಷ್ಠಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಪೊಲೀಸರು ಮತ್ತು ನ್ಯಾಯಾಧೀಶರ ಈ ಹೇಳಿಕೆಯನ್ನು ನ್ಯಾಯಾಲಯ ಪ್ರಶ್ನಿಸಿದೆ. "ಅವರನ್ನು ವಿದೇಶಿ ಪ್ರಜೆ ಎಂದು ಘೋಷಿಸಲಾಗಿದೆ ಎಂಬ ಮಾಹಿತಿಯನ್ನು ನ್ಯಾಯಾಧಿಕರಣ ಮೌಖಿಕವಾಗಿ ತಿಳಿಸಿದ್ದರೂ ಸಹ, ಮಧ್ಯಾಹ್ನ 1.30ರಿಂದ 2 ಗಂಟೆಯ ನಡುವೆ ಅವರು ನ್ಯಾಯಾಧಿಕರಣದ ಆವರಣದಲ್ಲಿ ಅಥವಾ ಸುತ್ತಮುತ್ತ ಇರಲು ಯಾವುದೇ ಕಾರಣವಿರಲಿಲ್ಲ. ಆಗ ಪೊಲೀಸರು ಅವರನ್ನು ಹೇಗೆ ಬಂಧಿಸಲು ಸಾಧ್ಯವಾಯಿತು" ಎಂದು ನ್ಯಾಯಾಲಯ ಕೇಳಿದೆ.
ಬೇಗಂ ಅವರನ್ನು ಬಂಧಿಸಿ, ನಗಾಂವ್ ಜಿಲ್ಲೆಯಿಂದ ಮಾಟಿಯಾ ಬಂಧನ ಕೇಂದ್ರಕ್ಕೆ ಹಾಗೂ ಅಲ್ಲಿಂದ ದೇಶದಿಂದ ಹೊರಗೆ ಕಳುಹಿಸಲು ಅನುಕೂಲವಾಗುವಂತೆ ನ್ಯಾಯಾಧಿಕರಣದ ನ್ಯಾಯಾಧೀಶರು "ಆದೇಶ ನೀಡುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆದ್ದರಿಂದ, ಮೇ 30ರ ತೀರ್ಪನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸುವ ಬೇಗಂ ಅವರ ಹಕ್ಕನ್ನು "ಸರ್ಕಾರಿ ವ್ಯವಸ್ಥೆಯು ಒಗ್ಗೂಡಿ ತಡೆದಿದೆ" ಎಂದು ಹೈಕೋರ್ಟ್ ಹೇಳಿದೆ.
"ಬಂಧನದ ಬಗ್ಗೆ ಯಾವುದೇ ಮಾಹಿತಿಯನ್ನು ಅರ್ಜಿದಾರರಿಗಾಗಲಿ ಅಥವಾ ಅವರ ಕುಟುಂಬದ ಹಿರಿಯ ಸದಸ್ಯರಿಗಾಗಲಿ ನೀಡದೆ ಆಕೆಯನ್ನು ಭಾರತದಿಂದ ಗಡೀಪಾರು ಮಾಡಲಾಗಿದೆ. ಆದ್ದರಿಂದ ಮಧ್ಯಂತರ ಕ್ರಮವಾಗಿ ಅರ್ಜಿದಾರರಿಗೆ 2 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ಪಾವತಿಸುವಂತೆ ಅಸ್ಸಾಂ ಸರ್ಕಾರಕ್ಕೆ ನಿರ್ದೇಶಿಸಲಾಗುತ್ತಿದೆ" ಎಂದು ನ್ಯಾಯಾಲಯ ತಿಳಿಸಿದೆ.
ವ್ಯಕ್ತಿಯೊಬ್ಬರ ಜೀವ ಮತ್ತು ಸ್ವಾತಂತ್ರ್ಯ ಅತ್ಯಂತ ಪವಿತ್ರವಾಗಿದ್ದು, ಕಾನೂನಿನ ಅಧಿಕಾರವಿಲ್ಲದೆ ಅದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ವಿಭಾಗೀಯ ಪೀಠ ಉಲ್ಲೇಖಿಸಿದೆ.
"ಈ ತತ್ವವನ್ನು ಎಲ್ಲಾ ನಾಗರಿಕ ದೇಶಗಳಲ್ಲೂ ಅಂಗೀಕರಿಸಲಾಗಿದೆ ಮತ್ತು ಅನುಷ್ಠಾನಗೊಳಿಸಲಾಗಿದೆ. ನಮ್ಮ ಸಂವಿಧಾನದ 21ನೇ ವಿಧಿಯು ಭಾರತೀಯ ನಾಗರಿಕರಿಗೆ ಮಾತ್ರವಲ್ಲದೆ ವಿದೇಶಿಯರಿಗೂ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ" ಎಂದು ಹೈಕೋರ್ಟ್ ಪೀಠ ಹೇಳಿದೆ.
ಘೋಷಿತ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆಯುವ ಮೊದಲು, ಆತನ ಅಥವಾ ಆಕೆಯ ವಿರುದ್ಧ ವಿದೇಶಿಯರ ನ್ಯಾಯಾಧಿಕರಣ ನೀಡಿದ ತೀರ್ಪಿನ ಬಗ್ಗೆ ಅವರಿಗೆ ಮಾಹಿತಿ ನೀಡುವುದನ್ನು ರಾಜ್ಯದ ಪ್ರತಿಯೊಂದು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
"ಅಂತಹ ಘೋಷಿತ ವಿದೇಶಿ ಪ್ರಜೆಗಳನ್ನು ಜಿಲ್ಲಾ ಪೊಲೀಸ್ ವ್ಯಾಪ್ತಿಯಿಂದ ಹೊರಗೆ ಸ್ಥಳಾಂತರಿಸುವ ಮೊದಲು, ಬಂಧಿತ ವ್ಯಕ್ತಿಯನ್ನು ತಮ್ಮ ವ್ಯಾಪ್ತಿಯಿಂದ ಕರೆದೊಯ್ಯಲಾಗುತ್ತಿದೆ ಎಂಬ ವಿಷಯವನ್ನು ಅವರ ಕುಟುಂಬದ ಹಿರಿಯ ಸದಸ್ಯರಿಗೆ ತಿಳಿಸಬೇಕು" ಎಂದು ಹೈಕೋರ್ಟ್ ಹೇಳಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ, ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಮುಮ್ತಾಜ್ ಬೇಗಂ ಅವರಂತಹ 'ಘೋಷಿತ ವಿದೇಶಿಯರ' ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ರಾಜ್ಯಾದ್ಯಂತ ಅವರ ಮನೆಗಳಿಂದ ಅವರನ್ನು ವಶಕ್ಕೆ ಪಡೆದು, ಅರ್ಧರಾತ್ರಿಯಲ್ಲಿ ಬಾಂಗ್ಲಾದೇಶಕ್ಕೆ ಬಲವಂತವಾಗಿ ಗಡೀಪಾರು ಮಾಡಿತ್ತು.
'ಘೋಷಿತ ವಿದೇಶಿಯರು' ಎಂದರೆ ಸಾಮಾನ್ಯವಾಗಿ ಅಸ್ಸಾಂನಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದು, ಮನೆ-ಆಸ್ತಿ ಹೊಂದಿರುವವರಾಗಿದ್ದಾರೆ. ಆದರೆ ದಾಖಲೆಗಳ ಆಧಾರದ ಮೇಲೆ ವಿದೇಶಿಯರ ನ್ಯಾಯಾಧಿಕರಣಗಳಲ್ಲಿ ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಇವರಿಂದ ಸಾಧ್ಯವಾಗಿರಲಿಲ್ಲ.






