ನ. 1ರಿಂದ ಮೊಬೈಲ್ ಪರದೆಯಲ್ಲಿ ಕರೆ ಮಾಡುವವರ ಹೆಸರು ಪ್ರದರ್ಶನ ಕಡ್ಡಾಯಗೊಳಿಸಿದ ಸರಕಾರ; ಹೊಸ ಕಾಲರ್ ಐಡಿ ಸೇವೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಸಾಲ, ಇನ್ಶೂರೆನ್ಸ್ ಅಥವಾ ಕ್ರೆಡಿಟ್ ಕಾರ್ಡ್ ಆಫರ್ ಗಳ ಬಗ್ಗೆ ತಿಳಿಸಲು ಅಪರಿಚಿತ ಸಂಖ್ಯೆಗಳಿಂದ ಬರುವ ಕಿರಿಕಿರಿ ಕರೆಗಳ ಬಗ್ಗೆ ಮೊಬೈಲ್ ಬಳಕೆದಾರರು ದೂರುವುದು ಸಾಮಾನ್ಯ. ಇವುಗಳಲ್ಲಿ ಕೆಲವು ನೈಜ ಕರೆಗಳಾಗಿದ್ದರೆ, ಇನ್ನು ಹಲವು ವಂಚನೆಯ ಕರೆಗಳಾಗಿರುತ್ತವೆ. ಇಂತಹ ಕರೆಗಳಿಗೆ ಕಡಿವಾಣ ಹಾಕಲು, ಭಾರತ ಸರಕಾರವು ನವೆಂಬರ್ 1ರಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಇದರ ಪ್ರಕಾರ, ಯಾರಾದರೂ ಕರೆ ಮಾಡಿದಾಗ ಅವರ ಅಧಿಕೃತವಾಗಿ ನೋಂದಾಯಿತ ಹೆಸರು ಗ್ರಾಹಕರ ಫೋನ್ ಪರದೆಯ ಮೇಲೆ ಗೋಚರಿಸುತ್ತದೆ.
ಏಕೀಕೃತ ಲೈಸೆನ್ಸ್ ಒಪ್ಪಂದಕ್ಕೆ (Unified Licence Agreement) ತಿದ್ದುಪಡಿ ತರುವ ಮೂಲಕ ಈ ಬದಲಾವಣೆ ಮಾಡಲಾಗಿದ್ದು, ಕರೆ ಮಾಡುವವರ ಗುರುತಿನ (CLI) ವ್ಯಾಖ್ಯಾನವನ್ನು ಪರಿಷ್ಕರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ನಿಮಗೆ ಕರೆ ಬಂದಾಗ ಆ ವ್ಯಕ್ತಿಯ ಹೆಸರು ಮೊಬೈಲ್ ಪರದೆಯ ಮೇಲೆ ಗೋಚರಿಸುತ್ತದೆ. ತಾಂತ್ರಿಕವಾಗಿ ಇದನ್ನು 'ಕಾಲರ್ ನೇಮ್ ಪ್ರೆಸೆಂಟೇಷನ್' (CNAP) ಎಂದು ಕರೆಯಲಾಗುತ್ತದೆ. ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರೆ ಸ್ವೀಕರಿಸುವ ಮೊದಲು ಸ್ಪಷ್ಟತೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.
ದೂರಸಂಪರ್ಕ ಇಲಾಖೆಯ ಸುತ್ತೋಲೆಯ ಪ್ರಕಾರ, ಕರೆ ಸ್ವೀಕರಿಸುವವರ ಮೊಬೈಲ್ ಪರದೆಯ ಮೇಲೆ ಕರೆ ಮಾಡಿದವರ ಹೆಸರು ಮೂಡಲಿದೆ. ಮೊಬೈಲ್ ಸೇವಾ ಒದಗಿಸುವ ಸಂಸ್ಥೆಯ ದಾಖಲೆಯಲ್ಲಿ ಗ್ರಾಹಕರ ಹೆಸರನ್ನು ಹೇಗೆ ನೋಂದಾಯಿಸಲಾಗಿದೆಯೋ, ಅದೇ ಹೆಸರು ಕರೆಯುವಾಗ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಹಿಂದೆ ಇದ್ದ ನಿಯಮದ ಪ್ರಕಾರ, ಕರೆ ಮಾಡಿದವರ ಗುರುತಿಗಾಗಿ ಫೋನ್ ಸಂಖ್ಯೆ, ಐಪಿ ಅಡ್ರೆಸ್ ಅಥವಾ ಇತರ ವಿವರಗಳನ್ನು ಮಾತ್ರ ಬಳಸಲಾಗುತ್ತಿತ್ತು. ಆದರೆ, ಪರಿಷ್ಕೃತ ನಿಯಮದಲ್ಲಿ ಕರೆಯುವ ವ್ಯಕ್ತಿಯ ನೋಂದಾಯಿತ ಹೆಸರನ್ನು ಅಧಿಕೃತವಾಗಿ ಸೇರಿಸಲಾಗಿದೆ.
ಈ ಸೇವೆಯು ಕನಿಷ್ಠ 4ಜಿ ನೆಟ್ವರ್ಕ್ ಹೊಂದಿರುವ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. 2ಜಿ ಮತ್ತು 3ಜಿ ನೆಟ್ವರ್ಕ್ಗಳು ಹಾಗೂ ಲ್ಯಾಂಡ್ಲೈನ್ ಸಂಪರ್ಕಗಳಿಗೆ ಈ ಸೇವೆಯನ್ನು ವಿಸ್ತರಿಸುವ ಬಗ್ಗೆ ಪ್ರತ್ಯೇಕವಾಗಿ ಪರಿಶೀಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಸಾರ್ವಜನಿಕ ಹಿತಾಸಕ್ತಿ, ರಾಷ್ಟ್ರೀಯ ಭದ್ರತೆ ಅಥವಾ ದೂರಸಂಪರ್ಕ ಸೇವೆಗಳ ಸುಗಮ ಕಾರ್ಯನಿರ್ವಹಣೆಗಾಗಿ ಪರವಾನಗಿ ನಿಯಮಗಳಲ್ಲಿ ಬದಲಾವಣೆ ಮಾಡಲು ಅವಕಾಶ ನೀಡುವ ಏಕೀಕೃತ ಲೈಸೆನ್ಸ್ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಈ ತಿದ್ದುಪಡಿ ತರಲಾಗಿದೆ ಎಂದು ದೂರಸಂಪರ್ಕ ಇಲಾಖೆ (DoT) ತಿಳಿಸಿದೆ.
ಪರಿಷ್ಕೃತ ವ್ಯಾಖ್ಯಾನವು ಏಕೀಕೃತ ಲೈಸೆನ್ಸ್ ಒಪ್ಪಂದದ ಹಿಂದಿನ ನಿಬಂಧನೆಯನ್ನು ಬದಲಾಯಿಸುತ್ತದೆ ಮತ್ತು ಇದು ನವೆಂಬರ್ 1, 2026ರಿಂದ ಜಾರಿಗೆ ಬರಲಿದೆ.
►ದೂರಸಂಪರ್ಕ ಸಂಸ್ಥೆಗಳ ಡೇಟಾಬೇಸ್ ಮೇಲಿನ ಅವಲಂಬನೆ
ಸಿಮ್ ಕಾರ್ಡ್ ಪಡೆಯುವಾಗ ಜನರು ನೀಡಿದ ಪರಿಶೀಲಿತ ಹೆಸರುಗಳೊಂದಿಗೆ ಫೋನ್ ಸಂಖ್ಯೆಗಳನ್ನು ಹೊಂದಿಸುವ ಡೇಟಾಬೇಸ್ ಅನ್ನು ದೂರಸಂಪರ್ಕ ಸಂಸ್ಥೆಗಳು ನಿರ್ವಹಿಸುವುದನ್ನು ಈ ವ್ಯವಸ್ಥೆಯು ಅವಲಂಬಿಸಿದೆ. ಕರೆ ಬಂದಾಗ, ಸ್ವೀಕರಿಸುವ ನೆಟ್ವರ್ಕ್ ಸರಿಯಾದ ಗುರುತನ್ನು ಪಡೆದುಕೊಳ್ಳಲು ತಕ್ಷಣವೇ ಆ ಡೇಟಾಬೇಸ್ ಅನ್ನು ಪರಿಶೀಲಿಸುತ್ತದೆ.
►ಹೊಸ ಕಾಲರ್ ಐಡಿ ಸೇವೆ ಹೇಗೆ ಕೆಲಸ ಮಾಡುತ್ತದೆ?
ಕರೆ ಮಾಡುತ್ತಿರುವವರ ದೂರಸಂಪರ್ಕ ಸಂಸ್ಥೆಯು (ಟೆಲಿಕಾಂ ಆಪರೇಟರ್) ಗ್ರಾಹಕರಿಂದ ಯಾವುದೇ ಪ್ರತ್ಯೇಕ ಮನವಿಯಿಲ್ಲದೆ ಈ ಕಾಲರ್ ಹೆಸರು ಪ್ರದರ್ಶನ ಸೇವೆಯನ್ನು ಒದಗಿಸುತ್ತದೆ.
ಈ ಕರೆ ಗುರುತಿಸುವಿಕೆಯಲ್ಲಿ ಎರಡು ವಿಭಾಗಗಳಿರುತ್ತವೆ: ಮೊದಲ ವಿಭಾಗದಲ್ಲಿ ಎಂದಿನಂತೆ ಕರೆಯುವ ವ್ಯಕ್ತಿಗೆ ದೂರಸಂಪರ್ಕ ಸಂಸ್ಥೆ ನೀಡಿದ ಮೊಬೈಲ್ ಸಂಖ್ಯೆ ಇರುತ್ತದೆ ಮತ್ತು ಎರಡನೇ ವಿಭಾಗದಲ್ಲಿ ಕರೆ ಮಾಡಿದವರ ಹೆಸರು ಇರುತ್ತದೆ.
ಒಂದು ವೇಳೆ ನೀವು ಈಗಾಗಲೇ ಸೇವ್ ಮಾಡಿರುವ ಸಂಖ್ಯೆಯಿಂದ ಕರೆ ಬಂದರೆ, ಅದೇ ಹೆಸರು ಕಾಣಿಸಿಕೊಳ್ಳುತ್ತದೆ. ಸಂಖ್ಯೆ ಸೇವ್ ಆಗಿಲ್ಲದಿದ್ದರೆ, ದೇಶದೊಳಗಿನ ಕರೆಗಳಿಗೆ ಡೇಟಾಬೇಸ್ನಲ್ಲಿ ನೋಂದಾಯಿಸಲಾದ ಹೆಸರು ಕಾಣಿಸಿಕೊಳ್ಳುತ್ತದೆ. ಅದೇ ವಿದೇಶದಿಂದ ಬರುವ ಕರೆಗಳಿಗೆ 'ಅಂತರರಾಷ್ಟ್ರೀಯ ಕರೆ' (International Call) ಎಂದು ತೋರಿಸಲಾಗುತ್ತದೆ.
ಗ್ರಾಹಕರ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ, ಕರೆ ಕಟ್ ಆದ ನಂತರ ಕರೆ ಮಾಡಿದವರ ಹೆಸರನ್ನು ಉಳಿಸಿಕೊಳ್ಳದಂತೆ 'ಸೆಕ್ಯುರಿಟಿ-ಬೈ-ಡಿಸೈನ್' ವಿಧಾನವನ್ನು ಅನುಸರಿಸುವಂತೆ ದೂರಸಂಪರ್ಕ ಇಲಾಖೆಯು ಟೆಲಿಕಾಂ ಸಂಸ್ಥೆಗಳಿಗೆ ಸೂಚಿಸಿದೆ. ಅಲ್ಲದೆ, ಕರೆ ಮಾಡುವ ಲೈನ್ ಗುರುತಿನ ನಿರ್ಬಂಧ (CLIR) ಸಕ್ರಿಯಗೊಳಿಸಿದ ಚಂದಾದಾರರಿಗೆ ಈ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದೆ. ಇವರ ಹೆಸರುಗಳು ಸಿಎನ್ಎಪಿ (CNAP) ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಜತೆಗೆ, ಡೇಟಾಬೇಸ್, ನೆಟ್ವರ್ಕ್ ಮತ್ತು ಸಂಪರ್ಕ ಮೂಲಸೌಕರ್ಯದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ.
►ವ್ಯಾಪಾರ ಹಾಗೂ ಬಲ್ಕ್ ನಂಬರ್ ಗಳಿಂದ ಕರೆ ಬಂದರೆ?
ವ್ಯಾಪಾರ (ಬ್ಯುಸಿನೆಸ್) ಅಥವಾ ಬಲ್ಕ್ ಸಂಪರ್ಕಗಳನ್ನು ಹೊಂದಿರುವ ಬಳಕೆದಾರರು, ಟೆಲಿಕಾಂ ಸಂಸ್ಥೆಯ ಚಂದಾದಾರರ ಡೇಟಾಬೇಸ್ನಲ್ಲಿರುವುದಕ್ಕಿಂತ ಭಿನ್ನವಾದ, ತಮ್ಮ ಇಚ್ಛೆಯ ಹೆಸರನ್ನು ಪ್ರದರ್ಶನಕ್ಕಾಗಿ ಬಳಸಿಕೊಳ್ಳುವ ಸೌಲಭ್ಯವನ್ನು ಪಡೆಯಬಹುದು.
ಬಳಕೆದಾರರು ಬಯಸುವ ಹೆಸರು, ಪೇಟೆಂಟ್ಸ್, ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ್ಸ್ ನಿಯಂತ್ರಕರ ದಾಖಲೆಗಳ ಪ್ರಕಾರ ಅವರ ಹೆಸರಿನಲ್ಲಿ ನೋಂದಾಯಿಸಲಾದ ಟ್ರೇಡ್ಮಾರ್ಕ್ ಆಗಿರಬೇಕು ಅಥವಾ ಸರಕು ಮತ್ತು ಸೇವಾ ತೆರಿಗೆ (GST) ಪೋರ್ಟಲ್ನಲ್ಲಿ ನೋಂದಾಯಿಸಲಾದ ಹೆಸರಾಗಿರಬೇಕು.
ಬಳಕೆದಾರರಿಗೆ ಇಷ್ಟದ ಹೆಸರನ್ನು ನಿಗದಿಪಡಿಸುವ ಮೊದಲು, ಟೆಲಿಕಾಂ ಸಂಸ್ಥೆಗಳು ಸರಿಯಾದ ಪರಿಶೀಲನೆ ನಡೆಸಬೇಕು. ಅಲ್ಲದೆ, ಬಳಕೆದಾರರು ಆ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿರುವ ದಾಖಲೆಗಳ ನಿಜವಾದ ಪ್ರತಿಯನ್ನು ಪಡೆದು ತಮ್ಮ ಬಳಿ ಇಟ್ಟುಕೊಳ್ಳಬೇಕು.






