ಭಾರತ ಸಂಪತ್ತು ಮತ್ತು ಆದಾಯದಲ್ಲಿ ಅತಿ ಅಸಮಾನತೆ ಹೊಂದಿರುವ ದೇಶ

Photo Credit : Al Jazeera
ಶೇ 10ರಷ್ಟು ಅಗರ್ಭ ಶ್ರೀಮಂತರು ಜಾಗತಿಕ ಆದಾಯದ ಶೇ 53ರಷ್ಟನ್ನು ಹೊಂದಿದ್ದರೆ, ಜಾಗತಿಕ ಆಸ್ತಿಯಲ್ಲಿ ಅವರ ಪಾಲು ಶೇ 75. ಕಡು ಬಡವರಲ್ಲಿ ಬರುವ ಶೇ 50ರಷ್ಟು ಮಂದಿಯ ಜಾಗತಿಕ ಆದಾಯದ ಪಾಲು ಶೇ 8 ಆಗಿದ್ದರೆ, ಜಾಗತಿಕ ಆಸ್ತಿಯಲ್ಲಿನ ಪಾಲು ಶೇ 2ರಷ್ಟಿದೆ. ಭಾರತದಲ್ಲಿ ಶ್ರೀಮಂತ 10 ಮಂದಿ ಶೇ 65ರಷ್ಟು ಆಸ್ತಿ ಹೊಂದಿದ್ದರೆ ಕೆಳಸ್ತರದಲ್ಲಿರುವವರು ಶೇ 6ರಷ್ಟು ಆಸ್ತಿಯನ್ನಷ್ಟೇ ಹೊಂದಿದ್ದಾರೆ. ಹಾಗೆಯೇ, ಭಾರತದಲ್ಲಿ ಟಾಪ್ 10ರಷ್ಟು ಮಂದಿ ಶೇ 58ರಷ್ಟು ಆದಾಯ ಗಳಿಸಿದರೆ ಕೆಳಸ್ತರದ ಅರ್ಧದಷ್ಟು ಮಂದಿ ಶೇ 15ರಷ್ಟು ಆದಾಯ ಗಳಿಸುತ್ತಾರೆ.
ಜಗತ್ತಿನ ಅತಿ ಶ್ರೀಮಂತ ಶೇ 10ರಷ್ಟು ಮಂದಿ ಮುಕ್ಕಾಲು ಪಾಲು ವೈಯಕ್ತಿಕ ಸಂಪತ್ತಿನ ಮಾಲೀಕರಾಗಿದ್ದಾರೆ ಎಂದು ಹೊಸದಾಗಿ ಬಿಡುಗಡೆಯಾದ ವಿಶ್ವ ಅಸಮಾನತೆಯ ವರದಿ ಹೇಳಿದೆ. ಆದಾಯದಲ್ಲೂ ಹೆಚ್ಚು ವ್ಯತ್ಯಾಸವಿಲ್ಲ, ವಿಶ್ವದಲ್ಲಿ ಅತಿ ಶ್ರೀಮಂತ ಶೇ 50ರಷ್ಟು ಮಂದಿ ಶೇ 90ರಷ್ಟು ಪಾಲನ್ನು ಮನೆಗೊಯ್ದರೆ, ಉಳಿದ ಅರ್ಧದಷ್ಟು ಮಂದಿ ಒಟ್ಟು ಆದಾಯದ ಶೇ 10ರಷ್ಟು ಪಾಲನ್ನು ಮಾತ್ರ ಹೊಂದಿದ್ದಾರೆ.
2018ರಿಂದ ವಾರ್ಷಿಕವಾಗಿ ಪ್ರಕಟವಾಗುವ ವರದಿ ಹೇಳಿರುವ ಪ್ರಕಾರ, 2026 ಬಹಳ ನಿರ್ಣಾಯಕ ಘಟ್ಟದಲ್ಲಿದೆ. ಜಾಗತಿಕವಾಗಿ ಬಹಳಷ್ಟು ಮಂದಿಗೆ ಜೀವನ ಗುಣಮಟ್ಟ ಜಡವಾಗಿ ಹೋಗಿದ್ದರೆ, ಆಸ್ತಿ ಮತ್ತು ಅಧಿಕಾರ ಸ್ಥಿತಿವಂತರಲ್ಲಿ ಶೇಖರವಾಗುತ್ತಿವೆ.
ಸಂಪತ್ತು ಮತ್ತು ಆದಾಯದಲ್ಲಿ ಅಸಮಾನತೆ
ಆಸ್ತಿ ಮತ್ತು ಆದಾಯ ಯಾವಾಗಲೂ ಜೊತೆಗೂಡಿ ಸಾಗುವುದಿಲ್ಲ. ಶ್ರೀಮಂತರೇ ಅತಿ ಹೆಚ್ಚು ಆದಾಯ ಹೊಂದಿರಬೇಕೆಂದಿಲ್ಲ. ಜನರ ಆದಾಯ ಮತ್ತು ಅವರ ಆಸ್ತಿಯಲ್ಲಿ ನಿರಂತರ ವ್ಯತ್ಯಾಸವಿದೆ. ಸಂಪತ್ತು ಎಂದರೆ ಸಾಲವನ್ನು ತೆಗೆದು ಹಾಕಿದರೆ ವ್ಯಕ್ತಿಯ ಬಳಿಯಲ್ಲಿರುವ ಉಳಿತಾಯ, ಹೂಡಿಕೆ ಅಥವಾ ಆಸ್ತಿಯ ಒಟ್ಟು ಮೌಲ್ಯ ಒಳಗೊಂಡಿದೆ. 2025ರಲ್ಲಿ ವಿಶ್ವದ ಜನಸಂಖ್ಯೆಯ ಶೇ 10ರಷ್ಟು ಶ್ರೀಮಂತರು ಶೇ 75ರಷ್ಟು ಜಾಗತಿಕ ಸಂಪತ್ತಿನ ಒಡೆಯರಾಗಿದ್ದಾರೆ. ಮಧ್ಯದ ಶೇ 40ರಷ್ಟು ಮಂದಿ ಶೇ 23ರಷ್ಟು ಮತ್ತು ಕೆಳಸ್ತರದಲ್ಲಿರುವವರು ಶೇ 2ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ.
1990ರಿಂದ ಕೋಟ್ಯಾಧಿಪತಿಗಳು ಮತ್ತು ಶತ ಕೋಟ್ಯಾಧಿಪತಿಗಳ ಆಸ್ತಿ ಪ್ರತಿ ವರ್ಷ ಶೇ 8ರಷ್ಟು ಏರಿಕೆಯಾಗಿದೆ. ಕೆಳಸ್ತರದಲ್ಲಿರುವ ಅರ್ಧದಷ್ಟು ಮಂದಿ ಬೆಳೆದ ದುಪ್ಪಟ್ಟು ಪ್ರಮಾಣದಲ್ಲಿ ಮೇಲ್ಸ್ತರದಲ್ಲಿರುವವರು ಬೆಳೆದಿದ್ದಾರೆ. ಅಗರ್ಭ ಶ್ರೀಮಂತ 0.001ರಷ್ಟು ಮಂದಿ, ಅಂದರೆ 60,000 ಬಹುಕೋಟ್ಯಾಧಿಪತಿಗಳು ಅರ್ಧದಷ್ಟು ಮಾನವರಿಗಿಂತ ಮೂರು ಪಟ್ಟು ಹೆಚ್ಚು ಸಂಪತ್ತನ್ನು ನಿಯಂತ್ರಿಸುತ್ತಿದ್ದಾರೆ. 1995ರಲ್ಲಿ ಅವರ ಒಟ್ಟು ಪಾಲು ಶೇ 4ರಷ್ಟಿದ್ದರೆ, ಈಗ ಅದು ಶೇ 6ಕ್ಕೆ ಏರಿದೆ. ಕಡುಬಡವರು ಸಣ್ಣ ಮಟ್ಟಿನ ಬೆಳವಣಿಗೆ ಕಂಡಿದ್ದಾರೆ. ಕೋಟ್ಯಂತರ ಜನ ಇನ್ನೂ ಕನಿಷ್ಠ ಆರ್ಥಿಕ ಭದ್ರತೆಯನ್ನು ಹೊಂದಲು ಹೋರಾಡುತ್ತಿದ್ದರೆ, ಅಲ್ಪ ಮಂದಿಯ ಬಳಿ ಅಸಾಧಾರಣ ಹಣಕಾಸು ಅಧಿಕಾರವಿದೆ.
ಆದಾಯವನ್ನು ಪಿಂಚಣಿ ಮತ್ತು ನಿರುದ್ಯೋಗ ವಿಮೆ ಕೊಡುಗೆಗಳನ್ನು ಪರಿಗಣಿಸಿ ತೆರಿಗೆ ಪೂರ್ವ ಗಳಿಕೆಯನ್ನು ಬಳಸಿ ಅಳೆಯಲಾಗಿದೆ. 2025ರಲ್ಲಿ ಶೇ 10ರಷ್ಟು ಜಗತ್ತಿನ ಅಗರ್ಭ ಶ್ರೀಮಂತರು ಜಾಗತಿಕ ಆದಾಯದ ಶೇ 53ರಷ್ಟನ್ನು ಸ್ವೀಕರಿಸಿದ್ದಾರೆ. ಮಧ್ಯದಲ್ಲಿರುವ ಶೇ 40ರಷ್ಟು ಮಂದಿ ಶೇ 38ರಷ್ಟು ಮತ್ತು ಕೆಳಸ್ತರಲ್ಲಿರುವ ಶೇ 50ರಷ್ಟು ಮಂದಿ ಶೇ 8ರಷ್ಟು ಆದಾಯ ಗಳಿಸಿದ್ದಾರೆ. ಜಗತ್ತಿನಲ್ಲಿ ಹತ್ತು ಮಂದಿ ಇದ್ದು, ಜಾಗತಿಕ ಆದಾಯವನ್ನು ರೂ 100 ಎಂದು ಭಾವಿಸಿದರೆ, ಅಗರ್ಭ ಶ್ರೀಮಂತ ವ್ಯಕ್ತಿ 53 ರೂಪಾಯಿ ಸ್ವೀಕರಿಸಿದರೆ, ಶ್ರೀಮಂತ ನಾಲ್ಕು ಮಂದಿ 38 ರೂಪಾಯಿ ಮತ್ತು ಉಳಿದ ಐದು ಮಂದಿ ರೂ 8ನ್ನು ಪಡೆಯುತ್ತಾರೆ.
ಯಾವ ದೇಶಗಳಲ್ಲಿ ಅತಿ ಹೆಚ್ಚು ಅಸಮಾನತೆ ಇದೆ?
ಜಾಗತಿಕವಾಗಿ ದಕ್ಷಿಣ ಆಫ್ರಿಕಾದಲ್ಲಿ ಅತ್ಯಧಿಕ ಮಟ್ಟಿಗೆ ಆದಾಯ ಅಸಮಾನತೆ ಇದೆ. ಶೇ 10ರಷ್ಟು ಮಂದಿ ಆದಾಯದ ಶೇ 66ರಷ್ಟು ಗಳಿಸುತ್ತಾರೆ. ಕೆಳಸ್ತರದಲ್ಲಿರುವ ಅರ್ಧದಷ್ಟು ಮಂದಿ ಶೇ 6ರಷ್ಟನ್ನು ಪಡೆಯುತ್ತಾರೆ.
ಏಷ್ಯಾದಲ್ಲಿ, ಬಾಂಗ್ಲಾದೇಶ ಮತ್ತು ಚೀನಾದಲ್ಲಿ ಹೆಚ್ಚು ಸಮತೋಲಿತ ಸ್ಥಿತಿ ಇದ್ದರೆ. ಭಾರತ, ಥಾಯ್ಲಂಡ್ ಮತ್ತು ಟರ್ಕಿಯಲ್ಲಿ ಶ್ರೀಮಂತ ಶೇ 10ರಷ್ಟು ಮಂದಿ ಅರ್ಧಕ್ಕಿಂತ ಹೆಚ್ಚು ಆದಾಯ ಗಳಿಸುತ್ತಾರೆ. ಭಾರತದಲ್ಲಿ ಟಾಪ್ 10ರಷ್ಟು ಮಂದಿ ಶೇ 58ರಷ್ಟು ಆದಾಯ ಗಳಿಸಿದರೆ ಕೆಳಸ್ತರದ ಅರ್ಧದಷ್ಟು ಮಂದಿ ಶೇ 15ರಷ್ಟು ಆದಾಯ ಗಳಿಸುತ್ತಾರೆ.
ಲ್ಯಾಟಿನ್ ಅಮೆರಿಕ ದೇಶಗಳಾದ ಬ್ರೆಜಿಲ್, ಮೆಕ್ಸಿಕೊ, ಚಿಲಿ ಮತ್ತು ಕೊಲಂಬಿಯದಲ್ಲೂ ಇಂತಹುದೇ ಸ್ಥಿತಿಯಿದೆ. ಯುರೋಪಿಯನ್ ದೇಶಗಳಲ್ಲಿ ಹೆಚ್ಚು ಸಮತೋಲಿತ ಸ್ಥೀತಿಯಿದೆ. ಸ್ವೀಡನ್ ಮತ್ತು ನಾರ್ವೆಯಲ್ಲಿ ಕೆಳಸ್ತರದ ಶೇ 50ರಷ್ಟು ಮಂದಿ ಒಟ್ಟು ಆದಾಯದ ಶೇ 25ರಷ್ಟು ಗಳಿಸುತ್ತಾರೆ. ಟಾಪ್ 10ರಷ್ಟು ಮಂದಿ ಶೇ 30ಕ್ಕಿಂತಲೂ ಕಡಿಮೆ ಆದಾಯ ಗಳಿಸುತ್ತಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಆಸ್ಟ್ರೇಲಿಯ, ಕೆನಡಾ, ಜರ್ಮನಿ, ಜಪಾನ್ ಮತ್ತು ಯುಕೆ ಮಧ್ಯದ ರಾಷ್ಟ್ರಗಳಲ್ಲಿ ಬರುತ್ತವೆ. ಇಲ್ಲಿ ಟಾಪ್ 10ರಷ್ಟು ಮಂದಿ ಶೇ 33-47ರಷ್ಟು ಗಳಿಸಿದರೆ, ಕೆಳಸ್ತರದವರು ಶೇ 16-21ರಷ್ಟು ಗಳಿಸುತ್ತಾರೆ.
ಸಂಪತ್ತು ಅಸಮಾನತೆ ಯಾವ ದೇಶದಲ್ಲಿ ಹೆಚ್ಚಿದೆ?
ಸಂಪತ್ತಿನ ಅಸಮಾನತೆಯನ್ನು ಪರಿಗಣಿಸಿದರೂ ದಕ್ಷಿಣ ಆಫ್ರಿಕಾ ಪಟ್ಟಿಯಲ್ಲಿ ಮೇಲಿದೆ. ಅಲ್ಲಿ ಟಾಪ್ 10 ಮಂದಿ ಶ್ರೀಮಂತರು ಶೇ 85ರಷ್ಟು ಆಸ್ತಿಯನ್ನು ಕ್ರೂಢೀಕರಿಸಿದರೆ, ಕೆಳಸ್ತರದಲ್ಲಿರುವ ಶೇ 50 ಮಂದಿ ಋಣಾತ್ಮಕ ಪಾಲನ್ನು ಹೊಂದಿದ್ದಾರೆ. ಅಂದರೆ ಸಾಲವೇ ಆಸ್ತಿಯನ್ನು ಮೀರಿಸಿರುತ್ತದೆ.
ಏಷ್ಯಾದಲ್ಲಿ ಚೀನಾ, ಭಾರತ ಮತ್ತು ಥಾಯ್ಲಂಡ್ನಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಹಳ ಅಸಮಾನತೆಯಿದೆ. ಶ್ರೀಮಂತ 10ರಷ್ಟು ಮಂದಿ ಶೇ 65-68ರಷ್ಟು ಆಸ್ತಿ ಹೊಂದಿದ್ದಾರೆ. ಭಾರತದಲ್ಲಿ ಶ್ರೀಮಂತ 10 ಮಂದಿ ಶೇ 65ರಷ್ಟು ಆಸ್ತಿ ಹೊಂದಿದ್ದರೆ ಕೆಳಸ್ತರದಲ್ಲಿರುವವರು ಶೇ 6ರಷ್ಟು ಆಸ್ತಿಯನ್ನಷ್ಟೇ ಹೊಂದಿದ್ದಾರೆ.
ರಷ್ಯಾ, ಮೆಕ್ಸಿಕೊ, ಬ್ರೆಜಿಲ್ ಮತ್ತು ಕಾಂಬೊಡಿಯದಲ್ಲಿ ಶ್ರೀಮಂತ ಶೇ 10 ಮಂದಿ ಶೇ 70ರಷ್ಟು ಆಸ್ತಿಯನ್ನು ಹೊಂದಿದ್ದರೆ, ಕೆಳಸ್ತರದಲ್ಲಿರುವ ಶೇ 50ರಷ್ಟು ಮಂದಿ ಶೇ 2-3ರಷ್ಟು ಆಸ್ತಿ ಹೊಂದಿದ್ದಾರೆ. ಅಮೆರಿಕ, ಯುಕೆ, ಆಸ್ಟ್ರೇಲಿಯ ಮತ್ತು ಜಪಾನ್ನಲ್ಲಿಶೇ 10ರಷ್ಟು ಮಂದಿ ಅರ್ಧಕ್ಕೂ ಹೆಚ್ಚು ಸಂಪತ್ತನ್ನು ಹೊಂದಿದ್ದರೆ, ಕೆಳಸ್ತರದ ಅರ್ಧದಷ್ಟು ಮಂದಿ ಶೇ 1-5ರಷ್ಟು ಆಸ್ತಿ ಹೊಂದಿದ್ದಾರೆ. ಯುರೋಪಿಯನ್ ದೇಶಗಳಲ್ಲಿ ಮುಖ್ಯವಾಗಿ ಇಟಲಿ, ಡೆನ್ಮಾರ್ಕ್, ನಾರ್ವೆ ಮತ್ತು ನೆದರ್ಲ್ಯಾಂಡ್ಗಳಲ್ಲಿ ಮಧ್ಯಮ ವರ್ಗದವರು ಶೇ 40ರಷ್ಟು ಮತ್ತು ಕೆಳಸ್ತರದವರು ಶೇ 10ರಷ್ಟು ಆಸ್ತಿ ಹೊಂದಿದ್ದಾರೆ.







