ಅಮೆರಿಕದ ಮೇಲೆ ಪ್ರಭಾವ ಬೀರಲು ಮೋದಿ ಸರ್ಕಾರದಿಂದ ಕೋಟಿ ಕೋಟಿ ರೂ. ವೆಚ್ಚ!
ಟ್ರಂಪ್ ಮಾಜಿ ಆಪ್ತ ಜೇಸನ್ ಮಿಲ್ಲರ್ ಸಂಸ್ಥೆಗೆ ತಿಂಗಳಿಗೆ 1.5 ಲಕ್ಷ ಡಾಲರ್ ಪಾವತಿ; ವಾರ್ಷಿಕ 18 ಲಕ್ಷ ಡಾಲರ್ ಒಪ್ಪಂದ

Photo credit: X/@JasonMiller
ಅಮೆರಿಕದ ರಾಜಕೀಯ ವಲಯದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಭಾರತ ಸರ್ಕಾರ ಭಾರಿ ಮೊತ್ತದ ಹಣ ವ್ಯಯಿಸುತ್ತಿರುವ ವಿಚಾರ ಈಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಆಪ್ತ ಸಹಾಯಕ ಜೇಸನ್ ಮಿಲ್ಲರ್ ನೇತೃತ್ವದ ಲಾಬಿ ಸಂಸ್ಥೆಗೆ ಭಾರತೀಯ ರಾಯಭಾರ ಕಚೇರಿ ಪ್ರತಿ ತಿಂಗಳು 1.5 ಲಕ್ಷ ಅಮೆರಿಕನ್ ಡಾಲರ್ ಪಾವತಿಸುತ್ತಿರುವುದು ಈ ಚರ್ಚೆಗೆ ಕಾರಣವಾಗಿದೆ. ಅಂದರೆ, ವಾರ್ಷಿಕವಾಗಿ 18 ಲಕ್ಷ ಡಾಲರ್ ಮೊತ್ತವನ್ನು ಈ ಸಂಸ್ಥೆಗೆ ನೀಡಲಾಗುತ್ತಿದೆ. ಈ ಕುರಿತು 'The Indian Express' ವರದಿ ಮಾಡಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯ ವಿದೇಶಿ ಏಜೆಂಟ್ ಗಳ ನೋಂದಣಿ ಕಾಯ್ದೆ (FARA) ಅಡಿಯಲ್ಲಿ ಸಲ್ಲಿಸಿರುವ ಅಧಿಕೃತ ದಾಖಲೆಗಳಲ್ಲೂ ಈ ಹಣಕಾಸಿನ ವ್ಯವಹಾರದ ವಿವರಗಳು ದಾಖಲಾಗಿವೆ.
ಅಮೆರಿಕದ ಅಧಿಕಾರ ಕೇಂದ್ರವಾದ ಶ್ವೇತಭವನದಲ್ಲಿ ನೇರ ಸಂಪರ್ಕ ಸಾಧಿಸಿ, ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಲಾಬಿ ಸಂಸ್ಥೆಗಳ ನೆರವು ಪಡೆಯುವುದು ಅಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯ ಪದ್ಧತಿ. ಭಾರತವೂ ಈ ಹಿಂದೆ ಇಂತಹ ಸಂಸ್ಥೆಗಳ ಸೇವೆ ಪಡೆದಿದೆ. ಆದರೆ, ಟ್ರಂಪ್ ಆಡಳಿತದ ಅವಧಿಯಲ್ಲಿ ಪ್ರಭಾವಿ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಸಾಧಿಸಲು ಖಾಸಗಿ ಸಂಸ್ಥೆಯೊಂದಕ್ಕೆ ಈ ಪ್ರಮಾಣದಲ್ಲಿ ಅಧಿಕೃತ ಗುತ್ತಿಗೆ ನೀಡಿರುವುದು ವಿಶೇಷ ಗಮನ ಸೆಳೆದಿದೆ.
ಈ ಒಪ್ಪಂದದ ಪ್ರಕಾರ, ಭಾರತದ ಪರವಾಗಿ ಅಮೆರಿಕದ ಪ್ರಮುಖ ಸಂಸದರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮತ್ತು ಸಂವಾದಗಳನ್ನು ಏರ್ಪಡಿಸುವ ಜವಾಬ್ದಾರಿಯನ್ನು ಜೇಸನ್ ಮಿಲ್ಲರ್ ನೇತೃತ್ವದ ಸಂಸ್ಥೆ ವಹಿಸಿಕೊಂಡಿದೆ.
►ಟ್ರಂಪ್ ಆಡಳಿತದ ಆಪ್ತ ವಲಯದ ಮೇಲೆ ಕಣ್ಣಿಟ್ಟ ಭಾರತ
ಈ ಬೆಳವಣಿಗೆಯ ರಾಜತಾಂತ್ರಿಕ ಹಿನ್ನೆಲೆಯನ್ನು ಗಮನಿಸಿದರೆ ಭಾರತದ ಲೆಕ್ಕಾಚಾರ ಅರ್ಥವಾಗುತ್ತದೆ. ಡೊನಾಲ್ಡ್ ಟ್ರಂಪ್ ಅವರ ಆಡಳಿತ ಶೈಲಿ ಸಾಂಪ್ರದಾಯಿಕ ರಾಜತಾಂತ್ರಿಕ ಚೌಕಟ್ಟಿಗಿಂತ ಭಿನ್ನವಾಗಿದೆ. ಅಧಿಕೃತ ರಾಯಭಾರ ಮಟ್ಟದ ಮಾತುಕತೆಗಳಿಗಿಂತ ಆಡಳಿತದ ಒಳವಲಯದಲ್ಲಿರುವ ಆಪ್ತರ ಪ್ರಭಾವವೇ ನೀತಿ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವ್ಯಾಪಾರ ಸುಂಕಗಳು, ರಕ್ಷಣಾ ಪಾಲುದಾರಿಕೆ ಹಾಗೂ ವೀಸಾ ನೀತಿಗಳಂತಹ ಸೂಕ್ಷ್ಮ ವಿಚಾರಗಳಲ್ಲಿ ಅಮೆರಿಕ ತೆಗೆದುಕೊಳ್ಳುವ ನಿರ್ಧಾರಗಳು ಭಾರತದ ಆರ್ಥಿಕ ಹಿತಾಸಕ್ತಿಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂತಹ ಸಂದರ್ಭದಲ್ಲಿ ಭಾರತದ ನಿಲುವು ಮತ್ತು ಹಿತಾಸಕ್ತಿಗಳನ್ನು ಟ್ರಂಪ್ ಆಡಳಿತದ ಪ್ರಭಾವಿ ವಲಯಕ್ಕೆ ತಲುಪಿಸಲು ವಾಷಿಂಗ್ಟನ್ನ ಲಾಬಿ ವ್ಯವಸ್ಥೆಯನ್ನು ಭಾರತ ಬಳಸಿಕೊಳ್ಳುತ್ತಿದೆ.
►ಪಾಕಿಸ್ತಾನದ ಲಾಬಿಯೂ ಕಾರಣವೇ?
ಪ್ರಾದೇಶಿಕ ಭೌಗೋಳಿಕ ರಾಜಕೀಯ ಪೈಪೋಟಿಯೂ ಭಾರತದ ಈ ನಡೆಯ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪಾಕಿಸ್ತಾನವೂ ವಾಷಿಂಗ್ಟನ್ ನಲ್ಲಿ ತನ್ನ ಪರವಾಗಿ ಲಾಬಿ ನಡೆಸಲು ದೊಡ್ಡ ಮೊತ್ತದ ಹಣ ವ್ಯಯಿಸುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಸಂಘರ್ಷಗಳು ಹಾಗೂ ಕಾಶ್ಮೀರದಂತಹ ವಿಚಾರಗಳು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆಗೆ ಬಂದಾಗ ಅಮೆರಿಕದ ನಿಲುವು ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿರುವಂತೆ ನೋಡಿಕೊಳ್ಳುವುದು ಭಾರತದ ರಾಜತಾಂತ್ರಿಕ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಮೆರಿಕದ ನೀತಿ ನಿರೂಪಕರು ಮತ್ತು ಪ್ರಭಾವಿ ವಲಯಗಳೊಂದಿಗೆ ಸಂಪರ್ಕ ಸಾಧಿಸಲು ಲಾಬಿ ಸಂಸ್ಥೆಗಳ ನೆರವು ಪಡೆಯುವುದು ಭಾರತದ ಕಾರ್ಯತಂತ್ರದ ಭಾಗವಾಗಿದೆ.
ಜಾಗತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಕೇವಲ ರಾಯಭಾರ ಕಚೇರಿಯ ಸಾಂಪ್ರದಾಯಿಕ ಸಂವಹನ ಸಾಕಾಗುವುದಿಲ್ಲ ಎಂಬ ವಾಸ್ತವವನ್ನೂ ಈ ಬೆಳವಣಿಗೆ ಬಿಂಬಿಸುತ್ತದೆ.
►ಪರಮ ಮಿತ್ರನನ್ನು ಒಲಿಸಿಕೊಳ್ಳಲು ಇಷ್ಟೊಂದು ವೆಚ್ಚವೇಕೆ?
ಹೀಗಿದ್ದರೂ, ಪರಮ ಮಿತ್ರ ರಾಷ್ಟ್ರವೆಂದು ಪರಿಗಣಿಸಲಾಗುವ ಅಮೆರಿಕವನ್ನು ಒಲಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಈ ಭಾರಿ ವೆಚ್ಚ ಭಾರತದ ನೈಜ ರಾಜತಾಂತ್ರಿಕ ಅಗತ್ಯವೇ ಅಥವಾ ಸಾರ್ವಜನಿಕ ಹಣದ ಪೋಲೇ ಎಂಬ ಪ್ರಶ್ನೆಯೂ ಮಹತ್ವ ಪಡೆದುಕೊಂಡಿದೆ.
ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನೀತಿ ನಿರೂಪಣೆಯಲ್ಲಿ ಲಾಬಿ ಮಾಡುವುದು ಕಾನೂನುಬದ್ಧ ಚಟುವಟಿಕೆಯಾಗಿದೆ. ದೇಶದ ಆರ್ಥಿಕ ಹಾಗೂ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ವಿಶ್ವದ ಅತ್ಯಂತ ಪ್ರಭಾವಿ ರಾಷ್ಟ್ರದ ಆಡಳಿತ ಕೇಂದ್ರದೊಂದಿಗೆ ನೇರ ಸಂಪರ್ಕ ಹೊಂದಿರುವುದು ಭಾರತದ ಪಾಲಿಗೆ ಆಯಕಟ್ಟಿನ ನಡೆಯಾಗಬಹುದು.
ಆದರೆ, ಜನಸಾಮಾನ್ಯರು ಪಾವತಿಸುವ ತೆರಿಗೆ ಹಣವನ್ನು ವಿದೇಶಿ ಏಜೆಂಟ್ ಗಳ ಮೇಲೆ ಈ ಪ್ರಮಾಣದಲ್ಲಿ ವ್ಯಯಿಸುವುದರಿಂದ ದೇಶಕ್ಕೆ ದೊರೆಯುವ ನೈಜ ಲಾಭವೇನು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಜಾಗತಿಕ ರಾಜಕಾರಣ ಭಾವನಾತ್ಮಕ ಬಾಂಧವ್ಯಗಳ ಮೇಲೆ ನಡೆಯುವುದಿಲ್ಲ. ಬದಲಿಗೆ ಪ್ರಭಾವ, ಹಿತಾಸಕ್ತಿ ಮತ್ತು ಲಾಭದ ಲೆಕ್ಕಾಚಾರಗಳೇ ಅಲ್ಲಿ ನಿರ್ಣಾಯಕವಾಗಿರುತ್ತವೆ. ಟ್ರಂಪ್ ಆಡಳಿತದ ಅನಿಶ್ಚಿತ ರಾಜಕೀಯ ಪರಿಸ್ಥಿತಿಯಲ್ಲಿ ಅಮೆರಿಕದ ಮೇಲೆ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಭಾರತ ಕೈಗೊಂಡಿರುವ ಈ ಲಾಬಿ ಒಪ್ಪಂದ ಕೇವಲ ಹಣಕಾಸಿನ ವ್ಯವಹಾರವಲ್ಲ; ಜಾಗತಿಕ ಅಧಿಕಾರ ರಾಜಕಾರಣದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಪ್ರಯತ್ನವೂ ಆಗಿದೆ.






