ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ: ಯಾವ ದೇಶದಲ್ಲಿ ಏನೇನು ಅಗ್ಗವಾಗಲಿದೆ?

ನರೇಂದ್ರ ಮೋದಿ , ಕೀರ್ ಸ್ಟಾರ್ಮರ್| Photo Credit : aljazeera.com
ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (ಬ್ರಿಟನ್) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜಾರಿಗೆ ಬಂದಿದೆ. ಇದರಿಂದಾಗಿ ಸಾವಿರಾರು ಸರಕುಗಳ ಮೇಲಿನ ಆಮದು ಸುಂಕ ಕಡಿತಗೊಂಡಿದ್ದು, ಉಭಯ ದೇಶಗಳ ಸೇವಾ ವಲಯದ ಕಂಪೆನಿಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶ ಸಿಕ್ಕಂತಾಗಿದೆ.
ಬುಧವಾರದಿಂದ ಜಾರಿಗೆ ಬಂದಿರುವ ಈ ಒಪ್ಪಂದದಿಂದಾಗಿ ಭಾರತದ ರಫ್ತುದಾರರಿಗೆ ಬ್ರಿಟನ್ ನ ಬಹುತೇಕ ಮಾರುಕಟ್ಟೆಗಳಲ್ಲಿ ತಕ್ಷಣದಿಂದಲೇ ಸುಂಕರಹಿತ ಪ್ರವೇಶ ಸಿಗಲಿದೆ. ಇದು ಜವಳಿಯಂತಹ ಕಾರ್ಮಿಕ ಪ್ರಧಾನ ವಲಯಗಳಿಗೆ ಹೆಚ್ಚಿನ ಲಾಭ ತಂದುಕೊಡಲಿದೆ.
ಮತ್ತೊಂದೆಡೆ, ಆಟೋಮೊಬೈಲ್ ಸೇರಿದಂತೆ ವಿವಿಧ ವಲಯಗಳಲ್ಲಿ ಹಂತ ಹಂತವಾಗಿ ಸುಂಕ ಕಡಿತ ಮತ್ತು ಕೋಟಾಗಳನ್ನು ನಿಗದಿಪಡಿಸುವ ಮೂಲಕ ಬ್ರಿಟನ್ ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಕ ಅವಕಾಶಗಳನ್ನು ಪಡೆಯಲಿದೆ.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್, ಈ ಒಪ್ಪಂದವು "ಭಾರತ-ಬ್ರಿಟನ್ ಬಾಂಧವ್ಯದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು" ಎಂದು ಬಣ್ಣಿಸಿದ್ದಾರೆ.
"ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (FTA) ನಮ್ಮ ಜವಳಿ, ಚರ್ಮದ ಉದ್ಯಮ, ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್ ಸರಕುಗಳು, ಕಡಲ ಉತ್ಪನ್ನಗಳು, ರಾಸಾಯನಿಕಗಳು, ಸಂಸ್ಕರಿಸಿದ ಆಹಾರಗಳು, MSME ಗಳು, ರೈತರು ಮತ್ತು ಉತ್ಪಾದಕರಿಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸಲಿದೆ. ಇದು ನಮ್ಮ ಐಟಿ, ವೃತ್ತಿಪರ ಸೇವೆಗಳು, ಹಣಕಾಸು, ಶಿಕ್ಷಣ ಮತ್ತು ವಾಣಿಜ್ಯ ಸೇವಾ ವಲಯಗಳಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲಿದ್ದು, ಭಾರತೀಯ ಪ್ರತಿಭೆಗಳ ಜಾಗತಿಕ ಸಂಚಾರಕ್ಕೆ ಹೆಚ್ಚಿನ ಹಾದಿ ಮಾಡಿಕೊಡಲಿದೆ" ಎಂದು ಅವರು ಹೇಳಿದ್ದಾರೆ.
ಈ ವ್ಯಾಪಾರ ಒಪ್ಪಂದ ಎಷ್ಟು ಮಹತ್ವದ್ದು?
ಈ ಒಪ್ಪಂದದಿಂದಾಗಿ ಬ್ರಿಟನ್ಗೆ ಭಾರತದ ರಫ್ತು ಹೆಚ್ಚಾಗಲಿದ್ದು, ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳ ವೆಚ್ಚ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬುಧವಾರ ಪ್ರಕಟವಾದ ಬ್ರಿಟನ್ ಸರ್ಕಾರದ ನೀತಿ ನಿರೂಪಣಾ ವರದಿಯು ಈ ಒಪ್ಪಂದವನ್ನು ಶ್ಲಾಘಿಸಿದ್ದು, "ಯಾವುದೇ ದೇಶವು ಭಾರತದೊಂದಿಗೆ ಇದುವರೆಗೆ ಮಾಡಿಕೊಂಡಿರುವ ಒಪ್ಪಂದಗಳಲ್ಲೇ ಇದು ಅತ್ಯುತ್ತಮ ಒಪ್ಪಂದವಾಗಿದೆ" ಎಂದು ಹೇಳಿದೆ.
"ಈ ಒಪ್ಪಂದದ ಮೂಲಕ ಭಾರತವು ಶೇಕಡಾ 90ರಷ್ಟು ಸರಕುಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಿದೆ ಅಥವಾ ಕಡಿತಗೊಳಿಸಲಿದೆ. ಇದು ಬ್ರಿಟನ್ನಿಂದ ಭಾರತಕ್ಕೆ ಆಮದಾಗುವ ಪ್ರಸ್ತುತ ಸರಕುಗಳ ಪೈಕಿ ಶೇಕಡಾ 92ರಷ್ಟು ಸರಕುಗಳನ್ನು ಒಳಗೊಳ್ಳುತ್ತದೆ (2022ರ ವ್ಯಾಪಾರ ದತ್ತಾಂಶದ ಆಧಾರದ ಮೇಲೆ)," ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಸಮಯದಲ್ಲಿ, ಬ್ರಿಟನ್ ಭಾರತದ ಶೇಕಡಾ 96.8ರಷ್ಟು ಸರಕುಗಳ ಮೇಲಿನ ಆಮದು ಸುಂಕವನ್ನು ತಕ್ಷಣದಿಂದಲೇ ರದ್ದುಗೊಳಿಸಲಿದ್ದು, ಇದು ಉಭಯ ದೇಶಗಳ ಒಟ್ಟು ವ್ಯಾಪಾರ ಮೌಲ್ಯದ ಶೇಕಡಾ 97.7ರಷ್ಟನ್ನು ಒಳಗೊಳ್ಳುತ್ತದೆ.
ಬ್ರಿಟನ್ ಭಾರತದ ಬಹುತೇಕ ಎಲ್ಲಾ ಸರಕುಗಳ ಮೇಲಿನ ಆಮದು ಸುಂಕವನ್ನು ತೆಗೆದುಹಾಕಿರುವುದು ಈ ಒಪ್ಪಂದದ ಪ್ರಮುಖ ಮಹತ್ವವಾಗಿದೆ.
ಭಾರತವು ಕೂಡ ಶೇಕಡಾ 64.1ರಷ್ಟು ಸರಕುಗಳ ಮೇಲಿನ ಸುಂಕವನ್ನು ತಕ್ಷಣವೇ ರದ್ದುಗೊಳಿಸಲಿದ್ದು, ಇನ್ನುಳಿದ ಶೇಕಡಾ 21ರಷ್ಟು ಸರಕುಗಳ ಮೇಲಿನ ಸುಂಕವನ್ನು ಹಂತ ಹಂತವಾಗಿ ಕಡಿಮೆ ಮಾಡಲಿದೆ. ಕೆಲವು ಸೂಕ್ಷ್ಮ ಉತ್ಪನ್ನಗಳನ್ನು ಮಾತ್ರ ಈ ಸುಂಕ ವಿನಾಯಿತಿಯಿಂದ ಹೊರಗಿಡಲಾಗಿದೆ.
ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ದತ್ತಾಂಶದ ಪ್ರಕಾರ, 2025–26ರ ಹಣಕಾಸು ವರ್ಷದಲ್ಲಿ ಭಾರತವು ಬ್ರಿಟನ್ಗೆ 13.44 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದರೆ, ಆಮದು ಪ್ರಮಾಣವು 11.68 ಬಿಲಿಯನ್ ಡಾಲರ್ ನಷ್ಟಿತ್ತು. ದತ್ತಾಂಶಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ, 2024ರಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸೇವಾ ವಲಯದ ವ್ಯಾಪಾರವು ಒಟ್ಟು 35.44 ಬಿಲಿಯನ್ ಡಾಲರ್ ತಲುಪಿದ್ದು, ಈ ಪೈಕಿ ಭಾರತವು ಸುಮಾರು 7.9 ಬಿಲಿಯನ್ ಡಾಲರ್ನಷ್ಟು ವ್ಯಾಪಾರ ಲಾಭವನ್ನು ಹೊಂದಿದೆ.
ಬುಧವಾರ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ "ಆರ್ಥಿಕ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲಿವೆ" ಎಂದು ತಿಳಿಸಿದ್ದಾರೆ.
"ಭಾರತದ ಹಲವು ಪ್ರಮುಖ ವಲಯಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ಇದು ತಂತ್ರಜ್ಞಾನ, ವೃತ್ತಿಪರ ಸೇವೆಗಳು ಮತ್ತು ಇನೋವೇಶನ್ ವಲಯಗಳಲ್ಲಿನ ಸಹಕಾರವನ್ನು ಹೆಚ್ಚಿಸಲಿದ್ದು, ಭಾರತದ ನುರಿತ ಪ್ರತಿಭೆಗಳ ಜಾಗತಿಕ ಸಂಚಾರಕ್ಕೆ ಹೆಚ್ಚಿನ ಬೆಂಬಲ ನೀಡಲಿದೆ. ಈ ಕ್ಷಣವು ನಮ್ಮ ಎರಡು ಪ್ರಜಾಪ್ರಭುತ್ವ ದೇಶಗಳ ನಡುವಿನ ವಿಶ್ವಾಸವನ್ನು ಹಾಗೂ ವ್ಯಾಪಾರ, ತಂತ್ರಜ್ಞಾನ, ಹೂಡಿಕೆ ಮತ್ತು ನಾವೀನ್ಯತೆ ಆಧಾರಿತ ದೂರದೃಷ್ಟಿಯ ಸಹಭಾಗಿತ್ವವನ್ನು ನಿರ್ಮಿಸುವ ನಮ್ಮ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಜಂಟಿ ಪ್ರಗತಿಗಾಗಿ ಭಾರತ ಮತ್ತು ಬ್ರಿಟನ್ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ" ಎಂದು ಪ್ರಧಾನಿ ಹೇಳಿದ್ದಾರೆ.
ಭಾರತೀಯರಿಗೆ ಈಗ ಯಾವ ಬ್ರಿಟಿಷ್ ಉತ್ಪನ್ನಗಳು ಅಗ್ಗವಾಗಲಿವೆ?
ಬ್ರಿಟನ್ ಸರ್ಕಾರದ ನೀತಿ ನಿರೂಪಣಾ ವರದಿಯ ಪ್ರಕಾರ, ಸೌಂದರ್ಯವರ್ಧಕಗಳು, ವಿಸ್ಕಿ, ಚಾಕೊಲೇಟ್ಗಳು, ತಂಪು ಪಾನೀಯಗಳು ಮತ್ತು ಕುರಿ ಮಾಂಸ ಸೇರಿದಂತೆ ವಿವಿಧ ಉತ್ಪನ್ನಗಳು ಸುಂಕ ಕಡಿತದ ಲಾಭ ಪಡೆಯಲಿದ್ದು, ಅಗ್ಗವಾಗಲಿವೆ.
ಕಾರುಗಳು, ಎಲೆಕ್ಟ್ರಿಕಲ್ ಸರ್ಕ್ಯೂಟ್ ಗಳು, ಅತ್ಯಾಧುನಿಕ ಆಪ್ಟಿಕಲ್ ಉತ್ಪನ್ನಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಉತ್ಪಾದನಾ ವಲಯಗಳೂ ಈ ಒಪ್ಪಂದದಿಂದ ಪ್ರಯೋಜನ ಪಡೆಯಲಿವೆ.
ಈ ಒಪ್ಪಂದವು ಮಾರುಕಟ್ಟೆ ಪ್ರವೇಶದ ಅವಕಾಶವನ್ನೂ ವಿಸ್ತರಿಸಲಿದ್ದು, ಕೆಲಸದ ನಿಮಿತ್ತ ತಾತ್ಕಾಲಿಕವಾಗಿ ಬ್ರಿಟನ್ಗೆ ತೆರಳುವ ಭಾರತೀಯ ಉದ್ಯೋಗಿಗಳಿಗೆ ಐದು ವರ್ಷಗಳವರೆಗೆ ಅಲ್ಲಿನ 'ರಾಷ್ಟ್ರೀಯ ವಿಮೆ'ಗೆ ಕೊಡುಗೆ ನೀಡುವುದರಿಂದ ವಿನಾಯಿತಿ ನೀಡಲಿದೆ.
ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜಾರಿಗೆ ಬರುತ್ತಿದ್ದಂತೆ, "75,000ಕ್ಕೂ ಹೆಚ್ಚು ವೃತ್ತಿಪರರು ಮತ್ತು 900ಕ್ಕೂ ಹೆಚ್ಚು ಕಂಪೆನಿಗಳು ಇದರ ಲಾಭ ಪಡೆಯುವ ನಿರೀಕ್ಷೆಯಿದೆ" ಎಂದು ಸಚಿವ ಗೋಯಲ್ ತಿಳಿಸಿದ್ದಾರೆ.
"ಐಟಿ, ಐಟಿಇಎಸ್, ಹಣಕಾಸು, ವೃತ್ತಿಪರ ಸೇವೆಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಎಂಜಿನಿಯರಿಂಗ್, ದೂರಸಂಪರ್ಕ ಮತ್ತು ಸಲಹಾ ಸೇವೆಗಳ ವಲಯಗಳು ಇದರಿಂದ ಪ್ರಯೋಜನ ಪಡೆಯಲಿವೆ" ಎಂದು ಅವರು ಹೇಳಿದ್ದಾರೆ.
ಬ್ರಿಟನ್ ನಲ್ಲಿ ಈಗ ಯಾವ ಭಾರತೀಯ ಸರಕುಗಳು ಅಗ್ಗವಾಗಲಿವೆ?
ಕಡಲ ಉತ್ಪನ್ನಗಳ ರಫ್ತು, ಜವಳಿ, ಚರ್ಮದ ಉತ್ಪನ್ನಗಳು, ಪಾದರಕ್ಷೆಗಳು ಹಾಗೂ ರತ್ನ ಮತ್ತು ಆಭರಣಗಳ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಲಾಗುವುದು. ಇದು ಭಾರತೀಯ ರಫ್ತುದಾರರು ಬ್ರಿಟನ್ ಮಾರುಕಟ್ಟೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪೈಪೋಟಿ ನಡೆಸಲು ನೆರವಾಗಲಿದೆ.
ಈ ಒಪ್ಪಂದದ ಪರಿಣಾಮವಾಗಿ ಮಸಾಲೆ ಪದಾರ್ಥಗಳು, ತರಕಾರಿಗಳು, ಸಂಸ್ಕರಿಸಿದ ಆಹಾರ ಮತ್ತು ಹಣ್ಣುಗಳು ಸಹ ಬ್ರಿಟನ್ ನಲ್ಲಿ ಅಗ್ಗವಾಗಲಿವೆ.
ಒಪ್ಪಂದದಿಂದ ಇನ್ನು ಯಾವ ಉತ್ಪನ್ನಗಳ ಬೆಲೆ ಬದಲಾವಣೆಯಾಗಿಲ್ಲ?
ಈ ಒಪ್ಪಂದವು ಹಲವಾರು ವಲಯಗಳನ್ನು ಒಳಗೊಂಡಿದ್ದರೂ, ಕುಕ್ಕುಟ ಉದ್ಯಮ, ಮೊಟ್ಟೆ, ಸಕ್ಕರೆ ಅಥವಾ ಡೈರಿ (ಹಾಲಿನ ಉತ್ಪನ್ನಗಳು) ಉತ್ಪನ್ನಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಭಾರತವು ಸೇಬು, ವಾಲ್ನಟ್ಸ್ ಹಾಗೂ ನಿರ್ದಿಷ್ಟ ಶ್ರೇಣಿಯ ಚಿನ್ನದ ಬಿಸ್ಕತ್ತುಗಳು ಮತ್ತು ಸ್ಮಾರ್ಟ್ಫೋನ್ ಗಳನ್ನು ಈ ಸುಂಕ ಕಡಿತದ ವ್ಯಾಪ್ತಿಯಿಂದ ಹೊರಗಿಟ್ಟಿದೆ.
ಸೌಜನ್ಯ: aljazeera.com






