India–US Trade Deal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಏನೇನಿದೆ? ರಷ್ಯಾದ ಪ್ರತಿಕ್ರಿಯೆ ಏನು?

Photo : PTI
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ. ಭಾರತದೊಂದಿಗೆ ಇರುವ ಹೊಸ ವ್ಯಾಪಾರ ಒಪ್ಪಂದದಲ್ಲಿ ಕಡಿಮೆ ಪ್ರತಿಸುಂಕಗಳು ಮತ್ತು ವಿಸ್ತೃತ ಮಾರುಕಟ್ಟೆ ಪ್ರವೇಶವಿದೆ. ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಮತ್ತು ಅಮೆರಿಕನ್ ಸರಕುಗಳ ಆಮದುಗಳನ್ನು ತೀವ್ರವಾಗಿ ಹೆಚ್ಚಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಒಪ್ಪಂದದ ಸುಂಕ ಕಡಿತದ ಭಾಗವನ್ನು ಭಾರತ ದೃಢಪಡಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಂದವನ್ನು “ವಿನ್–ವಿನ್” ವ್ಯಾಪಾರ ಒಪ್ಪಂದ ಎಂದು ಬಣ್ಣಿಸಿದ್ದಾರೆ. ಸೋಮವಾರ ದೂರವಾಣಿ ಕರೆಯ ನಂತರ ಟ್ರಂಪ್ ಮತ್ತು ಪ್ರಧಾನಿ ಮೋದಿ ಭಾರತ–ಯುಎಸ್ ವ್ಯಾಪಾರ ಒಪ್ಪಂದದ ಘೋಷಣೆ ಮಾಡಿದರು.
►ಸುಂಕ ಕಡಿತ
ಅಧ್ಯಕ್ಷ ಟ್ರಂಪ್ ಅವರೊಂದಿಗಿನ ದೂರವಾಣಿ ಸಂಭಾಷಣೆಯ ನಂತರ ಭಾರತೀಯ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇಕಡ 18ಕ್ಕೆ ಇಳಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹೊಸ ದರವು ಹಿಂದಿನ 25% ಪ್ರತಿಸುಂಕವನ್ನು ಬದಲಾಯಿಸುತ್ತದೆ.
“ನನ್ನ ಆತ್ಮೀಯ ಸ್ನೇಹಿತ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಇಂದು ಮಾತನಾಡಿ ಸಂತೋಷವಾಯಿತು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ಶೇಕಡ 25ರ ಬದಲು ಶೇಕಡ 18ರಷ್ಟು ಸುಂಕವನ್ನು ಹೊಂದುತ್ತಿರುವುದು ಸಂತೋಷ ತಂದಿದೆ. ಈ ಅದ್ಭುತ ಘೋಷಣೆಗಾಗಿ ಭಾರತದ 140 ಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
“ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡಿದಾಗ, ಅದು ನಮ್ಮ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಇದರಿಂದ ಹೆಚ್ಚು ಅವಕಾಶಗಳು ದೊರೆಯುತ್ತವೆ” ಎಂದಿದ್ದಾರೆ ಮೋದಿ. ಟ್ರಂಪ್ ನಾಯಕತ್ವವನ್ನು ಶ್ಲಾಘಿಸಿದ ಅವರು, “ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವವು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ. ಪಾಲುದಾರಿಕೆಯನ್ನು ‘ಅಭೂತಪೂರ್ವ ಮಟ್ಟಕ್ಕೆ’ ಕೊಂಡೊಯ್ಯಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ ಮೋದಿ.
ಮೋದಿಯವರ ಸಾಮಾಜಿಕ ಮಾಧ್ಯಮ ಪೋಸ್ಟ್ ಸುಂಕ ವಿನಾಯಿತಿಯನ್ನು ದೃಢಪಡಿಸಿದರೂ, ಒಪ್ಪಂದದಲ್ಲಿ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ ಬದ್ಧತೆಗಳು ಅಥವಾ ಅಮೆರಿಕದ ಸರಕುಗಳ ಮೇಲಿನ ಶೂನ್ಯ ಸುಂಕಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಿಲ್ಲ. ಸ್ವಲ್ಪ ಸಮಯದ ನಂತರ ಅಶ್ವಿನಿ ವೈಷ್ಣವ್ ಅವರು ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮವಾಗಿದೆ ಎಂದು X ನಲ್ಲಿ ದೃಢಪಡಿಸಿದ್ದು, ಇದು ಎರಡೂ ದೇಶಗಳ ನಾಗರಿಕರು ಮತ್ತು ಕೈಗಾರಿಕೆಗಳಿಗೆ ಪ್ರಯೋಜನ ನೀಡುವ “ವಿನ್–ವಿನ್” ಒಪ್ಪಂದ ಎಂದಿದ್ದಾರೆ.
►ಭಾರತ–ಯುಎಸ್ ವ್ಯಾಪಾರ ಒಪ್ಪಂದ: ಪ್ರಕಟಣೆಗಳ ಅನುಕ್ರಮ
ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ರಾತ್ರಿ 9:16ಕ್ಕೆ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಫೋನ್ ಕರೆಯ ಬಗ್ಗೆ ಮೊದಲು ಉಲ್ಲೇಖಿಸಿದರು. ಇದಾಗಿ ಒಂದು ಗಂಟೆಯ ನಂತರ ಟ್ರೂತ್ ಸೋಷಿಯಲ್ನಲ್ಲಿ ಟ್ರಂಪ್ ಅವರ ದೀರ್ಘ ಪೋಸ್ಟ್ ಬಂತು. ಸುಮಾರು ಎರಡು ಗಂಟೆಗಳ ನಂತರ ಮೋದಿ ಈ ಒಪ್ಪಂದ ಬಗ್ಗೆ ಪೋಸ್ಟ್ ಮಾಡಿದ್ದರು. ಟ್ರಂಪ್ ಮೋದಿ ಅವರನ್ನು ಉತ್ತಮ ಸ್ನೇಹಿತ ಎಂದು ಪರಿಗಣಿಸುತ್ತಾರೆ. ವ್ಯಾಪಾರ ಒಪ್ಪಂದದ ಸುದ್ದಿಯನ್ನು ಪ್ರಮುಖ ಉತ್ತೇಜನ ಎಂದು ಹೇಳಿದ ಗೋರ್, ಎರಡೂ ದೇಶಗಳ ನಡುವಿನ ಸಂಬಂಧವು “ಅಪರಿಮಿತ ಸಾಮರ್ಥ್ಯ” ಹೊಂದಿದೆ ಎಂದಿದ್ದಾರೆ.
►ಒಪ್ಪಂದದ ಬಗ್ಗೆ ಟ್ರಂಪ್ ಹೇಳಿದ್ದೇನು?
ಒಪ್ಪಂದದ ಬಗ್ಗೆ ತಮ್ಮ ಟ್ರೂತ್ ಸೋಷಿಯಲ್ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಒಪ್ಪಂದವು ಸುಂಕ ಕಡಿತವನ್ನು ಮೀರಿದೆ ಎಂದು ಹೇಳಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ ಭಾರತವು ಅಮೆರಿಕ ಸರಕುಗಳ ಮೇಲಿನ ತನ್ನ ಸುಂಕಗಳು ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸುತ್ತದೆ. 500 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಮೌಲ್ಯದ ಅಮೆರಿಕನ್ ಇಂಧನ, ತಂತ್ರಜ್ಞಾನ, ಕೃಷಿ ಉತ್ಪನ್ನಗಳು, ಕಲ್ಲಿದ್ದಲು ಮತ್ತು ಇತರ ಸರಕುಗಳನ್ನು ಖರೀದಿಸಲು ಬದ್ಧವಾಗಿರುತ್ತದೆ.
“ಮೋದಿ ಅವರೊಂದಿಗೆ ಮಾತನಾಡುವುದು ಗೌರವ ಸಂಗತಿ. ಅವರು ನನ್ನ ಶ್ರೇಷ್ಠ ಸ್ನೇಹಿತರಲ್ಲಿ ಒಬ್ಬರು ಮತ್ತು ಪ್ರಭಾವಿ ಹಾಗೂ ಗೌರವಾನ್ವಿತ ನಾಯಕ. ಪ್ರಧಾನಿ ಮೋದಿ ಮತ್ತು ನಾನು ಕೈಗೆತ್ತಿಕೊಳ್ಳುವ ಕೆಲಸಗಳನ್ನು ಪೂರ್ಣಗೊಳಿಸುವ ಇಬ್ಬರು ಪ್ರಮುಖ ಜಾಗತಿಕ ನಾಯಕರು” ಎಂದು ಟ್ರಂಪ್ ಹೇಳಿದ್ದಾರೆ.
ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಮತ್ತು ಬದಲಿಗೆ ಅಮೆರಿಕ ಹಾಗೂ ಸಂಭಾವ್ಯವಾಗಿ ವೆನೆಝುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದೆ. ಈ ಕ್ರಮವನ್ನು ರಷ್ಯಾ–ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನವೆಂದು ಟ್ರಂಪ್ ಹೇಳಿದ್ದಾರೆ.
“ಪ್ರಧಾನಿ ಮೋದಿಯವರೊಂದಿಗಿನ ಸ್ನೇಹ ಮತ್ತು ಗೌರವದಿಂದ ಹಾಗೂ ಅವರ ಕೋರಿಕೆಯ ಮೇರೆಗೆ, ತಕ್ಷಣವೇ ಜಾರಿಗೆ ಬರುವಂತೆ ನಾವು ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿದ್ದೇವೆ. ಆ ಮೂಲಕ ಅಮೆರಿಕ ಕಡಿಮೆ ಪ್ರತಿಸುಂಕವನ್ನು ವಿಧಿಸುತ್ತದೆ; ಅದನ್ನು 25%ರಿಂದ 18%ಕ್ಕೆ ಇಳಿಸುತ್ತದೆ” ಎಂದು ಟ್ರಂಪ್ ಬರೆದಿದ್ದಾರೆ.
ಭಾರತವು ಅಮೆರಿಕದಿಂದ ಖರೀದಿಗೆ ಹೆಚ್ಚಿನ ಮಟ್ಟದಲ್ಲಿ ಬದ್ಧವಾಗಿದೆ. ಇದರಲ್ಲಿ 500 ಶತಕೋಟಿ ಡಾಲರ್ ಗೂ ಹೆಚ್ಚು ಅಮೆರಿಕ ಸರಕುಗಳು ಮತ್ತು ಇಂಧನವೂ ಸೇರಿದೆ ಎಂದು ಟ್ರಂಪ್ ಹೇಳಿದ್ದಾರೆ.
►ಒಪ್ಪಂದವನ್ನು ಸ್ವಾಗತಿಸಿದ ಅಮೆರಿಕ ಅಧಿಕಾರಿಗಳು
ಈ ಒಪ್ಪಂದವನ್ನು ಸ್ವಾಗತಿಸಿದ ಅಮೆರಿಕದ ಆರ್ಥಿಕ ವ್ಯವಹಾರಗಳ ಅಧೀನ ಕಾರ್ಯದರ್ಶಿ ಜಾಕೋಬ್ ಹೆಲ್ಬರ್ಗ್, ಇದು ಕೈಗಾರಿಕಾ ಸಹಯೋಗವನ್ನು ದೃಢವಾಗಿರಿಸುತ್ತದೆ. ನಿರ್ಣಾಯಕ ಖನಿಜಗಳು ಮತ್ತು ತಂತ್ರಜ್ಞಾನ ಸಹಕಾರ ಸೇರಿದಂತೆ ನಿರ್ದಿಷ್ಟ ಜಂಟಿ ಯೋಜನೆಗಳಿಗೆ ಆವೇಗವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
►ಭಾರತ–ಯುಎಸ್ ವ್ಯಾಪಾರ ವಿವಾದ ಮತ್ತು ಉದ್ವಿಗ್ನತೆ
ಕಳೆದ ವರ್ಷದಲ್ಲಿ ಅಮೆರಿಕ ಮತ್ತು ಭಾರತ ಆರು ಔಪಚಾರಿಕ ಸುತ್ತಿನ ಮಾತುಕತೆಗಳು ಹಾಗೂ ಬಹು ಅನೌಪಚಾರಿಕ ಸಮಾಲೋಚನೆಗಳನ್ನು ನಡೆಸಿವೆ. ಡಿಸೆಂಬರ್ 2025ರಲ್ಲಿ ಅಮೆರಿಕದ ನಿಯೋಗ ಭಾರತಕ್ಕೆ ಭೇಟಿ ನೀಡಿತು. ಅಮೆರಿಕ ಭಾರತೀಯ ಸರಕುಗಳ ಮೇಲೆ 50% ಸುಂಕಗಳನ್ನು ವಿಧಿಸಿದ ನಂತರ ವ್ಯಾಪಾರ ಸಂಬಂಧಗಳು ಒತ್ತಡಕ್ಕೆ ಒಳಗಾದವು. ಇದರಲ್ಲಿ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ 25% ದಂಡದ ರೂಪದ ಸುಂಕ ಸೇರಿತ್ತು. ವಲಸೆ ನಿಯಮಗಳು, ರಷ್ಯಾದೊಂದಿಗಿನ ರಕ್ಷಣಾ ಮತ್ತು ಇಂಧನ ಸಂಬಂಧಗಳು ಹಾಗೂ ಭಾರತ–ಪಾಕಿಸ್ತಾನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವ ಬಗ್ಗೆ ಟ್ರಂಪ್ ಅವರ ಹಿಂದಿನ ಹೇಳಿಕೆಗಳಿಂದ ಉಭಯ ದೇಶಗಳ ನಡುವಣ ಸಂಬಂಧದಲ್ಲಿ ಬಿರುಕು ಮೂಡಿತ್ತು.
►ಪಿಯೂಷ್ ಗೋಯಲ್ ಹೇಳಿದ್ದೇನು?
ಮಂಗಳವಾರ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ನಿಕಟ ವೈಯಕ್ತಿಕ ಸಂಬಂಧದಿಂದಾಗಿ ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದಿದ್ದಾರೆ. ರೈತರು, ಎಂಎಸ್ಎಂಇಗಳು ಮತ್ತು ಕೈಗಾರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಇದು ಪ್ರಯೋಜನ ನೀಡುತ್ತದೆ ಎಂದಿದ್ದಾರೆ.
ಅಮೆರಿಕವು ಭಾರತಕ್ಕಿಂತ ಮುಂಚಿತವಾಗಿ ವ್ಯಾಪಾರ ಒಪ್ಪಂದವನ್ನು ಸಾರ್ವಜನಿಕವಾಗಿ ಘೋಷಿಸಿದ್ದರ ಬಗ್ಗೆಯೂ ಮಾತನಾಡಿದ ಗೋಯಲ್, ಈ ಅನುಕ್ರಮವು ಒಪ್ಪಂದದ ಕಾರ್ಯವಿಧಾನಕ್ಕೆ ಸಂಬಂಧಿಸಿದೆ ಎಂದಿದ್ದಾರೆ. “ಅಮೆರಿಕ ಮೊದಲು ಟ್ವೀಟ್ ಮಾಡಿದೆ ಏಕೆಂದರೆ ಅವರು ಕಡಿಮೆ ಮಾಡಬೇಕಾದ ಪ್ರತಿಸುಂಕಗಳನ್ನು ವಿಧಿಸಿದ್ದರು. ಭಾರತೀಯ ರಫ್ತುಗಳ ಮೇಲಿನ ಸುಂಕಗಳನ್ನು ಸುಮಾರು 50%ರಿಂದ ಸುಮಾರು 18%ಕ್ಕೆ ಕಡಿತಗೊಳಿಸಲಾಗಿದೆ. ಅಮೆರಿಕ ಪ್ರತಿಸುಂಕಗಳನ್ನು ಅನ್ವಯಿಸಿದಾಗ ಮತ್ತು ಅವರು ಅವುಗಳನ್ನು ಹಿಂದಕ್ಕೆ ಪಡೆಯಬೇಕಾದಾಗ, ಈ ಮಾಹಿತಿಯು ಅಮೆರಿಕದಿಂದ ಮಾತ್ರ ಬರುತ್ತದೆ. ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಔಪಚಾರಿಕ ಮತ್ತು ಜಂಟಿ ಪ್ರಕಟಣೆಗಳನ್ನು ಪ್ರಕಟಿಸಲಾಗುವುದು” ಎಂದಿದ್ದಾರೆ.
ಒಪ್ಪಂದವು ಭಾರತ ಮತ್ತು ಅಮೆರಿಕ ತಂಡಗಳ ನಡುವಿನ ತಿಂಗಳುಗಳ ಮಾತುಕತೆಗಳ ಫಲಿತಾಂಶವಾಗಿದೆ. ಇದು ಬಲವಾದ ದೇಶ ಎಂಬ ಭಾರತದ ಸ್ಥಾನವನ್ನು ಬಲಪಡಿಸಿದೆ. “ಇಂದು ಪ್ರತಿಯೊಬ್ಬ ಭಾರತೀಯನೂ ಮೋದಿ ಜಿ ಅವರನ್ನು ಅಭಿನಂದಿಸುತ್ತಿದ್ದಾರೆ. ಅವರು ಈಗಾಗಲೇ ಪ್ರಬಲ ರಾಷ್ಟ್ರಕ್ಕೆ ಬಲವನ್ನು ಸೇರಿಸುವ ಅತ್ಯಂತ ಬಲವಾದ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ” ಎಂದಿದ್ದಾರೆ.
ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗಿದೆ ಎಂಬ ವಿರೋಧ ಪಕ್ಷದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಗೋಯಲ್, ಒಪ್ಪಂದದಲ್ಲಿ ಕೃಷಿ ಮತ್ತು ಹೈನುಗಾರಿಕೆಯಂತಹ ಪ್ರಮುಖ ಸೂಕ್ಷ್ಮ ವಲಯಗಳನ್ನು ರಕ್ಷಿಸಲಾಗಿದೆ ಎಂದು ಒತ್ತಿ ಹೇಳಿದ್ದಾರೆ.
“ಈ ಒಪ್ಪಂದವು ಮಹಿಳೆಯರು, ರೈತರು ಮತ್ತು ಸಣ್ಣ ವ್ಯವಹಾರಗಳಿಗೆ ಗಮನಾರ್ಹ ಬೆಂಬಲ ನೀಡುತ್ತದೆ. ನಮ್ಮ ಸಹೋದರಿಯರು ಮತ್ತು ರೈತರಿಗೆ ಸಹಾಯ ಮಾಡುತ್ತದೆ. ಎಂಎಸ್ಎಂಇಗಳು, ಐಟಿ, ಜವಳಿ ಮತ್ತು ಚರ್ಮದ ಸರಕುಗಳ ವಲಯಗಳು ಅಪಾರ ಪ್ರಯೋಜನ ಪಡೆಯುತ್ತವೆ” ಎಂದಿದ್ದಾರೆ.
►ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ ಎಂದ ಟ್ರಂಪ್; ರಷ್ಯಾದ ಪ್ರತಿಕ್ರಿಯೆ
ಸೋಮವಾರ ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದವನ್ನು ಘೋಷಿಸಿದ ನಂತರ ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಕ್ರೆಮ್ಲಿನ್ ಮಂಗಳವಾರ ಪ್ರತಿಕ್ರಿಯಿಸಿದ್ದು, ಭಾರತದಿಂದ ಅಂತಹ ಯಾವುದೇ ರೀತಿಯ ಸುದ್ದಿ ಬಂದಿಲ್ಲ ಎಂದು ಹೇಳಿದೆ.
ಭಾರತವು ಒಪ್ಪಂದದಲ್ಲಿ ಸುಂಕ ಕಡಿತ ಭಾಗವನ್ನು ದೃಢಪಡಿಸಿದೆ. ಆದರೆ ಮಾಸ್ಕೋದಿಂದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಯಾವುದೇ ವಿಷಯಗಳನ್ನು ಹೇಳಿಲ್ಲ.
“ಈ ವಿಷಯದ ಬಗ್ಗೆ ಭಾರತದಿಂದ ಯಾವುದೇ ಹೇಳಿಕೆಗಳನ್ನು ನಾವು ಕೇಳಿಲ್ಲ” ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ವರದಿಗಾರರಿಗೆ ತಿಳಿಸಿದ್ದಾರೆ ಎಂದು ಎಎಫ್ಪಿ ಉಲ್ಲೇಖಿಸಿದೆ.
“ನಾವು ಅಮೆರಿಕ–ಭಾರತೀಯ ದ್ವಿಪಕ್ಷೀಯ ಸಂಬಂಧಗಳನ್ನು ಗೌರವಿಸುತ್ತೇವೆ. ಆದರೆ ರಷ್ಯಾ ಮತ್ತು ಭಾರತದ ನಡುವಿನ ಮುಂದುವರಿದ ಕಾರ್ಯತಂತ್ರದ ಪಾಲುದಾರಿಕೆಯ ಅಭಿವೃದ್ಧಿಗೆ ನಾವು ಕಡಿಮೆ ಪ್ರಾಮುಖ್ಯತೆ ನೀಡುವುದಿಲ್ಲ. ಇದು ನಮಗೆ ಅತ್ಯಂತ ಮುಖ್ಯವಾದ ವಿಷಯ. ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾವು ಉದ್ದೇಶಿಸಿದ್ದೇವೆ” ಎಂದು ಪೆಸ್ಕೋವ್ ಹೇಳಿದ್ದಾರೆ.







