ಚಿಪ್ಸ್, ಸೋಡಾ ಪ್ಯಾಕೆಟ್ ಗಳ ಮೇಲೆ ಎಚ್ಚರಿಕೆ ಲೇಬಲ್ ನೀಡಲು ಸರ್ಕಾರದ ಯತ್ನ: ಜಾಗತಿಕ ಕಂಪೆನಿಗಳ ವಿರೋಧ
► ಆದಿತ್ಯ ಕಲ್ರಾ, ರಿಚಾ ನಾಯ್ಡು - reuters. com ವರದಿ

Photo Credit: AI
ಲಂಡನ್ ನಲ್ಲಿ ಮಾರಾಟವಾಗುವ ಒಂದು ಕ್ಯಾನ್ ಫ್ಯಾಂಟಾ ದಲ್ಲಿ 63 ಕ್ಯಾಲೊರಿ ಇರುತ್ತದೆ. ಆದರೆ, ಅದೇ ಬ್ರ್ಯಾಂಡ್ ನ ಫ್ಯಾಂಟಾವನ್ನು ಭಾರತದಲ್ಲಿ ಖರೀದಿಸಿದರೆ, ಅದರಲ್ಲಿ ಮೂರು ಪಟ್ಟು ಹೆಚ್ಚಿನ ಸಕ್ಕರೆ ಅಂಶವಿರುತ್ತದೆ. ಇದರೊಂದಿಗೆ, ಯೂರೋಪ್ ನಲ್ಲಿ ಆರೋಗ್ಯ ಎಚ್ಚರಿಕೆ ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗಿರುವ ಕೃತಕ ಬಣ್ಣವನ್ನೂ ಇದಕ್ಕೆ ಬಳಸಲಾಗುತ್ತದೆ.
ಭಾರತದಲ್ಲಿ, ಈ ಬಣ್ಣದ ಬಳಕೆಯ ಕುರಿತು ಕ್ಯಾನ್ ನ ಹಿಂಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ಮಾತ್ರ ಮುದ್ರಿಸಲಾಗಿರುತ್ತದೆ. ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮುಂಭಾಗದಲ್ಲಿ ಪೌಷ್ಟಿಕಾಂಶದ ಜಾಗೃತಿ ಎಚ್ಚರಿಕೆಗಳನ್ನು ನಮೂದಿಸುವುದನ್ನು ಕಡ್ಡಾಯಗೊಳಿಸುವ ಭಾರತದ ಪ್ರಯತ್ನಗಳನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ವಿಶ್ವದ ದೈತ್ಯ ಕಂಪೆನಿಗಳಿಗೆ ಇದು ಅನುಕೂಲಕರವಾಗಿದೆ.
ಫ್ಯಾಂಟಾ ತಯಾರಿಸುವ ಕೊಕಾ-ಕೋಲಾದಂತಹ ಪ್ರಮುಖ ಕಂಪೆನಿಗಳು ಈ ಪ್ರಕ್ರಿಯೆಯಲ್ಲಿ ಮೇಲುಗೈ ಸಾಧಿಸಿದಂತೆ ತೋರುತ್ತಿದೆ. ಆಹಾರ ಪ್ಯಾಕೆಟ್ ಗಳ ಮುಂಭಾಗದಲ್ಲಿ ಬಣ್ಣದ ಮುನ್ನೆಚ್ಚರಿಕೆ ಚಿಹ್ನೆಗಳನ್ನು ಪ್ರಕಟಿಸುವ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಆಗಸ್ಟ್ ನಲ್ಲಿ ತಿಳಿಸಿದೆ. ಪಾಶ್ಚಾತ್ಯ ಆಹಾರಕ್ಕೆ ಹೋಲಿಸಿದರೆ ಭಾರತೀಯ ಆಹಾರ ಪದ್ಧತಿಯು ಹೆಚ್ಚು ತೀವ್ರವಾದ ರುಚಿ ಮತ್ತು ಮಸಾಲೆಗಳನ್ನು ಹೊಂದಿರುವುದನ್ನು ಇಂತಹ ಎಚ್ಚರಿಕೆಯ ಗುರುತುಗಳು ಪರಿಗಣಿಸುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ. ಇದಕ್ಕೆ ಪರ್ಯಾಯವಾಗಿ ಕಂಪೆನಿಗಳು ಸಕ್ಕರೆ, ಕೊಬ್ಬು ಮತ್ತು ಉಪ್ಪಿನ ಪ್ರಮಾಣವನ್ನು ತಿಳಿಸುವ ಕಪ್ಪು-ಬಿಳುಪಿನ ಪಟ್ಟಿಯನ್ನು ಪ್ರದರ್ಶಿಸಲು ಸೂಚಿಸಿದೆ.
ಆರೋಗ್ಯ ಕಾರ್ಯಕರ್ತರು ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ಪರಿಶೀಲಿಸುತ್ತಿದೆ. 'ಲ್ಯಾನ್ಸೆಟ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, 2050ರ ವೇಳೆಗೆ ಭಾರತದಲ್ಲಿ 45 ಕೋಟಿ ಜನರು ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆಗೆ ತುತ್ತಾಗುವ ಸಾಧ್ಯತೆಯಿದೆ. ಪ್ಯಾಕೆಟ್ ಗಳ ಮೇಲಿನ ಪಾರದರ್ಶಕ ಮಾಹಿತಿಯು ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅವರ ಸಲಹೆಯಂತೆ, ಸುಮಾರು 20 ದೇಶಗಳು ಈಗಾಗಲೇ ಪ್ಯಾಕೇಜ್ ಮಾಡಿದ ಆಹಾರಗಳ ಮುಂಭಾಗದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೆ ಕೆಂಪು ಬಣ್ಣ ಮತ್ತು ಕೊಬ್ಬಿನ ಪ್ರಮಾಣ ಕಡಿಮೆಯಿದ್ದರೆ ಹಸಿರು ಬಣ್ಣವನ್ನು ನೀಡುವ ಸಂಕೇತ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಆಹಾರ ಉತ್ಪನ್ನ ತಯಾರಿಕಾ ಸಂಸ್ಥೆಗಳ ಕಾರ್ಯನಿರ್ವಾಹಕರು ಇಂತಹ ಮುನ್ನೆಚ್ಚರಿಕೆ ಚಿಹ್ನೆಗಳು ಗೊಂದಲಕಾರಿ ಮತ್ತು ನಿಷ್ಪರಿಣಾಮಕಾರಿ ಎಂದು ವಾದಿಸಿದ್ದರು. ಇದರ ಬೆನ್ನಲ್ಲೇ ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು (FSSAI) ತನ್ನ ಪ್ರಸ್ತಾಪದಿಂದ ಹಿಂದೆ ಸರಿಯಿತು ಎಂದು ರಾಯಿಟರ್ಸ್ ಪರಿಶೀಲಿಸಿದ ಆಡಿಯೊ ದಾಖಲೆಗಳಿಂದ ತಿಳಿದುಬಂದಿದೆ. ಪ್ರಮಾಣ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕಂಪೆನಿಗಳು ಪ್ರಾಧಿಕಾರವನ್ನು ಆಗ್ರಹಿಸಿದ್ದವು.
ಈ ಸಭೆಯ ವಿವರಗಳನ್ನು ರಾಯಿಟರ್ಸ್ ವರದಿ ಮಾಡಿದೆ.
ಪ್ಯಾಕೆಟ್ ಮೇಲಿನ ಪದಾರ್ಥಗಳ ಪಟ್ಟಿಯನ್ನು ಓದದ ಗ್ರಾಹಕರು, "ಚಿಹ್ನೆ ಅಥವಾ ಐಕಾನ್ ನೋಡಿದ ತಕ್ಷಣ ಜಾಗೃತರಾಗಿ" ತಮ್ಮ ಆಹಾರ ಪದ್ಧತಿಯನ್ನು ಸುಧಾರಿಸಿಕೊಳ್ಳುತ್ತಾರೆ ಎಂದು ಭಾವಿಸುವುದು "ಸರಳೀಕೃತ ಚಿಂತನೆ" ಎಂದು ಕೊಕಾ-ಕೋಲಾ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಮಾರ್ಚ್ 19ರ ಸಭೆಯಲ್ಲಿ ಹೇಳಿದ್ದರು.
ಇಂತಹ ಎಚ್ಚರಿಕೆಯ ಚಿಹ್ನೆಗಳು ಗ್ರಾಹಕರನ್ನು ಸಿಹಿ ಮತ್ತು ಉಪ್ಪು ಆಹಾರ ಸೇವನೆಯಿಂದ ತಡೆಯುವುದಿಲ್ಲ. ಭಾರತದ ವೈದ್ಯರು ಈಗಾಗಲೇ ಯಾವ ಆಹಾರಗಳನ್ನು ತಪ್ಪಿಸಬೇಕು ಎಂದು ರೋಗಿಗಳಿಗೆ ಉತ್ತಮವಾಗಿ ತಿಳಿಸಿರುವುದರಿಂದ ಇವುಗಳ ಅಗತ್ಯವಿಲ್ಲ ಎಂದು ಅವರು ವಾದಿಸಿದ್ದರು.
ಯುರೋಪ್ ನ ಸುಮಾರು ಎರಡು ಡಝನ್ ಮಾರುಕಟ್ಟೆಗಳಲ್ಲಿ ಕೊಕಾ-ಕೋಲಾ ಮತ್ತು ಅದರ ಬಾಟ್ಲಿಂಗ್ ಪಾಲುದಾರ ಸಂಸ್ಥೆಗಳು ತಮ್ಮ ಪಾನೀಯಗಳ ಮೇಲೆ ಟ್ರಾಫಿಕ್ ಸಿಗ್ನಲ್ ಮಾದರಿಯ ಲೇಬಲ್ ಗಳನ್ನು ಸ್ವಯಂಪ್ರೇರಿತವಾಗಿ ಬಳಸುತ್ತಿವೆ. ಈ ಲೇಬಲ್ ಗಳು "ಸ್ಪಷ್ಟ ಮತ್ತು ಪಾರದರ್ಶಕ" ಮಾಹಿತಿಯನ್ನು ನೀಡುತ್ತವೆ ಎಂದು ಸ್ವಿಟ್ಜರ್ಲೆಂಡ್ ಮೂಲದ ಕೊಕಾ-ಕೋಲಾ ಹೆಚ್ಬಿಸಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಪ್ರಾಧಿಕಾರದ ಪ್ರಸ್ತಾಪವನ್ನು ವಿರೋಧಿಸಿದ ಭಾರತೀಯ ಉದ್ಯಮಿಗಳ ಒಕ್ಕೂಟದಲ್ಲಿ ನೆಸ್ಲೆ ಸಂಸ್ಥೆಯೂ ಇತ್ತು. ಈ ಕಂಪೆನಿಯು 2013ರಿಂದಲೇ ಬ್ರಿಟನ್ ನಲ್ಲಿ ಇಂತಹ ಎಚ್ಚರಿಕೆ ಲೇಬಲ್ ಗಳನ್ನು ಸ್ವಯಂಪ್ರೇರಿತವಾಗಿ ಬಳಸುತ್ತಿದೆ.
ಕೊಕಾ-ಕೋಲಾ ಮತ್ತು ನೆಸ್ಲೆ ಸಂಸ್ಥೆಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿವೆ.
ಈ ವರದಿಗಾಗಿ ರಾಯಿಟರ್ಸ್ ಆಡಿಯೊ ರೆಕಾರ್ಡಿಂಗ್ಗಳು, ನೂರಾರು ಪುಟಗಳ ಸರ್ಕಾರಿ ಮತ್ತು ಕಂಪೆನಿ ದಾಖಲೆಗಳನ್ನು ಪರಿಶೀಲಿಸಿದ್ದು, 11 ಉದ್ಯಮ ತಜ್ಞರು ಹಾಗೂ ಆರೋಗ್ಯ ತಜ್ಞರನ್ನು ಸಂದರ್ಶಿಸಿದೆ.
ಭಾರತದಲ್ಲಿ ತಮ್ಮ ಉತ್ಪನ್ನಗಳ ಮಾರುಕಟ್ಟೆ ತಂತ್ರಗಳನ್ನು ಟೀಕಿಸಿದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ವಿರುದ್ಧ ಕೆಲವು ಆಹಾರ ಸಂಸ್ಥೆಗಳು ಕಾನೂನು ದೂರುಗಳನ್ನು ದಾಖಲಿಸಿವೆ.
ಎಚ್ಚರಿಕೆ ಲೇಬಲ್ ಗಳಿಂದ ಲಾಭಕ್ಕೆ ಧಕ್ಕೆಯಾಗುವ ಭೀತಿಯಿರುವುದರಿಂದ, "ತಮ್ಮ ಉತ್ಪನ್ನಗಳ ಆರೋಗ್ಯಕರ ಗುಣಮಟ್ಟದ ಬಗ್ಗೆ ಭಾರತೀಯರಿಗೆ ಮಾಹಿತಿ ನೀಡದೆ ಸಾಧ್ಯವಾದಷ್ಟು ಕಾಲ ಮುಂದೂಡಲು ಉದ್ಯಮ ಕ್ಷೇತ್ರ ಯತ್ನಿಸುತ್ತಿದೆ" ಎಂದು ಆಸ್ಟ್ರೇಲಿಯಾದ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ನ ಆಹಾರ ನೀತಿ ವಿಭಾಗದ ಮುಖ್ಯಸ್ಥೆ ಸಿಮೋನ್ ಪೆಟ್ಟಿಗ್ರೂ ಹೇಳಿದ್ದಾರೆ.
ಹಿತಾಸಕ್ತಿ ಗುಂಪುಗಳ ಪ್ರಭಾವದಿಂದಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ನಿಯಂತ್ರಣ ಸಂಸ್ಥೆಗಳಿಗೆ "ಸಾಧ್ಯವಾಗುತ್ತಿಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಲಯದಲ್ಲಿ ಪ್ರಕ್ರಿಯೆ ಚಾಲ್ತಿಯಲ್ಲಿರುವುದನ್ನು ಉಲ್ಲೇಖಿಸಿ FSSAI ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ.
►ಭಾರತವನ್ನು ಮತ್ತೆ ಆರೋಗ್ಯಕರವಾಗಿಸುವುದೇ?
ಉದ್ಯಮ ವಲಯದ ಅಂದಾಜಿನ ಪ್ರಕಾರ, 100 ಬಿಲಿಯನ್ ಡಾಲರ್ ಗೂ ಹೆಚ್ಚಿನ ಮೌಲ್ಯದ ಭಾರತದ ಸಂಸ್ಕರಿಸಿದ ಆಹಾರ ಮತ್ತು ಪಾನೀಯ ಮಾರುಕಟ್ಟೆಯ ಶೇ. 80ರಷ್ಟು ಉತ್ಪನ್ನಗಳಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಹೆಚ್ಚಾಗಿದೆ.
"ಬಣ್ಣ ಆಧಾರಿತ ಎಚ್ಚರಿಕೆ ಚಿಹ್ನೆಗಳನ್ನು ಉದ್ಯಮ ಕ್ಷೇತ್ರವು ಅಳವಡಿಸಿಕೊಂಡರೆ, ಬಹುತೇಕ ಪ್ಯಾಕೆಟ್ ಗಳು ಕೆಂಪು ಬಣ್ಣದಿಂದಲೇ ತುಂಬಿರುತ್ತವೆ" ಎಂದು ಇಂಡಿಯನ್ ಫುಡ್ ಅಂಡ್ ಬೆವರೇಜ್ ಅಸೋಸಿಯೇಷನ್ನ ದೀಪಕ್ ಜಾಲಿ ಮಾರ್ಚ್ ನಲ್ಲಿ ನಿಯಂತ್ರಕರೊಂದಿಗೆ ನಡೆದ ಸಭೆಯಲ್ಲಿ ಹೇಳಿದ್ದರು.
ಪೆಪ್ಸಿಕೋ ಸೇರಿದಂತೆ ಹಲವು ಕಂಪೆನಿಗಳನ್ನು ಪ್ರತಿನಿಧಿಸುವ ಐಎಫ್ಬಿಎ (IFBA), ರಾಯಿಟರ್ಸ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ ನಿಯಂತ್ರಕರಿಂದ ಹೆಚ್ಚಿನ ಸ್ಪಷ್ಟತೆ ಬಯಸುತ್ತಿರುವುದಾಗಿ ತಿಳಿಸಿದೆ. ಪ್ರಸ್ತುತ ಪ್ರಸ್ತಾಪಗಳಿಂದಾಗಿ ನೈಸರ್ಗಿಕ ಸಕ್ಕರೆ ಮಾತ್ರ ಹೊಂದಿರುವ ಎಳನೀರು ಪ್ಯಾಕೆಟ್ ಗಳ ಮೇಲೆಯೂ "ಹೆಚ್ಚಿನ ಸಕ್ಕರೆ ಅಂಶ" ಎಂಬ ಎಚ್ಚರಿಕೆ ಮುದ್ರಿಸಬೇಕಾಗಬಹುದು ಎಂದು ಒಕ್ಕೂಟ ಹೇಳಿದೆ.
ಆಹಾರ ಉತ್ಪನ್ನಗಳ ಪೌಷ್ಟಿಕಾಂಶದ ಮೌಲ್ಯವನ್ನು ಸೂಚಿಸಲು ಬಣ್ಣದ ಎಚ್ಚರಿಕೆಗಳು ಮತ್ತು ಸ್ಟಾರ್ ರೇಟಿಂಗ್ ನೀಡುವ ಪ್ರಸ್ತಾಪಗಳನ್ನು ಭಾರತೀಯ ನಿಯಂತ್ರಕರು 2017ರಿಂದಲೂ ಮಾಡುತ್ತಿದ್ದಾರೆ. ಪ್ರಸ್ತುತ ಕಂಪೆನಿಗಳು ಉತ್ಪನ್ನಗಳ ಹಿಂಭಾಗದಲ್ಲಿ ಮಾತ್ರ ಪದಾರ್ಥಗಳು ಮತ್ತು ಮೂಲಭೂತ ಪೌಷ್ಟಿಕಾಂಶದ ವಿವರಗಳನ್ನು ಮುದ್ರಿಸುತ್ತಿವೆ.
ಹೆಚ್ಚಿನ ಪಾರದರ್ಶಕತೆ ಬಯಸಿ ಆರೋಗ್ಯ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಫೆಬ್ರವರಿಯಲ್ಲಿ ಕೋರ್ಟ್ ಎಚ್ಚರಿಕೆ ಲೇಬಲ್ ಗಳನ್ನು ಪರಿಶೀಲಿಸುವಂತೆ ನಿಯಂತ್ರಕರಿಗೆ ನಿರ್ದೇಶನ ನೀಡಿತ್ತು. ಇಸ್ರೇಲ್ ನ ಕೆಂಪು ಮತ್ತು ಹಸಿರು ಸಂದೇಶ ವ್ಯವಸ್ಥೆಯನ್ನು ಅಧ್ಯಯನ ಮಾಡುವಂತೆ ಅದು ಸಲಹೆ ನೀಡಿತ್ತು.
ಉದ್ಯಮಿಗಳೊಂದಿಗೆ ಮಾರ್ಚ್ ನಲ್ಲಿ ನಡೆದ ಸಭೆಯ ನಂತರ FSSAI ಈ ನಿರ್ಧಾರದಿಂದ ಹಿಂದೆ ಸರಿಯಿತು. ಪ್ಯಾಕೇಜಿಂಗ್ ನಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಕಾಯ್ದುಕೊಳ್ಳುವುದು "ಕಷ್ಟ" ಎಂದು ಆಗಸ್ಟ್ನಲ್ಲಿ ನ್ಯಾಯಾಲಯಕ್ಕೆ ತಿಳಿಸುವ ಮೂಲಕ ಉದ್ಯಮ ಕ್ಷೇತ್ರದ ವಾದವನ್ನೇ ಪುನರುಚ್ಚರಿಸಿತು.
ಇದಕ್ಕೆ ನ್ಯಾಯಾಧೀಶರಿಂದ ತೀವ್ರ ತರಾಟೆ ಎದುರಾಯಿತು. "ಭಾರತವು ತನ್ನ ನಾಗರಿಕರ ಒಟ್ಟಾರೆ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದೆ ಎಂಬುದು ಇಡೀ ಜಗತ್ತಿಗೆ ತಿಳಿಯಬೇಕು" ಎಂದು ಪೀಠ ವ್ಯಾಖ್ಯಾನಿಸಿತು.
ಭಾರತದಲ್ಲಿ ಆರ್ಥಿಕ ಸಬಲತೆ ಹೆಚ್ಚುತ್ತಿದ್ದಂತೆ, ಮಧ್ಯಮ ವರ್ಗದ ಗ್ರಾಹಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ 'ಫಾರ್ಮಾರ್ಯಾಕ್' ಪ್ರಕಾರ, ಹಸಿವನ್ನು ಕಡಿಮೆ ಮಾಡುವ ತೂಕ ನಷ್ಟ ಔಷಧಗಳ ಮಾಸಿಕ ಮಾರಾಟವು 2025ರ ಆರಂಭದಿಂದ ಶೇ. 400ರಷ್ಟು ಹೆಚ್ಚಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರು ಮತ್ತು ಇನ್ಫ್ಲುಯೆನ್ಸರ್ ಗಳು ಸಂಸ್ಕರಿಸಿದ ಆಹಾರಗಳ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ.
ಅವರಲ್ಲಿ ರೇವಂತ್ ಹಿಮತ್ಸಿಂಗ್ಕಾ ಪ್ರಮುಖರು. ಮೆಕಿನ್ಸೆ ಸಂಸ್ಥೆಯ ಮಾಜಿ ನಿರ್ವಹಣಾ ಸಲಹೆಗಾರರಾದ 34 ವರ್ಷದ ರೇವಂತ್, 'ಫುಡ್ ಫಾರ್ಮರ್' ಹೆಸರಿನಲ್ಲಿ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ 50 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಇವರ ವೀಡಿಯೊಗಳು ಕೆಲವು ಬಾರಿ ವಿವಾದಕ್ಕೂ ಕಾರಣವಾಗಿವೆ. 2023ರಲ್ಲಿ, ಪೆಪ್ಸಿಕೋದ 'ಸ್ಟಿಂಗ್' ಕೆಫೀನ್ ಪಾನೀಯದಲ್ಲಿ ಬಳಸಲಾಗುವ ಸಕ್ಕರೆ ಮತ್ತು ಕೃತಕ ಸಿಹಿ ಪ್ರಮಾಣವನ್ನು ವಿಮರ್ಶಿಸಿ ರೇವಂತ್ ವೀಡಿಯೊ ಮಾಡಿದ್ದರು. ಎನರ್ಜಿ ಡ್ರಿಂಕ್ ಆಗಿ ಮಾರುಕಟ್ಟೆಗೆ ಬಂದಿರುವ ಈ ಪಾನೀಯವು ಭಾರತದ ಯುವಜನತೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ.
ವೀಡಿಯೊದಲ್ಲಿದ್ದ ಅಂಶಗಳು ಸುಳ್ಳು ಮತ್ತು ಪಾನೀಯದ ವಿರುದ್ಧ ಅಪಪ್ರಚಾರ ನಡೆಸುವ ಉದ್ದೇಶವನ್ನು ಹೊಂದಿವೆ ಎಂದು ವಾದಿಸಿದ ಪೆಪ್ಸಿಕೋ, ದಿಲ್ಲಿ ನ್ಯಾಯಾಲಯದಿಂದ ವೀಡಿಯೊ ತೆಗೆದುಹಾಕುವಂತೆ (ಟೇಕ್ಡೌನ್) ಆದೇಶ ಪಡೆಯುವಲ್ಲಿ ಯಶಸ್ವಿಯಾಯಿತು.
ಇದರ ಬೆನ್ನಲ್ಲೇ, ಪೆಪ್ಸಿಕೋ ಸೇರಿದಂತೆ ಇತರ ಕಂಪೆನಿಗಳಿಗೆ 90 ದಿನಗಳಲ್ಲಿ "ಎನರ್ಜಿ ಡ್ರಿಂಕ್" ಎಂಬ ಲೇಬಲ್ ತೆಗೆದುಹಾಕುವಂತೆ ಭಾರತೀಯ ನಿಯಂತ್ರಕರು ಜುಲೈನಲ್ಲಿ ಆದೇಶಿಸಿದ್ದಾರೆ.
ಈ ಕುರಿತ ಪ್ರಶ್ನೆಗಳಿಗೆ ಪೆಪ್ಸಿಕೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
►ಎರಡು ವಿಭಿನ್ನ ಪಾಕವಿಧಾನಗಳು
ಸ್ಥಳೀಯ ನಿಯಮಗಳು, ಜನರ ರುಚಿ ಮತ್ತು ಖರೀದಿ ಸಾಮರ್ಥ್ಯಕ್ಕೆ ಅನುಗುಣವಾಗಿ ಬಹುರಾಷ್ಟ್ರೀಯ ಆಹಾರ ಉತ್ಪನ್ನ ತಯಾರಕ ಸಂಸ್ಥೆಗಳು ಒಂದೇ ಉತ್ಪನ್ನದ ವಿಭಿನ್ನ ಆವೃತ್ತಿಗಳನ್ನು ತಯಾರಿಸುತ್ತವೆ. ಉದಾಹರಣೆಗೆ, ಮೆಕ್ಸಿಕನ್ ಕೋಕ್ ತನ್ನ ಕಡಿಮೆ ಸಿಹಿಯಾದ ರುಚಿಯಿಂದಾಗಿಯೇ ಹೆಚ್ಚು ಜನಪ್ರಿಯತೆ ಗಳಿಸಿದೆ.
"ವಿವಿಧ ದೇಶಗಳಲ್ಲಿ ಉತ್ಪನ್ನದ ಪಾಕವಿಧಾನಗಳು ಇಷ್ಟೊಂದು ವ್ಯತ್ಯಾಸವಾಗಲು ಬೆಲೆ ಮತ್ತು ಜನರ ಖರೀದಿ ಸಾಮರ್ಥ್ಯವೇ ಮುಖ್ಯ ಕಾರಣ" ಎಂದು ಮೊಂಡೆಲೆಜ್ ಸಂಸ್ಥೆಯ ಮಾಜಿ ಅಧಿಕಾರಿ ಪಾರುಲ್ ಶರ್ಮಾ ಹೇಳಿದ್ದಾರೆ.
ಭಾರತೀಯ ಆವೃತ್ತಿಯ ಫ್ಯಾಂಟಾ ಹಾಗೂ ನೆಸ್ಲೆಯ ಕಿಟ್ಕ್ಯಾಟ್ ಉತ್ಪನ್ನಗಳನ್ನು ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಾಟವಾಗುವ ಉತ್ಪನ್ನಗಳೊಂದಿಗೆ ಹೋಲಿಸಿ ವೀಡಿಯೊ ಮಾಡಿರುವ ಹಿಮತ್ಸಿಂಗ್ಕಾ, "ಭಾರತದಲ್ಲಿ ಗ್ರಾಹಕರಿಗೆ ಕಳಪೆ ಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಭಾವನೆ ಮೂಡಿದೆ" ಎಂದು ತಿಳಿಸಿದ್ದಾರೆ.
ಭಾರತೀಯ ಸಾಮಾನ್ಯ ಕಿಟ್ಕ್ಯಾಟ್ ನಲ್ಲಿ ಶೇ. 4.5ರಷ್ಟು ಮಾತ್ರ ಕೋಕೋ ಅಂಶವಿದ್ದರೆ, ಆಸ್ಟ್ರೇಲಿಯಾದ ಆವೃತ್ತಿಯ ಮಿಲ್ಕ್ ಚಾಕೊಲೇಟ್ನಲ್ಲಿ ಕನಿಷ್ಠ ಶೇ. 22ರಷ್ಟು ಕೋಕೋ ಇರುತ್ತದೆ. ಭಾರತದಲ್ಲಿ ಮಾರಾಟವಾಗುವ ನೆಸ್ಲೆಯ ಮ್ಯಾಗಿ ಇನ್ಸ್ಟಂಟ್ ನೂಡಲ್ಸ್ನ ಎಲ್ಲಾ ಆವೃತ್ತಿಗಳನ್ನು ಪಾಮ್ ಆಯಿಲ್ ಬಳಸಿ ತಯಾರಿಸಲಾಗುತ್ತದೆ. ಬ್ರಿಟನ್ನಲ್ಲಿ ಮಾರಾಟವಾಗುವ ಹೆಚ್ಚಿನ ಆವೃತ್ತಿಗಳಿಗೆ ದುಬಾರಿ ಸೂರ್ಯಕಾಂತಿ ಎಣ್ಣೆಯನ್ನು ಬಳಸಲಾಗುತ್ತದೆ. ಬ್ರಿಟನ್ನಲ್ಲಿ ಮಾರಾಟವಾಗುವ ಅನೇಕ ಮ್ಯಾಗಿ ಪ್ಯಾಕೆಟ್ ಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆಯಾದರೂ, ಅವುಗಳಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುವುದನ್ನು ಎಚ್ಚರಿಸುವ ಕೆಂಪು ಬಣ್ಣದ ಮುನ್ನೆಚ್ಚರಿಕೆ ಲೇಬಲ್ ಇರುತ್ತದೆ.
"ಇದು ಮೋಸ ಹೋದ ಭಾವನೆಯಿಂದ ಉಂಟಾಗುವ ನಿರಾಶೆ" ಎಂದು ಹಿಮತ್ಸಿಂಗ್ಕಾ ಹೇಳಿದ್ದಾರೆ.
ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳು ಕಂಪೆನಿಗಳ ಮೇಲೆಯೂ ಪ್ರಭಾವ ಬೀರುತ್ತಿವೆ.
ಉದಾಹರಣೆಗೆ, ನೆಸ್ಲೆ ಸಂಸ್ಥೆಯು 2024ರಲ್ಲಿ ಭಾರತದಲ್ಲಿ ಸಕ್ಕರೆ ರಹಿತ 'ಸೆರೆಲ್ಯಾಕ್' ಮಗುವಿನ ಆಹಾರವನ್ನು ಮಾರಾಟ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿತು. ಕಳೆದ 50 ವರ್ಷಗಳಿಂದ ಭಾರತದಲ್ಲಿ ಸಕ್ಕರೆ ಮಿಶ್ರಿತ ಆವೃತ್ತಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಹಿಮತ್ಸಿಂಗ್ಕಾ ಸೇರಿದಂತೆ ಹಲವು ಕಾರ್ಯಕರ್ತರು ದೂರು ನೀಡಿದ್ದರು.
ಆದರೆ ಸಂಸ್ಥೆಯು ಸಕ್ಕರೆ ರಹಿತ ಸೆರೆಲ್ಯಾಕ್ ಅನ್ನು ಇತರ ದೇಶಗಳಲ್ಲಿ ಬಹುಕಾಲದಿಂದಲೂ ಮಾರಾಟ ಮಾಡುತ್ತಿತ್ತು.
ಸೌಜನ್ಯ: reuters.com






